ಅದಾನಿಗಾಗಿ ದೇಶದ ರಕ್ಷಣಾ ನೀತಿಯನ್ನೂ ಬದಲಾಯಿಸಿತೇ ಬಿಜೆಪಿ!?
ತನ್ನ ವಿರೋಧಿಗಳನ್ನು ದೇಶಭಕ್ತಿಯ ಹೆಸರಿನಲ್ಲಿ, ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶದ್ರೋಹಿಗಳು ಎಂದು ಕರೆಯುವ ಬಿಜೆಪಿ, ದೇಶದ್ರೋಹ ಪ್ರಕರಣಗಳನ್ನು ದಾಖಲಿಸುತ್ತದೆ. ರಾಹುಲ್ ಗಾಂಧಿಯನ್ನು ರಾಷ್ಟ್ರವಿರೋಧಿ ಎಂದೂ ಕರೆಯುತ್ತದೆ. ಆದರೆ ಅದೇ ಮೋದಿ ಸರಕಾರ ಉದ್ಯಮಿ ಮಿತ್ರನಿಗಾಗಿ ರಾಷ್ಟ್ರೀಯ ಭದ್ರತೆ ವಿಚಾರವನ್ನೇ ಹಗುರವಾಗಿ ತೆಗೆದುಕೊಂಡಿದೆಯೆ?;

ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ ವರದಿ ಪ್ರಕಾರ, ಗೌತಮ್ ಅದಾನಿ ಗುಜರಾತ್‌ನ ಖಾವ್ಡಾದಲ್ಲಿ ಭಾರತ-ಪಾಕಿಸ್ತಾನ ಗಡಿಯಿಂದ ಒಂದು ಕಿಲೋಮೀಟರ್ ಒಳಗೆ ಸೌರ ಫಲಕಗಳು ಮತ್ತು ಪವನ ಟರ್ಬೈನ್‌ಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಪ್ರಾರಂಭಿಸಲು ಮೋದಿ ಸರಕಾರ ಅನುವು ಮಾಡಿಕೊಟ್ಟಿದೆ.
ಬಿಜೆಪಿ ನೇತೃತ್ವದ ಸರಕಾರ ಗೌತಮ್ ಅದಾನಿಗೆ ಅನುಕೂಲವಾಗುವಂತೆ ತನ್ನ ರಕ್ಷಣಾ ನೀತಿಯನ್ನು ಬದಲಾಯಿಸಿದೆಯೇ ಎಂಬ ಅನುಮಾನ ಬರುವಂತಾಗಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಅದು ಭದ್ರತಾ ಶಿಷ್ಟಾಚಾರವನ್ನು ಬದಲಾಯಿಸಿದಂತೆ ತೋರುತ್ತದೆ ಮತ್ತು ಇದರಿಂದ ಗೌತಮ್ ಅದಾನಿಗೆ ಅನುಕೂಲ ಮಾಡಿಕೊಡುವುದು ಉದ್ದೇಶವಾದಂತಿದೆ.
ಅತ್ಯಂತ ಮುಖ್ಯವಾದ ವಿಷಯವೆಂದರೆ, 10 ಕಿ.ಮೀ.ಗಳವರೆಗೆ ಮಾಡಲಾಗದ ನಿರ್ಮಾಣ ಭಾರತ-ಪಾಕಿಸ್ತಾನ ಗಡಿಯಿಂದ ಒಂದು ಕಿ.ಮೀ. ಒಳಗೇ ಆಗಿದೆ.
ಇದೆಲ್ಲವೂ ಗೌತಮ್ ಅದಾನಿಯ ಅನುಕೂಲಕ್ಕಾಗಿ ಎಂಬ ಪ್ರತಿಪಾದನೆಯನ್ನು ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ವರದಿಯಲ್ಲಿ ಮಾಡಿದೆ.
ಅದು ಹೇಳುತ್ತಿರುವುದು ಸರಿಯಾಗಿದ್ದರೆ, ಈ ವಿಚಾರ ದೇಶದ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.
ತನ್ನ ವಿರೋಧಿಗಳನ್ನು ದೇಶಭಕ್ತಿಯ ಹೆಸರಿನಲ್ಲಿ, ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶದ್ರೋಹಿಗಳು ಎಂದು ಕರೆಯುವ ಬಿಜೆಪಿ, ದೇಶದ್ರೋಹ ಪ್ರಕರಣಗಳನ್ನು ದಾಖಲಿಸುತ್ತದೆ. ರಾಹುಲ್ ಗಾಂಧಿಯನ್ನು ರಾಷ್ಟ್ರವಿರೋಧಿ ಎಂದೂ ಕರೆಯುತ್ತದೆ. ಆದರೆ ಅದೇ ಮೋದಿ ಸರಕಾರ ಉದ್ಯಮಿ ಮಿತ್ರನಿಗಾಗಿ ರಾಷ್ಟ್ರೀಯ ಭದ್ರತೆ ವಿಚಾರವನ್ನೇ ಹಗುರವಾಗಿ ತೆಗೆದುಕೊಂಡಿದೆಯೆ?
ಗಾರ್ಡಿಯನ್‌ನ ಈ ಸುದ್ದಿಯನ್ನು ನಂಬುವುದಾದರೆ ಇದು ಸ್ಫೋಟಕ ವಿಚಾರ. ಈಗಾಗಲೇ ಈ ಬಗ್ಗೆ ಕಾಂಗ್ರೆಸ್‌ನ ಪ್ರತಿಕ್ರಿಯೆಯೂ ಬಂದಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಈ ಬಗ್ಗೆ ತಮ್ಮ ಹೇಳಿಕೆ ನೀಡಿದ್ದಾರೆ.
ಗಾರ್ಡಿಯನ್ ಪ್ರಕಟಿಸಿರುವ ವರದಿ ಏನು ಹಾಗಾದರೆ?
ಭಾರತೀಯ ಪತ್ರಕರ್ತ ರವಿ ನಾಯರ್ ಮತ್ತು ಹನ್ನಾ ಎಲಿಸ್ ಪೀಟರ್ಸನ್ ಅವರ ವರದಿ, ಉದ್ಯಮಿ ಮಿತ್ರನ ಎನರ್ಜಿ ಪಾರ್ಕ್‌ಗಾಗಿ ಗಡಿ ಭದ್ರತಾ ನಿಯಮಗಳನ್ನು, ರಕ್ಷಣಾ ಶಿಷ್ಟಾಚಾರಗಳನ್ನು ಮೋದಿ ಸರಕಾರ ಸಡಿಲಗೊಳಿಸಿದೆ ಎಂದು ಹೇಳಿದೆ.
ವರದಿ ಪ್ರಕಾರ, ಗೌತಮ್ ಅದಾನಿ ಗುಜರಾತ್‌ನ ಖಾವ್ಡಾದಲ್ಲಿ ಭಾರತ-ಪಾಕಿಸ್ತಾನ ಗಡಿಯಿಂದ ಒಂದು ಕಿ.ಮೀ. ಒಳಗೆ ಸೌರ ಫಲಕಗಳು ಮತ್ತು ಪವನ ಟರ್ಬೈನ್‌ಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಪ್ರಾರಂಭಿಸಲು ಮೋದಿ ಸರಕಾರ ಅನುವು ಮಾಡಿಕೊಟ್ಟಿದೆ.
ಶಿಷ್ಟಾಚಾರಗಳಲ್ಲಿನ ಬದಲಾವಣೆಯು ಚೀನಾ, ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್‌ನಂತಹ ಇತರ ನೆರೆಯ ರಾಷ್ಟ್ರಗಳ ಗಡಿಗಳಲ್ಲಿ ಇದೇ ರೀತಿಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಗಾರ್ಡಿಯನ್ ವರದಿ ತಿಳಿಸಿದೆ.
ನೀತಿಯಲ್ಲಿನ ಉದ್ದೇಶಿತ ಬದಲಾವಣೆ ನಿಜವಾಗಿದ್ದರೆ, ಹಿಂದೆ ಸಂಭವಿಸಿದಂತೆ ಪಾಕಿಸ್ತಾನದಿಂದ ಭದ್ರತಾ ಬೆದರಿಕೆ ಅಥವಾ ಅತಿಕ್ರಮಣವನ್ನು ಎದುರಿಸಿದರೆ ಭಾರತ ಆ ಪ್ರದೇಶದಲ್ಲಿ ತನ್ನ ರಕ್ಷಣಾ ಪಡೆಗಳನ್ನು ಹೇಗೆ ಸಜ್ಜುಗೊಳಿಸಲು ಯೋಜಿಸಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕಛ್‌ನಲ್ಲಿರುವ 445 ಚದರ ಕಿ.ಮೀ. ಭೂಮಿಯನ್ನು ಗುಜರಾತ್ ಸರಕಾರ ಅದಾನಿಯ ಕಂಪೆನಿಗೆ ಗುತ್ತಿಗೆ ನೀಡಿತು.
ಅದಾನಿಯ ಮಹತ್ವಾಕಾಂಕ್ಷೆಯ ಯೋಜನೆಗೆ ದಾರಿ ಸುಗಮವಾಗಿಸಲು ರಕ್ಷಣಾ ಸಚಿವಾಲಯದ ಭದ್ರತಾ ಶಿಷ್ಟಾಚಾರಗಳಲ್ಲಿ ಮಾಡಲಾಗಿರುವ ತಿದ್ದುಪಡಿ ಕುರಿತ ದಾಖಲೆಗಳು ತನಗೆ ಸಿಕ್ಕಿರುವುದಾಗಿ ‘ದಿ ಗಾರ್ಡಿಯನ್’ ಹೇಳಿಕೊಂಡಿದೆ.
ಪಾಕಿಸ್ತಾನದ ಗಡಿಯಿಂದ 10 ಕಿ.ಮೀ. ದೂರದವರೆಗೆ, ಅಸ್ತಿತ್ವದಲ್ಲಿರುವ ಹಳ್ಳಿಗಳು ಮತ್ತು ರಸ್ತೆಗಳನ್ನು ಹೊರತುಪಡಿಸಿ, ಯಾವುದೇ ಪ್ರಮುಖ ನಿರ್ಮಾಣಗಳಿಗೆ ಅವಕಾಶವಿರಲಿಲ್ಲ. ಆದರೆ ಈಗ ಗಡಿಯಿಂದ ಒಂದೇ ಕಿ. ಮೀ. ಒಳಗೇ ಅದಾನಿಗಾಗಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಎರಡೂ ದೇಶಗಳು ಗುಜರಾತ್‌ನಿಂದ ಜಮ್ಮು ಮತ್ತು ಕಾಶ್ಮೀರದವರೆಗೆ 3,323 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ.
‘ದಿ ಗಾರ್ಡಿಯನ್’ ಪ್ರಕಾರ, ರಣ್ ಆಫ್ ಕಛ್‌ನಲ್ಲಿ ಭೂಮಿಯನ್ನು ಸೌರ ಮತ್ತು ಪವನ ಶಕ್ತಿ ಎರಡಕ್ಕೂ ಲಭ್ಯವಾಗುವಂತೆ ಪ್ರೋಟೋಕಾಲ್‌ಗಳನ್ನು ಸಡಿಲಿಸಲು ಬಿಜೆಪಿ ಉನ್ನತ ಮಟ್ಟದಲ್ಲಿ ಲಾಬಿ ಮಾಡಿದೆ ಎಂದು ದಾಖಲೆಗಳು ತೋರಿಸುತ್ತಿವೆ.
ಪತ್ರಿಕೆಯ ಪ್ರಕಾರ, ಈ ವಿಷಯವಾಗಿ ಗುಜರಾತ್ ಸರಕಾರ 2023ರ ಎಪ್ರಿಲ್‌ನಲ್ಲಿ ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದಿದೆ.
2023ರ ಎಪ್ರಿಲ್ 21ರಂದು ದಿಲ್ಲಿಯಲ್ಲಿ ಸಭೆ ನಡೆಸಲಾಯಿತು. ಅದರಲ್ಲಿ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು, ಗುಜರಾತ್ ಸರಕಾರ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಪತ್ರಿಕೆ ಹೇಳಿದೆ.
ಗಡಿಯಲ್ಲಿ ಟ್ಯಾಂಕ್ ಸಜ್ಜುಗೊಳಿಸುವಿಕೆ ಮತ್ತು ಕಣ್ಗಾವಲಿನ ಮೇಲೆ ಸೌರ ಫಲಕಗಳ ಪರಿಣಾಮಗಳ ಬಗ್ಗೆ ಸೇನೆ ಆತಂಕ ವ್ಯಕ್ತಪಡಿಸಿತೆನ್ನಲಾಗಿದೆ.
ಆಗ, ಶತ್ರು ಟ್ಯಾಂಕ್ ಚಲನೆಗಳಿಂದ ಬರುವ ಯಾವುದೇ ಬೆದರಿಕೆಗಳನ್ನು ತಗ್ಗಿಸುವಲ್ಲಿ ಸೌರ ಫಲಕಗಳು ಸಾಕು ಎಂದು ಸೇನೆಗೆ ಭರವಸೆ ನೀಡಲಾಯಿತು ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.
ಸೌರ ಫಲಕಗಳ ಗಾತ್ರವನ್ನು ಬದಲಾಯಿಸುವ ಸೇನಾ ಅಧಿಕಾರಿಗಳ ಬೇಡಿಕೆಯನ್ನು ಡೆವಲಪರ್‌ಗಳು ತಿರಸ್ಕರಿಸಿದ್ದಾರೆ ಮತ್ತು ಆರ್ಥಿಕವಾಗಿ ಅದು ಲಾಭದಾಯಕವಲ್ಲ ಎಂದು ಹೇಳಿದ್ದಾರೆ ಎಂಬುದು ವರದಿಯಲ್ಲಿದೆ.
ಗಾರ್ಡಿಯನ್ ವರದಿ, ಮಿಲಿಟರಿ ಅಧಿಕಾರಿಗಳು ಸ್ಥಾವರದ ಗಾತ್ರದ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಸೌರ ಫಲಕಗಳ ಗಾತ್ರವನ್ನು ಬದಲಾಯಿಸಬೇಕೆಂಬ ಮಿಲಿಟರಿ ಅಧಿಕಾರಿಗಳ ಬೇಡಿಕೆಯನ್ನು ಡೆವಲಪರ್‌ಗಳು ತಿರಸ್ಕರಿಸಿದ್ದರು. ಆದರೆ ಅದರ ನಂತರ ಈ ಎಲ್ಲಾ ಅಧಿಕಾರಿಗಳು ಪರಸ್ಪರ ಒಪ್ಪಂದಕ್ಕೆ ಬಂದಿದ್ದರು ಎಂದು ಹೇಳುತ್ತದೆ.
ಸಭೆಯ ಕೊನೆಯಲ್ಲಿ, ನವೀಕರಿಸಬಹುದಾದ ಇಂಧನಕ್ಕಾಗಿ ಸೌರ ಫಲಕಗಳು ಮತ್ತು ಪವನ ಟರ್ಬೈನ್ ಅನ್ನು ಪಾಕಿಸ್ತಾನ ಗಡಿಗೆ 1 ಕಿ.ಮೀ. ಹತ್ತಿರ ನಿರ್ಮಿಸಲು ರಕ್ಷಣಾ ಸಚಿವಾಲಯ ಕೂಡ ಒಪ್ಪಿಕೊಂಡಿತು ಎಂದು ಗಾರ್ಡಿಯನ್ ಬರೆದಿದೆ.
ಅದರ ವರದಿಯ ಪ್ರಕಾರ, ಮೋದಿ ಸರಕಾರ 2023ರ ಮೇ 8ರಂದು ಎಲ್ಲಾ ಸಚಿವಾಲಯಗಳಿಗೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಮಾತ್ರವಲ್ಲದೆ ಬಾಂಗ್ಲಾದೇಶ, ಚೀನಾ, ಮ್ಯಾನ್ಮಾರ್ ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಭೂಮಿಯಲ್ಲಿಯೂ ಅನ್ವಯಿಸುವ ಮೂಲಸೌಕರ್ಯ ಅಭಿವೃದ್ಧಿಯ ಸುತ್ತಲಿನ ಮಾರ್ಗಸೂಚಿಗಳ ಸಡಿಲಿಕೆ ಕುರಿತ ಅಧಿಸೂಚನೆಯನ್ನು ಹೊರಡಿಸಿತು.
ಗುಜರಾತ್ ಸರಕಾರ ಈ ಹಿಂದೆ ಖಾವ್ಡಾದಲ್ಲಿ 230 ಚದರ ಕಿ.ಮೀ. ಭೂಮಿಯನ್ನು ಸರಕಾರಿ ಸ್ವಾಮ್ಯದ ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಗುತ್ತಿಗೆ ನೀಡಿತ್ತು ಎಂದು ಗಾರ್ಡಿಯನ್ ವರದಿ ಮಾಡಿದೆ.
2023ರ ಮೇನಲ್ಲಿ ಅದನ್ನು ಗುಜರಾತ್ ಸರಕಾರಕ್ಕೆ ಹಿಂದಿರುಗಿಸಲು ಎಸ್‌ಇಸಿಐ ಅನ್ನು ಕೇಳಲಾಯಿತು. 2023ರ ಜುಲೈ 17ರಂದು ಅದೂ ಆಯಿತು.
ಈಗಾಗಲೇ ಉಲ್ಲೇಖಿಸಿದಂತೆ, ಪಾಕಿಸ್ತಾನಕ್ಕೆ ಹತ್ತಿರವಿರುವ 230 ಚದರ ಕಿ.ಮೀ. ಭೂಮಿಯನ್ನು ಸರಕಾರಿ ಸ್ವಾಮ್ಯದ ಉದ್ಯಮವಾದ ಭಾರತೀಯ ಸೌರಶಕ್ತಿ ನಿಗಮಕ್ಕೆ ಹಂಚಿಕೆ ಮಾಡಲಾಗಿತ್ತು. ಆದರೆ ಆಗಸ್ಟ್ ವೇಳೆಗೆ, ರಕ್ಷಣಾ ಸಚಿವಾಲಯ ಗಡಿ ನಿಯಮಗಳನ್ನು ಸಡಿಲಿಸಲು ಒಪ್ಪಿಕೊಂಡ ನಂತರ ಅದು ಅದಾನಿ ಗ್ರೂಪ್ ಕೈಯಲ್ಲಿತ್ತು.
ವರದಿ ಹೇಳುವಂತೆ, ಮೇ ಆರಂಭದಲ್ಲಿ ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ SECI ಭೂಮಿ ವಶಪಡಿಸಿಕೊಳ್ಳುವ ಅಭಿಪ್ರಾಯಕ್ಕೆ ಬರಲಾಯಿತು ಎಂದು ಗೌಪ್ಯ ಸಂವಹನ ಹೇಳುತ್ತದೆ.
ಗಡಿ ಪ್ರೋಟೋಕಾಲ್‌ಗಳಿಗೆ ಪ್ರಯೋಜನಕಾರಿ ಬದಲಾವಣೆಗಳ ಬಗ್ಗೆ ತನಗೆ ತಿಳಿಸಲಾಗಿಲ್ಲ ಮತ್ತು ಅದನ್ನು ನಿರ್ವಹಿಸುವುದು ವಾಣಿಜ್ಯಿಕವಾಗಿ ಆಗದು ಎಂದು ಸ್ಪಷ್ಟವಾಗಿ ಹೇಳುವ ಮೂಲಕ SECI 2023ರ ಜುಲೈ 17ರಂದು ಗುಜರಾತ್ ಸರಕಾರಕ್ಕೆ ಭೂಮಿಯನ್ನು ಹಿಂದಿರುಗಿಸಿತು.
ಈ ಎಲ್ಲ ವಿಚಾರಗಳು ಅದಾನಿ ಗ್ರೂಪ್‌ಗೆ ತಿಳಿಯುತ್ತಿದ್ದವು. SಇಅI ಭೂಮಿಯನ್ನು ಬಿಟ್ಟುಕೊಡಲು ಒಪ್ಪಿಕೊಂಡದ್ದಕ್ಕಿಂತ ಎರಡು ವಾರಗಳ ಮೊದಲು, ಅದಾನಿ ಗ್ರೂಪ್ ಗುಜರಾತ್ ಅಧಿಕಾರಿಗಳಿಗೆ ಪರಿಷ್ಕೃತ ಗಡಿ ಶಿಷ್ಟಾಚಾರಗಳ ಹಿನ್ನೆಲೆಯಲ್ಲಿ ಅದನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿ ಪತ್ರ ಬರೆದಿತ್ತು. ಈ ವಿಚಾರ ಗಾರ್ಡಿಯನ್ ಗಮನಕ್ಕೆ ಬಂದಿರುವ ಪತ್ರದಲ್ಲಿ ಇದೆ ಎನ್ನುತ್ತದೆ ವರದಿ.
ಬಿಜೆಪಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸರಕಾರ ಆಗಸ್ಟ್‌ನಲ್ಲಿ ಭೂಮಿ ಮರುಹಂಚಿಕೆ ಮಾಡಿತು.
ಹಲವಾರು ರಾಜ್ಯ ಸ್ವಾಮ್ಯದ ಸಂಸ್ಥೆಗಳು ಬಿಡ್‌ಗಳನ್ನು ಸಲ್ಲಿಸಿದವು. ಆದರೆ ಅಂತಿಮವಾಗಿ ಅದಾನಿ ಗ್ರೂಪ್‌ಗೆ ಈಗಾಗಲೇ ಗುತ್ತಿಗೆ ಪಡೆದಿದ್ದ 190 ಚದರ ಕಿ.ಮೀ. ಜೊತೆಗೆ ಇನ್ನೂ 255 ಚದರ ಕಿ.ಮೀ. ಭೂಮಿಯನ್ನು ನೀಡಲಾಯಿತು.
ಈ ನಿರ್ಧಾರ ಅದಾನಿ ಗ್ರೂಪ್‌ಗೆ ಹೆಚ್ಚು ಲಾಭದಾಯಕವಾಗಿತ್ತು ಎಂದು ವರದಿ ಹೇಳಿದೆ.
ಖಾವ್ಡಾ ಈಗ 445 ಚದರ ಕಿ.ಮೀ. ಅನ್ನು ಆಕ್ರಮಿಸಿಕೊಂಡಿದೆ.
ಈ ಎನರ್ಜಿ ಪಾರ್ಕ್ 30GW ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ನಾವು ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದ ಕಾನೂನುಗಳು ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ ಮತ್ತು ಸಂಬಂಧಿತ ಸಮರ್ಥ ಅಧಿಕಾರಿಗಳಿಂದ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆದುಕೊಂಡಿದ್ದೇವೆ ಎಂದು ಅದಾನಿ ಗ್ರೂಪ್ ಹೇಳಿಕೊಂಡಿದೆ.
ವಿರೋಧ ಪಕ್ಷದ ನಾಯಕರು ಮೋದಿ ಸರಕಾರ ಮತ್ತು ಬಿಜೆಪಿ ರಾಜ್ಯ ಸರಕಾರಗಳು ಭ್ರಷ್ಟ ಒಪ್ಪಂದಗಳನ್ನು ಮಾಡಿಕೊಂಡಿವೆ ಮತ್ತು ಅದಾನಿ ಗ್ರೂಪ್‌ಗೆ ಒಲವು ತೋರುತ್ತಿವೆ ಎಂದು ಪದೇ ಪದೇ ಆರೋಪಿಸಿದ್ದಾರೆ.
ನವೆಂಬರ್‌ನಲ್ಲಿ ಅಮೆರಿಕದ ಆರೋಪಪಟ್ಟಿಯಲ್ಲಿ ಅದಾನಿ ಮತ್ತು ಅವರ ಕಾರ್ಯನಿರ್ವಾಹಕರು 2020ರಿಂದ 2024ರ ಅವಧಿಯಲ್ಲಿ ಲಾಭದಾಯಕ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಪಡೆಯುವ ಪ್ರಯತ್ನದಲ್ಲಿ ಭಾರತೀಯ ಸರಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಲಂಚ ನೀಡುವ ಯೋಜನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಯಿತು.
ಅಮೆರಿಕದ ತನಿಖಾಧಿಕಾರಿಗಳು ಉಲ್ಲೇಖಿಸಿರುವ ಈ ಒಪ್ಪಂದಗಳಲ್ಲಿ ಹೆಚ್ಚಿನವು ಅದಾನಿಯ ಖಾವ್ಡಾ ಸ್ಥಾವರದಲ್ಲಿ ಉತ್ಪಾದಿಸಲ್ಪಡುವ ಮತ್ತು ರಾಜ್ಯ ಸರಕಾರಗಳಿಗೆ ಹೆಚ್ಚಿನ ಬೆಲೆಗೆ ಮಾರಾಟವಾಗುವ ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿವೆ ಎನ್ನಲಾಗಿದೆ.
ಆದರೆ ಅದಾನಿ ಗ್ರೂಪ್ ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ನಿರಾಕರಿಸಿದೆ.
ಆಂಧ್ರಪ್ರದೇಶ ಸರಕಾರ ಅದಾನಿಯ ಖಾವ್ಡಾ ಸ್ಥಾವರದಿಂದ 7GW ಸೌರಶಕ್ತಿಯನ್ನು ಖರೀದಿಸುವ ಅತಿದೊಡ್ಡ ಒಪ್ಪಂದಗಳಲ್ಲಿ ಒಂದನ್ನು ರದ್ದುಗೊಳಿಸಲು ನೋಡುತ್ತಿದೆ.
ಆದರೆ ಯೋಜನೆಯಲ್ಲಿ ಪಾಲನ್ನು ಪಡೆಯಲು 444 ಮಿಲಿಯನ್ ಡಾಲರ್ ಪಾವತಿಸಿದ ಫ್ರಾನ್ಸ್‌ನ ಟೋಟಲ್ ಎನರ್ಜಿಸ್, ಮುಂದಿನ ಎಲ್ಲಾ ಹೂಡಿಕೆ ಸ್ಥಗಿತಗೊಳಿಸುವುದಾಗಿ ಹೇಳಿದೆ.
ಅದಾನಿ ಗ್ರೂಪ್ ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ನಿರಾಕರಿಸಿದೆ.
ಅದಾನಿ ಗ್ರೂಪ್‌ಗೆ ಪಾಕಿಸ್ತಾನ ಗಡಿ ಬಳಿ ಭೂಮಿ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
ಇದನ್ನು ಅವಿವೇಕಿತನ ಎಂದು ನಿವೃತ್ತ ಸೇನಾ ಕರ್ನಲ್ ಮತ್ತು ರಕ್ಷಣಾ ವಿಶ್ಲೇಷಕ ಅಜಯ್ ಶುಕ್ಲಾ ಹೇಳುತ್ತಾರೆ.
ಅವರು ಭಾರತ-ಪಾಕ್ ಗಡಿಗೆ ಹತ್ತಿರದಲ್ಲಿ ಹೈಬ್ರೀಡ್ ಪವನ ಮತ್ತು ಸೌರ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪಿಸುವುದು ಅವಿವೇಕಿತನ ಎಂದು ಅವರು ಹೇಳಿದ್ದಾರೆ.
ಗಡಿ ರಕ್ಷಣಾ ಮಾನದಂಡಗಳು ಮತ್ತು ಪ್ರೋಟೋಕಾಲ್‌ಗಳನ್ನು ಬದಲಾಯಿಸುವ ಮೂಲಕ ಮತ್ತು ಕಡಿಮೆ ಬೆಲೆಗೆ ವಾಣಿಜ್ಯೋದ್ದೇಶಕ್ಕೆ ಭೂಮಿಕೊಡುವ ಮೂಲಕ, ಖಾಸಗಿ ವಾಣಿಜ್ಯ ಲಾಭಕ್ಕಾಗಿ ಹೆಚ್ಚುವರಿ ರಕ್ಷಣಾ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಂತಾಗಿದೆ ಎಂದಿದ್ದಾರೆ.
ಅಂದರೆ, ಎಲ್ಲೋ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಾರೆ.
ಅಲ್ಲದೆ ಹೆಸರು ಬಹಿರಂಗಪಡಿಸಲು ಇಚ್ಛಿಸದೆ ಈ ಇಡೀ ಯೋಜನೆಗೆ ಇಬ್ಬರು ಸೇನಾಧಿಕಾರಿಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಾರ್ಡಿಯನ್ ಉಲ್ಲೇಖಿಸಿರುವಂತೆ, ಹಿರಿಯ ನಿವೃತ್ತ ಅಧಿಕಾರಿಯೊಬ್ಬರ ಪ್ರಕಾರ, ಈ ನೀತಿ ಬದಲಾವಣೆ ಸೈನ್ಯದಲ್ಲಿ ಆಶ್ಚರ್ಯ ಮತ್ತು ಕಳವಳವನ್ನು ಉಂಟುಮಾಡಿದೆ.
ಈ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿರುವ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಈ ನಿರ್ಧಾರದ ಬಗ್ಗೆ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ ಎಂದು ಸೈನ್ಯಕ್ಕೆ ಮಾಹಿತಿ ಸಿಕ್ಕಿದೆ.
ಪಾಕಿಸ್ತಾನದಿಂದ ಯಾವುದೇ ಭದ್ರತಾ ಬೆದರಿಕೆ ಅಥವಾ ಒಳನುಸುಳುವಿಕೆ ಸಂದರ್ಭದಲ್ಲಿ ಸೈನ್ಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಶ್ನೆಯನ್ನು ಆ ಇಬ್ಬರೂ ಸೇನಾಧಿಕಾರಿಗಳು ಎತ್ತಿದ್ದಾರೆ.
ಅಂದರೆ, ಗಡಿಯಿಂದ ಒಂದು ಕಿ.ಮೀ. ಮೊದಲು ಕೈಗಾರಿಕಾ ಸ್ಥಾವರ, ನವೀಕರಿಸಬಹುದಾದ ಇಂಧನ ಸ್ಥಾವರ ಸ್ಥಾಪಿಸಿದಾಗ, ಭಾರತೀಯ ಸೇನೆಯ ನೈತಿಕತೆಯ ಮೇಲೆ ಪರಿಣಾಮ ಬೀರುವುದು ಸಹಜ.
ಇದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದಾರೆ.
‘‘ದೇಶದ ಎಲ್ಲಾ ಸಂಪನ್ಮೂಲಗಳನ್ನು ಪ್ರಧಾನಿಯವರ ಸ್ನೇಹಿತರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಗಡಿ ಭದ್ರತಾ ನಿಯಮಗಳನ್ನು ಸಹ ಬದಲಾಯಿಸುವ ಹಂತವನ್ನು ತಲುಪಿದೆಯೇ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಈ ವರದಿಯ ಪ್ರಕಾರ, ಅದಾನಿಯ ಎನರ್ಜಿ ಪಾರ್ಕ್‌ಗಾಗಿ ಭಾರತದ ಗಡಿ ಭದ್ರತಾ ನಿಯಮಗಳನ್ನು ಬದಲಾಯಿಸಲಾಗಿದೆ.
ಗಡಿ ಭದ್ರತೆ ಮತ್ತು ಕಣ್ಗಾವಲು ಕಾರ್ಯಾಚರಣೆಗಳಲ್ಲಿನ ಅಡೆತಡೆಗಳ ಬಗ್ಗೆ ಹಿರಿಯ ಸೇನಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ,
ಆದರೆ ಅವರ ಮಾತುಗಳು ಕೇಳಿಬಂದಿಲ್ಲ. ಪ್ರಧಾನಿಯವರ ಸ್ನೇಹಿತನಿಗೆ ಅಗ್ಗದ ಭೂಮಿ ಮತ್ತು ವ್ಯಾಪಾರ ಪ್ರಯೋಜನಗಳನ್ನು ನೀಡುವುದು ಸೈನ್ಯದ ಭದ್ರತಾ ಜವಾಬ್ದಾರಿಗಳನ್ನು ಕಷ್ಟಕರ ಮತ್ತು ಸೂಕ್ಷ್ಮವಾಗಿಸಿದೆ ಎನ್ನಲಾಗುತ್ತಿದೆ.
ಒಬ್ಬ ವ್ಯಕ್ತಿಯ ವ್ಯವಹಾರ ಹಿತಾಸಕ್ತಿ ದೇಶದ ಭದ್ರತೆಯ ಪ್ರಶ್ನೆಗಿಂತ ದೊಡ್ಡದೇ?
ಗಾರ್ಡಿಯನ್ ನೀಡಿದ ಮಾಹಿತಿ ಸರಿಯಾಗಿದ್ದರೆ, ಅದು ಭಾರತದ ರಾಷ್ಟ್ರೀಯ ಭದ್ರತೆಗೆ ಬಹಳ ದೂರಗಾಮಿ ಮತ್ತು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ.
ಗಾರ್ಡಿಯನ್ ಈ ವಿಷಯದ ಬಗ್ಗೆ ಅದಾನಿ ಗ್ರೂಪ್ ಜೊತೆಯೂ ಮಾತನಾಡಿದೆ.
ಗೌತಮ್ ಅದಾನಿ ಗ್ರೂಪ್ ಇದರ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಸಹ ಪರಿಗಣಿಸಬೇಕು.
ನಾವು ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲಾ ನಿಯಮಗಳು ಮತ್ತು ಕಾನೂನುಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿದ್ದೇವೆ ಮತ್ತು ಸಂಬಂಧಪಟ್ಟ ಪ್ರಾಧಿಕಾರದಿಂದ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದಿದ್ದೇವೆ ಎಂದು ಅದಾನಿಯ ವಕ್ತಾರರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ವಿಚಾರ ಗಮನಿಸಬೇಕು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಮಾಧ್ಯಮಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾಗ, ಮಾಧ್ಯಮಗಳು ಕಾಂಗ್ರೆಸ್ ಸರಕಾರವನ್ನು ಹೇಗೆ ವಿಚಾರಣೆಗೆ ಒಳಪಡಿಸುತ್ತಿದ್ದವು ಎಂದು ಯಾರಿಗೆ ಆದರೂ ಅರ್ಥವಾಗುತ್ತದೆ.
ಆದರೆ ಈಗ ಇಂಥದೊಂದು ವರದಿ ಬಂದಿರುವಾಗ, ಇಲ್ಲಿಯವರೆಗೆ ಬಿಜೆಪಿ ಇದರ ಬಗ್ಗೆ ಏನನ್ನೂ ಹೇಳಿಲ್ಲ.
ಮಾಧ್ಯಮಗಳಂತೂ ಪ್ರಶ್ನಿಸುವುದೇ ಇಲ್ಲ.