ಪಶ್ಚಿಮ ಬಂಗಾಳ: ಫೋನ್ ಖರೀದಿಸಲು ಮಗುವನ್ನು ಮಾರಾಟ ಮಾಡಿದ ದಂಪತಿ!
ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೊಲೀಸರು ತಮ್ಮ ಎಂಟು ತಿಂಗಳ ಹಸುಳೆಯನ್ನು ಮಾರಾಟ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಿದ್ದಾರೆ.
ದಂಪತಿ ಬಳಿ ಹೊಚ್ಚ ಹೊಸ ಫೋನ್ ಇರುವುದನ್ನು ಕಂಡು ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳೀಯರ ಪ್ರಕಾರ, ಹೆಣ್ಣು ಮಗುವಿದ್ದ ಹೊಂದಿರುವ ದಂಪತಿ ರಾಜ್ಯಾದ್ಯಂತ ಪ್ರವಾಸ ಮಾಡಿದರು ಹಾಗೂ ತಮ್ಮ ಹನಿಮೂನ್ ಗಾಗಿ ದಿಘಾ ಮತ್ತು ಮಂದಾರಮಣಿ ಸಮುದ್ರದ ಬೀಚ್ಗಳು ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದರು.
ರವಿವಾರ (ಜುಲೈ 24) ಈ ಘಟನೆ ಬೆಳಕಿಗೆ ಬಂದಿದ್ದರೂ ಒಂದೂವರೆ ತಿಂಗಳ ಹಿಂದೆ ಇದು ನಡೆದಿದೆ. ದಂಪತಿಯನ್ನು ಜಯದೇವ್ ಘೋಷ್ ಹಾಗೂ ಸತಿ ಎಂದು ಗುರುತಿಸಲಾಗಿದ್ದು, ಇದೀಗ ಪೊಲೀಸ್ ವಶದಲ್ಲಿದ್ದು, ಮಗುವನ್ನು ರಕ್ಷಿಸಲಾಗಿದೆ.
"ಜಯದೇವ್ ಘೋಷ್ ಮತ್ತು ಸತಿ ತಮ್ಮ ಮಗುವನ್ನು ರೂ 2 ಲಕ್ಷಕ್ಕೆ ಮಾರಾಟ ಮಾಡಿದರು. ನಂತರ, ಅವರು ತಮ್ಮ ಹನಿಮೂನ್ ಗಾಗಿ ದಿಘಾ ಸಮುದ್ರದಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಅವರು ಮೊಬೈಲ್ ಫೋನ್ ಸಹ ಖರೀದಿಸಿದರು. ಗಾಂಜಾ ಹಾಗೂ ಅಫೀಮು ಖರೀದಿಗಾಗಿ ಸತಿ ತನ್ನ ಮಗುವನ್ನು ಮಾರಿದ್ದಾಳೆ" ಎಂದು ನೆರೆಯವರಾದ ಲಕ್ಷ್ಮಿ ಕುಂದು India Todayಗೆ ತಿಳಿಸಿದರು.
"ಮಗುವನ್ನು ಮಾರಾಟ ಮಾಡಿದ ವಿಚಾರ ನನಗೆ ತಿಳಿಯಿತು. ಆದರೆ ಅವರು ಯಾರಿಗೆ ಮಾರಾಟ ಮಾಡಿದ್ದಾರೊ ಗೊತ್ತಿಲ್ಲ. ನನ್ನ ಮಗ ಹಾಗೂ ಸೊಸೆ, ದಿಘಾ, ಮಂದರ್ ಮಣಿ ಬೀಚ್ ಗಳಿಗೆ ಹಾಗೂ ತಾರಾಪೀಠ ಕಾಳಿ ದೇವಸ್ಥಾನಕ್ಕೆ ಹೋಗಿದ್ದಾರೆ'' ಎಂದು ಜಯದೇವ್ ತಂದೆ ಕಮೈ ಚೌಧರಿ India Todayಗೆ ಹೇಳಿದ್ದಾರೆ.
ದಂಪತಿಯಿಂದ ಶಿಶುವನ್ನು ಖರೀದಿಸಿದ್ದ ಮತ್ತೊಬ್ಬ ಮಹಿಳೆ ಪ್ರಿಯಾಂಕಾ ಘೋಷ್ ಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯಾಂಕಾಳನ್ನು ಖರ್ದಾಹ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆದರೆ ಆಕೆ ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ.