ದಾವಣಗೆರೆ: ಶಿಥಿಲಗೊಂಡ ವಿವಿಧ ಸರಕಾರಿ ಶಾಲೆಗಳ ಕೊಠಡಿಗಳು

Update: 2024-05-29 06:45 GMT

ದಾವಣಗೆರೆ : ಪ್ರಸಕ್ತ ಮುಂಗಾರು ಆರಂಭವಾಗಲಿದ್ದು, ಈ ಸಾಲಿನಲ್ಲಿ ಶಾಲೆ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಮಳೆ ಮತ್ತು ಗಾಳಿಯಿಂದಾಗಿ ಶಾಲೆಗಳ ಛಾವಣಿ ಹಾರಿ ಹೋಗುವುದು ಹಾಗೂ ಗೋಡೆಗಳು ಕುಸಿಯುವುದು ಸಾಮಾನ್ಯವಾಗಿದೆ.

ಜಿಲ್ಲೆಯ ವಿವಿಧ ಸರಕಾರಿ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಈ ವರ್ಷವೂ ಆತಂಕದಲ್ಲೇ ವಿದ್ಯಾಭ್ಯಾಸ ಮಾಡುವ ಅನಿವಾರ್ಯತೆ ಎದುರಾಗಿದೆ.

ಗಾಳಿ, ಮಳೆಯಿಂದ ವಿವಿಧ ಶಾಲೆಗಳಲ್ಲಿ ಅವಾಂತರ ನಡೆಯುತ್ತಲೇ ಇವೆ. ಆದರೆ, ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಇನ್ನೂ ಹೆಜ್ಜೆ ಇಟ್ಟಿಲ್ಲ. ಒಂದು ವೇಳೆ ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಪೋಷಕರದ್ದಾಗಿದೆ.

ಜಿಲ್ಲೆಯಲ್ಲಿ 5,205 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 1,291 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 6,496 ಶಾಲೆಗಳಿವೆ. 1,785 ಕೊಠಡಿಗಳು ಶಿಥಿಲಗೊಂಡಿವೆ. ಅದರಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 558 ಕೊಠಡಿಗಳು ಸಣ್ಣಪುಟ್ಟ ಶಿಥಿಲಗೊಂಡರೆ, 959 ಪ್ರೌಢಶಾಲೆಗಳ ಕೊಠಡಿಗಳು ಗಂಭೀರವಾಗಿ, 123 ಕೊಠಡಿಗಳು ಸಣ್ಣಪುಟ್ಟ ಶಿಥಿಲಗೊಂಡಿವೆ.

ತಾಲೂಕುವಾರು ವಿವರ 

ಚನ್ನಗಿರಿ: 910 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿಯಲ್ಲಿದ್ದರೆ, 130 ಸಣ್ಣಪುಟ್ಟ, 208 ಕೊಠಡಿಗಳು ಗಂಭೀರ, 256 ಪ್ರೌಢಶಾಲೆಗಳು ಸುಸ್ಥಿತಿಯಲ್ಲಿದ್ದರೆ, 36 ಸಣ್ಣಪುಟ್ಟ, 41 ಗಂಭೀರ ಸ್ಥಿತಿಯಲ್ಲಿವೆ.

ದಾವಣಗೆರೆ ಉತ್ತರ: 539 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 95 ಸಣ್ಣಪುಟ್ಟ, 147 ಗಂಭೀರ ಸ್ಥಿತಿಯಲ್ಲಿವೆ. 94 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿಯಲ್ಲಿದ್ದರೆ, 7 ಸಣ್ಣಪುಟ್ಟ, 3 ಗಂಭೀರ ಸ್ಥಿತಿಯಲ್ಲಿವೆ.

ದಾವಣಗೆರೆ ದಕ್ಷಿಣ: 436 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿಯಲ್ಲಿದ್ದರೆ, 69 ಸಣ್ಣಪುಟ್ಟ, 180 ಗಂಭೀರ ಸ್ಥಿತಿಯಲ್ಲಿವೆ. 224 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿ, 22 ಸಣ್ಣಪುಟ್ಟ, 37 ಗಂಭೀರ ಸ್ಥಿತಿಯಲ್ಲಿವೆ.

ಹರಿಹರ: 611 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 84 ಸಣ್ಣಪುಟ್ಟ, 109 ಗಂಭೀರ ಸ್ಥಿತಿಯಲ್ಲಿವೆ. 150 ಪ್ರೌಢ ಶಾಲೆಗಳ ಕೊಠಡಿಗಳು ಸುಸ್ಥಿತಿ, 5 ಸಣ್ಣಪುಟ್ಟ, 18 ಗಂಭೀರ ಸ್ಥಿತಿಯಲ್ಲಿವೆ.

ಹೊನ್ನಾಳಿ: 690 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 94 ಸಣ್ಣಪುಟ್ಟ, 125 ಗಂಭೀರ ಸ್ಥಿತಿಯಲ್ಲಿವೆ. 196 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿ, 31 ಸಣ್ಣಪುಟ್ಟ, 43 ಗಂಭೀರ ಸ್ಥಿತಿಯಲ್ಲಿವೆ.

ಜಗಳೂರು: 502 ಪ್ರಾಥಮಿಕ ಶಾಲೆಗಳ ಕೊಠಡಿಗಳು ಸುಸ್ಥಿತಿ, 86 ಸಣ್ಣಪುಟ್ಟ, 190 ಗಂಭೀರ ಸ್ಥಿತಿಯಲ್ಲಿವೆ. 101 ಪ್ರೌಢಶಾಲೆಗಳ ಕೊಠಡಿಗಳು ಸುಸ್ಥಿತಿ, 22 ಸಣ್ಣಪುಟ್ಟ, 5 ಕೊಠಡಿಗಳು ಗಂಭೀರ ಸ್ಥಿತಿಯಲ್ಲಿವೆ.

22 ಶಾಲೆಗಳು ರದ್ದು 

ಜಿಲ್ಲೆಯಲ್ಲಿ ‘0’ ಸಂಖ್ಯೆ ಮಕ್ಕಳು ಹೊಂದಿರುವ 22 ಶಾಲೆಗಳನ್ನು ರದ್ದು ಮಾಡಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ 3, ದಾವಣಗೆರೆ ಉತ್ತರದಲ್ಲಿ 2, ದಾವಣಗೆರೆ ದಕ್ಷಿಣದಲ್ಲಿ 10, ಹರಿಹರ ತಾಲೂಕಿನಲ್ಲಿ 1, ಹೊನ್ನಾಳಿ ತಾಲೂಕಿನಲ್ಲಿ 3 ಹಾಗೂ ಜಗಳೂರು ತಾಲೂಕಿನಲ್ಲಿ 3 ಶಾಲೆಗಳನ್ನು ರದ್ದು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಪ್ರಕಾಶ್ ಎಚ್. ಎನ್.

contributor

Similar News