ಪಶ್ಚಿಮ ಬಂಗಾಳ | ಬಿಜೆಪಿ ಕಾರ್ಯಕರ್ತೆಯ ಹತ್ಯೆ ; ಬಿಜೆಪಿ ಕಾರ್ಯಕರ್ತ ರಿಂದ ಪ್ರತಿಭಟನೆ
ಕೊಲ್ಕತ್ತ: ಲೋಕಸಭೆ ಚುನಾವಣೆಗೆ ಕೇವಲ ಎರಡು ದಿನಗಳು ಇರುವಾಗ ಪಶ್ಚಿಮಬಂಗಾಳದ ಈಸ್ಟ್ ಮಿಡ್ನಾಪುರ್ ಜಿಲ್ಲೆಯ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತೆಯೋರ್ವರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು ರತಿಬಾಲ ಅರ್ಹಿ (38) ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಾಮ್ಲುಕ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶ ಪಶ್ಚಿಮಬಂಗಾಳದ ಪ್ರತಿಪಕ್ಷದ ನಾಯಕ ಸುವೇಂಧು ಅಧಿಕಾರಿ ಅವರ ಆಡುಂಬೊಲ ಎಂದು ಪರಿಗಣಿಸಲಾಗಿದೆ. ಇಲ್ಲಿ ಮೇ 25ರಂದು ನಡೆಯಲಿರುವ ಆರನೇ ಹಂತದ ಮತದಾನದಲ್ಲಿ ಮತದಾನ ನಡೆಯಲಿದೆ.
ಸೋನಾಚುರ ಗ್ರಾಮದ ಪಕ್ಷದ ಕಾರ್ಯಕರ್ತೆ ರತಿಬಾಲ ಅರ್ಹಿ ಅವರ ಹತ್ಯೆಯಲ್ಲಿ ಟಿಎಂಸಿ ಬೆಂಬಲಿತ ಕ್ರಿಮಿನಲ್ ಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಂದಿಗ್ರಾಮದಲ್ಲಿ ಅಂಗಡಿಗಳನ್ನು ಮುಚ್ಚಿಸಿದರು ಹಾಗೂ ರಸ್ತೆಗಳಲ್ಲಿ ಟಯರ್ ಉರಿಸಿ ಪ್ರತಿಭಟನೆ ನಡೆಸಿದರು ಎಂದು ಅವರು ತಿಳಿಸಿದ್ದಾರೆ.
ಗಲಭೆಯಲ್ಲಿ ತೊಡಗಿಕೊಂಡ ಗುಂಪನ್ನು ನಿಯಂತ್ರಿಸಲು ಈ ಪ್ರದೇಶದಲ್ಲಿ ಪೊಲೀಸ್ ಹಾಗೂ ರ್ಯಾ ಪಿಡ್ ಆಕ್ಷನ್ ಫೋರ್ಸ್ ನ ತುಕಡಿಯನ್ನು ನಿಯೋಜಿಸಲಾಗಿದೆ. ಹತ್ಯೆ ಕುರಿತಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪ್ರತಿಭಟನೆಯ ಭಾಗವಾಗಿ ಬಿಜೆಪಿ ನಂದಿಗ್ರಾಮದಲ್ಲಿ ಬಂದ್ ಗೆ ಕರೆ ನೀಡಿತ್ತು. ಅನಂತರ ಹಿಂದೆ ತೆಗೆದುಕೊಂಡಿತು ಎಂದು ಬಿಜೆಪಿಯ ಸ್ಥಳೀಯ ನಾಯಕರೊಬ್ಬರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅರ್ಹಿ ಮೃತಪಟ್ಟರು ಹಾಗೂ ಹಲವರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.