ಕಾಂಗ್ರೆಸ್ ಸಮಾವೇಶದ ಉದ್ದೇಶದ ಹಿಂದೆ...

Update: 2024-12-05 04:56 GMT

ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸೋಲಿನ ಹತಾಶೆಗೆ ಒಳಗಾಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೆ ಸರಕಾರವನ್ನು ಬೀಳಿಸುವ ಮಾತನಾಡಿದ್ದಾರೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಅಸ್ತಿತ್ವದ ಅಡಿಗಲ್ಲನ್ನೇ ಕಳಚಿಕೊಳ್ಳುತ್ತಿರುವ ಜೆಡಿಎಸ್ ನಾಯಕರಿಗೆ ಇನ್ನೂ ವಾಸ್ತವದ ಅರಿವು ಮೂಡದೇ ವಾಮ ಮಾರ್ಗದಲ್ಲಿ ಅಧಿಕಾರ ಕಬಳಿಸುವ ಮಂಕು ಕವಿದಿರುವುದು ಚೋದ್ಯವೇ ಸರಿ.

ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಅತ್ಯಂತ ಅಗತ್ಯವಾಗಿತ್ತು, ಜತೆಗೆ ರಾಜ್ಯದ ಜನತೆಗೆ ಒಂದು ಸ್ಪಷ್ಟ ಸಂದೇಶ ಕಳುಹಿಸುವುದಕ್ಕಾಗಿ ಅಪೇಕ್ಷಿತವೂ ಆಗಿತ್ತು. ಅದಕ್ಕೆ ಸ್ಪಂದಿಸುವ ಮೂಲಕ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಯಲ್ಲಿ ತಾವು ಅನಭಿಷಿಕ್ತ ದೊರೆಗಳು ಎಂಬ ದೇವೇಗೌಡರ ಕುಟುಂಬದ ಭ್ರಮೆಯನ್ನು ಪ್ರಜ್ಞಾವಂತ ಮತದಾರರು ನುಚ್ಚು ನೂರು ಮಾಡಿದ್ದಾರೆ.

ಚನ್ನಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಆಯ್ಕೆಯಾಗಿದ್ದೇ ಒಂದು ವಿಶೇಷ ಸಂದರ್ಭದಲ್ಲಿ. ಕುಮಾರಸ್ವಾಮಿಯವರ ಸ್ವಾರ್ಥ ರಾಜಕಾರಣದ ದೆಸೆಯಿಂದ ಎರಡು ಬಾರಿ ಇದೇ ಕ್ಷೇತ್ರದಲ್ಲಿ ಸೋತಿದ್ದ ಅವರಿಗೆ ಗೆಲುವು ತೀರಾ ಅಗತ್ಯವಾಗಿತ್ತು. ಮೂಲತಃ ಕಾಂಗ್ರೆಸಿಗರೇ ಆದ ಅವರಿಗೆ ಸಿದ್ದರಾಮಯ್ಯನವರ ನಾಯಕತ್ವ ಆಪ್ಯಾಯಮಾನವಾಗಿ ಕಂಡಿದ್ದರಲ್ಲಿ ವಿಶೇಷವೇನೂ ಇಲ್ಲ. ಹೀಗಾಗಿ ನಾಮಪತ್ರ ಸಲ್ಲಿಸುವುದಕ್ಕೆ ಎರಡು ದಿನ ಬಾಕಿ ಇರುವಾಗ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು. ಆ ಬಳಿಕ ನಡೆದ ರಾಜಕೀಯ ಕದನ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಹಂತದಲ್ಲಿ ಆರು ದಿನಗಳ ಕಾಲ ಚನ್ನಪಟ್ಟಣದಲ್ಲಿ ಠಿಕಾಣಿ ಹೂಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಘನತೆ ಹಾಗೂ ರಾಜಕಾರಣದ ಅಪಾರ ಅನುಭವಕ್ಕೆ ಹೊಂದದ ಮಾತನಾಡಿ ಇಡೀ ರಾಜ್ಯದ ಮುಂದೆ ಸಣ್ಣವರಾಗಿ ಬಿಟ್ಟರು.

ಚನ್ನಪಟ್ಟಣದಲ್ಲಿ ನಡೆದ ಸಮಾವೇಶವೊಂದರಲ್ಲಿ ಸಿದ್ದರಾಮಯ್ಯ ವಿರುದ್ಧ ತಮ್ಮ ಉದರದಲ್ಲಿ ಸಂಗ್ರಹವಾದ ಎಲ್ಲ ದ್ವೇಷಗಳನ್ನು ವಿಷದಂತೆ ಕಕ್ಕಿಬಿಟ್ಟರು. ‘‘ಈ ಸರಕಾರವನ್ನು ಕಿತ್ತು ಹಾಕದೆ ನಾನು ವಿರಮಿಸುವುದಿಲ್ಲ. ನಾನು ಸಿದ್ದರಾಮಯ್ಯ ಅವರ ಗರ್ವಭಂಗ ಮಾಡುತ್ತೇನೆ’’ ಎಂದು ಚೀರಿದರು. ಆದರೆ ಪರಿಣಾಮವೇನಾಯಿತು? ಯಾವ ಮತದಾರರು ಅವರ ಪುತ್ರ ಕುಮಾರಸ್ವಾಮಿಯನ್ನು ಎರಡು ಬಾರಿ ಕೈ ಹಿಡಿದಿದ್ದರೋ ಅದೇ ಮತದಾರರು ಮೊಮ್ಮಗ ನಿಖಿಲ್‌ರನ್ನು ಹೀನಾಯವಾಗಿ ಸೋಲಿಸಿ ಬಿಟ್ಟರು. ಇದಕ್ಕೆ ಪ್ರಮುಖ ಕಾರಣ ದೇವೇಗೌಡರು ಬಿತ್ತಿದ ದ್ವೇಷವಲ್ಲದೇ ಮತ್ತೇನೂ ಅಲ್ಲ. ಅಹಿಂದ ವರ್ಗದ ಜತೆಗೆ ಒಕ್ಕಲಿಗರು ಕೂಡ ದೇವೇಗೌಡರ ಸ್ವಾರ್ಥದ ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್ ಕಡೆ ವಾಲಿದ್ದು ಮಾತ್ರ ವಾಸ್ತವ.

ಈ ಚುನಾವಣೆಯ ಪ್ರಚಾರದ ಉದ್ದಕ್ಕೂ ಕಣ್ಣೀರ ಕೋಡಿಯನ್ನೇ ಹರಿಸಿದ ದೇವೇಗೌಡರು ‘‘ನನ್ನ ಹೃದಯ ಛಿದ್ರವಾಗಿದೆ’’ ಎಂದರು. ಆದರೆ ಅವರದ್ದೇ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಅಸಂಖ್ಯಾತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದಾಗ ಈ ಕಣ್ಣೀರು ಎಲ್ಲಿ ಹೋಗಿತ್ತು? ಆಗ ದೇವೇಗೌಡರ ಉದಾರ ಹೃದಯ ಬತ್ತಿ ಹೋಗಿತ್ತೇ? ಶೋಷಣೆಗೆ ಒಳಗಾದ ಒಂದೇ ಒಂದು ಹೆಣ್ಣು ಜೀವದ ಪರ ಇವರ ಅಂತಃಕರಣ ಏಕೆ ತುಡಿಯಲಿಲ್ಲ ಎಂಬುದಕ್ಕೂ ಉತ್ತರಿಸಬೇಕಲ್ಲವೇ?

ರಾಜಕಾರಣದ ಬಹುರೂಪಿಯಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವಾಸ್ತವದ ಬದಲು ಇತಿಹಾಸಕ್ಕೆ ಜೋತು ಬಿದ್ದು ಅರ್ಧ ಸತ್ಯವನ್ನೇ ಸತ್ಯ ಎಂದು ಬಿಂಬಿಸುವುದು ಅವರ ಹಳೆಯ ಖಯಾಲಿ. ಈ ಹಿಂದೆ ಅವರು ಕಡೂರಿನ ಕೆ.ಎಂ. ಕೃಷ್ಣಮೂರ್ತಿ ಅವರ ಸಹೋದರನ ಪುತ್ರನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲೂ ಚನ್ನಪಟ್ಟಣ ಚುನಾವಣೆಯ ಪ್ರಚಾರ ಸಭೆಯ ರೀತಿ ‘‘ಸಿದ್ದರಾಮಯ್ಯನವರನ್ನು ನಂಬಿ ನಾನು ಮೋಸ ಹೋದೆ’’ ಎಂದು ಅನುಕಂಪ ಗಿಟ್ಟಿಸುವ ಮಾತನಾಡಿದ್ದರು. ಆದರೆ ರಾಮಕೃಷ್ಣ ಹೆಗಡೆ ಬೊಮ್ಮಾಯಿ ಹಾಗೂ ಜೆ.ಎಚ್. ಪಟೇಲರಿಗೆ ದ್ರೋಹ ಬಗೆದಿದ್ದು ಯಾರು ಎಂಬ ಪ್ರಶ್ನೆಗೆ ಮಾತ್ರ ಅವರು ಯಾವ ಕಾಲಕ್ಕೂ ಉತ್ತರ ನೀಡುವುದಿಲ್ಲ. ಏಕೆಂದರೆ ಜನತಾ ಪರಿವಾರ ಕುಸಿದು ಸಮಾಧಿಯಾಗಿದ್ದೇ ದೇವೇಗೌಡರ ಕುಟುಂಬ ಪ್ರೇಮದಿಂದ.

ತನಗಾಗಿ ಮಾತ್ರ:

ಜನತಾ ದಳವನ್ನು ಬಿಟ್ಟು ಎಸ್.ಜೆ.ಪಿ (ಸಮಾಜವಾದಿ ಜನತಾ ಪಕ್ಷ) ಪಕ್ಷ ಕಟ್ಟಿದ ದೇವೇಗೌಡರು ಸೋತು ಧರಾಶಾಯಿಯಾಗಿ ರಾಮಕೃಷ್ಣ ಹೆಗಡೆ ಹಾಗೂ ಪಟೇಲರ ಕೈ ಕಾಲು ಕಟ್ಟಿ ಮರಳಿ ಪಕ್ಷಕ್ಕೆ ಸೇರ್ಪಡೆಯಾದರು. ಅಂದು ದೇವೇಗೌಡರ ಜತೆಗೆ ಸಿದ್ದರಾಮಯ್ಯ ಹಾಗೂ ಜಾಲಪ್ಪ ಅವರುಗಳು ಗಟ್ಟಿಯಾಗಿ ನಿಲ್ಲದೇ ಇದ್ದರೆ ಅವರು ಮುಖ್ಯಮಂತ್ರಿಯಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ದೇವೇಗೌಡರು ಎಂದೂ ಸಿದ್ಧರಿಲ್ಲ. ಆ ವಿಚಾರದಲ್ಲಿ ಅವರಿಗೆ ಶಾಶ್ವತ ಮರೆವು ಎನ್ನದೇ ವಿಧಿ ಇಲ್ಲ. ಮುಂದೆ ಜೆಡಿಎಸ್ ಕಟ್ಟಿದಾಗ ಅದು ಅತಿ ಹೆಚ್ಚು ಸಾಧನೆ ಮಾಡಿದ್ದು ಸಿದ್ದರಾಮಯ್ಯ ರಾಜ್ಯಾಧ್ಯಕ್ಷರಿದ್ದಾಗ. ಆ ಬಳಿಕ ಈಗ ಹದಿನೆಂಟಕ್ಕೆ ಕುಸಿದು ಅಳಿವಿನ ಅಂಚಿನಲ್ಲಿ ಇದೆ.

ದೇವೇಗೌಡರು ಈ ಹಿಂದೆ ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದವರು. ಈಗ ಮೋದಿಯನ್ನು ವಿಶ್ವಗುರು, ಅವತಾರ ಪುರುಷ ಎಂದು ಕೊಂಡಾಡುತ್ತಿದ್ದಾರೆ. ಮಕ್ಕಳ ಕಲ್ಯಾಣಕ್ಕಾಗಿ ಎಂಥ ವೇಷವನ್ನೂ ಅವರು ಹಾಕಬಲ್ಲರು.

ಅಂದ ಹಾಗೆ ಲೋಕಸಭಾ ಚನಾವಣೆ ಬಳಿಕ ರಾಜ್ಯ ಸರಕಾರ ಪತನವಾಗುತ್ತದೆ ಎಂದು ಎಚ್.ಡಿ. ದೇವೇಗೌಡರು ಪದೇ ಪದೇ ಪ್ರಸ್ತಾವಿಸುತ್ತಿದ್ದರು. ಇದು ಧೃತರಾಷ್ಟ್ರನ ಅಂಧ ಪ್ರೇಮದ ಹತಾಶ ಸ್ಥಿತಿ ಎಂದು ಸುಮ್ಮನಾಗಬಹುದಿತ್ತು. ಆದರೆ ಆ ಬಳಿಕ ಕುಮಾರಸ್ವಾಮಿಯವರು ಮತ್ತೆ ಸರಕಾರ ಬೀಳಿಸುವ ಮಾತನಾಡಿದ್ದನ್ನು ಕಾಂಗ್ರೆಸ್ ಖಂಡಿತ ನಿರ್ಲಕ್ಷಿಸದು. ಏಕೆಂದರೆ ಚುನಾಯಿತ ಸರಕಾರವನ್ನು ಬೀಳಿಸುವ ಚಟ ದೇವೇಗೌಡರಿಗೆ ಮೊದಲಿನಿಂದಲೂ ಇದೆ. ಈ ಹಿಂದೆ ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಜೆ.ಎಚ್. ಪಟೇಲ್, ಧರಂ ಸಿಂಗ್ ಸರಕಾರಕ್ಕೆ ಯಾವ ರೀತಿ ಕಾಟ ಕೊಟ್ಟಿದ್ದಾರೆಂಬುದು ನಾಡಿಗೆ ಗೊತ್ತು. ಅದೇ ಗುಣ ಈಗ ಅವರ ಮಗನ ಮಾತಿನಲ್ಲಿ ವ್ಯಕ್ತವಾಗಿದೆ. ಇದಕ್ಕೆ ಸೆಡ್ಡು ಹೊಡೆಯುವುದೇ ಕಾಂಗ್ರೆಸ್ ಸಮಾವೇಶದ ಉದ್ದೇಶವಾಗಿದೆ. ದೇವೇಗೌಡರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಶಕ್ತಿ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ಕಾಂಗ್ರೆಸ್‌ನ 138 ಶಾಸಕರು ನಿಂತು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ದೇವೇಗೌಡರ ಕುಟುಂಬಕ್ಕೆ ಈಗ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿದೆ. ಅಂದ ಹಾಗೆ ಲೋಕಸಭಾ ಚನಾವಣೆ ಬಳಿಕ ರಾಜ್ಯ ಸರಕಾರ ಪತನವಾಗುತ್ತದೆ ಎಂದು ಎಚ್.ಡಿ. ದೇವೇಗೌಡರು ಪದೇ ಪದೇ ಪ್ರಸ್ತಾವಿಸುತ್ತಿದ್ದರು. ಇದು ಧೃತರಾಷ್ಟ್ರನ ಅಂಧ ಪ್ರೇಮದ ಹತಾಶ ಸ್ಥಿತಿ ಎಂದು ಸುಮ್ಮನಾಗಬಹುದಿತ್ತು. ಆದರೆ ಆ ಬಳಿಕ ಕುಮಾರಸ್ವಾಮಿಯವರು ಮತ್ತೆ ಸರಕಾರ ಬೀಳಿಸುವ ಮಾತನಾಡಿದ್ದನ್ನು ಕಾಂಗ್ರೆಸ್ ಖಂಡಿತ ನಿರ್ಲಕ್ಷಿಸದು. ಏಕೆಂದರೆ ಚುನಾಯಿತ ಸರಕಾರವನ್ನು ಬೀಳಿಸುವ ಚಟ ದೇವೇಗೌಡರಿಗೆ ಮೊದಲಿನಿಂದಲೂ ಇದೆ. ಈ ಹಿಂದೆ ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಜೆ.ಎಚ್. ಪಟೇಲ್, ಧರಂ ಸಿಂಗ್ ಸರಕಾರಕ್ಕೆ ಯಾವ ರೀತಿ ಕಾಟ ಕೊಟ್ಟಿದ್ದಾರೆಂಬುದು ನಾಡಿಗೆ ಗೊತ್ತು. ಅದೇ ಗುಣ ಈಗ ಅವರ ಮಗನ ಮಾತಿನಲ್ಲಿ ವ್ಯಕ್ತವಾಗಿದೆ. ಇದಕ್ಕೆ ಸೆಡ್ಡು ಹೊಡೆಯುವುದೇ ಕಾಂಗ್ರೆಸ್ ಸಮಾವೇಶದ ಉದ್ದೇಶವಾಗಿದೆ. ದೇವೇಗೌಡರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಶಕ್ತಿ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ಕಾಂಗ್ರೆಸ್‌ನ 138 ಶಾಸಕರು ನಿಂತು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ದೇವೇಗೌಡರ ಕುಟುಂಬಕ್ಕೆ ಈಗ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಿ.ಎಸ್. ಶಿವಣ್ಣ

ಅಧ್ಯಕ್ಷರು, ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ

Similar News