ಪಾದಗಳಿಂದಲೇ ಎಲ್ಲಾ ಆರಂಭ

Update: 2024-03-11 05:17 GMT

ಹಾಸನ ನನ್ನಜಿಲ್ಲೆ ಎನ್ನುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ಕಾರಣ ಮಹಾಕವಿ ಕುವೆಂಪುರವರು ಹಾಸನದ ಶಿಲ್ಪ ಕಲೆಗಳ ಕುರಿತು ‘‘ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’’ ಎನ್ನುವ ಸಾಲುಗಳನ್ನು ಹೇಳಿರುವುದಕ್ಕೆ. ಇಂತಹ ಮಾತುಗಳನ್ನು ಹೇಳಿದ ಕವಿ ಭಾವಕ್ಕೆ ಆ ವಿಶಾಲ ಹೃದಯಕ್ಕೆ ಶರಣು ಶರಣಾರ್ಥಿ ಎಂದು ಜಲಗಾರನಾಗಿ ಹೇಳುವ ಆಸೆ ನನಗೆ. ನೀವು ನಮ್ಮ ಶ್ರವಣಬೆಳಗೊಳದಲ್ಲಿರುವ ಎತ್ತರದ ಬಾಹುಬಲಿ ನೋಡಬೇಕು, ನನಗೆ ಮಾತ್ರವಲ್ಲ ಕಣ್ಣು ಮನಸ್ಸಿರುವವರಿಗೆಲ್ಲರಿಗೂ ಸಂತೋಷ, ಆನಂದ ಉಕ್ಕುತ್ತದೆ. ಎಷ್ಟೋ ಸಲ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಜಗತ್ತಿನ ಸಕಲ ಜೀವರಾಶಿಗಳನ್ನು ರಕ್ಷಿಸಲು, ಕಾಯುತ್ತಾ ನಿಂತಿರುವ ಮಹಾ ದೇವರು ಅನಿಸುತ್ತದೆ. ಬಾಹುಬಲಿಯನ್ನು ಎತ್ತರದಲ್ಲಿ ಎಲ್ಲಿ ನಿಂತು ನೋಡಿದರೂ ಕಾಣಿಸುತ್ತಾನೆ. ನಿರ್ವಾಣ ಭಂಗಿಯ ಈತನ ಪಾದಗಳ ಅಡಿಯಿಂದ ತಲೆಯೆತ್ತಿ ನೋಡಿದರೆ ಎಂತಹ ಅತ್ಯುನ್ನತ ಹುದ್ದೆಯಲ್ಲಿರುವವರು ಕೂಡ ಸಾಸಿವೆ ಕಾಳಿನಂತೆ ಆಗಿಬಿಡುತ್ತಾರೆ.

ಈ ಕ್ಷಣ ನನಗೆ ನಮ್ಮ ನಾಡಿನ ಹೆಸರಾಂತ ಕವಿ ಎಚ್.ಎಸ್ ವೆಂಕಟೇಶ್ ಮೂರ್ತಿ ಅವರ ಒಂದು ಸಾಲು ನೆನಪಾಗುತ್ತದೆ. ಅವರ ‘ಪಾದಗಳಿಂದಲೇ ಎಲ್ಲಾ ಆರಂಭ’ ಎನ್ನುವ ಕವಿತೆಯನ್ನು ಕೇಳುತ್ತಿದ್ದರೆ ನಮ್ಮ ಕಣ್ಣು ಮನಸ್ಸಿನ ಮುಂದೆ ಬಾಹುಬಲಿ ಅನಾವರಣಗೊಳ್ಳುತ್ತಾನೆ. ಇಂತಹ ಏಕಶಿಲಾ ತ್ಯಾಗ ಮೂರ್ತಿಯೇ ಒಂದು ಮಹಾಕಾವ್ಯ. ಇದಕ್ಕಿಂತಲೂ ಇನ್ನೊಂದು ಮಹಾಕಾವ್ಯ ಇರಲಾರದು ಅನಿಸುತ್ತದೆ. ಸರ್ವ ಋತುಗಳಲ್ಲೂ ಹಗಲು, ಇರುಳು, ಬಿಸಿಲು, ಮಳೆ-ಚಳಿ, ಗಾಳಿಗೆ ಜಗ್ಗದೆ ತಲೆಯೆತ್ತಿ ನಿಂತಿರುವ ಪ್ರಕೃತಿಯ ಈ ಮಗುವಿಗೆ ಎಷ್ಟು ಕೈ ಮುಗಿದರೂ ಸಾಲದು. ಆದರೆ ಮನುಷ್ಯ ಮಾತ್ರ ಇವನನ್ನು ನೋಡಿ ಕಲಿತದ್ದು ಕಡಿಮೆಯೇ ಎಂದು ಒಮ್ಮೊಮ್ಮೆ ಅನಿಸುತ್ತದೆ.

ಬೇಲೂರು ಹಳೇಬೀಡಿನಂತಹ ಜಗದ್ವಿಖ್ಯಾತಿ ಪಡೆದ ಶಿಲ್ಪಕಲೆಗಳ ತವರೂರು ಹಾಸನ ಜಿಲ್ಲೆ. ಇನ್ನುಳಿದಂತೆ ಕೃಷಿ, ರಾಜಕಾರಣ, ಶಿಕ್ಷಣ, ಜನಪದ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಕನ್ನಡದ ಪ್ರಾಚೀನತೆಯನ್ನು ಸಾರುವ ಶಾಸನ ‘‘ಹಲ್ಮಿಡಿ ಶಾಸನ’’ ದೊರೆತಿರುವುದು ಹಾಸನ ಜಿಲ್ಲೆಯಲ್ಲಿ. ಈ ಶಾಸನವು ಡಾ.ಎಂ.ಎಚ್. ಕೃಷ್ಣ ಎಂಬವರಿಂದ ಸಂಶೋಧಿಸಲ್ಪಟ್ಟಿದೆ. ಹಾಸನದ ರಾಜರಾವ್ ಅವರಿಂದ ಹಿಡಿದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಂತಹ ಸಾಹಿತ್ಯ ದಿಗ್ಗಜರೊಂದಿಗೆ ಕವಿ ಡಿ. ಗೋವಿಂದ ದಾಸ್ ರಂತಹ ಮೊದಲ ದಲಿತ ತಲೆಮಾರಿನ ಸಾಹಿತಿಗಳು ನೆನಪಾಗುತ್ತಾರೆ.

ರಾಜ್ಯಕ್ಕೆ ಮುಖ್ಯಮಂತ್ರಿಯನ್ನೂ ದೇಶಕ್ಕೆ ಪ್ರಧಾನಿಯನ್ನೂ ಕೊಟ್ಟ ಜಿಲ್ಲೆ ಎನ್ನುವ ‘ಕೋಡು’ ನಮ್ಮದು. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ನೂರು ವರ್ಷ ಸಮೀಪದಲ್ಲಿದ್ದಾಗ ನಾಲ್ವಡಿ ಕೃಷ್ಣ್ಣರಾಜ ಒಡೆಯರ್ ಅವರ ಸಾಮಾಜಿಕ ಸಮಾನತೆಯ ಕನಸು ನನಸಾಗಿದ್ದು ಶ್ರವಣಬೆಳಗೊಳದಲ್ಲಿ. ಕವಿ ಸಿದ್ದಲಿಂಗಯ್ಯ ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಮತ್ತು ನನ್ನಂತಹ ಸಾಮಾನ್ಯರು ಆ ಸಮ್ಮೇಳನದ ಒಂದು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದು ನೆನಪಾಗುತ್ತದೆ.

ಸಕಲೇಶಪುರ ತಾಲೂಕು ಬಾಳ್ಳುಪೇಟೆಯಿಂದ ಹಾಸನಕ್ಕೆ ದಲಿತ ಸಂಘರ್ಷ ಸಮಿತಿ ಕಾಲ್ನಡಿಗೆ ಜಾಥಾ ಹೊರಟಾಗ ದಲಿತರ ದೊಡ್ಡ ಸಾಲನ್ನು ನೋಡಿ ಕವಿ ಸಿದ್ದಲಿಂಗಯ್ಯನವರು ಬರೆದ ಸಾಲುಗಳು ‘‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’’ ಮೊಳಗಿದ್ದು ಇದೇ ಜಿಲ್ಲೆಯಲ್ಲಿ. ಹೀಗೆ ಈ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಘಟನೆಗಳನ್ನು ನೆನೆಯುತ್ತ ಹೋದರೆ ಮಹಾ ಸಂಪುಟಗಳಾಗುತ್ತವೆ. ಇರಲಿ, ಇದನ್ನೆಲ್ಲ ಹೇಳುವುದಕ್ಕೆ ಮುಖ್ಯ ಕಾರಣಗಳಿವೆ.

ದಲಿತರು ಅಕ್ಷರಗಳನ್ನೇ ಕಾಣದ ಹೊತ್ತಿನಲ್ಲಿ ಒಂದು ಶತಮಾನಕ್ಕೂ ಹಿಂದೆ ರಾಜರ್ಷಿ ನಾಲ್ವಡಿ ಕೃಷ್ಣ್ಣರಾಜ ಒಡೆಯರ್ ಮಹಾರಾಜರು ಸಮಾನತೆಯ ಉಜ್ವಲ ಕನಸು ಕಂಡವರು. ತನ್ನ ಖಾಸಗಿ ದರ್ಬಾರ್ ನಡೆಯುವ ಹೊತ್ತಿನಲ್ಲಿ ತಮ್ಮ ಎದುರಿಗೆ ಅಸ್ಪಶ್ಯ ಸಮುದಾಯದವರು ಒಬ್ಬರು ಕುಳಿತಿರಬೇಕು ಎಂದು ಹಂಬಲಿಸಿದವರು, ಅದನ್ನು ಕಾರ್ಯಗತಗೊಳಿಸಿದವರು ಕೂಡ. ಈ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ದಲಿತ ಸಮುದಾಯದ ಬನವಾಸಿ ಹುಚ್ಚಣ್ಣ ಮತ್ತು ಕವಿ ಡಿ. ಗೋವಿಂದ ದಾಸ್. ಎಂ.ಆರ್.ಎ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಏಳು ಜನಪ್ರತಿನಿಧಿಗಳನ್ನು ನೇಮಿಸಿದ್ದರು. ಇದು ನಮ್ಮ ಸಮುದಾಯಕ್ಕೆ ಮಹಾರಾಜರು ದೊರಕಿಸಿಕೊಟ್ಟ ಮಹಾ ಕಾಣಿಕೆಯಾಗಿತ್ತು ಹಾಗೂ ಪಂಚಮರಿಗಾಗಿ ವಸತಿಶಾಲೆಗಳನ್ನು ಪ್ರಾರಂಭಿಸಿದ್ದು ಅಕ್ಷರಗಳ ಅರಿವು ಶೋಷಣೆಯಿಂದ ಬಿಡುಗಡೆಗೆ ಸಮುದಾಯಕ್ಕೆ ಸಿಕ್ಕ ಮಹಾಅಸ್ತ್ರವಾಗಿತ್ತು. ಇದನ್ನು ದೊರಕಿಸಿಕೊಟ್ಟ ಮಹಾರಾಜರನ್ನು ನೆನೆಯದೆ ಇರಲಾದೀತೇ. ಇಂತಹ ಮಹತ್ಕಾರ್ಯಕ್ಕೆ ಈ ಸಮುದಾಯ ಚಿರಋಣಿಯಾಗಿರಬೇಕು. ಹಾಸನದಲ್ಲಿ ಪಂಚಮರಿಗಾಗಿ ವಸತಿ ಶಾಲೆಯನ್ನು ಪ್ರಾರಂಭಿಸಿದ ಆನಂತರ ಅನೇಕರು ಇದರ ಸದುಪಯೋಗವನ್ನು ಮಾಡಿಕೊಂಡಿದ್ದಾರೆ. ಅಂತಹ ಮಹಾ ಗಣ್ಯರಲ್ಲಿ. ಹಾಸನದ ಗಟ್ರಿ ಸಿದ್ದಯ್ಯ, ಪುಟ್ಟರಂಗನಾಥಯ್ಯ, ಲಕ್ಷ್ಮಣಯ್ಯ, ಆರ್. ಭರಣಯ್ಯ ವಿಶೇಷವಾಗಿ ಬಿ.ರಾಚಯ್ಯನವರಂತಹ ಸಜ್ಜನ ರಾಜಕಾರಣಿಗಳು ಕೂಡ ಹಾಸನದ ಎ.ಕೆ.(ಆದಿ ಕರ್ನಾಟಕ) ಬೋರ್ಡಿಂಗ್ ಸ್ಕೂಲಿನಲ್ಲಿ ಕಲಿತವರೇ ಆಗಿದ್ದಾರೆ. ಈ ಎಲ್ಲಾ ಮಹನೀಯರು ಸಮುದಾಯಕ್ಕಾಗಿ ಮಾತ್ರವಲ್ಲ, ಉನ್ನತ ಅಧಿಕಾರಿಗಳಾಗಿ ನಾಡಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹನೀಯರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದರಿಂದ ಅವರ ಸೇವೆಯನ್ನು ಮತ್ತು ಅವರ ಅನುಭವದ ಜ್ಞಾನವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವಾಗುತ್ತದೆ. ಇಷ್ಟೆಲ್ಲಾ ಹೇಳುವಾಗ ಒಂದು ಮುಖ್ಯವಾದ ವಿಷಯವನ್ನು ಹೇಳಲೇಬೇಕು.

1954ರಲ್ಲಿ ಬೆಂಗಳೂರಿಗೆ ಬಂದಿದ್ದ ನಮ್ಮ ವಿಶ್ವ ಜ್ಞಾನಿ ಡಾ. ಭೀಮಾ ಸಾಹೇಬ ಅಂಬೇಡ್ಕರ್ ಅವರು ಹಾಸನಕ್ಕೆ ಬಂದು ಎ.ಕೆ.(ಆದಿಕರ್ನಾಟಕ) ಬೋರ್ಡಿಂಗ್ ಸ್ಕೂಲಿಗೆ ಭೇಟಿ ನೀಡಿ ಅಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿರುತ್ತಾರೆ. ‘‘ನೀವೆಲ್ಲ ಚೆನ್ನಾಗಿ ಓದಿ, ಸಮಾಜಕ್ಕೆ, ಸಮುದಾಯಕ್ಕೆ ಒಳ್ಳೆಯದನ್ನು ಮಾಡಿರಿ’’ ಎನ್ನುವ ವಿಶ್ವಾಸದ ಮಾತುಗಳನ್ನು ಹೇಳಿರುತ್ತಾರೆ. ಸ್ವಾಭಿಮಾನದಿಂದ ಬದುಕಬೇಕಾದರೆ ಶಿಕ್ಷಣ ಪಡೆಯಲೇಬೇಕು ಎಂದು ಕರೆ ನೀಡುತ್ತಾರೆ. ಈ ಭಾಷಣಕ್ಕೆ ಸಾಕ್ಷಿಯಾಗಿದ್ದವರು ಬೇಲೂರಿನ ಶಾಸಕರಾಗಿದ್ದ ಈ ಹೊತ್ತಿಗೂ ನಮ್ಮೊಟ್ಟಿಗೆ ಇರುವ 90 ವರ್ಷದ ಪುಟ್ಟರಂಗನಾಥಯ್ಯನವರು. ಆ ಕ್ಷಣವನ್ನು ನೆನಪು ಮಾಡಿಕೊಳ್ಳುತ್ತಾ, ಭೀಮಾ ಸಾಹೇಬರು ನನ್ನ ಬೆನ್ನು ತಟ್ಟಿದ್ದಕ್ಕೆ ನಾನು ಎಂಎಲ್‌ಎ ಆದೆ. ನನ್ನ ತಲೆ ಮುಟ್ಟಿ ಆಶೀರ್ವಾದ ಮಾಡಿದ್ದರೆ ಮಂತ್ರಿಯೇ ಆಗಿ ಬಿಡುತ್ತಿದ್ದೆನೇನೋ ಎನ್ನುವ ನುಡಿಗಳು ಭೀಮಾ ಸಾಹೇಬರನ್ನು ಕಣ್ಣ ಮುಂದೆ ತಂದಂತಾಗುತ್ತದೆ. ಇಂತಹ ಮಹನೀಯರು ಓದಿದ, ಭೀಮಾ ಸಾಹೇಬರು ನಡೆದಾಡಿದ ಜಾಗ ಇದು ಎಂದು ನಮ್ಮಂತಹವರಿಗೆಲ್ಲ ರೋಮಾಂಚನವಾಗುತ್ತದೆ. ಈ ಸ್ಥಳ ಕೆಲವು ವರ್ಷಗಳು ಬಾಲ ಮಂದಿರವಾಗಿ ನಡೆಯಿತು. ನಂತರದ ದಿನಗಳಲ್ಲಿ ಇದನ್ನೆಲ್ಲ ತಿಳಿದಿದ್ದ ನಮ್ಮ ನಾಡಿನ ಹಿರಿಯ ಹೋರಾಟಗಾರರು ಚಿಂತನಶೀಲರೂ ಆಗಿದ್ದ ಚಂದ್ರಪ್ರಸಾದ್ ತ್ಯಾಗಿ, ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಮತ್ತು ಅವರ ಸಮಕಾಲೀನರು ಅಂಬೇಡ್ಕರ್ ಅವರನ್ನು ಓದಿ ತಿಳಿದುಕೊಂಡವರು ಹಾಗೂ ಮೇಲ್ಕಂಡ ವಿಷಯಗಳನ್ನು ಹೇಳಿದವರು ನಮ್ಮ ಶ್ರೀಧರ್ ಕಲಿವೀರಣ್ಣನವರು. ಇದು ರಾಜ್ಯದ ಮತ್ತು ದೇಶದ ಜನ ಬಂದು ಹೋಗುವ ಅರಿವಿನ ಸ್ಥಳವಾಗಬೇಕು ಎಂದು ಚಿಂತಿಸಿ ‘ಡಾ.ಅಂಬೇಡ್ಕರ್ ನಾಲ್ವಡಿ ಕೃಷ್ಣರಾಜ ಒಡೆಯರ ಸ್ಮಾರಕ ಮತ್ತು ಸಂಶೋಧನಾ ಕೇಂದ’್ರ ಆಗಬೇಕೆಂದು ನಿಶ್ಚಯಿಸಿ ಅದಕ್ಕಾಗಿ ನಿರಂತರವಾಗಿ ಹೋರಾಡುತ್ತಾ ಬಂದರು. ಈಗ ಇದಕ್ಕಾಗಿ ಸರಕಾರದಿಂದ 3 ಕೋಟಿ ರೂ. ಮಂಜೂರಾಗಿದ್ದು ಈ ಕೇಂದ್ರದ ಕಟ್ಟಡಕ್ಕೆ ಅಡಿಗಲ್ಲು ಕಾರ್ಯಕ್ರಮ ಮೊನ್ನೆ ಅಂದರೆ ದಿನಾಂಕ 1.3. 2024 ರಂದು ನೆರವೇರಿತು. ಹಾಸನದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಿದರು. ಅವರು ನಾಲ್ವಡಿ ಮತ್ತು ಭೀಮಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಒಂದು ಚಿಟಿಕೆ ಮರಳನ್ನು ಹಾಕುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಶುಭ ಹಾರೈಸಿದ್ದರು. ನಮಗೆಲ್ಲ ಇದೊಂದು ಅವಿಸ್ಮರಣೆ ಘಳಿಗೆಯಾಗಿತ್ತು. ನಮ್ಮೆಲ್ಲರ ಪರವಾಗಿ ಶ್ರೀಧರ್ ಕಲಿವೀರವರು ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಗೌರವಿಸಿದರು.

ಈ ಎಲ್ಲಾ ಆಗುಹೋಗುಗಳ ನಡುವೆ ನನ್ನನ್ನು ಸದಾ ಬಾಧಿಸುವ ವಿಷಯ ನಮ್ಮ ಜಿಲ್ಲೆಯ ಅಮಾನವೀಯ ಸಾಮಾಜಿಕ ಸ್ಥಿತಿ. ‘‘ಅಕ್ಷರಸ್ಥರಾಗುವುದು ಎಂದರೆ ಅದೊಂದು ರೌರವ ನರಕ’’ ಎಂದು ಹೇಳುವ ಮಹಾದೇವರ ಮಾತು ಮತ್ತೆ ಮತ್ತೆ ನೆನಪಾಗುತ್ತದೆ. ಎಲ್ಲದಕ್ಕೂ ಸ್ಪಂದಿಸುವ ಎಲ್ಲರನ್ನೂ ಸಹಿಸಿಕೊಳ್ಳುವ ನಮ್ಮ ಸಮುದಾಯ ಒಂದು ದೌರ್ಜನ್ಯದ ಘಟನೆಯಿಂದ ತತ್ತರಿಸಿ ಸುಧಾರಿಸಿಕೊಳ್ಳುವ ಹೊತ್ತಿಗೆ ಇನ್ನೊಂದು ದೌರ್ಜನ್ಯ ಘಟನೆ ನಡೆದಿರುತ್ತದೆ. ಇದಕ್ಕೆ ಕೊನೆ ಯಾವಾಗ? ಸರಕಾರ, ಕಾನೂನು ಎಲ್ಲಾ ಇದ್ದಾಗಲೂ ಇಂತಹ ಘಟನೆಗಳು ನಮ್ಮ ಕಣ್ಣುಮುಂದೆಯೇ ನಡೆದರು ಕಾನೂನುಗಳು, ಸರಕಾರಗಳು ಕಣ್ಣುಮುಚ್ಚಿ ಕೂತಿದೆ ಎಂದಾದರೆ, ಈ ಸಮುದಾಯಗಳ ಮನಸ್ಥಿತಿ ಹೇಗಿರಬೇಡ? ಸರಕಾರಕ್ಕೆ ಎಲ್ಲರನ್ನೂ ಪೊರೆಯುವ ಜವಾಬ್ಧಾರಿ ಬೇಡವೇ? ಜಗತ್ತಿನ ಮಹಾಮಾರಿ ಕೋವಿಡ್ ಸಮಯದಲ್ಲೂ ರಾಜ್ಯದಲ್ಲಿ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ನಡೆದದ್ದು ಹಾಸನದಲ್ಲೇ. ಇದನ್ನು ಹೇಳುವುದಕ್ಕೆ ಕಾರಣವಿದೆ. ನಾನು ಹಾಸನಕ್ಕೆ ಹೋದಾಗಲೆಲ್ಲಾ ಅದರ ಹಿಂದಿನ ದಿನ ಅಥವಾ ನಾವು ಹಾಸನಕ್ಕೆ ಹೋದ ದಿನ ದಲಿತರ ಮೇಲೆ ದೌರ್ಜನ್ಯ ನಡೆದೇ ಇರುತ್ತದೆ. ಇದೇನು! ನಾನು ಹಾಸನಕ್ಕೆ ಬಂದಾಗಲೆಲ್ಲಾ ಒಂದಿಲ್ಲ ಒಂದು ಘಟನೆಗಳು ನಡೆದಿರುತ್ತವಲ್ಲಾ ಎಂದು ಹಾಸನದ ಭೀಮ ವಿಜಯ ಪತ್ರಿಕೆ ಸಂಪಾದಕರಾದ ಹೆತ್ತೂರು ನಾಗರಾಜ ಅವರನ್ನು ಕೇಳಿದೆ. ಅದಕ್ಕೆ ನಾಗರಾಜ್ ‘‘ ಅಯ್ಯೋ ಮಾವಣ್ಣ, ಇದು ಇಲ್ಲಿ ಮಾಮೂಲಿ. ಇಲ್ಲಿರುವ ಎಂಟು ತಾಲೂಕುಗಳಲ್ಲಿ ಒಮ್ಮೊಮ್ಮೆ ದಿನಕ್ಕೆ ಎರಡು ಮೂರು ಘಟನೆಗಳು ನಡೆದೇ ಇರುತ್ತವೆ’’ ಎಂದರು. ನಮ್ಮ ಶಿಲ್ಪಿಗಳು ಕಲ್ಲಿನ ಮೇಲೆ ತಮ್ಮ ಕಲಾ ನೈಪುಣ್ಯತೆಯಿಂದ ಅದ್ಭುತವಾದ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಆದರೆ ಈಗಿನ ಕಾಲದ ಜಾತಿಯ ವಿಕಾರ ಮನಸ್ಸಿನ ಸಮಾಜ ಘಾತುಕರು ದಲಿತರ ದೇಹದ ಮೇಲೆ ಗಾಯಗಳ ಗುರುತು ಮಾಡುವುದು ಅವರಿಗೆ ಎಲ್ಲಿಲ್ಲದ ಸಂತೋಷವನ್ನುಂಟು ಮಾಡುವುದಾದರೆ ಇದೊಂದು ಹೀನ ಮನಸ್ಥಿತಿಯಲ್ಲವೇ? ಕಳೆದ 75 ವರ್ಷಗಳಲ್ಲಿ ದಲಿತರ ಮೇಲೆ ಆದ ದಾಳಿಗಳನ್ನು ನೆನಪಿಸಿಕೊಳ್ಳುವುದಕ್ಕೆ ನೋವಾಗುತದೆ, ದುಃಖವಾಗುತ್ತದೆ. ಕಳೆದ ಹದಿನೈದು ದಿನಗಳಲ್ಲಿ ಮೂರು-ನಾಲ್ಕು ಘಟನೆಗಳನ್ನು ಓದಿ, ಕೇಳಿ ಮೈ ಮರಗಟ್ಟುತ್ತದೆ. ದೇವನೂರ ಮಹಾದೇವ ಅವರ ಭಾಷೆಯಲ್ಲಿ ಹೇಳುವುದಾದರೆ ‘ನಮ್ಮ ಮೈ ಚರ್ಮವನ್ನು ಸುಲಿದು ತಮಟೆಯನ್ನು ಮಾಡಿ ಬಾರಿಸುತ್ತಿದ್ದಾರೆ’’ ಈ ಸಾಲನ್ನು ಬರೆದದ್ದೂ ಕೂಡ ನಾಲ್ಕು ದಶಕಗಳ ಹಿಂದೆ ಹೊಳೇ ನರಸೀಪುರ ತಾಲೂಕಿನ ದಲಿತರ ಮೇಲೆ ನಡೆದ ದೌರ್ಜನ್ಯಗಳು ನಡೆದಾಗ. ಈಗಲೂ ಆಗ ನಡೆದ್ದಕ್ಕಿಂತ ಮತ್ತಷ್ಟೂ ಹೆಚ್ಚಾಗಿವೆಯೇ ಹೊರತೂ ಸಾಸಿವೆಕಾಳಿನಷ್ಟೂ ಕಡಿಮೆಯಾಗಿಲ್ಲ ಎನ್ನುವುದು ಅತ್ಯಂತ ವಿಷಾದನೀಯ. ಇಷ್ಟಾದಮೇಲೆಯೂ ಕೂಡಾ ಬಸವಣ್ಣನವರ ವಚನದ ಸಾಲುಗಳು ನೆನಪಾಗುತ್ತದೆ.

ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ

ಜಲವೊಂದೇ ಶೌಚ ಆಚಮನಕ್ಕೆ

ಕುಲವೊಂದೇ ತನ್ನ ತಾನರಿತವಂಗೆ

ಫಲವೊಂದೇ ಷಡುದರುಶನ ಮುಕ್ತಿಗೆ

ನಿಲವೊಂದೇ ಕೂಡಲಸಂಗಮದೇವಾ ನಿಮ್ಮನರಿದವಂಗೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುಬ್ಬು ಹೊಲೆಯಾರ್

contributor

Similar News