‘ಇಂಡಿಯಾ’ ಮೈತ್ರಿಕೂಟದೊಳಗೆ ಕವಲು ದಾರಿಗಳು ಸೃಷ್ಟಿಯಾಗುತ್ತಿವೆಯೆ?

‘ಇಂಡಿಯಾ’ ಮೈತ್ರಿಕೂಟದ ಎದುರಿನ ಕಷ್ಟಗಳು, ಆತಂಕಗಳು ಮುಗಿಯುತ್ತಲೇ ಇಲ್ಲವೆ? ನಾಯಕತ್ವಕ್ಕಾಗಿ ಒಳಗೊಳಗೇ ನಡೆದಿರುವ ಗುದ್ದಾಟ ಅದರಲ್ಲಿ ಒಡಕಿಗೆ ಕಾರಣವಾಗುತ್ತಿದೆಯೇ? ಬಿಜೆಪಿಯೆದುರು ಒಂದಾಗಬೇಕಾಗಿರುವ ವಿಪಕ್ಷಗಳು ತಮ್ಮೊಳಗೇ ಅಸಮಾಧಾನಗೊಳ್ಳುತ್ತ, ಮುಖ ತಿರುಗಿಸಿಕೊಳ್ಳುತ್ತ, ಆಗಲೇ ಆಡಿಕೊಳ್ಳುತ್ತಿರುವ ಬಿಜೆಪಿಯ ಮುಂದೆ ನಗೆಪಾಟಲಿಗೆ ಈಡಾಗಲಿವೆಯೇ? ಎಲ್ಲ ಭಿನ್ನಮತಗಳನ್ನು ಬದಿಗಿಟ್ಟು, ಯಾವ ಗುರಿಗಾಗಿ ಒಂದಾಗಬಯಸಿವೆಯೋ ಅದರ ಕಡೆ ಗಮನ ವಹಿಸಬೇಕಿರುವ ಹೊತ್ತಿನಲ್ಲಿ ಮೈತ್ರಿಕೂಟದೊಳಗೆ ಕವಲು ದಾರಿಗಳು ಸೃಷ್ಟಿಯಾಗುತ್ತಿವೆಯೇ?

Update: 2024-01-17 07:11 GMT
Editor : Thouheed | Byline : ವಿನಯ್ ಕೆ.

ಮೈತ್ರಿಕೂಟಕ್ಕೆ ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ. ಇದು ನಿಜಕ್ಕೂ ಮಹತ್ವದ ನಿರ್ಧಾರ. ಆದರೆ, ನಿತೀಶ್ ಕುಮಾರ್ ಸಂಚಾಲಕರಾಗಲು ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಅವರಿಗೆ ತಮ್ಮನ್ನು ಎಲ್ಲರೂ ಒಗ್ಗಟ್ಟಾಗಿ ಸಂಚಾಲಕ ಹುದ್ದೆ ನೀಡಬೇಕು, ತನ್ನನ್ನೇ ಕೂಟದ ಮುಖವಾಗಿ ಬಿಂಬಿಸಬೇಕು ಎಂಬ ಮನಸ್ಸಿದೆ. ಆದರೆ ಮಮತಾ ಬ್ಯಾನರ್ಜಿಯಂತಹವರು ಅದಕ್ಕೆ ತಯಾರಿಲ್ಲ.

ಇದೆಲ್ಲ ಎಲ್ಲಿಗೆ ಹೋಗಿ ತಲುಪಬಹುದು?

ಮೊನ್ನೆಯ ಸಭೆಯ ವಿಚಾರವನ್ನೇ ಗಮನಕ್ಕೆ ತೆಗೆದುಕೊಳ್ಳುವುದಾದರೆ, ಆ ವರ್ಚುವಲ್ ಸಭೆಗೆ ಮಮತಾ ಗೈರಾಗಿದ್ದರು. ಅದರ ನಡುವೆಯೇ, 14 ಪ್ರತಿಪಕ್ಷಗಳು ಸೇರಿದ್ದ ಆ ಸಭೆಯಲ್ಲಿ ಮೈತ್ರಿಕೂಟದ ಅಧ್ಯಕ್ಷರ ಆಯ್ಕೆ ಮತ್ತು ಸಂಚಾಲಕರ ಆಯ್ಕೆ ನಡೆಯಿತು.

ಆದರೆ ನಿತೀಶ್ ಕುಮಾರ್ ಎಲ್ಲ ಪಕ್ಷಗಳೂ ಒಪ್ಪಿದರೆ ಮಾತ್ರವೇ ಹಾಗೂ ತಮ್ಮ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟಪಡಿಸಿದರೆ ಮಾತ್ರವೇ ಹೊಣೆ ಹೊರುವುದಾಗಿ ಹೇಳಿರುವುದು ಮೈತ್ರಿಕೂಟದೊಳಗೆ ಕಗ್ಗಂಟು ಸೃಷ್ಟಿಸಿದೆ.

ಸೀಟು ಹೊಂದಾಣಿಕೆಯನ್ನು ತಡಮಾಡದೆ ಮುಗಿಸಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ ನಡೆಸಬೇಕಾದ ಅನಿವಾರ್ಯತೆ ಇರುವ ‘ಇಂಡಿಯಾ’ ಮೈತ್ರಿಕೂಟಕ್ಕೆ ದಿನಕ್ಕೊಂದು ವಿಘ್ನ ಎದುರಾಗುತ್ತಿದೆ.

ಈಗ, ‘ಭಾರತ ಜೋಡೊ ನ್ಯಾಯ ಯಾತ್ರೆ’ ಕೂಡ ಮೈತ್ರಿಯಲ್ಲಿ ಇನ್ನಷ್ಟು ಒಡಕಿಗೆ ಕಾರಣ ಆಗಬಹುದೇ? ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ, ಇಂಡಿಯಾ ಯಾತ್ರೆ ಪ್ರಸ್ತಾಪವನ್ನು ಇದೇ ನಿತೀಶ್ ಕುಮಾರ್ ಅವರ ಜೆಡಿಯು ಮುಂದಿಟ್ಟಿತ್ತು.

ಈ ಎಲ್ಲ ಸಮಸ್ಯೆಗಳು ಸೇರಿ, ಬಿಜೆಪಿಗೆ ಸೆಡ್ಡು ಹೊಡೆಯುವ ಬದಲು ಬಿಜೆಪಿಗೆ ಅನುಕೂಲ ಮಾಡಿಕೊಡುವಂತಹ ಪರಿಸ್ಥಿತಿಯನ್ನು ಇಂಡಿಯಾ ಮೈತ್ರಿಕೂಟ ತಂದುಕೊಳ್ಳಲಿದೆಯೆ?

ಇದಕ್ಕೂ ಹಿಂದೆ, ದಿಲ್ಲಿ ಸಭೆ ವೇಳೆ ಕೂಡ ಹಲವು ಬಗೆಯಲ್ಲಿ ಅಪಸ್ವರಗಳು ಎದ್ದಿದ್ದವು.

ಆ ಕಡೆ ಮಮತಾ ಬ್ಯಾನರ್ಜಿಯವರ ಟಿಎಂಸಿ ಕಾಂಗ್ರೆಸ್ ವಿರುದ್ಧ ಮಾತಾಡಿತ್ತು. ಬಿಹಾರದಲ್ಲಿ ನಿತೀಶ್ ಅವರು ಮೈತ್ರಿಕೂಟಕ್ಕೆ ಅನಿವಾರ್ಯ ಎಂಬರ್ಥದ ಪೋಸ್ಟರ್‌ಗಳು ರಾರಾಜಿಸುತ್ತಿದ್ದುದು ಸುದ್ದಿಯಾಗಿತ್ತು.

ಅದರ ನಡುವೆಯೇ ಸಭೆ ನಡೆದು, ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜಿ ಅವರು ಖರ್ಗೆ ಹೆಸರನ್ನು ಸೂಚಿಸಿದ್ದರು.

ಅದು, ಅವರು ಪ್ರಾಮಾಣಿಕವಾಗಿ ಹೇಳಿದ್ದಾಗಿತ್ತು ಎಂಬುದಕ್ಕಿಂತ ಹೆಚ್ಚಾಗಿ ನಿತೀಶ್ ಕುಮಾರ್ ವಿರುದ್ಧದ ಅವರ ಒಂದು ತಂತ್ರವೂ ಆಗಿರುವ ಸಾಧ್ಯತೆಯಂತೆ ಕಂಡಿತ್ತು ಮತ್ತು ಆ ಬೆಳವಣಿಗೆ ನಿತೀಶ್ ಕುಮಾರ್ ಅವರಿಗೆ ಅಪೇಕ್ಷಿತವಾದದ್ದೇನೂ ಆಗಿರಲಿಲ್ಲ.

ಅದಾದ ಬಳಿಕ ಕಳೆದ ಹಲವು ದಿನಗಳಿಂದ ಜೆಡಿಯು ನಾಯಕರು ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಲು ಒತ್ತಾಯಿಸುತ್ತಿದ್ದರು.

ಆದರೆ, ಸಂಚಾಲಕ ಹುದ್ದೆ ಒಪ್ಪಿಕೊಳ್ಳಲು ಈಗ ಅವರು ಸತಾಯಿಸುತ್ತಿರುವುದು, ಮೈತ್ರಿಕೂಟದ ಪರಿಕಲ್ಪನೆ ಒಂದು ಹಂತ ಮುಟ್ಟುವಷ್ಟರೊಳಗೇ ಅಪಾಯಕ್ಕೆ ತುತ್ತಾಗಲಿದೆಯೇ ಎನ್ನುವಂಥ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಯಾಕೆ ನಿತೀಶ್ ಇಂಥದೊಂದು ಅನಿಶ್ಚಿತತೆಗೆ ಕಾರಣವಾಗುವಂಥ ತೀರ್ಮಾನ ತೆಗೆದುಕೊಂಡಿದ್ದಾರೆ?

ವಿಶ್ಲೇಷಕರ ಪ್ರಕಾರ, ಅವರ ನಿರ್ಧಾರದ ಹಿಂದೆ ನಾಲ್ಕು ಪ್ರಮುಖ ಕಾರಣಗಳಿವೆ:

ಮೊದಲನೆಯದಾಗಿ,

ಕಾಂಗ್ರೆಸ್‌ನಿಂದ ಆ ಬಗ್ಗೆ ಸ್ಪಷ್ಟ ಸುಳಿವು ಇತ್ತಾದರೂ, ಸಂಚಾಲಕರನ್ನಾಗಿ ಘೋಷಿಸುವಲ್ಲಿ ಅದು ವಿಳಂಬ ಮಾಡಿತೆಂಬುದು.

ಕಾಂಗ್ರೆಸ್ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ವಿಳಂಬ ಧೋರಣೆ ತೋರಿಸುತ್ತಿರುವುದರ ಬಗ್ಗೆ ಜೆಡಿಯು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿತ್ತು.

ಪ್ರಮುಖ ನಿರ್ಧಾರಗಳನ್ನು ಕಾಂಗ್ರೆಸ್ ಹೆಚ್ಚು ಸಮಯ ಕಳೆಯದೆ ತೆಗೆದುಕೊಳ್ಳಬೇಕು ಎಂದು ಜೆಡಿಯು ಮುಖ್ಯ ವಕ್ತಾರ ಕೆ.ಸಿ. ತ್ಯಾಗಿ ಹೇಳುವುದರೊಂದಿಗೆ ಅಸಮಾಧಾನ ತೀವ್ರ ಮಟ್ಟಕ್ಕೆ ಹೋಯಿತು.

ಇಲ್ಲಿ ಇನ್ನೂ ಒಂದು ವಿಚಾರವಿತ್ತು.

ಏನೆಂದರೆ, ರಾಹುಲ್ ಗಾಂಧಿಯವರ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಗಿಂತ ಹೆಚ್ಚಾಗಿ ಇಂಡಿಯಾ ಯಾತ್ರೆಗೆ ಜೆಡಿಯು ಒಲವು ತೋರಿತ್ತು ಮತ್ತು ಅದಕ್ಕಾಗಿ ಕೇಳಿತ್ತು ಎಂದು ವರದಿಗಳಿವೆ. ಆದರೆ, ಅದಕ್ಕೆ ವಿರುದ್ಧವಾದ ಬೆಳವಣಿಗೆಗಳು ನಡೆದವು.

ಎರಡನೆಯದಾಗಿ,

ನಿತೀಶ್ ಕುಮಾರ್ ಮೈತ್ರಿಕೂಟದಲ್ಲಿ ತಮ್ಮ ಪಾತ್ರ ಪ್ರಮುಖವಾದದ್ದಾಗಿರಬೇಕು ಎಂಬ ಇರಾದೆಯನ್ನೇ ಇಟ್ಟುಕೊಂಡು ಬಂದವರು.

ಆದರೆ ದಿಲ್ಲಿ ಸಭೆಯ ವೇಳೆ ಮಮತಾ ಬ್ಯಾನರ್ಜಿ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದದ್ದು ಅವರಿಗೆ ಅಷ್ಟು ಸರಿ ಕಾಣಿಸಿರಲಿಲ್ಲ.

ಅದಾದ ಬಳಿಕ, ಪ್ರಧಾನಿ ಅಭ್ಯರ್ಥಿಯೆಂದು ಮಮತಾ ಅವರು ಖರ್ಗೆ ಹೆಸರು ಸೂಚಿಸಿದ ಬಳಿಕವಂತೂ ಅವರ ಅಸಮಾಧಾನ ಇನ್ನೂ ಜಾಸ್ತಿಯಾಗಿತ್ತು. ಹಾಗಾಗಿಯೇ, ಅವರು ಸಂಚಾಲಕ ಹುದ್ದೆಯನ್ನು ಎಲ್ಲರೂ ಸಹಮತ ತೋರಿದರೆ ಮಾತ್ರವೇ ಒಪ್ಪಿಕೊಳ್ಳುವುದಾಗಿ ಮೊನ್ನೆಯ ವರ್ಚುವಲ್ ಸಭೆಯಲ್ಲಿ ಹೇಳಿದ್ದು.

ಮೂರನೆಯದಾಗಿ,

ರಾಜಕೀಯವಾಗಿ ನಿಗೂಢ ನಡೆಗೆ ಹೆಸರಾಗಿರುವ ನಿತೀಶ್ ಕುಮಾರ್ ಇಲ್ಲಿಯೂ ಅಂಥದೇ ಆಟದಲ್ಲಿ ತೊಡಗಿದ್ದಾರೆ. ಅವರ ನಿಲುವು ಕಾಂಗ್ರೆಸ್‌ಗೆ ಅಸ್ಪಷ್ಟವಾಗಿಯೇ ಇರುವಂತಾಗಿದೆ.

ಅಯೋಧ್ಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಕಾಂಗ್ರೆಸ್ ನಿರ್ಧಾರಕ್ಕೂ ಬಹಿರಂಗವಾಗಿ ಅವರು ಸಹಮತ ವ್ಯಕ್ತಪಡಿಸಿಲ್ಲ.

ಇನ್ನೊಂದೆಡೆ, ಮೈತ್ರಿಕೂಟದಲ್ಲಿ ಅವರು ತಮಗೆ ಬಹಳ ಮಹತ್ವದ ಪಾತ್ರವನ್ನು ಕಾಂಗ್ರೆಸ್ ನೀಡಬೇಕೆಂಬ ನಿರೀಕ್ಷೆಯಲ್ಲಿದ್ದಾರೆ.

ಕಾಂಗ್ರೆಸ್ ಎಲ್ಲಾ ಪ್ರಮುಖ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ, ಬಳಿಕ ನಿರ್ದಿಷ್ಟ ಹೊಣೆಗಾರಿಕೆಯೊಂದಿಗೆ ಸಂಚಾಲಕ ಸ್ಥಾನ ಒಪ್ಪಿಕೊಳ್ಳುವಂತೆ ತಮಗೆ ಮನವರಿಕೆ ಮಾಡಲಿ ಎಂದು ಅವರು ಬಯಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಕಡೆಯದಾಗಿ,

ಬಿಹಾರದಲ್ಲಿನ ಜಾತಿ ಗಣತಿಯ ಪ್ರಮುಖ ವಿಚಾರವಾದ ಅತ್ಯಂತ ಹಿಂದುಳಿದ ವರ್ಗಗಳ ವಿಚಾರವನ್ನು ಚುನಾವಣೆಯಲ್ಲಿ ಮುಖ್ಯವಾಗಿ ಎತ್ತಿಕೊಳ್ಳಬೇಕು ಎಂಬುದು ಜೆಡಿಯು ಒತ್ತಾಯ.

ಅದು ಅತ್ಯಂತ ಹಿಂದುಳಿದ ವರ್ಗದ ನಾಯಕ ಮತ್ತು ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವವನ್ನು ಜನವರಿ 24ರಂದು ಆಚರಿಸುತ್ತಿದೆ.

ಕರ್ಪೂರಿಯವರನ್ನು ಸಂಕೇತವಾಗಿಟ್ಟುಕೊಂಡು, ನಿತೀಶ್ ಮಾದರಿಯನ್ನು ಪ್ರತಿಪಾದಿಸುವ ಮೂಲಕ ಜನರೆದುರು ಹೋಗುವುದಾಗಿ ಜೆಡಿಯು ನಾಯಕರು ಹೇಳುತ್ತಿದ್ದಾರೆ.

ಮಾತ್ರವಲ್ಲದೆ, ರಾಮಮಂದಿರ ಉದ್ಘಾಟನೆ ವಿಚಾರಕ್ಕೂ ಬಿಜೆಪಿಗೆ ತನ್ನದೇ ಆದ ರೀತಿಯಲ್ಲಿ ಪ್ರತ್ಯುತ್ತರ ಕೊಡುವುದಾಗಿ ಜೆಡಿಯು ಹೇಳುತ್ತಿರುವುದು, ಮೈತ್ರಿಕೂಟದಿಂದ ಭಿನ್ನವಾದ ಅದರ ದನಿಗೆ ಸಾಕ್ಷಿ.

ಈಗಾಗಲೇ ಪಂಜಾಬ್‌ನಂಥ ರಾಜ್ಯದಲ್ಲಿ ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸುವ ಸುಳಿವನ್ನೂ ಕಾಂಗ್ರೆಸ್ ಮತ್ತು ಎಎಪಿ ನೀಡಿವೆ. ಪಶ್ಚಿಮ ಬಂಗಾಲದಲ್ಲಿಯೂ ಅಂಥದೇ ಸ್ಥಿತಿ ತಲೆದೋರಿದರೆ ಅಚ್ಚರಿಯೇನಿಲ್ಲ.

ಅಂತಿಮವಾಗಿ ಇವೆಲ್ಲವೂ ಯಾವ ಥರದ ಪರಿಣಾಮ ಬೀರಬಲ್ಲವು?

ಇದೆಲ್ಲದರ ನಡುವೆ ಮೈತ್ರಿಕೂಟದ ಉಳಿದ ಪಕ್ಷಗಳ ದನಿಯೂ ಅಷ್ಟಾಗಿ ಕೇಳಿಸುತ್ತಿಲ್ಲ. ಮೊನ್ನೆಯ ವರ್ಚುವಲ್ ಸಭೆಯಲ್ಲಿ ಅರ್ಧದಷ್ಟು ಪಕ್ಷಗಳಷ್ಟೇ ಇದ್ದವು. ಇವೆಲ್ಲವೂ ಮೈತ್ರಿಯ ಹಾದಿ ಈಗಲೇ ಇಷ್ಟೊಂದು ತೊಡಕಿನದ್ದಾಗುತ್ತಿರುವುದನ್ನು ಸೂಚಿಸುತ್ತಿವೆ.

ಇನ್ನು ಸೀಟು ಹಂಚಿಕೆಯ ಹಂತದಲ್ಲಿ ಎದುರಾಗಬಹುದಾದ ವಿಘ್ನಗಳು ಇನ್ನೂ ಹೇಗಿರುತ್ತವೆಯೊ?

ಬಿಜೆಪಿ ಎಲ್ಲವನ್ನೂ ಗಮನಿಸುತ್ತಲೇ ಇದೆ. ಎಂತಹ ಒಗ್ಗಟ್ಟನ್ನೂ ಒಡೆದು ಆಳಲು ಗೊತ್ತಿರುವ ಅದು, ಇವರ ಒಗ್ಗಟ್ಟಿನಲ್ಲಿ ತಾನೇ ತಾನಾಗಿ ಒಡಕು ಮೂಡುತ್ತಿರುವುದನ್ನು ಕಂಡು ಆನಂದಪಡದೆ ಇರುತ್ತದೆಯೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿನಯ್ ಕೆ.

contributor

Similar News