ಬ್ರಿಜ್ ಭೂಷಣ್ ಸಿಂಗ್ ಆಪ್ತನ ನೇಮಕ ವಿರೋಧಿಸಿ ಪದ್ಮಶ್ರೀ ಹಿಂದಿರುಗಿಸಿದ ಬಜರಂಗ್ ಪುನಿಯಾ

Update: 2023-12-22 17:41 GMT

ಬಜರಂಗ್ ಪುನಿಯಾ (PTI)

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ ನಲ್ಲಿ ನಡೆಯುತ್ತಿರುವ ‘‘ಅನಪೇಕ್ಷಿತ’’ ಬೆಳವಣಿಗೆಗಳನ್ನು ಪ್ರತಿಭಟಿಸಿ, ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ಹಿಂದಿರುಗಿಸುತ್ತೇನೆ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ ಪೂನಿಯ ಹೇಳಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ರ ನಿಕಟವರ್ತಿ ಸಂಜಯ್ ಸಿಂಗ್ ಆಯ್ಕೆಯಾದ ಬಳಿಕ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಬರೆದ ಸುದೀರ್ಘ ಪತ್ರವನ್ನು ಬಜರಂಗ್ ಪುನಿಯ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ್ದಾರೆ.

ನಾನು ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ ಎಂಬುದಾಗಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಘೋಷಿಸಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ನ್ಯಾಯವನ್ನು ನಿರಾಕರಿಸಿರುವುದು ನನ್ನ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

‘‘ಪ್ರೀತಿಯ ಪ್ರಧಾನಿಯವರೇ, ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ಆಶಿಸುತ್ತೇನೆ. ನೀವು ಕೆಲಸದಲ್ಲಿ ತುಂಬಾ ವ್ಯಸ್ತರಾಗಿರಬೇಕು. ಆದರೆ, ದೇಶದ ಕುಸ್ತಿಪಟುಗಳತ್ತ ನಿಮ್ಮ ಗಮನವನ್ನು ಸೆಳೆಯಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ’’ ಎಂದು ಅವರು ಬರೆದಿದ್ದಾರೆ.

‘‘ದೇಶದ ಮಹಿಳಾ ಕುಸ್ತಿಪಟುಗಳು ಈ ವರ್ಷದ ಜನವರಿಯಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ಆರಂಭಿಸಿರುವುದು ನಿಮಗೆ ಗೊತ್ತಿರಬೇಕು. ಸಿಂಗ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಅವರು ಆರೋಪಿಸಿದ್ದಾರೆ. ಅವರ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ಕಠಿಣ ಕ್ರಮದ ಭರವಸೆಯನ್ನು ಸರಕಾರ ನೀಡಿದ ಬಳಿಕ ಪ್ರತಿಭಟನೆ ನಿಂತಿತು’’ ಎಂದು ಅವರು ಹೇಳಿದ್ದಾರೆ.

‘‘ಆದರೆ, ಮೂರು ತಿಂಗಳ ಬಳಿಕವೂ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಾಗಲಿಲ್ಲ. ಅವರ ವಿರುದ್ಧ ಪೊಲೀಸರು ಕನಿಷ್ಠ ಎಫ್ಐಆರ್ ಆದರೂ ದಾಖಲಿಸಬೇಕು ಎಂದು ಒತ್ತಾಯಿಸಿ ಎಪ್ರಿಲ್ನಲ್ಲಿ ನಾವು ಮತ್ತೆ ಬೀದಿಗಿಳಿದೆವು’’ ಎಂದು ಅವರು ಬರೆದಿದ್ದಾರೆ.

‘‘ಜನವರಿಯಲ್ಲಿ 19 ದೂರುದಾರರಿದ್ದರು. ಆದರೆ ಎಪ್ರಿಲ್ ವೇಳೆಗೆ ಆ ಸಂಖ್ಯೆ 7ಕ್ಕೆ ಇಳಿಯಿತು. ಆ ಅವಧಿಯಲ್ಲಿ 12 ಮಹಿಳಾ ಕುಸ್ತಿಪಟುಗಳ ಮೇಲೆ ಬ್ರಿಜ್ ಭೂಷಣ್ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದನು’’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News