ಕೃಷಿಯಲ್ಲಿ ಡೋನ್ ಬಳಕೆ; ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಂತ್ರಜ್ಞಾನದ ಅಭಿವೃದ್ಧಿ

Update: 2024-11-11 06:36 GMT

ಉಡುಪಿ: ಮಾನವರಹಿತ ವೈಮಾನಿಕ ವಾಹನ (ಯುವಿಎ) ಅಥವಾ ಡ್ರೋನ್ ಇಂದು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆಯಲ್ಲಿರುವ ತಂತ್ರಜ್ಞಾನ. ಈ ತಂತ್ರಜ್ಞಾನದ ಸಾಧ್ಯತಾ ವಲಯ ವಿಸ್ತರಿಸುತ್ತಿರುವಂತೆ ಕೃಷಿ ಕ್ಷೇತ್ರದಲ್ಲಿ ಇದನ್ನು ಹೆಚ್ಚೆಚ್ಚು ಬಳಸಲಾಗುತ್ತಿದ್ದು, ಇದೀಗ ಅದರ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿದೆ. ಕ್ರಾಪ್ ಮ್ಯಾಪಿಂಗ್, ಅವುಗಳ ವಿಶ್ಲೇಷಣೆ, ಬೆಳೆಗಳಿಗೆ ಕೀಟನಾಶಕಗಳು, ಪೋಷಕಾಂಶಗಳ ಸಿಂಪಡಣೆಯಂಥ ಕೃಷಿ ಚಟುವಟಿಕೆಗಳಿಗೆ ಇಂದು ಡ್ರೋನ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ.

ವಿವಿಧ ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ಬಳಕೆ ರೈತರಿಗೆ ಅದರಲ್ಲೂ ಸಣ್ಣ ಹಾಗೂ ಅತಿಸಣ್ಣ ರೈತ ಹಿಡುವಳಿದಾರರಿಗೆ ಅತ್ಯಂತ ಲಾಭದಾಯಕ ಎನಿಸುವ ದಿನ ದೂರವಿಲ್ಲ. ಡ್ರೋನ್ ಬಳಕೆಯಿಂದ ರೈತರಿಗೆ ಹಣದೊಂದಿಗೆ ಸಮಯದ ಉಳಿತಾಯೂ ಆಗಲಿದೆ.

ಇಂಥ ಒಂದು ಡ್ರೋನ್ ತಂತ್ರಜ್ಞಾನವನ್ನು ಬ್ರಹ್ಮಾವರದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ನವೀನ್ ಎನ್.ಎ. ಅಭಿವೃದ್ಧಿಪಡಿಸಿದ್ದಾರೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ಕೇಂದ್ರದ ಆವರಣದಲ್ಲಿ ಆಯೋಜಿಸ ಲಾದ ವಾರ್ಷಿಕ ಕೃಷಿ ಮೇಳ-2024ರಲ್ಲಿ ಡಾ.ನವೀನ್, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಇತರ ಗಣ್ಯರೆದುರು ಪ್ರಸ್ತುತ ಪಡಿಸಿದರು.

2022ರಲ್ಲಿ ಕೃಷಿಗೆ ಪರಿಚಯ: ಕೃಷಿ ವಿಜ್ಞಾನಿ ಡಾ.ನವೀನ್ ಹೇಳುವಂತೆ ಡ್ರೋನ್ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ಪರಿಚಯ ವಾಗಿದ್ದು 2022ರಲ್ಲಿ. ಇದಕ್ಕೆ ಮೊದಲು ಮಿಲಿಟರಿ, ಫೋಟೊಗ್ರಫಿಯಂಥ ಕಡೆಗಳಲ್ಲಿ ಬಳಕೆಯಾಗುತ್ತಿದ್ದ ಡ್ರೋನ್ ಕಡಿಮೆ ತೂಕದ್ದಾಗಿತ್ತು. ಆದರೆ ಕೃಷಿ ಕ್ಷೇತ್ರದಲ್ಲೀಗ ಹೆಚ್ಚು ಭಾರದ ಡ್ರೋನ್ ಬಳಕೆಯಾಗುತ್ತಿದೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಹೇಳುವುದಾದರೆ ಇಲ್ಲಿ ಡ್ರೋನ್ ಬಳಕೆಯ ನಿಯಂತ್ರಣಕ್ಕೆ ನಿರ್ದೇಶನಾಲಯವೊಂದಿದೆ. ಇದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಇಲಾಖೆಯ ಪ್ರಧಾನ ನಿರ್ದೇಶಕರು ಇದರ ಮುಖ್ಯಸ್ಥರಾಗಿರುವರು. ಈ ನಿರ್ದೇಶನಾಲಯ ಕೃಷಿ ಬೆಳೆಯಲ್ಲಿ ಡ್ರೋನ್ ಬಳಕೆಗೆ ಪ್ರತ್ಯೇಕ ಮಾನದಂಡಗಳನ್ನು, ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಡಾ.ನವೀನ್ ತಿಳಿಸಿದರು.

ಈ ಮೊದಲು ವಿದೇಶಗಳಿಂದ ಡ್ರೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೆ, ಇದೀಗ ದೇಶದ ಅನೇಕ ಕಡೆಗಳಲ್ಲಿ ಡ್ರೋನ್‌ಗಳನ್ನು ಮೇಕ್ ಇನ್ ಇಂಡಿಯಾದಡಿಯಲ್ಲಿ ತಯಾರಿಸಲಾಗುತ್ತಿದೆ. ಆದರೆ ಡ್ರೋನ್ ನಿರ್ವಹಣೆಗೆ ತರಬೇತಿ ಪಡೆದು ಲೈಸನ್ಸ್ ಹೊಂದಿರುವ ಪೈಲೆಟ್‌ಗಳಿಗೆ ಮಾತ್ರ ಇದನ್ನು ಬಳಸಲು ಅವಕಾಶವಿರುತ್ತದೆ ಎಂದವರು ವಿವರಿಸಿದರು.

ಸದ್ಯ ಕೃಷಿಯಲ್ಲಿ ಎರಡು ರೀತಿಯ ಡ್ರೋನ್ ಬಳಕೆಯಲ್ಲಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ್ದು. ಸಣ್ಣ ಗಾತ್ರದ ಡ್ರೋನ್ ಎಂದರೆ ಒಟ್ಟು 25 ಕೆ.ಜಿ. ತೂಕ ಹೊಂದಿರುವ ಡ್ರೋನ್. ಇದು ಬೆಳೆಗಳಿಗೆ ಸಿಂಪಡಿಸಲು 10 ಲೀ. ದ್ರಾವಣ, ರಾಸಾಯನಿಕಗಳನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಮಧ್ಯಮ ಗಾತ್ರದ ಡ್ರೋನ್ ಸುಮಾರು 150 ಕೆ.ಜಿ.ಭಾರವಿರುತ್ತದೆ. ಇದು ದ್ರಾವಣ, ಕೀಟನಾಶಕ, ರಾಸಾಯನಿಕ, ರಸಗೊಬ್ಬರಗಳನ್ನು ಬೆಳೆಗಳ ಮೇಲೆ ಸಿಂಪಡಣೆ ಮಾಡುವುದಲ್ಲದೇ ಅಲ್ಲದೇ ಬಿತ್ತನೆ ಬೀಜವನ್ನು ಸಹ ಬಿತ್ತುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಡಾ.ನವೀನ್ ಹೇಳುತ್ತಾರೆ.

ದೇಶದ ವಿವಿಧ ಭಾಗದಂತೆ ಕರ್ನಾಟಕದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ಅಡಿ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಗ್ರೋ ಡ್ರೋನ್ ಕುರಿತು ಸಂಶೋಧನೆ ಕೈಗೊಳ್ಳಲು ವಿವಿ ಹಾಗೂ ನಬಾರ್ಡ್ ಅನುದಾನ ನೀಡುತ್ತಿದೆ. ಇದರಲ್ಲಿ ನಾವು ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಭತ್ತದ ಬೆಳೆಯಲ್ಲಿ ಕೀಟನಾಶಕ, ಕಳೆ ನಾಶಕ, ರೋಗನಾಶಕಗಳಿಗೆ ದ್ರಾವಣವನ್ನು ಸಿಂಪರಣೆ ಮಾಡಲು ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಟೋಕಾಲ್ ಪ್ರಕಾರ ಮಾನ್ಯತೆ ನೀಡಲಾಗಿದೆ. ಇದರಂತೆ ನಮಗೆ ಎಷ್ಟು ಎತ್ತರದಲ್ಲಿ ಸಿಂಪರಣೆ ಮಾಡಬೇಕು. ಅದು ಎಷ್ಟು ದೂರತನಕ ಹೋಗಬಲ್ಲದು, ಎಷ್ಟು ಪ್ರಮಾಣದಲ್ಲಿ ಸಿಂಪರಣೆ ಮಾಡಬೇಕು, ಪೋಷಕಾಂಶಗಳು ಎಷ್ಟು ಪ್ರಮಾಣದಲ್ಲಿ ನೆಲವನ್ನು ತಲುಪುತ್ತದೆ, ಈ ಮೂಲಕ ರೋಗಬಾಧೆ, ಕೀಟಬಾಧೆಯನ್ನು ಎಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಬಹುದು ಎಂಬುದರ ಬಗ್ಗೆ ನಾವು ಕಳೆದೆರಡು ವರ್ಷಗಳಿಂದ ಸಂಶೋಧನೆ ಮಾಡುತ್ತಿದ್ದೇವೆ ಎಂದರು.

ಒಂದು ಎಕರೆಗೆ 6 ನಿಮಿಷ: ಈವರೆಗಿನ ನಮ್ಮ ಸಂಶೋಧನೆ ಅತ್ಯುತ್ತಮ ಫಲಿತಾಂಶವನ್ನು ತೋರಿವೆ. ಮುಂದಿನ ದಿನಗಳಲ್ಲಿ ರೈತರು ಡ್ರೋನ್ ಮೂಲಕ ಕಡಿಮೆ ಖರ್ಚಿನಲ್ಲಿ, ಕೆಲವೇ ಗಂಟೆಗಳಲ್ಲಿ ತಮ್ಮ ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪರಣೆ ಮಾಡಬಹುದು. ಈಗ ಇಬ್ಬರು ಕೂಲಿಗಳು ಒಂದು ದಿನಲ್ಲಿ 2 ಎಕರೆಗೆ ಸಿಂಪರಣೆ ಮಾಡಿದರೆ, ಡ್ರೋನ್ ಒಂದು ದಿನದಲ್ಲಿ 25 ಎಕರೆ ಬೆಳೆಗೆ ಕೀಟನಾಶಕ, ದ್ರಾವಣಗಳ ಸಿಂಪರಣೆ ಮಾಡಬಲ್ಲದು. ಅಂದರೆ ಒಂದು ಎಕರೆ ಬೆಳೆಗೆ ಸಿಂಪರಣೆ ಮಾಡಲು ಡ್ರೋನ್‌ಗೆ ಕೇವಲ 6 ನಿಮಿಷ ಸಾಕಾಗುತ್ತದೆ ಎಂದರು.

ಸದ್ಯ ನಿರ್ದೇಶನಾಲಯ ಬೆಳಗ್ಗೆ 6ರಿಂದ 10ರ ವರೆಗೆ ಸಂಜೆ 3ರಿಂದ 6ರವರೆಗೆ ಮಾತ್ರ ಡ್ರೋನ್ ಮೂಲಕ ಕೀಟನಾಶಕ, ದ್ರಾವಣಗಳ ಸಿಂಪರಣೆಗೆ ಅನುಮತಿ ನೀಡಿದೆ. ಏಕೆಂದರೆ ಈ ಅವಧಿಯಲ್ಲಿ ಗಾಳಿಯ ಬೀಸುವ ವೇಗ ಕಡಿಮೆ ಇರುತ್ತದೆ. ಅಲ್ಲದೇ ಡ್ರೋನ್ ಮೂಲಕ ಒಂದು ಮೀ. ಎತ್ತರದಲ್ಲಿ ಔಷಧ ಸಿಂಪಡಣೆ ಮಾಡುವುದರಿಂದ ಸಿಂಪಡಿಸಿದ ದ್ರಾವಣ ಹೆಚ್ಚು ಕಡೆ ವ್ಯಾಪಿಸುವುದಿಲ್ಲ ಎಂದರು.

ಪೈಲೆಟ್ ಲೈಸನ್ಸ್ ಅಗತ್ಯ: ಡ್ರೋನ್ ಬಳಕೆಗೆ ನಿರ್ದಿಷ್ಟ ಮಾನದಂಡಗಳಿವೆ. ಅಧಿಕೃತ ಪರವಾನಿಗೆ ಪಡೆದ (ಡ್ರೈವಿಂಗ್ ಲೈಸನ್ಸ್ ಇದ್ದಂತೆ) ತರಬೇತುದಾರ ಪೈಲೆಟ್ ಮಾತ್ರ ಅಗ್ರೋಡ್ರೋನ್ ಹಾರಿಸಬಲ್ಲ. ಲೈಸೆನ್ಸ್ ಇಲ್ಲದೇ ಹಾರಿಸಿದರೆ ಐಪಿಸಿ ಸೆಕ್ಷನ್ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ನಾನು ಸಹ ಪೈಲೆಟ್ ಲೈಸೆನ್ಸ್ ಪಡೆದಿದ್ದೇನೆ. ಹೀಗೆ ಒಮ್ಮೆ ಲೈಸನ್ಸ್ ಪಡೆದರೆ ಅದರ ಅವಧಿ 10 ವರ್ಷಗಳದ್ದಾಗಿದೆ ಎಂದು ಡಾ.ನವೀನ್ ತಿಳಿಸಿದರು.

ಅಲ್ಲದೇ ಆಸಕ್ತ ರೈತರು ಅಡಿಕೆ, ತೆಂಗು, ಗೇರು, ಭತ್ತ ಬೆಳೆಗಾರರು ಸ್ವ ಉದ್ಯೋಗಕ್ಕಾಗಿ ಡ್ರೋನ್ ಖರೀದಿಸಿ ಅದನ್ನು ಬಾಡಿಗೆ ಆಧಾರದಲ್ಲಿ ನೀಡಲು ಅವಕಾಶವಿದೆ. ಇವರು ತರಬೇತಿ ಪಡೆದು ಪೈಲೆಟ್ ಲೈಸೆನ್ಸ್ ಪಡೆಯಬಹುದು. ಅಲ್ಲದೇ ದೇಶದಲ್ಲೇ ಮೊದಲ ಬಾರಿ ಸರಕಾರ ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿ ಆರ್‌ಪಿಟಿಓ ಜೊತೆ ಒಡಂಬಡಿಕೆ ಮಾಡಿಕೊಂಡು ಶಿವಮೊಗ್ಗದಲ್ಲಿ ಕೃಷಿ ವಿವಿ ಈ ಪೈಲಟ್ ಲೈಸನ್ಸ್‌ನ್ನು ನೀಡುತ್ತಿದೆ. ಆಸಕ್ತರು ಇದಕ್ಕೆ ಅರ್ಜಿಯನ್ನು ಹಾಕಿಕೊಳ್ಳಬಹುದು ಎಂದು ಡಾ.ನವೀನ್ ತಿಳಿಸಿದರು.

ಸದ್ಯ ಕೃಷಿ ಬೆಳೆಗಳಿಗೆ ಮಾತ್ರ ಸಣ್ಣ ಡ್ರೋನ್ ಮೂಲಕ ದ್ರಾವಣ ಸಿಂಪರಣೆ ನಡೆಯುತ್ತಿದೆ. ತೆಂಗು, ಅಡಿಕೆ, ಗೇರುಬೀಜ ದಂಥ ತೋಟಗಾರಿಕಾ ಬೆಳೆಗಳಿಗೆ ಇವುಗಳ ಬಳಕೆ ಕಾರ್ಯಾರಂಭಿಸಿಲ್ಲ.

ತೋಟಗಾರಿಕಾ ಬೆಳೆಗಳಿಗೆ, ಕೊಳೆರೋಗಕ್ಕೆ ಇದನ್ನು ಬಳಸುವ ಮುನ್ನ ಸಾಕಷ್ಟು ಸಂಶೋಧನೆ ನಡೆಯಬೇಕಿದೆ. ಸಿಂಪರಣೆ ಎಷ್ಟು ದೂರ ವ್ಯಾಪಿಸುತ್ತದೆ, ಪರಿಣಾಮ ಯಾವ ಪ್ರಮಾಣದಲ್ಲಿರುತ್ತದೆ, ನೀರಿನ ಮೂಲಗಳಿಗೆ ಅದರಿಂದ ಏನು ಅಪಾಯವಿದೆ ಎಂಬ ಬಗ್ಗೆ ಅಧ್ಯಯನ ನಡೆಯಬೇಕಿದೆ. ಇಲ್ಲದಿದ್ದರೆ ಎಂಡೋಸಲ್ಫಾನ್‌ನಂತ ದುರಂತವೂ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದವರು ಅಭಿಪ್ರಾಯಪಟ್ಟರು.

ಡ್ರೋನ್ ಬಳಕೆ ದುಪ್ಪಟ್ಟು

ದೇಶದಲ್ಲಿ ಕೃಷಿಗಾಗಿ ಡ್ರೋನ್ ಬಳಕೆ ನಿರೀಕ್ಷೆಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಉದ್ಯಮದ ಅಂದಾಜಿನ ಪ್ರಕಾರ ಪ್ರಸಕ್ತ ಕೃಷಿ ವಲಯದಲ್ಲಿ 3,000 ಡ್ರೋನ್‌ಗಳು ಬಳಕೆಯಲ್ಲಿವೆ. 2025ರ ವೇಳೆಗೆ ಈ ಸಂಖ್ಯೆ 7,000ಕ್ಕೆ ಏರುವ ನಿರೀಕ್ಷೆ ಇದೆ.

ಡ್ರೋನ್ ನೀರಿನ ಅತ್ಯುತ್ತಮ ಬಳಕೆ, ಮಣ್ಣಿನ ಪೋಷಕಾಂಶಗಳು ಹಾಗೂ ಬೆಳೆ ಸಂರಕ್ಷಣೆಗೆ ಒತ್ತು ನೀಡಲಿದ್ದು, ಈ ಮೂಲಕ ಬೆಳೆ ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ಈಗಿನ ವೇಗದಲ್ಲಿ ಸಾಗಿದರೆ ಡ್ರೋನ್‌ಗಳ ಸಂಖ್ಯೆ ಮುಂದಿನೆರಡು ವರ್ಷಗಳಲ್ಲಿ 10ರಿಂದ 15 ಸಾವಿರಕ್ಕೂ ಹೆಚ್ಚಬಹುದು ಎಂದು ಕೃಷಿ ತಜ್ಞರು ಹೇಳುತ್ತಾರೆ.

ಡ್ರೋನ್ ನಿರ್ವಹಣೆಗೆ ತರಬೇತಿ

ಸದ್ಯಕ್ಕೆ ಅಗ್ರೋಡ್ರೋನ್‌ನ್ನು ಭತ್ತದಂಥ ಬೆಳೆಗಳ ರೋಗಬಾಧೆ, ಕೀಟಬಾಧೆ, ಕಳೆಬಾಧೆಗಳನ್ನು ತಡೆಯಲು ಮಾತ್ರ ಬಳಸಲಾಗುತ್ತದೆ. ಇದನ್ನು ಒಂದು ಮೀಟರ್ ಎತ್ತರದಲ್ಲಿ ಬಳಸುವುದರಿಂದ ಪರಿಸರ ಮಾಲಿನ್ಯ ಆಗುವ ಸಾಧ್ಯತೆ ಇರುವುದಿಲ್ಲ. ನಿರ್ದಿಷ್ಟ ಸಮಯದಲ್ಲಿ ಮಾತ್ರ ಡ್ರೋನ್ ಬಳಕೆಗೆ ಈಗ ಅವಕಾಶವಿದೆ.

ಡ್ರೋನ್ ಪೈಲೆಟ್ ಪರವಾನಿಗೆ ಪಡೆಯಲು ಆಸಕ್ತ ರೈತರು, ರೈತ ಮಹಿಳೆಯರು ಅಥವಾ ಎಸೆಸೆಲ್ಸಿ ತೇರ್ಗಡೆಗೊಂಡ ಯಾರು ಸಹ ಅರ್ಜಿ ಸಲ್ಲಿಸಬಹುದು. ಅವರಲ್ಲಿ ಸರಕಾರದ ಗುರುತಿನ ಚೀಟಿ ಇರಬೇಕು ಎಂದ ಡಾ.ನವೀನ್, ಆಸಕ್ತರು ತಮ್ಮನ್ನು ಸಂಪರ್ಕಿಸಿದರೆ (ಮೊ.: 9964177474) ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಬಿ.ಬಿ.ಶೆಟ್ಟಿಗಾರ್

contributor

Similar News