ಮಾದರಿ ಸಮಗ್ರ ಕೃಷಿಯ ಅರೆತಿಪ್ಪೂರಿನ ಕುಟುಂಬ
ಮಂಡ್ಯ: ಮದ್ದೂರು ತಾಲೂಕು ಅರೆತಿಪ್ಪೂರು ಗ್ರಾಮದ ಎ.ಎಂ.ಪುಟ್ಟಸ್ವಾಮಿ ಅವರ ಕುಟುಂಬ ಸಮಗ್ರ ಕೃಷಿ ಪದ್ಧತಿಯಲ್ಲಿ ಸಾಧನೆ ಮಾಡುವುದರೊಂದಿಗೆ, ಎತ್ತಿನ ಗಾಣದ ಮೂಲಕ ವಿವಿಧ ಧಾನ್ಯಗಳ ಅಡುಗೆ ಎಣ್ಣೆ ತಯಾರಿಸಿ ಲಕ್ಷಾಂತರ ರೂ. ಆದಾಯ ಪಡೆಯುತ್ತಿದ್ದಾರೆ. ಇವರ ಬೇಸಾಯ ವೀಕ್ಷಣೆಗೆ ರಾಜ್ಯದ ವಿವಿಧ ಕಡೆಯಿಂದ ರೈತರು ಬರುತ್ತಿದ್ದಾರೆ.
ಪುಟ್ಟಸ್ವಾಮಿ ಕುಟುಂಬಕ್ಕೆ 15 ಎಕರೆ ಜಮೀನು ಇದೆ. ಇದರಲ್ಲಿ 2 ಎಕರೆಯಲ್ಲಿ ಭತ್ತ, 2 ಎಕರೆಯಲ್ಲಿ ರಾಗಿ, 5 ಎಕರೆ ಪ್ರದೇಶದಲ್ಲಿ ಬೇಬಿಕಾರ್ನ್ (ಜೋಳ), 1 ಎಕರೆಯಲ್ಲಿ ರೇಷ್ಮೆ ಬೆಳೆದಿದ್ದಾರೆ. 300 ತೆಂಗಿನ ಮರ, 150 ತೇಗ, 70 ಹೆಬ್ಬೇವು, 60 ರಕ್ತ ಚಂದನ ಮರ ಗಳನ್ನು ಬೆಳೆಸಿದ್ದಾರೆ. ಮನೆಗೆ ಬೇಕಾದ ತರಕಾರಿ ಗಿಡಗಳು ಇವೆ.
ಜತೆಗೆ, ಎಮ್ಮೆ, ಹಸು, ಸಾಕಣೆಯಿಂದ ಹೈನುಗಾರಿಕೆ ಮಾಡುತ್ತಿದ್ದಾರೆ. 4 ಹಳ್ಳಿಕಾರ್, 2 ಅಮೃತ್‌ಮಹಲ್, 2 ಗಿರ್ ತಳಿ ಹಸುಗಳನ್ನು ಸಾಕಿದ್ದಾರೆ. ಇವುಗಳ ಮೇವಿಗಾಗಿ 5 ಎಕರೆ ಪ್ರದೇಶ ದಲ್ಲಿ ಜೋಳ, ಮೇವಿನ ಹುಲ್ಲು ಬೆಳೆಯುತ್ತಿದ್ದಾರೆ. ಕುರಿ, ಆಡು, ನಾಟಿ ಕೋಳಿಗಳನ್ನೂ ಸಾಕಿದ್ದಾರೆ. ಸಾಕಷ್ಟು ಕೊಟ್ಟಿಗೆ ಗೊಬ್ಬರ ದೊರೆಯುತ್ತಿರುವುದರಿಂದ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿಲ್ಲ. ಮೂರು ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಪೂರೈಕೆಯಾಗುತ್ತಿದೆ.
ಪುಟ್ಟಸ್ವಾಮಿ ಎಸೆಸೆಲ್ಸಿವರೆಗೆ ಮಾತ್ರ ಓದಿದ್ದು, ಚಿಕ್ಕವಯಸ್ಸಿನಿಂದಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಇವರ ಕುಟುಂಬದಲ್ಲಿ ಪುಟ್ಟಮ್ಮ, ಶಶಿಕಲಾ, ವೆಂಕಟೇಶ್, ಅನಿತಾ ಸೇರಿದಂತೆ 12 ಮಂದಿ ಇದ್ದಾರೆ. ಎಲ್ಲರೂ ಕೃಷಿಯಲ್ಲಿ ಕೈಜೋಡಿಸುತ್ತಿರುವುದರಿಂದ ಆಳುಗಳ ಅಗತ್ಯ ಬರುವುದಿಲ್ಲವಂತೆ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಪುಟ್ಟಸ್ವಾಮಿ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಗ್ರಾಮಸ್ಥರ ಜತೆಗೂಡಿ ಗ್ರಾಮದಲ್ಲಿರುವ ಐತಿಹಾಸಿಕ ಜೈನ ಬಸದಿಗಳ ರಕ್ಷಣೆಗೆ ಮುಂದಾಗಿದ್ದಾರೆ.
ಅಂತರ್‌ಜಿಲ್ಲಾ ರೈತ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟ್ಟಸ್ವಾಮಿ ಅವರು, ಮಾಗಡಿ ಸಮೀಪ ಎಣ್ಣೆಗಾಣ ಘಟಕ ವೀಕ್ಷಿಸಿ, ಮಾಹಿತಿ ಪಡೆದು ಪ್ರೇರಿತರಾಗಿ ಆತ್ಮಯೋಜನೆಯಡಿ ಮದ್ದೂರು ತಾಲೂಕಿನಲ್ಲಿ ಪ್ರಥಮವಾಗಿ ಸಾಂಪ್ರದಾಯಿಕ ಮರದ ಎಣ್ಣೆಗಾಣ ಘಟಕ ತೆರೆದರು. ಗುಣಮಟ್ಟದ ಅಡುಗೆ ಎಣ್ಣೆಯನ್ನು ಗ್ರಾಹಕರಿಗೆ ಪೂರೈಕೆ ಮಾಡುತ್ತಾ ಮಾದರಿಯಾಗಿದ್ದಾರೆ. ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಒದಗಿಸಿಕೊಡಲಾಗುತ್ತಿದೆ.
-ಎಚ್.ಜೆ.ಪ್ರತಿಭಾ, ಸಹಾಯಕ ಕೃಷಿ ನಿರ್ದೇಶಕಿ, ಮದ್ದೂರು
ಗಾಣದ ಎಣ್ಣೆಗೆ ಬಹು ಬೇಡಿಕೆ
ಪುಟ್ಟಸ್ವಾಮಿ ಅವರು ಗಾಣದಲ್ಲಿ ಕಡ್ಲೆಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಹುಚ್ಚೆಳ್ಳು ಎಣ್ಣೆ, ಸೂರ್ಯಕಾಂತಿ, ಕಪ್ಪು ಎಳ್ಳಿನ ಎಣ್ಣೆ ಸೇರಿದಂತೆ ವಿವಿಧ ಬಗೆಯ ಅಡುಗೆ ಎಣ್ಣೆಗಳನ್ನು ತಯಾರು ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಮರದಿಂದ ನಿರ್ಮಾಣ ಮಾಡಿದ ಗಾಣದಲ್ಲಿ ಎಣ್ಣೆ ತಯಾರಿಸುವುದು ವಿಶೇಷವಾಗಿದೆ. ಈ ಎಣ್ಣೆಗಳಿಗೆ ಯಾವುದೇ ರೀತಿುಂ ಕೆಮಿಕಲ್ ಬಳಸುವುದಿಲ್ಲ. ಆದ್ದರಿಂದ ಸುಮಾರು 5ರಿಂದ 6 ತಿಂಗಳವರೆಗೆ ಎಣ್ಣೆ ತಾಜಾ ಇರುತ್ತದೆ. ಕೊಬ್ಬರಿ ಎಣ್ಣೆಗೆ ಇವರೇ ಬೆಳೆದಿರುವ ತೆಂಗಿನ ಫಸಲು (ಕೊಬ್ಬರಿ) ಬಳಸುತ್ತಾರೆ. ಕಡ್ಲೆಕಾಯಿ ಎಣ್ಣೆಗೆ ಆಂಧ್ರಪ್ರದೇಶದ ಕಾಳಹಸ್ತಿ ರೈತರಿಂದ ನೇರವಾಗಿ ಕಡ್ಲೆಕಾಯಿ ತರಿಸಿ ಕೊಳ್ಳುತ್ತಾರೆ. ಉಳಿದಂತೆ ಹುಚ್ಚೆಳ್ಳು, ಕಪ್ಪು ಎಳ್ಳು, ಸೂರ್ಯಕಾಂತಿಯನ್ನು ರೈತರಿಂದಲೇ ಖರೀದಿ ಮಾಡಿ ಗಾಣಕ್ಕೆ ಬಳಸಿ ತೈಲ ತಯಾರು ಮಾಡುತ್ತಾರೆ. ಪುಟ್ಟಸ್ವಾಮಿ ಕುಟುಂಬ ತಯಾರಿಸುವ ಅಡುಗೆ ಎಣ್ಣೆಗೆ ಅಧಿಕ ಬೇಡಿಕೆ ಇದೆ. ಸುತ್ತಮುತ್ತಲ ಗ್ರಾಮಸ್ಥರು ಅಲ್ಲಿಗೆ ಬಂದು ಖರೀದಿಸುತ್ತಾರೆ. ಉಳಿದ ಎಣ್ಣೆಯನ್ನು ಬೆಂಗಳೂರು ನಗರಕ್ಕೆ ಹೋಂ ಡೆಲಿವರಿ ಕೊಡುತ್ತಾರೆ. ಮಂಡ್ಯಕ್ಕೂ ತಂದು ಮಾರುತ್ತಾರೆ. ಇದಲ್ಲದೆ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಸೇರಿದಂತೆ ಇತರ ರಾಜ್ಯಗಳಿಗೂ ಕಳುಹಿಸಿಕೊಡುತ್ತಾರೆ.