ಭಾರತೀಯ ಸೇನಾಪಡೆಗಳೇಕೆ ದ್ವೀಪ ರಾಷ್ಟ್ರವನ್ನು ತೊರೆಯಬೇಕು ಎಂದು ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಬಯಸುತ್ತಿದ್ದಾರೆ?

Update: 2023-11-19 07:46 GMT

Photo :indiatoday

ಹೊಸದಿಲ್ಲಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮುಹಮ್ಮದ್ ಮುಯಿಝು, “ನಮ್ಮ ಪುಟ್ಟ ದ್ವೀಪ ರಾಷ್ಟ್ರದ ಮಣ್ಣಿನಲ್ಲಿ ಯಾವುದೇ ವಿದೇಶಿ ಸೇನಾಪಡೆಯ ಉಪಸ್ಥಿತಿ ಇಲ್ಲದಿರುವುದನ್ನು ಖಾತರಿಪಡಿಸಲಾಗುವುದು” ಎಂದು ಸಂಕಲ್ಪ ತೊಟ್ಟಿದ್ದಾರೆ. ಇದರ ಬೆನ್ನಿಗೇ ಕೇಂದ್ರ ಸಚಿವ ಕಿರಣ್ ರಿಜಿಬು ಅವರೊಂದಿಗೆ ಮಾತುಕತೆ ನಡೆಸಿದ ಮುಹಮ್ಮದ್ ಮುಯಿಝು, ತಮ್ಮ ದೇಶದಿಂದ ಸೇನಾಪಡೆಗಳನ್ನು ಹಿಂಪಡೆಯುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ. ಆದರೆ, ಉಭಯ ದೇಶಗಳ ಜನರ ಹಿತಾಸಕ್ತಿಗೆ ಪೂರಕವಾಗಿ ದ್ವೀಪ ರಾಷ್ಟ್ರದ ನೆಲೆಯಲ್ಲಿ ಭಾರತೀಯ ಸೇನಾಪಡೆಗಳನ್ನು ಉಪಸ್ಥಿತಿಯನ್ನು ಮುಂದುವರಿಸುವ ಕುರಿತು ಕಾರ್ಯಸಾಧು ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಲು ಎರಡೂ ದೇಶಗಳು ಸಮ್ಮತಿ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನಾಪಡೆ

ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಭಾರತದ ಸುಮಾರು 70 ಮಂದಿ ಯೋಧರು ಮಾತ್ರ ಇದ್ದಾರೆ. ಈ ಸಿಬ್ಬಂದಿಗಳು ಭಾರತ ಪ್ರಾಯೋಜಿತ ರಡಾರ್ ಗಳು ಹಾಗೂ ಕಣ್ಗಾವಲು ವಿಮಾನಗಳ ಕಾರ್ಯಚರಣೆ ನಿರ್ವಹಿಸುತ್ತಾರೆ. ಈ ಪ್ರದೇಶದಲ್ಲಿರುವ ಭಾರತದ ಯುದ್ಧ ನೌಕೆಗಳು ದೇಶದ ವಿಶೇಷ ಆರ್ಥಿಕ ವಲಯಗಳ ಮೇಲೆ ಗಸ್ತು ನಡೆಸಲು ನೆರವು ನೀಡುತ್ತವೆ. ಮಾಲ್ಡೀವ್ಸ್ ಅಧ್ಯಕ್ಷ ಡಾ. ಮುಯಿಝು ಪ್ರಕಾರ, ಭಾರತದ ಎರಡು ಹೆಲಿಕಾಪ್ಟರ್ ಗಳು ಹಲವಾರು ತುರ್ತು ವೈದ್ಯಕೀಯ ತೆರವು ಕಾರ್ಯಾಚರಣೆಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿವೆ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಅವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯೋಧರ ಸಣ್ಣ ಗುಂಪನ್ನು ಹಲವಾರು ವರ್ಷಗಳಿಂದ ಮಾಲ್ಡೀವ್ಸ್‌ನಲ್ಲಿ ನಿಯೋಜಿಸಲಾಗಿದೆ.

ಭೌಗೋಳಿಕ-ರಾಜಕೀಯ ಮಹತ್ವ ಪ್ರಾಂತ್ಯ

ದಿಲ್ಲಿಯ ಐದನೆಯ ಒಂದು ಭಾಗದಷ್ಟಿರುವ ಈ ದ್ವೀಪ ರಾಷ್ಟ್ರದಲ್ಲಿ 5 ಲಕ್ಷ ಮಂದಿ ವಾಸಿಸುತ್ತಿದ್ದು, ಜನಪ್ರಿಯ ಪ್ರವಾಸಿ ತಾಣವಾಗಿದೆ. ಆದರೆ, ಹಿಂದೂ ಮಹಾಸಾಗರದಲ್ಲಿ ವ್ಯೂಹಾತ್ಮಕ ಪ್ರಾಮುಖ್ಯತೆ ವೃದ್ಧಿಸುತ್ತಿರುವುದರಿಂದ ಹಾಗೂ ಏಷ್ಯಾ ದೇಶಗಳಾದ ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟಿರುವುದರಿಂದ, ಈ ದ್ವೀಪ ರಾಷ್ಟ್ರವು ಭೌಗೋಳಿಕ-ರಾಜಕೀಯ ಮಹತ್ವದ ಪ್ರಾಂತ್ಯವಾಗಿ ಬದಲಾಗಿದೆ. ದೀರ್ಘಕಾಲದ ಭೌಗೋಳಿಕ-ರಾಜಕೀಯ ಮುನ್ನೋಟವನ್ನಿಟ್ಟುಕೊಂಡು ಭಾರತ ಮತ್ತು ಚೀನಾ ದೇಶಗಳೆರಡೂ ಉದಾರವಾಗಿ ಇಲ್ಲಿನ ಅಭಿವೃದ್ಧಿಗೆ ಹೂಡಿಕೆ ಮಾಡಿವೆ. ನಮ್ಮ ದೇಶವು ಭಾರತ ಮತ್ತು ಚೀನಾ ದೇಶಗಳೆರಡರೊಂದಿಗೂ ಕೆಲಸ ಮಾಡಲು ಬಯಸುತ್ತದೆ ಎಂದು ಮಾಲ್ಡೀವ್ಸ್ ಅಧ್ಯಕ್ಷರು ಒತ್ತಿ ಹೇಳಿದ್ದರೂ, “ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ಭೌಗೋಳಿಕ-ರಾಜಕೀಯ ವೈರತ್ವದಲ್ಲಿ ಸಿಕ್ಕಿ ಬೀಳಲು ತೀರಾ ಪುಟ್ಟದಾಗಿದೆ” ಎಂದೂ ದೃಢವಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಭಾರತ ಮತ್ತು ಮಾಲ್ಡೀವ್ಸ್‌ನಡುವಿನ ಸಂಬಂಧ ವೃದ್ಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಇಬ್ರಾಹಿಂ ಮುಹಮ್ಮದ್ ಸೊಲಿಹ್ ಅವರ ಉತ್ತರಾಧಿಕಾರಿಯಾಗಿ ಅಧ್ಯಕ್ಷ ಮುಯಿಝು ಆಯ್ಕೆಯಾಗಿದ್ದಾರೆ. ಮಾಜಿ ಸಚಿವರು ಹಾಗೂ ಮೇಲ್ ನ ಮಾಜಿ ಮೇಯರ್ ಆದ ಅಧ್ಯಕ್ಷ ಮುಯಿಝು, 2013-2018ರ ನಡುವೆ ಚೀನಾದಿಂದ ಭಾರಿ ಪ್ರಮಾಣದ ಸಾಲ ಪಡೆದಿದ್ದ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರಿಗೆ ತೀರಾ ಆಪ್ತರಾಗಿದ್ದಾರೆ. ಒಂದು ವೇಳೆ ತಮ್ಮ ಪಕ್ಷವು ಚುನಾವಣೆಯಲ್ಲಿ ವಿಜಯಿಯಾದರೆ, ತಾನು ಚೀನಾದೊಂದಿಗೆ ಬಲಿಷ್ಠ ಸಂಬಂಧ ಹೊಂದಲು ಬಯಸುತ್ತೇನೆ ಎಂದು ವರ್ಷದ ಕೆಳಗೆ ಮುಯಿಝು ಹೇಳಿಕೆ ನೀಡಿದ್ದರು. ಆದರೆ, ಮಾಜಿ ಅಧ್ಯಕ್ಷ ಯಮೀನ್ ಅವರು ಕ್ರಿಮಿನಲ್ ಅಪರಾಧವೊಂದರಲ್ಲಿ ದೋಷಿಯಾಗಿ ಹಾಗೂ ಭ್ರಷ್ಟಾಚಾರಕ್ಕಾಗಿ 11 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಮುಯಿಝು ರನ್ನು ತಮ್ಮ ಪಕ್ಷದ ವತಿಯಿಂದ ಅಧ್ಯಕ್ಷ ಹುದ್ದೆಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದ್ದರು.

ಸರಿದೂಗಿಸಿಕೊಂಡು ಹೋಗುವ ಆಟ

ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ನಂತರ, ಭದ್ರತೆಯ ಕಾರಣ ನೀಡಿ ಭಾರತೀಯ ಸೇನಾಪಡೆಗಳು ದ್ವೀಪ ರಾಷ್ಟ್ರದಿಂದ ಹೊರಹೋಗಬೇಕು ಎಂದು ಮುಯಿಝು ಒತ್ತಡ ಹೇರುತ್ತಿದ್ದಾರೆ. ಈ ಕುರಿತು AFP ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಮುಯಿಝು, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಭಾರತೀಯ ಸೇನಾಪಡೆಯ ಬದಲಿಗೆ ಚೀನಾ ಸೇನಾಪಡೆಗೆ ತಮ್ಮ ನೆಲದಲ್ಲಿ ಅವಕಾಶ ನೀಡುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರೊಂದಿಗೆ ಮಾತುಕತೆ ನಡೆಸಿದ ಮುಯಿಝು, ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಭಾರತ ಬೆಂಬಲಿತ ಯೋಜನೆಗಳ ಕುರಿತು ಚರ್ಚಿಸಿದರು. “ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ಪರಿಷ್ಕೃತ ಬದ್ಧತೆಯೊಂದಿಗೆ ಅಧ್ಯಕ್ಷ ಡಾ. ಮುಯಿಝು ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ನಡುವಿನ ಸಭೆಯು ಅಂತ್ಯಗೊಂಡಿತು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News