ಮೋದಿ ನಾಟಕೀಯ ಸಂದರ್ಶನಗಳ ಹಿಂದೆ...
ಮೋದಿ ಸಂದರ್ಶನಗಳನ್ನು ನೋಡಿದವರೆಲ್ಲ, ಇದು ಸಂದರ್ಶನವೋ, ಅಥವಾ ಮೋದಿಯ ಪತ್ರಿಕಾ ಹೇಳಿಕೆಯೊ ಅಥವಾ ಮೋದಿಯ ಪ್ರಚಾರ ಭಾಷಣವೊ ಅಥವಾ ಅವರ ಪಕ್ಷದ ಪ್ರಣಾಳಿಕೆಯೊ ಎಂದು ಗೊಂದಲಕ್ಕೆ ಒಳಗಾದರೆ ಅದರಲ್ಲಿ ಅಚ್ಚರಿಯೇನಿಲ್ಲ. ಆದರೆ ಈ ಸಂದರ್ಶನಗಳನ್ನೆಲ್ಲ ಆಯಾ ಮೀಡಿಯಾಗಳು ತಮ್ಮ ‘ಎಕ್ಸ್‌ಕ್ಲೂಸಿವ್’ ಎಂದೋ ‘ವಿಶೇಷ’ ಎಂದೋ ಪ್ರಕಟಿಸುವುದನ್ನು ಮಾತ್ರ ತಪ್ಪಿಸುವುದಿಲ್ಲ. ದುರಂತವೆಂದರೆ ಅದು ಅವರಿಗೆ ಮಾತ್ರ ವಿಶೇಷ. ಈ ದೇಶದ ಜನರ ಪಾಲಿಗೆ ಅಲ್ಲಿ ಯಾವ ವಿಶೇಷವೂ ಇಲ್ಲ, ತಿಳಿಯಲು ಯಾವ ಹೊಸ ವಿಚಾರವೂ ಇಲ್ಲ.
ಪ್ರಧಾನಿ ಮೋದಿ ಈಗ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಒಂದಾದ ಮೇಲೊಂದು ಎಕ್ಸ್‌ಕ್ಲೂಸಿವ್ ಸಂದರ್ಶನಗಳು ನಡೆಯುತ್ತಿವೆ.
ಒಂದೊಂದು ಸಂದರ್ಶನದಲ್ಲಿ ಒಂದೊಂದು ಸಂಸ್ಥೆಯ ಮೂವರು, ನಾಲ್ವರು ಕೆಲವೊಮ್ಮೆ ಆರು ಮಂದಿ ಸಂಪಾದಕರು ಮೋದೀಜಿಯ ಸಂದರ್ಶನ ಮಾಡುತ್ತಾ ಇದ್ದಾರೆ.
ಆದರೆ ಈ ಸಂದರ್ಶನಗಳಲ್ಲಿ ಏನು ಕೇಳಲಾಗುತ್ತಾ ಇದೆ? ಪ್ರಧಾನಿ ಮೋದಿ ಏನು ಹೇಳುತ್ತಾ ಇದ್ದಾರೆಂಬುದನ್ನು ಗಮನಿಸಿದಾಗ ಪ್ರಧಾನಿಯೆದುರು ಕೂತು ಪ್ರಶ್ನೆ ಕೇಳುವವರು ಪ್ರಧಾನಿಯೇ ಬಯಸಿದ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾ ಇದ್ದಾರೆ.
ಅಂದರೆ ಮೋದಿಯವರನ್ನು ಸಂದರ್ಶನ ಮಾಡುವಾಗ ಅಲ್ಲಿ ಪ್ರಶ್ನೆಗಳನ್ನು, ಉಪ ಪ್ರಶ್ನೆಗಳನ್ನು ಕೇಳಲು ನಿರ್ಬಂಧವಿರುತ್ತದೆಯೆ?
ಹಾಗೆಂದಾದರೆ ಈ ಸಂಪಾದಕರೆಲ್ಲ ಮೋದಿಗೆ ಸವಾಲೆಸೆಯಲು ಕೂತವರಂತೆ ಪೋಸು ಕೊಡುವುದು ಕೂಡ ಮೋದಿ ನಾಟಕದ ಒಂದು ಭಾಗವೇ ಆಗಿದೆಯೇ?
ಹತ್ತು ವರ್ಷ ಅಧಿಕಾರದಲ್ಲಿ ಕಳೆದಿರುವ ಪ್ರಧಾನಿಯನ್ನು ಕೇಳಲೇಬೇಕಾದ ಪ್ರಶ್ನೆಗಳೇಕೆ ಈ ದೊಡ್ಡ ಪತ್ರಕರ್ತರೆನ್ನಿಸಿಕೊಂಡವರ ಮನಸ್ಸಿನಲ್ಲಿ ಏಳುತ್ತಿಲ್ಲ? ಪ್ರಶ್ನೆಗಳೇ ಇಲ್ಲದಿರುವಾಗ, ಸಂದರ್ಶನದ ಹೆಸರಿನಲ್ಲಿ ಮೋದಿ ಪ್ರಚಾರ ಭಾಷಣಗಳ ವಿಷಯವೇ ಮತ್ತೆ ಪ್ರಕಟವಾಗುವುದಾದರೆ, ಪ್ರತ್ಯೇಕ ಸಂದರ್ಶನ ಏಕೆ ಬೇಕು?
ಅಂದರೆ ಮೋದಿ ಸಂದರ್ಶನ ಕೂಡ ಮೋದಿ ಚುನಾವಣಾ ಪ್ರಚಾರದ ಮುಂದುವರಿದ ಭಾಗವೆ?
ಒಂದು ತಿಂಗಳಲ್ಲಿ ಮೋದಿ ಸುಮಾರು 26ಕ್ಕೂ ಹೆಚ್ಚು ಸಂದರ್ಶನಗಳನ್ನು ಕೊಟ್ಟಿದ್ದಾರೆ.
ಮೋದಿ ಚುನಾವಣಾ ಪ್ರಚಾರ ಭಾಷಣಗಳನ್ನು ಕೇಳಿರುವವರು ಅವರ ಸಂದರ್ಶನಗಳನ್ನು ನೋಡಿದರೆ ಎರಡರಲ್ಲೂ ಏನಾದರೂ ವ್ಯತ್ಯಾಸ ಕಾಣಿಸುತ್ತದೆಯೇ?
ನಮಗೆ ಗೊತ್ತಿಲ್ಲದ ಏನನ್ನಾದರೂ ನಾವು ಅವರ ಸಂದರ್ಶನಗಳಲ್ಲಿ ಕೇಳಬಲ್ಲೆವೇ?
ಹಾಗೆಯೇ ಮೋದಿಗೆ ಪ್ರಶ್ನೆ ಕೇಳುವವವರು ಈ ದೇಶದ ಪ್ರಧಾನಿಗೆ ಕೇಳಲೇಬೇಕಾಗಿರುವಂಥ, ಅವರಿಗೆ ಸವಾಲನ್ನು ಒಡ್ಡುವಂಥ ಯಾವುದೇ ಪ್ರಶ್ನೆಗಳನ್ನು ಕೇಳುತ್ತಾರೆಯೇ?
ಕೆಲವು ಸಂದರ್ಶನಗಳಲ್ಲಂತೂ ಮೂವರು, ಐವರು ಸಂಪಾದಕರು ಮೋದಿಯೆದುರು ಕೂತಿದ್ದರು. ಇದು ಮೋದಿಗೆ ಸವಾಲುಗಳ ಮೇಲೆ ಸವಾಲುಗಳು ಎದುರಾಗಲಿವೆ ಅನ್ನಿಸುವ ಹಾಗೆ ಕಂಡಿತ್ತು. ಆದರೆ ಆಗಿದ್ದೇ ಬೇರೆ. ಮೋದಿಯೆದುರು ಕೂತಿದ್ದ ಪತ್ರಕರ್ತರು ಬರೀ ಸ್ಟೆನೊಗ್ರಾಫರ್ ಆಗಿ ಕೂತಿದ್ದರು!
ತಮ್ಮ ಚುನಾವಣಾ ರ್ಯಾಲಿಗಳಲ್ಲಿ ಹೇಳುವುದನ್ನೇ ಮೋದಿ ಈ ಸಂದರ್ಶನಗಳಲ್ಲಿ ಹೇಳಿದರು. ಅದರರ್ಥ, ಸಂದರ್ಶನ ಹೊಸ ಯಾವ ವಿಚಾರವನ್ನೂ ಹೇಳಲು ಸಮರ್ಥವಾಗಲಿಲ್ಲ. ಸಂದರ್ಶನ ಅನ್ನುವುದಕ್ಕೆ ಅಲ್ಲಿ ಯಾವ ಅರ್ಥವೂ ಇರಲಿಲ್ಲ.
ಕಾಂಗ್ರೆಸ್ ಜನರ ಸಂಪತ್ತನ್ನು ಕಸಿದು ಮುಸ್ಲಿಮರಿಗೆ ಹಂಚಲಿದೆ ಎಂಬ ಹಸೀ ಸುಳ್ಳನ್ನೇ ಮೋದಿ ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಅದನ್ನು ಹೆಡ್‌ಲೈನ್ ಮಾಡಿದ ಮಡಿಲ ಮೀಡಿಯಾಗಳು, ಸಂದರ್ಶನದಲ್ಲಿ ಕೂಡ ಮೋದಿ ಅದೇ ಸುಳ್ಳನ್ನು ಹೇಳಿದಾಗ ಮತ್ತೆ ಅದನ್ನೇ ಪ್ರಕಟಿಸುತ್ತಿರುವುದು ಹಾಸ್ಯಾಸ್ಪದ.
ಮೋದಿ ಬೇರೆ ಏನನ್ನೂ ಹೇಳುವುದಿಲ್ಲ. ಅವರಿಗೆ ಅವರ ಚುನಾವಣಾ ಪ್ರಚಾರ ಭಾಷಣದಂತೆಯೇ ಸಂದರ್ಶನ ಕೂಡ ಪ್ರಚಾರಕ್ಕೇ ಇರುವ ಮತ್ತೊಂದು ಅವಕಾಶ ಅಷ್ಟೆ.
ಸಂದರ್ಶನ ಮಾಡುವ ಪತ್ರಕರ್ತರು ಪತ್ರಿಕೋದ್ಯಮವನ್ನೇ ಮರೆತಿರುವಾಗ ಅವರು ಮೋದಿಯಿಂದ ಬೇರೆ ಏನನ್ನೂ ಹೇಳಿಸಲಾರರು.
ಪ್ರಧಾನಿ ಹುದ್ದೆಯಲ್ಲಿರುವವರು ತಮ್ಮೆದುರು ಸಂದರ್ಶನಕ್ಕೆ ಕೂತಾಗ ಒಬ್ಬ ಪತ್ರಕರ್ತ ಮನಸ್ಸು ಮಾಡಿದರೆ ಅವರಿಂದ ಎಂತೆಂತಹ ಮಾಹಿತಿ ಹೊರತೆಗೆಯಬಹುದು. ಆದರೆ ಇಲ್ಲಿ ಅದ್ಯಾವುದೂ ಆಗುತ್ತಿಲ್ಲ. ಬದಲಿಗೆ ಮೋದಿ ಹೇಳಿದ್ದನ್ನು ಬರೆದುಕೊಂಡು ಪ್ರಕಟಿಸುವ ಕೆಲಸವನ್ನಷ್ಟೇ ಅವರು ಮಾಡುತ್ತಿದ್ದಾರೆ.
ಹಾಗೆಯೇ ಮುಸ್ಲಿಮ್ ಮೀಸಲಾತಿ ವಿಚಾರದಲ್ಲಿಯೂ ಕಾಂಗ್ರೆಸ್ ವಿರುದ್ದ ಮೋದಿ ಹೇಳುವ ಸುಳ್ಳನ್ನು ಅದೇ ಮಡಿಲ ಮೀಡಿಯಾಗಳು ಯಾವ ವಿವೇಚನೆಯೂ ಇಲ್ಲದೆ, ಯಾವ ಪ್ರಶ್ನೆಗಳನ್ನೂ ಎತ್ತದೆ ಪ್ರಕಟಿಸುತ್ತವೆ.ಹಾಗಿರುವಾಗ ಪತ್ರಕರ್ತರೆನ್ನಿಸಿಕೊಂಡವರು ಜನರ ದನಿಯಾಗುವುದು ಹೇಗೆ ಸಾಧ್ಯ?
ಜನರ ಮನಸ್ಸಿನಲ್ಲಿ ಮೋದಿಗೆ ಕೇಳುವುದಕ್ಕಾಗಿ ಇರುವ ಪ್ರಶ್ನೆಗಳನ್ನು ಪತ್ರಕರ್ತರು ಕೇಳಲಾರರು ಎಂದ ಮೇಲೆ ಅವರು ಮಾಡುವ ಸಂದರ್ಶನಗಳು ಸಂದರ್ಶನಗಳಾಗಿರುವುದು ಕೂಡ ಸಾಧ್ಯವಿಲ್ಲ.
ಅವೇನಿದ್ದರೂ ಮೋದಿ ರ್ಯಾಲಿಯಲ್ಲಿ ಮಾಡುವ ಮತ್ತೊಂದು ಭಾಷಣ ಮಾತ್ರವಾಗಿರುತ್ತವೆ ಅಷ್ಟೆ.
ಹಾಗಾಗಿಯೇ ವಿಪಕ್ಷಗಳ ನಾಯಕರಾದ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ತೇಜಸ್ವಿ ಯಾದವ್, ಅಖಿಲೇಶ್ ಯಾದವ್, ಅರವಿಂದ ಕೇಜ್ರಿವಾಲ್ ಮೊದಲಾದವರ ಕಣ್ಣಲ್ಲಿ ಮೀಡಿಯಾಗಳಿಗೆ ಯಾವ ಅರ್ಥವೂ ಉಳಿದಿಲ್ಲ.
ಹಾಗಾಗಿಯೇ ‘‘ನೀವು ಯಾವುದೇ ಮಾಧ್ಯಮದಲ್ಲಿ ಬಡ ರೈತನನ್ನು ಕಾಣುತ್ತಿದ್ದೀರಾ? ಬಡ ಕಾರ್ಮಿಕನನ್ನು ಕಾಣುತ್ತಿದ್ದೀರಾ? ಸಣ್ಣ ಅಂಗಡಿಕಾರರನ್ನು ಕಂಡಿದ್ದೀರಾ? ಕಾಣಲಾರಿರಿ. 24 ಗಂಟೆಯೂ ನೀವು ಒಂದೇ ನರೇಂದ್ರ ಮೋದಿಯನ್ನು ನೋಡಬೇಕು, ಇಲ್ಲವೇ ಅದಾನಿ, ಅಂಬಾನಿ ಕುಟುಂಬದ ಮದುವೆ ನೋಡಬೇಕು. ಮೀಡಿಯಾದವರು ನಮ್ಮ ಮಿತ್ರರಲ್ಲ. ಅವರೆಲ್ಲ ಅದಾನಿಯ, ಅಂಬಾನಿಯ ಮಿತ್ರರು. ಅದಕ್ಕಿಂತಲೂ ಅವರು ಅದಾನಿಯ, ಅಂಬಾನಿಯ ನೌಕರರು. ಇವತ್ತು ಇದನ್ನು ಪ್ರಕಟಿಸಬೇಕು, ಹೀಗೆ ಪ್ರಕಟಿಸಬೇಕು ಎಂದು ಮೇಲಿನಿಂದ ಆದೇಶ ಬರುತ್ತದೆ’’ ಎನ್ನುತ್ತಾರೆ ರಾಹುಲ್.
ಇಎಂಐ ಕಟ್ಟುವ ಅನಿವಾರ್ಯತೆಯಲ್ಲಿ ಒದ್ದಾಡುವ ಪತ್ರಕರ್ತರು ಸ್ವಂತಿಕೆ ಉಳಿಸಿಕೊಂಡು ಮೋದಿಗೆ ಪ್ರಶ್ನೆ ಕೇಳುವ ಸ್ಥಿತಿಯಲ್ಲಿಲ್ಲ. ಇದು ಈ ದೇಶದ ಪತ್ರಿಕಾ ಸ್ವಾತಂತ್ರ್ಯದ ಕಥೆ.
ಮೋದಿ ಸಂದರ್ಶನಗಳನ್ನು ನೋಡಿದವರೆಲ್ಲ, ಇದು ಸಂದರ್ಶನವೋ, ಅಥವಾ ಮೋದಿಯ ಪತ್ರಿಕಾ ಹೇಳಿಕೆಯೊ ಅಥವಾ ಮೋದಿಯ ಪ್ರಚಾರ ಭಾಷಣವೊ ಅಥವಾ ಅವರ ಪಕ್ಷದ ಪ್ರಣಾಳಿಕೆಯೊ ಎಂದು ಗೊಂದಲಕ್ಕೆ ಒಳಗಾದರೆ ಅದರಲ್ಲಿ ಅಚ್ಚರಿಯೇನಿಲ್ಲ.
ಆದರೆ ಈ ಸಂದರ್ಶನಗಳನ್ನೆಲ್ಲ ಆಯಾ ಮೀಡಿಯಾಗಳು ತಮ್ಮ ‘ಎಕ್ಸ್‌ಕ್ಲೂಸಿವ್’ ಎಂದೋ ‘ವಿಶೇಷ’ ಎಂದೋ ಪ್ರಕಟಿಸುವುದನ್ನು ಮಾತ್ರ ತಪ್ಪಿಸುವುದಿಲ್ಲ. ದುರಂತವೆಂದರೆ ಅದು ಅವರಿಗೆ ಮಾತ್ರ ವಿಶೇಷ. ಈ ದೇಶದ ಜನರ ಪಾಲಿಗೆ ಅಲ್ಲಿ ಯಾವ ವಿಶೇಷವೂ ಇಲ್ಲ, ತಿಳಿಯಲು ಯಾವ ಹೊಸ ವಿಚಾರವೂ ಇಲ್ಲ.
ಮೋದಿ ಸಂದರ್ಶನ ಎಂಬ ಹೆಸರಿನಲ್ಲಿ ಆಗುತ್ತಿರುವುದು ಏನೆಂದರೆ, ಒಂದೋ ಚುನಾವಣಾ ರ್ಯಾಲಿಯಲ್ಲಿ ಮೋದಿ ಪೂರ್ತಿ ಹೇಳಲಾಗದ್ದನ್ನು ಸಂದರ್ಶನದಲ್ಲಿ ಹೇಳುತ್ತಾರೆ.
ಇಲ್ಲವೇ ಸಂದರ್ಶನ ಅನ್ನು ಮೋದಿ ಪ್ರಚಾರ ಭಾಷಣದ ಹಾಗೆ ಪ್ರಕಟಿಸುವ ಕೆಲಸ ನಡೆಯುತ್ತದೆ.
ಮೋದಿಗೆ ಪ್ರಶ್ನೆ ಕೇಳಲಾರದ ಸ್ಥಿತಿ ಮೀಡಿಯಾಗಳನ್ನು ಈ ಮಟ್ಟಕ್ಕೆ ತಂದಿದೆ.
ಮೋದಿ ಚುನಾವಣಾ ಪ್ರಚಾರದ ಭಾಷಣವನ್ನು ಅಥವಾ ಮೋದಿ ಪಕ್ಷದ ಪ್ರಣಾಳಿಕೆಯನ್ನು ತಮ್ಮ ಎಕ್ಸ್‌ಕ್ಲೂಸಿವ್ ಸಂದರ್ಶನ ಎಂದು ಪ್ರಕಟಿಸಿ ಅವು ಧನ್ಯತೆ ಅನುಭವಿಸುತ್ತಿವೆ.
ಉದಾಹರಣೆಗೆ, ಮೂರನೇ ಅವಧಿಗೆ ಭಾರತ ಮೂರನೇ ಆರ್ಥಿಕತೆಯಾಗಲಿದೆ ಎಂದು ಮೋದಿ ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಅದನ್ನು ಇದೇ ಮೀಡಿಯಾಗಳು ಅಷ್ಟೇ ಬಾರಿ ತಿರುಗಿಸಿ ತಿರುಗಿಸಿ ಪ್ರಕಟಿಸಿಯೂ ಆಗಿದೆ. ವಿವಿಧೆಡೆ ಕಣ್ಣಿಗೆ ಕುಕ್ಕುವ ಸರಕಾರದ ಜಾಹೀರಾತು ಹೋರ್ಡಿಂಗ್‌ಗಳಲ್ಲೂ ಅದೇ ಕಾಣಿಸುತ್ತಿದೆ.
ಹಾಗಿರುವಾಗ, ಮತ್ತೆ ಮೋದಿ ಸಂದರ್ಶನದಲ್ಲಿ ಕೂಡ ಅದೇ ಇದ್ದರೆ ಅದೆಂಥ ಸಂದರ್ಶನ ಆಗುತ್ತದೆ? ಅದು ಹೇಗೆ ಎಕ್ಸ್‌ಕ್ಲೂಸಿವ್ ಆಗುತ್ತದೆ? ಮೀಡಿಯಾಗಳು ಇಷ್ಟರ ಮಟ್ಟಿಗೆ ವಿವೇಚನೆ ಕಳೆದುಕೊಂಡುಬಿಟ್ಟಿವೆಯಲ್ಲವೆ?
ಟ್ರಿಲಿಯನ್‌ಗಳ ಮಾತಾಡುವ ಮೋದಿ ಮತ್ತು ಮೋದಿ ಸರಕಾರದ ಮಂದಿ, ನಿಜವಾದ ವಾಸ್ತವ ಮರೆಮಾಚುತ್ತಿರುವುದು ಯಾಕೆ ಈ ಮಾಧ್ಯಮಗಳ ಕಣ್ಣಿಗೆ ಬೀಳುತ್ತಿಲ್ಲ?
ದೇಶದಲ್ಲಿನ ಅಸಮಾನತೆ ತೀವ್ರಗೊಳ್ಳುತ್ತಲೇ ಇರುವಾಗ, ದೇಶದ ಜನಸಂಖ್ಯೆಯ ಶೇ.1ರಷ್ಟಿರುವವರ ಸಂಪತ್ತು ಇನ್ನಷ್ಟು ಹೆಚ್ಚಿರುವಾಗ ಯಾವ ಆರ್ಥಿಕತೆಯಿಂದ ಯಾರಿಗೆ ಲಾಭ ಎಂಬ ಪ್ರಶ್ನೆಯೂ ಏಕೆ ಮಾಧ್ಯಮಗಳನ್ನು ಕಾಡುತ್ತಿಲ್ಲ?
ಇಂಥ ಪ್ರಶ್ನೆಗಳನ್ನು ಮೀಡಿಯಾಗಳು ಕೇಳಲಾರವು.
ಐದೈದು ಸಂಪಾದಕರು ಕೂತು ಮೋದಿ ಸಂದರ್ಶನ ಮಾಡಿದರೂ, ಮೂರನೇ ಆರ್ಥಿಕತೆ ಕುರಿತ ಅವರ ಹೇಳಿಕೆಗೆ ಪ್ರತಿಪ್ರಶ್ನೆಯೊಂದನ್ನು ಯಾರೊಬ್ಬರೂ ಕೇಳಲೇ ಇಲ್ಲ.
ನಿರುದ್ಯೋಗದ ವಿಚಾರದಲ್ಲಿ ಭಾರತದ ಸ್ಥಾನ ಅತಿ ಕೆಳಕ್ಕಿರುವಾಗಲೂ, ಬೆಲೆಯೇರಿಕೆ ದೇಶದ ಜನರನ್ನು ಹೈರಾಣಾಗಿಸಿರುವಾಗಲೂ ಮೋದಿಯೆದುರು ಸಂದರ್ಶನಕ್ಕೆ ಕೂತವರನ್ನು ಅಂಥ ಪ್ರಶ್ನೆ ಕಾಡುವುದೇ ಇಲ್ಲವೆ? ಇಂಥ ಹೊತ್ತಲ್ಲಿಯೂ ಕೇಳದೇ ಹೋದರೆ ಇನ್ನು ಯಾವಾಗ?
ಕಾಶ್ಮೀರ ಕಣಿವೆಯಿಂದ ಚುನಾವಣೆ ಎದುರಿಸಲಾರದೆ ಬಿಜೆಪಿ ಓಡಿಹೋದದ್ದೇಕೆ ಎಂಬ ಪ್ರಶ್ನೆಯನ್ನು ಯಾರೂ ಯಾಕೆ ಮೋದಿಗೆ ಕೇಳುತ್ತಿಲ್ಲ? ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆ ರದ್ದುಪಡಿಸುವ ‘ಇಂಡಿಯಾ’ ಮೈತ್ರಿಕೂಟದ ಮಾತಿನ ಬಗ್ಗೆ ಏಕೆ ಪ್ರಧಾನಿಯ ಪ್ರತಿಕ್ರಿಯೆಯನ್ನು ಮಾಧ್ಯಮಗಳು ಬಯಸುತ್ತಿಲ್ಲ? ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಯಾಕೆ ಪ್ರಶ್ನೆಗಳೇ ಏಳಲಿಲ್ಲ?
ದೇಶವನ್ನೇ ಬೆಚ್ಚಿಬೀಳಿಸಿರುವ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಜಾರ್ಖಂಡ್ ಮಂತ್ರಿ ಅಲಂಗೀರ್ ಆಲಂ ನಿವಾಸದಲ್ಲಿ ಭಾರೀ ಮೊತ್ತದ ನಗದು ವಶಪಡಿಸಿಕೊಂಡ ವಿಚಾರದೊಂದಿಗೆ ಜೋಡಿಸಿ, ಪ್ರಶ್ನೆಯೇ ಅಲ್ಲದ ರೀತಿಯಲ್ಲಿ ಪ್ರಸ್ತಾಪಿಸಲಾಗುತ್ತದೆ.
ಅದಕ್ಕೆ ತಕ್ಕಂತೆ ಮೋದಿ, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಕಾಂಗ್ರೆಸ್ ವಿರುದ್ಧವೇ ಮಾತಾಡುವುದಕ್ಕೆ ಬಳಸುತ್ತಾರೆ. ಕಾಂಗ್ರೆಸ್ ಅನ್ನೇ ಅದಕ್ಕೆ ಹೊಣೆಯಾಗಿಸುತ್ತಾರೆ.
ಅಲ್ಲಿಗೆ ಆ ಸಂಸದ ಬಿಜೆಪಿ ಮೈತ್ರಿಯ ಅಭ್ಯರ್ಥಿ ಎನ್ನುವ ವಿಚಾರವೂ ಬದಿಗೆ ಸರಿದುಹೋಗುತ್ತದೆ.
ಕಾಂಗ್ರೆಸ್ ಪಕ್ಷ ನಿಮ್ಮ ಮಂಗಲಸೂತ್ರ ಕಸಿದು ಮುಸ್ಲಿಮರಿಗೆ ನೀಡಲಿದೆ ಎಂದು ಮೋದಿ ಚುನಾವಣಾ ಭಾಷಣದಲ್ಲಿ ಹೇಳಿದ ಸುಳ್ಳನ್ನೇ ಸಂದರ್ಶನ ಹೆಸರಲ್ಲಿ ಮತ್ತೊಮ್ಮೆ ಪ್ರಕಟಿಸುವುದಾದರೆ ಆ ಸಂದರ್ಶನ ಏಕೆ ಬೇಕು?
ದೇಶದ ನಿರೂಪಣೆಯನ್ನು ಬರೆಯಬೇಕಾದ ಮಾಧ್ಯಮಗಳು ಮೋದಿಗೆ ಬೇಕಾದ ನಿರೂಪಣೆಯನ್ನು ಬರೆದು ನಿದ್ದೆಹೋಗುವ ಮಟ್ಟಕ್ಕೆ ಬಂದುಮುಟ್ಟಿವೆ?.
10 ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿಯನ್ನು ಎದುರಿಸದ ಮೋದಿ, ಮಡಿಲ ಮೀಡಿಯಾಗಳಿಗೆ ತಮ್ಮ ಸಂದರ್ಶನ ನಡೆಸುವ ನಾಟಕ ಮಾಡಲು ಮಾತ್ರ ಅವಕಾಶ ಮಾಡಿಕೊಟ್ಟರು.
ಆ ಸ್ಕ್ರಿಪ್ಟೆಡ್ ನಾಟಕದಲ್ಲಿ ಮಡಿಲ ಮೀಡಿಯಾದಲ್ಲಿನ ಪತ್ರಕರ್ತರು ಎನ್ನಲಾಗುವ ಜನ ಪ್ರಶ್ನೆ ಕೇಳುವಂತೆಯೂ, ಮೋದಿ ಅದಕ್ಕೆ ಉತ್ತರಿಸುವಂತೆಯೂ ಬಹಳ ಸೊಗಸಾಗಿ ನಟಿಸಿದರು.
ಹಾಗಾಗಿ ಮೀಡಿಯಾಗಳಲ್ಲಿನ ಮೋದಿ ಸಂದರ್ಶನ ಎಂದರೆ, ಅದು ಸಂದರ್ಶನ ಎಂದು ಕರೆಯಲು ಅರ್ಹವಲ್ಲದ ಒಂದು ಪತ್ರಿಕಾ ಹೇಳಿಕೆ,
ಅದು ಈಗಾಗಲೇ ಹಲವು ಬಾರಿ ಸುದ್ದಿ ರೂಪದಲ್ಲಿ ಪ್ರಕಟವಾದ ವಿಷಯದ್ದೇ ಪುನರಾವರ್ತನೆ.
ಅದು ಪ್ರಶ್ನೆಗಳೇ ಇಲ್ಲದ, ಎದುರು ಕೂತು ಹೇಳುತ್ತ ಹೋಗುವ ವ್ಯಕ್ತಿಯ ಮಾತುಗಳ ಬರೀ ಒಂದು ದಾಖಲೆ.
ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದು, ಈ ದೇಶದಲ್ಲಿ ಪತ್ರಿಕೋದ್ಯಮ ಪೂರ್ತಿ ಸತ್ತುಹೋಗಿದೆ ಎಂಬುದನ್ನು ತೋರಿಸುವ ಪುರಾವೆ, ಅಷ್ಟೆ.