ಜಗಳವೆಂಬ ಹಾಯಿದೋಣಿಗೆ ನಗು, ಸಂದೇಶ, ಉಪದೇಶವೆಂಬ ಮುಲಾಮು
ನಾಟಕ: ಸಡನ್ನಾಗ್ ಸತ್ಹೋದ್ರೆ...? ರಚನೆ- ನಿರ್ಮಾಣ-ನಿರ್ದೇಶನ: ಶೈಲೇಶ್ ಕುಮಾರ್ ಎಂ.ಎಂ. ತಂಡ: ಸೈಡ್ ವಿಂಗ್, ಬೆಂಗಳೂರು ಬೆಳಕು: ವಿವೇಕ್ ಪೂಜಾರಿ ಸಂಗೀತ ನಿರ್ವಹಣೆ: ರಾಹುಲ್ ಮಹಾಂತೇಶ ವಸ್ತ್ರವಿನ್ಯಾಸ: ಎಂ.ಬಿ.ಲತಾ ನಿರ್ವಹಣೆ: ಮಾಲಾ ಶೈಲೇಶ್
‘‘ನೋಡೋ, ನಾವು ಹುಟ್ತಿದ್ದ ಹಾಗೇ ನಮ್ಮ ಸಾವು ಹುಟ್ಟುತ್ತಂತೆ. ಈ ಕಡೆಯಿಂದ ನಮ್ಮ ಪ್ರಯಾಣ, ಆ ಕಡೆಯಿಂದ ಅದರ ಪ್ರಯಾಣ. ಯಾವತ್ತು ಅದು ನಮ್ಮನ್ನು ಭೇಟಿ ಮಾಡಿ ಹೇ ಅನ್ನುತ್ತೋ... ಅಲ್ಲಿಂದ ಹನ್ನೊಂದನೇ ದಿನಕ್ಕೆ ನಮ್ಮ ತಿಥಿ...’’
ಇದು ‘ಸಡನ್ನಾಗ್ ಸತ್ತೋದ್ರೆ?!’ ನಾಟಕದ ಪ್ರಮುಖವಾದ ಮಾತು. ಹುಟ್ಟಿನ ಜೊತೆಗೇ ಸಾವು ಕೂಡಾ ಬೆನ್ನೇರುತ್ತದೆ. ಇದಕ್ಕಾಗಿ ಇದ್ದಷ್ಟು ದಿನ ಖುಷಿ ಖುಷಿಯಾಗಿ ಇರಬೇಕು ಎಂದು ಸಾರುವ ನಾಟಕವಿದು. ಇದಕ್ಕಾಗಿ ಹಾಸ್ಯ ಪ್ರಸಂಗಗಳ ಜೊತೆಗೇ ಉಪದೇಶ ಹಾಗೂ ಸಂದೇಶಗಳೆಂಬ ಮುಲಾಮು ಮೂಲಕ ಹೇಗೆ ಬದುಕಬೇಕೆಂದು ಕಟ್ಟಿ ಕೊಡುತ್ತದೆ. ಯಾವಾಗ ಸಾವು ಬಂದು ಬಾಗಿಲು ಬಡಿಯುತ್ತದೋ ಗೊತ್ತಿಲ್ಲ. ಇದಕ್ಕಾಗಿ ಇದ್ದಷ್ಟು ದಿನ ಚೆನ್ನಾಗಿ, ಸುಂದರವಾಗಿ ಬದುಕಿ ಎನ್ನುವ ನಾಟಕವಿದು.
ಮಧ್ಯಮ, ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ನಿತ್ಯದ ಘಟನೆಗಳನ್ನೇ ನಾಟಕವಾಗಿಸಿದ್ದರಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಪ್ರಸಂಗಗಳಿವೆ. ಜೊತೆಗೆ ಪಂಚಿಂಗ್ ಸಂಭಾಷಣೆಗಳು ಪಟಾಕಿ ರೀತಿ ಹೊಡೆಯುವುದರಿಂದ ಪ್ರೇಕ್ಷಕರನ್ನು ನಗಿಸುತ್ತವೆ. ಕೇವಲ ನಗಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಬದುಕಿನಲ್ಲಿ ಬರುವ ಕಷ್ಟನಷ್ಟಗಳನ್ನು ಎದುರಿಸುತ್ತ ಕೇವಲ ಆಸ್ತಿ ಸಂಪಾದನೆಯೇ ಮುಖ್ಯವಾಗಬಾರದು ಎಂಬ ತಿಳಿವಳಿಕೆಯೂ ಇದೆ.
ನಾಟಕ ಶುರುವಾಗುವುದೇ ಹನುಮು (ತಾತ) ಹಾಗೂ ಸರೋಜ (ಅಜ್ಜಿ) ಇಬ್ಬರ ಜಗಳದಿಂದ. ಇವರಿಗೆ
ತನ್ನ ಸೊಸೆ ಕುರಿತು ಹೇಳುತ್ತಲೇ ಅಸಹನೆ ಹೊರಹಾಕುವ ಅಜ್ಜಿ, ಪ್ರವೇಶವಾದೊಡನೆ ಸೆಲ್ಫಿ ತೆಗೆದುಕೊಳ್ಳುವ ಮೊಮ್ಮಗಳು ಸೌಮ್ಯಾ, ತನ್ನ ದೇಹವನ್ನೇ ವಿಡಂಬಿಸಿದರೂ ಕೇರ್ ಮಾಡದೆ ತಿರುಗಿ ಉತ್ತರಿಸುವ ಭರತ, ಎಲ್ಲದಕ್ಕೂ ಉಳಿತಾಯ ಮಾಡಬೇಕೆಂದು ಒದ್ದಾಡುವ ವಿಶ್ವ, ಇವರೊಂದಿಗೆ ಜಗಳ ತೆಗೆವ ಪತ್ನಿ ಸುನೀತಾ. ಜೊತೆಗೆ ಮನೆಗೆಲಸದಾಕೆ ಹೇಗಿರಬೇಕೋ ಹಾಗಿರುವ ಜಯಮ್ಮ... ಇಂಥ ಸಂಸಾರಕ್ಕೆ ಸಾಥಿಯಾಗುವವರು ಸಂಬಂಧಿಕರಾದ ವೆಂಕಟೇಶ್ ಮಾವ ಹಾಗೂ ಲಕ್ಷ್ಮಿ ಅತ್ತೆ. ಅನಾರೋಗ್ಯ ಕಾರಣವೆಂದು ಇವರ ಮನೆಗೆ ಪತ್ನಿ ಸಮೇತ ಬರುವ ವೆಂಕಟೇಶ್ ಮಾವ ಬದುಕಿನ ಪಾಠಗಳನ್ನು ಅಂದರೆ ನಗುನಗುತ್ತ ಹೇಗಿರಬೇಕೆಂದು ಹೇಳುತ್ತಾರೆ. ಇದಕ್ಕಾಗಿ ವೈದ್ಯರು ಆರೇ ತಿಂಗಳು ಅವಧಿ ಕೊಟ್ಟಿದ್ದಾರೆಂದು ತಿಳಿದಿದ್ದರೂ ನಗುನಗುತ್ತಿರುತ್ತಾರೆ. ಕೊನೆಗೆ ಹನುಮು ಕುಟುಂಬಕ್ಕೆ ಪಾಠ ಕಲಿಸಲೆಂದು ಆರು ತಿಂಗಳ ಅವಧಿಯ ನಾಟಕವೆಂದು ಕೊನೆಗೆ ತಿಳಿಯುತ್ತದೆ. ಯಾವಾಗಲೂ ಏನನ್ನೋ ಕೊರಗುತ್ತ, ವಯಸ್ಸಿಗಿಂತಲೂ ಜಾಸ್ತಿ ಆಗಿರುವವರ ಹಾಗೆ ಹನುಮು ಕಾಣುತ್ತ ಇರುತ್ತಾರೆ. ಸದಾ ಮಂಕಿ ಕ್ಯಾಪು, ಶಾಲು ಹೊದ್ದುಕೊಂಡು, ಊರುಗೋಲಿನೊಂದಿಗೆ ನಡೆಯುವ ಹನುಮುನನ್ನು ಕಂಡು ಅವರ ಮಾವ ‘‘ಮಾಸಿ ಹೋಗಿರುವ ಅಂಡರ್‌ವೇರ್ ಥರಾ ಇದ್ದೀಯಾ’’ ಎಂದು ಛೇಡಿಸುತ್ತಾರೆ. ಹೀಗೆಯೇ ಸೆಲ್ಫಿ ಸೌಮ್ಯಾರಂತಹ ಸೆಲ್ಫಿ ಹುಚ್ಚು ಹಚ್ಚಿಕೊಂಡಿರುವ ಇಂದಿನ ಯುವತಿಯರ ಗೀಳು ಕುರಿತು ವಿಡಂಬಿಸುತ್ತಲೇ ಎಚ್ಚರಿಸುತ್ತಾರೆ.
ಹೀಗೆ ಅಸಂಖ್ಯ ಕುಟುಂಬಗಳಲ್ಲಿ ನಡೆಯುವ ಜಗಳ, ಪ್ರೀತಿ, ವಾದ-ವಿವಾದ, ಸಾಮರಸ್ಯ ಸಂಗತಿಗಳ ಅನಾವರಣವಿದೆ ಈ ನಾಟಕದಲ್ಲಿ. ಅಂತಿಮವಾಗಿ ಹನುಮು ಹಾಗೂ ಅವರ ಪತ್ನಿ ಬದಲಾಗುತ್ತಾರೆ. ಹೇಗೆ ಎಂಬುದನ್ನು ತಿಳಿಯಲು ನೀವು ನಾಟಕ ನೋಡಬೇಕು.
ಕಳೆದ ವಾರ ಮೈಸೂರಿನ ಕಿರು ರಂಗಮಂದಿರದಲ್ಲಿ ಯಶಸ್ವಿಯಾಗಿ 83ನೇ ಪ್ರಯೋಗ ಕಂಡ ಈ ನಾಟಕ ಅಂದು ಹೌಸ್‌ಫುಲ್ ಆಗಿತ್ತು. ಹನುಮು ಪಾತ್ರಧಾರಿ ಕೃಷ್ಣಾನಂದ, ಅವರ ಪತ್ನಿ ಸರೋಜ ಪಾತ್ರಧಾರಿ ಡಾ.ಮಂಗಳಾ, ಹನುಮು ಸೊಸೆ ಸುನೀತಾ ಪಾತ್ರಧಾರಿ ನಿಶಿತಾ, ಹನುಮು ಮಗ ವಿಶ್ವನ ಪಾತ್ರಧಾರಿ ಗುರುಪ್ರಸಾದ್, ಇವರ ಮಗ ಭರತನ ಪಾತ್ರಧಾರಿ ಭರತ್ ಸ.ಜಗನ್ನಾಥ, ಮಗಳು ಸೌಮ್ಯಾ ಪಾತ್ರಧಾರಿ ಸಿಂಚನಾ ಶೈಲೇಶ್, ಮನೆಗೆಲಸದಾಕೆ ಜಯಮ್ಮ ಪಾತ್ರಧಾರಿ ಹರ್ಷಿತಾ ಸರ್ವೇಶ್ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಆದರೆ ಸಿಂಚನಾ ಶೈಲೇಶ್ ಅವರು ಸ್ವಲ್ಪ ಅವಸರವಾಗಿ ಮಾತುಗಳನ್ನು ಒಪ್ಪಿಸದೆ ನಿಧಾನವಾಗಿ ಹೇಳಿದರೆ ಪ್ರೇಕ್ಷಕರಿಗೆ ತಲುಪಲು ಸಾಧ್ಯ. ಇದಕ್ಕೆ ಭರತ ಜಗನ್ನಾಥ ಉತ್ತಮ ಉದಾಹರಣೆ; ಸಹಜವಾಗಿ ಅಭಿನಯದೊಂದಿಗೆ ಮಾತು ಸಹಜವಾಗಿ ಆಡುವುದರಿಂದ ಪ್ರೇಕ್ಷಕರಿಗೆ ತಲುಪುತ್ತಾರೆ. ಇದಕ್ಕೊಂದು ಉದಾಹರಣೆ; ಕ್ರಿಕೆಟ್ ಪಂದ್ಯದ ಹೈಲೈಟ್ಸ್ ನೋಡುತ್ತ, ‘‘ಹೈಲೈಟ್ಸ್ ನಲ್ಲೂ ಸೋತರು’’ ಎಂದಾಗ ಪ್ರೇಕ್ಷಕರು ಫಿದಾ. ಕೆಲಸದಾಕೆ ಪಾತ್ರದ ಹರ್ಷಿತಾ ಅವರು ಅಭಿನಯಿಸುತ್ತಿದ್ದೇನೆಂಬುದು ಬಿಟ್ಟರೆ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ. ಇನ್ನು ವೆಂಕಟೇಶ್ ಮಾವ ಪಾತ್ರಧಾರಿ ಶೈಲೇಶ್ ಕುಮಾರ್ ತಮ್ಮ ಪಂಚಿಂಗ್ ಮಾತುಗಳ ಮೂಲಕ ನಗಿಸುತ್ತಾರೆ. ಆದರೆ ಅವರು ಮಾತುಗಳನ್ನು ಹೇಳುವಾಗ ನೆಲ ನೋಡುತ್ತ ಹೇಳುತ್ತಾರೆ. ಇದನ್ನು ಬಿಟ್ಟು ಪ್ರೇಕ್ಷಕರನ್ನು ನೋಡುತ್ತ ಹೇಳಿದರೆ ಇನ್ನಷ್ಟು ಪರಿಣಾಮಕಾರಿಯಾಗಬಹುದು. ಇದರೊಂದಿಗೆ ಅವರು ಹನುಮು ಕುರಿತು ಹೇಳುವ ಮಾತು ಹೀಗಿದೆ:
‘‘ಯಥೇಚ್ಛವಾಗಿ ಹಣ ಇದ್ರೂ
ಖರ್ಚು ಮಾಡ್ದೆ
ತುಚ್ಛವಾಗಿ ಅದನ್ನು ಕೂಡಿಟ್ಟು
ಪೆಚ್ಚು ಮೋರೆ ಹಾಕಿ ನಿಂತಿದೆ ನೋಡು
ಹುಚ್ಚು ಮುಂಡೇದು’’
ಎನ್ನುವಲ್ಲಿ ತುಚ್ಛವಾಗಿ ಎಂದರೆ ಕೀಳಾಗಿ ಎಂದರ್ಥ. ಬಹುಶಃ ಪ್ರಾಸಬದ್ಧವಾಗಿ ಹೇಳುವ ಸಲುವಾಗಿ ಹೀಗೆ ಹೇಳಿರಬಹುದೇನೋ? ಇವರ ಪತ್ನಿಯಾಗಿ ಅಂದರೆ ಲಕ್ಷ್ಮಿ ಅತ್ತೆಯ ಪಾತ್ರಧಾರಿ ಎಂ.ಬಿ. ಲತಾ ಸರಿಯಾದ ಸಾಥಿಯಾಗಿ ನಿಲ್ಲುತ್ತಾರೆ. ಇನ್ನು ಅತ್ತೆ-ಸೊಸೆ ಜಗಳದ ಜುಗಲ್‌ಬಂದಿಯಾಗಿ ಡಾ.ಮಂಗಳಾ ಹಾಗೂ ನಿಶಿತಾ ಒಳ್ಳೆ ಸ್ಕೋರ್ ಪಡೆಯುತ್ತಾರೆ. ವಿಶ್ವನ ಪಾತ್ರಧಾರಿ ಗುರುಪ್ರಸಾದ್ ಅಮಾಯಕನೆಂದು ಸಾಬೀತುಪಡಿಸುವ ಅವರ ಅಭಿನಯ ಚೆಂದ. ಆದರೆ ಬಸ್ಸಲ್ಲೂ ಬರದೆ 12 ರೂಪಾಯಿ ಉಳಿಸಿದೆ ಎನ್ನುವ ದೃಶ್ಯದಲ್ಲಿ ಅಂಗಿಯ ಗುಂಡಿಗಳನ್ನು ಸರಿಯಾಗಿ ಹಾಕಿಕೊಳ್ಳದಿರುವುದು ಯಾಕೋ? ಅಂದರೆ ನಡೆದುಕೊಂಡು ಬಂದಿದ್ದೇನೆಂದು ತಿಳಿಸಲು ಮೊದಲ ಗುಂಡಿ ಬಿಚ್ಚಿದ್ದರೆ ಸಾಕಿತ್ತು. ಇದಕ್ಕೂ ಮೊದಲು ಅಂದರೆ ನಾಟಕದ ಆರಂಭಕ್ಕೆ ಉಳಿತಾಯಕ್ಕೆ ಸಂಬಂಧಿಸಿ ಮಾತನಾಡುವಾಗ ಜಾಸ್ತಿ ಲೈಟುಗಳಾದವೆಂದು ಹೆಂಡತಿಗೆ ಹೇಳುತ್ತ ಆಫ್ ಮಾಡುವ, ಕತ್ತಲಲ್ಲೇ ಮಾತಾಡುವ ಕ್ರಮ ಗಮನ ಸೆಳೆಯುತ್ತದೆ. ಇನ್ನೊಂದು ದೃಶ್ಯದಲ್ಲಿ ‘‘ವಿವೇಕಣ್ಣಾ ಲೈಟ್ ಆಫ್ ಮಾಡು’’ ಎಂದು ಬೆಳಕಿನ ಸಂಯೋಜಕ ವಿವೇಕ್ ಅವರಿಗೆ ಹೇಳುವ ಮೂಲಕ ದೃಶ್ಯ ಕೊನೆಗೊಳ್ಳುವುದನ್ನು ತಿಳಿಸುತ್ತಾರೆ.
ಕಡಿಮೆ ಪಾತ್ರಗಳಿರುವ ಆದರೆ ಎಲ್ಲರಿಗೂ ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಒಂದುಕಾಲು ಗಂಟೆಯ ಈ ನಾಟಕ ನಗಿಸುತ್ತದೆ, ಕಚಗುಳಿಯಿಡುತ್ತದೆ, ಬುದ್ಧಿ ಹೇಳುತ್ತದೆ. ಹೀಗಾಗಿ ಯಶಸ್ವಿ ನಾಟಕ. ಆದರೆ ಇನ್ನಷ್ಟು ಯಶಸ್ವಿಯಾಗಬೇಕಿತ್ತು ಎನ್ನಿಸುವುದು ಏಕೆಂದರೆ ಕೆಲವರದು ಪಕ್ವವಾದ ಅಭಿನಯ ಬೇಕಿತ್ತು ಎನ್ನಿಸುತ್ತದೆ.