ಸಿಂಗಾಪುರ: ಮಹಿಳೆಗೆ ಗಲ್ಲುಶಿಕ್ಷೆ; 20 ವರ್ಷದಲ್ಲೇ ಮೊದಲ ಪ್ರಕರಣ
ಸಿಂಗಾಪುರ: ಮಾದಕ ಪದಾರ್ಥಗಳ ಸಾಗಾಟ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಲಾಗಿರುವ ಇಬ್ಬರನ್ನು(ಓರ್ವ ಮಹಿಳೆ) ಸಿಂಗಾಪುರದಲ್ಲಿ ಈ ವಾರ ಗಲ್ಲಿಗೇರಿಸಲಾಗುವುದು ಎಂದು ಅಧಿಕಾರಿಗಳು ಘೋಷಿಸಿರುವಂತೆಯೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾನವ ಹಕ್ಕುಗಳ ಗುಂಪುಗಳು ಮರಣದಂಡನೆ ಶಿಕ್ಷೆಯನ್ನು ಕೈಬಿಡುವಂತೆ ಆಗ್ರಹಿಸಿವೆ.
ಸಿಂಗಾಪುರದಲ್ಲಿ 2004ರ ಬಳಿಕ ಮಹಿಳೆಯೊಬ್ಬರು ಗಲ್ಲುಶಿಕ್ಷೆಗೆ ಗುರಿಯಾಗಿದ್ದಾರೆ. 45 ವರ್ಷದ ಸರಿದೇವಿ ದಿಜಾಮಣಿ ಎಂಬಾಕೆ ಸುಮಾರು 30 ಗ್ರಾಂನಷ್ಟು ಮಾದಕ ಪದಾರ್ಥವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಬಂಧಿಸಲ್ಪಟ್ಟಿದ್ದು ಈಕೆಗೆ 2018ರಲ್ಲಿ ಮರಣದಂಡನೆ ಶಿಕ್ಷೆ ಘೋಷಿಸಲಾಗಿದೆ.
ಇದೀಗ ಶುಕ್ರವಾರ ಸಿಂಗಾಪುರದ ಚಾಂಗಿ ಜೈಲಿನಲ್ಲಿ ಈಕೆಯನ್ನು ಗಲ್ಲಿಗೇರಿಸಲು ಆದೇಶಿಸಲಾಗಿದೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಅಪರಾಧಿ, 54 ವರ್ಷದ ವ್ಯಕ್ತಿಯನ್ನು ಬುಧವಾರ (ಜು.26) ಗಲ್ಲಿಗೇರಿಸಲಾಗುವುದು . ಇವರಿಬ್ಬರೂ ಸಿಂಗಾಪುರ ಪ್ರಜೆಗಳಾಗಿದ್ದು ಗಲ್ಲುಶಿಕ್ಷೆಯ ದಿನದ ಬಗ್ಗೆ ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ.
ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಆಗ್ರಹಿಸಿದೆ. ಮಾದಕವಸ್ತು ನಿಯಂತ್ರಣದ ಹೆಸರಿನಲ್ಲಿ ಸಿಂಗಾಪುರದ ಅಧಿಕಾರಿಗಳು ಮರಣದಂಡನೆ ಶಿಕ್ಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿಧಿಸುತ್ತಿರುವುದು ಆತ್ಮಸಾಕ್ಷಿಗೆ ವಿರುದ್ಧವಾದ ಕಾರ್ಯವಾಗಿದೆ ಎಂದು ಆ್ಯಮ್ನೆಸ್ಟಿಯ ಅಧಿಕಾರಿ ಚಿಯಾರಾ ಸಂಗಿಯಾರ್ಗಿಯೊ ಹೇಳಿದ್ದಾರೆ.