ದಿಲ್ಲಿ ಗಲಭೆ ಪ್ರಕರಣದಲ್ಲಿ ನನ್ನನ್ನು ಆರೋಪಿಯನ್ನಾಗಿಸಲು ಆಧಾರವೇನಿದೆ?: ಉಮರ್ ಖಾಲಿದ್ ಪ್ರಶ್ನೆ

Update: 2024-12-07 06:58 GMT

ಉಮರ್ ಖಾಲಿದ್ (PTI)

ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಪಿತೂರಿ ಮತ್ತು ಯುಎಪಿಎಯಡಿ ಯಾವ ಆಧಾರದಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡಿದ್ದಾರೆಂದು ಜೆಎನ್ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ದಿಲ್ಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರ ಪೀಠದ ಮುಂದೆ ಈ ಕುರಿತು ಹಿರಿಯ ವಕೀಲ ತ್ರಿದೀಪ್ ಪೈಸ್ ಅವರು ವಾದವನ್ನು ಮಂಡಿಸಿದ್ದಾರೆ. 2020ರ ದಿಲ್ಲಿ ಗಲಭೆ ಸಂಚಿನ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಎನ್‌ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರು ಹಿಂಸಾಚಾರ ಅಥವಾ ನಿಧಿಸಂಗ್ರಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ನೇರವಾದ ಸಾಕ್ಷ್ಯಗಳಿಲ್ಲ, ವಿಚಾರಣಾಧೀನ ಖೈದಿಯಾಗಿ ಸುದೀರ್ಘ ಕಾಲ ಸೆರೆವಾಸ ಅನುಭವಿಸಿರುವುದರಿಂದ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ದಿಲ್ಲಿ ಹೈಕೋರ್ಟ್‌ ನಲ್ಲಿ ವಾದಿಸಿದ್ದಾರೆ.

ಉಮರ್ ಖಾಲಿದ್ ಗಲಭೆಯಲ್ಲಿ ಭಾಗವಹಿಸಿರುವುದಕ್ಕೆ ಯಾವುದೇ ಪುರಾವೆಯಿಲ್ಲ, ಇದೇ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಖಾಲಿದ್ ಕೂಡ ಸಮಾನತೆಯನ್ನು ಬಯಸಿದ್ದಾರೆ ಎಂದು ಪೈಸ್ ವಾದಿಸಿದ್ದಾರೆ.

ಈ ಕುರಿತು ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರ ವಿಭಾಗೀಯ ಪೀಠವು ವಾದವನ್ನು ಆಲಿಸಿದೆ, ಆದರೆ ದಿಲ್ಲಿ ಪೊಲೀಸರು ಪ್ರತಿಕ್ರಿಯೆ ನೀಡಲು ಹೆಚ್ಚುವರಿ ಸಮಯವನ್ನು ಕೋರಿದ್ದರಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.12ಕ್ಕೆ ನಿಗದಿಪಡಿಸಲಾಗಿದೆ.

2020ರ ದಿಲ್ಲಿ ಗಲಭೆಯ ಮಾಸ್ಟರ್ ಮೈಂಡ್ ಗಳು ಎಂದು ಆರೋಪಿಸಿ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಮತ್ತು IPC ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸಿಎಎ ಮತ್ತು ಎನ್ ಆರ್‌ ಸಿ ವಿರುದ್ಧದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದಿತು. ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿ,700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಖಾಲಿದ್‌ ಅವರನ್ನು 2020ರ ಸೆಪ್ಟಂಬರ್‌ ನಲ್ಲಿ ಬಂಧಿಸಲಾಗಿತ್ತು. 2022ರ ಅಕ್ಟೋಬರ್ ನಲ್ಲಿ ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ, ಖಾಲಿದ್ ಎರಡನೇ ಬಾರಿಗೆ ಪ್ರಕರಣದಲ್ಲಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News