ಕ್ಯಾಂಪಸ್‌ಗಳಲ್ಲಿನ ಜಾತಿ ತಾರತಮ್ಯ: ಪರಿಹಾರಗಳನ್ನೇ ನೀಡದ ಯುಜಿಸಿ ಸಮಿತಿ

ವಿವಿಧ ವಿಶ್ವವಿದ್ಯಾನಿಲಯಗಳಿಂದ ಸಂಗ್ರಹಿಸಿದ ಮಾಹಿತಿಯು, ತಾರತಮ್ಯ ಸಮಸ್ಯೆಯನ್ನು ಪರಿಹರಿಸಲು ಅನೇಕ ವಿಶ್ವವಿದ್ಯಾನಿಲಯಗಳು ಇಲ್ಲಿಯವರೆಗೆ ಯಾವುದೇ ವ್ಯವಸ್ಥೆಯನ್ನು ಹೊಂದಿಲ್ಲ ಮತ್ತು ಕೆಲವು ಸಂದರ್ಭಗಳಲ್ಲಿ ಆರೋಪಿಗಳಿಗೆ ಕೇವಲ ಎಚ್ಚರಿಕೆಯನ್ನಷ್ಟೇ ನೀಡಿ ಬಿಟ್ಟುಬಿಡಲಾಗಿದೆ ಎಂಬುದನ್ನೇ ತೋರಿಸುತ್ತದೆ.

Update: 2024-02-14 10:11 GMT

ಇದು, ಪರಿಹಾರ ಕಂಡುಕೊಳ್ಳಲು ರಚಿಸಲಾಗಿದ್ದ ಸಮಿತಿಯೇ ಸಮಸ್ಯೆಯಾಗಿ ಪರಿಣಮಿಸಿದ ಕಥೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯದ ಕಾರಣಕ್ಕೆ ತಮ್ಮ ಮಕ್ಕಳನ್ನು ಕಳೆದುಕೊಂಡ ಇಬ್ಬರು ತಾಯಂದಿರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಐದು ವರ್ಷಗಳ ಹಳೆಯ ಅರ್ಜಿಗೆ ಪ್ರತಿಕ್ರಿಯೆಯಾಗಿ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಒಂಭತ್ತು ಸದಸ್ಯರ ಸಮಿತಿಯನ್ನು ರಚಿಸಿತ್ತು. ಆದರೆ ಆ ಸಮಿತಿ ಪರಿಹಾರಗಳನ್ನು ನೀಡುವುದಕ್ಕಿಂತ ಹೆಚ್ಚಾಗಿ, ತಾನೇ ಸಮಸ್ಯೆಗಳನ್ನು ಹೊಂದಿರುವಂತೆ ಕಾಣಿಸುತ್ತಿದೆ.

ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಲು ಉತ್ತರದಾಯಿತ್ವ ಮತ್ತು ಅಗತ್ಯ ಕ್ರಮಗಳಿಗಾಗಿ ಕೋರಿ ಅರ್ಜಿ ಸಲ್ಲಿಸಿದ್ದ ಆ ತಾಯಂದಿರೆಂದರೆ, ಅಬೇದಾ ತಾದ್ವಿ ಮತ್ತು ರಾಧಿಕಾ ವೇಮುಲ. ಕಳೆದ ವರ್ಷ ಜುಲೈನಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಸಮಸ್ಯೆಯನ್ನು ಗಂಭೀರ ಮತ್ತು ಸೂಕ್ಷ್ಮ ಎಂದು ಹೇಳಿತ್ತು. ಅದಾದ ಬಳಿಕ ಯುಜಿಸಿ ತನ್ನ ನಿಯಮಾವಳಿಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಯೋಜನೆಗಳನ್ನು ಮರುಪರಿಶೀಲಿಸಲು ಒಂಭತ್ತು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು. ಅಂದಿನಿಂದ, ಸಮಿತಿ ಕನಿಷ್ಠ ಮೂರು ಬಾರಿ ಸಭೆ ನಡೆಸಿದೆ.

ಮಹಾರಾಜ ಕೃಷ್ಣಕುಮಾರಸಿಂಹಜಿ ಭಾವನಗರ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಶೈಲೇಶ್ ಎನ್.ಝಾಲಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅದರ ಹಲವು ಸದಸ್ಯರ ಹಿನ್ನೆಲೆಯನ್ನು ಗಮನಿಸಿದರೆ, ಸದಸ್ಯರನ್ನು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವರು ಮಾಡಿದ ಕೆಲಸಕ್ಕಾಗಿ ನೇಮಿಸಲಾಗಿಲ್ಲ. ಆದರೆ ಅವರ ರಾಜಕೀಯ ಪಕ್ಷಪಾತದ ಹಿನ್ನೆಲೆಯಲ್ಲಿ ನೇಮಕ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ, ಝಾಲಾ ಅವರ ನೇಮಕಾತಿ. ಎಂ.ಕೆ.ಯವರು ಭಾವನಗರ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗುವ ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಉಪಾಧ್ಯಕ್ಷರಾಗಿದ್ದರು. ನಿವೃತ್ತಿ ನಂತರವೂ ಅವರ ರಾಜಕೀಯ ನಂಟು ಹಾಗೆಯೇ ಇದೆ.

ಇನ್ನೋರ್ವ ಸದಸ್ಯ, ದಿಲ್ಲಿಯ ಸತ್ಯವತಿ ಕಾಲೇಜಿನ ಹಾಲಿ ಪ್ರಾಂಶುಪಾಲ ಡಾ. ವಿಜಯ್ ಶಂಕರ್ ಮಿಶ್ರಾ. ಕಾಲೇಜು ನೇಮಕಾತಿಗಳಲ್ಲಿ ಮೀಸಲಾತಿ ರೋಸ್ಟರ್ ಅನ್ನು ಅನುಸರಿಸುತ್ತಿಲ್ಲ ಎಂಬ ಆರೋಪ ಅವರ ಮೇಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟಾಗಳ ಅಡಿಯಲ್ಲಿ ನೇಮಕಗೊಂಡ ಸಿಬ್ಬಂದಿ ನಿವೃತ್ತರಾದ ನಂತರ ಮಿಶ್ರಾ ಹೊರಡಿಸಿದ ಸುತ್ತೋಲೆಗಳಲ್ಲಿ ಆ ಹುದ್ದೆಗಳು ಮೀಸಲು ಸ್ಥಾನಗಳೆಂದು ಉಲ್ಲೇಖಿಸಿಲ್ಲ ಎಂಬ ಆರೋಪಗಳಿವೆ. ಮಿಶ್ರಾ ವಿರುದ್ಧ ಹೀಗೆ ಜಾತಿ ತಾರತಮ್ಯದ ಆರೋಪಗಳಿದ್ದರೂ ಅವರನ್ನು ಸಮಿತಿಗೆ ತೆಗೆದುಕೊಂಡಿರುವ ಯುಜಿಸಿ ನಿರ್ಧಾರ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಕಳೆದ ವರ್ಷ, ಅನೇಕ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಮ್‌ಗೆ ಮತಾಂತರಗೊಂಡ ನಂತರವೂ ಮೀಸಲಾತಿ ಪಡೆದಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಎಂಎಲ್‌ಸಿಗಳು ದೂರಿದ ನಂತರ, ರಾಜ್ಯ ಸರಕಾರ ಮೂರು ಸದಸ್ಯರ ಸಮಿತಿಯನ್ನು ರಚಿಸಿತು. ಆ ಕ್ರಮ ವ್ಯಾಪಕ ಟೀಕೆಗೆ ಒಳಗಾಯಿತು. ಬುಡಕಟ್ಟು ಸಮುದಾಯದ ಬಗೆಗಿನ ಸಂವೇದನೆ ರಹಿತ ನಡೆ ಮತ್ತು ಧರ್ಮವನ್ನು ಇಟ್ಟುಕೊಂಡು ಮಾಡಲಾಗುತ್ತಿರುವ ರಾಜಕೀಯ ಅದೆಂದು ಆಕ್ಷೇಪಿಸಲಾಯಿತು. ಆ ಸಮಿತಿಯ ನೇತೃತ್ವ ವಹಿಸಿದ್ದ ಅಮರಾವತಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಡಾ.ಮುರಳೀಧರ್ ಚಾಂಡೇಕರ್ ಸ್ವತಃ ಬಿಜೆಪಿ ಪರ ವ್ಯಕ್ತಿಯಾಗಿದ್ದರು. ಈಗ ಚಾಂಡೇಕರ್ ಯುಜಿಸಿ ಸಮಿತಿಯ ಸದಸ್ಯರೂ ಆಗಿದ್ದಾರೆ.

ತಾದ್ವಿ ಮತ್ತು ವೇಮುಲ ಸಲ್ಲಿಸಿದ್ದ 700 ಪುಟಗಳ ಅರ್ಜಿಗೆ ಪ್ರತಿಕ್ರಿಯೆಯಾಗಿ ಯುಜಿಸಿ ಉಪ ಅಧೀನ ಕಾರ್ಯದರ್ಶಿ ಪ್ರಶಾಂತ್ ದ್ವಿವೇದಿ ಅಫಿಡವಿಟ್ ಸಲ್ಲಿಸಿದ್ದಾರೆ. ತಮ್ಮ ವಕೀಲರಾದ ದಿಶಾ ವಾಡೇಕರ್ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಆ ತಾಯಂದಿರು, ವಿಶ್ವವಿದ್ಯಾನಿಲಯಗಳಲ್ಲಿನ ವಿಷಕಾರಿ ಜಾತಿವಾದಿ ವಾತಾವರಣದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಯುಜಿಸಿ ಅಸಮರ್ಥವಾಗಿದೆ ಎಂದು ಆರೋಪಿಸಿದ್ದಾರೆ. ಇಂದಿರಾ ಜೈಸಿಂಗ್ ಈ ಪ್ರಕರಣದ ಹಿರಿಯ ವಕೀಲರಾಗಿದ್ದಾರೆ.

ಜನವರಿ 2016ರಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿದ್ದ ರೋಹಿತ್ ವೇಮುಲ ಮತ್ತಿತರ ಐವರನ್ನು ಎಬಿವಿಪಿ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪ ಹೊರಿಸಿ ವಿಶ್ವವಿದ್ಯಾನಿಲಯದ ವಸತಿ ಸೌಲಭ್ಯದಿಂದ ಹೊರಹಾಕಲಾಯಿತು. ಹೊರಹಾಕಲ್ಪಟ್ಟ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುತ್ತಿದ್ದರು. ಅದರ ನಡುವೆಯೇ, 2016ರ ಜನವರಿ 17ರಂದು ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಶ್ವವಿದ್ಯಾನಿಲಯದ ಉಪಕುಲಪತಿ ಅಪ್ಪಾ ರಾವ್ ಪೊಡಿಲೆ, ಆಗಿನ ಬಿಜೆಪಿ ಎಂಎಲ್‌ಸಿ ಎನ್. ರಾಮಚಂದ್ರ ರಾವ್ ಮತ್ತು ಎಬಿವಿಪಿ ಸದಸ್ಯರಾದ ಸುಶೀಲ್ ಕುಮಾರ್ ಮತ್ತು ರಾಮಕೃಷ್ಣ ಅವರುಗಳೇ ರೋಹಿತ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ.

ಡಾ. ಪಾಯಲ್ ತಾದ್ವಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ, ಆಕೆ ಬರೆದಿಟ್ಟಿದ್ದ ಪತ್ರ ಮತ್ತು ಆಕೆಯ ತಾಯಿ ಅಬೇದಾ ತಾದ್ವಿ ಅವರ ಸಾಕ್ಷ್ಯವು ಹಿರಿಯ ವೈದ್ಯರಾದ ಹೇಮಾ ಅಹುಜಾ, ಭಕ್ತಿ ಮೆಹರೆ ಮತ್ತು ಅಂಕಿತಾ ಖಂಡೇಲ್ವಾಲ್ ಅವರ ವಿರುದ್ಧ ಕಿರುಕುಳ ಆರೋಪ ಮಾಡಿದ್ದು, ಮೂವರನ್ನೂ ತಕ್ಷಣವೇ ಬಂಧಿಸಲಾಗಿತ್ತು. ಅವರ ವಿರುದ್ಧ 1,200 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇಡೀ ವರ್ಷ ಪಾಯಲ್‌ಗೆ ಚಿತ್ರಹಿಂಸೆ ನೀಡಿದ ಆರೋಪ ಮತ್ತು ಆಕೆಯ ಮೇಲೆ ಜಾತಿ ನಿಂದನೆ ಮಾಡಿದ ಆರೋಪ ಅವರ ಮೇಲಿದೆ. ತಾದ್ವಿಗಳು ಭಿಲ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಮತ್ತು ಪಾಯಲ್ ಬಹುಶಃ ಆ ಸಮುದಾಯದಿಂದ ವೈದ್ಯರಾಗಿದ್ದ ಮೊದಲ ಮಹಿಳೆ. ಈ ಕ್ರಿಮಿನಲ್ ಮೊಕದ್ದಮೆಯಲ್ಲಿ ದಿಶಾ ವಾಡೇಕರ್ ಅವರು ಅಬೇದಾ ತಾದ್ವಿ ಪರ ವಕೀಲರಾಗಿದ್ಧಾರೆ.

ರೋಹಿತ್ ಮತ್ತು ಪಾಯಲ್ ಸಾವಿನ ಜೊತೆಗೆ, ಕಳೆದ ಎರಡು ದಶಕಗಳಲ್ಲಿ ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಸಂಭವಿಸಿದ ಹಲವಾರು ಆತ್ಮಹತ್ಯೆಗಳನ್ನು ಅರ್ಜಿಯಲ್ಲಿ ಪಟ್ಟಿ ಮಾಡಲಾಗಿದೆ. ಈ ಕೆಲವು ಸಾವುಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರೆ, ಅನೂಪ್ ಕುಮಾರ್ ನೇತೃತ್ವದ ಇನ್‌ಸೈಟ್ ಫೌಂಡೇಶನ್ ಎಂಬ ದಿಲ್ಲಿ ಮೂಲದ ಸಂಸ್ಥೆ ನಡೆಸಿದ ಸ್ವತಂತ್ರ ಅಧ್ಯಯನದಲ್ಲಿ ಅವುಗಳಲ್ಲಿ ಹಲವು ಪ್ರಕರಣಗಳ ಬಗ್ಗೆ ಉಲ್ಲೇಖವಿದೆ. ಆ ಪ್ರತಿಷ್ಠಾನವು ಎಲ್ಲ ಪ್ರಕರಣಗಳನ್ನು ಅಧ್ಯಯನ ಮಾಡಿದೆ ಮತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಅನುಭವಗಳನ್ನು ದಾಖಲಿಸಿದೆ.

2012ರಲ್ಲಿ ತಾರತಮ್ಯ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದ ಕಾರಣ, ಯುಜಿಸಿ ನಿಯಮಗಳನ್ನು ಈಕ್ವಿಟಿ ನಿಯಮಗಳು ಎಂದೂ ಕರೆಯುವಂತೆ ಒತ್ತಡ ತರಲಾಯಿತು. ಆ ನಿಯಮಾವಳಿಗಳು ಸಮಾನತೆಯನ್ನು ತರುವ ನಿಟ್ಟಿನಲ್ಲಿ ಮೇಲ್ವಿಚಾರಣೆಗೆ ಸಮಾನ ಅವಕಾಶ ಘಟಕ ಸ್ಥಾಪನೆ ಮತ್ತು ಸಮಾನತೆಯ ಉಲ್ಲಂಘನೆಯಲ್ಲಿನ ತಾರತಮ್ಯದ ಕುರಿತ ದೂರುಗಳ ತನಿಖೆಗೆ ತಾರತಮ್ಯ ವಿರೋಧಿ ಅಧಿಕಾರಿಯ ನೇಮಕ ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲಿ ಅಗತ್ಯವಾಗಿದ್ದವು. ಕ್ಯಾಂಪಸ್‌ನಲ್ಲಿ ಜಾತಿ ಆಧಾರಿತ ತಾರತಮ್ಯದ ದೂರುಗಳನ್ನು ಪರಿಹರಿಸುವ ಉದ್ದೇಶದಿಂದ ಯುಜಿಸಿ ಈಕ್ವಿಟಿ ನಿಯಮಾವಳಿಗಳನ್ನು ಪರಿಚಯಿಸಿದ್ದರೂ, ನಿಯಮಗಳು ಪರಿಣಾಮಕಾರಿಯಾಗಿ ಅಥವಾ ಸಾಕಷ್ಟು ಮಟ್ಟದಲ್ಲಿ ಆಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ನಿಯಮಾವಳಿಗಳ ಅಡಿಯಲ್ಲಿ ತಾರತಮ್ಯ ವಿರೋಧಿ ಅಧಿಕಾರಿಗಳಾಗಿ ಮತ್ತು ಮೇಲ್ಮನವಿ ಪ್ರಾಧಿಕಾರದಲ್ಲಿ ಕ್ರಮವಾಗಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಂಸ್ಥೆಯ ಮುಖ್ಯಸ್ಥರೇ ಇರುವುದರಿಂದ ಕುಂದುಕೊರತೆ ಪರಿಹಾರದ ಸ್ವತಂತ್ರ ವ್ಯವಸ್ಥೆ ಅಲ್ಲಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಯುಜಿಸಿಯ ಅಫಿಡವಿಟ್‌ನಲ್ಲಿ, ಕ್ಯಾಂಪಸ್‌ನಲ್ಲಿ ಜಾತಿವಾದವನ್ನು ನಿಭಾಯಿಸಲು ಅರ್ಜಿದಾರರು ಅಸಮರ್ಪಕ ಎಂದು ಯಾವುದನ್ನು ಕರೆದಿದ್ದಾರೆಯೋ ಅದೇ ನಿಯಮಗಳು ಮತ್ತು ನಿಬಂಧನೆಗಳನ್ನು ದ್ವಿವೇದಿ ಪಟ್ಟಿ ಮಾಡಿದ್ದಾರೆ.

ಈಕ್ವಿಟಿ ನಿಯಮಾವಳಿಗಳ ಮತ್ತೊಂದು ಪ್ರಮುಖ ನ್ಯೂನತೆಯೆಂದರೆ, ಅದು ಅಧ್ಯಾಪಕ ಸದಸ್ಯರಿಗೆ ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸೇರಿದ ಇತರ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ಆ ನಿಯಮಗಳು ತಾರತಮ್ಯದ ಮೊದಲ ಬಲಿಪಶುಗಳನ್ನೇ ಪ್ರತಿಕೂಲ ವಾತಾವರಣದಿಂದ ರಕ್ಷಿಸುವುದಿಲ್ಲ. ಅರ್ಜಿಯಲ್ಲಿ ಈ ವಿಚಾರವನ್ನೂ ಎತ್ತಲಾಗಿದೆ. ಆದರೆ ಯುಜಿಸಿ ತನ್ನ ಅಫಿಡವಿಟ್‌ನಲ್ಲಿ ಇದಕ್ಕೆ ಯಾವುದೇ ಪರಿಹಾರವನ್ನು ಸೂಚಿಸಲು ವಿಫಲವಾಗಿದೆ.

ಕಾಲಕಾಲಕ್ಕೆ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸಂಗ್ರಹಿಸಲಾದ ಮಹತ್ವದ ಡೇಟಾವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, 2015-16ರಲ್ಲಿ 800ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಲ್ಲಿ 155 ಮಾತ್ರ ಯುಜಿಸಿಗೆ ತಮ್ಮ ವರದಿಗಳನ್ನು (ಎಟಿಆರ್) ಸಲ್ಲಿಸಿವೆ. ಅದೇ ರೀತಿ, 2017-18ರಲ್ಲಿ 800ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಲ್ಲಿ 419 ಮಾತ್ರ ತಮ್ಮ ಎಟಿಆರ್‌ಗಳನ್ನು ಸಲ್ಲಿಸಿವೆ ಎಂದು ಆರ್‌ಟಿಐ ಅಡಿಯಲ್ಲೇ ಪಡೆಯಲಾಗಿರುವ ಮತ್ತೊಂದು ಮಾಹಿತಿ ಬಹಿರಂಗಪಡಿಸುತ್ತದೆ. ಯುಜಿಸಿ ಕೇವಲ ಆ ವಿವಿಗಳ ಎಟಿಆರ್‌ಗಳನ್ನು ಸಂಗ್ರಹಿಸಿದೆ. ಆದರೆ ಈಕ್ವಿಟಿ ನಿಯಮಾವಳಿಗಳನ್ನು ಅನುಸರಿಸಲು ವಿಫಲವಾದ ವಿಶ್ವವಿದ್ಯಾನಿಲಯಗಳ ವಿರುದ್ಧ ಅದು ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ.

ವಿವಿಧ ವಿಶ್ವವಿದ್ಯಾನಿಲಯಗಳಿಂದ ಸಂಗ್ರಹಿಸಿದ ಮಾಹಿತಿಯು, ತಾರತಮ್ಯ ಸಮಸ್ಯೆಯನ್ನು ಪರಿಹರಿಸಲು ಅನೇಕ ವಿಶ್ವವಿದ್ಯಾನಿಲಯಗಳು ಇಲ್ಲಿಯವರೆಗೆ ಯಾವುದೇ ವ್ಯವಸ್ಥೆಯನ್ನು ಹೊಂದಿಲ್ಲ ಮತ್ತು ಕೆಲವು ಸಂದರ್ಭಗಳಲ್ಲಿ ಆರೋಪಿಗಳಿಗೆ ಕೇವಲ ಎಚ್ಚರಿಕೆಯನ್ನಷ್ಟೇ ನೀಡಿ ಬಿಟ್ಟುಬಿಡಲಾಗಿದೆ ಎಂಬುದನ್ನೇ ತೋರಿಸುತ್ತದೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಸುಕನ್ಯಾ ಶಾಂತಾ

contributor

Similar News