ವಿಶಾಲಗಡ ಹಿಂಸಾಚಾರ: ಮಹಾರಾಷ್ಟ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ಬಾಂಬೆ ಹೈಕೋರ್ಟ್

Update: 2024-07-20 11:08 GMT

ಬಾಂಬೆ ಹೈಕೋರ್ಟ್ | PTI 

ಮುಂಬೈ,: ರಾಜ್ಯದಲ್ಲಿ ಕಾನೂನೇ ಇಲ್ಲದಂತಾಗಿರುವ ಸ್ಥಿತಿಗಾಗಿ ಮಹಾರಾಷ್ಟ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಬಾಂಬೆ ಉಚ್ಚ ನ್ಯಾಯಾಲಯವು, ಅದು ಮಳೆಗಾಲದಲ್ಲಿ ಮನೆಗಳನ್ನು ನೆಲಸಮಗೊಳಿಸುವುದನ್ನು ಪ್ರಶ್ನಿಸಿದೆ.

ಜು.14ರಂದು ವಿಶಾಲಗಡ ಕೋಟೆಯಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಮಾಜಿ ಬಿಜೆಪಿ ಸಂಸದ ಸಂಭಾಜಿರಾಜೇ ಛತ್ರಪತಿ ಮತ್ತು ಅವರ ಬೆಂಬಲಿಗರು ಪ್ರದೇಶದಲ್ಲಿ ನಡೆದಿದೆಯೆನ್ನಲಾದ ಅತಿಕ್ರಮಣಗಳ ವಿರುದ್ಧ ಕೋಟೆಗೆ ಪ್ರತಿಭಟನಾ ಜಾಥಾ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕೋಟೆಯ ಸುತ್ತುಮುತ್ತಲಿನ ಮನೆಗಳು,ಅಂಗಡಿಗಳು ಮತ್ತು ಮಸೀದಿಯನ್ನು ಧ್ವಂಸಗೊಳಿಸಿದ್ದರು.

ಯಾವುದೇ ಮನೆಯನ್ನು ಕೆಡವಿದರೆ ಅದಕ್ಕೆ ಕಾರಣರಾದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲು ನ್ಯಾಯಾಲಯವು ಹಿಂಜರಿಯುವುದಿಲ್ಲ ಎಂದು ಬರ್ಗಸ್ ಕೊಲಾಬಾವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರ ಪೀಠವು ಹೇಳಿತು.

‘ವಾಣಿಜ್ಯ ಕಟ್ಟಡಗಳನ್ನು ಮಾತ್ರ ಕೆಡವಲಾಗುತ್ತಿದೆ. ಈ ನ್ಯಾಯಾಲಯದಿಂದ ಅಥವಾ ಇತರ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಪಡೆದುಕೊಂಡಿರುವ ಕಟ್ಟಡಗಳನ್ನು ನಾವು ಮುಟ್ಟುವುದೂ ಇಲ್ಲ’ ಎಂದು ಹೆಚ್ಚುವರಿ ಸರಕಾರಿ ವಕೀಲ ಪಿ.ಪಿ.ಕಾಕಡೆ ಪೀಠಕ್ಕೆ ತಿಳಿಸಿದರು.

‘ಚಲೋ ವಿಶಾಲಗಡ’ ಜಾಥಾದ ಬಳಿಕ ನಡೆದಿದ್ದ ಹಿಂಸಾಚಾರದ ವೀಡಿಯೊಗಳನ್ನು ವೀಕ್ಷಿಸಿದ ನ್ಯಾಯಾಲಯವು ತನ್ನ ಮುಂದೆ ಹಾಜರಾಗುವಂತೆ ವಿಶಾಲಗಡ ಪೋಲಿಸರಿಗೆ ನಿರ್ದೇಶನ ನೀಡಿತು.

‘ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿದೆ? ಇವರು ನಿಮ್ಮ ಅಧಿಕಾರಿಗಳಲ್ಲ ಅಲ್ಲವೇ? ಹಾಗಾದರೆ ಈ ವ್ಯಕ್ತಿಗಳು ಯಾರು? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ನಿಮ್ಮದಲ್ಲವೇ? ಈ ವಿಷಯದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನಾವು ಬಯಸಿದ್ದೇವೆ ’ ಎಂದು ವೀಡಿಯೊಗಳನ್ನು ಉಲ್ಲೇಖಿಸಿ ಕಾಕಡೆಯವರನ್ನು ಪ್ರಶ್ನಿಸಿದ ಪೀಠವು, ‘ಮುಂದಿನ ಆದೇಶದವರೆಗೆ ಯಾವುದೇ ಕಟ್ಟಡವನ್ನು,ಅದು ಅಂಗಡಿ ಅಥವಾ ಮನೆಯಾಗಿರಲಿ,ಕೆಡವಬಾರದು ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಯಾವುದೇ ನೆಲಸಮ ಕಾರ್ಯಾಚರಣೆ ನಡೆದರೆ ನಿಮ್ಮ ಅಧಿಕಾರಿಗಳ ವಿರುದ್ಧ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿತು.

ಪ್ರಕರಣದ ಮುಂದಿನ ವಿಚಾರಣೆ ಜು.29ಕ್ಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News