ಎಚ್ಚರಿಕೆಯ ಜನ ಸಂದೇಶ- ಎಲ್ಲರಿಗೂ!!

ನೆಲಮಟ್ಟದ ಜನರ ಆತಂಕ ಏನು, ನಿರೀಕ್ಷೆಗಳೇನು, ಕನಸುಗಳೇನು ಎಂಬುದನ್ನು ಅವರೊಂದಿಗೆ ಸಂವಾದಿಸುತ್ತಾ ಅಧ್ಯಯನ ಮಾಡುವ ಮೂಲಕವೇ ಅರಿತು ಹೊಸ ನೀತಿ, ಕಾರ್ಯಕ್ರಮಗಳನ್ನು ರೂಪಿಸಬೇಕೇ ಹೊರತು, ಮೇಲನ ಕುಲೀನ ಪಂಡಿತರ Top Down ಚಿಂತನೆಗಳ ಮೂಲಕ ಅಲ್ಲ ಎಂಬ ಸರಳ ಸತ್ಯ ಕಾಂಗ್ರೆಸ್‌ಗೆ ಅರ್ಥವಾಗಬೇಕಿದೆ.

Update: 2024-06-05 08:24 GMT

ಈಚುನಾವಣೆ ಒಂದಷ್ಟು ಸಂದೇಶವನ್ನೂ ಇನ್ನೊಂದಷ್ಟು ಎಚ್ಚರಿಕೆಯ ಸುಳಿವನ್ನೂ ನೀಡಿದೆ. ಅಸಲಿಗೆ ಮೋದಿ ಮೂರನೆಯ ಬಾರಿಗೆ ಗೆಲ್ಲುವ ಸಾಧ್ಯತೆಯೇ ನಮ್ಮ ಸಾಂವಿಧಾನಿಕ ಆಶಯದ ಪ್ರಜಾಸತ್ತೆ ಏದುಸಿರು ಬಿಡುವುದರ ಸೂಚನೆಯೆಂದು ಉಳಿದೆಲ್ಲ ಪಕ್ಷಗಳೂ ಗ್ರಹಿಸಬೇಕಿತ್ತು.

ಮೊದಲಿಗೆ, ಈ ಚುನಾವಣೆ ನೀಡಿದ ಮೂಗೇಟು ನೋಡಿ:

ಮೋದಿಯ ನಿರಂಕುಷ ಆಡಳಿತದ ಬಗ್ಗೆ ಎಚ್ಚರಿಕೆ ನೀಡಿದ್ದೇ ಬಲು ದೊಡ್ಡ ಸೂಚಿ. ಮಾತಿಲ್ಲದ ಬಡವರು ತಣ್ಣಗೆ ತಮ್ಮ ಅಸಮಾಧಾನವನ್ನು ಅಭಿವ್ಯಕ್ತಿಪಡಿಸಿದ ರೀತಿಗೆ ಭಟ್ಟಂಗಿ ಮಾಧ್ಯಮ, ಎಕ್ಸಿಟ್ ಪೋಲ್‌ಏಜೆಂಟರೂ ತತ್ತರಿಸಿ ಹೋಗಿರಲಿಕ್ಕೇ ಬೇಕು. ಬಿಜೆಪಿಯ ವಿಭಜಕ, ಧ್ರುವೀಕರಣ ರಾಜಕೀಯದ ಹೃದಯವಾದ ಉತ್ತರಪ್ರದೇಶದಲ್ಲೇ ಜನರು ನೀಡಿದ ಹೊಡೆತ ಚೇತೋಹಾರಿ. ಮೋದಿ ಬ್ರ್ಯಾಂಡ್ ನಿರಂಕುಶ ಬುಲ್ಡೋಜರ್ ರಾಜಕೀಯವನ್ನು ಮುಂದುವರಿಸುವ ಬಗ್ಗೆ ಪ್ರಾಯಶಃ ಬಿಜೆಪಿ ಮರುಚಿಂತನೆ ಮಾಡುವುದು ಶತಃಸಿದ್ಧ.

ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿದರೆ ಬಿಜೆಪಿ ವಿರುದ್ಧ ಜನಾಶಯ ರೂಪಿಸುವುದು ಸಾಧ್ಯ ಎಂಬಷ್ಟರ ಮಟ್ಟಿಗೆ ಈ ಸೂಚಿ ಉತ್ತರಪ್ರದೇಶ, ಮಹಾರಾಷ್ಟ್ರಗಳ ಮೂಲಕ ಕೆಲಸ ಮಾಡಿದೆ. ಇದರ ಉಲ್ಟಾ ಕೇರಳದಲ್ಲಿ ಗಮನಿಸಿ:

ಬಿಜೆಪಿಯ ದಕ್ಷಿಣಾಪಥ ಕಬ್ಜಾ ಮಾಡುವ ಯೋಜನೆ ಬಹುತೇಕ ಗಟ್ಟಿಯಾಗಿ ಬೇರೂರಿದೆ. ಕೇರಳದಲ್ಲಿ ಲೆಕ್ಕಕ್ಕೇ ಇಲ್ಲದ ಬಿಜೆಪಿ ಇಂದು ಗಟ್ಟಿಯಾಗಿ ಬೇರೂರಿದೆ. ಬಲಿಯ ನಾಡಿನಲ್ಲಿ ವಟುವಿನ ಪಾದದ ಮೊಹರು ಸ್ಪಷ್ಟವಾಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಜಂಟಿಯಾಗಿ ಹೊಣೆ. ಇದೇ ರೀತಿ ತಮಿಳುನಾಡಿನಲ್ಲೂ ಬಿಜೆಪಿಯ ಮತ ಪ್ರಮಾಣ ತೀಕ್ಷ್ಣವಾಗಿ ಹೆಚ್ಚಿದೆ.

ಕರ್ನಾಟಕ ಸಹಿತ ದಕ್ಷಿಣದ ಇತರ ರಾಜ್ಯಗಳಲ್ಲೂ ಬಿಜೆಪಿಯ ಪ್ರಭಾವ ಹೆಚ್ಚಿದೆ.

‘ತೆರಿಗೆಯಲ್ಲಿ ಅನ್ಯಾಯ’ ಮಾಡಿದ ಪಕ್ಷಕ್ಕೆ ಅಭಿವೃದ್ಧಿ ಹೊಂದಿದ ದ್ರಾವಿಡ ರಾಜ್ಯಗಳಲ್ಲಿ ಮನ್ನಣೆ ಹೆಚ್ಚುತ್ತಿರುವುದು ನಮ್ಮ ಚಿಂತಕರನ್ನು ಚಿಂತೆಗೆ ಹಚ್ಚಬೇಕು.

ಕರ್ನಾಟಕದಲ್ಲಂತೂ ಈ ಹೆಜ್ಜೆ ಗತಿ ದೊಡ್ಡ ಅಪಾಯದ ಮುನ್ಸೂಚನೆ ನೀಡಿದೆ. ರಾಜ್ಯದ ಎರಡು ಬಲಿಷ್ಠ ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಬಿಜೆಪಿಯನ್ನು ಹೆಗಲಲ್ಲಿ ಹೊತ್ತು ಗೆಲ್ಲಿಸಿರುವುದರ ಅರ್ಥ ಏನು? ಅಷ್ಟೇ ಅಲ್ಲ ನೇರ ನಗದು, ಅನುಕೂಲ ನೀಡುವ ಗ್ಯಾರಂಟಿಗಳ ಹೊರತಾಗಿಯೂ ಕಾಂಗ್ರೆಸ್‌ಏಕೆ ಸೋತಿತು? ಜಾತಿ ರಾಜಕಾರಣದ ಈ ಹೊಸ ಪಾಳೆಗಾರಿಕೆ ಕೂಡಾವಳಿ ಇತರ ಸಮುದಾಯಗಳ ರಾಜಕೀಯದ ಮೇಲೆ ಬೀರುವ ಪ್ರಭಾವ ಏನು? ಅದನ್ನು ನಿಗ್ರಹಿಸುವ ಬಗೆ ಹೇಗೆ? ಇವೆಲ್ಲಾ ನಾಳೆಯಿಂದ ನಮ್ಮನ್ನು ಕಾಡಬೇಕು.

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಲ್ಪ ಮತದಲ್ಲಿ ಸೋತಿದ್ದರೂ ಆತನಿಗೆ ಬಿದ್ದ ಮತ ಪ್ರಮಾಣದ ಅರ್ಥವೇನು?

ಈ ಮತ ಹಾಕಿದವರಲ್ಲಿ ಮಹಿಳೆಯರೂ ಇರಲೇಬೇಕು. ಹಾಗಿದ್ದರೆ ರಾಜ್ಯ ಕಂಡು ಕೇಳರಿಯದ ಅನೈತಿಕ ಕೃತ್ಯವೊಂದು ಜನರ ನೈತಿಕ ಪ್ರಜ್ಞೆ ಮೇಲೆ ಏನೂ ಪ್ರಭಾವ ಬೀರಿಲ್ಲವೇ?

ರಾಜ್ಯದ ಆಧಿಪತ್ಯದ ಕನಸು ಕಂಡಿರುವ ಡಿ.ಕೆ. ಶಿವಕುಮಾರ್‌ಅವರ ತಮ್ಮನ ಸೋಲು ಏನನ್ನು ಸೂಚಿಸುತ್ತದೆ?

ಇಷ್ಟು ದಿನ ಕರಾವಳಿ ಮಲೆನಾಡುಗಳಲ್ಲಿ ಅವ್ಯಾಹತ ಪ್ರಭಾವವನ್ನು ಖಾಯಂಗೊಳಿಸಿದ್ದ ಬಿಜೆಪಿ ಈಗ ಹಳೇ ಮೈಸೂರು ಪ್ರಾಂತದಲ್ಲೂ ಒಕ್ಕಲಿಗರ ನೆರವಿನಿಂದ ಆಳವಾಗಿ ಬೇರೂರಿರುವುದು ಆಘಾತಕಾರಿ.

ಅರ್ಥಾತ್ ಕಾಂಗ್ರೆಸ್ ತನ್ನ ಅಭಿವೃದ್ಧಿ ಕಲ್ಪನೆಯನ್ನು ವಿಸ್ತೃತಗೊಳಿಸಬೇಕಿದೆ ಎನ್ನುವುದು ಒಂದು ಅಂಶ; ಎರಡನೆಯದು, ಬಿಜೆಪಿಯ ಹಿಂದುತ್ವ ಸಿದ್ಧಾಂತವನ್ನು ಎದುರಿಸುವ ಸೈದ್ಧಾಂತಿಕ ತಂತ್ರೋಪಾಯಗಳ ಬಗ್ಗೆ ಕಾಂಗ್ರೆಸ್ ಹೊಸ ಬಗೆಯಲ್ಲಿ ಯೋಚಿಸಬೇಕಿದೆ.

ಹಿಂದುತ್ವ ಎನ್ನುವುದು ಮನಸ್ಸುಗಳನ್ನು ವಶ ಪಡಿಸಿ ಅಂಗೀಕಾರ ಪಡೆವ ಸೂಕ್ಷ್ಮ ಹವಣಿಕೆ ಎಂಬುದು ಕಾಂಗ್ರೆಸ್‌ಗೆ ಅರ್ಥವೇ ಆದಂತಿಲ್ಲ. ರಾಜ್ಯದ ಬಹುತೇಕ ಬ್ರಾಹ್ಮಣೇತರ ಸಮುದಾಯಗಳು ಹಿಂದುತ್ವಕ್ಕೆ ತಲೆದೂಗುವ ಸಂಗತಿ ನಮ್ಮನ್ನು ಸುದೀರ್ಘ ಸೈದ್ಧಾಂತಿಕ ಹೋರಾಟಕ್ಕೆ ಅಣಿ ಮಾಡಬೇಕಿದೆ.

***

ದೇಶದ ಮಟ್ಟದಲ್ಲಿ ಉತ್ತರ ಭಾರತದಲ್ಲಿ ಒಂದೇ ಬಗೆಯ ಫಲಿತಾಂಶ ಯಾಕೆ ಸಾಧ್ಯವಾಗಿಲ್ಲ ಎಂಬುದನ್ನು ಕಾಂಗ್ರೆಸ್ ವಿಶ್ಲೇಷಿಸಬೇಕಿದೆ. ಯುಪಿ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿ ತನ್ನ ಹಿಡಿತವನ್ನು ಬಹುತೇಕ ಉಳಿಸಿಕೊಂಡಿದೆ. ಬೆಲೆ ಏರಿಕೆ, ನಿರುದ್ಯೋಗ ಇವೆಲ್ಲವೂ ಯುಪಿಗೂ ಮಧ್ಯಪ್ರದೇಶಕ್ಕೂ ಬೇರೆ ಬೇರೆಯೇ?

ಅಷ್ಟೇಕೆ ಕಾಲು ಶತಮಾನ ಹಿಡಿತ ಸಾಧಿಸಿದ್ದ ನವೀನ್ ಪಟ್ನಾಯಕ್‌ಆಘಾತಕಾರಿಯಾಗಿ ಬಿಜೆಪಿಗೆ ನೆಲೆ ಊರಲು ಅವಕಾಶ ಕೊಟ್ಟಿದ್ದು ಗಮನಿಸಬೇಕು. ಅತ್ಯಂತ ಸಮಯಸಾಧಕ ರಾಜಕಾರಣ ಮಾಡುತ್ತಾ ಮೋದಿಗೆ ಅಗತ್ಯ ಬಿದ್ದಾಗಲೆಲ್ಲಾ ಬೆಂಬಲ ನೀಡುತ್ತಾ ಬಂದ ನವೀನ್, ತಾನು ಮಾತ್ರ ಸೇಫ್ ಎಂಬ ಭ್ರಮೆಗೆ ಒಳಗಾಗಿದ್ದು ಗಮನಿಸಬೇಕು. ಬಿಜೆಪಿಯ juggernaut ಜಗನ್ನಾಥ ರಥ ಉರುಳುವ ಬಗೆ ಬೇರೆಯೇ. ಅದಕ್ಕೆ ಯಾವ ಕೃತಜ್ಞತೆಯೂ ಇರುವುದಿಲ್ಲ. ತನ್ನ ಸೈದ್ಧಾಂತಿಕ ಪ್ರಣಾಳಿಯ ಮೊನಚನ್ನು ಮುಂದಿಟ್ಟು ಅದು ಗಡಿ ರೇಖೆಗಳನ್ನು ವಿಸ್ತರಿಸುತ್ತಲೇ ಹೋಗುತ್ತದೆ.

ಈ ಬಾರಿ ಸಂಸದೀಯವಾಗಿ ಮೋದಿ ಕಟ್ಟಿದ ಪ್ರಚಾರದ ಪೊಳ್ಳು ಭ್ರಾಮಕ ಪ್ರತಿಮೆ (ಎಕ್ಸಿಟ್ ಪೋಲ್) ಒಡೆದಿದೆ. ಪ್ರಧಾನಿಯಾಗಿ ಮುಂದುವರಿಯುವುದು ಸ್ವತಃ ಮೋದಿಗೇ ಮುಜುಗರದ ಸಂಗತಿ. ನಿರಂಕುಶ ಸಾಮ್ರಾಟನ ಮನಃಸ್ಥಿತಿಯ ಮೋದಿ ಈಗ ಸಣ್ಣ ಪುಟ್ಟ ಪಕ್ಷಗಳೆದುರು ದೇಹಿ ಎನ್ನುವ ಸ್ಥಿತಿಗೆ ಬಂದರೆ ಹೇಗೆ? ಯುಪಿಎ-೨ರ ಮನಮೋಹನ್ ಸಿಂಗ್‌ಅವರಿಗಿಂತಲೂ ಕಷ್ಟಕ್ಕೆ ಮೋದಿ ಬೀಳಬಹುದು.

ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಅನೂಚಾನ ತಂತ್ರವನ್ನು ಆರೆಸ್ಸೆಸ್ ಚಾಲೂ ಮಾಡಿದರೆ ಮೋದಿ ಮಾರ್ಗದರ್ಶಕ ಮಂಡಳಿ ಸೇರಬೇಕಾಗುತ್ತದೆ. ಬಹುತೇಕ ಬಿಜೆಪಿ ನಾಯಕರಿಗೆ ಇದೇ ಬೇಕಾಗಿದೆ. ಇದನ್ನು ಪರಮ ಸಮಯ ಸಾಧಕ ನಾಯಕರುಗಳಾದ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಮೂಲಕ ಸಾಧಿಸಲೂ ಬಹುದು.

ನಾನು ಈ ಹಿಂದೆ ಹೇಳಿದಂತೆ ಈಗಾಗಲೇ ಇಕಾನಮಿಯನ್ನೂ ಆಡಳಿತವನ್ನೂ ಕೆಡಿಸಿ ಕೂತು, ಸಾಲದ ಹೊರೆ ಹೆಚ್ಚಿಸಿ ಅಧ್ವಾನ ಎಬ್ಬಿಸಿರುವ ಮೋದಿ/ ಬಿಜೆಪಿಯೇ ಈಗ ಆಡಳಿತದ ಹೊರೆ ಹೊತ್ತರೆ ಒಳ್ಳೆಯದು. ಯಾಕೆಂದರೆ ಈ ಸಾಲ, ಅನಭಿವೃದ್ಧಿಯೆಲ್ಲ ಹಣ್ಣಾಗುವ ಒತ್ತಡ ಊಹಿಸಲಸಾಧ್ಯ. ‘ಇಂಡಿಯಾ’ ಒಕ್ಕೂಟ ಎಂಬ ಮಿಕ್ಶ್ಚರ್ ಗುಂಪು ಈ ಭಾರ ತಲೆಗೆ ಎಳೆದುಕೊಳ್ಳುವುದರಷ್ಟು ಅಪಕ್ವ ನಿರ್ಧಾರ ಬೇರೆ ಇಲ್ಲ.

ಸ್ವತಃ ರಾಹುಲ್ ಗಾಂಧಿ ತಮ್ಮ ಎರಡು ಯಾತ್ರೆಗಳ ಮೂಲಕ ಸಂವಿಧಾನದ ಪ್ರಾಮುಖ್ಯತೆಯನ್ನು ತಕ್ಕ ಮಟ್ಟಿಗೆ ಮುಖ್ಯ ವೇದಿಕೆಯ ಚರ್ಚೆಗೆ ತಂದಿದ್ದಾರೆ. ಆದರೆ ಒಟ್ಟಾರೆ ಇಕಾನಮಿ, ಅಭಿವೃದ್ಧಿ ಕುರಿತಂತೆ ಅವರಿಗೂ ಕಾಂಗ್ರೆಸ್‌ಗೂ ಇರುವ ಅಸ್ಪಷ್ಟತೆ ಗಮನಿಸಬೇಕು. ಸದರಿ ಚಾಲ್ತಿಯಲ್ಲಿರುವ ಮುಕ್ತ ಮಾರುಕಟ್ಟೆ ಉದಾರವಾದಿ ಆರ್ಥಿಕತೆಯ (ಕಾರ್ಪೊರೇಟ್ ತುಷ್ಟೀಕರಣ) ಬಗ್ಗೆ ಕಾಂಗ್ರೆಸ್‌ಗೂ ಆಕ್ಷೇಪಗಳಿಲ್ಲ! ಅದಾನಿ, ಅಂಬಾನಿ ಎಂದು ಘೋಷಣೆ ಕೂಗಿದರೂ ಈ ಆರ್ಥಿಕ ನೀತಿಯ ಭಾಗವೇ ಆಗಿರುವ ಕಾರ್ಪೊರೇಟ್ ಹಿತಾಸಕ್ತಿಯ ಬಗ್ಗೆ ರಾಹುಲ್ ಸಾಕಷ್ಟು ಮರುಚಿಂತನೆ ಮಾಡಬೇಕಿದೆ.

ನೆಲಮಟ್ಟದ ಜನರ ಆತಂಕ ಏನು, ನಿರೀಕ್ಷೆಗಳೇನು, ಕನಸುಗಳೇನು ಎಂಬುದನ್ನು ಅವರೊಂದಿಗೆ ಸಂವಾದಿಸುತ್ತಾ ಅಧ್ಯಯನ ಮಾಡುವ ಮೂಲಕವೇ ಅರಿತು ಹೊಸ ನೀತಿ, ಕಾರ್ಯಕ್ರಮಗಳನ್ನು ರೂಪಿಸಬೇಕೇ ಹೊರತು, ಮೇಲನ ಕುಲೀನ ಪಂಡಿತರ Top Down ಚಿಂತನೆಗಳ ಮೂಲಕ ಅಲ್ಲ ಎಂಬ ಸರಳ ಸತ್ಯ ಕಾಂಗ್ರೆಸ್‌ಗೆ ಅರ್ಥವಾಗಬೇಕಿದೆ.

ಹಾಗೆಯೇ ಕಾರ್ಯಕರ್ತರೇ ಇಲ್ಲದೆ ಸುಂಟರಗಾಳಿಗೆ ಕ್ರೋಡೀಕರಣಗೊಳ್ಳುವ ತರಗೆಲೆಗಳಂತಿರುವ ಕಾಂಗ್ರೆಸ್ ಯಂತ್ರ ಬಿಜೆಪಿಯ ಆಳದ ಕೋಮುವಾದಿ ಹಿಂದುತ್ವದ ಬೇರುಗಳನ್ನು ಸಡಿಲು ಮಾಡಲಾರದು. ಹೆಚ್ಚೆಂದರೆ ಒಂದೆರಡು ಟೊಂಗೆಗಳನ್ನು ಮುರಿಯಬಹುದಷ್ಟೇ.

ಕಾಂಗ್ರೆಸ್ ನಾಯಕತ್ವ ಸೈದ್ಧಾಂತಿಕ ಸ್ಪಷ್ಟತೆಯ ಕಾರ್ಯಕರ್ತರ ಸಮೂಹ ಕಟ್ಟುವ ಬಗ್ಗೆ ಕಾರ್ಯತತ್ಪರವಾಗಲು ಇದೊಂದು ಸದವಕಾಶ.

ಇದೆಲ್ಲಾ ನನ್ನ ಕಣ್ಣಳವಿಗೆ ಬಂದಿದ್ದು. ನಾಳೆಯಿಂದ ತಕ್ಕಡಿ ಲೆಕ್ಕ, ಪೆಂಡ್ಯುಲಂ ಚಲನೆ, ಉಯ್ಯಾಲೆಗಳ ಸರ್ಕಸ್ ನೋಡುತ್ತಾ ಜನರೂ, ನಮ್ಮ ಆರಾಮ ಕುರ್ಚಿಯ ಚಿಂತಕರೂ ಮೈ ಸಡಿಲ ಮಾಡಿ ವಿರಮಿಸುವ ಸಾಧ್ಯತೆಯೂ ಇದೆ.

ಅಷ್ಟಕ್ಕೂ ಈ ದೇಶದ ವಿಧಿ ಚುನಾವಣೆಗಳ ಫಲಿತಾಂಶದ ಮೇಲೆ ನಿಂತಿದೆ ಎಂದು ಭಾವಿಸಿದಷ್ಟು ದಿನ ಹಿಂದುತ್ವದ ಬೇರುಗಳು ಇನ್ನಷ್ಟು ವ್ಯಾಪಿಸುತ್ತಿರುತ್ತದೆ.

ಮುಂದಿನ ವರ್ಷ ಆರೆಸ್ಸೆಸ್‌ನ ಶತಾಬ್ದಿ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುರೇಶ ಕೆ. ಪಿ.

contributor

Similar News