ಜಾನಪದ ಸಾಹಿತ್ಯಕ್ಕೆ ಅಮೃತ ಸ್ಪರ್ಶ
ಅಮೃತ ಅವರಿಗೆ ಭಾಷೆ , ಜಾತಿ , ಧರ್ಮ ಇವು ಯಾವುವೂ ಅಡ್ಡಿಯಾಗಲಿಲ್ಲ .ಹಾಗಾಗಿಯೇ ಮೋಯ ಮಲೆಯಾಳಂ ಮಾತೃ ಭಾಷೆಯ ಅಮೃತರು ತುಳುವಿನ ಅಗ್ರಮಾನ್ಯ ಸಾಹಿತಿ ಸಂಶೋಧಕ ಆದರು .ಅವರು ಕನ್ನಡ ಪ್ರಾಧ್ಯಾಪಕರು ಆದುದಷ್ಟೇ ಅಲ್ಲದೆ ಕನ್ನಡದಲ್ಲಿ ಕಾವ್ಯ , ಕಥೆ , ಕಾದಂಬರಿ ,ನಾಟಕ ಬರೆದರು. ಯಕ್ಷಗಾನ ಪ್ರಸಂಗಗಳಿಗೆ ಆಧುನಿಕ ಚಿಂತನೆಗಳನ್ನು ಜೋಡಿಸಿ ಪೌರಾಣಿಕ ಪ್ರಸಂಗಗಳ ಏಕತಾನತೆಯನ್ನು ಹೋಗಲಾಡಿಸಿದರು. ಈರೀತಿ ಮಾಡುವಾಗ ಸಾಂಪ್ರದಾಯಿಕ ಪುರಾಣಗಳಿಗೆ ಹೊಸ ಭಾಷ್ಯವನ್ನು ಬರೆದರು. ಗಿರೀಶ್ ಕಾರ್ನಾಡರು ಕನ್ನಡದಲ್ಲಿ ನಾಟಕಗಳಿಗೆ ಕೊಟ್ಟ ಹೊಸ ಸ್ಪರ್ಶವನ್ನು ಅಮೃತರು ತಮ್ಮ ಯಕ್ಷಗಾನ ಪ್ರಸಂಗಗಳಿಗೆ ಕೊಟ್ಟರು .
2024ರ ಹೊಸವರ್ಷ ಕರಾವಳಿ ಕರ್ನಾಟಕದಲ್ಲಿ ದುಃಖದ ಆವರಣವನ್ನು ನಿರ್ಮಾಣಮಾಡಿದೆ . ಕರಾವಳಿಯ ಸಾಕ್ಷಿಪ್ರಜ್ಞೆಯಾಗಿದ್ದ ಪ್ರೊ.ಅಮೃತ ಸೋಮೇಶ್ವರರು ನಮ್ಮನ್ನು ಅಗಲಿದ್ದಾರೆ. ಎಂಬತ್ತೆಂಟು ವರ್ಷಗಳ ಸುದೀರ್ಘ ಬದುಕಿನ ಪ್ರಯಾಣದಲ್ಲಿ (27. 9 . 1935- 6. 1. 2024 ) ಬಹುಮಟ್ಟಿಗೆ ಸ್ವಂತ ಬಲದಿಂದಲೇ ಬೆಳೆದು ನಿಂತವರು ಅಮೃತರು.
ಅದು ಅವರ ಶಿಕ್ಷಣ, ಉದ್ಯೋಗ, ಬರವಣಿಗೆ, ಸಾಧನೆ -
ಎಲ್ಲದಕ್ಕೂ ಅನ್ವಯ ಆಗುತ್ತದೆ . ಆರ್ಥಿಕ ಬಲವಿಲ್ಲದ ಬೋವಿ ಸಮುದಾಯದಲ್ಲಿಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಚಿರಿಯಂಡ ಮತ್ತು ಅಮುಣಿ ದಂಪತಿಯ ಮಗನಾಗಿ ಹುಟ್ಟಿದ ಅಮೃತರು ಬದುಕು ಕಟ್ಟಿಕೊಂಡ ಬಗೆ ಅಪೂರ್ವವಾದದ್ದು.
ಕೋಟೆಕಾರಿನಲ್ಲಿ ಶಾಲೆಗೆ ಸೇರಿ ಶಿಕ್ಷಣ ಮುಂದುವರಿಸಲು ಸಾಧ್ಯ ಆಗದೆ ಮುಂಬೈ ಸೇರಿ, ಟೈಲರಿಂಗ್, ಕಚೇರಿ ಜವಾನ ಮುಂತಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ, ಮುಂದೆ ರಾತ್ರಿ ಶಾಲೆಗೆ ಸೇರಿ,
ಬಳಿಕ ಊರಿಗೆ ಬಂದು ಮತ್ತೆ ಕೋಟೆಕಾರಿನ ಆನಂದಾಶ್ರಮ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದ ಒಂದು ಘಟ್ಟ . ಮುಂದೆ ಬಳಿಕದ ಶಿಕ್ಷಣ ಪಡೆದು ಮಂಗಳೂರಿನ ಅಲೋಸಿಯಸ್ ಕಾಲೇಜಿನಲ್ಲಿ ಟ್ಯೂಟರ್ ಆಗಿ , ಮತ್ತೆ ಪುತ್ತೂರಿನ ಫಿಲೊಮಿನಾ ಕಾಲೇಜಿನಲ್ಲಿ ಸ್ವಲ್ಪ ಕಾಲ ಉಪನ್ಯಾಸಕರಾಗಿ , ಬಳಿಕ ಕನ್ನಡ ಎಂಎ ಮಾಡಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ,ಅಲ್ಲಿ ವಿಭಾಗ ಮುಖ್ಯಸ್ಥರಾಗಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದವರು ಅಮೃತ ಸೋಮೇಶ್ವರರು. 1993ರಲ್ಲಿ ನಿವೃತ್ತರಾಗುವ ವರೆಗೂ ಅವರು ಅಲ್ಲಿಯೇ ಕನ್ನಡದ ಕಾಯಕವನ್ನು ಶ್ರದ್ಧೆಯಿಂದ ಮಾಡಿದರು .
ಅವರು ಆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಇದ್ದ ಸಂದರ್ಭದ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದೇನೆ. ನಾನು ಮೈಸೂರು ವಿವಿಯ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಮೊದಲ ತಂಡದಲ್ಲಿ 1970ರಲ್ಲಿ ಕನ್ನಡ ಎಂಎ ಮುಗಿಸಿದೆ. ನನಗೆ ಮಂಗಳೂರು ಕೇಂದ್ರದಲ್ಲಿ ಮೊದಲನೆಯ ಸ್ಥಾನ ಬಂದಿತ್ತು. ಅಮೃತರು ಇದ್ದ ಕಾಲೇಜಿನಲ್ಲಿ ಒಂದು ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಕರೆದಿದ್ದರು. ನಾನು ಅರ್ಜಿ ಸಲ್ಲಿಸಿದ್ದೆ. ಸಂದರ್ಶನದಲ್ಲಿ ವಿಭಾಗ ಮುಖ್ಯಸ್ಥರಾಗಿ ಅಮೃತರು ಇದ್ದರು. ಅವರು ಪಂಪನ ಕಾವ್ಯದ ಒಂದು ಪದ್ಯದ ಸಹಿತ ವಿವರಣೆ ಕೊಡಲು ಹೇಳಿದರು. ಸರಿಯಾಗಿ ಉತ್ತರಿಸಿದೆ.
ನನ್ನ ಆಯ್ಕೆ ಆಗಲಿಲ್ಲ. ಅಮೃತರಿಗೆ ಇದರಿಂದ ಬಹಳ ಬೇಸರ ಆಯಿತು, ಅವರು ಕಾಲೇಜು ಆಡಳಿತ ಮಂಡಳಿಯವರ ಜೊತೆಗೆ ತಮ್ಮ ಅಸಮಾಧಾನ ತೋಡಿಕೊಂಡರು ಎಂದು ಆಮೇಲೆ ತಿಳಿಯಿತು. ನಾನು ಮಂಗಳಗಂಗೋತ್ರಿಗೆ ಉಪನ್ಯಾಸಕನಾಗಿ ಬಂದೆ. ಅಮೃತರು ತಮ್ಮ ಕಾಲೇಜಿನ ಅನೇಕ ಸಾಹಿತ್ಯ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುತ್ತಿದ್ದರು. ಹೀಗೆ ವೈಯಕ್ತಿಕ ನೆಲೆಯಲ್ಲಿನಮ್ಮ ನಡುವೆ ಆಪ್ತತೆ ಬೆಳೆಯಿತು.
ಇದಕ್ಕೆ ನಮ್ಮ ನಡುವಿನ ವೈಚಾರಿಕ ಕೊಡುಕೊಳೆಗಳು ಕೂಡ ಕಾರಣವಾಗಿದ್ದವು.
ಅಮೃತರದ್ದು ನಿರಂತರ ಚಟುವಟಿಕೆಯ ಸ್ವಭಾವ . ಅದು ಬರವಣಿಗೆಗೂ ಅನ್ವಯವಾಗುತ್ತದೆ. ಅವರ ಗ್ರಂಥಗಳ ಬಾಹುಳ್ಯವನ್ನು ಮತ್ತು ವೈವಿಧ್ಯವನ್ನು ಕಂಡರೆ ಇದು ಗೊತ್ತಾಗುತ್ತದೆ .
1957ರಲ್ಲಿ ಅವರು ಪ್ರಕಟಿಸಿದ ‘ಎಲೆಗಿಳಿ’ ಕವನಸಂಕಲನದಿಂದ ತೊಡಗಿ ಅವರ ಅನಾರೋಗ್ಯದ ನಡುವೆಯೂ ಅವರು ಪ್ರಕಟಿಸುತ್ತಾ ಬಂದ ಅವರ ರಚನೆಗಳನ್ನು ಗಮನಿಸಬಹುದು . ಅವರು ತಮ್ಮ ಸುತ್ತ ಯಾವುದೇ ಬಗೆಯ ಬೇಲಿಗಳನ್ನು ಹಾಕಿಕೊಳ್ಳಲಿಲ್ಲ .
ಅವರಿಗೆ ಭಾಷೆ , ಜಾತಿ , ಧರ್ಮ ಇವು ಯಾವುವೂ ಅಡ್ಡಿಯಾಗಲಿಲ್ಲ .
ಹಾಗಾಗಿಯೇ ಮೋಯ ಮಲೆಯಾಳಂ ಮಾತೃ ಭಾಷೆಯ ಅಮೃತರು ತುಳುವಿನ ಅಗ್ರಮಾನ್ಯ ಸಾಹಿತಿ ಸಂಶೋಧಕ ಆದರು .ಅವರು ಕನ್ನಡ ಪ್ರಾಧ್ಯಾಪಕರು ಆದುದಷ್ಟೇ ಅಲ್ಲದೆ ಕನ್ನಡದಲ್ಲಿ ಕಾವ್ಯ , ಕಥೆ , ಕಾದಂಬರಿ, ನಾಟಕ ಬರೆದರು. ಯಕ್ಷಗಾನ ಪ್ರಸಂಗಗಳಿಗೆ ಆಧುನಿಕ ಚಿಂತನೆಗಳನ್ನು ಜೋಡಿಸಿ ಪೌರಾಣಿಕ ಪ್ರಸಂಗಗಳ ಏಕತಾನತೆಯನ್ನು ಹೋಗಲಾಡಿಸಿದರು. ಈ ರೀತಿ ಮಾಡುವಾಗ ಸಾಂಪ್ರದಾಯಿಕ ಪುರಾಣಗಳಿಗೆ ಹೊಸ ಭಾಷ್ಯವನ್ನು ಬರೆದರು. ಗಿರೀಶ್ ಕಾರ್ನಾಡರು ಕನ್ನಡದಲ್ಲಿ ನಾಟಕಗಳಿಗೆ ಕೊಟ್ಟ ಹೊಸ ಸ್ಪರ್ಶವನ್ನು ಅಮೃತರು ತಮ್ಮ ಯಕ್ಷಗಾನ ಪ್ರಸಂಗಗಳಿಗೆ ಕೊಟ್ಟರು. ಸಹಸ್ರ ಕವಚ ಮೋಕ್ಷ,
ಕಾಯಕಲ್ಪ, ಅಮರವಾಹಿನಿ, ತ್ರಿಪುರ ದಹನ, ಮಹಾಕಲಿ ಮಗಧೇಂದ್ರ ಮುಂತಾದುವು ಇಂತಹ ಕೆಲವು ಪ್ರಸಂಗಗಳು.
ಆದರೆ ಇಂತಹ ಸಮಾಜಮುಖಿ ಯಕ್ಷಗಾನ ಪ್ರಸಂಗಗಳ ಬಗ್ಗೆ ಕನ್ನಡ ರಂಗಭೂಮಿ ವಲಯದಲ್ಲಿ ಹೆಚ್ಚಿನ ಚರ್ಚೆ ನಡೆಯದಿರುವುದು ವಿಷಾದನೀಯ.
ಅಮೃತ ಸೋಮೇಶ್ವರದ್ದು ಪ್ರಯೋಗಶೀಲ ಚಿಂತಕ ಮನಸ್ಸು. ಅವರ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ ಚಿಂತನಶೀಲತೆ ಗುಪ್ತಗಾಮಿನಿಯಾಗಿ ಪ್ರವಹಿಸಿದೆ. ಅವರು ತಮ್ಮ ವೈಚಾರಿಕತೆಯನ್ನು ತಮ್ಮ ಬದುಕು ಮತ್ತು ಬರಹಗಳಲ್ಲಿ ಉದ್ದಕ್ಕೂ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಧಾರ್ಮಿಕ ಡಂಭಾಚಾರಗಳನ್ನು ಅವರು ಟೀಕಿಸಿದ್ದಾರೆ. ಆಚಾರಗಳಲ್ಲಿ ಇರುವ ಮೂಢನಂಬಿಕೆಗಳನ್ನು ವಿರೋಧಿಸಿದ್ದಾರೆ .ಎಷ್ಟೋ ಬಾರಿ ಅವರು ಸೂತಕ ಪಾತಕ ಇತ್ಯಾದಿಗಳ ಬಗ್ಗೆ ನೇರವಾಗಿ ಧ್ವನಿ ಎತ್ತಿದ್ದಾರೆ. ಅವರಅನೇಕ ನಾಟಕಗಳಲ್ಲಿ ಅವರ ಭಾವನೆಗಳು ಪ್ರಕಟವಾಗಿವೆ.
‘ಗೋಂದೋಳು’ಅವರ ಬಹಳ ಜನಪ್ರಿಯ ನಾಟಕ; ಇದು ರಂಗಭೂಮಿಯಲ್ಲಿ ಜನಮೆಚ್ಚುಗೆ ಪಡೆದ ನಾಟಕ.
ಅಮೃತರು ಸಾಹಿತ್ಯದಲ್ಲಿ ಹೊಸಪ್ರಯೋಗಗಳನ್ನು ನಿರಂತರ ಮಾಡುತ್ತಾ ಬಂದಿದ್ದಾರೆ. ‘ಸಿಂಗಾರ ಗಾದೆಗಳು’ (1987) ಎಂಬ ಸ್ವತಂತ್ರ ಗಾದೆಗಳು, ‘ಅಪಾರ್ಥಿನಿ’ ( 1993) ಎಂಬ ಕುಚೋದ್ಯ ಕೋಶ, ಬಲಿ ಚಕ್ರವರ್ತಿ, ನಿಸರ್ಗ ವಿಜಯ ,
ಸಹನಾ ಸಂದೇಶ, ಛಲದಂಕ ಅಂಬೆ, ಕರ್ಣ ಗಾಥಾ ಮುಂತಾದ ನೃತ್ಯ ರೂಪಕಗಳು ರಂಗದಲ್ಲಿ ಪ್ರದರ್ಶಿತವಾಗಿ ಹೊಸ ಚಿಂತನೆಗಳನ್ನು ಪ್ರಸರಣ ಮಾಡಿವೆ . ಸಂಶೋಧಕರಾಗಿ ಅಮೃತರದ್ದು ಜನಪರ ಮನೋಧರ್ಮ. ತುಳು ಜಾನಪದಕ್ಕೆ ಸಂಬಂಧಿಸಿದ ಅವರ ಅವಿಲು, ತುಳು ಬದುಕು,
ತುಳು ಜಾನಪದ: ಕೆಲವು ನೋಟಗಳು-ಇಂತಹ ಕೆಲವು ನಿದರ್ಶನಗಳು. ಸಂಶೋಧಕರಾಗಿ ಅಮೃತರ ಎರಡು ಮಹತ್ವದ ಕೊಡುಗೆಗಳು: ‘ಮೋಯ ಮಲೆಯಾಳ ಕನ್ನಡ ಶಬ್ದಕೋಶ ’
ಮತ್ತು ‘ಭಗವತಿ ಆರಾಧನೆ’ ಇವು ಎರಡು ಗ್ರಂಥಗಳೇ ಸಾಕು ಅಮೃತರನ್ನು ಕನ್ನಡ ಸಂಶೋಧನೆಯ ಉತ್ತುಂಗದಲ್ಲಿ ನಿಲ್ಲಿಸಲು.
‘ಭಗವತಿ ಆರಾಧನೆ’ ಗ್ರಂಥಕ್ಕೆ ಅಮೃತರು ನನ್ನಿಂದ ಮುನ್ನುಡಿ ಬರೆಸುವ ಗೌರವವನ್ನು ನನಗೆ ಕೊಟ್ಟಿದ್ದರು. ಅದರ ಇಂಗ್ಲಿಷ್
ಅನುವಾದದ ಬಿಡುಗಡೆಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಒಂದು ಆರಾಧನಾ ಸಂಪ್ರದಾಯದ ಬಗ್ಗೆ ಇಷ್ಟು ವ್ಯಾಪಕವಾದ ಕ್ಷೇತ್ರಕಾರ್ಯ ಆಧಾರಿತವಾದ ಗ್ರಂಥ ಕನ್ನಡದಲ್ಲಿ ಕೂಡಾ ಅಪೂರ್ವ. ಆದರೆ ಇಂತಹ ಗ್ರಂಥಗಳು ನಮ್ಮ ಆಧುನಿಕ ಓದುಗರ ಗಮನವನ್ನು ಸೆಳೆಯುವುದಿಲ್ಲ ಎನ್ನುವುದು ನಮ್ಮ ಕಾಲದ ದುರಂತ.
ವೈಯಕ್ತಿಕವಾಗಿ ನನ್ನದು ಮತ್ತು ಅಮೃತ ಸೋಮೇಶ್ವರರದ್ದು ಸುಮಾರು ಐವತ್ತೈದು ವರ್ಷಗಳ ಎಳೆ ಕಡಿಯದ ಬಂಧುತ್ವ.
ಅವರ ಹಿರಿಯರ ಅಡ್ಕದ ಮನೆ, ಮತ್ತೆ ರಾಷ್ಟೀಯ ಹೆದ್ದಾರಿಯಲ್ಲಿ ಅವರು ಪ್ರೀತಿಯಿಂದ ಕಟ್ಟಿಸಿದ ‘ಒಲುಮೆ’ ಬಳಿಕ ತಾತ್ಕಾಲಿಕವಾಗಿ ವಾಸವಾಗಿದ್ದ ಕಡಲತಡಿಯ ಮನೆ ಮತ್ತೆ ಈಗಿನ ತಮ್ಮದೇ ಆದ ’ಒಲುಮೆ’ಯ ಮನೆ - ಎಲ್ಲ ಕಡೆಯೂ ನಾನು ಮನೆಯ ಒಳಗಿನವನಾಗಿ ಹೊಕ್ಕು ಬಂದಿದ್ದೇನೆ .ಅವರ ಶ್ರೀಮತಿ ನರ್ಮದಾ ಟೀಚರ್ ಅವರ ಆತಿಥ್ಯದ ಸುಖವನ್ನು ಅನುಭವಿಸಿದ್ದೇನೆ .
ನಾನು ತುಳು ಸಾಹಿತ್ಯ ಅಕಾಡಮಿಯ ಮೊದಲ ಅಧ್ಯಕ್ಷನಾಗಿ ಇದ್ದ ಕಾಲದಲ್ಲಿ (1994-98) ಅಮೃತ ಸೋಮೇಶ್ವರರು ಸದಸ್ಯರಾಗಿ ಇದ್ದರು. ಹೊಸ ಸರಕಾರ ಬಂದು ತುಳು ಅಕಾಡಮಿಯನ್ನು ರದ್ದು ಮಾಡುವ ಪ್ರಸ್ತಾವ ಬಂದಾಗ, ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ .ಮತ್ತೆ ಸರಕಾರ ಪುನರ್ ರೂಪಿಸುವ ಮಾತು ಬಂದಾಗ ನಡೆದ ಸಭೆಯಲ್ಲಿ ನಾನು ಅಮೃತ ಸೋಮೇಶ್ವರರು ಅಧ್ಯಕ್ಷರಾಗಬೇಕು ಎಂದು ಹೇಳಿದೆ. ಅಮೃತರು ಅದಕ್ಕೆ ಒಪ್ಪಲಿಲ್ಲ ಮಾತ್ರವಲ್ಲ , ನಾನೇ ಅಧ್ಯಕ್ಷನಾಗಿ ಮುಂದುವರಿಯಬೇಕು ಎಂದು ಒತ್ತಡಹಾಕಿ ಒಪ್ಪಿಸಿದರು .ಮುಂದೆ ನಾವು ಬಂಧುಗಳ ಹಾಗೆ ತುಳು ಅಕಾಡಮಿಯನ್ನು ಜನಪರವಾಗಿ ಕಟ್ಟಿದೆವು. ಜಾತಿ ಅಥವಾ ಮತೀಯ ಸಂಘಟನೆಗಳ ಜೊತೆಗೆ ಅಕಾಡೆಮಿ ಸಹಯೋಗದ ಕಾರ್ಯಕ್ರಮಗಳನ್ನು ನಡೆಸಬಾರದು ಎನ್ನುವ ನಿಲುವನ್ನು ನಾವು ಕೊನೆಯ ವರೆಗೂ ಪಾಲಿಸಿದೆವು. ವಿಶೇಷ ಘಟಕ ಯೋಜನೆಯಲ್ಲಿ ಕೊರಗರಿಗೆ, ಮಲೆಕುಡಿಯರಿಗೆ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಅಮೃತರ ಬೆಂಬಲ ವಿಶೇಷವಾಗಿ ಇತ್ತು . ನಮ್ಮ ಕಾಲದ ತುಳು ಸಾಹಿತ್ಯ ಅಕಾಡಮಿಯ ಒಂದು ಮಹತ್ವದ ಹೆಜ್ಜೆ -ಉಳ್ಳಾಲದಲ್ಲಿ ‘ಅಬ್ಬಕ್ಕ ಉತ್ಸವ’ವನ್ನು 1997ರಲ್ಲಿ ಏರ್ಪಡಿಸಿದ್ದು. ಕೋಮು ಸೌಹಾರ್ದವನ್ನು ಉಳ್ಳಾಲದಲ್ಲಿ ಸ್ಥಾಪಿಸಲು ಈ ಉತ್ಸವ ಸಹಕಾರಿ ಆಗಬಲ್ಲುದು ಎನ್ನುವ ಆಲೋಚನೆಯನ್ನು ನನಗೆ ಕೊಟ್ಟವರು ಅಮೃತ ಸೋಮೇಶ್ವರರು. ನಿಜವಾಗಿಯೂ ಅದೊಂದು ಅಭೂತ ಪೂರ್ವ ಅನುಭವ.
ಎಲ್ಲ ಧರ್ಮಗಳ ಎಲ್ಲ ಜಾತಿಗಳ ಜನರು ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿ ಅಬ್ಬಕ್ಕ ಉತ್ಸವ ಆಚರಿಸಿದ್ದು ನಮಗೆ ಧನ್ಯತೆಯ ಭಾವವನ್ನು ಉಂಟುಮಾಡಿತ್ತು.
ಆ ಸಂದರ್ಭದಲ್ಲಿ ಅಮೃತರು ‘ಉಳ್ಳಾಲ ಇತಿ ಆದಿ’ ಎನ್ನುವ ಪುಸ್ತಕವನ್ನು ಸಂಪಾದಿಸಿ ಕೊಟ್ಟಿದ್ದರು .
ನಾವು ಸಾಹಿತಿಗಳನ್ನು ಯಾರನ್ನೂ ಪರಸ್ಪರ ಹೋಲಿಸಲು ಸಾಧ್ಯ ಇಲ್ಲ. ಆದರೂ ಕೂಡ ಕರಾವಳಿ ಜಿಲ್ಲೆಯಲ್ಲಿ ಹುಟ್ಟಿ ಎಂಟು ಶತಮಾನದ ಸಮೀಪ ಬರುತ್ತಿರುವ ನನ್ನ ಪಾಲಿಗೆ ಡಾ.ಶಿವರಾಮ ಕಾರಂತರ ಬಳಿಕ ತಮ್ಮ ಬದುಕು ಬರಹಗಳಲ್ಲಿ ಜೀವಂತವಾಗಿ ಉಳಿಯಬಲ್ಲವರು ಪ್ರೊ.ಅಮೃತ ಸೋಮೇಶ್ವರರು. ವಿಶುಕುಮಾರ್ ನಿರ್ದೇಶಕರಾಗಿ ಇದ್ದ ಕೋಟಿ ಚೆನ್ನಯ’ ಸಿನೆಮಾ ಕ್ಕೆ ಅಮೃತರು ಮತ್ತು ನಾನು ಒಟ್ಟಿಗೆ
ಪದ್ಯ ಬರೆದೆವು.ಅವರು ಬರೆದ ‘ಜೋಡು ನಂದಾದೀಪ
ಬೆಳಗ್‌ಂಡ್ ತುಳುವನಾಡ್‌ದ ಗುಂಡೊಡ್’ ಬಹಳ ಜನಪ್ರಿಯ ಹಾಡು. ಅಂತಹ ತುಳುನಾಡಿನ ನಂದಾದೀಪ ನಂದಿಹೋದ ದುಃಖ ನಮ್ಮ ಪಾಲಿಗೆ ಒದಗಿ ಬಂದಿದೆ.