ಹೆಣ್ಣಿನ ಘನತೆ ದೊಡ್ಡದು

ಕಳೆದ ಕೆಲವು ತಿಂಗಳುಗಳಿಂದ ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಹೆಣ್ಣುಮಕ್ಕಳ ದಾರುಣ ಹತ್ಯೆಯನ್ನು ಗಮನಿಸಿ. ಹತ್ಯೆಯಾದ ಹೆಣ್ಣುಮಕ್ಕಳ ಕುಟುಂಬಗಳು ದುಃಖದ ಮಡುವಿನಲ್ಲಿ ಬಿದ್ದಿವೆ. ನಮ್ಮ ಯಾವುದೇ ಸಾಂತ್ವನದ ಮಾತುಗಳು ಅವರ ಖಾಲಿ ಮನಸ್ಸನ್ನು ತುಂಬಲಾರವು.

Update: 2024-06-03 06:43 GMT

ಈಸಮಾಜದಲ್ಲಿ ಹೆಣ್ಣಿನ ಘನತೆ ದೊಡ್ಡದು.ಈ ಘನತೆಯನ್ನು ಪುರುಷನೆನ್ನಿಸಿಕೊಂಡವನು ತುಳಿಯಲು ಪ್ರಯತ್ನಿಸಿದಷ್ಟೂ ಸಮಾಜ ತನ್ನ ನೈತಿಕತೆಯನ್ನು ನಿರಂತರವಾಗಿ ಕಳೆದುಕೊಳ್ಳುತ್ತಲೇ ಹೋಗುತ್ತದೆ. ಹಾಗೆ ಆಗದೆ ಪ್ರತೀ ಪುರುಷನೂ ಹೆಣ್ಣಿನ ಘನತೆಯನ್ನು ಕಾಪಾಡಿಕೊಳ್ಳುತ್ತಾ ಸಾಗಬೇಕು : ಡಾ. ಬಿ. ಆರ್. ಅಂಬೇಡ್ಕರ್

ಭೀಮಾ ಸಾಹೇಬರು ಹೇಳಿದ ಈ ಮಾತು ಎಷ್ಟು ಜನರ ಕಿವಿಗೆ ಬಿದ್ದಿದೆ, ಯಾರು ಇದನ್ನ್ನು ಎದೆಗೆ ಇಳಿಸಿಕೊಂಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಪುರುಷನೆನ್ನಿಸಿಕೊಂಡವನು ಕನಿಷ್ಠಪಕ್ಷ ಹೆಣ್ಣನ್ನು ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮಗಳಾಗಿ, ಹೆಣ್ಣಿನ ಘನತೆಯನ್ನು ಕಾಪಾಡಿಕೊಂಡಿದ್ದಾರೋ ಅವರು ನಿಜವಾಗಿ ಸಂತೋಷವಾಗಿದ್ದಾರೆ ಎನ್ನುವುದು ಅವರವರಿಗೆ ಅರ್ಥವಾಗುತ್ತದೆ. ನಾವುಗಳೆಲ್ಲಾ ಹೀಗೆ ಬರೆಯುತ್ತಲೇ ಇರುತ್ತೇವೆ, ಹೇಳುತ್ತಲೇ ಇರುತ್ತೇವೆ. ಇಂತಹವರೆಲ್ಲಾ ಹೀಗೆ ಹೇಳಿದ್ದಾರೆ ಹಾಗೆ ಹೇಳಿದ್ದಾರೆ ಎಂದು ಅಣಿಮುತ್ತುಗಳನ್ನು ಉದುರಿಸುತ್ತಲೇ ಇರುತ್ತೇವೆ. ಇದೆಲ್ಲಾ ದೀಪದ ಬುಡ ಕತ್ತಲೆ ಅನುತ್ತ್ತೆೀವಲ್ಲಾ ಹಾಗಾಗುತ್ತದೆ. ಇರಲಿ, ಆದರೆ ಈಗ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದುದಕ್ಕಿಂತ ಸ್ವಾತಂತ್ರ್ಯಾ ನಂತರ ಸಾಕಷ್ಟು ಸುಧಾರಣೆಯಾಗಿದೆ. ಹೆಣ್ಣುಮಕ್ಕಳು ಕೂಡಾ ಎಚ್ಚರವಾಗಿದ್ದಾರೆ. ಪೋಷಕರು ಕೂಡಾ ಪ್ರಜ್ಞಾಪೂರ್ವಕವಾಗಿ ಎಚ್ಚೆತ್ತುಕೊಂಡಿದ್ದಾರೆ ಎನ್ನೋಣ. ಹಾಸನದಲ್ಲಿ ನಡೆದ ಅನ್ಯಾಯದ ಪರಮಾವಧಿಯ ಕೃತ್ಯವನ್ನು ಖಂಡಿಸುತ್ತಲೇ, ಅನ್ಯಾಯಕ್ಕೆ ಒಳಗಾದ ಹೆಣ್ಣುಮಕ್ಕಳ ಘನತೆಯನ್ನು ಇನ್ನೊಂದು ರೀತಿಯಲ್ಲಿ ಕುಂದಿಸಿಬಿಟ್ಟಿದ್ದೇವೆ. ಅರ್ಥಾತ್ ಗಾಯದ ಮೇಲೆ ಬರೆ ಅಂತಾರಲ್ಲ ಹಾಗೆ. ಹೆಣ್ಣುಮಕ್ಕಳಿಗಾದ ದೌರ್ಜನ್ಯವನ್ನು, ನೋವು ಅವಮಾನಗಳನ್ನು ಅಕ್ಷರಗಳಲ್ಲಿ ಹಿಡಿದಿಡಲಾಗುವುದಿಲ್ಲ . ಇದನ್ನೆಲ್ಲಾ ಹೇಳುವಾಗ ಪುರುಷರೆನ್ನಿಸಿಕೊಂಡವರು ಹೆಣ್ಣುಮಕ್ಕಳನ್ನು ನೋಡುವ ರೀತಿ ಬದಲಾಗಬೇಕು. ಎಲ್ಲದಕ್ಕೂ ಮನಸ್ಸೇ ಕಾರಣ: ಎನ್ನುವ ಬುದ್ಧನ ಮಾತಿದೆ. ಆ ಮನಸ್ಸನ್ನು ನಿಗ್ರಹಿಸಿಕೊಳ್ಳುವುದು ಅರ್ಥಾತ್ ಹಿಡಿತದಲ್ಲಿಟ್ಟುಕೊಳ್ಳುವುದು ಪುರುಷರೆನ್ನಿಸಿಕೊಂಡವರಿಗೆ ಅರ್ಥವಾಗಬೇಕು, ಇಲ್ಲದಿದ್ದರೆ ಈ ಮಾತುಗಳು ಅರಣ್ಯರೋದನವೇ ಸರಿ. ಕೊನೆಗೆ ಅಕ್ಕ ಹೇಳಿದ ನೊಂದವರ ನೋವ ನೋಯದವರೆತ್ತ ಬಲ್ಲರೋ ಎಂಬ ಮಾತು ಅಕ್ಷರಶಃ ನಿಜ. ನಮ್ಮಲ್ಲಿ ಎಲ್ಲಕ್ಕೂ ಪರಿಹಾರವಿರುವ ಸಂವಿಧಾನವಿದೆ, ಕಾನೂನಿದೆ, ರಕ್ಷಣೆಗೆ ಪೊಲೀಸರಿದ್ದಾರೆ, ಪೋಷಕರಿದ್ದಾರೆ ಎಲ್ಲವೂ ಇದ್ದ್ದೂ ಹೆಣ್ಣುಮಕ್ಕಳು ಆತಂಕದಲ್ಲಿದ್ದಾರೆ, ಇದಕ್ಕೆಲ್ಲಾ ಯಾರು ಹೊಣೆ.ಸಮಾಜದ ದೊಡ್ದ ಹೊಣೆಗಾರಿಕೆಯಿದೆ. ವಿಶೇಷವಾಗಿ ತನ್ನ ಹೊಟ್ಟೆಯಲ್ಲಿ 9 ತಿಂಗಳು ಕೂದಲು ಕೊಂಕದೆ ಭದ್ರಕೋಟೆಯಲ್ಲಿ ರಕ್ಷಿಸಿದ ಹಾಗೆ ಪೋಷಿಸಿದ ತಾಯಿಯನ್ನು, ಪತ್ನಿಯನ್ನು, ಮಗಳನ್ನು ಈ ಪುರುಷರು ಕಾಪಾಡುತ್ತಿದ್ದಾರೆಯೇ ?

ಈಗ ಹೆತ್ತವರನ್ನೇ ಜೀವದ ಜೀವವಾಗಿ ಜೊತೆಯಲ್ಲಿ ಪತ್ನಿಯಾಗಿ, ಅತ್ಯಂತ ಪ್ರೀತಿಯ ಮಗಳಾಗಿ ಪುರುಷನನ್ನು ಪಡೆದವರೇ ಕೊಲೆಗಾರರಾದರೆ ಇನ್ಯಾರು ರಕ್ಷಿಸುತ್ತಾರೆ. ಹೆಣ್ಣುಮಕ್ಕಳು ತಮಗಿಂತ ನಮ್ಮನ್ನು ನೂರು ಪಟ್ಟು ಸಲಹುತ್ತಿದ್ದಾರೆ. ಕನಿಷ್ಠ ನಾವುಗಳು ಶೇಕಡಾ 1 ರಷ್ಟು ನೋಡಿಕೊಳ್ಳದಿದ್ದರೆ ನಾವು ಈ ಭೂಮಿಗೆ ಬಂದಿದ್ದು ದಂಡವಲ್ಲವೇ. ಏಕೆ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಇಷ್ಟೊಂದು ಸೋಲುತ್ತಿದ್ದೇವೆ. ಬಹುಷಃ ಪುರುಷ ಹೆಣ್ಣ್ಣುಮಕ್ಕಳಿಗಿಂತ ಶೇ. 99 ದುರ್ಬಲನಾಗಿದ್ದು ತಾನು ಸೋಲಬಾರದೆಂದು ಇಂತಹ ಕೃತ್ಯಗಳನ್ನು ಎಸಗುತ್ತಿರಬಹುದೇ ಎಂದೆನಿಸುತ್ತದೆ. ಗಂಡು ಅನ್ನಿಸಿಕೊಂಡವನು ಪ್ರೀತಿಸಿ ಕೈಕೊಡಬಹುದು ಆದರೆ ಹೆಣ್ಣುಮಕ್ಕಳು ಪ್ರೀತಿಸಿಕೈಕೊಟ್ಟರೆ ಇವನ ಪ್ರೀತಿ ಉಕ್ಕೇರಿ ದ್ವೇಷವಾಗಿ ಕಾರಿಕೊಂಡು ಆ ಹೆಣ್ಣುಮಗುವನ್ನು ಕೊಂದು ಹಾಕುತ್ತಾನೆ. ಆಮೇಲೆ ಏನು ? ಈ ಪ್ರಶ್ನೆಗೆ ಮೊದಲ ಉತ್ತರ ಶೂನ್ಯ ಮತ್ತು ಕೊಲೆಯ ಪ್ರಮಾಣ ಅವನ ಮಹಾದೌರ್ಬಲ್ಯ ಅನ್ನಿಸುವುದಿಲ್ಲ. ಆ ನಂತರವೂ ನಾನು ಗಂಡು ಎನ್ನುವ ಪೌರುಷವೇ ಆತನಲ್ಲಿ ಇರುತ್ತದೆ. ಇದರಿಂದ ಹೆಣ್ಣುಮಗುವನ್ನು ಕಳೆದುಕೊಂಡವರ ದುಃಖ, ಅವನ ತಂದೆ ತಾಯಿಗಳು ಅನುಭವಿಸುವ ಹಿಂಸೆ, ಅವಮಾನ ಇದರಿಂದ ಇಡೀ ಸಮಾಜ ಆಘಾತಕ್ಕೊಳಗಾಗುತ್ತದೆ. ಹಿಂಸೆಯ ಮನಸ್ಸು ಹಿಂಸೆಯನ್ನೇ ಪ್ರಚೋದಿಸುತ್ತದೆ, ಅದಕ್ಕೆ ಎಲ್ಲವನ್ನೂ ಸಾವಧಾನವಾಗಿ ನೋಡಬೇಕು.

ಕಳೆದ ಕೆಲವು ತಿಂಗಳುಗಳಿಂದ ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಹೆಣ್ಣುಮಕ್ಕಳ ದಾರುಣ ಹತ್ಯೆ ಯನ್ನು ಗಮನಿಸಿ. ಹತ್ಯೆಯಾದ ಹೆಣ್ಣುಮಕ್ಕಳ ಕುಟುಂಬಗಳು ದುಃಖದ ಮಡುವಿನಲ್ಲಿ ಬಿದ್ದಿವೆ. ನಮ್ಮ ಯಾವುದೇ ಸಾಂತ್ವನದ ಮಾತುಗಳು ಅವರ ಖಾಲಿ ಮನಸ್ಸನ್ನು ತುಂಬಲಾರವು. ನನಗೆ ಗೊತ್ತಿರುವ ಸಾಮಾಜಿಕ ಕಾರ್ಯಕರ್ತೆ ಸೌಮ್ಯಾ ಅವರ ಮಗಳು ಪ್ರಭುಧ್ಯ ಹತ್ಯೆ ಹಾಗೂ ಈ ರೀತಿಯ ಎಲ್ಲಾ ಹತ್ಯೆಗಳು ನಮ್ಮಂತಹವರಿಗೆ ದೊಡ್ಡ ಆಘಾತವನ್ನು ತಂದೊಡ್ಡಿವೆ. ಸೌಮ್ಯಾ ಸ್ವತಃ ಹೆಣ್ಣುಮಕ್ಕಳ ಪರವಾಗಿ ಹೋರಾಡುವ ದಿಟ್ಟ ಹೋರಾಟಗಾರ್ತಿ. ಒಳ್ಳೆಯಕವಯಿತ್ರಿ ಕೂಡಾ. ತನ್ನ ಮಗಳು ತನಗಿಂತ ಮಾನಸಿಕವಾಗಿ ಗಟ್ಟಿಯಾಗಿದ್ದವಳು, ಎಂತಹ ಸಂದರ್ಭವನ್ನು ನಿಭಾಯಿಸುವ ಜಾಣ್ಮೆ ಮತ್ತು ಶಕ್ತಿ ಆಕೆಗಿತ್ತು,

ಆದರೆ ಈಗ ಇಲ್ಲ ಆಕೆ. ತನಗೆ ಗೊತ್ತಿರುವವರೇ ಇಂತಹ ಕೃತ್ಯ ಎಸಗಿದ್ದಾರೆ ಎನ್ನುವುದೇ ಇಲ್ಲಿ ಆಘಾತಕಾರಿ. ಇಂತಹ ಘಟನೆಗಳಿಂದ ಇಡೀ ಪುರುಷ ಸಮಾಜ ತಲೆ ತಗ್ಗಿಸಬೇಕು. ಈ ಎಲ್ಲಾ ಘಟನೆಗಳಿಗೆ ನೋಯುತ್ತಲೇ ಬದಲಾಗಬೇಕು, ಬದಲಾಗದಿದ್ದರೆ ಇಂತಹ ದುಃಖ ಮುಗಿಯುವುದಿಲ್ಲ . ಎಲ್ಲಾ ಎಚ್ಚರ, ಜಾಗೃತಿ, ಸಂವಿಧಾನ, ಕಾನೂನಿಗಿಂತ ಹೆಣ್ಣುಮಕ್ಕಳನ್ನು ನೋಡುವಲ್ಲಿ ಮತ್ತು ಅರ್ಥಮಾಡಿಕೊಳ್ಳುವಲ್ಲಿ ನಾವು ಬದ್ಧತೆಯನ್ನು ತೋರಿಸಬೇಕಾಗುತ್ತದೆ. ಕಿಂಚಿತ್ತಾದರೂ ನಾವು ಬದಲಾಗುತ್ತೇವೆ ಎನ್ನುವ ಭರವಸೆ ನನ್ನದು.

ಕಳೆದವಾರ ಅಂದರೆ 26.05.2024 ರಂದು ದಲಿತ ಸಂಘರ್ಷ ಸಮಿತಿಯ ಹೋರಾಟಗಾರರೂ ಕನ್ನಡದ ಪ್ರಸಿದ್ಧ ಕವಿಗಳು ಆದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯಿತು. ಈ ವರ್ಷದ ಕಾವ್ಯಪ್ರಶಸ್ತಿಗೆ ಭಾಜನರಾದವರು ಕವಿಗಳಾದ ಎಂ. ಜವರಾಜ್. ಅವರ ಕಥನ ಕಾವ್ಯ ಮೆಟ್ಟು ಹೇಳಿದ ಕಥೆಗೆ ಲಭಿಸಿದ್ದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ಹನ್ನೆರಡು ವರ್ಷಗಳಿಂದ ಚಾಮ ರಾಜನಗರದ ರಂಗವಾಹಿನಿ ಸಂಸ್ಥೆ, ಈ ಸಂಸ್ಥೆಯರೂವಾರಿಗಳಾದ ನಮ್ಮೆಲ್ಲರ ಹೆಮ್ಮೆಯ ರಂಗಸಂಘಟಕ, ನಿರ್ದೇಶಕ, ಪ್ರಗತಿಪರ ಚಳವಳಿಯ ಸಕ್ರಿಯ ಕಾರ್ಯಕರ್ತ ಎಂ. ನರಸಿಂಹ ಮೂರ್ತಿಯವರು ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಯನ್ನು ನೆಲೆಹಿನ್ನೆಲೆ, ಮೈಸೂರು, ರಾಮ ಮನೋಹರ ಟ್ರಸ್ಟ್ ಮೈಸೂರು, ಅಂದರೆ ಮೈಸೂರಿನ ಪ್ರಸಿದ್ಧ ಆಂದೋಲನ ದಿನ ಪತ್ರಿಕೆಯ ಸಂಸ್ಥಾಪಕರು ಹಾಗೂ ಸಂಪಾದಕ ರಾಜಶೇಖರ ಕೋಟಿ ಅವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ.

ಮೊದಲ ಕಾವ್ಯ ಪ್ರಶಸ್ತಿ ಮೂರು ಸಾವಿರ ರೂಪಾಯಿ ಪಡೆದವನು ನಾನೇ. ಆನಂತರದ ದಿನಗಳಲ್ಲಿ ಇದನ್ನು ಗಮನಿಸಿದ ರಾಜಶೇಖರ ಕೋಟಿ ಅವರು ಉಳಿದ ಏಳುಸಾವಿರ ರೂಪಾಯಿಗಳನ್ನು ಸೇರಿಸಿ ಹತ್ತು ಸಾವಿರರೂಪಾಯಿಯ ಪ್ರಶಸ್ತಿಯನ್ನು ನೀಡಿದ ನಿಸ್ವಾರ್ಥ ಮನಸ್ಸಿನ ಕಾರಣಕ್ಕಾಗಿ ನಮ್ಮ ನಾಡಿನ ವಿವಿಧ ಸಮುದಾಯದ ಕವಿಗಳು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಕಾವ್ಯ ಪ್ರಶಸ್ತಿ ಆಯ್ಕೆಯಲ್ಲಿ ಉಳಿದ ತೀರ್ಪುಗಾರರ ಜೊತೆಗೆ ಕಳೆದ ಹನ್ನೊಂದುವರ್ಷದಿಂದ ್ಲ ನಾನು ತೊಡಗಿಸಿಕೊಂಡಿರುವುದಕ್ಕೆ ಇದರಲ್ಲಿ ನನಗೆ ತುಂಬಾ ಖುಷಿ ಇದೆ. ಇದಕ್ಕೆ ಕಾರಣ, ನಾನು ಮುಳ್ಳೂರು ನಾಗರಾಜ್ ಅವರನ್ನು ವಿದ್ಯಾರ್ಥಿ ದೆಸೆಯಲ್ಲೇ ಕಂಡವನು. ದಲಿತ ಸಂಘರ್ಷ ಸಮಿತಿಯನ್ನು ಕಟ್ಟುವಲ್ಲಿ ಪ್ರಮುಖ ಹೆಸರು ಮುಳ್ಳೂರು ನಾಗರಾಜ್ ಕೂಡ ಹೌದು. ದಸಂಸದಲ್ಲಿ ಅವರನ್ನು ನೋಡಿ ಬೆಳೆದವನು ನಾನು. ಮುಳ್ಳೂರು ಅವರ ಹೋರಾಟದ ಬದ್ಧ್ದತೆ ಮತ್ತು ತನ್ನ ಬದುಕಿನುದ್ದಕ್ಕೂ ವೈಯಕ್ತಿಕ ಜೀವನವನ್ನೇ ಮರೆತು ದಲಿತ ರಿಗಾಗಿ ದುಡಿದ ಹೋ ರಾಟಗಾರರಲ್ಲಿ ಮುಳ್ಳೂರು ನಾಗರಾಜ್ ಅವರಿಗೆ ವಿಶಿಷ್ಟ ಸ್ಥಾನವಿದೆ. ಅವರ ಬಗ್ಗೆ ನನ್ನಂತಹವರಿಗೆ ಒಂದು ಸಣ್ಣ ಬೇಸರವಿದೆ. ಅನವಶ್ಯಕವಾಗಿ ದೇವನೂರೂ ಮಹಾದೇವರನ್ನು ಟೀಕಿಸುತ್ತಿದ್ದು ನಮ್ಮಂಹತವರಿಗೆ ಕೇಳಿಸಿಕೊಳ್ಳುವುದಕ್ಕೆ ಸಂಕ ಟವಾಗುತ್ತಿತ್ತು. ದೇವನೂರೂ ಮಾಹದೇವರನ್ನು ತುಂಬಾ ನೋಯಿಸಿದ್ದು ಉಳಿದ ಸಮುದಾಯಕ್ಕಿಂತ ದಲಿತರೇ ಎನ್ನುವುದು ಅತ್ಯಂತ ನೋವಿನ ಸಂಗತಿ. ದೇವನೂರೂ ಮಾಹಾದೇವರ ದೇಹದಲ್ಲಿ ಗಾಯಗೊಳಿಸುವುದಕ್ಕೆ ಜಾಗವೇ ಇಲ್ಲ ಅಷ್ಟೊಂದು ನೋವುಗಳನ್ನು ಅವರು ಅನುಭವಿಸಿದ್ದಾರೆ. ಯಾರ ಪರವಾಗಿ ದೇವನೂರೂ ಮಹಾದೇವ ಹೆಚ್ಚು ಚಿಂತಿಸುತ್ತಾರೋ ಅವರೇ ಅವರನ್ನು ಹೆಚ್ಚು ಹಿಂಸಿಸಿದ್ದಾರೆ. ಮಹಾದೇವರಿಗೆ ಎಲ್ಲವನ್ನು ಸ್ವೀಕರಿಸುವ ಗುಣ ಇದ್ದಿದ್ದರಿಂದ ಹಾಗೆ ಅಂದವರಿಗೆಲ್ಲಾ ಒಳ್ಳೆಯದಾಗಲಿ ಎಂದೇ ಭಾವಿಸುತ್ತಾರೆ. ಮುಳ್ಳೂರು ನಾಗರಾಜ್ ವಿಷಯದಲ್ಲೂ ಹೀಗೇ ಆಗಿದೆ. ಮುಳ್ಳೂರು ನಾಗರಾಜ್ ತೀರಿಕೊಂಡಾಗ ಅವರ ನುಡಿನಮನ ಕಾರ್ಯಕ್ರಮಕ್ಕೆ ರಾಜಶೇಖರ ಕೋಟಿ ಅವರೊಂದಿಗೆ ಹೋದ ಮಹಾದೇವ ಮುಳ್ಳೂರು ನಾಗರಾಜ ಅವರ ಏನೇ ಟೀಕೆ ಟಿಪ್ಪಣಿ ಇದ್ದರೂ ಕುಸುಮಬಾಲೆಯಲ್ಲಿ ಮುಳ್ಳೂರುನಾಗರಾಜ್ ಅವರ ಸನ್ನಿವೇಶವನ್ನು ಹೇಳಿ, ನನಗೆ ಆಗ ಇದ್ದ ಗೌರವವೇ ಈಗಲೂ ಹಾಗೆಯೇ ಇದೆ ಎಂದು ಹೇಳಿ ತನ್ನ ಜೀವಪ್ರೀತಿಯನ್ನು ದಾಖಲಿಸುತ್ತಾರೆ. ದೇವನೂರ ಮಹಾದೇವ ಜಗತ್ತಿನ ಎಲ್ಲಾ ಜೀವಿಗಳ ಪರವಾಗಿನಿಂತವರು. ಅದರಲ್ಲಿ ಮುಳ್ಳೂರು ನಾಗರಾಜ್ ಕೂಡ ಒಬ್ಬರು ಎನ್ನುವುದನ್ನು ಮರೆಯುವಂತಿಲ್ಲ. ಇದು ಮಹಾದೇವರ ಗುಣ. ಮನುಷ್ಯ ಅನ್ನಿಸಿಕೊಂಡವರ ಸರಿ ಹಾಗೂ ತಪ್ಪುಗಳು ಹೀಗೆ ನಿರಂತರವಾಗಿ ದಲಿತರಿಗಾಗಿ ದುಡಿದು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನೆಲದ ಜೋಗುಳದಂತಹ ಮಹತ್ವದ ಕಾವ್ಯ ಬರೆದ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ಕಾವ್ಯ ಪ್ರಶಸ್ತಿ ಕೊಡುತ್ತಿರುವುದು ಹೊಸ ತಲೆಮಾರಿಗೆ ಅವರ ಕಾವ್ಯ, ಹೋರಾಟ ಮತ್ತು ಬರವಣಿಗೆಗೆ ಪ್ರೇರಣೆ ಪಡೆಯುವಂತಾದರೆ ಪ್ರಶಸ್ತಿಯನ್ನು ಕೊಡಮಾಡುವವರಿಗೂ ಸಂತೋಷವಾಗುತ್ತದೆ.

ಇಂತಹ ಕಾವ್ಯ ಪ್ರೀತಿಯ ಪರಂಪರೆ ನಿರಂತರವಾಗಿ ಮುಂದುವರಿಯಲಿ ಎನ್ನುವುದು ನನ್ನಂತಹವರೆಲ್ಲರ ಆಶಯ. ಇಂತಹ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಸಂಘಟನೆ ಬಹಳ ಮುಖ್ಯ. ಗೆಳೆಯ ನರಸಿಂಹ ಮೂರ್ತಿ ಸದಾ ಮುಗುಳುನಗುವ ಕೃಷ್ಣವರ್ಣದ ಗೆಳೆಯ. ಓದಿದ್ದು ಇಂಜಿನಿಯರಿಂಗ್. ಆದರೆ ಹಾಡು ,ನಾಟಕ ಅಂದರೆ ಪ್ರಾಣ. ಕೈಯಲ್ಲಿ ಕಾಸಿಲ್ಲದಿದ್ದರೂ ಉತ್ಸಾಹಕ್ಕೇನೂ ಕಡಿಮೆಯಿಲ್ಲ. ಚಾಮರಾಜನಗರವೆಂದರೆ ಮಂಟೆಸ್ವಾಮಿ ಹಾಗೂ ಸಿದ್ಧಪ್ಪಾಜಿಯವರ ಮಹಾಕಾವ್ಯಗಳ ತವರೂರು. ಅಂತಹ ಮಹಾಕಾವ್ಯಗಳ ಒಟ್ಟಿಗೆ ಬೆಳೆದ ನರಸಿಂಹ ಮೂರ್ತಿ ಸ್ವತಃ ಹಾಡುಗಾರನಾಗಿ ಬೆಳೆಯುತ್ತಲೇ ರಂಗಭೂಮಿಗೆ ಕಾಲಿಟ್ಟರು. ಪ್ರಾರಂಭಕ್ಕೆ ಶೋಷಿತ ಸಮುದಾಯದ ಮಕ್ಕಳಿಗೆ ರಂಗ ಶಿಬಿರ, ಯುವ ಜನರಿಗೆ ರಂಗ ತರಬೇತಿ,ಸುಗಮ ಸಂಗೀತ, ಜಾನಪದ ಗಾಯನ ಹೀಗೆ ನಿರಂತರವಾಗಿ ಗಡಿನಾಡಿನಲ್ಲಿ ಸಾಂಸ್ಕೃತಿಕ ಸಂಘಟನೆ ನಡೆಸುತ್ತಿದ್ದಾರೆ. ಪ್ರಗತಿಪರ ಸಂಘಟನೆಗಳ ಜೊತೆಗೆ ಸಕ್ರಿಯವಾಗಿ ಕೆಲಸಮಾಡುತ್ತಿದ್ದಾರೆ. ವಿಶೇಷವಾಗಿ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಸಕ್ರಿಯವಾಗಿದ್ದಾರೆ. ಸ್ವತಃ ಅತ್ಯುತ್ತಮ ಹಾಡುಗಾರರಾದ ನರಸಿಂಹ ಮೂರ್ತಿ ಎರಡು ಬಾರಿ ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಹಾಡಿ ಬಂದಿದ್ದಾರೆ. ಎರಡು ಬಾರಿ ಜಾನಪದ ಅಕಾಡಮಿಯ ಸದಸ್ಯರೂ ಆಗಿದ್ದಾರೆ. ಇಂತಹ ಕ್ರಿಯಾ ಶೀಲ ವ್ಯಕ್ತಿಯಾದ ಮೂರ್ತಿಯವರು ಕನ್ನಡ ನಾಡಿನಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ.

ಕಳೆದ ಕೆಲವು ದಿನಗಳ ಹಿಂದೆ ನಾನು ಒಂದು ಆಘಾತಕರವಾದ ಸಂದರ್ಭವನ್ನು ಎದುರಿಸಬೇಕಾಯಿತು. ಇದು ತುಂಬಾ ಅನಿರೀಕ್ಷಿತ. ಸಾಯುವ ವಯಸ್ಸಲ್ಲದವರು ತೀರಿಕೊಂಡರೆ ಅದು ಆಘಾತಕರವಾದ ಸುದ್ದಿಯೇ. ನನ್ನ ಪ್ರೀತಿಯ ಸೋದರ ಆನಂದ ತನ್ನ ಜೀವ ಕಳೆದು ಕೊಂಡಿದ್ದ. ಕಾವ್ಯದ ಕಡು ಮೋಹಿಯಾಗಿದ್ದ, ವಿಕ್ಷಿಪ್ತ ಮನಸ್ಸಿನ ಬರವಣಿಗೆಗೆ ಖ್ಯಾತಿಯಾಗಿದ್ದ. ತಲ್ಲಣಿಸುತ್ತಿದ್ದ ಜೀವ ಆನಂದನದ್ದು. ಹಸಿವು ಮತ್ತು ದುಃಖ ಕಾವ್ಯಕ್ಕೆ ಪ್ರೇರಣೆಯಾಗಬಹುದು. ಆದರೆ ಆನಂದನದ್ದು ಪ್ರೇಮವೈಫಲ್ಯವೂ ಅವನ ಕಾವ್ಯಕ್ಕೆ ಪ್ರೇರಣೆೆ ಆಗಿರಬಹುದು ಎನ್ನುವುದು ನನ್ನ ಭಾವನೆ. ಕಾವ್ಯವನ್ನೇ ಹೊತ್ತುಕೊಂಡು ತಿರುಗಾಡುತ್ತಿದ್ದ ಆನಂದನ ಕೆಲವು ಸಾಲುಗಳಿಗೆ ಮನಸೋತ ನಾನು ಕವನ ಸಂಕಲನಕ್ಕೆ ಬೆನ್ನುಡಿ ಬರೆಯುತ್ತಾ ಅವನನ್ನು ಕರಿ ಬುದ್ಧ ಎಂದು ಬಣ್ಣಿಸಿದ್ದೆ. ಈ ಕರಿ ಬುದ್ಧ ದುಃಖವನ್ನು ಮೀರಬೇಕಿತ್ತು . ನಿಜಕ್ಕೂ ಸಾಹಿತ್ಯದಲ್ಲಿ ಪ್ರತಿಭಾವಂತನಾಗಿದ್ದ ಕವಿ ಕೇಂದ್ರ ಯುವ ಪುರಸ್ಕಾರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ. ಎಲ್ಲೆಲ್ಲೋ ಇರುತ್ತಿದ್ದ, ಎಲ್ಲೆಲ್ಲಿಂದಲೋ ಫೋೀನ್ ಮಾಡುತ್ತಿದ್ದ. ಇವನ ಪಾದಕ್ಕೂ ನೆಲಕ್ಕೂ ಏನೋ ಸಂಬಂಧವಿದ್ದಂತೆ ಅಲೆಮಾರಿಯಂತೆ ತಿರುಗುತ್ತಿದ.್ದ ಇಷ್ಟಾದರೂ ಅವನ ಕಣ್ಣಲ್ಲಿ ಮಾನವ ಪ್ರೇಮದ ಜೀವಪ್ರೀತಿ ಇತ್ತು. ಆನಂದ ಬುದ್ಧನ ಶಿಷ್ಯ ಆನಂದನೂ ಆಗಲಿಲ್ಲ, ಕರಿ ಬುದ್ಧನೂ ಆಗಲಿಲ್ಲ. ಅವನು ಕವಿಯಂತೆ, ಮನುಷ್ಯನಂತೆ ಏಕಾಂಗಿಯಾಗಿ ನಮ್ಮನ್ನೆಲ್ಲಾ ಬಿಟ್ಟು ಹೊರಟ. ಸದಾ ದುಃಖದ ಮಡುವಿನಲ್ಲಿರುವ ನಮಗೆ ಇನ್ನೊಂದು ಬಟ್ಟಲು ದುಃಖ ಕುಡಿಸಿ ಹೋದ. ಇರಲಿ ಸಹೋದರ ನೀನು ಬಿಟ್ಟು ಹೋದ ಕಾವ್ಯ ನಮ್ಮೊಟ್ಟಿಗಿದೆ.

ಅದು ಮರದ ಎಲೆಗಳು ಅಲುಗಾಡಿದ ಹಾಗೆ ಕಾಣಿಸುತ್ತದೆ. ಮತ್ತೆ ಎಲ್ಲಿಯಾದರೂ ಭೇಟಿಯಾಗೋಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುಬ್ಬು ಹೊಲೆಯಾರ್

contributor

Similar News