ಬಿಜೆಪಿ ಅಭ್ಯರ್ಥಿಗೆ ಜಯ : ಚುನಾವಣಾಧಿಕಾರಿ ಘೋಷಣೆ

Update: 2024-01-30 15:02 GMT

ಹೊಸದಿಲ್ಲಿ : ಅತ್ಯಂತ ಸಂಶಯಾಸ್ಪದ ರೀತಿಯಲ್ಲಿ ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅಭ್ಯರ್ಥಿ ಮನೋಜ್ ಸೊಂಕರ್ ವಿಜಯಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅನಿಲ್ ಮಸಿಹ್ ಘೋಷಿಸಿದ್ದಾರೆ. ಈ ಬೆಳವಣಿಗೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಬಿಜೆಪಿ ಅಭ್ಯರ್ಥಿ ಗೆದ್ದಿರುವುದು ‘‘ಹಾಡುಹಗಲಲ್ಲೇ ನಡೆದ ದರೋಡೆ’’ ಎಂಬುದಾಗಿ ಬಣ್ಣಿಸಿದ್ದಾರೆ.

ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಆಮ್ ಆದ್ಮಿ ಪಾರ್ಟಿ (ಆಪ್) ಮತ್ತು ಕಾಂಗ್ರೆಸ್ ನ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು.

35 ಸದಸ್ಯ ಬಲದ ಚಂಡೀಗಢ ಮುನ್ಸಿಪಾಲಿಟಿಯಲ್ಲಿ ಬಿಜೆಪಿ 14 ಕೌನ್ಸಿಲರ್ಗಳನ್ನು ಹೊಂದಿದೆ. ಆಪ್ 13 ಕೌನ್ಸಿಲರ್ ಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಬಳಿ ಏಳು ಕೌನ್ಸಿಲರ್ಗಳು ಇದ್ದಾರೆ. ಶಿರೋಮಣಿ ಅಕಾಲಿ ದಳ ಒಬ್ಬ ಸದಸ್ಯನನ್ನು ಹೊಂದಿದೆ. ಆಪ್ ಮತ್ತು ಕಾಂಗ್ರೆಸ್ ಕೌನ್ಸಿಲರ್ಗಳ ಒಟ್ಟು ಬಲ ಬಿಜೆಪಿಗಿಂತ ತುಂಬಾ ಹೆಚ್ಚಾಗಿದೆ.

ಸೊಂಕರ್ 16 ಮತ್ತು ಆಪ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ 12 ಮತಗಳನ್ನು ಪಡೆದಿದ್ದಾರೆ ಎಂಬುದಾಗಿ ಚುನಾವಣಾಧಿಕಾರಿ ಘೋಷಿಸಿದರು. ಅದೇ ವೇಳೆ, ಚಲಾವಣೆಯಾದ 8 ಮತಗಳು ‘‘ಅಸಿಂಧು’’ ಎಂಬುದಾಗಿಯೂ ಅವರು ಘೋಷಿಸಿದರು. ಇದಕ್ಕೆ ಕಾಂಗ್ರೆಸ್ ಮತ್ತು ಆಪ್ ಕೌನ್ಸಿಲರ್ಗಳು ಭಾರೀ ವಿರೋಧ ವ್ಯಕ್ತಪಡಿಸಿದರು.

ಆಪ್-ಕಾಂಗ್ರೆಸ್ ಮೈತ್ರಿಕೂಟವು ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿತ್ತು. ಆಪ್ ನ ಕುಲದೀಪ್ ಕುಮಾರ್ ಮೇಯರ್ ಅಭ್ಯರ್ಥಿಯಾದರೆ, ಕಾಂಗ್ರೆಸ್ ಸೀನಿಯರ್ ಉಪ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು.

ಚಂಡೀಗಢ ಮೇಯರ್ ಚುನಾವಣೆಯು ಜನವರಿ 18ರಂದು ನಡೆಯಬೇಕಾಗಿತ್ತು. ಆದರೆ, ಚುನಾವಣಾಧಿಕಾರಿಯ ‘‘ಅಸೌಖ್ಯ’’ದಿಂದಾಗಿ ಅದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಚುನಾವಣೆಯನ್ನು ಜನವರಿ 30ರಂದು ನಡೆಸಬೇಕು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶಿಸಿತ್ತು.

ಲೋಕಸಭಾ ಚುನಾವಣೆಯ ಕತೆ ಏನು?:ಕೇಜ್ರಿವಾಲ್

ಚಂಡೀಗಢ ಮುನ್ಸಿಪಾಲಿಟಿಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಳಿಸಿರುವ ಜಯವು ‘‘ಹಾಡು ಹಗಲಲ್ಲೇ ನಡೆದ ದಡೋಡೆಯಾಗಿದೆ’’ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘‘ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ಇಷ್ಟು ಕೆಳ ಮಟ್ಟಕ್ಕೆ ಇಳಿದರೆ, ಲೋಕಸಭಾ ಚುನಾವಣೆಯನ್ನು ಗೆಲ್ಲಲು ಅದು ಯಾವ ಹಂತಕ್ಕೆ ಹೋಗಬಹುದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ’’ ಎಂದು ಅವರು ಬಣ್ಣಿಸಿದ್ದಾರೆ.

‘‘ಚಂಡೀಗಢ ಮೇಯರ್ ಚುನಾವಣೆಯಲ್ಲಿ, ಹಾಡು ಹಗಲಲ್ಲೇ ಮಾಡಿರುವ ದರೋಡೆಯು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ ವ್ಯಕ್ತಿಗಳು ಮೇಯರ್ ಚುನಾವಣೆಯಲ್ಲೇ ಈ ಮಟ್ಟಕ್ಕೆ ಇಳಿದರೆ, ಲೋಕಸಭಾ ಚುನಾವಣೆಯನ್ನು ಗೆಲ್ಲಲು ಅವರು ಯಾವ ಮಟ್ಟಕ್ಕೆ ಹೋಗಬಹುದು? ಅತ್ಯಂತ ಕಳವಳಕಾರಿ ಬೆಳವಣಿಗೆಗಳು’’ ಎಂಬುದಾಗಿ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ದೇಶ ದ್ರೋಹದ ಕೃತ್ಯ: ಆಪ್-ಕಾಂಗ್ರೆಸ್

ಚಂಡೀಗಢ ಮೇಯರ್ ಚುನಾವಣೆಯ ಚುನಾವಣಾಧಿಕಾರಿ ಅನಿಲ್ ಮಸಿಹ್, ಮತ ಎಣಿಕೆಯ ವೇಳೆ ಮತಪತ್ರಗಳಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಆರೋಪಿಸಿವೆ.

ಮಸಿಹ್ ಕೆಲವು ಮತ ಪತ್ರಗಳಲ್ಲಿ ಗುರುತುಗಳನ್ನು ಮಾಡುತ್ತಿರುವುದನ್ನು ತೋರಿಸುತ್ತದೆ ಎನ್ನಲಾದ ವೀಡಿಯೊವೊಂದನ್ನು ‘ಇಂಡಿಯಾ’ ಪ್ರತಿಪಕ್ಷ ಒಕ್ಕೂಟದ ಘಟಕ ಪಕ್ಷಗಳು ಬಿಡುಗಡೆ ಮಾಡಿವೆ.

ಚುನಾವಣಾಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಪ್ನ ರಾಜ್ಯಸಭಾ ಸದಸ್ಯ ರಾಘವ ಚಡ್ಡಾ ಆಗ್ರಹಿಸಿದ್ದಾರೆ.

‘‘ಇದು ಕೇವಲ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಕೃತ್ಯವಲ್ಲ, ಇದ ದೇಶದ್ರೋಹದ ಕೃತ್ಯವಾಗಿದೆ. ಇಂದು ಚಂಡೀಗಢ ಮೇಯರ್ ಚುನಾವಣೆಯಲ್ಲಿ ಏನೆಲ್ಲಾ ನಡೆಯಿತೋ ಅವುಗಳನ್ನು ದೇಶದ್ರೋಹ ಎಂದು ಮಾತ್ರ ಕರೆಬಹುದಾಗಿದೆ’’ ಎಂದು ಅವಸರದಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಘವ ಚಡ್ಡಾ ಹೇಳಿದರು.

ಹೈಕೋರ್ಟ್ ಕದ ತಟ್ಟಿದ ಆಪ್

ಆಪ್-ಕಾಂಗ್ರೆಸ್ ಮೈತ್ರಿಕೂಟದ ಕೌನ್ಸಿಲರ್ಗಳ 8 ಮತಗಳನ್ನು ‘ಅಸಿಂಧು’ ಎಂಬುದಾಗಿ ಘೋಷಿಸಿದ ಚುನಾವಣಾಧಿಕಾರಿಯ ನಿರ್ಧಾರವನ್ನು ಆಮ್ ಆದ್ಮಿ ಪಕ್ಷವು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ.

ಆಪ್-ಕಾಂಗ್ರೆಸ್ನ ಜಂಟಿ ಅಭ್ಯರ್ಥಿ ಕುಲದೀಪ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ನ್ಯಾಯಲಯಕ್ಕೆ ಮನವಿ ಮಾಡಿದ್ದಾರೆ.

ಯಾವುದೇ ಕಾರಣ ನೀಡದೆ ಎಂಟು ಮತಗಳನ್ನು ಅಸಿಂಧು ಎಂಬುದಾಗಿ ಚುನಾವಣಾಧಿಕಾರಿ ಘೋಷಿಸಿದ್ದಾರೆ ಎಂದು ಹೇಳಿರುವ ಸಿಂಗ್, ಚುನಾವಣೆಯ ದಾಖಲೆಗಳಿಗೆ ಬೀಗಮುದ್ರೆ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಬುಧವಾರ ಎತ್ತಿಕೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News