ಮರಳಿ ಮನೆಗೆ: ರಾಜಕೀಯ ಮುತ್ಸದ್ದಿ ಶ್ರೀನಿವಾಸ ಪ್ರಸಾದ್

‘‘ಯಾವ ರಾಜಕೀಯ ಪಕ್ಷಗಳಿಗಿಂತ ನನಗೆ ಮುಖ್ಯವಾಗುವುದು ಡಾ.ಭೀಮಾ ಸಾಹೇಬ್ ಅಂಬೇಡ್ಕರ್ ಅವರು ಮತ್ತು ಅವರ ವಿಚಾರಗಳು. ಹಾಗೆಯೇ ಅವರು ಕೊಟ್ಟ ಶ್ರೇಷ್ಠ ಸಂವಿಧಾನ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ನಾನು ಎಂದಿಗೂ ರಾಜಿಯಾಗುವುದಿಲ್ಲ’’ ಎನ್ನುವ ಮಾತು ತನ್ನ 50 ವರ್ಷದ ರಾಜಕಾರಣದಲ್ಲಿ ತಾನು ನಂಬಿಕೊಂಡು ಬಂದ ವಿಚಾರಗಳಿಗೆ ಬದ್ಧರಾಗಿದ್ದರು ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮರಳಿಮನೆಗೆ-ಬುದ್ಧನೆಡೆಗೆ ಬೀಜ ಬಿತ್ತಿ ಹೋಗಿದ್ದೀರಿ ಅದು ಒಂದಲ್ಲಾ ಒಂದು ದಿನ ಫಲ ಕೊಡುತ್ತದೆ, ನೀವು ಕೂಡ ಮರಳಿ ಮನೆಗೆ ಹೋಗಿದ್ದೀರಿ... ನಿಮ್ಮ ನೆನಪು ನಮಗೆ ಸದಾ ಹಸಿರು.

Update: 2024-05-20 05:59 GMT

ಬರುವ ಗುರುವಾರ. ಅಂದರೆ 23.05.2024ರಂದು ಮಹಾ ಬುದ್ಧಪೂರ್ಣಿಮೆ. ಬುದ್ಧಪೂರ್ಣಿಮೆಗೆಂದೇ ಪ್ರಕೃತಿಯಲ್ಲಿ ಪೂರ್ವ ಮುಂಗಾರು ಮಳೆ ಬಂದು ಇಡೀ ವಾತಾವರಣ ಆಹ್ಲಾದಕರವಾಗಿದೆ. ಇಡೀ ಜೀವಕುಲ ಬಿಸಿಲಿನಿಂದ ಬೆಂದು ಬಸವಳಿದಿತ್ತು, ಮಳೆ ಬಂದು ನಿಟ್ಟುಸಿರು ಬಿಟ್ಟಿದೆ. ಒಂದೆರಡು ದಿನಕ್ಕೆಲ್ಲಾ ಗರಿಕೆ ಚಿಗುರಿ ಭೂಮಿ ನಕ್ಕ ಹಾಗೆ ಕಾಣಿಸುತ್ತದೆ. ಪ್ರಕೃತಿ ಹೀಗೆ ಇರಬೇಕು, ಹೀಗೆ ಆಗಬೇಕು ಎನ್ನುವ ಮನುಷ್ಯ, ತನಗೆ ಅನ್ನಿಸಿದಂತೆ ಆಗಬೇಕು ಎನ್ನುವ ಧೂರ್ತ ಚಿಂತನೆಗೆಲ್ಲಾ ಪ್ರಕೃತಿ ಕಿವಿಗೊಡುವುದಿಲ್ಲ. ಮನುಷ್ಯನ ಅವಿವೇಕದಿಂದ ಋತುಮಾನಗಳಲ್ಲಿ ಏರುಪೇರಾಗಿದೆ. ಆದರೂ ಈ ಮಳೆಯ ಸಂಭ್ರಮಕ್ಕೆ ಎಣೆಯೇ ಇಲ್ಲ ಎನ್ನಿಸುತ್ತದೆ. ಈ ನೆಲದಲ್ಲಿ ಹುಟ್ಟಿ ಬೆಳೆದು ಮನುಷ್ಯಕುಲಕ್ಕೆ ಪ್ರೀತಿ ಕಾರುಣ್ಯದ ಕಾಣ್ಕೆ ಕೊಟ್ಟ ಬುದ್ಧ ಗುರುಗಳು, ಭಾರತದಲ್ಲಿ ನೆಲಕಳೆದುಕೊಂಡಿದ್ದು ಮಾತ್ರ ವಿಷಾದನೀಯ. ಆದರೆ ಇದನ್ನು ಮತ್ತೆ ಪುನರುಜ್ಜೀವನ ಗೊಳಿಸುವಲ್ಲಿ ನಮ್ಮ ನೆಲದಲ್ಲಿ ಬುದ್ಧ ಗುರುವಿನ ತತ್ವಗಳನ್ನು ಮುನ್ನೆಲೆಗೆ ತಂದಿದ್ದು ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಈ ನೆಲದಲ್ಲಿ ನೊಂದವರು ಶೋಷಿತರು ವಿಶೇಷವಾಗಿ ಅಸ್ಪಶ್ಯರು, ಹಿಂದೂ ಧರ್ಮದ ಕ್ರೂರ ಅಸ್ಪಶ್ಯತಾ ಆಚರಣೆಗಳಿಗೆ ತತ್ತರಿಸಿ ಹೋದವರಿಗೆ ಒಂದು ತಾಯ್ತನದ ಹಂಬಲದಲ್ಲಿ ಪೊರೆಯುವ ಏಕೈಕ ದಮ್ಮ ‘ಬುದ್ಧನ ಬೌದ್ಧ ದಮ್ಮ’. ಬುದ್ಧನ ಕರುಣೆ, ಪ್ರೀತಿ ಮತ್ತು ಭ್ರಾತೃತ್ವವನ್ನು ಅರಿತ ಭೀಮಾ ಸಾಹೇಬರು ನೊಂದವರ ಕಣ್ಣಿಗೆ ಬುದ್ಧನ ಬೆಳಕನ್ನು ತೋರಿಸಿದರು. ಇದು ಬರೀ ಸೀಮಿತ ಮಂದಿಗಲ್ಲ ದುಃಖಿತರಾದ ಪ್ರತಿಯೊಂದು ಜೀವಕ್ಕೂ ಬುದ್ಧನ ಕಾರುಣ್ಯದ ಅಗತ್ಯವನ್ನು ಒತ್ತಿ ಹೇಳಿದರು. ಭೀಮಾ ಸಾಹೇಬರಿಂದಾಗಿ ಈ ನೆಲದಲ್ಲಿ ಮತ್ತೆ ಬುದ್ಧ ಮುಗುಳುನಗಲು ಸಾಧ್ಯವಾಯಿತು.

ವಿಶೇಷವಾಗಿ ಕರ್ನಾಟಕದಲ್ಲಿ ಬುದ್ಧ ದಮ್ಮಕ್ಕೆ ಒಂದು ಭದ್ರ ಬುನಾದಿ ಹಾಕಿದ್ದು ಮಲ್ಲಿಕಾರ್ಜುನ ಖರ್ಗೆ ಸಾಹೇಬರು. ಅದು ಗುಲ್ಬರ್ಗಾದಲ್ಲಿರುವ ವಿಶಾಲವಾದ ಬೌದ್ಧವಿಹಾರ. ಬಿಸಿಲಿನಿಂದ ಬಸವಳಿದವರು, ತಲ್ಲಣಿಸಿದವರು, ಬುದ್ಧನೆದುರಿಗೆ ಒಂದಿಷ್ಟು ಗಳಿಗೆಯಾದರೂ ಕಣ್ಣುಮುಚ್ಚಿ ತಣ್ಣಗೆ ಧ್ಯಾನಸ್ಥರಾಗಲು ಒಂದು ಪವಿತ್ರವಾದ ಜಾಗ. ಈಗ ಅಲ್ಲಿ ನೂರಾರು ಸಾವಿರಾರು ಮಂದಿ ಬುದ್ಧನ ಪ್ರೀತಿಗೆ, ಕಾರುಣ್ಯಕ್ಕೆ ಒಳಗಾಗಿದ್ದಾರೆ. ಅಂಬೇಡ್ಕರ್ ಅವರು ಮುನ್ನೆಲೆಗೆ ತಂದು ತಾವೂ ದಮ್ಮವನ್ನು ಸ್ವೀಕರಿಸಿ ಉಳಿದ ನೊಂದವರೆಲ್ಲಾ ಬುದ್ಧನ ಅನುಯಾಯಿಯಾಗಲು ದೊಡ್ದ ಪ್ರೇರಣೆಯಾದಂತೆ ಆ ಕೆಲಸವನ್ನು ಕರ್ನಾಟಕದಲ್ಲಿ ಖರ್ಗೆ ಸಾಹೇಬರು ದೊಡ್ಡ ರೀತಿಯಲ್ಲಿ ನಮಗೆಲ್ಲಾ ಆಗುಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಹೇಳಲೇಬೇಕು.

ಇಂತಹದ್ದೊಂದು ಮಹತ್ವದ ಕೆಲಸವನ್ನು ಮೈಸೂರು ಭಾಗದಲ್ಲಿ ನಮ್ಮೆಲ್ಲರ ಪ್ರೀತಿಯ ರಾಜಕಾರಣಿಗಳಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ಮಾಡಿ ಹೋಗಿದ್ದಾರೆ. ಬೌದ್ಧ ದಮ್ಮದ ಕನಸು ಕಂಡು ಬುದ್ಧನ ದಮ್ಮದ ಬೀಜ ಬಿತ್ತುವ ಕೆಲಸವನ್ನು ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ‘ಮರಳಿ ಮನೆಗೆ’ ಎನ್ನುವ ಕಾರ್ಯಕ್ರಮವನ್ನು ರೂಪಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಾಡಿನ ದಲಿತರ ಬಿಡುಗಡೆಗಾಗಿ ಹೋರಾಡಿದ ದಲಿತ ಸಂಘರ್ಷಸಮಿತಿ ಮತ್ತು ಅದರ ಸಂಘಟನೆಯ ನಾಯಕರು, ದಲಿತ ಸಾಹಿತಿಗಳು, ಕವಿಗಳು, ಚಿಂತಕರು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು ಎಲ್ಲರನ್ನೂ ಒಳಗೊಂಡಂತೆ ಒಂದು ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಬೌದ್ಧ ದಮ್ಮದ ವಿಸ್ತರಣೆ ಮತ್ತು ಅದರ ನಡೆ ನುಡಿಗಳನ್ನು ಪಾಲಿಸುವ ಬಗ್ಗೆ ಚರ್ಚೆ ಸಂವಾದಗಳು ನಡೆದಿದ್ದವು. ಆ ಸಭೆಯಲ್ಲಿ ನಾನೂ ಭಾಗಿಯಾಗಿದ್ದೆ ಅದರಲ್ಲಿ ನನ್ನದೂ ಒಂದು ಸಣ್ಣ ಸಲಹೆಯಿತ್ತು. ‘‘ಎಲ್ಲಾ ಹಳ್ಳಿ ಗ್ರಾಮಗಳಲ್ಲಿ ಬೌದ್ಧ ವಿಹಾರಗಳನ್ನು ಕಟ್ಟಿಸಿದರೆ ಅಲ್ಲಿ ಶೋಷಿತರು ನೊಂದವರು ಬುದ್ಧನ ಎದುರು ಕುಳಿತು ತಮ್ಮ ನೋವುಗಳನ್ನು ಹಂಚಿಕೊಳ್ಳಬಹುದು, ಪ್ರಾರ್ಥಿಸಬಹುದು’’ ಎಂಬ ಕನಸನ್ನು ನಾನೂ ಕಂಡಿದ್ದೆ. ಇಂತಹ ನೂರಾರು ವಿಚಾರಗಳು ಅಲ್ಲಿ ಬಂದು ಹೋದವು ಈ ಎಲ್ಲಾ ವಿಚಾರಗಳಿಗೆ ಸಂಬಂಧಪಟ್ಟಂತೆ ಕನ್ನಡದ ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಸಂಪಾದಕತ್ವದಲ್ಲಿ ‘ಮರಳಿ ಮನೆಗೆ’ ಎನ್ನುವ ಪುಸ್ತಕ ರಚಿತವಾಗಿದೆ. ಇದೊಂದು ಬುದ್ಧನ ಕುರಿತು ಮತ್ತು ಎಲ್ಲಾ ಚಿಂತಕರ ಚಿಂತನೆಯನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಈ ನಾಡಿನ ಸಾಕ್ಷಿಪ್ರಜ್ಞೆಯಾದ ದೇವನೂರ ಮಹಾದೇವ ನಮ್ಮ ಮಾರ್ಗದರ್ಶಕರಾಗಿ ಇದ್ದರೆಂಬುದು ನಮ್ಮ ಹೆಮ್ಮೆಯ ವಿಷಯವಾಗಿತ್ತು. ಈ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಬೇಕು ಎನ್ನುವ ಕಾರಣದಿಂದ ನೊಂದವರು ಹಾಗೂ ಶೋಷಿತರೆಲ್ಲಾ ಅಂಬೇಡ್ಕರ್ ಅವರು ಬೌದ್ಧ ದಮ್ಮ ಸ್ವೀಕರಿಸಿದ ಹಾಗೆ ಅವರ ನಡೆಯನ್ನೇ ನಾವು ಪಾಲಿಸಬೇಕು ಎನ್ನುವ ಕನಸು ಮತ್ತು ಹಂಬಲ ಶ್ರೀನಿವಾಸ ಪ್ರಸಾದ್ ಅವರಿಗಿತ್ತು. ಈ ಕಾರ್ಯಕ್ರಮ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ, ಎಲ್ಲಾ ದಿಗ್ಗಜರು ಮತ್ತು ಮಹನೀಯರ ಸಮ್ಮುಖದಲ್ಲಿ ನಡೆಯಿತು. ಸಾವಿರಾರು ಜನ ಕಾರ್ಯಕರ್ತರೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು. ಫಲಿತಾಂಶ ಮೈದಾನದಲ್ಲೇ ಉಳಿದು ಹೋಯಿತು. ಆದರೂ ಅವರು ಬಿತ್ತಿದ ಕನಸಿನ ಬೀಜ ಆ ಭಾಗದಲ್ಲಿ ಈಗಲೂ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಕಾರಣ ಪ್ರಸಾದ್ ಸಾಹೇಬರು ಮತ್ತು ಕಾರ್ಯಕ್ರಮವನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಅವರ ಪ್ರಯತ್ನ ಇದೆ ಎಂಬುದನ್ನು ಮರೆಯುವಂತಿಲ್ಲ.

ಇಷ್ಟೆಲ್ಲದರ ನಡುವೆ ಪ್ರಸಾದ್ ಸಾಹೇಬರ ಬಗ್ಗೆ ದೇವನೂರ ಮಹಾದೇವ ಅವರು ಬರೆದ ‘ಪ್ರಸಾದ್ ಗೆ ನಿದ್ದೆ ಬಾರದಿರಲಿ’ ಘಟನೆಯನ್ನು ಓದಿದ ಮತ್ತು ಅನುಭವಕ್ಕೆ ತಂದುಕೊಂಡ ದ.ಸಂ.ಸ. ಕಾರ್ಯಕರ್ತನಾಗಿ ಮತ್ತು ಪ್ರಜ್ಞಾವಂತನಾಗಿ ನಾನು ಹಾಗೂ ಯಾರೂ ಆ ಘಟನೆಯಲ್ಲಿ ಪ್ರಸಾದ್ ಸಾಹೇಬರ ನಡವಳಿಕೆಯನ್ನು ಕ್ಷಮಿಸುವುದಿಲ್ಲ. ಇದು ಆ ಹೊತ್ತಿಗೂ ಮತ್ತು ಈ ಹೊತ್ತಿಗೂ ಕೂಡಾ. ಇದರ ಹೊರತಾಗಿ ನನ್ನಂತಹ ಸಾಮಾನ್ಯರೊಡನೆ ಕೂಡಾ ಸ್ನೇಹಮಯಿಯಾಗಿದ್ದರು ಎನ್ನುವುದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲೇ ಬೇಕು.

ನಾನು ಅವರನ್ನು ಮೊದಲು ಭೇಟಿಯಾಗಿದ್ದು ಬೆಂಗಳೂರಿನ ಜನರಲ್ ಹಾಸ್ಟೆಲ್‌ನಲ್ಲಿ 90ರ ದಶಕದಲ್ಲಿ. ಆಗ ಗ್ಯಾಸ್ ಕನೆಕ್ಷನ್ ಮತ್ತು ಟೆಲಿಫೋನ್ ಎಂ.ಪಿ. ಕೋಟಾದಲ್ಲಿ ಇರುತಿತ್ತು ಮತ್ತು ತುಂಬಾ ಬೇಡಿಕೆಯಿತ್ತು. ನಾನು ಆಗ ಕೆಲಸಕ್ಕೆ ಸೇರಿ ಮದುವೆಯಾಗಿ ಸೀಮೆ ಎಣ್ಣೆ ಸ್ಟೌನಲ್ಲಿ ಅಡುಗೆ ಮಾಡುವುದು, ಸೀಮೆಣ್ಣೆಗಾಗಿ ಕ್ಯೂ ನಿಲ್ಲುವುದು, ಸಿಗದಿದ್ದಾಗ ಬ್ಲ್ಯಾಕ್‌ನಲ್ಲಿ ತೆಗೆದುಕೊಳ್ಳು ವುದು ತುಂಬಾ ಕಷ್ಟಕರವಾಗಿತ್ತು. ನಾನು ಸಿಕ್ಕವರನ್ನೆಲ್ಲಾ ಗ್ಯಾಸ್‌ಕನೆಕ್ಷನ್ ಕೇಳುತ್ತಿದ್ದೆ. ಆಕಸ್ಮಿಕವಾಗಿ ಭೇಟಿಯಾದ ಹಿರಿಯ ಸಿನೆಮಾ ನಿರ್ದೇಶಕ ಬಸವರಾಜ್ ಕೆಸ್ತೂರ್ ಆಗ ತಾನೆ ಅಂಬೇಡ್ಕರ್ ಚಿತ್ರ ನಿರ್ದೇಶಿಸಿ ದೂರದರ್ಶನಕ್ಕೆ ಕೊಡಲು ಓಡಾಡುತ್ತಿದ್ದರು, ನಾನು ಇಲ್ಲಿ ಕೆಲಸ ಮಾಡುತ್ತಿರುವುದು ಗೊತ್ತಾಗಿ ನನ್ನನ್ನು ಹುಡುಕಿಕೊಂಡು ಬಂದಿದ್ದರು. ಇಬ್ಬರ ಪರಿಚಯ ಮತ್ತು ಮಾತುಕತೆ ಆದ ನಂತರ ನಾವು ಸೀದಾ ಹೋಗಿದ್ದು ಪ್ರಸಾದ್ ಸಾಹೇಬರನ್ನು ಭೇಟಿ ಮಾಡಲು. ಹಿಂದಿನ ದಿನ ರಾತ್ರಿ ಬಂದಿದ್ದ ಸಾಹೇಬರು ರೆಸ್ಟ್‌ನಲ್ಲಿದ್ದರು. ಸ್ವಲ್ಪಹೊತ್ತು ಕಾದು ರೂಮ್ ಬಾಗಿಲು ಬಡೆದೆವು, ಎಚ್ಚರಾದ ಸಾಹೇಬರು ಕೆಸ್ತೂರ್ ಸರ್ ಪರಿಚಯ ಇದ್ದಿದ್ದರಿಂದ. ‘‘ಬನ್ನಿ ಸರ್’’ ಅಂದರು. ಪ್ರಸಾದ್ ಸಾಹೇಬರಿಗೆ ಕೆಸ್ತೂರ್ ಸರ್ ಅವರು ನನ್ನನ್ನು ಪರಿಚಯ ಮಾಡಿಕೊಟ್ಟರು. ಆಗ ಪ್ರಸಾದ್ ಸಾಹೇಬರು ನನ್ನ ಹೆಸರನ್ನು ‘‘ಏನೂ!’’ ಎಂದು ಮತ್ತೆ ಮತ್ತೆ ಕೇಳಿದರು. ನಾನು ಸರಿಯಾಗಿ ಮತ್ತೆ ಉಚ್ಚರಿಸಿದೆ. ‘‘ಏನು ಹಾಗಂದ್ರೆ’’ ಎಂದು ಮತ್ತೆ ಕೇಳಿದರು. ಅದಕ್ಕೆ ನಾನು ‘‘ಆಕಾಶವಾಣಿಯಲ್ಲಿ ಬಸಪ್ಪ ಮಾದರ್ ಅಂತ ಇದ್ರಲ್ಲ ಸರ್ ಹಾಗೆ ನಾನು ಸುಬ್ಬು ಹೊಲೆಯಾರ್’’ ಎಂದೆ. ‘‘ಹೋ ಹೋ ನೀವೆಲ್ಲ 12ನೇ ಶತಮಾನದವರು’’ ಎಂದು ತಮಾಷೆ ಮಾಡಿದರು. ನಂತರ ಕೆಸ್ತೂರ್ ನನ್ನ ಮನೆಗೆ ಗ್ಯಾಸ್ ಕನೆಕ್ಷನ್ ಕೊಡಿಸುವ ವಿಚಾರ ಮಾತನಾಡಿದರು. ‘‘ಅಯ್ಯೋ ಸರ್ ಅದು ನನಗೆ ಗೊತ್ತೇ ಆಗಲ್ಲ. ಅದು ಎಷ್ಟು ಎಂ.ಪಿ. ಕೋಟಾ ಇರುತ್ತೆ ಅಂತ. ಅದೆಲ್ಲಾ ಒಂದು ವಾರದಲ್ಲಿ ಮುಗಿದೇ ಹೋಗಿರುತ್ತೆ’’ ಅಂದರು. ‘‘ಅದರ ಬಗ್ಗೆ ನಾನು ಮೈಸೂರಿಗೆ ಹೋದರೆ ತಿಳಿಯುತ್ತೆ, ಇನ್ನೊಮ್ಮೆ ಭೇಟಿಯಾಗಿ’’ ಅಂತ ಹೇಳಿ ನಾವು ಹೊರಡುವ ಹೊತ್ತಿಗೆ ‘‘ಬನ್ನಿ ಹಾಸ್ಟೆಲ್‌ನಲ್ಲಿ ಊಟ ಮಾಡಿಕೊಂಡು ಹೋಗಿ. ನಾನೂ ಊಟ ಮಾಡಿಲ್ಲ’’ ಅಂದ್ರು. ನಾವು ಊಟ ಮಾಡದಿದ್ದರೂ ‘‘ನಮ್ಮದು ಆಯ್ತು ಸರ್’’ ಅಂದು ಬಿಟ್ಟೆವು. ಈ ಸೌಜನ್ಯದ ಭೇಟಿ ದೂರದಲ್ಲೇ ದೊಡ್ಡವರು ಎನಿಸಿಕೊಂಡವರು ಹತ್ತಿರದಲ್ಲಿ ಸಿಕ್ಕಾಗ ಅವರ ಪ್ರೀತಿ ಎಂತಹದ್ದು ಅಂತ ತಿಳಿಯುತ್ತದೆ. ಅವರಿಗೆ ನಮಸ್ಕಾರ ಹೇಳಿ ಹೊರಟೆವು.

ಪ್ರಸಾದ್ ಸಾಹೇಬರು ಕೇಂದ್ರದಲ್ಲಿ ಮಂತ್ರಿಯಾದವರು. ಬಹುಷಃ ಅವರು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದಾಗ ಇವರೂ ಕೂಡಾ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಡರ್ಬಾನ್‌ನಲ್ಲಿ ವರ್ಣಬೇಧ ನೀತಿ ವಿರುದ್ಧ ಅಂತರ್‌ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿತ್ತು. ಇದರ ಕುರಿತು ಪ್ರಧಾನಿಯಾಗಿದ್ದ ವಾಜಪೇಯಿಯವರು ‘‘ವರ್ಣಭೇದ ಆಚರಣೆ ಕ್ರೂರ ಮತ್ತು ಅಮಾನವೀಯ’’ ಎಂದು ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಸಾಮಾಜಿಕ ಅಸಮಾನತೆ ವಿರುದ್ಧ ಸದಾ ಕಿಡಿಕಾರುತ್ತಿದ್ದ ಜೊತೆಗೆ ರಾಜಕೀಯ ಮುತ್ಸದ್ದಿಯೂ ಆಗಿದ್ದ ಪ್ರಸಾದ್ ಸಾಹೇಬರು ವಾಜಪೇಯಿ ಅವರ ಸಚಿವ ಸಂಪುಟದಲ್ಲೇ ಕೇಂದ್ರ ಸಚಿವರಾಗಿದ್ದರೂ ‘‘ವರ್ಣಭೇದ ಅಮಾನವೀಯ ಹೌದು, ಹಾಗೆಯೇ ಅಸ್ಪಶ್ಯತೆ ಆಚರಣೆ ಕೂಡ ಅಮಾನವೀಯ’’ ಎಂದು ಹೇಳಿರುವುದನ್ನು ಗಮನಿಸಿದರೆ ಪ್ರಸಾದ್ ಸಾಹೇಬರು ಯಾವುದೇ ಪಕ್ಷದಲ್ಲಿ ಇರಲಿ, ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಅವರು ಹೇಳಬೇಕಾದ ಸತ್ಯವನ್ನು ಹೇಳದೆ ಇರುತ್ತಿರಲಿಲ್ಲ. ಅದಕ್ಕೆ ನಮ್ಮ ಸಮುದಾಯ ಮತ್ತು ಸಮಾಜ ಅವರ ಬಗ್ಗೆ ಅಪಾರ ಗೌರವ ಹೊಂದಿತ್ತು.

ಮೈಸೂರಿನಲ್ಲಿರುವ ಅಂಬೇಡ್ಕರ್ ಅಧ್ಯಯನ ಸಂಸ್ಥೆಯನ್ನು ಸುಧಾರಣೆ ಮಾಡುವಲ್ಲಿ ಪ್ರಸಾದ್ ಸಾಹೇಬರ ಪ್ರಯತ್ನವನ್ನು ಮರೆಯುವಂತಿಲ.್ಲ ಹೀಗೆ ಅಧಿಕಾರದಲ್ಲಿದ್ದಾಗ ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಗೌರಿ ಲಂಕೇಶ್ ನಿರ್ಮಾಣ ಮಾಡಿ ಕವಿತಾ ಲಂಕೇಶ್ ನಿರ್ದೇಶಿಸಿದ ನನ್ನ ಪುಟ್ಟ ಕಥೆ ‘ದನ ಕಾಯದವನು’ ಆಧಾರಿತ ‘ಕರಿಯ ಕಣ್ ಬಿಟ್ಟ’ ಸಿನೆಮಾದ ಮೊದಲ ಪ್ರದರ್ಶನ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಪಕ್ಕದಲ್ಲಿ ಇರುವ ರಾವ್ ಬಹದ್ದೂರ್ ಸಭಾಂಗಣದಲ್ಲಿ ನಡೆಯಿತು. ಆ ಚಿತ್ರವನ್ನು ನೋಡಲು ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದ ಡಾ. ನರೇಂದ್ರ ಮತ್ತು ನಮ್ಮ ಮಹಾದೇವ ಭರಣಿಯವರು, ಮೈಸೂರಿನ ರಂಗಾಸಕ್ತರು, ಪ್ರಗತಿಪರ ಸಂಘಟನೆಯ ಗೆಳೆಯರು, ಸಾಹಿತಿಗಳು ವಿಶೇಷವಾಗಿ ದೇವನೂರ ಮಹಾದೇವ ಅವರು, ಮಂಜುಳಾ ಮಾನಸ ಮತ್ತು ಆಗ ಅಧಿಕಾರದಲ್ಲಿದ್ದ ರಾಜು ಐಎಫ್‌ಎಸ್ ಹೀಗೆ ಎಲ್ಲರೂ ಬಂದಿದ್ದರು. ಜೊತೆಗೆ ಪ್ರಸಾದ್ ಸಾಹೇಬರನ್ನು ನಮ್ಮ ಡಾ. ನರೇಂದ್ರ ಅವರು ಆಹ್ವಾನಿಸಿದ್ದರು. ‘‘ನಾನು ಸಿನೆಮಾ ನೋಡಲ್ಲ’’ ಅಂತ ಹೇಳುತ್ತಲೇ ಸಿನೆಮಾ ನೋಡಲು ಬಂದಿದ್ದ ಪ್ರಸಾದ್ ಸಾಹೇಬರು, ‘‘ನಾನು ಕಳೆದ 25 ವರ್ಷಗಳಿಂದ ಯಾವ ಸಿನೆಮಾವನ್ನೂ ನೋಡಿಲ್ಲ, ನನಗೆ ಈ ಸಿನೆಮಾ ನೋಡಿ ತುಂಬಾ ಖುಷಿಯಾಯ್ತು. ಕವಿತಾ ಲಂಕೇಶ್ ಸಿನೆಮಾವನ್ನು ಚೆನ್ನಾಗಿ ನಿರ್ಮಾಣ ಮಾಡಿದ್ದಾರೆ. ನಮ್ಮೆಲ್ಲರ ಬಾಲ್ಯ ಇದಕ್ಕಿಂತ ಭಿನ್ನವಾಗಿರಲಿಲ್ಲ. ನಾವೆಲ್ಲಾ ನಮ್ಮ ನಮ್ಮ ಬಾಲ್ಯಕ್ಕೆ ಹೋಗಿ ಹಿಂದಿರುಗಿ ಬಂದಂತಾಯ್ತು. ಕವಿತಾ ಲಂಕೇಶ್‌ಗೆ ಮತ್ತು ಗೌರಿ ಲಂಕೇಶ್‌ಗೆ ನನ್ನ ಅಭಿನಂದನೆಗಳು. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಯ್ತು’’ ಎಂದು ಹೇಳಿದರು. ಅವರೊಳಗಿದ್ದ ಸಮುದಾಯ ಪ್ರಜ್ಞೆ ಯಾವತ್ತೂ ಹಾಗೇ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಸಮಾಜದ ಬದಲಾವಣೆ ಒಬ್ಬರೇ ಮಾಡಲು ಸಾಧ್ಯವಿಲ್ಲ ಅವರವರಿಗೆ ಸಾಧ್ಯವಾದಷ್ಟು ಮಾಡಿ ಹೋಗುತ್ತಾರೆ. ಇಂತಹ ನಾಯಕರ ಪ್ರೇರಣೆ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಪ್ರೇರಣೆಯಾಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಕೊನೆಯದಾಗಿ ಇತ್ತೀಚೆಗೆ ಅವರಾಡಿದ ಮಾತುಗಳು ಹೀಗಿದೆ: ‘‘ಯಾವ ರಾಜಕೀಯ ಪಕ್ಷಗಳಿಗಿಂತ ನನಗೆ ಮುಖ್ಯವಾಗುವುದು ಡಾ.ಭೀಮಾ ಸಾಹೇಬ್ ಅಂಬೇಡ್ಕರ್ ಅವರು ಮತ್ತು ಅವರ ವಿಚಾರಗಳು. ಹಾಗೆಯೇ ಅವರು ಕೊಟ್ಟ ಶ್ರೇಷ್ಠ ಸಂವಿಧಾನ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ನಾನು ಎಂದಿಗೂ ರಾಜಿಯಾಗುವುದಿಲ್ಲ’’ ಎನ್ನುವ ಮಾತು ತನ್ನ 50 ವರ್ಷದ ರಾಜಕಾರಣದಲ್ಲಿ ತಾನು ನಂಬಿಕೊಂಡು ಬಂದ ವಿಚಾರಗಳಿಗೆ ಬದ್ಧರಾಗಿದ್ದರು ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮರಳಿಮನೆಗೆ-ಬುದ್ಧನೆಡೆಗೆ ಬೀಜ ಬಿತ್ತಿ ಹೋಗಿದ್ದೀರಿ ಅದು ಒಂದಲ್ಲಾ ಒಂದು ದಿನ ಫಲ ಕೊಡುತ್ತದೆ, ನೀವು ಕೂಡ ಮರಳಿ ಮನೆಗೆ ಹೋಗಿದ್ದೀರಿ... ನಿಮ್ಮ ನೆನಪು ನಮಗೆ ಸದಾ ಹಸಿರು.

ಬುದ್ಧನ ಕಾರುಣ್ಯ, ಪ್ರೀತಿ, ಮೈತ್ರಿ, ಭ್ರಾತೃತ್ವ ಎಲ್ಲರ ಹೃದಯದಲ್ಲಿ ನೆಲೆಸಲಿ ಎಂದು ಆಶಿಸುತ್ತಾ ಎಲ್ಲರಿಗೂ ಬುದ್ಧ ಪೂರ್ಣಿಮೆ ಶುಭಾಶಯಗಳು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುಬ್ಬು ಹೊಲೆಯಾರ್

contributor

Similar News