ಕನ್ನಡ ರಂಗಭೂಮಿಯ ತಂಗಲಾನ್: 'ದಕ್ಲಕಥಾ ದೇವಿಕಾವ್ಯ'

ದಕ್ಲಕಥಾ ನಾಟಕದ ಬಹಳ ದೊಡ್ಡ ಶಕ್ತಿ ಹಲಗೆ ಮತ್ತು ಉರುಮೆಯ ಬಳಕೆ. ಹಾಗೆ ನೋಡಿದರೆ ಉರುಮೆ ಅಥವಾ ಅರೆ ಜನಪದ ರಂಗಭೂಮಿಯಲ್ಲಿ ಬಳಕೆಯಾಗಿದ್ದು ಕಡಿಮೆ. ದುರುಗಾ ಮುರುಗಿಯರ ಆಚರಣೆ ಅಥವಾ ಕಲಾ ಪ್ರದರ್ಶನದಲ್ಲಿ ಉರುಮೆ ರಂಗಾಭಿನಯದಂತೆಯೇ ಬಳಕೆಯಾಗಿದೆ. ಈ ಎರಡರ ದನಿಯೊಳಗೆ ಎಲ್ಲಾ ದಮನಿತ ಸಮುದಾಯಗಳ ಆಚರಣೆ ಪರಂಪರೆಯ ನೆನಪುಗಳು ಅಡಗಿ ಕೂತಿರುತ್ತವೆ. ಇವುಗಳ ಸದ್ದು ಕೇಳುತ್ತಲೂ ಈ ಎಲ್ಲಾ ನೆನಪುಗಳಿಗೆ ಜೀವ ಬಂದು ರೆಕ್ಕೆ ಬಲಿತು ಹಾರತೊಡಗುತ್ತವೆ. ಹಾಗಾಗಿ ಈ ನೆನಪುಗಳು ಜೀವಂತಗೊಂಡವರು ನಾಟಕದ ಭಾಗವಾಗಿ ಪಾತ್ರಗಳಾಗಿ ಜೀವಿಸತೊಡಗುತ್ತಾರೆ.

Update: 2024-10-08 06:03 GMT

ಬಾಲ್ಯದಲ್ಲಿ ಅಪ್ಪ ನಮ್ಮ ಮನೆಯ ಎದುರು ಹಳ್ಳದ ದಂಡೆಯ ಮೇಲಿನ ದಿಬ್ಬವನ್ನು ತೋರಿಸಿ, ‘‘ಹಿಂದೆ ಈ ದಿಬ್ಬದ ಮೇಲೆ ದಕ್ಲರು ಬರ್ತಿದ್ರು, ಇವ್ರ ಮಾದಿಗರಿಗಿಂತ ಕೀಳ್ಜನ, ಮಾದಿಗರಿಗೆ ಗೌಡ್ರೇ ಅಂತ ಕರೀತಿದ್ರು. ಊರ ಒಳಗೆ ಬಂದ್ರೂ ಕೇರಿ ಒಳಗೆ ಹೋಗ್ತಿರಲಿಲ್ಲ. ಮಾದಿಗರ ಹಿರೇರು ಊರಲ್ಲಿ ಗೌಡ್ರು, ಶಾನಭೋಗರು, ದೊಡ್ಡ ದೊಡ್ಡ ಮನೆಯವರತ್ರ ದಕ್ಲರು ಬಂದಾರೆ ಒಂದಿಷ್ಟು ಕಾಳು ಕಡಿ ಕೊಡಿ ಎಂದು ದಕ್ಲರ ಪರವಾಗಿ ಎತ್ತಿಕೊಂಡು ಬಂದು ಎಲ್ಲಾ ಕೂಡಿಸಿ ಕೊಡ್ತಾ ಇದ್ರು. ಒಂದು ವಾರನಾದ್ರೂ ಇದೇ ದಿಬ್ಬದ ಮೇಲೆ ಗುಡುಸ್ಲು ಹಾಕೊಂಡು ವಾಸ ಮಾಡ್ತಿದ್ರು. ನಮ್ಮೂರಿನ ಹಕ್ಕಿನ ಎತ್ತುವಳಿ ಅವರಿಗಿತ್ತು, ಕೇರಿ ಹೊರಗೆ ರಾತ್ರಿ ಜಾಂಬವ ಪುರಾಣ ಹೇಳುತಿದ್ರು’’ ಎಂದು ಆಗಾಗ ಹೇಳುತ್ತಿದ್ದರು. ನಮ್ಮೂರಿನ ಕೇರಿಯ ಬಸಣ್ಣನನ್ನು ಈ ಬಗ್ಗೆ ಕೇಳಿದರೆ ‘‘ಹೌದ್ರಿ ದಾವಣಗೆರೆ ತಾಲೂಕಿನ ಹಿರೆಮೇಗಳಗೇರಿ ದಕ್ಕಲರು ಅವರು, ಹತ್ತಿಪ್ಪತ್ತು ವರ್ಷ ಆಯ್ತು ಬರೋದು ಬಿಟ್ಟು. ನಮಿಗೆ ದನೇರ, ಗೌಡರೇ, ನಮ್ಮ ಹೆಣ್ಣಮಕ್ಕಳಿಗೆ ಗೌಡಶ್ಯಾನೇರ ಅಂತಿದ್ರು, ತಂಬೂರಿ ಹಿಡಿದು ಪದ ಹಾಡತಿದ್ರು. ಏನ ಹಾಡತಿದ್ರು ಅನ್ನೋದು ನೆಪ್ಪಿಲ್ಲ. ಕೊನೆಗೊಮ್ಮೆ ಮಕ್ಕಳನ್ನು ಕರಕೊಂಡು ಬಂದು ಪರಿಚಯಿಸಿ ನಮಿಗೆ ಕೊಟ್ಟಂಗ ನಮ್ ಮಕ್ಕಳಿಗೂ ಕೊಡರಿ ಅವರೂ ನಿಮ್ಮ ಕೇರಿ ಮಕ್ಕಳಿದ್ದಂಗ ಅಂದಿದ್ರು’’ ಎಂದು ದಕ್ಲರನ್ನು ನೆನಪಿಸಿಕೊಳ್ಳುತ್ತಾರೆ.

ಹೀಗೆ ಅಪ್ಪನ ಬಾಯಲ್ಲಿ ದಕ್ಲರು ಎನ್ನುವ ಪದವನ್ನು ಮೊದಲಿಗೆ ಕೇಳಿದ್ದೆ. ಆನಂತರ ಅಪ್ಪ ಹೇಳಿದ ಈ ಚಿತ್ರ ಹಾಗೆ ಮನದ ಮೂಲೆಯಲ್ಲಿ ಅಡಗಿ ಕೂತಿತ್ತು. ಕನ್ನಡ ವಿಶ್ವವಿದ್ಯಾನಿಲಯಕ್ಕೆ ಎಂಎ ಮಾಡಲು ಬಂದಾಗ ದಕ್ಲರ ಬಗ್ಗೆ ಬಂದ ಲೇಖನ, ದಕ್ಕಲಿಗ ಸಮುದಾಯದ ಅಧ್ಯಯನಗಳನ್ನು ಓದಿ ದಕ್ಲರ ಬಗ್ಗೆ ಒಂದಷ್ಟು ತಿಳಿದಿದ್ದೆ. ಆಗಲೆ ಕೆ.ಬಿ.ಸಿದ್ದಯ್ಯ ಅವರ ‘ದಕ್ಲಕಥಾ ದೇವಿಕಾವ್ಯ’ ಖಂಡಕಾವ್ಯ ಓದಿದ್ದೆನಾದರೂ ಆಗ ಅದನ್ನು ಅರಗಿಸಿಕೊಳ್ಳಲು ಆಗಿರಲಿಲ್ಲ. ಹೀಗೆ ಮಸುಕು ಮಸುಕಾಗಿದ್ದ ದಕ್ಕಲಿಗರ ಚಿತ್ರಗಳು ‘ದಕ್ಲಕಥಾ ದೇವಿಕಾವ್ಯ’ ನಾಟಕದ ಮೂಲಕ ಸ್ಪಷ್ಟವಾಗಿ ಗೋಚರಿಸಿದವು.

ದಲಿತ ದಮನಿತರ ಕಣ್ಣೋಟದ ರಂಗ ಪ್ರಯೋಗಗಳಿಂದ ಗಮನಸೆಳೆದ ಕೆ.ಪಿ.ಲಕ್ಷ್ಮಣ್ ಅವರ ‘ಪಂಚಮಪದ’ ರಂಗ ಪ್ರಯೋಗ ಕುರಿತು ಜನಚರಿತೆಯ ಮೊದಲ ಕಾಲಂ ನಲ್ಲಿ ಬರೆದಿದ್ದೆ. ಆನಂತರ ಜಂಗಮ ಕಲೆಕ್ಟಿವ್ ತಂಡದ ಕೆ.ಚಂದ್ರಶೇಖರ್ ನಿರ್ದೇಶನದ ‘ಬಾಬ್ ಮಾರ್ಲೆ ಫ್ರಂ ಕೋಡಿಹಳ್ಳಿ’ ಪ್ರಯೋಗ ನೋಡಿಯೂ ಅದರ ಹೊಸತನ ಮತ್ತು ಎತ್ತುವ ದಿಟ್ಟತನದ ಪ್ರಶ್ನೆಗಳಿಗೆ ಬೆರಗಾಗಿದ್ದೆ. ಆದರೆ ಈ ತಂಡದ ಮೊದಲ ಪ್ರಯೋಗವಾದ ‘ದಕ್ಲಕಥಾ ದೇವಿಕಾವ್ಯ’ವನ್ನು ಈತನಕ ನೋಡಲಾಗಿರಲಿಲ್ಲ. ಮೊನ್ನೆಯಷ್ಟೆ ರಂಗಶಂಕರದಲ್ಲಿ ಪ್ರಯೋಗವಾದ ‘ದಕ್ಲಕಥಾ’ ನಾಟಕ ನೋಡಿ ದಂಗಾದೆ. ಈ ತನಕ ಇಂತಹ ವಿಶಿಷ್ಟ ಪ್ರಯೋಗವನ್ನು ನೋಡದೆ ಇದ್ದುದರ ಬಗ್ಗೆ ಪಿಚ್ಚೆನ್ನಿಸಿತು. ಈಗಾಗಲೇೆ ಈ ಪ್ರಯೋಗ ಕುರಿತಂತೆ ಹಲವರು ಭಿನ್ನ ನೆಲೆಗಳಿಂದ ಚರ್ಚೆ ಮಾಡಿದ್ದಾರೆ. ಸಾಕಷ್ಟು ವಿಮರ್ಶೆ ಬಂದಿದೆ. ಹಾಗಿದ್ದೂ ಈ ಹೊಸ ಪ್ರಯೋಗ ನನ್ನೊಳಗೆ ಎಬ್ಬಿಸಿದ ಅಲೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುವೆ.

ಈ ನಾಟಕ ನೋಡುತ್ತಿದ್ದಂತೆ ಇತ್ತೀಚೆಗೆ ದೇಶವ್ಯಾಪಿ ಚರ್ಚೆ ಹುಟ್ಟುಹಾಕಿದ ಪ. ರಂಜಿತ್ ನಿರ್ದೇಶನದ ‘ತಂಗಲಾನ್’ ಸಿನೆಮಾ ಮಾದರಿಯೊಂದನ್ನು ಕೆ.ಪಿ. ಲಕ್ಷ್ಮಣ್ ತಂಗಲಾನ್‌ಗೂ ಮೊದಲೇ ಕನ್ನಡ ರಂಗಭೂಮಿಯಲ್ಲಿ ಪ್ರಯೋಗಿಸಿದಂತೆ ಅನ್ನಿಸಿತು. ತಂಗಲಾನ್ ಬಂಗಾರದ ಹುಡುಕಾಟವಾದರೂ ಈ ಹುಡುಕಾಟದ ಹಿಂದಿರುವುದು ‘ಹಸಿವು’, ದಕ್ಲಕಥಾ ನಾಟಕದ ಎಳೆ ಕೂಡ ಹಸಿವಿನ ಹುಡುಕಾಟ. ಎರಡೂ ಮಾಧ್ಯಮಗಳೂ ಬೇರೆ ಬೇರೆ ಎರಡಕ್ಕೂ ಮಿತಿ ಶಕ್ತಿಗಳು ಇದ್ದೇ ಇವೆ. ಇಲ್ಲಿ ತಂಗಲಾನ್‌ನ ಆರತಿ ನೆಲದ ಸಂಪತ್ತನ್ನು ಕಾಯ್ದುಕೊಂಡು ಬಂದ ದೇವತೆಯಂತೆ ಕಂಡರೆ, ದಕ್ಲದೇವಿ ದಮನಿತರನ್ನು ಪೊರೆವ ತಾಯಾಗಿ ಕಾಣುತ್ತಾಳೆ. ಈ ಎರಡೂ ಮಾಧ್ಯಮಗಳೂ ಹೇಳಲು ಪ್ರಯತ್ನಿಸಿರುವುದು ದಲಿತರ ಹಸಿವಿನ ದಾರುಣ ಕತೆಯನ್ನೇ. ತಂಗಲಾನ್‌ನಲ್ಲಿ ಚಿನ್ನ ಹುಡುಕಲು ನಡೆಸಿದ ಪಯಣದಂತೆ, ದಕ್ಲ ಪುರುಷ ಎಡಬಲ ಮಕ್ಕಳ ಜತೆಗೂಡಿ ನಡೆಸುವ ಪಯಣವೂ ಒಂದೇಯಾಗಿ ಕಾಣುತ್ತವೆ. ತಂಗಲಾನ್ ಮುತ್ತಾತ ಕಾಡಪ್ಪನೇ ದಕ್ಲಪುರುಷನಾಗಿ ಕಂಡರೆ ಅಚ್ಚರಿಯಿಲ್ಲ.

ಜನಪದರ ಆಚರಣೆಯೊಂದನ್ನು ಆಯಾ ಸಂದರ್ಭವನ್ನು ಹೊರತುಪಡಿಸಿ ಮರುಸೃಷ್ಟಿಸುವುದು ಬಹಳ ಕಷ್ಟ. ದಕ್ಲದೇವಿ ರಂಗ ಹೊಡೆಯುವುದು, ಮಡಿ ಹಾಸುವುದು, ಕೂಳಿಗಾಗಿ ಮೂರುದಾರಿ ಕೂಡುವಲ್ಲಿ ನೆಲಹಾಸು ಹಾಕುವುದು, ದೇವಿಯನ್ನು ಹೊರಡಿಸುವುದು ಇದೆಲ್ಲಾ ಆಚರಣೆಯೊಂದು ನೈಜವಾಗಿ ಜನರನ್ನು ತಲ್ಲೀನಗೊಳಿಸುವಂತೆ ರಂಗಭೂಮಿಯಲ್ಲಿಯೂ ಇದು ಯಶಸ್ಸು ಕಂಡಿದೆ. ದೇವಿ ಪುರಾಣ ಹೇಳುವಾಗ, ಎಲ್ಲಮ್ಮನ ನಾಟಕ ಆಡುವಾಗ ಹೀಗೆ ಆಚರಣೆಯೊಂದು ರಂಗದ ಮೇಲೆ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಜನರು ಜೀವಂತ ಆಚರಣೆಗೆ ಸ್ಪಂದಿಸುವಂತೆ ಸ್ಪಂದಿಸುತ್ತಾರೆ. ಆಚರಣೆ ರಂಗಕ್ಕೆ ಬಂದಿದೆಯೋ, ರಂಗಭೂಮಿಯೇ ಆಚರಣೆಯಲ್ಲಿದೆಯೋ ಎನ್ನುವಂತೆ ಒಂದರೊಳಗೊಂದು ಬೆರೆತಿರುತ್ತವೆ. ಎಲ್ಲಮ್ಮ ಗರ್ಭಿಣಿಯಾಗಿ ಬಯಕೆ ಕಾಡುವಾಗ ಜನರು ತಮ್ಮ ಮನೆಗಳಿಂದ ತಂದಿದ್ದ ತರಕಾರಿ ಕಾಳುಕಡಿಯನ್ನು ರಂಗದ ಮೇಲೆ ರಾಶಿ ಹಾಕುತ್ತಾರೆ. ಬಹುಶಃ ದಕ್ಲಕಥಾ ನಾಟಕ ಹಳ್ಳಿಗಳಲ್ಲಿ ಪ್ರಯೋಗವಾದರೆ ದೇವಿ ಹೊರಟಾಗ ಖಂಡಿತಾ ಪೂಜೆ ಮಾಡಿ ಊದುಬತ್ತಿ ಹಚ್ಚಿ ಕೈಮುಗಿಯುವುದನ್ನು ಅಲ್ಲಗಳೆಯಲಾಗದು. ಹಾಗಾಗಿ ದಕ್ಲಕಥಾ ನಾಟಕ ಆಚರಣೆಯನ್ನು ರಂಗದ ಮೇಲೆ ತಂದಿದೆಯೋ ಅಥವಾ ಆಚರಣೆಯೇ ರಂಗದಂತೆ ಕಾಣುತ್ತಿದೆಯೋ ಎನ್ನುವ ಗೊಂದಲ ಹುಟ್ಟಿಸುವಷ್ಟು ಮಟ್ಟಿಗೆ ಸಂಯೋಜಿಸಲಾಗಿದೆ. ಇದುವೇ ನಾಟಕದ ಯಶಸ್ಸಿನ ಸೂತ್ರವಾಗಿದೆ.

ಜನಪದ ರಂಗಭೂಮಿಯಲ್ಲಿ ತಮಟೆ/ಹಲಗೆ/ಡಪ್ಪು ಪ್ರಧಾನ ವಾದ್ಯ. ಬಯಲಾಟ ಪ್ರಕಾರದ ಸಣ್ಣಾಟದಲ್ಲಿ ಹಲಗೆಯನ್ನು ಯಶಸ್ವಿಯಾಗಿ ಬಳಸುತ್ತಾರೆ. ಅಂದರೆ ದಮನಿತ ಸಮುದಾಯಗಳ ಆಚರಣೆ ಪರಂಪರೆಯ ಭಾಗವಾಗಿದ್ದ ‘ಹಲಗೆ’ ಇಲ್ಲಿ ಕಲಾಮಾಧ್ಯಮವಾಗಿ ಬಳಕೆಯಾಗಿತ್ತು. ದಕ್ಲಕಥಾ ನಾಟಕದ ಬಹಳ ದೊಡ್ಡ ಶಕ್ತಿ ಹಲಗೆ ಮತ್ತು ಉರುಮೆಯ ಬಳಕೆ. ಹಾಗೆ ನೋಡಿದರೆ ಉರುಮೆ ಅಥವಾ ಅರೆ ಜನಪದ ರಂಗಭೂಮಿಯಲ್ಲಿ ಬಳಕೆಯಾಗಿದ್ದು ಕಡಿಮೆ. ದುರುಗಾ ಮುರುಗಿಯರ ಆಚರಣೆ ಅಥವಾ ಕಲಾ ಪ್ರದರ್ಶನದಲ್ಲಿ ಉರುಮೆ ರಂಗಾಭಿನಯದಂತೆಯೇ ಬಳಕೆಯಾಗಿದೆ. ಈ ಎರಡರ ದನಿಯೊಳಗೆ ಎಲ್ಲಾ ದಮನಿತ ಸಮುದಾಯಗಳ ಆಚರಣೆ ಪರಂಪರೆಯ ನೆನಪುಗಳು ಅಡಗಿ ಕೂತಿರುತ್ತವೆ. ಇವುಗಳ ಸದ್ದು ಕೇಳುತ್ತಲೂ ಈ ಎಲ್ಲಾ ನೆನಪುಗಳಿಗೆ ಜೀವ ಬಂದು ರೆಕ್ಕೆ ಬಲಿತು ಹಾರತೊಡಗುತ್ತವೆ. ಹಾಗಾಗಿ ಈ ನೆನಪುಗಳು ಜೀವಂತಗೊಂಡವರು ನಾಟಕದ ಭಾಗವಾಗಿ ಪಾತ್ರಗಳಾಗಿ ಜೀವಿಸತೊಡಗುತ್ತಾರೆ. ಅಂತೆಯೇ ಇಲ್ಲಿನ ಬಹುಪಾಲು ಪಾತ್ರದಾರಿಗಳೂ ದಲಿತ ಲೋಕದಿಂದ ಎದ್ದು ಬಂದವರು. ಹಾಗಾಗಿ ಅವರುಗಳು ನಟಿಸಿದ್ದಾರೋ, ನಟನೆಯ ನೆಪದಲ್ಲಿ ತಮ್ಮದೇ ನೆನಪುಗಳಿಗೆ ಮರಳಿದ್ದಾರೋ ಎನ್ನುವುದು ಗುರುತಿಸುವುದು ಕಷ್ಟ. ಅಂದರೆ ದಲಿತ ಸಮುದಾಯಗಳು ತಮ್ಮ ಪಾತ್ರಗಳನ್ನು ರಂಗದ ಮೇಲೆ ಕಲ್ಪಿಸಿಕೊಳ್ಳಲು ನೆರವಾಗುವುದೇ ದಕ್ಲಕಥಾದ ಮತ್ತೊಂದು ಯಶಸ್ಸಿನ ಎಳೆ.

ಮಾಗಡಿ ತಾಲೂಕು ಕೆಂಕೆರೆ ಭಾಗದ ದಲಿತಲೋಕವನ್ನು ಕನ್ನಡ ಸಾಹಿತ್ಯಲೋಕಕ್ಕೆ ಕಸಿ ಮಾಡಿದ ಬಕಾಲದ ಕವಿ ಕೆ.ಬಿ. ಸಿದ್ದಯ್ಯ ಅವರ ‘ಬಕಾಲ’, ‘ದಕ್ಲಕಥಾ ದೇವಿಕಾವ್ಯ’, ‘ಗಲ್ಲೆಬಾನಿ’, ‘ಅನಾತ್ಮ’ದಂತಹ ಖಂಡಕಾವ್ಯಗಳ ಮೂಲಕ ಕನ್ನಡ ಕಾವ್ಯಲೋಕಕ್ಕೆ ದಲಿತ ಅಧ್ಯಾತ್ಮವನ್ನು ಬೆಸೆದವರು. ಹಾಗಾಗಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯ ಮಾದರಿ ಒಂದಾದರೆ, ಸಿದ್ದಯ್ಯ ಅವರ ಮಾದರಿ ಮತ್ತೊಂದು ನೆಲೆಯದು. ದಕ್ಲಕಥಾ ಕನ್ನಡ ಕಾವ್ಯಕ್ಕೆ ಹೇಗೆ ಹೊಸ ನುಡಿಗಟ್ಟಾಗಿ ಗಮನಸೆಳೆದಿತ್ತೋ, ಇದರ ರಂಗಪ್ರಯೋಗ ಕೂಡ ಕನ್ನಡ ರಂಗಭೂಮಿಯ ಹೊಸ ಪರಿಭಾಷೆಯಾಗಿ ರೂಪುಗೊಂಡಿದೆ. ಬಹುಶಃ ದಲಿತ ಸಾಂಸ್ಕೃತಿಕ ಲೋಕದ ಬೇರುಗಳ ಪರಿಚಯ ಇಲ್ಲದ ಯಾರೇ ಆದರೂ ದಕ್ಲಕಥಾ ಕಾವ್ಯವನ್ನು ರಂಗಭೂಮಿಗೆ ತರಲಾಗುತ್ತಿರಲಿಲ್ಲ. ದಲಿತ ಲೋಕದ ಬೇರುಗಳಿಂದಲೇ ಚಿಗುರೊಡೆದ ಪ್ರತಿಭೆಯಾದ ಕಾರಣ ಲಕ್ಷ್ಮಣ್‌ಗೆ ಇದನ್ನು ರಂಗರೂಪದಲ್ಲಿಯೂ ಕಾವ್ಯ ಕಟ್ಟಿಕೊಡುವ ತಾದ್ಯಾತ್ಮವನ್ನು ಮರುಕಟ್ಟಲು ಸಾಧ್ಯವಾಗಿದೆ. ಬಹುಶಃ ದಕ್ಲಕಥಾ ದೇವಿಕಾವ್ಯ ಕೃತಿಯ ಮೂಲಕ ಜನರನ್ನು ಅದರಲ್ಲೂ ‘ಓದುಗ’ರನ್ನು ತಲುಪಿದ್ದಕ್ಕಿಂತ ಕೆ.ಪಿ.ಲಕ್ಷ್ಮಣ್ ನಿರ್ದೇಶನದ ನಾಟಕ ರೂಪದಲ್ಲಿ ‘ನೋಡುಗ’ರನ್ನು ತಲುಪಿದ್ದೇ ಹೆಚ್ಚು.

ಈ ಪ್ರಯೋಗದಲ್ಲಿ ದಕ್ಲಪುರುಷನಿಗೆ ಗಂಗಮ್ಮತಾಯಿ ‘‘ಭಾವೋ ಚಂದಾಗ್ ಮಾಡಿದ್ನಾ, ಇಷ್ಟೆನಾ ಪದಗಿದ ಏನಿಲ್ವಾ’’ ಅಂದಾಗ ದಕ್ಲಪುರುಷ ‘ಪದಗಿದ ಬೇಕಿದ್ದರೆ ಪಂಚಮಪದಕ್ಕೋಗು, ಡಾನ್ಸ್ ಬೇಕಿದ್ದರೆ ಬಾಬಾ ಮಾರ್ಲೆಗೋಗು..’’ ಎನ್ನುವ ಮಾತು ಈ ತಂಡದ ರಂಗ ಪಯಣವನ್ನು ಜೋಡಿಸುವಂತಿದೆ. ಹರಳಯ್ಯನಿಗೆ ತುಪ್ಪದ ದೀಪ ಹಚ್ಚುತೀನಿ ಎನ್ನುವ ಪ್ರಸಂಗದಲ್ಲಿ ‘‘ಬೆಣ್ಣೆಯೆಲ್ಲಾ ತಿರುಪತಿ ತಿಮ್ಮಪ್ಪಗೆ ಹೋಗಿದೆ’’ ಎನ್ನುತ್ತಾ ಈಚಿನ ತಿರುಪತಿ ತಿಮ್ಮಪ್ಪನ ಲಡ್ಡಿನ ವಿವಾದಕ್ಕೂ ತಿವಿಯಲಾಗಿದೆ. ದಕ್ಲಪುರುಷ ಮಕ್ಕಳನ್ನು ಸಂತೈಸಲು ಹೇಳುವ ಬಸವಣ್ಣ, ಗಾಂಧಿ, ಅಂಬೇಡ್ಕರರ ಕಥೆಯನ್ನು ಕಾವ್ಯವಾಗಿ ಹೇಳುವುದು ವರ್ತಮಾನಕ್ಕೆ ಮುಖಾಮುಖಿಯಾಗಿಸುವ ಪರಿಣಾಮಕಾರಿ ತಂತ್ರವಾಗಿದೆ.

ಬಿಂದು ರಕ್ಷಿದಿ (ದಕ್ಲದೇವಿ) ಸಂತೋಷ್ ದಿಂಡ್ಗೂರು (ದಕ್ಲಪುರಷ) ಇಡೀ ನಾಟಕವನ್ನು ಆವರಿಸಿದ್ದಾರೆ. ರಮಿಕ ಚೈತ್ರ, ನರಸಿಂಹರಾಜು ಬಿ.ಕೆ. ಕೆ.ಭರತ್ ಡಿಂಗ್ರಿ ನಾಟಕದ ಜೀವಾಳವಾಗಿ ದುಡಿದಿದ್ದಾರೆ. ಸಹ ನಿರ್ದೇಶನ ಮಾಡಿದ ಸ್ಕಂದ ಘಾಟೆ, ಶ್ರೀಹರ್ಷ ಜಿ.ಎನ್., ಡ್ರಮಟರ್ಜಿ ಮೋಹಿತ್ ವಿ.ಕೆ.ಸಿ., ಇಡೀ ನಾಟಕ ಬೆಳಕಿನ ವಿನ್ಯಾಸದಲ್ಲಿ ಗೆದ್ದಿದೆ. ಈ ಮೂಲಕ ನಾಟಕದ ಆಶಯವನ್ನು ಪರಿಣಾಮಕಾರಿಯಾಗಿಸಿದ ಮಂಜು ನಾರಾಯಣ, ನಾಟಕದ ವಸ್ತ್ರ ವಿನ್ಯಾಸ ಮಾಡಿದ ಶ್ವೇತಾರಾಣಿ ಎಚ್.ಕೆ. ಇಡೀ ನಾಟಕವನ್ನು ಸಂಗೀತದ ಗುಂಗಿನಲ್ಲಿ ಮರಳುವಂತೆ ಮಾಡುವ ಹಿನ್ನೆಲೆ ಸಂಗೀತ ಕೊಟ್ಟ ಪೂರ್ವಿ ಕಲ್ಯಾಣಿ, ಸ್ಕಂದ ಘಾಟೆ ಎಲ್ಲರೂ ನಾಟಕವನ್ನು ಯಶಸ್ವಿಗೊಳಿಸಿದ್ದಾರೆ.

ದಕ್ಲಕಥಾ ದೇವಿಕಾವ್ಯದಲ್ಲಿ, ‘ಮುಟ್ಟಬಾರದ ಕೂಸು ಮುಟ್ಟಿದ ಬಳಿಕ’ ಎನ್ನುವ ಸಾಲು ಬರುತ್ತದೆ. ಹಾಗೆಯೇ ಕೆ.ಪಿ.ಲಕ್ಷ್ಮಣ್ ಮುಟ್ಟಬಾರದ ಕೂಸಾಗಿದ್ದ ದಕ್ಲದೇವಿ ಕಥೆಯನ್ನು ಎಲ್ಲರಿಗೂ ಮುಟ್ಟಿಸುವ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ‘‘ಅಕ್ಷರ ನನ್ನ ಮುಟ್ಟಿತೋ, ನಾನು ಅಕ್ಷರ ಮುಟ್ಟಿದೆನೋ ಅಥವಾ ಅಕ್ಷರ ಮುಟ್ಟಿದ ಬಳಿಕ ನಾನು ಕೆಟ್ಟೆನೋ, ನನ್ನ ಮುಟ್ಟಿದ ಬಳಿಕ ಅಕ್ಷರ ಕೆಟ್ಟಿತೋ! ಓ ಅಕ್ಷರವೇ ಕಡೆಗೂ ನಿನ್ನ ಮುಟ್ಟಿದೆನು’’ ಎನ್ನುವ ಕೆ.ಬಿ. ಸಿದ್ಧಯ್ಯನವರ ಆಶಯದಂತೆ ಕಡೆಗೂ ನಾಟಕ ನೋಡುವ ಮೂಲಕ ಎಲ್ಲರೂ ದಕ್ಲದೇವಿಯನ್ನು ಮುಟ್ಟುವಂತಾಗಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News