ಸ್ವಾತಂತ್ರ್ಯ ಸಂಗ್ರಾಮ ಮತ್ತು ಮಂಗಳೂರು ಮುಸ್ಲಿಮರು
ದೇಶದ ಎಲ್ಲೆಡೆಯ ಮುಸ್ಲಿಮರೂ ಸ್ವಾತಂತ್ರ್ಯಕ್ಕಾಗಿ ಬದುಕು ತೇಯ್ದಿದ್ದಾರೆ.ಮುಸ್ಲಿಮರನ್ನು ಸ್ವರಾಜ್ಯ ಚಳವಳಿಯತ್ತ ಸೆಳೆಯುವಲ್ಲಿ ಮುಸ್ಲಿಂ ಉಲಮಾಗಳ ಪಾತ್ರ ದೊಡ್ಡದು.ಅಂತೆಯೇ ಖಿಲಾಫತ್ ಚಳುವಳಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ, ಮಾಪಿಳ ದಂಗೆ, ಕಯ್ಯೂರು ರೈತ ಸಮರ ಮುಂತಾದ ಚಳವಳಿಗಳು 20ನೇ ಶತಮಾನದಲ್ಲಿ ಮುಸ್ಲಿಮರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಚ್ಚೆಚ್ಚು ಸಕ್ರಿಯರಾಗುವಂತೆ ಮಾಡಿತು.
ಮಂಗಳೂರು ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಲು ಮೌಲಾನಾ ಮುಹಮ್ಮದ್ ಅಲೀ ಜೌಹರ್ ಮತ್ತು ಮೌಲಾನಾ ಶೌಕತ್ ಅಲಿಯವರ ಬಂಧನ ಬಹುದೊಡ್ಡ ಕಾರಣವಾಯಿತು ಎಂದು ಇತಿಹಾಸದಿಂದ ತಿಳಿಯಬಹುದು. 1919ರಲ್ಲಿ ಅಲೀ ಸಹೋದರರನ್ನು ಬ್ರಿಟಿಷ್ ಪ್ರಭುತ್ವವು ಜೈಲಿಗಟ್ಟಿದ್ದು ದೇಶದಾದ್ಯಂತ ಸ್ವಾತಂತ್ರ್ಯ ಪ್ರೇಮಿಗಳ ಆಕ್ರೋಶವನ್ನು ಇಮ್ಮಡಿಗೊಳಿಸಿತು. ದೇಶದೆಲ್ಲೆಡೆಯೂ ಅಲೀ ಸಹೋದರರ ಬಂಧನವನ್ನು ವಿರೋಧಿಸಿ ಸ್ವಾತಂತ್ರ್ಯ ಸೇನಾನಿಗಳು ಬೀದಿಗಿಳಿದು ಪ್ರತಿಭಟಿಸಿದರು.
1919ರ ನವೆಂಬರ್ 6ರಂದು ಮಂಗಳೂರಿನ ಗಣಪತಿ ಹೈಸ್ಕೂಲ್ ನಲ್ಲಿ ಮಂಗಳೂರಿನ ಮುಸ್ಲಿಂ ಮುಖಂಡರು ಸಭೆ ಸೇರಿ ಈ ವಿಚಾರವನ್ನು ನಾವು ಕೂಡಾ ಗಂಭೀರವಾಗಿ ಪರಿಗಣಿಸಬೇಕು ಎಂಬ ತೀರ್ಮಾನಕ್ಕೆ ಬಂದರು. ಸಾಹುಕಾರ್ ಅಕ್ಬರ್ ಖಾನ್ ಸಾಹೇಬರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಎಂ.ಉಸ್ಮಾನ್ ಸಾಬ್ ವಕೀಲ್, ಹಾಜಿ ಅಬ್ದುಲ್ಲಾ, ಹಾಜಿ ರಹಿಮಾನ್ ಸಾಹೇಬ್, ಡಿ.ಎಂ.ಜಮಾಲುದ್ದೀನ್ ಸಾಹೇಬ್, ಹಾಜಿ ಅಬ್ದುಸ್ಸತ್ತಾರ್ ಸೇಟ್, ಮೊಕ್ತೇಸರ ಮಾಮು ಬ್ಯಾರಿ, ವಲ್ಲಿ ಹುಸೈನಬ್ಬ, ಅಬ್ದುರ್ರಹ್ಮಾನ್ ಅಫಾನಿ ಸಾಹೇಬ್, ಎಚ್.ಎಂ.ಪುತ್ತೂರು ಸಾಹೇಬ್ ಮುಂತಾದವರು ಭಾಗವಹಿಸಿದ್ದರು. ಉಡುಪಿಯ ಹಾಜಿ ಅಬ್ದುಲ್ಲಾ ಖಾಸಿಂ ಸಾಹೇಬರಿಗೆ ಸಭೆಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ತಮ್ಮ ಬೆಂಬಲ ಸೂಚಿಸಿ ಟೆಲಿಗ್ರಾಂ ಕಳುಹಿಸಿದ್ದರು.
ಬಂಧಿಸಲ್ಪಟ್ಟ ಮುಸ್ಲಿಂ ಮುಖಂಡರಾದ ಅಲೀ ಸಹೋದರರನ್ನು ನಿಶ್ಯರ್ತವಾಗಿ ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಬ್ರಿಟಿಷ್ ಪ್ರಭುತ್ವಕ್ಕೆ ಪತ್ರ ಬರೆಯುವ ನಿರ್ಣಯಕ್ಕೆ ಬರಲಾಯಿತು.
ಮಲಬಾರಿನ ಮಾಪಿಳ ದಂಗೆಯಿಂದ ನಿರಾಶ್ರಿತರಾದ ಕೆಲ ಮುಸ್ಲಿಮರು ಮಂಗಳೂರಿಗೆ ಬಂದು ನೆಲೆಸಿದ್ದರು. ಅವರು ಮಾಪಿಳ ದಂಗೆಯ ಸಂದರ್ಭದಲ್ಲಿ ಬ್ರಿಟಿಷ್ ಪ್ರಭುತ್ವ ತೋರಿದ ಕ್ರೌರ್ಯದ ಕತೆಯನ್ನು ಮಂಗಳೂರು ಮುಸ್ಲಿಮರಿಗೆ ಬಿಡಿಸಿ ಹೇಳಿದರು. ಇದರಿಂದ ಮಂಗಳೂರು ಮುಸ್ಲಿಮರಿಗೆ ಬ್ರಿಟಿಷ್ ಪ್ರಭುತ್ವದ ಮೇಲಿನ ದ್ವೇಷ ಹೆಚ್ಚತೊಡಗಿತು.
ಮಂಗಳೂರಿನ ಕೆಲವು ವಿದ್ಯಾವಂತ ಮುಸ್ಲಿಮರಿಗೆ ಉತ್ತರ ಭಾರತದಿಂದ ಪ್ರಕಟವಾಗುತ್ತಿದ್ದ ಉರ್ದು ಪತ್ರಿಕೆಗಳು ಅಂಚೆಯ ಮೂಲಕ ಬರುತ್ತಿತ್ತು. ಅವುಗಳಲ್ಲಿ ಪ್ರಕಟವಾಗುತ್ತಿದ್ದ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ವರದಿಗಳು, ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ವಾರ್ತೆಗಳು, ಖಿಲಾಫತ್ ಚಳುವಳಿಯ ಆಗು ಹೋಗುಗಳು ಮಂಗಳೂರಿನ ವಿದ್ಯಾವಂತ ಮುಸ್ಲಿಮರಲ್ಲಿ ಸ್ವಾತಂತ್ರ್ಯದ ವಾಂಛೆ ಹೆಚ್ಚಿಸಿತು.ಅವರು ಇಲ್ಲಿನ ಯುವಕರಿಗೆ ತಾವು ಓದಿ ಅರಿತ ವಿಚಾರಗಳನ್ನು ಮನದಟ್ಟು ಮಾಡಿಕೊಟ್ಟದ್ದರಿಂದ ಇಲ್ಲಿನ ಮುಸ್ಲಿಂ ಯುವಕರು ಸ್ವಾತಂತ್ರ್ಯ ಚಳವಳಿಯತ್ತ ಆಕರ್ಷಿತರಾದರು.
1920ರ ಅಗಸ್ಟ್ ತಿಂಗಳಲ್ಲಿ ಸ್ವರಾಜ್ಯ ಪರ ಸಭೆಯೊಂದನ್ನು ಮಂಗಳೂರು ನಗರದಲ್ಲಿ ನಡೆಸುವುದೆಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ಧರಿಸಿತು. ಅದಕ್ಕೆ ಗಾಂಧೀಜಿ ಮತ್ತು ಶೌಕತ್ ಅಲಿಯವರನ್ನು ಮಂಗಳೂರಿಗೆ ಕಳುಹಿಸುವುದಾಗಿ ತೀರ್ಮಾನಿಸಿತು. ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಕಾರ್ನಾಡ್ ಸದಾಶಿವರಾಯರು ಗಾಂಧೀಜಿ ಮತ್ತು ಶೌಕತ್ ಅಲಿಯವರ ಸಭೆಯನ್ನು ನಡೆಸಲು ಹಿಂದೂ ಮುಸ್ಲಿಂ ಎರಡೂ ಸಮುದಾಯಗಳ ಮುಖಂಡರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಿದರು.ಸ್ವಾಗತ ಸಮಿತಿಗೆ ಉಡುಪಿಯ ಅಬ್ದುಲ್ಲಾ ಹಾಜಿಯವರನ್ನು ಅಧ್ಯಕ್ಷರನ್ನಾಗಿಯೂ, ಎಂ.ಮಾಧವ ರಾವ್ ಅವರನ್ನು ಕಾರ್ಯದರ್ಶಿಯನ್ನಾಗಿಯೂ ನೇಮಿಸಲಾಗಿತ್ತು. ಸದ್ರಿ ಸಮಿತಿಯಲ್ಲಿ ಪುತ್ತೂರು ಹುಸೇನ್ ಸಾಹೇಬರಂತಹ ಮುಸ್ಲಿಂ ಗಣ್ಯರೂ ಇದ್ದರು.
ಗಾಂಧೀಜಿ, ಶೌಕತ್ ಅಲಿಯವರೊಂದಿಗೆ ಗಾಂಧೀಜಿಯವರ ಪತ್ನಿ ಕಸ್ತೂರ್ಬಾ ಗಾಂಧಿ, ಶೌಕತ್ ಅಲಿಯವರ ಮಾತೆ ಬೀ ಅಮ್ಮಾ ಮತ್ತು ಶೌಕತ್ ಅಲಿಯವರ ಇನ್ನೊಬ್ಬ ಸಹೋದರರೂ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂದಿಳಿದಾಗ ರೈಲ್ವೆ ನಿಲ್ದಾಣದಲ್ಲಿ ಜನ ಸಾಗರವೇ ನೆರೆದಿತ್ತು. ಗಾಂಧೀಜಿ ಮತ್ತು ಶೌಕತ್ ಅಲಿಯವರನ್ನು ಕಂಡಾಗ ಜನ ಆನಂದ ತುಂದಿಲರಾಗಿ ಮಹಾತ್ಮಾ ಗಾಂಧೀಜಿ ಕಿ ಜೈ, ಶೌಕತ್ ಅಲೀ ಕಿ ಜೈ ಎಂಬ ಘೋಷಣೆಯನ್ನು ಕೂಗತೊಡಗಿದರು.
ಸ್ವರಾಜ್ಯ ಸಭೆಯಲ್ಲಿ ಭಾಗವಹಿಸಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಿಂದ (ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು) ಜನ ಬಂದಿದ್ದರು. ರಾಷ್ಟ್ರ ನಾಯಕರನ್ನೊಳಗೊಂಡ ಮೆರವಣಿಗೆ ಹಂಪನಕಟ್ಟೆಯ ಶರವು ದೇವಸ್ಥಾನ ರಸ್ತೆ, ಕಾರ್‌ಸ್ಟ್ರೀಟ್, ಜವಳಿ ಪೇಟೆ (ಭಟ್ಕಳ್ ಬಜಾರ್), ಝೀನತ್ ಬಕ್ಷ್ ಮಸೀದಿ ರಸ್ತೆಯಲ್ಲೆಲ್ಲಾ ಸಂಚರಿಸಿ ಬಂದರಿನ ವರ್ತಕ ವಿಲಾಸ ಕಟ್ಟಡ ತಲುಪಿತು. ರಾಷ್ಟ್ರ ನಾಯಕರು ಅಲ್ಲಿ ಸ್ವಲ್ಪ ಹೊತ್ತು ತಂಗಿದರು. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲೂ ಜನ ನಿಂತು ರಾಷ್ಟ್ರೀಯ ನಾಯಕರಾದ ಗಾಂಧೀಜಿ ಮತ್ತು ಶೌಕತ್ ಅಲಿಯವರಿಗೆ ಜಯಘೋಷ ಮೊಳಗಿಸುತ್ತಿದ್ದರು.
ಮಂಗಳೂರಿನ ಸೆಂಟ್ರಲ್ ಮೈದಾನದಲ್ಲಿ ( ಈಗಿನ ನೆಹರೂ ಮೈದಾನ) ಗಾಂಧೀಜಿ ಮತ್ತು ಶೌಕತ್ ಅಲಿಯವರ ಭಾಷಣಕ್ಕೆ ಏರ್ಪಾಡು ಮಾಡಲಾಗಿತ್ತು. ಗಾಂಧೀಜಿ ಮತ್ತು ಶೌಕತ್ ಅಲೀ ಇಬ್ಬರೂ ಕೂಡಾ ಸ್ವಾತಂತ್ರ್ಯ ಪ್ರಾಪ್ತಿಯಲ್ಲಿ ಹಿಂದೂ- ಮುಸ್ಲಿಂ ಐಕ್ಯದ ಕುರಿತಂತೆ ಬಲವಾಗಿ ಪ್ರತಿಪಾದಿಸಿದರು. ಸ್ವಾತಂತ್ರ್ಯದ ಅಗತ್ಯ ಮತ್ತು ಹೇಗೆ ಜನತೆ ಹೋರಾಟದಲ್ಲಿ ತೊಡಗಿಸಬೇಕೆಂದು ಮಾತನಾಡಿದರು. ಗಾಂಧೀಜಿ ಮತ್ತು ಶೌಕತ್ ಅಲಿಯವರ ಭಾಷಣವನ್ನು ಕ್ರಮವಾಗಿ ಕರಡಿ ಸುಬ್ಬರಾವ್ ಮತ್ತು ವಿ.ಎಸ್.ಕಾಮತ್ ಕನ್ನಡಕ್ಕೆ ಭಾಷಾಂತರಿಸಿದರು. ಗಾಂಧೀಜಿ ಭಾಷಣ ಮಾಡುತ್ತಿದ್ದಾಗ ಮುಸ್ಸಂಜೆಯ ಮಗ್ರಿಬ್ ಅ ಝಾನ್ ನ ಸಮಯವಾಯಿತು. ಗಾಂಧೀಜಿ ತನ್ನ ಭಾಷಣಕ್ಕೆ ತುಸು ಹೊತ್ತು ವಿರಾಮ ಹಾಕಿ ಮುಸ್ಲಿಮರಿಗೆ ನಮಾಜು ನಿರ್ವಹಿಸಲು ಅನುವು ಮಾಡಿಕೊಟ್ಟರು. ಸೇರಿದ್ದ ಮುಸ್ಲಿಮರೆಲ್ಲಾ ಮೈದಾನದಲ್ಲೇ ನಮಾಜು ನಿರ್ವಹಿಸಿದ ಬಳಿಕ ಗಾಂಧೀಜಿ ಮತ್ತೆ ತನ್ನ ಭಾಷಣ ಮುಂದುವರಿಸಿದರು. ಗಾಂಧೀಜಿಯವರ ಬಳಿಕ ಶೌಕತ್ ಅಲಿಯವರು ಭಾಷಣ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಉಡುಪಿಯ ಅಬ್ದುಲ್ಲಾ ಹಾಜಿಯವರು ವಹಿಸಿದ್ದರು.
ಗಾಂಧೀಜಿಯವರ ತಂಡದೊಂದಿಗೆ ಬಂದಿದ್ದ ಶೌಕತ್ ಅಲಿಯವರ ಮಾತೆ ಬೀ ಅಮ್ಮಾರವರು ಮುಸ್ಲಿಂ ಮಹಿಳೆಯರ ಸಭೆಯನ್ನು ನಡೆಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಮಹಿಳೆಯರು ಹೇಗೆಲ್ಲಾ ಭಾಗವಹಿಸಬಹುದೆಂದು ತಿಳಿ ಹೇಳಿದರು. ಸ್ವತಃ ಖಾದಿಧಾರಿಯಾಗಿದ್ದ ಬೀ ಅಮ್ಮಾ ಖಾದಿಯ ಮಹತ್ವದ ಕುರಿತಂತೆಯೂ ವಿವರಿಸಿದರು.
ಬೀ ಅಮ್ಮಾರ ಮಾತುಗಳಿಂದ ಪ್ರಭಾವಿತರಾಗಿ ಮುಸ್ಲಿಂ ಮಹಿಳೆಯರೂ ಖಾದಿಗೆ ಮಹತ್ವ ಕೊಟ್ಟರು. ಉಡುಪಿಯ ಚಾಂದ್ ಬೀಬಿ ಎಂಬ ಮಹಿಳೆ ಗಾಂಧೀಜಿ ಮತ್ತು ಬೀ ಅಮ್ಮಾರನ್ನು ಕಂಡ ಬಳಿಕ ತನ್ನ ಜೀವನಪೂರ್ತಿ ಖಾದಿ ವಸ್ತ್ರವನ್ನು ಮಾತ್ರ ಧರಿಸಲು ತೀರ್ಮಾನಿಸಿ ಸ್ವತಃ ಖಾದಿ ಬಟ್ಟೆ ನೂಲತೊಡಗಿದರು. ತನ್ನ ನಮಾಝಿನ ಉಡುಪಾದ ಕಮೀಸನ್ನು ಕೂಡಾ ಖಾದಿ ಬಟ್ಟೆಯಿಂದಲೇ ತಯಾರಿಸಿ ಬಳಸುತ್ತಿದ್ದರು.ಅವರು ತನ್ನ ಮೃತದೇಹ ಮುಚ್ಚಲು ಬಳಸುವ ಕಫನ್ ಬಟ್ಟೆಯೂ ಖಾದಿಯದ್ದೇ ಆಗಬೇಕೆಂದು ತನ್ನ ಮಕ್ಕಳಲ್ಲಿ ವಸಿಯ್ಯತ್ (ಉಯಿಲು)ಮಾಡಿದ್ದರು. 1957ರಲ್ಲಿ ಚಾಂದ್ ಬೀಬಿ ಮೃತರಾದಾಗ ಅವರ ಇಚ್ಚೆಯಂತೆಯೇ ಅವರ ಮೃತದೇಹಕ್ಕೆ ಖಾದಿಯ ಕಫನ್ ಬಟ್ಟೆಯನ್ನು ಹೊದಿಸಲಾಯಿತು.
ಗಾಂಧೀಜಿ, ಶೌಕತ್ ಅಲಿಯವರ ಭೇಟಿಯ ಬಳಿಕ ಮಂಗಳೂರಿನ ಖಿಲಾಫತ್ ಸಮಿತಿ ಬಲಿಷ್ಟವಾಯಿತು. ಮಂಗಳೂರು ಬಂದರ್‌ನ ಕಚ್ ಮೇಮನ್ ಮಸೀದಿಯ ಕಬರ್‌ಸ್ತಾನದ ಬಳಿ ಹಕೀಮ್ ಅಬ್ದುಲ್ಲಾ ಸಾಹೇಬರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿಕಾರರ ಗುಪ್ತ ಸಭೆ ನಡೆಯಿತು. ಆ ಗುಪ್ತ ಸಭೆಯಲ್ಲಿ ಕಾರ್ನಾಡ್ ಸದಾಶಿವರಾಯರು ಭಾಗವಹಿಸಿ ಮಾರ್ಗದರ್ಶನ ನೀಡಿದರು.
1916ರಲ್ಲಿ ಆರಂಭವಾದ ಮಂಗಳೂರಿನ ಇಸ್ಲಾಮಿಕ್ ಕ್ಲಬ್ ಸ್ವಾತಂತ್ರ್ಯ ಚಳುವಳಿಗೆ ಹಲವಾರು ಮುಸ್ಲಿಂ ಹೋರಾಟಗಾರರನ್ನು ಅರ್ಪಿಸಿತು. ಅದೊಂದು ಶುಕ್ರವಾರ ರಾಷ್ಟ್ರೀಯ ಖಿಲಾಫತ್ ಸಮಿತಿ ದೇಶದಾದ್ಯಂತ ಖಿಲಾಫತ್ ದಿನಾಚರಣೆ ಆಚರಿಸಲು ಕರೆ ಕೊಟ್ಟಿತು. ಮಂಗಳೂರು ನಗರದಲ್ಲಿ ಇಸ್ಲಾಮಿಕ್ ಕ್ಲಬ್ ವತಿಯಿಂದ ಕ್ಲಬ್‌ನ ವಠಾರದಲ್ಲಿ ಖಿಲಾಫತ್ ದಿನಾಚರಣೆ ನಡೆಯಿತು. ಖಿಲಾಫತ್ ದಿನಾಚರಣೆಯಲ್ಲಿ ಎರಡು ಸಾವಿರ ಮಂದಿ ಮುಸ್ಲಿಮರು ಭಾಗವಹಿಸಿದ್ದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಮಂಗಳೂರಿನ ಸಹಸ್ರಾರು ಯುವಕರು ಸ್ವಯಂಸೇವಕರಾಗಿ ಭಾಗವಹಿಸಿ ಪೋಲೀಸರಿಂದ ದೌರ್ಜನ್ಯವನ್ನು ಎದುರಿಸಿದ್ದರು. ಪುತ್ತೂರು ಹುಸೇನ್ ಸಾಹೇಬ್, ಡಾ.ಎಫ್.ಎಚ್.ಒಡೆಯರ್, ಹಕೀಮ್ ಅಬ್ದುಲ್ಲಾ ಸಾಹೇಬ್, ಎಂ.ಅಬ್ದುಲ್ ಖಾದರ್ ಉಡುಪಿ, ಡಿ.ಎಂ.ಜಮಾಲುದ್ದೀನ್ ಸಾಹೇಬ್ ಡೊಂಗರಕೇರಿ, ಡಾ.ಎಂ.ಜಿ.ಹೈದರ್, ಶೇಕ್ ಫರೀದ್ ಸಾಹೇಬ್, ಅಬ್ದುಲ್ ಖಾದರ್ ಅಸ್ಸಾದಿ, ಡಾ.ಎಮ್.ಎ.ಪಾಶಾ, ಡಾ.ಗೌಸ್, ಡಿ.ಎಂ.ಫಝಲುಲ್ಲಾ, ಅಬ್ದುಲ್ ರಹ್ಮಾನ್ ಶೇಖ್, ಅಬೂಬಕರ್ ಬ್ಯಾರಿ ಸುಳ್ಯ, ಹಳ್ಯಾರ ಇಬ್ರಾಹಿಂ ಹಾಜಿ, ಬೊಳ್ಳಾಡಿ ಇಬ್ರಾಹಿಂ ಹಾಜಿ, ಎಂ.ಎಚ್.ಕೊಳ್ನಾಡ್, ಮುನ್ನಾ ಸಾಹೇಬ್ ಉಡುಪಿ ಮುಂತಾದವರು ಜಿಲ್ಲೆಯ ಸ್ವಾತಂತ್ರ್ಯ ಚಳವಳಿಗೆ ನೇತೃತ್ವ ಕೊಟ್ಟ ಕೆಲ ಪ್ರಮುಖ ಮುಸ್ಲಿಂ ನಾಯಕರಾಗಿದ್ದರು.
ಜಿಲ್ಲೆಯ ಪ್ರಮುಖ ಮುಸ್ಲಿಂ ಸಂಘ ಸಂಸ್ಥೆಗಳು ಸ್ವಾತಂತ್ರ್ಯ ಚಳವಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದೆ. ಉಳ್ಳಾಲದ ಹಯಾತುಲ್ ಇಸ್ಲಾಂ ಸಂಘ, ಮಂಗಳೂರಿನ ಇಸ್ಲಾಮಿಕ್ ಕ್ಲಬ್, ಮುನೀರುಲ್ ಇಸ್ಲಾಮ್ ಸಂಘ , ಇತ್ತಿಹಾದುಲ್ ಇಸ್ಲಾಮ್ ಸಂಘ, ಕ್ರೆಸೆಂಟ್ ಕ್ಲಬ್, ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್, ಮಜ್ಲಿಸ್ ನವಾನಿಹಾಲ್, ಅಂಜುಮನ್ ಖಾದಿಮುಲ್ ಮುಸ್ಲಿಮೀನ್, ಮಜ್ಲಿಸೆ ತಂಜೀಮ್ ಮುಂತಾದ ಸಂಘ ಸಂಸ್ಥೆಗಳು ತಂತಮ್ಮ ವ್ಯಾಪ್ತಿಯಲ್ಲಿ ಚಳವಳಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿತ್ತು.
.....................
ಆಕರ :
1.ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು: ಸೂರ್ಯನಾಥ ಕಾಮತ್
2.ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯ ಹೋರಾಟ: ಪಿ.ಕೆ.ನಾರಾಯಣ
3.ತುಳುನಾಡಿನ ಮುಸ್ಲಿಮರು: ಡಾ.ವಹಾಬ್ ದೊಡ್ಡಮನೆ