ಚಿಕ್ಕಮಗಳೂರು ಬಯಲು ಭಾಗದ ಎಳನೀರಿಗೆ ಹೆಚ್ಚಿದ ಬೇಡಿಕೆ

Update: 2024-11-11 05:29 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆ ಆರ್ಭಟ ನಿಲ್ಲುತ್ತಿದ್ದಂತೆ ರಣಬಿಸಿಲ ಝಳಕ್ಕೆ ಸಾರ್ವಜನಿಕರು ಕಂಗಾಲಾಗುತ್ತಿದ್ದು, ಬಿಸಿಲ ಧಗೆಯ ದಾಹ ನೀಗಿಸಿಕೊಳ್ಳಲು ಎಳನೀರಿಗೆ ಮುಗಿಬೀಳುತ್ತಿದ್ದಾರೆ. ಆದರೆ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಳನೀರಿನ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ.

ಒಂದು ತಿಂಗಳ ಹಿಂದೆ ಎಳನೀರೊಂದಕ್ಕೆ 40 ರೂ. ಇದ್ದ ಬೆಲೆ ಸದ್ಯ ನಗರ ಪ್ರದೇಶಗಳಲ್ಲಿ 60-65ರೂ. ಗೆ ದಿಢೀರ್ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಬಯಲು ಭಾಗದಲ್ಲಿ ತೆಂಗು ಬೆಳೆದ ಕೃಷಿಕರ ಮುಖ ದಲ್ಲಿ ಮಂದಹಾಸ ಮೂಡಿದ್ದರೆ, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ನಗರ, ಪಟ್ಟಣ ಪ್ರದೇಶಗಳಲ್ಲಿ ಬಿಸಿಲಧಗೆಯಿಂದಾಗುವ ದಾಹ ನೀಗಿಸಿಕೊಳ್ಳಲು ಸಾರ್ವಜನಿಕರು ಎಳನೀರಿನ ಮೊರೆ ಹೋಗುವುದು ಸಾಮಾನ್ಯವಾಗಿದೆ. ಈ ಕಾರಣಕ್ಕೆ ನಗರ, ಪಟ್ಟಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಎಳನೀರಿನ ಅಂಗಡಿಗಳು ಕಂಡು ಬರುತ್ತವೆ. ಈ ಹಿಂದೆ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಧಕ್ಕುತ್ತಿದ್ದ ಎಳನೀರಿನ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಒಂದೆಡೆ ಎಳನೀರು ಮತ್ತಷ್ಟು ದುಬಾರಿಯಾಗುತ್ತಿದ್ದರೆ, ಮತ್ತೊಂದೆಡೆ ಎಳನೀರಿನ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗುತ್ತಿದೆ.

ಕಾಫಿನಾಡಿನ ಬಯಲು ಭಾಗದಲ್ಲಿರುವ ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಯಥೇಚ್ಛವಾಗಿ ತೆಂಗು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ಎಳನೀರಿಗೆ ಜಿಲ್ಲೆ ಸೇರಿದಂತೆ ನೆರೆಯ ಮಂಗಳೂರು, ಹಾಸನ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಬೇಡಿಕೆ ಇದ್ದು, ದಕ್ಷಿಣ ಕನ್ನಡ ಜಿಲ್ಲೆಯೊಂದಕ್ಕೆ ಜಿಲ್ಲೆಯ ಬಯಲು ಭಾಗದಿಂದ ಪ್ರತಿನಿತ್ಯ 15-20 ಲೋಡ್ ಎಳನೀರು ಪೂರೈಕೆಯಾಗುತ್ತಿದೆ. ಸದ್ಯ ಜಿಲ್ಲೆಯ ಬಯಲು ಭಾಗದಲ್ಲಿ ಬೆಳೆಯುತ್ತಿರುವ ಎಳನೀರಿಗೆ ಮುಂಬೈ, ಗುಜರಾತ್, ದಿಲ್ಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಬೇಡಿಕೆ ಬಂದಿದ್ದು, ಇಲ್ಲಿ ಬೆಳೆಯುತ್ತಿರುವ ಎಳನೀರಿಗೆ ಹೊರ ರಾಜ್ಯಗಳಲ್ಲಿ ದುಪ್ಪಟ್ಟು ಬೆಲೆ ಸಿಗುತ್ತಿರುವುದರಿಂದ ಇಲ್ಲಿನ ಬಹುತೇಕ ಎಳನೀರು ಬೆಳೆ ಹೊರ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲಿ ಎಳನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಎಳನೀರು ಬೆಲೆ ದಿಢೀರ್ ಏರಿಕೆಯಾಗಿದೆ.

ದಿಢೀರ್ ಬೆಲೆ ಏರಿಕೆಯಿಂದಾಗಿ ಹೊರ ರಾಜ್ಯಗಳಿಗೆ ಎಳನೀರು ಪೂರೈಕೆ ಮಾಡುತ್ತಿರುವ ರೈತರು ಪ್ರತೀ ಎಳನೀರಿಗೆ 30-35 ರೂ. ಗಳಿಸುತ್ತಿದ್ದಾರೆ. ಹೊರ ರಾಜ್ಯಗಳಿಗೆ ಎಳನೀರು ಪೂರೈಕೆಯಿಂದಾಗಿ ರೈತರಿಗೂ ಹೆಚ್ಚು ಲಾಭ ಸಿಗುತ್ತಿದ್ದು, ಮಧ್ಯವರ್ತಿಗಳು ರೈತರ ತೆಂಗಿನ ತೋಟಗಳಿಗೆ ಬಂದು ಎಳನೀರಿನ ಗಾತ್ರ, ಗುಣಮಟ್ಟ ಪರೀಕ್ಷಿಸಿ, ನಂತರ ಉತ್ತಮ ಎಳನೀರಿಗೆ ಉತ್ತಮ ಬೆಲೆ ನೀಡಿ, ಅವರೇ ಕಟಾವು ಮಾಡಿ ಹೊರ ರಾಜ್ಯಗಳಿಗೆ ಎಳನೀರು ಪೂರೈಕೆ ಮಾಡುತ್ತಿದ್ದಾರೆ. ಸದ್ಯ ಎಳನೀರಿಗೆ ಸಿಗುತ್ತಿರುವ ಉತ್ತಮ ಬೆಲೆಯಿಂದಾಗಿ ತೆಂಗಿನ ತೋಟಗಳ ಮಾಲಕರು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

ಪ್ರತೀ ವರ್ಷ ನುಸಿ ರೋಗದಂತಹ ಹಲವಾರು ರೋಗಳಿಂದ ತೆಂಗು ಬೆಳೆಗಾರರಿಗೆ ನಷ್ಟ ಉಂಟಾಗುತ್ತಿತ್ತು. ಸದ್ಯ ತೆಂಗು ಬೆಳೆದಿರುವ ಕೃಷಿಕರು ಬೆಳೆ ಕಾಯಿಯಾಗುವುದಕ್ಕೂ ಮುನ್ನವೇ ಕಟಾವು ಮಾಡಿ ಎಳನೀರನ್ನು ಹೊರ ರಾಜ್ಯಗಳಿಗೆ ಲೋಡ್‌ಗಟ್ಟಲೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ತೆಂಗಿನಕಾಯಿ, ಕೊಬ್ಬರಿ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ ಹೊರ ರಾಜ್ಯಗಳಲ್ಲಿ ಸದ್ಯ ಇರುವ ಬೇಡಿಕೆ ಮುಂದಿನ ಕೆಲ ತಿಂಗಳುಗಳಲ್ಲಿ ಕಡಿಮೆಯಾಗಲಿದ್ದು, ಆಗ ಎಳನೀರಿನ ಬೆಲೆಯೂ ಇಳಿಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಎಳನೀರು, ತೆಂಗಿನಕಾಯಿ, ಕೊಬ್ಬರಿ ಬೆಲೆ ಸ್ಥಿರವಾಗಿರಲಿದೆ ಎಂದು ರೈತರು ಅಭಿಪ್ರಾಯಿಸುತ್ತಿದ್ದಾರೆ.

ಗುಜರಾತ್, ಮುಂಬೈ, ದಿಲ್ಲಿ ಸೇರಿದಂತೆ ಹೊರ ರಾಜ್ಯಗಳಲ್ಲಿ ಎಳನೀರಿಗೆ ಭಾರೀ ಬೇಡಿಕೆ ಬರುತ್ತಿರುವುದರಿಂದ ಸ್ಥಳೀಯ ತೆಂಗು ಬೆಳೆಗಾರರು ಉತ್ತಮ ಬೆಲೆ ಕಾರಣಕ್ಕೆ ಎಳನೀರನ್ನು ಹೊರ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಮಂಗಳೂರು, ಉಡುಪಿ ಜಿಲ್ಲೆಗಳಲ್ಲೂ ಎಳನೀರಿಗೆ ಸದ್ಯ ಹೆಚ್ಚು ಬೇಡಿಕೆ ಇರುವುದರಿಂದ ಅಲ್ಲಿಗೂ ಇಲ್ಲಿನ ಎಳನೀರು ಲೋಡ್‌ಗಟ್ಟಲೆ ಹೋಗುತ್ತಿದೆ. ಬೇಡಿಕೆ ಇರುವಾಗಲೇ ನಾವು ಎಳನೀರು ಮಾರಾಟ ಮಾಡಿ ಒಂದಷ್ಟು ಆದಾಯ ಗಳಿಸುತ್ತಿದ್ದೇವೆ. ಹೊರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಬೆಲೆ ಇಳಿಕೆಯಾಗಲಿದೆ. 60ರೂ. ಗೆ ಒಂದು ಎಳನೀರು ಮಾರಾಟ ಮಾಡುವ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಎಳನೀರಿನ ಬೆಲೆ ಕೇಳಿ ಗ್ರಾಹಕರು ಹೌಹಾರುತ್ತಿದ್ದಾರೆ. ನಾವು ಬೆಲೆ ಏರಿಕೆಗೆ ಕಾರಣ ಏನೆಂದು ಹೇಳಲೇಬೇಕು. ಇಲ್ಲವಾದರೆ ನಾವೇ ಹೆಚ್ಚು ಬೆಲೆ ಪಡೆಯುತ್ತಿದ್ದೇವೆ ಎಂದು ಎಳನೀರು ಖರೀದಿ ಮಾಡುವುದಿಲ್ಲ. ಎಳನೀರಿಗೆ ಸದ್ಯ ಭಾರೀ ಬೇಡಿಕೆ ಇದ್ದರೂ ಸ್ಥಳೀಯ ವ್ಯಾಪಾರಿಗಳಿಗೆ ಎಳನೀರು ಸಿಗದಂತಾಗಿದೆ.

- ರಮೇಶ್, ಆಜಾದ್ ಪಾರ್ಕ್ ವೃತ್ತದಲ್ಲಿ ಎಳನೀರು ಮಾರಾಟ ಮಾಡುವ ವ್ಯಾಪಾರಿ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಲ್.ಶಿವು

contributor

Similar News