ಡೆಂಗಿ ಜ್ವರ ಅಬ್ಬರ ನಡುವೆ ಪ್ಯಾರಸಿಟಮಾಲ್ ಗೆ ಬರ!

Update: 2024-07-04 05:54 GMT

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಡೆಂಗಿ ಜ್ವರ ಪ್ರಕರಣಗಳು ಗಣನೀಯ ಏರಿಕೆ ಕಂಡಿವೆ. ಇದರ ನಡುವೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್) ಡೆಂಗಿಯಿಂದ ಬಳಲುತ್ತಿರುವ ರೋಗಿಗಳಿಗೆ ನೀಡಲಾಗುವ ಪ್ಯಾರಸಿಟಮಾಲ್ ಮಾತ್ರೆಯನ್ನೇ ದಾಸ್ತಾನು ಮಾಡಿಕೊಂಡಿಲ್ಲ ಎನ್ನಲಾಗಿದ್ದು, ಇದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಪ್ಯಾರಸಿಟಮಾಲ್‌ಗಾಗಿ ಪರದಾಡುವ ವಾತಾವರಣ ನಿರ್ಮಾಣವಾಗಲಿದೆ.

ಆರೋಗ್ಯ ಇಲಾಖೆ ಅಧೀನದ ಕೆಎಸ್‌ಎಂಎಸ್‌ಸಿಎಲ್, ಕಂಪೆನಿಗಳಿಂದ ಔಷಧ ಖರೀದಿಸಿ ಸಾವಿರಾರು ಸರಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಸರಬರಾಜು ಮಾಡುವ ಹೊಣೆ ಹೊತ್ತಿದೆ. ಪ್ರತೀ ವರ್ಷ ಸರಕಾರ ನೀಡುವ ನೂರಾರು ಕೋಟಿ ರೂ. ಅನುದಾನ ಬಳಸಿಕೊಂಡು ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸಹಿತ 300ಕ್ಕೂ ಅಧಿಕ ಬಗೆಯ ಔಷಧಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದೆ.

ಇದೀಗ ರಾಜ್ಯಾದ್ಯಂತ ಡೆಂಗಿ ಪ್ರಕರಣಗಳು ಗಣನೀಯವಾಗಿ ಏರುಗತಿಯಲ್ಲಿವೆ. ಜತೆಗೆ, ಆರೋಗ್ಯ ಇಲಾಖೆಯ ಪ್ರಕಾರ ಬರೀ ಆರು ತಿಂಗಳ ಅವಧಿಯಲ್ಲಿ 6,377 ಪ್ರಕರಣಗಳು ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ 6 ಮಂದಿ ಈಗಾಲೇ ಮೃತಪಟ್ಟಿದ್ದಾರೆ. ಆದರೆ, 23 ಜಿಲ್ಲಾ, 161 ತಾಲೂಕು ಆಸ್ಪತ್ರೆ, 203 ಸಮುದಾಯ ಆರೋಗ್ಯ ಕೇಂದ್ರ, 2,331 ಪ್ರಾಥಮಿಕ ಆರೋಗ್ಯ ಕೇಂದ್ರ, 179 ನಗರ ಆರೋಗ್ಯ ಕೇಂದ್ರ ಸೇರಿ ಮೂರು ಸಾವಿರಕ್ಕೂ ಹೆಚ್ಚು ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರ ನಿಯಂತ್ರಣಕ್ಕೆ ನೀಡಲಾಗುವ ಪ್ಯಾರಸಿಟಮಾಲ್ ಮಾತ್ರೆ ದಾಸ್ತಾನು ಇಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೂ ಡೆಂಗಿ ಜ್ವರದಿಂದ ಬಳಲುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಿದೆ. ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮೇ ನಂತರ ಡೆಂಗಿ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಸೇರಿ ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗಿ ಪರೀಕ್ಷೆಗೆ ರಕ್ತ ಮಾದರಿ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರ ನಿಯಂತ್ರಿಸುವ ಪ್ಯಾರಸಿಟಮಾಲ್ (500 ಎಂಜಿ) ಔಷಧ ಸರಬರಾಜು ಆಗಿಲ್ಲ. ಇದರಿಂದಾಗಿ ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕೇವಲ ಶೇ.10 ಪ್ಯಾರಸಿಟಮಾಲ್(650 ಎಂಜಿ) ಡೆಂಗಿ ಔಷಧವನ್ನು ಮಾತ್ರ ನಿಗಮ ದಾಸ್ತಾನು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಡೆಂಗಿ ಪರೀಕ್ಷೆಗೆ ದರ ನಿಗದಿಪಡಿಸಿ ಸರಕಾರದ ಆದೇಶ

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಜ್ವರ ಪತ್ತೆ ಹಚ್ಚಲು ನಡೆಸುವ ಎಲಿಸಾ ಮತ್ತು ರಾಪಿಡ್ ಟೆಸ್ಟ್‌ಗಳ ದರವನ್ನು ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಡೆಂಗಿ ಜ್ವರ ಜನಸಾಮಾನ್ಯರಿಗೆ ಹೊರೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳು ಕೂಡ ಮನಬಂದಂತೆ ಡೆಂಗಿ ಟೆಸ್ಟಿಂಗ್‌ಗೆ ಬೆಲೆ ವಿಧಿಸದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸಚಿವರ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಡೆಂಗಿ ಟೆಸ್ಟಿಂಗ್‌ಗೆ ದರ ನಿಗದಿಪಡಿಸಿದೆ. ಎರಡು ರೀತಿಯ ಟೆಸ್ಟಿಂಗ್‌ಗಳಿಗೆ ಒಟ್ಟು 600 ರೂ. ದರ ನಿಗದಿ ಮಾಡಿ ಆದೇಶಿಸಿದೆ. ಎಲಿಸಾ ಎನ್ ಎಸ್‌1 ಹಾಗೂ ಎಲಿಸಾ ಐಜಿಎಂ ಎರಡು ಟೆಸ್ಟಿಂಗ್‌ಗಳಿಗೆ ತಲಾ 300 ರೂ.ಗಳನ್ನು ನಿಗದಿಪಡಿಸಲಾಗಿದೆ. ರಾಪಿಡ್ ಟೆಸ್ಟ್ ದರವನ್ನು 250 ರೂ.ಗೆ ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ರೋಟರಿಗಳು ಡೆಂಗಿ ಟೆಸ್ಟಿಂಗ್ ಮಾಡಲು 600 ರೂ.ಗಿಂತ ಹೆಚ್ಚು ವಿಧಿಸುವಂತಿಲ್ಲ ಎಂದು ತಿಳಿಸಿದೆ.

ಎಲಿಸಾ ಎನ್ ಎಸ್‌1 ಹಾಗೂ ಎಲಿಸಾ ಐಜಿಎಂ ಎರಡು ಟೆಸ್ಟಿಂಗ್‌ಗಳಿಗೆ ತಲಾ 300 ರೂ., ರಾಪಿಡ್ ಟೆಸ್ಟ್ ದರವನ್ನು 250 ರೂ. ನಿಗದಿ ಪಡಿಸಲಾಗಿದೆ.

ಖಾಸಗಿ ಆಸ್ಪತ್ರೆಗಳು ಹಾಗೂ ಲ್ಯಾಬ್ ರೋಟರಿಗಳು ಡೆಂಗಿ ಟೆಸ್ಟಿಂಗ್ ಮಾಡಲು 600 ರೂ.ಗಿಂತ ಹೆಚ್ಚು ವಿಧಿಸುವಂತಿಲ್ಲ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಮೀರ್ ದಳಸನೂರು

contributor

Similar News