ಸೋಲಿಗರ ಹಾಡಿಯ ಹುಡುಗಿ ಪಿಎಚ್.ಡಿ. ಪದವಿ ಪಡೆದ ಕಥೆ
ಕನ್ನಡ ವಿವಿಗೆ ಪಿಎಚ್.ಡಿ. ಅಧ್ಯಯನಕ್ಕೆ ಬಂದ ರತ್ನಮ್ಮನ ಪಯಣ ಸುಲಭದ್ದಲ್ಲ. ಬಹಳ ಕಠಿಣ ದಾರಿಯನ್ನು ಹಾಯ್ದು ಬಂದಿದ್ದಾರೆ. ರತ್ನಮ್ಮನ ಬದುಕಿನ ಕತೆಯನ್ನು ಕೇಳುತ್ತಾ ಕೂತರೆ ಸೋಲಿಗ ಬುಡಕಟ್ಟಿನ ಕತೆಯೇ ತೆರೆದುಕೊಳ್ಳುತ್ತದೆ. ಹುಟ್ಟುಕುರುಡರಾಗಿದ್ದ ತಂದೆ ಶಂಕ್ರಯ್ಯ ಮಗಳಿಗೆ ಅಕ್ಷರದ ಬೆಳಕನ್ನು ಕೊಡಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.
ನನ್ನ ಪಿಎಚ್.ಡಿ. ಸಂಶೋಧನೆ ಮುಗಿಸಿ ಉದ್ಯೋಗ ಹುಡುಕುವ ಸಂದರ್ಭದಲ್ಲಿ ಜನಪದ ಸಾಹಿತ್ಯದಲ್ಲಿ ಜೆಆರ್‌ಎಫ್ ಪಾಸಾದೆ. ಜೆಆರ್‌ಎಫ್‌ಗೆ ಸಿಗುವ ಫೆಲೋಶಿಪ್‌ನಷ್ಟು ನನಗೆ ಹೊರಗಡೆ ಯಾವುದೇ ತಾತ್ಕಾಲಿಕ ಉದ್ಯೋಗ ಮಾಡಿದರೂ ಸಿಗುತ್ತಿರಲಿಲ್ಲ. ಹಾಗಾಗಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ‘ಬುಡಕಟ್ಟು ಮಹಿಳೆಯ ದಮನ ಮತ್ತು ಸಂಘರ್ಷ’ ಎನ್ನುವ ವಿಷಯದ ಕುರಿತು ಎರಡನೇ ಪಿಎಚ್.ಡಿ.ಗೆ ನೋಂದಾಯಿಸಿದೆ. ಕೋರ್ಸ್ ವರ್ಕ್‌ನ ತರಗತಿಗಳು ಶುರುವಾಯಿತು. ಆಗ ನನ್ನ ಜತೆ ಪಿಎಚ್.ಡಿ.ಗೆ ನೋಂದಾಯಿಸಿದವರು ಸೋಲಿಗರ ಹಾಡಿಯ ರತ್ನಮ್ಮ. ಅವರು ಅಂದು ತರಗತಿಯಲ್ಲಿ ಮಾತನಾಡುತ್ತಾ ‘‘ಸೋಲಿಗರ ಬಗ್ಗೆ ನಡೆದ ಸಂಶೋಧನಾ ಪ್ರಬಂಧಗಳನ್ನು ಓದಿ ನಾನು ಅತ್ತುಬಿಟ್ಟೆ ಸರ್’’ ಎಂದರು. ನನಗೆ ಅಚ್ಚರಿಯಾಯಿತು. ‘‘ನಿಮ್ಮ ಸಮುದಾಯದ ಅಧ್ಯಯನ ನೋಡಿ ಖುಷಿ ಪಡಬೇಕಲ್ಲವೇ ಯಾಕೆ ಅಳು ಬಂತು?’’ ಎಂದು ಕೇಳಿದೆ. ಅದಕ್ಕೆ ರತ್ನಮ್ಮ ಕೊಟ್ಟ ಉತ್ತರ ಬುಡಕಟ್ಟುಗಳ ಕುರಿತ ಅಕಾಡಮಿಕ್ ಸಂಶೋಧನೆಗಳ ಮಿತಿಗಳನ್ನು ಡಾಳಾಗಿ ತೋರಿತು. ‘‘ನಮ್ಮ ಸೋಲಿಗರ ಬಗ್ಗೆ ಏನೇನೋ ಬರೆದಿದ್ದಾರೆ ಸರ್, ತಪ್ಪು ತಪ್ಪನ್ನೆಲ್ಲಾ ಬರೆದಿದಾರೆ. ಇಂಥದ್ದಕ್ಕೆಲ್ಲಾ ಅದೆಂಗೆ ಪಿಎಚ್.ಡಿ. ಕೊಟ್ರು ಸರ್?’’ ಎಂದು ಕೇಳಿದರು. ನನಗೆ ಇದಕ್ಕೆ ಉತ್ತರಿಸಲಾಗಲಿಲ್ಲ. ಬುಡಕಟ್ಟು ಸಂಶೋಧನೆಗಳ ಬಗ್ಗೆ ಅದೇ ಬುಡಕಟ್ಟುಗಳ ಪ್ರತಿಕ್ರಿಯೆ ಹೆಚ್ಚುಕಡಿಮೆ ಹೀಗೆ ಇರಬಹುದು ಅನ್ನಿಸಿತು. ಇದು ಬುಡಕಟ್ಟು ಸಂಶೋಧನೆಯ ನೈಜ ವಿಮರ್ಶೆ ಅನ್ನಿಸತೊಡಗಿತು.
ಆ ನಂತರ ನಾನು ರತ್ನಮ್ಮನ ಹತ್ತಿರ ಸೋಲಿಗ ಬುಡಕಟ್ಟಿನ ಬಗ್ಗೆ ಕತೆಗಳನ್ನು ವಾಸ್ತವವನ್ನು ಕೇಳಿ ತಿಳಿದುಕೊಳ್ಳತೊಡಗಿದೆ. ಆರು ತಿಂಗಳು ಹೀಗೆ ಕೋರ್ಸ್ ವರ್ಕ್ ತರಬೇತಿಯಲ್ಲಿ ಜತೆಯಲ್ಲೇ ಸಂಶೋಧನೆಯ ಬಗ್ಗೆ ಚರ್ಚೆ ಸಂವಾದ ಮಾಡತೊಡಗಿದೆವು. ಇದೇ ಸಂದರ್ಭಕ್ಕೆ ನಾನು ಪೋಸ್ಟ್ ಡಾಕ್ಟರಲ್ ಫೆಲೋಶಿಪ್‌ಗೆ ಆಯ್ಕೆಯಾದ ಕಾರಣ ನಾನು ಪಿಎಚ್.ಡಿ.ಯ ನೊಂದಣಿಯನ್ನು ರದ್ದು ಮಾಡಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್‌ಗೆ ಸೇರಿಕೊಂಡೆ. ಇದು ಸೋಲಿಗ ಸಮುದಾಯದ ರತ್ನಮ್ಮ ನನಗೆ ಪರಿಚಯವಾದ ಬಗೆ.
ಹೀಗೆ ಕನ್ನಡ ವಿವಿಗೆ ಪಿಎಚ್.ಡಿ. ಅಧ್ಯಯನಕ್ಕೆ ಬಂದ ರತ್ನಮ್ಮನ ಪಯಣ ಸುಲಭದ್ದಲ್ಲ. ಬಹಳ ಕಠಿಣ ದಾರಿಯನ್ನು ಹಾಯ್ದು ಬಂದಿದ್ದಾರೆ. ರತ್ನಮ್ಮನ ಬದುಕಿನ ಕತೆಯನ್ನು ಕೇಳುತ್ತಾ ಕೂತರೆ ಸೋಲಿಗ ಬುಡಕಟ್ಟಿನ ಕತೆಯೇ ತೆರೆದುಕೊಳ್ಳುತ್ತದೆ. ಹುಟ್ಟುಕುರುಡರಾಗಿದ್ದ ತಂದೆ ಶಂಕ್ರಯ್ಯ ಮಗಳಿಗೆ ಅಕ್ಷರದ ಬೆಳಕನ್ನು ಕೊಡಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹಾಡಿಗೆ ಪ್ರವೇಶಿಸಿದ ಒಂದು ಪುಟ್ಟ ರೇಡಿಯೊ ಈ ಕುಟುಂಬದ ಆಲೋಚನೆಯನ್ನು ಬದಲಿಸುತ್ತದೆ. ಆಗ ರೇಡಿಯೊದಲ್ಲಿ ಬರುತ್ತಿದ್ದ ಇಂದಿರಾಗಾಂಧಿಯ ಬಗ್ಗೆ ತಿಳಿದ ತಂದೆ ನನ್ನ ಮಕ್ಕಳನ್ನು ಓದಿಸಬೇಕು, ನನ್ನ ಮಗಳೂ ಇಂದಿರಾ ಗಾಂಧಿಯಂತೆ ಆಗಬೇಕು ಎನ್ನುವ ಕನಸನ್ನು ಕಟ್ಟಿದರು. ಒಂದು ಪುಟ್ಟ ರೇಡಿಯೊ ಬುಡಕಟ್ಟುಗಳ ಬದುಕಿನಲ್ಲಿ ತರಬಹುದಾದ ಬದಲಾವಣೆಗೆ ರತ್ನಮ್ಮನ ಕಥೆ ಸಾಕ್ಷಿಯಂತಿದೆ. ಸಮಾಜದಲ್ಲಿ ಯಾವ ಬಗೆಯ ವಿದ್ಯಮಾನಗಳು ನಡೆಯುತ್ತವೆ ಎನ್ನುವುದನ್ನು ರೇಡಿಯೊ ಕೇಳುತ್ತಾ ಕೇಳುತ್ತಾ ಸೋಲಿಗ ಬುಡಕಟ್ಟಿನ ಒಂದು ಕುಟುಂಬ ಬದಲಾದ ಬಗೆ ವಿಸ್ಮಯಕಾರಿಯಾಗಿದೆ.
ರತ್ನಮ್ಮನ ಮಾತುಗಳಲ್ಲಿಯೇ ಅವರ ಬದುಕಿನ ದಾರಿಯನ್ನು ತಿಳಿಯುವುದು ಕುತೂಹಲಕಾರಿಯಾಗಿದೆ.
‘‘ನಮ್ಮನ್ನು ಸಾಕಲು ಪುಟ್ಟ ಪೆಟ್ಟಿಗೆ ಅಂಗಡಿ ಇಟ್ಟುಕೊಂಡ ಅಪ್ಪ ಅದರ ಮೂಲಕವೇ ನಮ್ಮನ್ನು ಓದಿಸುವ ಕನಸನ್ನು ಕಟ್ಟಿದ್ದರು. ನಮ್ಮ ಮನೆಯಿಂದ ಶಾಲೆಗೆ ಹೋಗಲು ಅಪ್ಪನ ಜತೆ ಮೂರು ಕಿ.ಮೀ. ಕಾಡೊಳಗೆ ನಡೆಯಬೇಕಿತ್ತು.
ಅವ್ವ ದೊಡ್ಡೋರ ಹೊಲದಲ್ಲಿ ಜೀತದ ಕೆಲಸ ಮಾಡುತ್ತಿದ್ದಳು. ಆಗ ಸೋಲಿಗರು ಊಟಕ್ಕೋಸ್ಕರ ಜೀತ ಮಾಡುತ್ತಿದ್ದರು. ಅದು ವರ್ಷದ ಜೀತ. ರೇಡಿಯೊ ವಾರ್ತೆಗಳನ್ನು ಕೇಳಿ, ‘ಇಂದಿರಾಗಾಂಧಿ ಜೀತ ಬಿಡಿಸ್ತಾಳಂತೆ, ನಾವೆಲ್ಲಾ ಇನ್ಮುಂದೆ ಜೀತ ಮಾಡೋಹಂಗಿಲ್ಲಂತೆ’ ಅಂತ ಅಪ್ಪ ಸೋಲಿಗರ ಹಿರಿಯರಿಗೆ ಹೇಳುತ್ತಿದ್ದರು. ಶಿಶುವಿಹಾರ ನಡೆಸುತ್ತಿದ್ದ ಗಂಜಿಕೇಂದ್ರದ ಅಂಬಿಕಾ ಎನ್ನುವ ಮೇಡಮ್ಮು ನಮ್ಮಪ್ಪನಿಗೆ ‘ಶಂಕ್ರಯ್ಯ ನಿನ್ನ ಮಗಳು ಚೆನ್ನಾಗಿ ಓದ್ತಾಳೆ ಶಾಲೆಗೆ ಸೇರಿಸಿ’ ಎಂದು ಹೇಳಿದರು. ಇದು ಅಪ್ಪನ ಆಸೆಯನ್ನು ಹೆಚ್ಚಿಗೆ ಮಾಡಿತು’’ ಎನ್ನುವ ರತ್ನಮ್ಮ ಅಂಬಿಕಾ ಮೇಡಂ ಹೇಳಿದ ಪಾಠಗಳನ್ನು ಈಗಲೂ ನೆನಪಿಟ್ಟು ಹೇಳುತ್ತಾರೆ. ಹೀಗೆ ರತ್ನಮ್ಮನಲ್ಲಿ ಅಕ್ಷರದ ಬೀಜ ಬಿತ್ತನೆಯಾಯಿತು.
‘‘ಒಂದ್ಸಲ ಕುಟುಂಬದ ಗ್ರೂಫ್ ಫೋಟೊ ತೆಗೆಸಬೇಕೆಂದು ಮನೆಯವರೆಲ್ಲಾ ನಡೆದು ಹೋಗುವಾಗ ಹುಲಿ ಬಂದ್ಬಿಡ್ತು. ಭಯಗೊಂಡು ಮನೆಗೆ ಓಡಿ ಹೋಗಿದ್ದೆವು. ಮರುದಿನ ಹೊರಟಾಗ ಆನೆ ಎದುರಾಯಿತು’’ ಎಂದು ರತ್ನಮ್ಮ ಕಾಡಿನ ದಾರಿಯ ನೆನೆಯುತ್ತಾರೆ. ಹೀಗೆ ಕಾಡಿನಲ್ಲಿ ನಡೆಯುವಾಗ ಎದುರಾದ ಪ್ರಾಣಿಗಳ ಭಯದಲ್ಲೇ ರತ್ನಮ್ಮ ತನ್ನ ಶಾಲೆಯ ಕನಸನ್ನು ನನಸು ಮಾಡಿಕೊಳ್ಳಬೇಕಿತ್ತು. ಅಂಗಳ ಎನ್ನುವಲ್ಲಿ ಮೊದಲ ವರ್ಷದ ಶಾಲೆಗೆ ಸೇರಿಸಲಾಯಿತು. ಇಲ್ಲಿ ನೀನು ಚೆನ್ನಾಗಿ ಓದಿದರೆ ಮುಂದೆ ಹಾಸ್ಟೆಲಿಗೆ ಸೇರಿಸುವುದಾಗಿ ತಂದೆ ಹೇಳಿದ್ದರು. ಆಗ ರತ್ನಮ್ಮನ ತಲೆಯಲ್ಲಿದ್ದ ಯೋಚನೆ ಒಂದೇ..‘ನಾನು ಚೆನ್ನಾಗಿ ಓದಿದರೆ ಊಟ ಸಿಕ್ತದೆ’ ಎನ್ನುವುದಾಗಿತ್ತು. ಕಡುಕಷ್ಟದಲ್ಲಿ ಅತ್ತೆಯ ಮನೆಯಲ್ಲಿದ್ದು ಒಂದು ವರ್ಷ ಪೂರೈಸಿದರು.
‘‘ಅಪ್ಪ ಕಾಡಲ್ಲಿ ಬಿದ್ದ ದನಗಳ ಸೆಗಣಿಯನ್ನು ಆರಿಸಿ ಒಂದೆಡೆ ತಿಪ್ಪೆ ಹಾಕುತ್ತಿದ್ದರು. ಈ ಸೆಗಣಿ ಕುಪ್ಪೆ ಹೆಚ್ಚಾದಾಗ ಅದನ್ನು ಕೇರಳದವರಿಗೆ ಮಾರುತ್ತಿದ್ದರು. ಹೀಗೆ ಸೆಗಣಿ ಗೊಬ್ಬರ ಮಾರಿ ಅಪ್ಪ ನನ್ನ ಓದಿಗಾಗಿ ಐದುನೂರು ರೂಪಾಯಿ ಕೂಡಿಸಿದ್ದರು. ಶಾಲೆ ಬಿಟ್ಟಾಗ ನಾನು ಮತ್ತು ಅವ್ವ ಕೂಡ ಕಾಡೆಲ್ಲಾ ಅಲೆದು ಅಲೆದು ಸೆಗಣಿ ಸಂಗ್ರಹಿಸಿ ಕುಪ್ಪೆಗೆ ಹಾಕುತ್ತಿದ್ದೆವು. ನಮ್ಮ ಸಂಸಾರ ಈ ಸೆಗಣಿ ಕುಪ್ಪೆಗಳ ಮಾರಾಟದಿಂದಲೂ ನಡೆಯುತ್ತಿತ್ತು’’ ಎನ್ನುತ್ತಾರೆ. ಹೀಗೆ ಶುರುವಾದ ಪ್ರಾಥಮಿಕ ಶಿಕ್ಷಣ ಪೂರೈಸಿ ರತ್ನಮ್ಮ ಗುಂಡ್ಲುಪೇಟೆಯಲ್ಲಿ ಒಂಭತ್ತನೇ ತರಗತಿ ತನಕ ಹೈಸ್ಕೂಲ್ ಶಿಕ್ಷಣ ಓದಿ ಹತ್ತನೇ ತರಗತಿಗೆ ಮೈಸೂರಿಗೆ ಬಂದರು.
ಆಗ ಡಾ.ಸುದರ್ಶನ್ ಅವರು ಎನ್‌ಜಿಒ ಮೂಲಕ ಸೋಲಿಗ ಮಕ್ಕಳ ಸರ್ವೇ ಮಾಡುತ್ತಿದ್ದರು. ಈ ಸರ್ವೇ ಮಾಡುವಾಗ ರತ್ನಮ್ಮ ಸುದರ್ಶನ್ ಅವರ ತಂಡದ ಗಮನ ಸೆಳೆಯುತ್ತಾರೆ. ಪಿಯುಸಿಯಿಂದ ಸ್ನಾತಕೋತ್ತರ ಪದವಿಯತನಕ ಮೈಸೂರಿನಲ್ಲಿಯೇ ರತ್ನಮ್ಮ ಓದಲು ಇದು ನೆರವಾಗುತ್ತದೆ. ಪಿಯು ನಂತರ ಪದವಿ ಓದುವಾಗ ರತ್ನಮ್ಮನಿಗೆ ಒಂಟಿ ಅನ್ನಿಸತೊಡಗುತ್ತದೆ. ಕಾರಣ ತನ್ನ ಸಮುದಾಯದ ಯಾರೂ ಜೊತೆ ಓದದೆ ಇರುವುದರಿಂದ ನಗರದ ಮಕ್ಕಳ ಜತೆ ಓದುವಾಗ ತಾನೊಬ್ಬಳೇ ಯಾವುದೋ ಬೇರೆ ಪ್ರಪಂಚಕ್ಕೆ ಬಂದುಬಿಟ್ಟಿರುವೆ ಅನ್ನಿಸುತ್ತಿತ್ತು ಎನ್ನುತ್ತಾರೆ. ಓದಿ ತಾನು ಎಲ್ಲಿಗೆ ಹೋಗಬೇಕು? ಮತ್ತೆ ಕಾಡಿಗೆ ಹೋಗಬೇಕಾ? ಕಾಡಿಗೆ ಹೋಗುವುದಾದರೆ ಮತ್ತೆ ನಾನು ಯಾಕೆ ಓದಬೇಕು? ಎನ್ನುವ ಪ್ರಶ್ನೆಗಳು ರತ್ನಮ್ಮನನ್ನು ಕಾಡಲು ಶುರು ಮಾಡುತ್ತವೆ. ಸುದರ್ಶನ್ ಅವರು ನೋಡಲು ಬಂದಾಗ ಅಳುತ್ತಾ ಅವರ ಬಳಿ ಹೋಗುತ್ತಿದ್ದರು. ಅವರು ರತ್ನಮ್ಮನಿಗೆ ಧೈರ್ಯ ತುಂಬುತ್ತಿದ್ದರು.
ಪದವಿ ಓದುವಾಗ ಪದ್ಮಶೇಖರ್, ಇಂದಿರಮ್ಮ ಅನ್ನುವವರು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಹೀಗೆ ಮೈಸೂರಿಗೆ ಓದಲು ಬಂದಾಗ ಸೋಲಿಗ ಸಮುದಾಯದವರು ‘ನಮ್ಮ ಸಮುದಾಯ ಬಿಟ್ಟೋಗಿದ್ದಾಳೆ, ನಗರದ ಜನರ ಜತೆ ಸೇರೋಗಿದ್ದಾಳೆ. ನಮ್ಮ ಸಂಪ್ರದಾಯ ಆಚರಣೆ ಎಲ್ಲಾ ಮುರಿದಿದ್ದಾಳೆ’ ಎನ್ನುತ್ತಿದ್ದರಂತೆ. ಹೀಗೆ ಬುಡಕಟ್ಟು ಸಮುದಾಯಗಳಲ್ಲಿ ಗ್ರಾಮ-ನಗರದ ಕಡೆ ಹೋದವರನ್ನು ಬೇರೆಯಾಗಿ ನೋಡುತ್ತಾರೆ. ಇದೆಲ್ಲಾ ರತ್ನಮ್ಮನ ಕುಟುಂಬಕ್ಕೆ ಒಂದು ರೀತಿ ಮಾನಸಿಕ ಹಿಂಸೆ ಆಗುತ್ತಿತ್ತು. ಆದರೆ ರತ್ನಮ್ಮನ ತಂದೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಎಲ್ಲರ ಹೆಣ್ಣುಮಕ್ಕಳು ಓದ್ತಿದಾರೆ, ನಮ್ಮ ಹೆಣ್ಮಕ್ಕಳು ಯಾಕೆ ಓದಬಾರದು? ನಾಲ್ಕು ಜನರನ್ನು ಕೇಳಿ, ನಾಲ್ಕು ಜನರ ಜತೆ ಒಡನಾಡಿ ನಿಮಗೇ ಗೊತ್ತಾಗುತ್ತೆ ಎಂದು ಸಮುದಾಯದ ಜನರಿಗೆ ಹೇಳುತ್ತಿದ್ದರು. ರತ್ನಮ್ಮನಿಗೆ ‘‘ಮಗಳೇ ನೀನು ಯಾರು ಏನೇ ಅಂದರೂ ತಲೆ ಕೆಡಿಸ್ಕೋಬೇಡ ನೀನು ಓದು’’ ಎಂದು ಧೈರ್ಯ ತುಂಬುತ್ತಿದ್ದರು. ‘‘ಆಗಲೇ ನಮ್ಮ ತಾತ ಒಳ್ಳೆಯ ತಳಿಯ ಅಕ್ಕಿ, ಜೋಳ ಬೆಳೆಯುತ್ತಿದ್ದರಂತೆ. ಅಗ್ರಿಕಲ್ಚರ್ ಇಲಾಖೆಯವರು ತಾತನಿಗೆ ಸನ್ಮಾನ ಮಾಡಿದ್ದರಂತೆ. ಹಂಗಾಗಿ ಮೊದಲಿನಿಂದಲೂ ಆಫೀಸರ್ಸ್‌ಗಳು ಸೋಲಿಗ ಸಮುದಾಯದ ಬಗ್ಗೆ ತಿಳಿಯೋದಕ್ಕೆ ನಮ್ಮ ಮನೆಗೇ ಬರ್ತಿದ್ದರು. ಇದರಿಂದಾಗಿ ನಮ್ಮಪ್ಪ ಮಗಳನ್ನು ಓದಿಸಬೇಕು, ನನ್ನ ಮಗಳು ಓದಿ ಟೀಚರ್ ಆಗಿ ನಮ್ಮ ಸಮುದಾಯದ ಮಕ್ಕಳಿಗೆ ಕಲಿಸಬೇಕು ಅಂತೆಲ್ಲಾ ಕನಸು ಕಂಡಿದ್ದರು. ಹಾಗಾಗಿ ಅವರು ನನ್ನ ಓದಿಗೆ ಬೆಂಗಾವಲಾಗಿ ನಿಂತರು’’ ಎಂದು ರತ್ನಮ್ಮ ತನ್ನ ಓದಿನ ಪಯಣದ ಕಥೆಯನ್ನು ನೆನಪಿಸಿಕೊಳ್ಳುತ್ತಾರೆ.
ನೀವು ನಿಮ್ಮ ಸಮುದಾಯದ ಸಂಶೋಧನೆಗೆ ಹೇಗೆ ತೊಡಗಿಕೊಂಡಿರಿ ಎಂದರೆ ರತ್ನಮ್ಮ ಇದಕ್ಕೊಂದು ಘಟನೆಯನ್ನು ಹೇಳುತ್ತಾರೆ.
‘‘ಒಮ್ಮೆ ಟ್ರೈಬಲ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಟಿಆರ್‌ಐ) ನಲ್ಲಿ ಒಂದು ಸೆಮಿನಾರ್ ನಡೆಯುತ್ತಿತ್ತು. ಒಬ್ಬ ಹುಡುಗಿ ಸೋಲಿಗ ಮತ್ತು ಜೇನುಕುರುಬ ಮಕ್ಕಳ ಎಜುಕೇಷನ್ ಬಗ್ಗೆ ಸಂಶೋಧನೆ ಮಾಡಿದ್ದನ್ನು ಪಿಪಿಟಿಯಲ್ಲಿ ವಿಶ್ಲೇಷಣೆ ಮಾಡುವಾಗ ನನ್ನ ಫೋಟೊ ಬರ್ತಿತ್ತು. ನನ್ನ ಬಗ್ಗೆ ಹೇಳುತ್ತಿದ್ದಳು. ಆದರೆ ಆ ಹುಡುಗಿ ನನ್ನನ್ನು ಒಂದು ದಿನವೂ ಮಾತನಾಡಿಸಿ ರಲಿಲ್ಲ. ಭೇಟಿಯೇ ಆಗಿರಲಿಲ್ಲ. ಆದರೆ ನನ್ನ ಬಗ್ಗೆ ಬೇಟಿಯಾಗಿ ಮಾಹಿತಿ ಸಂಗ್ರಹಿಸಿದಂತೆ ವಿಷಯ ಮಂಡಿಸುತ್ತಿದ್ದರು. ಆಗ ನಾನು ಸಂಶೋಧನೆ ಮಾಡಿದ ಹುಡುಗಿಯ ಜತೆ ಮಾತಾಡಿದೆ. ‘‘ಹೀಗೆ ನನ್ನನ್ನು ಭೇಟಿಯೇ ಆಗದೆ ನೀವು ನಮ್ಮ ಬಗ್ಗೆ ಹೇಳುವುದು ಸರಿಯೇ? ಇದು ನಮ್ಮ ಸಮುದಾಯಕ್ಕೆ ಮಾಡುವ ಮೋಸ ಅಲ್ಲವಾ? ಇದನ್ನು ನೋಡಿ ಸರಕಾರ ಯೋಜನೆ ಮಾಡಬೇಕಲ್ವಾ’’ ಎಂದು ಕೇಳಿದೆ. ಇದೇ ರೀತಿ ಎಷ್ಟು ಜನರು ನಮ್ಮ ಸಮುದಾಯದ ಬಗ್ಗೆ ಸಂಶೋಧನೆ ಮಾಡಿದ್ದಾರೋ ಅನ್ನಿಸಿತು.
ಆಗಲೇ ನಮ್ಮ ಸೋಲಿಗ ಸಮುದಾಯದ ಬಗ್ಗೆ ನಾನೇ ಸಂಶೋಧನೆ ಮಾಡಬೇಕೆಂದು ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗೆ ಸೇರಿಕೊಂಡೆ. ಹೀಗಾಗಿ ನಾನೇ ಸೋಲಿಗ ಸಮುದಾಯದಲ್ಲಿ ಪಿಎಚ್.ಡಿ. ಪಡೆದ ಮೊದಲ ಮಹಿಳೆಯಾದೆ’’ ಎನ್ನುತ್ತಾರೆ.
ಇದೀಗ 54 ವರ್ಷದ ರತ್ನಮ್ಮ ಸಂಪೂರ್ಣವಾಗಿ ಸೋಲಿಗ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ, ಸೋಲಿಗ ಯುವಕ ಯುವತಿಯರ ಉದ್ಯೋಗಕ್ಕಾಗಿ, ನನ್ನ ಸಮುದಾಯಕ್ಕೆ ಅನ್ಯಾಯ ಆಗುವುದನ್ನು ತಡೆಯುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದ ಎಷ್ಟೋ ಜನರಿಗೆ ಇನ್ನೂ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕೂಡ ಸಿಕ್ಕಿಲ್ಲ ಅದನ್ನೆಲ್ಲಾ ಮಾಡಿಸಬೇಕಾಗಿದೆ ಎಂದು ತಮ್ಮ ಕೆಲಸಗಳ ಪಟ್ಟಿಯನ್ನೇ ಕೊಡುತ್ತಾರೆ. ಇದೀಗ ರತ್ನಮ್ಮನ ಒಬ್ಬ ಮಗಳು ಇಂಜಿನಿಯರಿಂಗ್ ಮುಗಿಸಿದ್ದಾಳೆ. ಮತ್ತೊಬ್ಬ ಮಗಳು ಮೆಡಿಕಲ್ ಓದುತ್ತಿದ್ದಾಳೆ. ‘‘ಈಗ ನಮ್ಮ ಸಮುದಾಯ ನಮ್ಮ ಕುಟುಂಬದಿಂದ ಪ್ರೇರೇಪಣೆ ಹೊಂದಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ. ಸಮುದಾಯದ ಮಕ್ಕಳನ್ನು ಓದಿಸುವುದರ ಬಗ್ಗೆ ನಮ್ಮನ್ನು ಕೇಳುತ್ತಾರೆ. ನಾನು ಮನೆ ಮನೆಗೆ ತೆರಳಿ ಶಿಕ್ಷಣದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ’’ ಎಂದು ಹೇಳುತ್ತಾರೆ.
ಹೀಗೆ ರತ್ನಮ್ಮ ಸಾಮಾಜಿಕ ಕಾರ್ಯಕರ್ತರಾಗಿ ಸಾಧ್ಯವಾದಷ್ಟು ತನ್ನ ಸಮುದಾಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಬಗೆಯ ರತ್ನಮ್ಮನ ಸೋಲಿಗ ಬುಡಕಟ್ಟಿನ ಸಾಮಾಜಿಕ ಬದಲಾವಣೆಯ ಕೆಲಸಗಳನ್ನು ಗಮನಿಸಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯು ‘ಚೇಂಜ್ ಮೇಕರ್’ ಎನ್ನುವ ಘನತೆಯ ಗೌರವವನ್ನು ಸಲ್ಲಿಸಿದೆ.