ಅಭ್ಯರ್ಥಿಯ ಹಿನ್ನೆಲೆ ತಿಳಿಯುವ ಹಕ್ಕು ಮತದಾರನಿಗಿದೆ: ಸುಪ್ರೀಂ ಕೋರ್ಟ್‌

Update: 2023-07-26 06:57 GMT

ಹೊಸದಿಲ್ಲಿ: ಮತದಾರನಿಗೆ ಒಬ್ಬ ಅಭ್ಯರ್ಥಿಯ ಸಂಪೂರ್ಣ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವ ಹಕ್ಕಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ತಮ್ಮ ವಿರುದ್ಧದ ಅರ್ಜಿಯನ್ನು ವಜಾಗೊಳಿಸಲು ನಿರಾಕರಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಲೋಕಸಭಾ ಸಂಸದ ಭೀಮ್‌ ರಾವ್‌ ಬಸ್ವಂತ್‌ ರಾವ್‌ ಪಾಟೀಲ್‌ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ತೆಲಂಗಾಣದ ಝಹೀರಾಬಾದ್‌ ಕ್ಷೇತ್ರದಿಂದ 2019ರಲ್ಲಿ ಟಿಆರ್‌ಎಸ್‌ (ಈಗ ಬಿಆರ್‌ಎಸ್)‌ ಟಿಕೆಟಿನಿಂದ ಪಾಟೀಲ್‌ ಅವರು 6,229 ಮತಗಳ ಅಂತರದಿಂದ ಗೆದ್ದಿದ್ದರು. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಪಾಟೀಲ್‌ ವಿರುದ್ಧ ಸ್ಪರ್ಧಿಸಿ ಸೋತು ಎರಡನೇ ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಪಕ್ಷದ ಮದನ್‌ ಮೋಹನ್‌ ರಾವ್‌ ಚುನಾವಣಾ ದೂರು ದಾಖಲಿಸಿ, ಪಾಟೀಲ್‌ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಮತ್ತು ರಿಟರ್ನಿಂಗ್‌ ಆಫೀಸರ್‌ ಅವರು ಚುನಾವಣಾ ಆಯೋಗದ ಅಕ್ಟೋಬರ್‌ 2018 ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಪಾಟೀಲ್‌ ವಿರುದ್ಧದ ಬಾಕಿ ಪ್ರಕರಣಗಳು ಹಾಗೂ ಅವರು ದೋಷಿಯೆಂದು ಘೋಷಿತರಾದ ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ದೂರಿದ್ದರು.

ಜೂನ್‌ 2022 ರಂದು ಹೈಕೋರ್ಟ್‌ ಆರಂಭದಲ್ಲಿ ಈ ಅರ್ಜಿಯನ್ನು ತಿರಸ್ಕರಿಸಿದ ನಂತರ ಪಾಟೀಲ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ತಮ್ಮ ವಿರುದ್ಧ ಚುನಾವಣಾ ದೂರು, ಕ್ರಮಕ್ಕೆ ಯಾವುದೇ ಕಾರಣ ನೀಡಿಲ್ಲ ಹಾಗೂ ಅದು ತಿರಸ್ಕರಿಸಲು ಅರ್ಹ ಎಂದು ವಾದಿಸಿದ್ದರು.

ಆದರೆ ಸುಪ್ರೀಂ ಕೋರ್ಟ್‌ ಹೈಕೋರ್ಟಿನ ಆದೇಶವನ್ನು ಎತ್ತಿ ಹಿಡಿದು ಅಭ್ಯರ್ಥಿಯ ಹಿನ್ನೆಲೆ ಬಗ್ಗೆ ತಿಳಿಯುವ ಹಕ್ಕು ಮತದಾರರಿಗಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News