ಜಾತಿ ಗಣತಿ ಮತ್ತು ಅಪ್ರಬುದ್ಧ ಊಹಾಪೋಹದ ಚರ್ಚೆಗಳು...
ಒಂದು ವಿಚಾರದ ಬಗ್ಗೆ ಸ್ಪಷ್ಟವಾದ ಮಾಹಿತಿಯೇ ಇಲ್ಲದೆ ಅದು ಸರಿಯಿಲ್ಲ ಎನ್ನುವುದಾಗಲಿ ಅಥವಾ ಅದು ಸೂಕ್ತವಾಗಿದೆ ಎನ್ನುವುದಾಗಲಿ ಎರಡೂ ತಪ್ಪಾಗುತ್ತದೆ. ಮೊದಲು ಆ ವರದಿಯಲ್ಲಿ ಏನಿದೆ ಎಂಬುದನ್ನು ಸರಕಾರಕ್ಕೆ ಸಲ್ಲಿಸಬೇಕು. ಅದನ್ನು ಸರಕಾರ ಜನರ ಮುಂದೆ ಇಡಬೇಕು. ಆನಂತರ ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಬೇಕು. ಆ ಚರ್ಚೆಯ ನಂತರ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಮಾಡಿ ಅದರ ಅನುಷ್ಠಾನದ ಬಗ್ಗೆ ಸರಕಾರಗಳು ತೀರ್ಮಾನ ಮಾಡಬೇಕು. ಆದರೆ ಕೂಸೇ ಹುಟ್ಟದೆ ಕುಲಾಯಿ ಹೊಲಿಯುವ ಕೆಲವು ಜಾತಿ ಮುಖಂಡರಿಗೆ ಏನು ಹೇಳಬೇಕು?.
ಈಗ ಎಲ್ಲಿ ನೋಡಿದರೂ ಜಾತಿ ಗಣತಿ ಹಾಗೂ ಕಾಂತರಾಜ್ ನೀಡಿರುವ ವರದಿಯ ಬಗ್ಗೆಯೇ ಚರ್ಚೆ! ಕೋಟಿ ಕೋಟಿ ರೂ. ಖರ್ಚು ಮಾಡಿ ಹಿರಿಯ ವಕೀಲರಾದ ಎಚ್.ಕಾಂತರಾಜ್ ಅವರ ನೇತೃತ್ವದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಕರ್ನಾಟಕದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲು ಸೂಚನೆ ನೀಡಿ ಇದೇ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರವೇ(೨೦೧೫ರಲ್ಲಿ) ಆದೇಶಿಸಿತ್ತು. ಆದರೆ ಆನಂತರ ಬಂದ ಸಮ್ಮಿಶ್ರ ಸರಕಾರವಾಗಲಿ, ಬಿಜೆಪಿ ಸರಕಾರವಾಗಲಿ ಈ ಗಣತಿಯ ಅಥವಾ ಸಮೀಕ್ಷೆಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲೇ ಇಲ್ಲ. ಇದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದು ಅಧಿಕಾರ ನಡೆಸಿ ಆಯಿತು. ಈಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿರುವ ಸಂದರ್ಭದಲ್ಲಿ ಅದೇ ಕಾಂತರಾಜ್ ವರದಿಯ ಬಗ್ಗೆ ಇನ್ನೇನು ಸಮೀಕ್ಷೆ ವರದಿ ಸರಕಾರದ ಕೈ ಸೇರಬೇಕು ಎನ್ನುವಾಗಲೇ ಚಿತ್ರವಿಚಿತ್ರ ಚರ್ಚೆಗಳು ಶುರುವಾಗಿವೆ!
ಯಾಕೆ ಹೀಗೆ? ಯಾರು ಈ ಚರ್ಚೆಯನ್ನು ಹುಟ್ಟುಹಾಕಿದರು? ಯಾಕಾಗಿ ಈ ಚರ್ಚೆ ಹುಟ್ಟು ಹಾಕಿದರು? ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಹಾಗಾದರೆ ಕಾಂತರಾಜ್ ಅವರು ಸಿದ್ಧಪಡಿಸಿದ ವರದಿ ಸುಳ್ಳೇ? ಸರಕಾರ ಕೋಟಿ ಕೋಟಿ ರೂ. ವ್ಯಯ ಮಾಡಿದ್ದು ವ್ಯರ್ಥವೇ? ಸರಕಾರಕ್ಕೆ ಹಾಗಿದ್ದರೆ ಜವಾಬ್ದಾರಿ ಇಲ್ಲವೇ? ಜವಾಬ್ದಾರಿಯೇ ಇಲ್ಲದ ವ್ಯಕ್ತಿಯ ಕೈಗೆ ಸಮೀಕ್ಷೆಯ ಜವಾಬ್ದಾರಿ ನೀಡಿತೇ ಅಂದಿನ ಇದೇ ಸಿದ್ದರಾಮಯ್ಯನವರ ಸರಕಾರ? ಹೀಗೆ ಏನೇನೋ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಿವೆ. ಅವೆಲ್ಲದಕ್ಕೂ ಸರಕಾರ ಉತ್ತರ ನೀಡಬೇಕಿದೆ. ಏಕೆಂದರೆ ಸರಕಾರ ಖರ್ಚು ಮಾಡಿರುವ ಕೋಟಿ ಕೋಟಿ ರೂ. ಜನಸಾಮಾನ್ಯರು ನೀಡಿದ ತೆರಿಗೆಯ ಹಣ.
ಇನ್ನೊಂದು ಮುಖ್ಯವಾದ ಪ್ರಶ್ನೆ ಇದೆ. ಕಾಂತರಾಜ್ ವರದಿ ಅವೈಜ್ಞಾನಿಕವಾಗಿದೆ ಎಂದಾಗಲಿ, ವಾಸ್ತವಾಂಶಕ್ಕೆ ವಿರುದ್ಧವಾಗಿದೆ ಎಂದಾಗಲಿ ಸರಕಾರಕ್ಕಾಗಲಿ ಈಗ ಅದನ್ನು ಬೇಡ ಎಂದು ಹೇಳುತ್ತಿರುವ ವಿವಿಧ ಜಾತಿಯ ಮುಖಂಡರು, ಶಾಸಕರು, ಮಂತ್ರಿಗಳಿಗೆ ಯಾರು ಹೇಳಿದ್ದು? ಸರಕಾರವೇ ಹೇಳುವ ಹಾಗೆ ಇನ್ನೂ ಕಾಂತರಾಜ್ ವರದಿ ಸರಕಾರದ ಕೈ ತಲುಪಿಲ್ಲ. ಇನ್ನೊಂದೆಡೆ ಕಾಂತರಾಜ್ ವರದಿಯ ಮೂಲ ಪ್ರತಿ ಕಳೆದುಹೋಗಿದೆ ಎಂದು ಹೇಳಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕೂಡ ಅನಗತ್ಯ ಗೊಂದಲ ಸೃಷ್ಟಿಸಿದರೇ? ಈ ಅನುಮಾನ ಕೂಡ ಕಾಡುತ್ತಿದೆ. ಇನ್ನೊಂದು ಕಡೆ ಮೂರು-ನಾಲ್ಕು ಪ್ರಬಲ ಜಾತಿಗಳ ಮುಖಂಡರು, ಶಾಸಕರು, ಸಚಿವರುಗಳೂ ಸೇರಿಕೊಂಡು ತಮ್ಮ ಜಾತಿಗಳ ಪರವಾಗಿ ಲಾಭಿ ನಡೆಸಲು ಶುರು ಮಾಡಿದ್ದಾರೆ. ಅಂದರೆ ಇವರು ಶಾಸಕರಾಗಲು, ಮಂತ್ರಿಗಳಾಗಲು ಕೇವಲ ಅವರ ಜಾತಿಯವರು ಮಾತ್ರ ಮತ ನೀಡಿ ಕಳುಹಿಸಿದರೇ? ಹಾಗೆ ನೋಡಿದರೆ ಮೀಸಲಾತಿ ಕ್ಷೇತ್ರದಿಂದ ಬಂದ ಶಾಸಕರು, ಸಚಿವರು ಇಲ್ಲಿ ಉಸಿರೇ ಬಿಡುತ್ತಿಲ್ಲ!
ಒಂದು ಕಡೆ ಒಕ್ಕಲಿಗ ಸಮುದಾಯಕ್ಕೆ ಕಾಂತರಾಜ್ ವರದಿಯಿಂದ ಅನ್ಯಾಯವಾಗುತ್ತದೆ ಒಕ್ಕಲಿಗರು ಮುಂದುವರಿದ ಜಾತಿ ಎಂದು ಈ ಸಮೀಕ್ಷೆಯಲ್ಲಿ ವರ್ಗಿಕರಿಸಲಾಗಿದೆ. ಆದರೆ ಜನಸಂಖ್ಯೆಯನ್ನು ಶೇ.೮ಕ್ಕೆ ಇರಿಸಿದೆ ಎಂದು ಅದೇ ಸಮುದಾಯದ ಮುಖಂಡರು ಹೇಳುತ್ತಾರೆ. ಮತ್ತೊಂದೆಡೆ ಕಾಂತರಾಜ್ ಕುರುಬರು ಎಂಬ ಕಾರಣಕ್ಕೆ ಇದು ವಿಶ್ವಾಸಾರ್ಹ ವರದಿಯಲ್ಲ ಎಂದು ಅಲ್ಲಗಳೆಯಲಾಗುತ್ತಿದೆ. ಕಾಂತರಾಜ್ ಕುರುಬ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಕುರುಬರ ಜನಾಂಗದ ಜನಸಂಖ್ಯೆಯನ್ನು ಹೆಚ್ಚು ಮಾಡಲು ಸಾಧ್ಯವಾಗುತ್ತದೆಯೇ? ಅದು ವಿಶ್ವಾಸಾರ್ಹವಲ್ಲ ಎಂದು ಯಾವ ಆಧಾರದ ಮೇಲೆ ವಾದ ಮಾಡಲಾಗುತ್ತಿದೆ? ಇದಕ್ಕೆ ಏನಾದರೂ ಅಳತೆ ಗೋಲುಗಳಿವೆಯೇ?
ಇನ್ನೊಂದೆಡೆ ಜಾತಿ ಗಣತಿ ನಡೆಸಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ ಎಂಬ ಮಾತುಗಳೂ ಬರುತ್ತಿವೆ. ಹಾಗಿದ್ದರೆ ಸಿದ್ದರಾಮಯ್ಯ ಸರಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿ ಮಾಡಿದ್ದು ಯಾಕೆ? ಸ್ವತಃ ವಕೀಲರಾದ ಸಿದ್ದರಾಮಯ್ಯನವರಿಗೆ ಇದರ ಅರಿವು ಇರಲಿಲ್ಲವೇ? ಜನರ ಕಣ್ಣೊರೆಸಲು ಕೋಟಿ ಕೋಟಿ ಹಣವನ್ನು ಹಿಂದಿನ ಸರಕಾರದಲ್ಲಿ ಪೋಲು ಮಾಡಿದರಾ? ಹೀಗೆಂದು ಈಗ ಅನೇಕ ಪ್ರಶ್ನೆಗಳನ್ನು ಉಳಿದ ತಳ ಸಮುದಾಯಗಳ ಜನರು, ಮುಖಂಡರು ಕೇಳುತ್ತಿದ್ದಾರೆ. ಕಾಂತರಾಜ್ ವರದಿ ಜಾರಿಗೆ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಮಹಾಕೂಟ ಈಗಾಗಲೇ ಸತ್ಯಾಗ್ರಹ ನಡೆಸಿವೆ. ಅನೇಕ ದಲಿತ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಸಂಘಟನೆಗಳು ವರದಿಯ ಪರವಾಗಿ ಧ್ವನಿ ಎತ್ತುತ್ತಿವೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೀಡಿದ ಗೊಂದಲದ ಹೇಳಿಕೆ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಸಲಾಗುತ್ತಿದೆ. ಕಾಂತರಾಜ್ ವರದಿ ಎಲ್ಲೂ ಕಳೆದುಹೋಗಿಲ್ಲ. ಅದು ಇದೆ ಎಂದೂ ಹೇಳಿ ಆಗಿದೆ. ಇಷ್ಟಾದರೂ ಆ ವರದಿಯಲ್ಲಿ ಏನಿದೆ ಎಂಬುದು ಇನ್ನೂ ಯಾರಿಗೂ ತಿಳಿದೇ ಇಲ್ಲ! ಹೀಗಿರುವಾಗ ಅದರ ಬಗ್ಗೆ ವ್ಯಾಪಕವಾದ ಚರ್ಚೆ, ಅದರ ಕುರಿತು ಜಾತಿ ಅಥವಾ ಸಮುದಾಯದ ಮುಖಂಡರ ಸಭೆಗಳನ್ನು ನಡೆಸಿ ಅದನ್ನು ವಿರೋಧಿಸುತ್ತಿರುವುದರ ಹಿಂದಿನ ಗುಟ್ಟೇನು?
ಒಂದು ವಿಚಾರದ ಬಗ್ಗೆ ಸ್ಪಷ್ಟವಾದ ಮಾಹಿತಿಯೇ ಇಲ್ಲದೆ ಅದು ಸರಿಯಿಲ್ಲ ಎನ್ನುವುದಾಗಲಿ ಅಥವಾ ಅದು ಸೂಕ್ತವಾಗಿದೆ ಎನ್ನುವುದಾಗಲಿ ಎರಡೂ ತಪ್ಪಾಗುತ್ತದೆ. ಮೊದಲು ಆ ವರದಿಯಲ್ಲಿ ಏನಿದೆ ಎಂಬುದನ್ನು ಸರಕಾರಕ್ಕೆ ಸಲ್ಲಿಸಬೇಕು. ಅದನ್ನು ಸರಕಾರ ಜನರ ಮುಂದೆ ಇಡಬೇಕು. ಆನಂತರ ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಬೇಕು. ಆ ಚರ್ಚೆಯ ನಂತರ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಮಾಡಿ ಅದರ ಅನುಷ್ಠಾನದ ಬಗ್ಗೆ ಸರಕಾರಗಳು ತೀರ್ಮಾನ ಮಾಡಬೇಕು. ಆದರೆ ಕೂಸೇ ಹುಟ್ಟದೆ ಕುಲಾಯಿ ಹೊಲಿಯುವ ಕೆಲವು ಜಾತಿ ಮುಖಂಡರಿಗೆ ಏನು ಹೇಳಬೇಕು?. ಇದು ಜಾತಿಯೊಳಗೇ ತಮ್ಮತಮ್ಮ ಹಿಡಿತ ಸಾಧಿಸಲು ನಡೆಸುತ್ತಿರುವ ರಣತಂತ್ರವೇ ಅಥವಾ ತಳ ಸಮುದಾಯಗಳ ಬಗೆಗಿನ ತಾತ್ಸಾರವೇ? ಇದನ್ನು ಈ ಜನಪ್ರತಿನಿಧಿಗಳಿಗೆ ಮತ ನೀಡಿದ ಮತದಾರ ಪ್ರಭುಗಳೇ ಅರ್ಥ ಮಾಡಿಕೊಳ್ಳಬೇಕು.