ಭವನಗಳ ಬವಣೆಯತ್ತ ಹರಿಯಬೇಕಿದೆ ಚಿತ್ತ

Update: 2024-10-09 09:40 GMT

ಸಾಮಾನ್ಯವಾಗಿ ಪರಿಶಿಷ್ಟ ಜಾತಿ, ವರ್ಗದ ಜನತೆ ವಾಸಿಸುವ ಕಾಲನಿ ಅಥವಾ ಕೇರಿಗಳಲ್ಲಿ ಯಾವುದೇ ಸಭೆ ಸಮಾರಂಭ, ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸ್ಥಳಾವಕಾಶದ ಕೊರತೆ ಇರುವುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. ಗುಡಿಸಲು ಗುಡಾರಗಳಲ್ಲೇ ಬದುಕನ್ನು ಕಟ್ಟಿಕೊಂಡ ಆ ಜನತೆಗೆ ನೆಮ್ಮದಿಯಾಗಿ ವಾಸಿಸಲು ಸುಸಜ್ಜಿತ ಮನೆಯೇ ಇಲ್ಲದಿರುವ ಹೊತ್ತಿನಲ್ಲಿ ಇನ್ನು ಕೌಟುಂಬಿಕ, ಶುಭ ಕಾರ್ಯಗಳನ್ನು ಹಮ್ಮಿಕೊಳ್ಳಲು ಭವನಗಳಲ್ಲಿ ಸ್ಥಳಾವಕಾಶ ದೊರೆಯುವುದು ಕನಸಿನ ಮಾತೇ ಸರಿ.

ಮೇಲ್ವರ್ಗದ ಅಥವಾ ರಾಜಕಾರಣಿಗಳ ಹಿಂಬಾಲಕರ ನಿಯಂತ್ರಣದಲ್ಲಿರುವ ಕೆಲವು ಭವನಗಳು ಅವರ ದರ್ಪ, ಜಾತೀಯ ಪ್ರತಿಷ್ಠೆಗಳಿಂದಾಗಿ ತಳಸಮುದಾಯದವರಿಗೆ ಸ್ಥಳಾವಕಾಶ ದೊರೆಯದೆ, ಕಲ್ಯಾಣ ಮಂಟಪಗಳಲ್ಲಿ, ಇನ್ನಿತರ ಸಭಾ ಭವನಗಳಲ್ಲಿ ದುಬಾರಿ ಬಾಡಿಗೆ ತೆರುವ ಸಾಮರ್ಥ್ಯವಿಲ್ಲದೆ ಪರಿತಪಿಸುತ್ತಿರುವ ಸಂಗತಿಗಳನ್ನು ಮನಗಂಡ ಸಮುದಾಯದ ಪ್ರಜ್ಞಾವಂತರು, ಸಂಘ ಸಂಸ್ಥೆಗಳ ಮುಖಂಡರುಗಳು ಸರಕಾರಗಳ ಮೇಲೆ, ಸ್ಥಳೀಯ ಶಾಸಕರ ಮೇಲೆ ಒತ್ತಡ ಹೇರಿ ಭವನವೊಂದನ್ನು ನಿರ್ಮಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಭವನ ನಿರ್ಮಾಣಗೊಂಡರೆ ತಮ್ಮ ಖಾಸಗಿ ಭವನ, ಕಲ್ಯಾಣ ಮಂಟಪಗಳಿಂದ ಆದಾಯ ಖೋತಾ ಆದೀತೆಂಬ ಕಾರಣದಿಂದ ಆಗುವ ಅಡ್ಡಿ ಆತಂಕಗಳನ್ನೂ ದಾಟಿ ಹಲವರ ಶ್ರಮ, ಇಚ್ಛಾಸಕ್ತಿಯಿಂದ ರೂಪುಗೊಂಡ ಅಂಬೇಡ್ಕರ್ ಭವನಗಳು, ವಾಲ್ಮೀಕಿ ಭವನಗಳು ಮತ್ತು ಬಾಬು ಜಗಜೀವನ ರಾಂ ಭವನಗಳ ಉದ್ದೇಶಿತ ಕಾರ್ಯಗಳು ಈಡೇರಲು ಶಕ್ತವಾಗಿರುವುದೇ? ಆ ಭವನಗಳ ಸ್ಥಿತಿಗತಿಗಳೇನು? ಯಾವ ಯಾವ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದೆ? ಅದರ ನಿರ್ವಹಣೆಯನ್ನು ನಿರ್ವಹಿಸುತ್ತಿರುವವರಾರು? ಎಂಬ ಬಗ್ಗೆ ಒಂದಷ್ಟು ಸಮೀಕ್ಷೆ ಅವಶ್ಯವೆನಿಸುತ್ತದೆ.

ಬಾಬಾಸಾಹೇಬರ ಹೆಸರಿನಲ್ಲಿ ನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿಗಳು ನಿರ್ಮಿಸಿದ ಭವನಗಳು ನೀರಿನ, ಶೌಚಾಲಯದ, ವಿದ್ಯುಚ್ಛಕ್ತಿಯ ಕೊರತೆಗಳಿಂದ ಬಳಲುವುದು ಒಂದೆಡೆಯಾದರೆ, ಆ ಭವನ ಕಟ್ಟಿ ಹತ್ತಾರು ವರ್ಷಗಳು ಕಳೆದರೂ ಸುಣ್ಣ ಬಣ್ಣ ಕಾಣದೆ ನರಳುವುದನ್ನು ಕಣ್ಣಾರೆ ಕಾಣಬಹುದು. ಮತ್ತೆ ಕೆಲವು ಭವನಗಳಲ್ಲಿ ಶುಚಿತ್ವವಿಲ್ಲದೆ, ದನ-ಕರು, ಕುರಿ-ಮೇಕೆಗಳನ್ನು ಕಟ್ಟಿಹಾಕುತ್ತಿರುವ, ನಿರುಪಯೋಗಿ ಸಾಮಗ್ರಿಗಳನ್ನು ದಾಸ್ತಾನು ಮಾಡಿರುವ ದುರಂತಗಳು ಇಲ್ಲದಿಲ್ಲ. ಕೆಲವು ದುಷ್ಕರ್ಮಿಗಳು ತಮ್ಮ ಸ್ವಂತ ಚಟುವಟಿಕೆಗಳಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆಗಳ ನಡುವೆ ಭವನಗಳಿಗೆ ಬೀಗ ಜಡಿದು ಯಾವುದೇ ಕಾರ್ಯಚಟುವಟಿಕೆಗಳಿಗೂ ಆಸ್ಪದವಿಲ್ಲದಂತೆ ಮಾಡಿರುವ ಪ್ರಕರಣಗಳು, ಹುಟ್ಟುಹಬ್ಬ, ಬೀಗರ ಔತಣ ಕೂಟಗಳಿಗೆ ಸೀಮಿತವಾದರೂ ಮತ್ತೆ ಕೆಲವರ ಗುಂಪುಗಾರಿಕೆ, ತಕರಾರು, ಆಕ್ಷೇಪಗಳಿಂದ ಮನಸ್ತಾಪ ಹೆಚ್ಚಾಗಿರುವ ಘಟನೆಗಳನ್ನು ನೆನೆದಾಗ ಯಾವ ಪುರುಷಾರ್ಥಕ್ಕಾಗಿ ಈ ಭವನಗಳು ತಲೆ ಎತ್ತಿದವು? ಎಂದು ಆಲೋಚಿಸುವಂತಾಗಿದೆ.

ಮಕ್ಕಳ ಓದಿಗಾಗಿ ಹಾಗೂ ಗ್ರಂಥಾಲಯ ಕಟ್ಟಡಕ್ಕೆ ಸ್ಥಳದ ಕೊರತೆ ಎದುರಿಸುತ್ತಿರುವ ಹೊತ್ತಲ್ಲಿ ಸಕಾಲದಲ್ಲಿ ಮಂಜೂರಾತಿ, ಅನುದಾನ ಬಿಡುಗಡೆಯ ವಿಳಂಬದಿಂದ ಭವನ ನಿರ್ಮಾಣವಾಗದೇ ಉಳಿದದ್ದು ಒಂದೆಡೆ, ಗುತ್ತಿಗೆದಾರರ ಬಿಲ್ ಬಾಕಿ ಉಳಿದ ಕಾರಣ ಗುತ್ತಿಗೆದಾರನಿಂದ ಬೀಗಮುದ್ರೆ, ಭವನದ ಉದ್ಘಾಟನೆಯ ರಾದ್ಧಾಂತ, ಭವನ ನಿರ್ಮಾಣದ ಬಗ್ಗೆ ಮೇಲ್ವರ್ಗದವರ ತಕರಾರು ಮುಂತಾದವುಗಳನ್ನು ಮೆಟ್ಟಿ ನಿಂತು ನಿರ್ಮಾಣಗೊಂಡ ಅಂಬೇಡ್ಕರ್ ಭವನಗಳು ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದವು. ಆದರೆ, ಅಲ್ಲಿಯೂ ಪಕ್ಷ ರಾಜಕಾರಣ, ಬಲಾಢ್ಯರ ಕೈಚಳಕ ತಲೆದೋರಿ ಭವನಗಳು ಮತ್ತೆ ಬವಣೆಗಳನ್ನೇ ಎದುರಿಸಬೇಕಾಗಿ ಬಂದಿರುವುದು ದುರಂತವಲ್ಲದೆ ಮತ್ತೇನು?

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನಗಳು ವಿಶೇಷವಾಗಿ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸಬೇಕಿತ್ತು. ಬಾಬಾ ಸಾಹೇಬರ ವಿಚಾರಧಾರೆಗಳ ಬಗ್ಗೆ ಆರೋಗ್ಯಕರ ಚರ್ಚೆ, ಸಂವಾದ, ಸಭೆ ಸಮಾರಂಭ, ವಿಚಾರ ಸಂಕಿರಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಶ್ರಯತಾಣವಾಗಬೇಕಿತ್ತು. ಆ ಸಮುದಾಯದ ವಿದ್ಯಾವಂತ ನಿರುದ್ಯೋಗಿಗಳಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುವ, ಬಡ ಮಕ್ಕಳಿಗೆ ಉಚಿತ ರಾತ್ರಿ ಪಾಠಶಾಲೆ ತೆರೆಯುವ ಮುಂತಾದ ಚಟುವಟಿಕೆಗಳ ಮೂಲಕ ಈ ಭವನಗಳು ಸಾರ್ಥಕತೆಯನ್ನು ಪಡೆಯಬೇಕಿತ್ತು. (ಆದರೂ, ಕೆಲವು ಕಡೆ ಪೌರಾಣಿಕ ನಾಟಕಗಳ ತಾಲೀಮು, ಹೊಲಿಗೆ ತರಬೇತಿಗಳ ಜೊತೆ ಜೊತೆಗೆ ದೇವಾನುದೇವತೆಗಳಿಗೂ ಆಶ್ರಯ ಕಲ್ಪಿಸಿರುವುದನ್ನು ಕಾಣಬಹುದು) ಆದರೆ ದೂರದೃಷ್ಟಿ, ವಿಶಾಲ ದೃಷ್ಟಿಕೋನ ಮತ್ತು ಮೇಲ್ವಿಚಾರಣೆಯ ಕೊರತೆಯಿಂದಾಗಿ ಈ ಭವನಗಳು ಅನಾಥಪ್ರಜ್ಞೆಯಿಂದ ನರಳುವಂತಾಗಿದೆ.

ಇನ್ನಾದರೂ, ಈ ಭವನಗಳ ನಿರ್ವಹಣೆ, ಶುಚಿತ್ವ, ಮೂಲಭೂತ ಸೌಕರ್ಯಗಳಿಗೆ ಕೊರತೆ ಇರದಂತೆ ನೋಡಿಕೊಳ್ಳಲು 2 ವರ್ಷಗಳಿಗೊಮ್ಮೆ ರೊಟೇಷನ್ ಸಿಸ್ಟಮ್ ಮುಖಾಂತರ ಸ್ಥಳೀಯ ಸಂಘ ಸಂಸ್ಥೆ ಮುಖಂಡರು ಹಾಗೂ ಆಡಳಿತ ವ್ಯವಸ್ಥೆ ಜಂಟಿಯಾಗಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ವೃತ್ತ ಪತ್ರಿಕೆಗಳು, ಶೈಕ್ಷಣಿಕ ಹಾಗೂ ಔದ್ಯೋಗಿಕ ಮಾಹಿತಿ ದೊರಕುವಂತೆ ಮಾಡಬೇಕು, ಸಭೆ ಸಮಾರಂಭಗಳಿಗೆ ಕನಿಷ್ಠ ದರ ನಿಗದಿ ಮಾಡಿ ಅನುಕೂಲ ಮಾಡಿಕೊಡಬೇಕು. ಮೇಜು, ಕುರ್ಚಿ ಮುಂತಾದ ಅಗತ್ಯ ಪರಿಕರಗಳನ್ನು ಒದಗಿಸಬೇಕು. ಕೌಟುಂಬಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸ್ಥಳಾವಕಾಶ ಕೋರುವ ಕಾಲನಿಗಳ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ, ಎಪಿಎಲ್ ಕಾರ್ಡುದಾರರಿಗೆ ಕನಿಷ್ಠ ದರವನ್ನಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಿರುವವರಿಂದ ಶೇ. 100ರಷ್ಟು ಶುಲ್ಕ ಪಡೆದು, ಅದರಿಂದ ಬರುವ ಆದಾಯದಿಂದ ಭವನಗಳ ವಿದ್ಯುತ್, ನೀರು, ಶುಚಿತ್ವ, ಕಾವಲುಗಾರರಿಗೆ ಭತ್ತೆ ಇತ್ಯಾದಿಗಳನ್ನು ಹೊಂದಿಸಿಕೊಳ್ಳುವ ಮೂಲಕ ಸ್ವತಂತ್ರ ನಿರ್ವಹಣೆಯೊಂದಿಗೆ ಅಂಬೇಡ್ಕರ್ ಭವನಗಳ ಉದ್ದೇಶ ಸಾರ್ಥಕವಾಗಬೇಕು ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗೌಡಗೆರೆ ಮಾಯುಶ್ರೀ

contributor

Similar News