ಉತ್ತರಾಖಂಡ: 14 ಪತಂಜಲಿ ಉತ್ಪನ್ನಗಳ ಲೈಸನ್ಸ್ ರದ್ದು
ಹೊಸದಿಲ್ಲಿ: ರಾಮ್ ದೇವ್ ಅವರ ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿರುವುದಾಗಿ ಉತ್ತರಾಖಂಡ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಸ್ಪಷ್ಟಪಡಿಸಿದೆ. ಔಷಧ ಜಾಹೀರಾತು ನಿಯಮವನ್ನು ಪದೇ ಪದೇ ಉಲ್ಲಂಘಿಸಿರುವ ಕಾರಣಕ್ಕೆ ಪ್ರಕರಣ ದಾಖಲಿಸಲು ಅನುಮತಿ ನೀಡಿರುವ ಜತೆಗೆ 14 ಉತ್ಪನ್ನಗಳ ಉತ್ಪಾದನಾ ಲೈಸನ್ಸ್ ರದ್ದುಪಡಿಸಿರುವುದಾಗಿಯೂ ಹೇಳಿದೆ.
ಉತ್ತರಾಖಂಡ ಸರ್ಕಾರದ ಲೈಸನ್ಸಿಂಗ್ ಪ್ರಾಧಿಕಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಕಾನೂನು ಬಾಹಿರವಾಗಿ ಜಾಹೀರಾತು ನೀಡುವವರ ವಿರುದ್ಧ ದಂಡ, ಜೈಲು ಶಿಕ್ಷೆ ಅಥವಾ ಎರಡೂ ಸೇರಿದಂತೆ ಕಠಿಣ ಶಿಸ್ತುಕ್ರಮ, ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ ಎಂದು ಅಫಿಡವಿಟ್ ನಲ್ಲಿ ವಿವರಿಸಲಾಗಿದೆ.
ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್, ಔಷಧ ಮತ್ತು ಮ್ಯಾಜಿಕ್ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತು) ಕಾಯ್ದೆ-1954ನ್ನು ಪದೇ ಪದೇ ಉಲ್ಲಂಘಿಸಿದ ಕಾರಣದಿಂದ ಈ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲು ಹರಿದ್ವಾರ ಡ್ರಗ್ ಇನ್ಸ್ಪೆಕ್ಟರ್ ಅವರಿಗೆ ಏಪ್ರಿಲ್ 12ರಂದು ಅನುಮತಿ ನೀಡಲಾಗಿದೆ ಎಂದು ರಾಜ್ಯದ ಆಯುರ್ವೇದ ಮತ್ತು ಯುನಾನಿ ಸೇವೆಗಳ ಲೈಸನ್ಸಿಂಗ್ ಪ್ರಾಧಿಕಾರ ಸಲ್ಲಿಸಿದ ಅಫಿಡವಿಟ್ ಹೇಳಿದೆ.
ಅದೇರೀತಿ ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರೊಂಚೋಮ್, ಸ್ವರಸಿ ಪ್ರವಹಿ, ಸ್ವಸರಿ ಅವಲೇಹ, ಮುಕ್ತ ವಟಿ ಎಕ್ಸ್ಟ್ರಾ ಪವರ್, ಲಿಪಿಡೊಮ್, ಬಿಪಿ ಗ್ರಿಟ್, ಮಧುಗೃತ, ಮಧುನಾಶಿನಿ ವಟಿ ಎಕ್ಸ್ಟ್ರಾ ಪವರ್, ಲಿವಾಮೃತ ಅಡ್ವಾನ್ಸ್, ಲಿವೊಗ್ರಿಟ್, ಐಗರಿಟ್ ಗೋಲ್ಡ್ ಮತ್ತು ಪತಂಜಲಿ ದೃಷ್ಟಿ ಐಡ್ರಾಪ್ ಉತ್ಪನ್ನಗಳ ಉತ್ಪಾದನಾ ಲೈಸನ್ಸ್ ರದ್ದುಪಡಿಸಲಾಗಿದೆ ಎಂದೂ ತಿಳಿಸಿದೆ.