ಐತಿಹಾಸಿಕ ಗುಮ್ಮನಾಯಕನಪಾಳ್ಯಕ್ಕೆ ಬೇಕಾಗಿದೆ ಕಾಯಕಲ್ಪ

ಕೋಟೆಯಲ್ಲಿನ ಬೃಹತ್ ದೇಗುಲಗಳು ಕಲ್ಲಿನಿಂದ ನಿರ್ಮಾಣಗೊಂಡಿವೆ. ಸಂಗೀತ ವಾದಕರು, ರಾಜ, ರಾಣಿಯರ ಪುರಾಣಗಳ ದೃಶ್ಯಗಳು, ದೇವತೆಗಳು, ಮರಗಿಡಗಳು, ಪಕ್ಷಿಗಳು ಮೊದಲಾದ ಕೆತ್ತನೆಗಳಿವೆ. ಆದರೆ ಇಂದು ಗುಮ್ಮಾನಾಯಕನಪಾಳ್ಯದ ಕೋಟೆ ಪಾಳು ಬಿದ್ದಿದೆ.

Update: 2024-10-08 08:22 GMT

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ 20 ಕಿ.ಮೀ ದೂರದಲ್ಲಿರುವ ಗುಮ್ಮಾನಾಯಕನಪಾಳ್ಯದ ಕೋಟೆ ಚಾರಿತ್ರಿಕ ಹಿನ್ನೆಲೆ ಇರುವ ಸ್ಥಳ ಕ್ರಿ.ಶ.1243ರಲ್ಲಿ ಪ್ರವರ್ಧನಮಾನಕ್ಕೆ ಬಂದ ಗುಮ್ಮಾನಾಯಕನ ಪಾಳೆಗಾರರು ಆಂಧ್ರದ ಮದನಪಲ್ಲಿ ತಾಲೂಕಿಗೆ ಒಳಪಟ್ಟ ದೊಡ್ಡಪಾಳ್ಯ(ತೆಲುಗಿನ ಪೆದ್ದಪಾಳ್ಯಂ)ದವರು.

ಇವರ ಮೂಲ ಪುರುಷ ಖಾದ್ರಿಪತಿ ನಾಯಕ ಕೊನೆಯ ದೊರೆ ಅರ್ಮಡಿ ನರಸಿಂಹನಾಯಕ ಸುಧೀರ್ಘ ಕಾಲ ಆಳಿದ್ದರು. ಆಂದ್ರಪ್ರದೇಶದ ಕೊಡಿಕೊಂಡ, ಕದರಿ, ಕಂದಕೂರು, ಹಿಂದೂಪುರ, ಮತ್ತು ಗೋರೆಂಟ್ಲ ಪ್ರದೇಶಗಳನ್ನು ಸೇರಿಸಿಕೊಂಡು ರಾಜ್ಯಭಾರ ಮಾಡಿದ್ದರು.

ವಿಜಯನಗರ ಸಾಮ್ರಾಜ್ಯದ ಅರಸರಿಗೂ ಈ ಪಾಳೇಗಾರರಿಗೂ ನಿಕಟ ಸಂಪರ್ಕ ಹೊಂದಿದ್ದರು ಎಂದು ಬಾಗೇಪಲ್ಲಿ ದೊರೆತಿರುವ ಕ್ರಿ.ಶ.1336ರ ಹರಿಹರನ ತಾಮ್ರ ಶಾಸನ ಹೇಳುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗೂ ಕಲಬುರಗಿ ಸುಲ್ತಾನರ ನಡುವೆ ನಡೆದ ಯುದ್ಧದಲ್ಲಿ ವಿಜಯನಗರ ಸಂಸ್ಥಾನ ಗೆಲ್ಲಲು ಗುಮ್ಮಾನಾಯಕನಪಾಳ್ಯದ ಹಿರಿಶಿಂಗಪ್ಪ ನಾಯಕ ಮುಖ್ಯ ಕಾರಣನಾಗಿದ್ದನಂತೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕನ್ನು ಆಳಿದ ಗುಮ್ಮಾನಾಯಕನ ಪಾಳೇಗಾರರನ್ನು ಚಿಕ್ಕ ಪಾಳೇಗಾರರ ವಂಶ ಎಂದು ಇತಿಹಾಸಕಾರರು ಕಡೆಗಣಿಸಿದ್ದಾರೆ.ಆದರೆ ಈ ವಂಶವೇ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ವೈಭವದ ಮೆಟ್ಟ್ಟಿಲುಗಳಲ್ಲಿ ಒಂದು ಎಂಬುದನ್ನು ತಾಲೂಕಿನಾದ್ಯಂತ ದೊರೆತಿರುವ 85 ಶಿಲಾ ಶಾಸನಗಳು, ಮಾಸ್ತಿಕಲ್ಲು ವೀರಗಲ್ಲುಗಳು ಹೇಳುತ್ತಿವೆ.

ವಿಜಯನಗರದ ಅಂದಿನ ಚಕ್ರವರ್ತಿ ದೇವರಾಯ ಇಲ್ಲಿನ ಗಡಿದಂ ಪ್ರದೇಶವನ್ನು ಹಿರಿಶಿಂಗಪ್ಪನಿಗೆ ಬಳುವಳಿಯಾಗಿ ನೀಡಿದ್ದ. ಕ್ರಿ.ಶ.1565ರಲ್ಲಿ ನಡೆದ ಮಹತ್ವದ ತಾಳಿಕೋಟೆ ಕದನದಲ್ಲಿ ಗುಮ್ಮಾನಾಯಕನಪಾಳ್ಯದವರು ಪೌರುಷ ಮೆರೆದಿದ್ದರು. ಮೈಸೂರು ಹುಲಿ ಟಿಪ್ಪುಸುಲ್ತಾನ್ ಸೇರಿದಂತೆ ರಾಜ್ಯವನ್ನು ಆಳಿದ ಅನೇಕ ರಾಜಮನೆತನಗಳೊಂದಿಗೆ ಇವರು ನಿಕಟ ಸಂಪರ್ಕ ಹೊಂದಿದ್ದರು.ತಾಲೂಕಿನಲ್ಲಿ 23 ಹಳ್ಳಿಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ್ದರು.

ಶಿಲ್ಪಕಲಾ ಸೌಂದರ್ಯದ ಕೋಟೆಯಲ್ಲಿನ ಬೃಹತ್ ದೇಗುಲ ಗಳು ಕುರಿದೊಡ್ಡಿಗಳಾಗಿವೆ. ಶಿಲ್ಪಕಲೆಯ ಕಂಬಗಳನ್ನು ಕದ್ದೊಯ್ದು ದನಕರುಗಳನ್ನು ಕಟ್ಟಿಕೊಳ್ಳುವ ಕಂಬಗಳನ್ನಾಗಿ ಮಾಡಿಕೊಂಡಿದ್ದಾರೆ. ಬೃಹತ್ ಕೋಟೆಯ ಕಿರಿದಾದ ಪ್ರವೇಶದ್ವಾರ ಬೃಹತ್ ಕಟ್ಟಡಗಳು ಮೈದಾನಗಳು, ಶಿಲಾ ಶಾಸನಗಳು, ವಾಸ್ತು ಶಿಲ್ಪಪ್ರತಿಬಿಂಬಿಸುವ ಸ್ಮಾರಕಗಳು ದಿಕ್ಕು ಕಾಣದೆ ಅನಾಥವಾಗಿದೆ. ಚಿತ್ರದುರ್ಗದ ಕೋಟೆಯಂತೆ ಗುಮ್ಮಾನಾಯಕನಪಾಳ್ಯ ಕೋಟೆ ರಾಜ್ಯದ ಇನ್ನೊಂದು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವಲ್ಲಿ ಸರಕಾರ ಇನ್ನಾದರೂ ಇತ್ತ ಗಮನ ಹರಿಸುವುದೇ ಕಾದು ನೋಡಬೇಕಾಗಿದೆ.

 



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಎಸ್. ವಿನ್‌ಸ್ಟನ್‌ ಕೆನಡಿ

contributor

Similar News