ಮಾನ್ಯ ಮುಖ್ಯಮಂತ್ರಿಗಳೇ, ಈಗಲಾದರೂ ತಾವು ಮಧ್ಯಪ್ರವೇಶ ಮಾಡಿದ್ದಕ್ಕೆ ವಂದನೆಗಳು.. ಆದರೆ...
ಮಾನ್ಯ ಮುಖ್ಯಮಂತ್ರಿಗಳೇ , ಈಗಲಾದರೂ ತಾವು ಮಧ್ಯಪ್ರವೇಶ ಮಾಡಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದಕ್ಕೆ ವಂದನೆಗಳು .. ಆದರೆ ..
ಮಾನ್ಯರೇ ,
ಕಳೆದ ಅಕ್ಟೋಬರ್ ನಿಂದ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳ ಎಚ್ಚೆತ್ತ ಹಾಗೂ ಸಂವಿಧಾನ ಪ್ರಜ್ಞೆಯುಳ್ಳ ನಾಗರಿಕರು ಇಸ್ರೇಲ್ ದೇಶವು ಫೆಲೆಸ್ತೀನಿಯರ ಮೇಲೆ ನಡೆಸುತ್ತಿರುವ ನರಮೇಧ ನಿಲ್ಲಿಸಬೇಕು ಹಾಗೂ ಅಲ್ಲಿ ನ್ಯಾಯಾಧಾರಿತ ಶಾಂತಿ ಸ್ಥಾಪಿಸಬೇಕೆಂದು ಒತ್ತಾಯಿಸಿ ಶಾಂತಿ ಪ್ರದರ್ಶನ, ಸಭೆ ನಡೆಸಲು ಮಾಡುತ್ತಿದ್ದ ಪ್ರಯತ್ನಗಳಿಗೆ ಪೊಲೀಸ್ ಇಲಾಖೆಯ ಉನ್ನತ ಹಂತಗಳಿಂದ ಸತತವಾಗಿ ತಡೆ ಮತ್ತು ಕಿರುಕುಳವನ್ನು ಅನುಭವಿಸುತ್ತಲೇ ಬಂದಿದ್ದರು.
ಅದು ಮೊನ್ನೆ ಅದು ತೀರಾ ಅತಿರೇಕಕ್ಕೆ ಹೋಗಿ ರಂಗಶಂಕರದಲ್ಲಿ ಫೆಲೆಸ್ತೀನ್ ಪರವಾದ ಹಾಡು-ನಾಟಕಕ್ಕೂ ಬೆಂಗಳೂರು ಪೋಲೀಸರು ಸೆನ್ಸಾರ್ ಹಾಕಿಬಿಟ್ಟರು. ತಮ್ಮ ಸರ್ಕಾರದಿಂದ್ದ ಈ ಬಗೆಯ ದಮನವನ್ನು ನಿರೀಕ್ಷಿಸದ ನಾಗರಿಕರು ನಾಳೆ (ಡಿ. 2) ಫೆಲೆಸ್ತೀನ್ ನಲ್ಲಿ ಶಾಂತಿ ಕೋರಿ ಮತ್ತು ತಮ್ಮ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದನ್ನು ವಿರೋಧಿಸಿ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದರು.
ಅದಕ್ಕೆ ನಾಡಿನಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿರುವುದು ತಮ್ಮ ಅಧಿಕಾರಿಗಳ ಗಮನದಲ್ಲಿರಬೇಕು.
ಇಂಥಾ ಸಂದರ್ಭದಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ತಾವು ಈಗಲಾದರೂ ಮಧ್ಯಪ್ರವೇಶ ಮಾಡಿ ಕರ್ನಾಟಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕವಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿರುವುದು ಸ್ವಾಗತಾರ್ಹ. ಇದಕ್ಕಾಗಿ ತಮಗೆ ಕೃತಜ್ಞತೆಗಳು.
ಹಾಗೆಯೇ ಸರ್ಕಾರವು ಸಂವಿಧಾನದ ಮೂಲಸ್ಫೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲಾ ಅಭಿವ್ಯಕ್ತಿಗಳ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಎಲ್ಲಾ ಕೆಲಸಗಳ ಜೊತೆ ಇರುತ್ತೇವೆಂದು ಅಧಿಕೃತವಾಗಿ ಆಶ್ವಾಸನೆ ನೀಡಿದ್ದೀರಿ.
ಇದು ಸರ್ಕಾರವೊಂದು ಮಾಡಲೇ ಬೇಕಾಗಿರುವ ಕೆಲಸ. ಹೀಗಾಗಿ ಕರ್ನಾಟಕದಲ್ಲಿ ಇನ್ನುಮುಂದೆ ಫೆಲೇಸ್ತೀನಿನಲ್ಲಿ ನ್ಯಾಯದ ಆಧಾರಿತವಾದ ಶಾಂತಿಯನ್ನು ಆಗ್ರಹಿಸಿ ಮತ್ತು ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ವಿರೋಧಿಸಿ ನಡೆಯಬಹುದಾದ ಶಾಂತಿಯುತ ಪ್ರದರ್ಶನಗಳಿಗೆ ಮತ್ತು ಸೃಜನಾತ್ಮಕ ಪ್ರತಿಕ್ರಿಯೆಗಳಿಗೆ ಪೊಲೀಸರು ಅಡ್ಡಿಪಡಿಸುವುದಿಲ್ಲವೆಂದು ಭಾವಿಸಬಹುದಲ್ಲವೇ?.
ಅನಗತ್ಯವಾಗಿ ಮತ್ತು ಸಂವಿಧಾನಕ್ಕೆ ವಿರೋಧವಾಗಿ ನಾಡಿನಲ್ಲಿ ಸೃಷ್ಟಿಯಾಗುತ್ತಿದ್ದ ಉದ್ವಿಘ್ನತೆಯನ್ನು ನಿವಾರಿಸಲು ತಾವು ತಡವಾಗಿಯಾದರೂ ಮಾಡಿದ ಮಧ್ಯಪ್ರವೇಶವನ್ನು ಸ್ವಾಗತಿಸುತ್ತಲೇ ಈ ವಿಷಯದ ಬಗ್ಗೆ ತಮ್ಮ ಹೇಳಿಕೆಯು ಅಡ್ರೆಸ್ ಮಾಡಿರದ ಮತ್ತು ಗಣನೆಗೆ ತೆಗೆದುಕೊಂಡಿರ ಕೆಲವು ಗಂಭೀರ ವಿಷಯಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
► ಒಂದು ಸರ್ಕಾರದ ನೀತಿಗಳು ಜನವಿರೋಧಿಯಾಗಿದ್ದರೆ ಅದನ್ನು ಪ್ರತಿಭಟಿಸುವುದು ಮತ್ತು ಸಮಾಜದಲ್ಲಿ ಮತ್ತು ಜಗತ್ತಿನಲ್ಲಿ ನಡೆಯುವ ಯಾವುದೇ ಅನ್ಯಾಯಗಳ ವಿರುದ್ಧ ಸಾಂವಿಧಾನಿಕ ಚೌಕಟ್ಟಿನಲ್ಲಿ ಹೋರಾಟ ಮಾಡುವುದು ಸಂವಿಧಾನವು ಈ ದೇಶದ ಜನರಿಗೆ ಕೊಟ್ಟಿರುವ ಮೂಲಭೂತ ಹಕ್ಕು. ಅದನ್ನು ತುರ್ತುಸ್ಥಿತಿಯಲ್ಲಿ ಹೊರತುಪಡಿಸಿ ಸಾರಾಸಗಟು ನಿರಾಕರಿಸುವ ಹಕ್ಕು ಪೊಲೀಸರಿಗಿಲ್ಲ. ಹೆಚ್ಚೆಂದರೆ ಆಯಾ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಶರತ್ತುಗಳನ್ನಷ್ಟೇ ವಿಧಿಸಿ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಡಬೇಕು.
► ಆದರೆ ಈ ವಿಷಯದಲ್ಲಿ ಕೆಳಹಂತದ ಪೊಲೀಸರು ಮಾತ್ರವಲ್ಲ . ರಾಜ್ಯಾದ್ಯಂತ ಮೇಲಿನ ಹಂತದ ಪೊಲೀಸರು ಕೂಡ ಅಸಾಂವಿಧಾನಿಕವಾದ ಕಾರಣಗಳನ್ನು ಕೊಟ್ಟು ಅನುಮತಿಯನ್ನು ನಿರಾಕರಿಸುವ ಮೂಲಕ ಪೊಲೀಸ್ ಅಧಿಕಾರಿಗಳು ಕಾನೂನು ಭಂಗ ಮಾಡಿದ್ದಾರೆ.
► ಇದನ್ನು ಅವರು ತಪ್ಪು ತಿಳವಳಿಕೆಯಿಂದ ಮಾಡಿರುವುದಲ್ಲ.
ಎಲ್ಲೆಲ್ಲಿ ಅನುಮತಿ ನಿರಾಕರಣೆ ಮಾಡಲಾಗಿದೆಯೋ ಅಲ್ಲೆಲ್ಲಾ ತುಂಬಾ ಸ್ಪಷ್ಟವಾಗಿ ಮೇಲಧಿಕಾರಿಗಳು "ಇದು ಅಂತರರಾಷ್ಟ್ರೀಯ ಸಮಸ್ಯೆ", "ಶಾಂತಿ ಭಂಗಕ್ಕೆ ಕಾರಣವಾಗುತ್ತದೆ", "ಸರ್ಕಾರದ ನೀತಿಗಳಿಗೆ ವಿರುದ್ಧವಾಗಿದೆ" ಎಂಬ ಕಾರಣವನ್ನು ನೀಡಿಯೇ ಅನುಮತಿಯನ್ನು ನಿರಾಕರಿಸಿದ್ದಾರೆ.
ಬೆಂಗಳೂರು ಮತ್ತು ವಿಜಯಪುರಗಳಲ್ಲಿ ಈ ಬಗೆಯ ಕಾರಣಗಳನ್ನು ಲಿಖಿತವಾಗಿಯೇ ಬರೆದುಕೊಟ್ಟಿದ್ದಾರೆ. ಇದೊಂದು ಅಪಾಯಕಾರಿ ಪೂರ್ವ ಉದಾಹರಣೆಯಾಗಿಬಿಡುವ ಎಲ್ಲಾ ಸಾಧ್ಯತೆಗಳಿವೆ. ಹೋರಾಟದ ಹಿನ್ನೆಲೆಯಿಂದ ಬಂದ ತಾವು ಹೋರಾಟ ನಡೆಯುವುದೇ ಸರ್ಕಾರದ ವಿರುದ್ಧ ಎಂಬುದನ್ನು ಬಲ್ಲಿರಿ. ಸರ್ಕಾರದ ನೀತಿಗಳ ವಿರುದ್ಧ ಎಂಬುದು ಹೋರಾಟದ ಅವಕಾಶ ನಿರಾಕರಣೆಗೆ ಕಾರಣವಾಗುವುದು ಏಕೆ? ಯಾವಾಗಿನಿಂದ ?
►ಎರಡು ಸಂದರ್ಭಗಳಲ್ಲಿ ಪೊಲೀಸರು ಇಸ್ರೇಲ್ ಪರವಾದ ಮತ್ತು ಯುದ್ಧದ ಪರವಾದ ಪ್ರದರ್ಶನಗಳಿಗೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಅವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಬದಲಿಗೆ ಹಲವಾರು ಸಂದರ್ಭಗಳಲ್ಲಿ ಫೆಲೇಸ್ತೀನಿನಲ್ಲಿ ಶಾಂತಿಯನ್ನು ಆಗ್ರಹಿಸಿ ಶಾಂತಿಯುತವಾದ ಪ್ರದರ್ಶನ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕಿದ್ದಾರೆ. ಇದು ಕೇವಲ ತಪ್ಪು ಮಾಹಿತಿಯಿಂದ , ತಳಹಂತದ ಪೊಲೀಸರು ತೆಗೆದುಕೊಂಡ ಕ್ರಮಗಳಲ್ಲ.
► ಎಲ್ಲಕ್ಕಿಂತ ಮುಖ್ಯವಾಗಿ ಇವನ್ನೆಲ್ಲಾ ಸಾರ್ವಜನಿಕರು ಮತ್ತು ಹೋರಾಟ ನಿರತ ಸಂಘಟನೆಗಳು ತಮ್ಮ ಗಮನಕ್ಕೆ ಖುದ್ದಾಗಿ ತಂದಿದ್ದರು. ಆದರೆ ಮತ್ತೆ ಪೊಲೀಸ್ ಇಲಾಖೆ ಈ ವಿಷಯದಲ್ಲಿ ಪ್ರತಿಭಟನೆಗಳಿಗೆ ಅವಕಾಶ ಮಾಡಿಕೊಟ್ಟರೆ ಸಮಾಜ ವಿರೋಧಿ ಶಕ್ತಿಗಳು ಮತ್ತು ಬಲಪಂಥೀಯರು ಅಲ್ಲಿ ಗಲಭೆ ಮಾಡಿ ಕಾಂಗ್ರೆಸ್ ಸರ್ಕಾರಕೆ ಕೆಟ್ಟು ಹೆಸರು ತರುತ್ತಾರೆ ಎಂಬ ವರದಿಯನ್ನು ತಮಗೆ ಕೊಟ್ಟಿರಬಹುದು. ಹೀಗಾಗಿಯೇ ಎಲ್ಲಾ ಹಂತದ ಪೊಲೀಸರು ತಮ್ಮ ಕಚೇರಿಯ ಇಂಗಿತವನ್ನು ಅನುಸರಿಸಿಯೇ ಈ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಅಭಿಪ್ರಾಯವಿದೆ.
ಆದರೆ ಹಾಗೆಂದು ನ್ಯಾಯದ ಪರವಾದ ಅಭಿವ್ಯಕ್ತಿಯನ್ನು ಹತ್ತಿಕ್ಕಿದರೆ ಬಿಜೆಪಿಯನ್ನು ಓಲೈಸಿದಂತೆ ಆಗುವುದೇ ವಿನಾ ಸೆಕ್ಯುಲರಿಸಂ ಮತ್ತು ಸಂವಿಧಾನವನ್ನು ಎತ್ತಿ ಹಿಡಂತಾಗುತ್ತದೆಯೇ? ಇದು ಒಂದು ರೀತಿ ಇಸ್ಲಾಮೊಫೋಬಿಯಾಗೆ ಮಣಿದು ಬಿಜೆಪಿ ಅಜೇಂಡಾಗಳನ್ನೇ ಮುಂದುವರೆಸಿದಂತೆ ಆಗುವುದಿಲ್ಲವೇ? ಸಮಾಜವಾದಿ ಹೋರಾಟದ ಹಿನ್ನೆಲೆಯಿಂದ ಬಂದ ತಮಗೆ ಇವು ಇನ್ನು ಚೆನ್ನಾಗಿಯೇ ಅರ್ಥವಾಗುತ್ತದೆ.
► ಮೊನ್ನೆ ರಂಗಶಂಕರದಲ್ಲಿ ನಾಟಕಕ್ಕೆ ಪರವಾನಗಿ ನಿರಾಕರಿಸಲು ಒಬ್ಬ ಬಿಜೆಪಿ ನಾಯಕರು ಅದು ಹಮಾಸ್ ಪರವಾದ ನಾಟಕ, ಪೊಲೀಸರು ಅದಕ್ಕೆ ಅವಕಾಶ ಕೊಡಬಾರದು ಎಂದು ದುರುದ್ದೇಶದಿಂದ ಮಾಡಿದ ಟ್ವೀಟ್ ಕಾರಣ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಯಾವುದೇ ಸೆಕ್ಯುಲರ್, ನ್ಯಾಯ ಮತ್ತು ಶಾಂತಿಪರವಾದ ವಿಷಯಗಳನ್ನು ಬಲಪಂಥೀಯರು ಹಾಳುಗೆಡುವುದೇ ಈ ಬಗೆಯ ವದಂತಿ ಮತ್ತು ಉದ್ವಿಘ್ನತೆ ಸೃಷ್ಟಿಸುವುದರಿಂದ.
► ಆದರೆ ಕಾಂಗ್ರೆಸ್ ಸರ್ಕಾರ ಇಂಥಾ ಸಮಾಜ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಿ ನ್ಯಾಯದ ಪರವಾದ ಅಭಿವ್ಯಕ್ತಿಗೆ ಅವಕಾಶ ಕೊಡಬೇಕೇ ವಿನಾ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ನಾಟಕದ, ಹಾಡುಗಳ, ಭಾಷಣಗಳ, ಘೋಷಣೆಗಳ ಸ್ಕ್ರಿಪ್ಟ್ ಕೇಳುತ್ತಾ ತುರ್ತುಸ್ಥಿತಿಯಂತ ಸೆನ್ಸಾರ್ ಶಿಪ್ ವಿಧಿಸಬಹುದೇ?
ಇದು ಖಂಡಿತಾ ತಳಹಂತದ ಪೊಲೀಸರು ಎಸಗಿರುವ ಪ್ರಮಾದಗಳಲ್ಲ. ಬದಲಿಗೆ ಹಿಂದುತ್ವ ರಾಜಕಾರಣ ಹುಟ್ಟುಹಾಕಿರುವ ಇಸ್ಲಾಮೊಫೋಬಿಯಾದ ಸವಾಲನ್ನು ಮುಖಾಮುಖಿಯಾಗಿ ಎದುರಿಸಿ ಸೋಲಿಸಬೇಕೆಂಬ ರಾಜಕೀಯ ನಿರ್ಧಾರದ ಕೊರತೆಯಿಂದ ತಮ್ಮ ಸರ್ಕಾರ ಈವರೆಗೆ ತೋರಿದ ಹಿಂಜರಿಕೆಯ ಪರಿಣಾಮ ಎಂಬುದು ಎದ್ದುಕಾಣುತ್ತದೆ.
ಐದು ರಾಜ್ಯಗಳ ಚುನಾವಣಾ ಮುಗಿದ ಈ ಹೊತ್ತಿನಲ್ಲಾದರೂ ತಾವು ಮಧ್ಯಪ್ರವೇಶ ಮಾಡಿದ್ದು ಸಮಾಧಾನಕರ. ಆದರೆ ಇದು ತಮ್ಮ ಗಮನದಲ್ಲಿದ್ದರೂ ಈ ಅತಿರೇಕಗಳು ಇಷ್ಟೊಂದು ಮುಂದುವರೆಯಲು ತಾವು ಅವಕಾಶ ಕೊಡಬಾರದಿತ್ತು .
ಏಕೆಂದರೆ ಈ ಬಗೆಯ ರಾಜಕೀಯ ಧೋರಣೆ ಸಮಾಜದಲ್ಲಿ ಬಿಜೆಪಿ ಮತ್ತದರ ರಾಜಕೀಯವನ್ನು ಗಟ್ಟಿಗೊಳಿಸುತ್ತದೆಯೇ ವಿನಃ ಸೋಲಿಸುವುದಿಲ್ಲ.
ಮತ್ತೊಮ್ಮೆ ತಮಗೆ ಅಭಿನಂದನೆಗಳನ್ನು ತಿಳಿಸುತ್ತಾ
- ಶಿವಸುಂದರ್