ಎರಡು ದಶಕಗಳಿಂದ ಮೃತದೇಹಗಳಿಗೆ ಅಂತ್ಯಸಂಸ್ಕಾರ ಮಾಡುತ್ತಿರುವ ವೃದ್ಧೆ

Update: 2024-10-08 08:08 GMT

ಚಿಕ್ಕಮಗಳೂರು: ಎರಡು ದಶಕಗಳಿಂದ ಸ್ಮಶಾನದಲ್ಲೇ ವಾಸವಿದ್ದು, ಮೃತದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತಾ ಚಿತೆಗಳಿಗೆ ಬೆಂಕಿ ಇಡುವ ಸಾರ್ಥಕದ ಜೀವನವನ್ನು ವೃದ್ಧೆಯೊಬ್ಬರು ನಡೆಸುತ್ತಿದ್ದಾರೆ.

ನಗರದ ಉಪ್ಪಳ್ಳಿಯಲ್ಲಿರುವ ಚಿತಾಗಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾಗ್ಯಮ್ಮ ಕಳೆದ 14 ವರ್ಷಗಳಿಂದ ಈ ಚಿತಾಗಾರಕ್ಕೆ ಹೊಂದಿಕೊಂಡಿರುವ ಸಣ್ಣ ಮನೆಯಲ್ಲಿ ವಾಸವಾಗಿದ್ದಾರೆ. ಭಾಗ್ಯಮ್ಮ ಇಲ್ಲಿನವರ ಪಾಲಿಗೆ ಚಿತಾಗಾರದಮ್ಮ ಆಗಿದ್ದಾರೆ.

ಸದಾ ಭಯ ಹುಟ್ಟಿಸುವ ಮಸಣದಲ್ಲಿ ಮಹಿಳೆಯೊಬ್ಬರು ರಾತ್ರಿ ಹಗಲೆನ್ನದೆ ಅಂತ್ಯಸಂಸ್ಕಾರ ಮಾಡುತ್ತಾ ಮಸಣ ಕಾಯುತ್ತಾ 14 ವರ್ಷ ಮಸಣದಲ್ಲೇ ಕಳೆದ ಕಥೆ ರೋಚಕವಾಗಿದೆ.

ಭಾಗ್ಯಮ್ಮ ಮೂಲತಃ ಚಿಕ್ಕಮಗಳೂರು ತಾಲೂಕಿನ ಕೆಂಗೇನಹಳ್ಳಿಯವರು. ಇವರ ಪತಿ ಸೌದೆ ಒಡೆಯುವ ಕೆಲಸ ಮಾಡುತ್ತಿದ್ದವರು. ಪತಿಗೆ ಸಹಾಯವಾಗಲಿ ಎಂದು ಭಾಗ್ಯಮ್ಮ ಕೂಡ ಪತಿಯೊಂದಿಗೆ ತೆರಳಿ ಸೌದೆ ಒಡೆಯುವುದನ್ನು ಕಲಿತು ಪತಿಗೆ ಹೆಗಲಾಗಿದ್ದರು. ಚಿಕ್ಕಮಗಳೂರು ನಗರದ ಉಪ್ಪಳ್ಳಿಯಲ್ಲಿರುವ ಚಿತಾಗಾರದಲ್ಲಿದ್ದ ವಾಚ್‌ಮನ್ ತೀರಿಕೊಂಡ ಬಳಿಕ ಮೃತದೇಹಗಳನ್ನು ಸುಡಲು ಬೇಕಾಗಿದ್ದ ಕಟ್ಟಿಗೆ ಒಡೆಯುವ ಕೆಲಸಕ್ಕೆ ಭಾಗ್ಯಮ್ಮ ತನ್ನ ಪತಿಯೊಂದಿಗೆ 20 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದರು. ಹೀಗೆ ಬಂದವರು ಪತಿ, ಪತ್ನಿ ಪೈಕಿ ಪತಿ ಚಿತಾಗಾರದಲ್ಲಿ ಮೃತದೇಹಗಳನ್ನು ಸುಡುವ ಕೆಲಸ ಮಾಡಿಕೊಂಡಿದ್ದರು. ಪತಿಯ ನಿಧನದ ಬಳಿಕ ಪತಿಯ ಕೆಲಸವನ್ನು ಪತ್ನಿ ಭಾಗ್ಯಮ್ಮ ಮಾಡುತ್ತಿದ್ದಾರೆ.

ಮೊದಲ ಮೃತದೇಹ ಸುಟ್ಟಾಗ ಕೈನಡುಗುತ್ತಿತ್ತು, ಹೆಣ ಸುಡುವ ಕೆಲಸ ಪುಣ್ಯದ ಕೆಲಸ ಎಂದು ಪತಿ ಹೇಳಿದ್ದನ್ನು ನೆನಪಿಸಿಕೊಂಡು ಧೈರ್ಯದಿಂದ ಇಂದಿಗೂ ಈ ಕೆಲಸ ಮಾಡುತ್ತಿದ್ದೇನೆ. ಈ ಕೆಲಸದಲ್ಲಿ ನನಗೆ ಸಂತೋಷ, ತೃಪ್ತಿ ಇದೆ ಎನ್ನುವ ಭಾಗ್ಯಮ್ಮ ಅನಾಥಮೃತದೇಹಗಳ ಪಾಲಿಗೆ ಭಾಗ್ಯವೇ ಆಗಿದ್ದಾರೆ.

18 ವರ್ಷಗಳಿಂದ ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವ ಭಾಗ್ಯಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದರೂ ಇಂದಿಗೂ ಚಿತಾಗಾರದಲ್ಲೇ ನೆಲೆಸಿದ್ದು, ಭಾಗ್ಯಮ್ಮ ಅವರ ಈ ಸೇವೆಗೆ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.

 ಕೊರೋನ ಕಾಲದಲ್ಲೂ ಅಂತ್ಯಸಂಸ್ಕಾರ

ಕೊರೋನ ಹೆಚ್ಚಾಗಿದ್ದ ಸಮಯದಲ್ಲಿ ಸತ್ತವರ ಸಮೀಪಕ್ಕೂ ಕುಟುಂಬಸ್ಥರು ಬಾರದ ದಿನಗಳಲ್ಲಿ ಭಾಗ್ಯಮ್ಮ ಒಂದೇ ದಿನಕ್ಕೆ 9 ಮೃತದೇಹಗಳನ್ನು ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ. ಕೊರೋನ ಪೀಡಿತರು ಮೃತರಾಗಿದ್ದ ವೇಳೆ ಅವರ ಮಕ್ಕಳೂ ಹತ್ತಿರ ಬಾರದಂತಹ ಪರಿಸ್ಥಿತಿಯಲ್ಲಿ ಸೋಂಕಿನ ಭೀತಿ ಇಲ್ಲದೆ ನೂರಾರು ಸೋಂಕು ಪೀಡಿತರ ಮೃತದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಕೆಲ ಧರ್ಮದಲ್ಲಿ ಬೇರೆ ಧರ್ಮಕ್ಕೆ ಮತಾಂತರವಾದವರು ಮೃತಪಟ್ಟರೆ ಆ ವ್ಯಕ್ತಿಯ ಧರ್ಮಕ್ಕೆ ಸಂಬಂಧಿಸಿದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಕೆಲ ಸಂದರ್ಭದಲ್ಲಿ ಅವಕಾಶ ಕೊಡುವುದಿಲ್ಲ. ಅಂತಹ ಸಂದರ್ಭದಲ್ಲಿ ಇಲ್ಲಿಗೆ ಮೃತದೇಹವನ್ನು ತಂದಾಗಲೂ ಅಂತಹ ಮೃತದೇಹಗಳಿಗೆ ಅವರವರ ಧಾರ್ಮಿಕ ವಿಧಿಯಂತೆಯೇ ಅಂತ್ಯಸಂಸ್ಕಾರ ನೆರವೇರಿಸಿದ ಕೀರ್ತಿಯೂ ಭಾಗ್ಯಮ್ಮ ಅವರಿಗಿದೆ.

 ನನಗೆ ಸ್ಮಶಾನದಲ್ಲಿ ವಾಸ ಮಾಡೋಕೆ ದೆವ್ವ ಭೂತಗಳ ಭಯ ಇಲ್ಲ. ಇಷ್ಟು ವರ್ಷಗಳಲ್ಲಿ ಒಂದು ದಿನವೂ ಭಯ ಅನ್ನುವುದೇ ಆಗಿಲ್ಲ. ಚಿತಾಗಾರದಲ್ಲಿ ಒಬ್ಬಳೇ ಮಧ್ಯರಾತ್ರಿಯಲ್ಲಿ ಓಡಾಡುತ್ತೇನೆ. ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಇಲ್ಲಿಗೆ ತಂದಾಗ ವಿಧಿವಿಧಾನ ಮಾಡಲು ಯಾರೂ ಇಲ್ಲವಾದರೆ ಹೇಗೆ ಮಾಡೋದು ಎಂಬುದನ್ನು ನಾನೇ ಹೇಳಿ ಕೊಡ್ತೀನಿ. ಈ ಕೆಲಸದಲ್ಲಿ ನನಗೆ ಸಂತೋಷ, ತೃಪ್ತಿ ಇದೆ.

 ಭಾಗ್ಯಮ್ಮ, ಉಪ್ಪಳ್ಳಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿರುವ ಮಹಿಳೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ. ಎಲ್ ಶಿವು

contributor

Similar News