ಅಪಾಯ ಆಹ್ವಾನಿಸುತ್ತಿರುವ ಚಾರ್ಮಾಡಿ ಘಾಟಿ

Update: 2024-07-04 09:44 GMT

ಮೂಡಿಗೆರೆ: ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಹಲವು ಕಡೆ ರಸ್ತೆ ಬದಿ ನಿರ್ಮಿಸಿರುವ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡೆಗೋಡೆಗೆ ಆಧಾರವಾಗಿ ನಿರ್ಮಿಸಲಾದ ಹಿಂಬದಿ ಗೋಡೆ ಕುಸಿಯುವ ಭೀತಿ ಎದುರಾಗಿದೆ.

ಕಳೆದ ಬೇಸಿಗೆ ಕಾಲದಲ್ಲಿ ಚಾರ್ಮಾಡಿ ಘಾಟಿ ಪರಿಸರದಲ್ಲಿ ಕಟ್ಟುತ್ತಿದ್ದ ತಡೆಗೋಡೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ತಡೆಗೋಡೆ ಕಟ್ಟಿರುವ ಸುಮಾರು ಆರರಿಂದ ಏಳು ಸ್ಥಳಗಳಲ್ಲಿ ಗೋಡೆಯ ಬದಿ ಹಾಕಿರುವ ಮಣ್ಣು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಗೋಡೆ ವಾಲುವ ಹಂತದಲ್ಲಿದೆ ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಘಾಟಿ ವಿಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದ ಆರಂಭದಲ್ಲೇ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಧಾರಾಕಾರ ಮಳೆ ಸುರಿದು ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಚರಂಡಿಯ ಕೊರತೆ: ತಡೆಗೋಡೆ ಪ್ರದೇಶದಲ್ಲಿ ಚರಂಡಿ ಇಲ್ಲದ ಕಾರಣ ಮಳೆ ನೀರು ಘಾಟಿಯ ರಸ್ತೆಯಲ್ಲಿ ಹರಿಯುತ್ತಿದ್ದು, ತಡೆಗೋಡೆಗಳ ಸಮೀಪದಿಂದಲೇ ಕಣಿವೆ ಭಾಗಕ್ಕೆ ಇಳಿಯುತ್ತಿದೆ. ಹಿಂಬದಿ ಕಟ್ಟಿರುವ ಗೋಡೆ ಮೂಲಕ ಕಣಿವೆ ಪ್ರದೇಶಕ್ಕೆ ಹರಿದು ಗೋಡೆಯ ಮಣ್ಣು ಸವಕಳಿಗೊಳ್ಳುತ್ತಿದೆ. ಇಲ್ಲಿ ಕೆಲವೆಡೆ ಈಗಾಗಲೇ ಮರಳಿನ ಚೀಲ ತಾರ್ಪಾಲಿನ್ ಹಾಕಿದ್ದರೂ ಅದು ಸಂಪೂರ್ಣ ತಡೆಯಾಗಲು ಸಾಧ್ಯವಿಲ್ಲ.

ರಸ್ತೆಯಲ್ಲಿ ಬಿರುಕು: ಘಾಟಿಯ ಚಿಕ್ಕಮಗಳೂರು ವಿಭಾಗದ 5-6 ಕಡೆಗಳಲ್ಲಿ ರಸ್ತೆ ಮಧ್ಯೆ ಬಿರುಕುಗಳು ಕಂಡು ಬಂದಿದೆ. ಇನ್ನೊಂದೆಡೆ ರಸ್ತೆ ಬಿರುಕುಗಳ ಮೂಲಕ ನೀರು ಇಳಿಯುತ್ತಿದ್ದು, ಇದು ಇನ್ನಷ್ಟು ಕುಸಿತಕ್ಕೆ ಕಾರಣವಾಗಬಹುದು. ಒಟ್ಟಿನಲ್ಲಿ ಘಾಟಿಯ ಚಿಕ್ಕಮಗಳೂರು ವಿಭಾಗದ ಹಲವೆಡೆ ಸಮಸ್ಯೆ ಕಂಡು ಬಂದಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.

ಮುನ್ನೆಚ್ಚರಿಕೆ ಅಗತ್ಯ

ಒಂದೆಡೆ ಘಾಟಿಯಲ್ಲಿ ಮಳೆ ಮತ್ತು ಮಂಜು ಮುಸುಕಿದ ವಾತಾವರಣವಿದ್ದು, ರಾತ್ರಿ ವೇಳೆ ಸಂಚರಿಸುವಾಗ ತೀರಾ ಎಚ್ಚರ ಅಗತ್ಯ. ಬಿರುಕು ಬಿಟ್ಟಿರುವ ತಡೆಗೋಡೆ, ಒಡೆದಿರುವ ರಸ್ತೆ ಸ್ಥಳಗಳು ರಾತ್ರಿ ಗಮನಕ್ಕೆ ಬರಲು ಕಷ್ಟವಾಗುವುದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ. ಘಾಟಿಯ ಜಲಪಾತ ತೊರೆ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಘಾಟಿಯ ಸಂಪೂರ್ಣ ಪ್ರದೇಶದಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿದೆ. ನೀರಿನ ರಭಸಕ್ಕೆ ಮಣ್ಣು ಇನ್ನಷ್ಟು ಸವಕಳಿಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಘಾಟಿ ಪ್ರದೇಶದಲ್ಲಿ ಸಂಚರಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ತನು ಕೊಟ್ಟಿಗೆಹಾರ

contributor

Similar News