ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಲು ವೇದಾಂತ ಸಮೂಹದಿಂದ ತೆರೆಮರೆಯ ಲಾಬಿ: OCCRP ಆರೋಪ

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಲು ಗಣಿಗಾರಿಕೆ ಹಾಗೂ ತೈಲ ವಲಯದ ದೈತ್ಯ ಕಂಪನಿಯಾದ ವೇದಾಂತ ಸಮೂಹವು ತೆರೆಮರೆಯ ಲಾಬಿ ಅಭಿಯಾನ ನಡೆಸಿತ್ತು ಎಂದು OOCRP ತನ್ನ ಇತ್ತೀಚಿನ ವರದಿಯಲ್ಲಿ ಆರೋಪಿಸಿದೆ.

Update: 2023-09-01 16:33 GMT

PHOTO : PTI

ಹೊಸದಿಲ್ಲಿ: ಕೆಲವೊಂದು ಪರಿಸರ ನಿಯಮಾವಳಿಗಳನ್ನು ದುರ್ಬಲಗೊಳಿಸುವಂತೆ ಗಣಿಗಾರಿಕೆ ಮತ್ತು ತೈಲ ಕ್ಷೇತ್ರದ ದೈತ್ಯ ಕಂಪೆನಿ ವೇದಾಂತ, ಕೋವಿಡ್-19 ಸಾಂಕ್ರಾಮಿಕದ ಉತ್ತುಂಗ ಕಾಲದಲ್ಲಿ ಭಾರತ ಸರಕಾರದೊಂದಿಗೆ ವಶೀಲಿಬಾಜಿ (ಲಾಬಿ) ಮಾಡಿತ್ತು ಹಾಗೂ ಸರಕಾರವು ಯಾವುದೇ ಸಾರ್ವಜನಿಕ ಸಮಾಲೋಚನೆಯಿಲ್ಲದೆ ಅದರ ಬೇಡಿಕೆಗಳನ್ನು ನೆರವೇರಿಸಿತ್ತು ಎನ್ನುವ ಮಾಹಿತಿ ಈಗ ಬಹಿರಂಗವಾಗಿದೆ.

ತನಿಖಾ ಪತ್ರಕರ್ತರ ಜಾಗತಿಕ ಸಂಘಟನೆಯಾಗಿರುವ ಆರ್ಗನೈಝ್ಡ್ ಕ್ರೈಮ್ ಆ್ಯಂಡ್ ಕರಪ್ಶನ್ ರಿಪೋರ್ಟಿಂಗ್ ಪ್ರಾಜೆಕ್ಟ್ (ಒಸಿಸಿಆರ್ಪಿ) ತನ್ನ ತನಿಖಾ ವರದಿಯಲ್ಲಿ ಈ ವಿಷಯವನ್ನು ಬಯಲಿಗೆಳೆದಿದೆ.

ಒಂದು ಕಡೆ, ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳ ಹಿನ್ನೆಲೆಯಲ್ಲಿ, ಕಠಿಣ ಪರಿಸರ ಕಾನೂನುಗಳನ್ನು ಹೊಂದಬೇಕೆನ್ನುವ ಜಾಗತಿಕ ಆಶಯದ ಪರವಾಗಿ ತಾನಿದ್ದೇನೆ ಎಂಬುದಾಗಿ ಜಾಗತಿಕ ವೇದಿಕೆಗಳಲ್ಲಿ ಮೋದಿ ಸರಕಾರ ಹೇಳಿಕೊಳ್ಳುತ್ತದೆ. ಆದರೆ ಈ ವರದಿಯು ಬಯಲಿಗೆಳೆದಿರುವ ವಾಸ್ತವಾಂಶಗಳು ಬೇರೆಯೇ ಕತೆಯನ್ನು ಹೇಳುತ್ತವೆ.

ಹೊಸದಾಗಿ ಪರಿಸರ ಅನುಮೋದನೆಗಳನ್ನು ಪಡೆದುಕೊಳ್ಳದೆಯೇ ಗಣಿಗಾರಿಕೆ ಕಂಪೆನಿಗಳಿಗೆ 50 ಶೇಕಡದಷ್ಟು ಹೆಚ್ಚು ಉತ್ಪಾದನೆ ಮಾಡಲು ಅವಕಾಶ ನೀಡಬೇಕು ಎನ್ನುವುದು ಸೇರಿದಂತೆ ಪರಿಸರ ಕಾನೂನುಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕು ಎಂಬುದಾಗಿ ವೇದಾಂತವು ಸರಕಾರದ ಮೇಲೆ ಒತ್ತಡ ಹೇರಿತ್ತು ಎನ್ನುವುದನ್ನು ಒಸಿಸಿಆರ್ಪಿ ಪತ್ತೆಹಚ್ಚಿದೆ.

ಜವಡೇಕರ್ಗೆ ವೇದಾಂತದಿಂದ ಪತ್ರ

ಈ ವಶೀಲಿಬಾಜಿ ಪ್ರಕ್ರಿಯೆಯು 2021ರಲ್ಲಿ ಆರಂಭವಾಯಿತು. ಈ ಬದಲಾವಣೆಗಳು , ಸಾಂಕ್ರಾಮಿಕ ಸಂಬಂಧಿತ ಆರ್ಥಿಕ ಹಿನ್ನಡೆಯ ಬಳಿಕ ಭಾರತದ ‘‘ತ್ವರಿತ’’ ಆರ್ಥಿಕ ಪ್ರಗತಿಗೆ ‘‘ಇಂಬು’’ ಒದಗಿಸುವುದು ಎಂಬುದಾಗಿ ವೇದಾಂತ ರಿಸೋರ್ಸಸ್ ಲಿಮಿಟೆಡ್ನ ಅಧ್ಯಕ್ಷ ಅನಿಲ್ ಅಗರ್ವಾಲ್ ಪರಿಸರ ಸಚಿವ ಪ್ರಕಾಶ್ ಜವಡೇಕರ್ಗೆ ಪತ್ರವೊಂದನ್ನು ಬರೆದರು.

‘‘ಈ ಬದಲಾವಣೆಗಳು ಉತ್ಪಾದಕತೆ ಮತ್ತು ಆರ್ಥಿಕ ಬೆಳವಣಿಗೆಗೆ ತಕ್ಷಣ ಉತ್ತೇಜನ ನೀಡುವುದಲ್ಲದೆ, ಸರಕಾರಕ್ಕೆ ಬೃಹತ್ ಪ್ರಮಾಣದಲ್ಲಿ ಆದಾಯವನ್ನು ತರುತ್ತದೆ ಮತ್ತು ಅಗಾಧ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ’’ ಎಂದು ಅಗರ್ವಾಲ್ ತನ್ನ ಪತ್ರದಲ್ಲಿ ಹೇಳಿದ್ದರೆನ್ನಲಾಗಿದೆ.

ಅದೂ ಅಲ್ಲದೆ, ಹೆಚ್ಚಿನ ಪರಿಸರ ಅನುಮೋದನೆಯನ್ನು ಪಡೆಯದೆ ಗಣಿ ಕಂಪೆನಿಗಳಿಗೆ 50 ಶೇಕಡದಷ್ಟು ಹೆಚ್ಚಿನ ಉತ್ಪಾದನೆ ಮಾಡುವ ಅನುಮತಿಯನ್ನು ‘‘ಒಂದು ಸರಳ ಅಧಿಸೂಚನೆ’’ ಮೂಲಕ ನೀಡಬಹುದಾಗಿದೆ ಎಂಬುದಾಗಿಯೂ ಅವರು ಬರೆದಿದ್ದರು.

ಜವಡೇಕರ್ ಈ ಪತ್ರದ ಮೇಲೆ ‘‘VIMP'' (ಅತ್ಯಂತ ಮಹತ್ವದ್ದು) ಎಂಬುದಾಗಿ ಗುರುತು ಮಾಡಿದರು ಹಾಗೂ ‘‘ನೀತಿ ವಿಷಯದ ಬಗ್ಗೆ ಮಾತುಕತೆ ನಡೆಸಿ’’ ಎಂಬುದಾಗಿ ತನ್ನ ಸಚಿವಾಲಯದ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆ ಮಹಾನಿರ್ದೇಶಕರಿಗೆ ಸೂಚಿಸಿದರು ಎಂದು ಒಸಿಸಿಆರ್ಪಿ ವರದಿ ತಿಳಿಸಿದೆ.

ಅಗರ್ವಾಲ್ ಜವಡೇಕರ್ಗೆ ಪತ್ರ ಬರೆದ ಬಳಿಕ, ವೇದಾಂತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ್ ದುಗ್ಗಲ್ ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರು. ಈಗಿನ ಪರಿಸರ ಅನುಮೋದನೆ ಮಾದರಿಯನ್ನು ತೆಗೆದುಹಾಕುವ ಮೂಲಕ ನೀವು ‘‘ಆರ್ಥಿಕ ಯಂತ್ರಕ್ಕೆ ತಕ್ಷಣ ವೇಗ ನೀಡಬಹುದಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಮೋದಿಯ ಕಚೇರಿಯು ಈ ಪತ್ರವನ್ನು ಪರಿಸರ ಕಾರ್ಯದರ್ಶಿಗೆ ಕಳುಹಿಸಿತು.

ಪ್ರಸ್ತಾವಕ್ಕೆ ಕೊಂಚ ಆಂತರಿಕ ವಿರೋಧ

ಈ ಪ್ರಸ್ತಾವಕ್ಕೆ ಕೊಂಚ ಮಟ್ಟಿನ ಆಂತರಿಕ ಪ್ರತಿರೋಧ ವ್ಯಕ್ತವಾಯಿತು ಎಂದು ಒಸಿಸಿಆರ್ಪಿ ಹೇಳಿದೆ. ‘‘ನಿಯಮಾವಳಿಗಳನ್ನು ಸಡಿಲಗೊಳಿಸುವುದೆಂದರೆ ಕಾನೂನು ಮುರಿದಂತೆ ಹಾಗೂ ಇದು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅನಿಯಂತ್ರಿತ ಗಣಿಗಾರಿಕೆ ನಡೆಸಲು ಮುಕ್ತ ಅವಕಾಶ ನೀಡಿದಂತಾಗುತ್ತದೆ’’ ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿರುವುದು ಜುಲೈ ತಿಂಗಳಲ್ಲಿ ನಡೆದ ಸಭೆಯ ನಿರ್ಣಯದಲ್ಲಿ ದಾಖಲಾಗಿದೆ.

ಪರಿಸರ ಸಚಿವಾಲಯದ ಅಧಿಕಾರಿಗಳು ಮತ್ತು ಗಣಿ ಪರಿಣತರನ್ನು ಒಳಗೊಂಡ ಜಂಟಿ ಪರಿಣತ ವೌಲ್ಯಮಾಪನ ಸಮಿತಿಯ ಆಂತರಿಕ ಸಭೆಯಲ್ಲೂ ಇಂಥದೇ ಕಳವಳಗಳನ್ನು ವ್ಯಕ್ತಪಡಿಸಲಾಯಿತು. ಗಣಿ ಉತ್ಪಾದನೆಯಲ್ಲಿನ ಯಾವುದೇ ಹೆಚ್ಚಳಕ್ಕೆ ಮುನ್ನ ಸಾರ್ವಜನಿಕ ಸಮಾಲೋಚನೆಯ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಸಭೆ ಬಂತು ಎಂದು ವರದಿ ಹೇಳಿದೆ.

ಆದರೆ, ಪರಿಸರ ನಿಯಮಾವಳಿಗಳಲ್ಲಿ ಅಗರ್ವಾಲ್ ಕೇಳಿದ್ದ ಬದಲಾವಣೆಗಳು 2022ರ ಆದಿ ಭಾಗದಲ್ಲಿ ಜಾರಿಗೆ ಬಂದವು.

ವೇದಾಂತಕ್ಕೆ ಹೆಚ್ಚಿನ ಮಹತ್ವ

‘‘ಇದಕ್ಕೂ ಮೊದಲು, ಪರಿಸರ ನಿಯಮಾವಳಿಗಳನ್ನು ಸಡಿಲಗೊಳಿಸಬೇಕು ಎಂಬುದಾಗಿ ಪ್ರಮುಖ ಕೈಗಾರಿಕಾ ವಶೀಲಿಬಾಜಿ ಗುಂಪೊಂದರ ಮುಖ್ಯಸ್ಥ ಮತ್ತು ಭಾರತದ ಗಣಿ ಕಾರ್ಯದರ್ಶಿ ಸರಕಾರದ ಮೇಲೆ ಒತ್ತಡ ಹೇರಿದ್ದರೂ, ವೇದಾಂತ ನಡೆಸಿದ ವಶೀಲಿಬಾಜಿಗೆ ಹೆಚ್ಚಿನ ಮಹತ್ವ ನೀಡಲಾಯಿತು ಎಂದು ಆಂತರಿಕ ದಾಖಲೆಗಳು ಮತ್ತು ಸರಕಾರಿ ಮೂಲಗಳು ತಿಳಿಸಿವೆ. ಪರಿಸರ ಸಚಿವಾಲಯವು, ಕಚೇರಿಯ ಒಳಗಿನ ಮಾಹಿತಿಗಾಗಿ ನೀಡುವಂಥ ಕಚೇರಿ ಸೂಚನೆಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುವ ಮೂಲಕ ಪರಿಸರ ನಿಯಮಾವಳಿಗಳಿಗೆ ತರಲಾದ ಬದಲಾವಣೆಗಳನ್ನು ಜಾರಿಗೊಳಿಸಿತು’’ ಎಂದು ಒಸಿಸಿಆರ್ಪಿ ಹೇಳಿದೆ.

‘‘ಈ ರೀತಿಯ ಹಿಂಬಾಗಿಲ ವಶೀಲಿಬಾಜಿಯು, ಸ್ಥಳೀಯ ಸಮುದಾಯಗಳು ಮತ್ತು ಪರಿಸರಕ್ಕೆ ಘಾಸಿ ಮಾಡಿದರೂ ದೇಶದ ನೀತಿಗಳು ತಮ್ಮ ಪರವಾಗಿ ರೂಪುಗೊಳ್ಳುವಂತೆ ಮಾಡಲು ಭಾರತ ಸರಕಾರಕ್ಕೆ ಆಪ್ತವಾಗಿರುವ ಪ್ರಭಾವಿ ಜನರಿಗೆ ಅವಕಾಶ ನೀಡುತ್ತದೆ ಎಂದು ಪರಿಣತರು ಹೇಳುತ್ತಾರೆ. ಯಾವುದೇ ಸಾರ್ವಜನಿಕ ಚರ್ಚೆಯಿಲ್ಲದೆ, ಕಚೇರಿ ಮೆಮೊಗಳಂಥ ವಿಧಾನಗಳ ಮೂಲಕ ಮಹತ್ವದ ನಿಯಮಾವಳಿಗಳಿಗೆ ಬದಲಾವಣೆ ತರುವ ಸರಕಾರ ಕ್ರಮವು ಕಾನೂನನ್ನು ಉಲ್ಲಂಘಿಸಿರುವ ಸಾಧ್ಯತೆಯೂ ಇದೆ ಎಂದು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ನಡೆಸಿರುವ ಅಧ್ಯಯನವೊಂದು ತಿಳಿಸಿದೆ’’ ಎಂದು ವರದಿ ಹೇಳುತ್ತದೆ.

ತಾನು ಮಾಹಿತಿ ಹಕ್ಕಿನ ಮೂಲಕ ಸಾವಿರಾರು ದಾಖಲೆಗಳನ್ನು ಪಡೆದಿದ್ದು, ಗಣಿ ಉದ್ಯಮಿಗಳು, ಅದರಲ್ಲೂ ಮುಖ್ಯವಾಗಿ ವೇದಾಂತದ ಬೇಡಿಕೆಗಳಿಗೆ ಅನುಗುಣವಾಗಿ ಸರಕಾರಿ ಅಧಿಕಾರಿಗಳು ನಿಯಮಗಳನ್ನು ರೂಪಿಸಿರುವುದು ಕಂಡು ಬಂದಿದೆ ಎಂದು ಒಸಿಸಿಆರ್ಪಿ ವರದಿ ಮಾಡಿದೆ.

ವೇದಾಂತದಿಂದ ಬಿಜೆಪಿಗೆ 51 ಕೋಟಿ ರೂ. ದೇಣಿಗೆ

ವೇದಾಂತ ರಿಸೋರ್ಸಸ್ ಲಿಮಿಟೆಡ್ನ ಅಧ್ಯಕ್ಷ ಅನಿಲ್ ಅಗರ್ವಾಲ್ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಬಹಿರಂಗ ಬೆಂಬಲಿಗರಾಗಿದ್ದಾರೆ. ನನ್ನ ಮತ್ತು ನನ್ನ ನಿರ್ಧಾರಗಳ ಮೇಲೆ ಮೋದಿ ಪ್ರಭಾವ ಬೀರುತ್ತಾರೆ ಎಂಬುದಾಗಿ ಅವರು ಈ ಹಿಂದೆ ಹೇಳಿದ್ದರು.

ವೇದಾಂತಕ್ಕೆ ಸಂಬಂಧಿಸಿದ ಎರಡು ಟ್ರಸ್ಟ್ಗಳು 2016 ಮತ್ತು 2020ರ ನಡುವಿನ ಅವಧಿಯಲ್ಲಿ ಬಿಜೆಪಿಗೆ 6.16 ಮಿಲಿಯ ಡಾಲರ್ (ಸುಮಾರು 51 ಕೋಟಿ ರೂಪಾಯಿ) ದೇಣಿಗೆ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News