ಕುಸ್ತಿ ಟ್ರಯಲ್ಸ್: ಒಲಿಂಪಿಯನ್ ರವಿ ದಹಿಯಾಗೆ ಆಘಾತಕಾರಿ ಸೋಲು, ಏಶ್ಯನ್ ಗೇಮ್ಸ್‌ಗೆ ಅನರ್ಹ

Update: 2023-07-23 17:41 GMT

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ರವಿ ದಹಿಯಾ ರವಿವಾರ ಏಶ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ. ಇಂದಿರಾ ಗಾಂಧಿ ಸ್ಟೇಡಿಯಮ್‌ನಲ್ಲಿ 57 ಕೆಜಿ ತೂಕದ ಸ್ಪರ್ಧೆಯಲ್ಲಿ ಹೊಸ ಮುಖ ಅತಿಶ್ ತೋಡ್ಕರ್ ಅಲ್ಲೋಲ ಕಲ್ಲೋಲ ಸೃಷ್ಟಿಸಿ ರವಿಗೆ ಭಾರೀ ನಿರಾಸೆಗೊಳಿಸಿದ್ದಾರೆ.

ತನ್ನ ಪ್ರಚಂಡ ಕೌಶಲ್ಯ ಹಾಗೂ ಸಹಿಷ್ಣುತೆಗಾಗಿ ಮೆಶಿನ್ ಎಂದೇ ಕರೆಯಲ್ಪಡುವ ರವಿ ದಹಿಯಾ ಮಹಾರಾಷ್ಟ್ರದ ಕುಸ್ತಿಪಟು ತೋಡ್ಕರ್‌ರಿಂದ ಅನಿರೀಕ್ಷಿತ ಪ್ರತಿರೋಧ ಎದುರಿಸಿ 8-20 ಅಂತರದಿಂದ ಸೋಲ ನುಭವಿಸಿದರು. ಭಾರತದ ಕುಸ್ತಿಪಟುಗಳಿಗೆ ದಹಿಯಾ ವಿರುದ್ಧ ಎರಡಂಕೆ ಗಳಿಸುವುದು ಅತ್ಯಂತ ದೊಡ್ಡ ಸವಾಲಾಗಿದೆ. ಅವರ ವಿರುದ್ಧ ಜಯ ಸಾಧಿಸುವುದು ಸುಲಭದ ಮಾತಲ್ಲ. ರವಿವಾರದ ಕುಸ್ತಿಯ ಸ್ಪರ್ಧೆಯಲ್ಲಿ ದಹಿಯಾ ವಿರುದ್ಧ ತೋಡ್ಕರ್ 20-8ರಿಂದ ಜಯ ಸಾಧಿಸಿ ದೈತ್ಯ ಸಂಹಾರಿ ಎನಿಸಿದರು.

ತೋಡ್ಕರ್ ಸ್ಪರ್ಧೆಯುದ್ದಕ್ಕೂ ಮೇಲುಗೈ ಸಾಧಿಸಿದ್ದು ಅನಿರೀಕ್ಷಿತ ಸೋಲನ್ನು ಎದುರಿಸಿರುವ ದಹಿಯಾ ಈ ವರ್ಷ ಕಠಿಣ ಸವಾಲನ್ನು ಎದುರಿಸುವಂತಾಗಿದೆ. ಬಲ ಮೊಣಕಾಲುನೋವಿನಿಂದಾಗಿ ದಹಿಯಾ ಈ ವರ್ಷ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ.

ಹದಿಹರೆಯದಲ್ಲೇ ಕುಸ್ತಿ ಸ್ಪರ್ಧೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ದಹಿಯಾ 2015ರಲ್ಲಿ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 55 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News