ʼಹಿಂದುಳಿದ ವರ್ಗʼ ಎಂಬ ಪದಪುಂಜ ನಿಷ್ಪತ್ತಿ

ಈ ಪದ ಸಮೂಹವು ಅಖಿಲ ಭಾರತ ಮಟ್ಟದಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಎಂದಿಗೂ ಪಡೆದುಕೊಂಡಿಲ್ಲ ಮತ್ತು ಸ್ಥಳೀಯ ಸಂದರ್ಭವನ್ನು ಅವಲಂಬಿಸಿ ಬದಲಾಗುತ್ತದೆ. ಈ ಪದಗಳ ಗುಂಪು ಮೇಲಿನ ಹೇಳಿಕೆಯಿಂದ ವ್ಯಕ್ತವಾಗುತ್ತದೆ. ವಿಶೇಷ ಉಪಚಾರದ ಅಗತ್ಯವಿರುವ ಎಲ್ಲಾ ಗುಂಪುಗಳನ್ನು ಉಲ್ಲೇಖಿಸಲು ಅಥವಾ ಅಸ್ಪಶ್ಯರಿಗಿಂತ ಮೇಲ್‌ಸ್ತರದ ಗುಂಪುಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ‘ಇತರ ಹಿಂದುಳಿದ ವರ್ಗಗಳು’ ಎಂಬ ಪದ ಸಮೂಹವು ನಂತರದ ಗುಂಪುಗಳೊಂದಿಗೆ ಸಂಬಂಧ ಹೊಂದಿದೆ.

Update: 2024-05-26 04:34 GMT

ಭಾರತೀಯ ಸಂವಿಧಾನವು ವಿಧಿ 15(4)ರ ಅಡಿಯಲ್ಲಿ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು’, ‘ಪರಿಶಿಷ್ಟ ಜಾತಿಗಳು’ ಮತ್ತು ‘ಪರಿಶಿಷ್ಟ ಪಂಗಡಗಳು’ ಎಂಬ ಮೂರು ಗುಂಪುಗಳನ್ನು ನಮೂದಿಸುತ್ತದೆ. ‘ಪರಿಶಿಷ್ಟ ಜಾತಿ’ ಮತ್ತು ‘ಪರಿಶಿಷ್ಟ ಪಂಗಡ’ ಎಂಬ ಪದಪುಂಜ ಒಂದು ನಿರ್ದಿಷ್ಟ ಅರ್ಥವನ್ನು ಪಡೆದುಕೊಂಡಿದ್ದರೂ, ಇತರ ಹಿಂದುಳಿದ ವರ್ಗಗಳ ಕುರಿತ ಕಲ್ಪನೆಗೆ ಸಂಬಂಧಿಸಿದಂತೆ ಹೆಚ್ಚಿನ ಗೊಂದಲವಿದೆ.

ಸಕಾರಾತ್ಮಕ ಕ್ರಿಯೆಯ(affirmative action) ನೀತಿಯು ಸಂವಿಧಾನ ಜಾರಿಯ ನಂತರದ ವಿದ್ಯಮಾನವಲ್ಲ. ಆದರೆ ವಸಾಹತುಶಾಹಿ ಕಾಲಘಟ್ಟದಲ್ಲಿ ಆ ಕ್ರಿಯೆ ಒಂದು ಹಿನ್ನೆಲೆಯನ್ನು ಹೊಂದಿತ್ತು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಂವಿಧಾನ ಜಾರಿಗೆ ಬರುವ ಮೊದಲೇ ಜಾತಿ ಅಥವಾ ಕೋಮು ವಿಭಾಗಗಳು ಚಾಲ್ತಿಯಲ್ಲಿದ್ದವು. ಆದ್ದರಿಂದ ‘ಇತರ ಹಿಂದುಳಿದ ವರ್ಗಗಳು’ ಎಂದು ಕರೆಯಲ್ಪಡುವ ಅಥವಾ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು’ ಎಂಬ ಪದ ಸಂಯೋಜನೆ ಯಾವ ಗುಂಪನ್ನು ಒಳಗೊಂಡಿದೆ ಎಂಬುದನ್ನು ಪರಿಶೀಲಿಸುವುದು ಅವಶ್ಯಕವಾಗಿದೆ.

ಕೊಲ್ಲಾಪುರದ ಮಹಾರಾಜರು 1917ರಲ್ಲಿ ಹಿಂದುಳಿದ ವರ್ಗಗಳು ಮತ್ತು ವಿಶೇಷವಾಗಿ ಅಸ್ಪಶ್ಯರ ಏಳಿಗೆಗೆ ಪ್ರಮುಖ ಆಸಕ್ತಿಯನ್ನು ಹೊಂದಿದ್ದರು. ಈ ಕುರಿತು ತಮ್ಮ ಆಸೆಯನ್ನು ಮಾಂಟೆಗ್ ಅವರಿಗೆ ವ್ಯಕ್ತಪಡಿಸಿದ್ದರು. ‘ಅಸ್ಪಶ್ಯ’ ಮತ್ತು ’ಹಿಂದುಳಿದ ವರ್ಗ’ ಇವುಗಳ ನಡುವಿನ ವ್ಯತ್ಯಾಸವನ್ನು ತಿಳಿಯುವುದರಲ್ಲಿ ಅಸ್ಪಷ್ಟತೆ ಇದೆ.

ಅಲ್ಪಸಂಖ್ಯಾತರು ಅಥವಾ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವನ್ನು ದೃಢ ಪಡಿಸುವ ಅಥವಾ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವನ್ನು ರಕ್ಷಿಸುವ ಕ್ರಮಗಳನ್ನು ಶಿಫಾರಸು ಮಾಡಲು ರಚಿಸಲಾದ ಸೌತ್ ಬರೋ ಸಮಿತಿಯ ವರದಿಯಲ್ಲಿ ಹಿಂದುಳಿದ ವರ್ಗ ಎಂಬುದರಲ್ಲಿ ಸಾಹಿತ್ಯಕ ನುಡಿಗಟ್ಟು ಕಂಡುಬರುವುದು. ಆದಾಗ್ಯೂ ಬ್ರಿಟಿಷ್ ಸಂಸತ್ತು ಈ ವರದಿಯನ್ನು ಪರಿಶೀಲಿಸುವಾಗ ‘ಶೋಷಿತ ಮತ್ತು ಹಿಂದುಳಿದ ವರ್ಗಗಳ’ ಶೈಕ್ಷಣಿಕ ಪ್ರಗತಿಯ ಅಗತ್ಯವನ್ನು ಗಮನಿಸಿದೆ. ಆದರೆ ಈ ನುಡಿಗಟ್ಟು ಕೇವಲ ಶೋಷಣೆಗೆ ಒಳಗಾದ ವರ್ಗಗಳು ಅಥವಾ ಅಸ್ಪಶ್ಯರನ್ನು ಒಳಗೊಳ್ಳುವ ಉದ್ದೇಶವನ್ನು ಹೊಂದಿದೆ.

ಮೈಸೂರು ಸರಕಾರವು 1918ರ ಮಿಲ್ಲರ್ ವರದಿಯಲ್ಲಿ ಹಿಂದುಳಿದ ವರ್ಗಕ್ಕೆ ಸಾರ್ವಜನಿಕ ಸೇವೆಗೆ ಬ್ರಾಹ್ಮಣರನ್ನು ಹೊರತುಪಡಿಸಿ ಎಲ್ಲಾ ಸಮುದಾಯಗಳನ್ನು ಸೇರಿಸಲು ಶಿಫಾರಸು ಮಾಡಿತ್ತು.

‘ಶೋಷಿತ ವರ್ಗಗಳು’ ಮತ್ತು ‘ಹಿಂದುಳಿದ ವರ್ಗಗಳು’ ಎಂಬೆರಡು ಪದಗುಚ್ಛಗಳಿಗೆ ಸಂಬಂಧಿಸಿದ ಗೊಂದಲವನ್ನು 1930ರಲ್ಲಿ ಮುಂಬೈನ ರಾಜ್ಯ ಸಮಿತಿಯು ಪರಿಹರಿಸಿತು. ಸಮಿತಿಯು ‘ಶೋಷಿತ ವರ್ಗಗಳು’ ಎಂಬ ಪದಗುಚ್ಛಕ್ಕೆ ಆದಿವಾಸಿ ಬುಡಕಟ್ಟು, ಕ್ರಿಮಿನಲ್ ಬುಡಕಟ್ಟು, ಇತರ ಅಲೆಮಾರಿ ಮತ್ತು ಹಿಂದುಳಿದ ಜಾತಿಗಳನ್ನು ಸೇರಿಸಲು ಅನುವಾಗುವಂತೆ ವ್ಯಾಪಕ ಅರ್ಥವನ್ನು ನೀಡಿದೆ. ಇದು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಗೊಂದಲಕ್ಕೆ ಕಾರಣವಾಯಿತು. ಸಾಮಾನ್ಯ ಬಳಕೆಯ ಪದಗುಚ್ಛ ಶೋಷಿತ ವರ್ಗವನ್ನು ಅಸ್ಪಶ್ಯರು ಎಂದು ಅಭಿಪ್ರಾಯಿಸಲಾಗಿದೆ.

ಅದೇ ಸಮಿತಿಯು ‘ಶೋಷಿತ ವರ್ಗಗಳು’ ಎಂಬ ಪದಗುಚ್ಛವನ್ನು ಅಸ್ಪಶ್ಯರನ್ನು ಉಲ್ಲೇಖಿಸಲು ಬಳಸಬೇಕೆಂದು ಶಿಫಾರಸು ಮಾಡಿದೆ. ಇತರ ಹಿಂದುಳಿದ ವರ್ಗಗಳು ಎಂಬುದನ್ನು ಈ ಕೆಳಗಿನ ಮೂರು ಗುಂಪುಗಳಿಗೆ ಸಂಬಂಧಿಸಿದಂತೆ ವ್ಯಾಪಕ ಪದಗುಚ್ಛವಾಗಿ ಬಳಸಬೇಕೆಂದೂ ಪ್ರಸ್ತಾಪಿಸಿದೆ- ಶೋಷಣೆಗೆ ಒಳಗಾದ ವರ್ಗಗಳು(ಅಸ್ಪಶ್ಯರು), ಮೂಲ ನಿವಾಸಿಗಳು, ಗುಡ್ಡಗಾಡು ಬುಡಕಟ್ಟು ಮತ್ತು ಇತರ ಹಿಂದುಳಿದ ವರ್ಗಗಳು (ಅಲೆಮಾರಿ ಬುಡಕಟ್ಟುಗಳು). ಗೊಂದಲವನ್ನು ತಪ್ಪಿಸಲು ಹಿಂದುಳಿದ ವರ್ಗಗಳು ಎಂದು ಕರೆಯಲ್ಪಡುವ ಗುಂಪುಗಳನ್ನು ‘ಅಂತರ್ವರ್ತಿ ವರ್ಗಗಳು’ ಎಂದು ಮರುನಾಮಕರಣ ಮಾಡಲೂ ಸಮಿತಿಯು ಶಿಫಾರಸು ಮಾಡಿತು.

ಹಾರ್ಟೊಗ್ ಸಮಿತಿಯು ಹಿಂದುಳಿದ ವರ್ಗಗಳು ಎಂದರೆ - ‘‘ಜಾತಿಗಳು ಅಥವಾ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು, ಅವು ಶೋಷಣೆಗೆ ಒಳಗಾದ ವರ್ಗ, ಮೂಲ ನಿವಾಸಿ, ಗುಡ್ಡಗಾಡು ಬುಡಕಟ್ಟು ಮತ್ತು ಕ್ರಿಮಿನಲ್ ಬುಡಕಟ್ಟುಗಳನ್ನು ಒಳಗೊಂಡಿವೆ.’’ ಎಂದು ಸ್ಪಷ್ಟಪಡಿಸಿದೆ.

ಯುನೈಟೆಡ್ ಪ್ರಾವಿನ್ಸ್ ಹಿಂದೂ ಕ್ಲಾಸಸ್ ಲೀಗ್ (1929 ರಲ್ಲಿ ಸ್ಥಾಪನೆಯಾಯಿತು) ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಿತು. ಅನೇಕ ಸಮುದಾಯಗಳು ಶೋಷಣೆಗೆ ಒಳಗಾಗಿದ್ದೇವೆ ಎಂದು ಗುರುತಿಸಿಕೊಳ್ಳಲು ಹಿಂಜರಿಯುತ್ತವೆ. ಲೀಗ್ ಮಾತ್ರ ‘ಹಿಂದೂ ಹಿಂದುಳಿದ’ ಎಂಬುದು ಹೆಚ್ಚು ಸೂಕ್ತವಾದ ನಾಮಕರಣ ಪದವಾಗಿದೆ ಎಂದು ಸೂಚಿಸಿತು ಮತ್ತು 115 ಹಿಂದುಳಿದ ಜಾತಿಗಳ ಪಟ್ಟಿಯನ್ನೂ ಸಲ್ಲಿಸಿತು. ಸಲ್ಲಿಸಲಾದ 115 ಜಾತಿಗಳ ಪಟ್ಟಿಯು ಅಸ್ಪಶ್ಯ ವರ್ಗದ ಎಲ್ಲಾ ಹಾಗೆಯೇ ಮೇಲ್ ಸ್ತರವನ್ನು ಒಳಗೊಂಡಿದೆ. ಎಲ್ಲಾ ಸಮುದಾಯಗಳು ಹಿಂದೂ, ಬ್ರಾಹ್ಮಣರಲ್ಲದ ಅಥವಾ ಶೂದ್ರ ವರ್ಗಗಳಿಗೆ ಸೇರಿವೆ. ಅವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತಳಸ್ತರದವರು ಎಂದು ವಿವರಿಸಲಾಗಿದೆ ಮತ್ತು ಜನಸಂಖ್ಯೆಯ ಶೇ.60ಕ್ಕಿಂತ ಹೆಚ್ಚಿರುವವರು ಎಂದು ಹೇಳಲಾಗಿದೆ. ಎಲ್ಲಾ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಜೊತೆಗೆ ಶೋಷಿತ ಸಮುದಾಯಗಳನ್ನು ಬದಲಿಸಲು ತಿರುವಾಂಕೂರು ರಾಜ್ಯವೂ ಕೂಡ ಈ ಒಳಗೊಳ್ಳುವ ಬಳಕೆಯನ್ನು ಅಳವಡಿಸಿಕೊಂಡಿದೆ.

ಆದಾಗ್ಯೂ, ಮದ್ರಾಸ್ ಮತ್ತು ಇತರ ಕಡೆಗಳಲ್ಲಿ ‘ಹಿಂದುಳಿದ ವರ್ಗಗಳು’ ಎಂಬ ಪದ ಸಮೂಹವನ್ನು ಅಸ್ಪಶ್ಯರಿಗಿಂತ ಮೇಲಿನ ಸ್ತರಗಳೆಂದು ಉಲ್ಲೇಖಿಸಲು ಬಳಸಿಕೊಳ್ಳಲಾಯಿತು.

ಆದ್ದರಿಂದ ಈ ಪದಗಳ ಗುಂಪು ವಿವಿಧ ಪ್ರಾಂತಗಳಲ್ಲಿ ವಿಭಿನ್ನ ಅರ್ಥಗಳನ್ನು ಹೊಂದಿದೆ. ತಮಿಳುನಾಡಿನಲ್ಲಿ(ಮದ್ರಾಸ್) ಬ್ರಾಹ್ಮಣೇತರ ಚಳವಳಿಯು ಜಸ್ಟಿಸ್ ಪಾರ್ಟಿಯ ಉದಯದೊಂದಿಗೆ ಬ್ರಾಹ್ಮಣೇತರ ಸಮುದಾಯಗಳ ಪರವಾಗಿ ಜಾತಿ ಆಧಾರಿತ ಕೋಟಾಗಳ ಬೇಡಿಕೆಗೆ ಕಾರಣವಾಯಿತು. 1920ರ ದಶಕದಿಂದ ಹಿಂದುಳಿದ ಜಾತಿಗಳಿಗೆ ಸರಕಾರಿ ಉದ್ಯೋಗಗಳು ಮತ್ತು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ವಿಜ್ಞಾನ ಕೋರ್ಸ್‌ಗಳಿಗೆ ಪ್ರವೇಶದ ವಿಷಯದಲ್ಲಿ ಆದ್ಯತೆ ನೀಡ ಲಾಯಿತು.

ಮೈಸೂರು ರಾಜ್ಯವು 1921ರಿಂದ 1959ರವರೆಗೆ ಬ್ರಾಹ್ಮಣೇತರ ಸಮುದಾಯಗಳಿಗೆ ಮೀಸಲಾತಿ ಕೋಟಾಗಳನ್ನು ನಿಗದಿಪಡಿಸಿದೆ. ಪ್ರತೀ 10 ಹುದ್ದೆಗಳಲ್ಲಿ 8 ಹುದ್ದೆಗಳನ್ನು ಬ್ರಾಹ್ಮಣೇತರ ಸಮುದಾಯಗಳಿಗೆ ಮೀಸಲಿಡಲಾಗಿತ್ತು.

ಈ ಪದ ಸಮೂಹವು ಅಖಿಲ ಭಾರತ ಮಟ್ಟದಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಎಂದಿಗೂ ಪಡೆದುಕೊಂಡಿಲ್ಲ ಮತ್ತು ಸ್ಥಳೀಯ ಸಂದರ್ಭವನ್ನು ಅವಲಂಬಿಸಿ ಬದಲಾಗುತ್ತದೆ. ಈ ಪದಗಳ ಗುಂಪು ಮೇಲಿನ ಹೇಳಿಕೆಯಿಂದ ವ್ಯಕ್ತವಾಗುತ್ತದೆ. ವಿಶೇಷ ಉಪಚಾರದ ಅಗತ್ಯವಿರುವ ಎಲ್ಲಾ ಗುಂಪುಗಳನ್ನು ಉಲ್ಲೇಖಿಸಲು ಅಥವಾ ಅಸ್ಪಶ್ಯರಿಗಿಂತ ಮೇಲ್‌ಸ್ತರದ ಗುಂಪುಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ‘ಇತರ ಹಿಂದುಳಿದ ವರ್ಗಗಳು’ ಎಂಬ ಪದ ಸಮೂಹವು ನಂತರದ ಗುಂಪುಗಳೊಂದಿಗೆ ಸಂಬಂಧ ಹೊಂದಿದೆ.

ಸಂವಿಧಾನದ ರಚನಾ ಸಭೆಯ ಚರ್ಚೆಗಳಲ್ಲಿಯೂ ವಿಧಿ 16(4)ರಲ್ಲಿ ಕಂಡುಬರುವ ‘ಹಿಂದುಳಿದ ವರ್ಗಗಳು’ ಎಂಬ ಪದಗಳ ಗುಂಪಿನಲ್ಲಿಯೂ ಇದು ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಇತರ ಗುಂಪುಗಳಿಗೆ ಉಲ್ಲೇಖಿಸಲ್ಪಟ್ಟಿದೆಯೇ ಎಂಬ ದೊಡ್ಡ ಮಟ್ಟದ ಗೊಂದಲವಿತ್ತು. ಚರ್ಚೆಗಳು ಹಿಂದುಳಿದ ವರ್ಗಗಳ ವ್ಯಾಖ್ಯಾನದಲ್ಲಿನ ಪ್ರಾದೇಶಿಕ ವ್ಯತ್ಯಾಸಗಳನ್ನು ಪ್ರತಿಬಿಂಬಿಸುತ್ತವೆ; ಮದ್ರಾಸಿನಲ್ಲಿ ಇದು ಅಸ್ಪಶ್ಯ ಹಿಂದೂ ಜಾತಿಗಳ ಒಂದು ಸ್ತರವನ್ನು ಉಲ್ಲೇಖಿಸುತ್ತದೆ. ಆದರೆ ಮೈಸೂರಿನಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಎಲ್ಲಾ ಜಾತಿಗಳಿಗೂ ಅನ್ವಯಿಸುತ್ತದೆ. ಮುಂಬೈಯಲ್ಲಿ ಯಾರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಅನ್ವಯವಾಗುವುದು.

ಆದಾಗ್ಯೂ ‘ಹಿಂದುಳಿದ ವರ್ಗಗಳು’ ಎಂಬ ಪದಪುಂಜವು ಪರಿಶುದ್ಧ ಜಾತಿಗಳನ್ನು ಒಳಗೊಂಡಿರುತ್ತದೆ ಎಂದು ಕೆ.ಎಂ. ಮುನ್ಸಿ ಸದನಕ್ಕೆ ಭರವಸೆ ನೀಡಿದರು ಮತ್ತು ‘‘ಸಾಮಾನ್ಯ ಪದ ಅಥವಾ ಪದಪುಂಜವನ್ನು ಕಂಡುಹಿಡಿಯುವುದು ಅವಶ್ಯಕ’’ ಎಂದು ವಿವರಿಸಿದರು. ಇದು ಜನಪದರನ್ನು ಸೂಚಿಸುತ್ತದೆ- ಸ್ಪಶ್ಯರು ಅಥವಾ ಅಸ್ಪಶ್ಯರು ಈ ಸಮುದಾಯಕ್ಕೆ ಅಥವಾ ಅದಕ್ಕೆ ಸೇರಿದವರು- ಸೇವೆಗಳಲ್ಲಿ ವಿಶೇಷ ರಕ್ಷಣೆ ಅಗತ್ಯವಿರುವಷ್ಟು ಹಿಂದುಳಿದವರು.

ಮಾರ್ಕ್ ಗ್ಯಾಲೆಂಟರ್ ಹೇಳಿರುವಂತೆ, ‘ಹಿಂದುಳಿದ ಸಮುದಾಯಗಳ’ ಪ್ರಾದೇಶಿಕ ವ್ಯತ್ಯಾಸದ ಕಾರಣ ಕೇಂದ್ರ ಸರಕಾರವು ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವ ಸಮಸ್ಯೆಗಳನ್ನು ರಾಜ್ಯಗಳಿಗೆ ಬಿಟ್ಟು ಬಿಟ್ಟಿದೆ.

ಆಗ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳನ್ನು ಸ್ಥಳೀಯ ಮಟ್ಟದಲ್ಲಿ ಗೊತ್ತು ಪಡಿಸಬೇಕು ಎಂದು ನಿರೀಕ್ಷಿಸಲಾಗಿತ್ತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜೊತೆಗೆ ಇತರ ಜಾತಿಗಳು ಬಾಂಬೆ, ಮದ್ರಾಸ್ ಮತ್ತು ಮೈಸೂರಿನ ಪ್ರಾಂತೀಯ ಸರಕಾರಗಳು ಯಶಸ್ವಿಯಾಗಿ ಲಾಬಿ ಮಾಡಲು ಸರಕಾರಿ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅಗಾಧವಾದ ರಾಜಕೀಯ ಪ್ರಭಾವವನ್ನು ಗಳಿಸಿವೆ.

ಈ ಸಮುದಾಯಗಳಿಗೆ ವಿಶೇಷ ನಿಯಮಗಳನ್ನು ಮಾಡಲು ಸಂವಿಧಾನವು ಅನುಮತಿ ನೀಡಿದೆ. ಆದಾಗ್ಯೂ, ಹಾಗೆ ಮಾಡುವಲ್ಲಿ, ಇದು ಪ್ರಜ್ಞಾಪೂರ್ವಕವಾಗಿ ‘ಜಾತಿ’ ಪದದ ಬಳಕೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ‘ವರ್ಗ’ ಎಂಬ ಪದವನ್ನು ಆರಿಸಿಕೊಳ್ಳುವ ಮೂಲಕ ‘ಜಾತಿ’ ಪದದ ಬಳಕೆಯನ್ನು ತಪ್ಪಿಸಿತು. ಪ್ರಾಯಶಃ ಪ್ರಾದೇಶಿಕ ವ್ಯತ್ಯಾಸಗಳಿಂದಾಗಿ ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಎಂದು ರೂಪಿಸುತ್ತವೆ.

ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನ:

ಮೊದಲೇ ಹೇಳಿದಂತೆ ಈ ಪದಗುಚ್ಛವನ್ನು ತೀರ್ಮಾನಿಸುವ/ವ್ಯಾಖ್ಯಾನಿಸುವ ಕಾರ್ಯವನ್ನು ಸಂವಿಧಾನ ಸಭೆಯು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿತು. ಸಂವಿಧಾನದ 16(4)ನೇ ವಿಧಿಯ ಅಡಿಯಲ್ಲಿ ‘ಯಾವುದೇ ಹಿಂದುಳಿದ ವರ್ಗಗಳು’ ಎಂಬ ಅಭಿವ್ಯಕ್ತಿಯು ಸಂವಿಧಾನದ 15(4)ರ ಅಡಿಯಲ್ಲಿ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು’ ಒಂದೇ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎನ್. ಲಿಂಗಪ್ಪ

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Similar News