ಮೀಸಲಾತಿಯ ಪುನರ್ವಿಂಗಡಣೆ, ಮರು ವಿಭಾಗೀಕರಣ ಕೂಡಲೇ ಆಗಬೇಕು: ಜಯಪ್ರಕಾಶ್ ಹೆಗ್ಡೆ

Update: 2023-06-26 06:26 GMT
Editor : Safwan

ಸಂದರ್ಶನ: ಬಿ.ಬಿ. ಶೆಟ್ಟಿಗಾರ್

2020ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೊರ್ಗಿ ಜಯಪ್ರಕಾಶ್ ಹೆಗ್ಡೆ ಅವರು ವೃತ್ತಿಪರ ರಾಜಕಾರಣಿಯಾದರೂ ತನ್ನ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮಾಜದಲ್ಲಿ ಈವರೆಗೆ ಅತ್ಯಂತ ಹಿಂದುಳಿದಿರುವ, ಅವಕಾಶ ವಂಚಿತ ಹಲವು ಜಾತಿಗಳಿಗೆ, ಸಮುದಾಯಗಳಿಗೆ ಇದುವರೆಗೆ ದೊರಕದ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೊರಕದ ಮೀಸಲಾತಿಯ ಲಾಭವನ್ನು ನೀಡಲು ಪ್ರಾಮಾಣಿಕ ಕಾಳಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಕಣ್ಮರೆಯಾಗಿರುವ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಯಪ್ರಕಾಶ್ ಹೆಗ್ಡೆ, ವೃತ್ತಿಯಲ್ಲಿ ನ್ಯಾಯವಾದಿ. ಜೆ.ಎಚ್. ಪಟೇಲ್ ನೇತೃತ್ವದ ಸರಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಇವರು ಒಂದು ಬಾರಿ ಕಾಂಗ್ರೆಸ್ನಿಂದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೂ ಆಯ್ಕೆಯಾಗಿದ್ದರು. ಅವರು 2018ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಿಜೆಪಿ ಆಡಳಿತಾವಧಿಯಲ್ಲಿ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದರೂ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸರಕಾರ ಬದಲಾದರೂ ಆಯೋಗದ ಅವಧಿ ಮುಕ್ತಾಯಗೊಳ್ಳುವ ನವೆಂಬರ್ ತಿಂಗಳ ಕೊನೆಯವರೆಗೆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶವನ್ನು ಪಡೆದಿದ್ದಾರೆ. ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೀವು ಹಮ್ಮಿಕೊಂಡ ಮಹತ್ವದ ಕಾರ್ಯಕ್ರಮಗಳು ಯಾವುವು?

ಜೆ.ಪಿ. ಹೆಗ್ಡೆ: ಆಯೋಗ ಇದುವರೆಗೆ ೩೪ ವರದಿಗಳನ್ನು ಸರಕಾರಕ್ಕೆ (ಹಿಂದಿನ ಬಿಜೆಪಿ) ನೀಡಿದೆ. ಅವುಗಳನ್ನು ವಿಧಾನಸಭಾ ಚುನಾವಣಾ ಪೂರ್ವ ದಲ್ಲೇ ಸಲ್ಲಿಸಿದ್ದೇವೆ. ಅದರಲ್ಲಿ ಕೆಲವು ಆಯ್ದ ಜಾತಿಗಳದ್ದು ಸರಕಾರ ಸ್ವೀಕರಿಸಿ, ಜಿ.ಒ.(ಸರಕಾರಿ ಆದೇಶ) ಹೊರಡಿಸಿದೆ. ಮೊನ್ನೆ ಸುಪ್ರೀಂ ಕೋರ್ಟ್ನ ತಡೆಯಾಜ್ಞೆ ಮೇರೆಗೆ ಎಲ್ಲವೂ ನಿಂತು ಹೋಗಿವೆ. ಮತ್ತೆ ಹೊಸದಾಗಿ ಈಗಿನ ಸರಕಾರಕ್ಕೆ ವರದಿ ಸಲ್ಲಿಸಬೇಕಿದೆ. ಆ ಬಗ್ಗೆ ಈಗಿನ ಸರಕಾರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.

ನಾವು ಕೊಟ್ಟ ವರದಿಗಳಲ್ಲಿ ಅತ್ಯಂತ ಪ್ರಮುಖವಾದುದು ಅನಾಥ ಮಕ್ಕಳಿಗೆ ಮೀಸಲಾತಿ ನೀಡುವಂತಹದ್ದು. ಇದನ್ನು ಸರಕಾರ (ಹಿಂದಿನ) ಒಪ್ಪಿಕೊಂಡಿದೆ. ಆದರೆ ಮಾಡುವಾಗ ಸಣ್ಣ ತಪ್ಪಾಗಿದೆ. ನಾವು ವರದಿ ಕೊಡುವಾಗ ಅವರನ್ನು ಅತಿ ಹಿಂದುಳಿದ ಪ್ರವರ್ಗ ೧ಕ್ಕೆ ಸೇರಿಸಲು ಶಿಫಾರಸು ಮಾಡಿದ್ದೆವು. ಅವರ ತಪ್ಪಿನಿಂದಾಗಿ ೩ಬಿಗೆ ಸೇರ್ಪಡೆಗೊಂಡಿದೆ. ಈ ಅನಾಥ ಮಕ್ಕಳಿಗೆ ವೀರಶೈವರು, ಲಿಂಗಾಯತರು, ಬಂಟ ಹಾಗೂ ಕ್ರಿಶ್ಚಿಯನ್ರಂಥ ಪ್ರಮುಖ ಜಾತಿಗಳ ಮಕ್ಕಳೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ವಿವರಿಸಿ ಸರಕಾರದ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇನೆ. ಇದನ್ನು ಬದಲಾಯಿಸಿ ಪ್ರವರ್ಗ ಒಂದಕ್ಕೆ ಸೇರಿಸುವಂತೆ ತಿಳಿಸಿದ್ದೇನೆ. ಯಾರಿಗೆ ತಂದೆತಾಯಿ ಯಾರೆಂದು ಗೊತ್ತಿಲ್ಲವೋ ಅಂಥ ಮಕ್ಕಳನ್ನು ಪ್ರವರ್ಗ ಒಂದಕ್ಕೆ ಸೇರಿಸಿ ಶೇ.೧ರಷ್ಟು ಮೀಸಲಾತಿ ನೀಡುವಂತೆ ಸೂಚಿಸಿದ್ದೇವೆ.

ಒಂದು ವೇಳೆ ಯಾವ ಮಕ್ಕಳ ತಂದೆ ತಾಯಿಗಳ ಜಾತಿ ಗೊತ್ತಿರುತ್ತದೋ ಅಂಥ ಮಕ್ಕಳಿಗೆ ಆಯಾ ಜಾತಿಯಲ್ಲೇ ಶೇ.೧ ಮೀಸಲಾತಿ ನೀಡಲು ಶಿಫಾರಸು ಮಾಡಿದ್ದೇವೆ. ಆದರೆ ಹೀಗೆ ಮಾಡುವಾಗ ಬ್ಯಾಕ್ಲಾಗ್ ಇರಿಸುವಂತಿಲ್ಲ, ಅನಾಥ ಮಕ್ಕಳಿಲ್ಲವೆಂದು ಖಾಲಿ ಇರಿಸದೆ, ಮತ್ತೊಂದು ಜಾತಿಯ ಮಗುವಿಗೆ ಮೀಸಲಾತಿ ನೀಡುವಂತೆ ತಿಳಿಸಿದ್ದೇವೆ. ಈ ಭಾಗದಲ್ಲಿ ಕುಡುಬಿ ಜನಾಂಗವನ್ನು ಅಲೆಮಾರಿ ಪಟ್ಟಿಗೆ ಸೇರಿಸುವಂತೆ ವರದಿ ಸಲ್ಲಿಸಿದ್ದೇವೆ. ಇಲ್ಲಿ ಕುಡುಬಿಯರು, ಉಳಿದೆಡೆ ಕಾಡು ಗೊಲ್ಲರಿಗೂ ಇದೇ ಪಟ್ಟಿಗೆ ಸೇರಿಸಿದ್ದೇವೆ. ಅವರೆಲ್ಲರೂ ಈಗಲೂ ಪ್ರವರ್ಗ ಒಂದರಲ್ಲಿದ್ದರೂ, ಅಲೆಮಾರಿ ಪಟ್ಟಿಗೆ ಸೇರಿದಾಗ ಕೇಂದ್ರ ಸರಕಾರದ ಕೆಲವು ಪ್ರತ್ಯೇಕ ಸೌಲಭ್ಯಗಳೂ ಈ ಮಕ್ಕಳಿಗೆ ದೊರೆಯುತ್ತವೆ. ಕುಡುಬಿಯರು ಕೇಳಿದ್ದು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು. ಈ ಬಗ್ಗೆ ಬಹುಕಾಲದಿಂದ ಬೆನ್ನುಹತ್ತಿದ್ದು, ಒಮ್ಮೆ ಎಸ್ಸಿಗೆ ಸೇರಿಸಿದ್ದರೂ, ಕೆಲವು ಸಮಸ್ಯೆಗಳಿಂದ ಈಗ ಎಸ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಸ್ಸಿ, ಎಸ್ಟಿ ಕಮಿಷನ್ನವರು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿ, ರಾಜ್ಯ ಸರಕಾರ ಕೇಂದ್ರಕ್ಕೆ ಒಪ್ಪಿಗೆಗೆ ಕಳುಹಿಸಬೇಕಾಗಿದೆ.

ನಮ್ಮಲ್ಲಿ ತೀರಾ ಹಿಂದುಳಿದ ವರ್ಗವಾದ ಕೊರಗರಿಗೆ ಪ್ರತ್ಯೇಕ ಮೀಸಲಾತಿ ಸಿಗಬೇಕೆಂಬುದು ನಮ್ಮ ಆಶಯವಾಗಿದೆ. ಇದಕ್ಕಾಗಿ ಪ್ರಯತ್ನವೂ ನಡೆದಿದೆ. ಪ್ರಿಮಿಟೀವ್ ಟ್ರೈಬ್ ಆದ ಕೊರಗರು ಪರಿಶಿಷ್ಟ ಪಂಗಡದ ಉಳಿದ ಸಮುದಾಯಗಳ ಮಕ್ಕಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿಲ್ಲ. ಅದಕ್ಕೆ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂಬುದು ನಮ್ಮ ಪ್ರಯತ್ನ. ಆದರೆ ಈ ವಿಷಯ ಎಸ್ಸಿ, ಎಸ್ಟಿ ಕಮಿಷನ್ ಅಡಿಯಲ್ಲಿ ಬರುತ್ತದೆ. ಅವರೊಂದಿಗೆ ಈ ಬಗ್ಗೆ ನಾನೂ ಚರ್ಚಿಸುತ್ತಿದ್ದೇನೆ.

ರಾಜಕೀಯವಾಗಿ ಹಿಂದುಳಿದ ವರ್ಗಗಳ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಹೇಗೆ?

ಜೆ.ಪಿ. ಹೆಗ್ಡೆ: ರಾಜಕೀಯ ಮೀಸಲಾತಿ ವಿಷಯ ನಮ್ಮ ಆಯೋಗದ ಪರಿಧಿಯೊಳಗೆ ಬರುವುದಿಲ್ಲ. ಅದಕ್ಕಾಗಿ ಪ್ರತ್ಯೇಕ ಆಯೋಗವಿದೆ. ಜಸ್ಟೀಸ್ ಭಕ್ತವತ್ಸಲ ಅದರ ಅಧ್ಯಕ್ಷರಾಗಿದ್ದಾರೆ. ಅವರು ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಅಲ್ಲಿ ಪ್ರತೀ ಜಾತಿಯ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ನಿರ್ಧರಿಸುತ್ತಾರೆ. ಅಲ್ಲೀಗ ಇರುವುದು ೨ಎ, ೨ಬಿ ಎರಡು ವಿಭಾಗ ಮಾತ್ರ. ಅವರೇ ಈ ಬಗ್ಗೆ ನಿರ್ಧರಿಸಬೇಕಾಗುತ್ತದೆ.

ಸರಕಾರ ಸಾಮಾಜಿಕ, ಆರ್ಥಿಕ ಜಾತಿ ಸಮೀಕ್ಷೆಯನ್ನು ಸ್ವೀಕರಿಸಲು ಮುಂದಾಗಿದೆ. ಇದೊಂದು ಐತಿಹಾಸಿಕ, ದೇಶಕ್ಕೆ ಮಾದರಿ ಆಗಬಲ್ಲ ಸಮೀಕ್ಷೆ ಎಂದು ಭಾವಿಸಲಾಗಿದೆ. ನಿಮ್ಮ ಅವಧಿಯಲ್ಲಿ ಬಿಜೆಪಿ ಸರಕಾರ ಇದರ ಬಗ್ಗೆ ಯಾಕೆ ಆಸಕ್ತಿ ವಹಿಸಲಿಲ್ಲ?

ಜೆ.ಪಿ. ಹೆಗ್ಡೆ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-೨೦೧೫ ವರದಿಯನ್ನು ಸ್ವೀಕರಿಸಲು ಸರಕಾರ ರೆಡಿ ಇದ್ದರೆ, ನಾವು ಕೊಡಲು ರೆಡಿ ಇದ್ದೇವೆ. ಆದರೆ ಅದರಲ್ಲಿ ಸಣ್ಣ ಕಾನೂನಿನ ತೊಡಕಿದೆ. ಕಾನೂನಿನಲ್ಲಿ ಏನಿದೆ ಅಂದರೆ, ಎಲ್ಲಾ ವರದಿಗಳನ್ನು ಆಯೋಗದ ಸದಸ್ಯ ಕಾರ್ಯದರ್ಶಿ ಅಧಿಕೃತಗೊಳಿಸಬೇಕು ಎಂದಿದೆ. ಇದರಲ್ಲಿ ಅದು ಆಗಿಲ್ಲ. ಡೇಟಾ (ದತ್ತಾಂಶ) ಕೊಡಲು ಯಾವುದೇ ತೊಡಕಿಲ್ಲ. ಕಾನೂನು ತಿದ್ದುಪಡಿ ಮಾಡುವಾಗ ದತ್ತಾಂಶವನ್ನು ವರದಿಯೊಂದಿಗೆ ನೀಡಬೇಕು ಎಂದು ಹೇಳಲಾಗಿದೆ. ಆದರೆ ಈ ವರದಿಗೆ ಆಗಿನ ಸದಸ್ಯ ಕಾರ್ಯದರ್ಶಿ ತನ್ನ ಸಹಿ ಹಾಕಿಲ್ಲ. ಇದು ಈಗಿನ ಸಮಸ್ಯೆ. ಅಂದಿನ ಸದಸ್ಯ ಕಾರ್ಯದರ್ಶಿ ಈಗ ಸಹಿ ಹಾಕುವುದಕ್ಕೆ ಆಗುವುದಿಲ್ಲ. ಏಕೆಂದರೆ ಈಗ ಅದರಲ್ಲಿ ಬದಲಾವಣೆಯಾಗಿದೆ. ಹೀಗಾಗಿ ನಾನು ಅವರಿಗೆ ಪತ್ರ ಬರೆದಿದ್ದೆ. ಈ ಬಗ್ಗೆ ವಿವರಣೆ ನೀಡುವಂತೆ ದೂರವಾಣಿ ಸಂಪರ್ಕವನ್ನು ಸಹ ಮಾಡಿದ್ದೆ. ಆದರೆ ಅವರು ಬಂದು ವಿವರಣೆ ನೀಡಿಲ್ಲ. ಆದುದರಿಂದ ನಾನು ಈಗ ಸರಕಾರಕ್ಕೆ ಪತ್ರ ಬರೆದಿದ್ದು, ಏನು ಮಾಡಬೇಕು ಎಂದು ಕೇಳಿದ್ದೇನೆ. ಸರಕಾರದಿಂದ ಏನು ಉತ್ತರ ಬರುತ್ತದೋ ಅದರಂತೆ ಆಯೋಗ ಮುಂದಿನ ಕ್ರಮ ಕೈಗೊಳ್ಳಲಿದೆ. ಕಾನೂನಿನಲ್ಲಿ ತೊಡಕಿದ್ದರೆ ಸರಕಾರ ಅದನ್ನು ಹೇಗೆ ಸರಿ ಮಾಡಿಕೊಡುತ್ತದೆ ಅನ್ನುವುದನ್ನು ಕಾಯುತ್ತಿದ್ದೇವೆ. ಸರಕಾರದಿಂದ ಉತ್ತರ ಬಂದ ಬಳಿಕ ಅದೇ ವರದಿ (ಕಾಂತರಾಜು) ಕೊಡಬೇಕಾ ಅಥವಾ ನಾವು ಅದನ್ನು ರಿವ್ಯೆ ಮಾಡಿ ಪ್ರತ್ಯೇಕ ವರದಿ ಕೊಡಬೇಕಾ ಎಂಬುದನ್ನು ನಿರ್ಧರಿಸಲಾಗುವುದು. ಅದು ದೊಡ್ಡ ವಿಷಯವಲ್ಲ. ಸ್ವಲ್ಪಸಮಯ ಕೊಟ್ಟರೆ ಇರುವ ದತ್ತಾಂಶದಲ್ಲೇ ಪ್ರತ್ಯೇಕ ವರದಿ ಕೊಡಲು ಸಾಧ್ಯವಿದೆ. ಯಾವುದಕ್ಕೂ ಸರಕಾರದ ಉತ್ತರದ ನಿರೀಕ್ಷೆಯಲ್ಲಿದ್ದೇವೆ.

ಕಾಂತರಾಜು ವರದಿ ಜಾತಿ ಜನಗಣತಿಯಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲ. ಅದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-೨೦೧೫ ಆಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಅದು ನಿರ್ಧರಿಸುತ್ತದೆ. ವರದಿ ಬಗ್ಗೆ ನಾವು ಹಿಂದಿನ ಸರಕಾರಕ್ಕೆ (ಬಿಜೆಪಿ) ಪತ್ರ ಬರೆದಿದ್ದೆವು. ಆದರೆ ಉತ್ತರ ಬಂದಿಲ್ಲ. ಈಗಿನ ಸರಕಾರಕ್ಕೂ ಬರೆದಿದ್ದೇವೆ.

ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿ ಮೇಲ್ ಜಾತಿಯ ಬಡವರ ಆರ್ಥಿಕ ಮೀಸಲಾತಿ ವ್ಯಾಪ್ತಿಗೆ ಅವರನ್ನು ಸೇರ್ಪಡೆಗೊಳಿಸಿರುವ ಬಗ್ಗೆ ನಿಮ್ಮ ಅನಿಸಿಕೆ? ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾರ್ಗದರ್ಶನವನ್ನು ಸರಕಾರ ಪಡೆದುಕೊಂಡಿದೆಯೇ?

ಜೆ.ಪಿ. ಹೆಗ್ಡೆ: ನಾವು ಸರಕಾರಕ್ಕೆ ತಾತ್ಕಾಲಿಕ ವರದಿ ನೀಡಿದ್ದೆವು. ಅದರಲ್ಲಿ ಆ ವಿಷಯ ಇರಲಿಲ್ಲ. ಅದೀಗ ಪಬ್ಲಿಕ್ ಡಾಕ್ಯುಮೆಂಟ್ ಆಗಿದೆ. ಕೋರ್ಟ್ಗೆ ನಾವು ಅದನ್ನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟಿದ್ದೆವು. ಸರಕಾರಕ್ಕೆ ಕೊಟ್ಟು ಸರಕಾರ ಕ್ಲೋಸ್ಡ್ ಕವರ್ನಲ್ಲಿ ರಾಜ್ಯ ಹೈಕೋರ್ಟ್ಗೆ ಕೊಟ್ಟಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಮಾಡಿದೆ. ಏನೆಂದರೆ ಮುಚ್ಚಿದ ಲಕೋಟೆಯಲ್ಲಿ ಯಾವುದೇ ಮಾಹಿತಿ ನೀಡುವ ವ್ಯವಸ್ಥೆ ಹೋಗಬೇಕು ಎಂಬುದು. ಅದರಂತೆ ಹೈಕೋರ್ಟ್ ನಾವು ಕೊಟ್ಟ ಮಾಹಿತಿಯನ್ನು ಅರ್ಜಿದಾರರು ಹಾಗೂ ಸಂಬಂಧಿತ ಎಲ್ಲರಿಗೂ ಕೊಡಿ ಎಂದು ಹೇಳಿದೆ. ಅದೀಗ ಸಾರ್ವಜನಿಕ ದಾಖಲೆಯಾಗಿದೆ. ಯಾರು ಆರ್ಟಿಐನಲ್ಲಿ ಅರ್ಜಿ ಹಾಕುತ್ತಾರೋ, ಅವರಿಗೆಲ್ಲಾ ನಾವು ಅದನ್ನು ಕೊಡುತ್ತೇವೆ. ಆದುದರಿಂದ ನಮ್ಮ ವರದಿಯಲ್ಲಿ ನಾವು ಅಂತಿಮ ವರದಿ ಬಂದ ನಂತರವಷ್ಟೇ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿದ್ದೆವು. ತಾತ್ಕಾಲಿಕ ವರದಿಯ ಆಧಾರದಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದಂತೆ ತಿಳಿಸಿದ್ದೆವು.

ಮೀಸಲಾತಿ ರದ್ದುಗೊಳಿಸುವ ಮುನ್ನ ಆಯೋಗದ ನೇತೃತ್ವದಲ್ಲಿ ಸಮೀಕ್ಷೆ, ಅಧ್ಯಯನ ಏನಾದರೂ ನಡೆದಿದೆಯೇ?

ಜೆ.ಪಿ. ಹೆಗ್ಡೆ: ಇಲ್ಲ, ಮೀಸಲಾತಿ ರದ್ದುಗೊಳಿಸುವ ಮುನ್ನ ಸರಕಾರ ನಮ್ಮ ಅಭಿಪ್ರಾಯ ಕೇಳಿರಲಿಲ್ಲ. ನಾವು ಮಾರ್ಗದರ್ಶನವನ್ನು ನೀಡಿರಲಿಲ್ಲ. ಮೀಸಲಾತಿ ರದ್ದುಗೊಳಿಸಲು ನಾವು ಹೇಳಿರಲಿಲ್ಲ. ನಮ್ಮ ಶಿಫಾರಸು ಏನೂ ಇರಲಿಲ್ಲ. ಅದು ಸರಕಾರದ್ದೇ ತೀರ್ಮಾನ. ಈ ಬಗ್ಗೆ ನಾವು ಯಾವುದೇ ಸಮೀಕ್ಷೆಯನ್ನೂ ಮಾಡಿರಲಿಲ್ಲ. ಸಮೀಕ್ಷೆ ಮಾಡಿದ್ದರೆ ನಾವು ವರದಿಯನ್ನು ನೀಡುತ್ತಿದ್ದೆವು. ಸಮೀಕ್ಷೆಯೇ ಆಗಿರಲಿಲ್ಲ. ನಮಗೆ ಸರಕಾರದಿಂದ ಈ ಬಗ್ಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ನಾವು ಯಾವುದೇ ಅಭಿಪ್ರಾಯವನ್ನೂ ನೀಡಿರಲಿಲ್ಲ.

ದಲಿತರ ಒಳ ಮೀಸಲಾತಿಯ ಗೊಂದಲಗಳ ಬಗ್ಗೆ ನಿಮ್ಮ ಅನಿಸಿಕೆ?

ಜೆ.ಪಿ. ಹೆಗ್ಡೆ: ದಲಿತ ಮೀಸಲಾತಿ ವಿಷಯ ನಮ್ಮ ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದು ಎಸ್ಸಿ, ಎಸ್ಟಿ ಕಮಿಷನ್ಗೆ ಸಂಬಂಧಿಸಿದ್ದು. ಅವರೇ ಈ ಬಗ್ಗೆ ನಿರ್ಧರಿಸುವವರು.

ಮೀಸಲಾತಿಯ ಉದ್ದೇಶವನ್ನು ವಿಫಲಗೊಳಿಸುವ ಪ್ರಯತ್ನವೊಂದು ಇತ್ತೀಚೆಗೆ ನಡೆಯುತ್ತಿದೆ ಎನ್ನುವ ಆರೋಪಗಳ ಬಗ್ಗೆ ನಿಮ್ಮ ಅನಿಸಿಕೆ ಏನು?

ಜೆ.ಪಿ. ಹೆಗ್ಡೆ: ಪ್ರತೀ ೧೦ ವರ್ಷಕ್ಕೊಮ್ಮೆ ಮೀಸಲಾತಿ ಬಗ್ಗೆ ಪುನರ್ವಿಮರ್ಶೆ ನಡೆಸುವಂತೆ ನಾವೇ ಸರಕಾರಕ್ಕೆ ವರದಿಯೊಂದರಲ್ಲಿ ಹೇಳಿದ್ದೇವೆ. ಮೀಸಲಾತಿಯ ಪುನರ್ವಿಂಗಡಣೆ (ರೀ ಕ್ಲಾಸಿಫೆಕೇಷನ್), ಮರು ವಿಭಾಗೀಕರಣ ವಾಗಬೇಕು ಎಂದು ಹೇಳಿದ್ದೇವೆ. ಈಗ ೨೦ ವರ್ಷ ದಾಟಿದರೂ ಇದು ಆಗಿಲ್ಲ. ಅದಕ್ಕೋಸ್ಕರ ಮೀಸಲಾತಿಯಲ್ಲಿ ಪುನರ್ವಿಂಗಡಣೆಯಾಗಬೇಕೆಂದು ನಾವು ಸರಕಾರಕ್ಕೆ ವರದಿಯಲ್ಲಿ ತಿಳಿಸಿದ್ದೇವೆ. ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿ ಇರುವ ಸಮುದಾಯದಲ್ಲಿ ಯಾರು ಮುಂದುವರಿದಿದ್ದಾರೆ ಅವರನ್ನು ಕೈಬಿಡುವುದು ಹಾಗೂ ಯಾರು ಇನ್ನೂ ಹಿಂದುಳಿದಿದ್ದಾರೆ ಅವರನ್ನು ಮೀಸಲಾತಿಯೊಳಗೆ ತರುವುದು ಆಗಬೇಕು.

ಇದಕ್ಕೆ ಮತ್ತೆ ಸಮೀಕ್ಷೆ ಬೇಕಾಗಲಿಕ್ಕಿಲ್ಲ. ಏಕೆಂದರೆ ಕಾಂತರಾಜು ವರದಿ ೨೦೧೫ರದ್ದು, ಅದರ ಆಧಾರದಲ್ಲಿ ಇದನ್ನು ಮಾಡಬಹುದು. ನಾವು ಈಗ ಆಧರಿಸಿರುವುದು ೨೦೧೧ರ ಜನಗಣತಿ ವರದಿಯನ್ನು. ೨೦೧೫ರ ವರದಿಯಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಇದೆ. ಸರಕಾರ ಈ ವರದಿಯನ್ನು ಒಪ್ಪಿಕೊಂಡರೆ ನಮ್ಮ ಕೆಲಸ ಸುಲಭವಾಗುತ್ತದೆ.

ಮೀಸಲಾತಿಯ ಲಾಭವನ್ನು ಹಿಂದುಳಿದ ವರ್ಗಗಳ ಬಲಾಢ್ಯ ಜಾತಿಗಳು ತಮ್ಮದಾಗಿಸಿಕೊಳ್ಳುತ್ತಿವೆ ಎಂಬ ಟೀಕೆಗಳು ಕೇಳಿಬರುತ್ತಿರುವ ಬಗ್ಗೆ ಏನು ಹೇಳುತ್ತೀರಿ?

ಜೆ.ಪಿ. ಹೆಗ್ಡೆ: ಮೀಸಲಾತಿಯನ್ನು ಪುನರ್ವಿಂಗಡಣೆ ಮಾಡಿದಾಗ, ಹಿಂದುಳಿದ ವರ್ಗದ ಬಲಾಢ್ಯ ಜಾತಿಗಳು ಹೊರಹೋಗುತ್ತವೆ. ಸದ್ಯ ೨೦೧೫ರ ವರದಿ ಆಧಾರದಲ್ಲೇ ಇದನ್ನು ಮಾಡಲು ಸಾಧ್ಯವಿದೆ.

ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸುವ ಬಗ್ಗೆ ನಿಮ್ಮ ಅಭಿಪ್ರಾಯ?

ಜೆ.ಪಿ. ಹೆಗ್ಡೆ: ಅದು ಸರಕಾರಕ್ಕೆ ಬಿಟ್ಟ ವಿಷಯ. ಅದರಲ್ಲಿ ನಮ್ಮ ಪಾತ್ರ ಇರುವುದಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರುವುದನ್ನು ಸರಕಾರವೇ ಮಾಡಬೇಕಾಗುತ್ತದೆ. ಇದರಿಂದ ಬಂಡವಾಳ ಹೂಡಿಕೆ ಹೊರ ಹೋಗುವ ಭಯ ಸರಕಾರಕ್ಕಿರುತ್ತದೆ. ಮೀಸಲಾತಿ ತಂದರೆ ಖಾಸಗಿಯವರು ರಾಜ್ಯ ಬಿಟ್ಟು ಹೊರಗೆ ಬಂಡವಾಳ ಹೂಡಿಕೆ ಶುರುಮಾಡುವ ಆತಂಕ ಇರಬಹುದು.

ರಾಜಕೀಯವಾಗಿ ನಿಮ್ಮ ಮುಂದಿನ ನಡೆ ಏನು?

ಜೆ.ಪಿ. ಹೆಗ್ಡೆ: ಆಯೋಗದ ಅಧ್ಯಕ್ಷನಾಗಿರುವವರೆಗೆ ನಾನು ರಾಜಕೀಯದ ಬಗ್ಗೆ ಚಿಂತಿಸುವುದಿಲ್ಲ, ಚರ್ಚೆ ಮಾಡುವುದಿಲ್ಲ. ವಿಧಾನಸಭಾ ಚುನಾವಣೆಗೆ ಮೊದಲು ಇದೇ ಚರ್ಚೆಯಾಗಿತ್ತು. ನಾನು ಎಲ್ಲೂ ಹೇಳಿಕೆ ನೀಡಿರಲಿಲ್ಲ. ಈ ಆಯೋಗದ ಕೆಲಸ ಮುಗಿದ ಬಳಿಕವಷ್ಟೇ ನಾನು ಮುಂದಿನ ಆಲೋಚನೆ ಮಾಡುತ್ತೇನೆ. ಹೀಗಾಗಿ ನವೆಂಬರ್ ಕೊನೆಯವರೆಗೆ ನಾನು ಆಯೋಗದ ಅಧ್ಯಕ್ಷ ಮಾತ್ರ.

ಹಿಂದುಳಿದ ಆಯೋಗದ ಅಧ್ಯಕ್ಷರಾಗಿ ಅತ್ಯಂತ ಉತ್ಸಾಹದಿಂದ, ಪ್ರಾಮಾಣಿಕತೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಿಮ್ಮನ್ನು ಇನ್ನೊಂದು ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಹೊಸ ಸರಕಾರ ಕೇಳಿದರೆ ನಿಮ್ಮ ಪ್ರತಿಕ್ರಿಯೆ ಏನಿರುತ್ತದೆ?

ಜೆ.ಪಿ. ಹೆಗ್ಡೆ: ಖಂಡಿತ ಮಾಡಲು ಸಿದ್ಧನಿದ್ದೇನೆ. ಇದರಲ್ಲಿ ತುಂಬಾ ಕೆಲಸ ಮಾಡಲು ಅವಕಾಶವಿದೆ. ಬಡವರಿಗೆ, ಹಿಂದುಳಿದವರಿಗೆ ಅನುಕೂಲ ಮಾಡಲು ಅವಕಾಶವಿದೆ. ಆದರೆ ಮುಂದುವರಿಸುವ ಬಗ್ಗೆ ನಾನು ಏನೂ ಪ್ರಯತ್ನ ಮಾಡುವುದಿಲ್ಲ.

ಪ್ರತೀ ೧೦ ವರ್ಷಕ್ಕೊಮ್ಮೆ ಮೀಸಲಾತಿ ಬಗ್ಗೆ ಪುನರ್ವಿಮರ್ಶೆ ನಡೆಸುವಂತೆ ನಾವೇ ಸರಕಾರಕ್ಕೆ ವರದಿಯೊಂದರಲ್ಲಿ ಹೇಳಿದ್ದೇವೆ. ಮೀಸಲಾತಿಯ ಪುನರ್ವಿಂಗಡಣೆ (ರೀ ಕ್ಲಾಸಿಫೆಕೇಷನ್), ಮರು ವಿಭಾಗೀಕರಣ ವಾಗಬೇಕು ಎಂದು ಹೇಳಿದ್ದೇವೆ. ಈಗ ೨೦ ವರ್ಷ ದಾಟಿದರೂ ಇದು ಆಗಿಲ್ಲ. ಅದಕ್ಕೋಸ್ಕರ ಮೀಸಲಾತಿಯಲ್ಲಿ ಪುನರ್ವಿಂಗಡಣೆಯಾಗಬೇಕೆಂದು ನಾವು ಸರಕಾರಕ್ಕೆ ವರದಿಯಲ್ಲಿ ತಿಳಿಸಿದ್ದೇವೆ. ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿ ಇರುವ ಸಮುದಾಯದಲ್ಲಿ ಯಾರು ಮುಂದುವರಿದಿದ್ದಾರೆ ಅವರನ್ನು ಕೈಬಿಡುವುದು ಹಾಗೂ ಯಾರು ಇನ್ನೂ ಹಿಂದುಳಿದಿದ್ದಾರೆ ಅವರನ್ನು ಮೀಸಲಾತಿಯೊಳಗೆ ತರುವುದು ಆಗಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Similar News