ಇಂಧನ ಭದ್ರತೆ ಮತ್ತು ನ್ಯಾಯಯುತ ಪರಿವರ್ತನೆ - ಭಾರತೀಯ ಕಲ್ಲಿದ್ದಲು ವಲಯದ ದೃಷ್ಟಿಕೋನ
ಜಂಟಿ ಕಾರ್ಯದರ್ಶಿ, ಕಲ್ಲಿದ್ದಲು ಸಚಿವಾಲಯ, ಭಾರತ ಸರಕಾರ
ಕಲ್ಲಿದ್ದಲು ವಲಯವು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಇಂಧನ ಭದ್ರತೆಯ ಬೆನ್ನೆಲುಬಾಗಿದೆ. ರಾಷ್ಟ್ರದ ಜನಸಂಖ್ಯೆಯು ಬೆಳೆಯುತ್ತಲೇ ಇರುವುದರಿಂದ ಮತ್ತು ವಿದ್ಯುಚ್ಛಕ್ತಿಯ ಲಭ್ಯತೆಯು ಹೆಚ್ಚು ವ್ಯಾಪಕವಾಗುತ್ತಿರುವುದರಿಂದ, ಕಲ್ಲಿದ್ದಲು ವಲಯವು ಇಂಧನದ ನಿರ್ಣಾಯಕ ಮೂಲವಾಗಿದೆ. ನವೀಕರಿಸಬಹುದಾದ ಇಂಧನಕ್ಕೆ ದೃಢವಾದ ಉತ್ತೇಜನದ ಹೊರತಾಗಿಯೂ, ಕಲ್ಲಿದ್ದಲು ಪ್ರಮುಖ ಇಂಧನ ಮೂಲವಾಗಿಯೇ ಉಳಿಯುತ್ತದೆ ಎಂದು ಹೇಳಲಾಗಿದೆ. ಅಂದಾಜುಗಳ ಪ್ರಕಾರ ದೇಶೀಯ ಕಲ್ಲಿದ್ದಲು ಉತ್ಪಾದನೆಯು 2030 ರ ವೇಳೆಗೆ 1.5 ಶತಕೋಟಿ ಟನ್ ಗಳವರೆಗೆ ಏರಿಕೆಯಾಗಬಹುದು ಮತ್ತು 2040 ರ ಸುಮಾರಿಗೆ ಗರಿಷ್ಠ ಮಟ್ಟವನ್ನು ತಲುಪಬಹುದು.
ಭಾರತವು ಹವಾಮಾನ ಬದಲಾವಣೆಯನ್ನು ಪರಿಹರಿಸುವ ತುರ್ತು ಅಗತ್ಯವನ್ನು ಗುರುತಿಸುತ್ತಾ, ಕಡಿಮೆ ಇಂಗಾಲ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿಯ ತನ್ನ "ಪಂಚಾಮೃತ" ಗುರಿಗಳೊಂದಿಗೆ ಹೊಂದಿಕೆಯಾಗುವ ಬೆಳವಣಿಗೆಯ ಮಾದರಿಗೆ ಬದ್ಧವಾಗಿದೆ. ಹವಾಮಾನ ಪರಿಗಣನೆಗಳು ಮತ್ತು ಆರ್ಥಿಕ ವಾಸ್ತವತೆಗಳ ನಡುವಿನ ಸಮತೋಲನವನ್ನು ಸಾಧಿಸುವ ಮೂಲಕ, ರಾಷ್ಟ್ರವು ಮಧ್ಯಮ ಮಾರ್ಗವನ್ನು ಅಳವಡಿಸಿಕೊಂಡಿದೆ. ಸಾಮಾನ್ಯವಾದ ಆದರೆ ವಿಭಿನ್ನವಾದ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯ (CBDR-RC) ತತ್ವಗಳ ಆಧಾರದ ಮೇಲೆ ಸಮತೋಲಿತ ಬೆಳವಣಿಗೆಯ ಮಾದರಿಯನ್ನು ಸಾಧಿಸಲು "ಹವಾಮಾನ ನ್ಯಾಯ"ಕ್ಕೆ ಒತ್ತು ನೀಡಿದೆ. ಪರಿವರ್ತನೆಯ ಸಂಕೀರ್ಣತೆಗಳನ್ನು ಪರಿಹರಿಸಲು ಕಲ್ಲಿದ್ದಲು ಅನಿಲೀಕರಣದಂತಹ ಕಲ್ಲಿದ್ದಲಿನ ಪರ್ಯಾಯ ಬಳಕೆಗಳನ್ನು ಅನ್ವೇಷಿಸುವುದನ್ನು ಈ ವಿಧಾನವು ಒಳಗೊಂಡಿರುತ್ತದೆ.
ನವೀಕರಿಸಬಹುದಾದ ಇಂಧನ ಬೆಳವಣಿಗೆಯು ದೇಶದ ಹೆಚ್ಚುತ್ತಿರುವ ಇಂಧನ ಅಗತ್ಯಗಳಿಂದಾಗಿ ಭಾರತದಲ್ಲಿ ಕಲ್ಲಿದ್ದಲು ವಲಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದು ಊಹಿಸಲಾಗಿದೆ. ಭಾರತದಲ್ಲಿ ಒಟ್ಟು ಕಲ್ಲಿದ್ದಲು ಬಳಕೆಯು ಇನ್ನೂ ಗರಿಷ್ಠ ಮಟ್ಟಕ್ಕೆ ಏರಿಲ್ಲ ಮತ್ತು ಕಲ್ಲಿದ್ದಲು ಬೇಡಿಕೆಯು ಹೆಚ್ಚುತ್ತಲೇ ಇರುತ್ತದೆ ಮತ್ತು 2040 ರ ಸುಮಾರಿಗೆ ಗರಿಷ್ಠ ಮಟ್ಟ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಭವಿಷ್ಯದಲ್ಲಿ, ಕೆಲವು ಗಣಿಗಳು ನಿಕ್ಷೇಪಗಳ ಖಾಲಿಯಿಂದಾಗಿ ಮುಚ್ಚಬಹುದು, ಆದರೆ ಅದೇ ಸಮಯದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಹೊಸ ಬೃಹತ್ ಕಲ್ಲಿದ್ದಲು ಗಣಿಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ಈ ಗಣಿಗಳು ರಾಷ್ಟ್ರಕ್ಕೆ ಇಂಧನ ಭದ್ರತೆಯನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ, ಉತ್ತಮ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಕಲ್ಲಿದ್ದಲು ಪ್ರದೇಶಗಳಲ್ಲಿ ಪರೋಕ್ಷ ಉದ್ಯೋಗಾ ವಕಾಶಗಳನ್ನು ಸೃಷ್ಟಿಸಲು ಮುಚ್ಚಲಿರುವ ಗಣಿಗಳಿಂದ ಹೊಸ ಗಣಿಗಳಲ್ಲಿ ಹೊಸ ಉದ್ಯೋಗ ಮತ್ತು ಕಾರ್ಮಿಕರ ಮರುನಿಯೋಜನೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ. ಹೀಗಾಗಿ, ಅಲ್ಪಾವಧಿ ಮತ್ತು ಮಧ್ಯಮಾವಧಿಯಲ್ಲಿ ಯಾವುದೇ ತಕ್ಷಣದ ಜೀವನೋಪಾಯ ಮತ್ತು ಸಾಮಾಜಿಕ ಸಮಸ್ಯೆಗಳು ಇರುವುದಿಲ್ಲ. ಹಾಗಾಗಿ, ಕಲ್ಲಿದ್ದಲು ಗಣಿಗಳಿಗೆ ಸಂಬಂಧಿಸಿದ ಸಾಮಾಜಿಕ, ಭೌತಿಕ ಮತ್ತು ಪರಿಸರದ ಅಂಶಗಳನ್ನು ಅಸ್ತಿತ್ವದಲ್ಲಿರುವ ವಿವಿಧ ಕಾನೂನುಗಳಲ್ಲಿ ಮಾಡಲಾದ ನಿಬಂಧನೆಗಳ ಪ್ರಕಾರ ಸಮರ್ಪಕವಾಗಿ ನಿಭಾಯಿಸಲಾಗಿದೆ.
ಕಲ್ಲಿದ್ದಲು ಗಣಿಗಳ ಮುಚ್ಚುವಿಕೆಯನ್ನು ವೈಜ್ಞಾನಿಕವಾಗಿ ಮತ್ತು ವಸ್ತುನಿಷ್ಠ ರೀತಿಯಲ್ಲಿ ನಿರ್ವಹಿಸುವ ಮೂಲಕ ಇದರಿಂದ ಪರಿಣಾಮಕ್ಕೊಳಗಾಗುವ ಜನರ ಜೀವನೋಪಾಯವನ್ನು ಖಾತ್ರಿಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಪ್ಯಾರಿಸ್ ಒಪ್ಪಂದ, 2015 ರಲ್ಲಿ "ಜಸ್ಟ್ ಟ್ರಾನ್ಸಿಶನ್" (ನ್ಯಾಯಯುತ ಪರಿವರ್ತನೆ) ಪರಿಕಲ್ಪನೆಯನ್ನು ಹೊರತರಲಾಗಿದೆ. ಇದು ಕಲ್ಲಿದ್ದಲು ಗಣಿಗಳ ಮುಚ್ಚುವಿಕೆಯಿಂದ ಪರಿಣಾಮಕ್ಕೊಳಗಾಗುವ ಎಲ್ಲಾ ಭಾಗೀದಾರರಿಗೆ ನ್ಯಾಯಯುತ, ಸೂಕ್ತ ಮತ್ತು ಸಮಾನ ವಾದ ಪರಿವರ್ತನೆಯನ್ನು ಒದಗಿಸುತ್ತದೆ. ನ್ಯಾಯಯುತ ಪರಿವರ್ತನೆಯ ಮಾರ್ಗಗಳು ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಪುನಃಸ್ಥಾಪನೆ, ಸಾಮರ್ಥ್ಯ-ನಿರ್ಮಾಣ ಮತ್ತು ಕಲ್ಲಿದ್ದಲು-ಅವಲಂಬಿತ ಪ್ರದೇಶಗಳಲ್ಲಿ ಹೊಸ ಜೀವನೋಪಾಯದ ಅವಕಾಶಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ.
ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಶುದ್ಧ ಇಂಧನ ಮೂಲಗಳ ಪರಿವರ್ತನೆಯಲ್ಲಿ ಜಗತ್ತು ಒಂದಾಗು ತ್ತಿರುವಾಗ, ಕಲ್ಲಿದ್ದಲು ವಲಯವು ಈ ರೂಪಾಂತರದಲ್ಲಿ ಮುಂಚೂಣಿಯಲ್ಲಿದೆ. ಆದಾಗ್ಯೂ, ಅಂತಹ ಬದಲಾವಣೆಯು ಇಂಧನ ಭದ್ರತೆ, ಸಾಮಾಜಿಕ ಸಮಾನತೆ, ಆರ್ಥಿಕ ಸ್ಥಿರತೆ ಮತ್ತು ಸಂತ್ರಸ್ತ ಸಮುದಾಯಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಕಾರ್ಯತಂತ್ರಗಳೊಂದಿಗೆ ಇರಬೇಕು. ಬಹಳ ಕಡಿಮೆ ಮತ್ತು ವಿರಳವಾಗಿದ್ದರೂ ವಿವಿಧ ಅಂತಾರಾಷ್ಟ್ರೀಯ ಮಾದರಿಗಳು, ಉತ್ತಮ ಅಭ್ಯಾಸಗಳಿಂದ ಸ್ಫೂರ್ತಿಯನ್ನು ಪಡೆಯುವುದು ಮತ್ತು ಕಲ್ಲಿದ್ದಲು ವಲಯದಲ್ಲಿ ನ್ಯಾಯಯುತ ಪರಿವರ್ತನೆ ತತ್ವಗಳನ್ನು ಕಾರ್ಯಗತಗೊಳಿಸುವ ವಿಧಾನಗಳು ಹೊರಹೊಮ್ಮಿವೆ. ಇವುಗಳು ಇಂತಹುದೇ ರೀತಿಯ ರೂಪಾಂತರಗಳಿಗೆ ಒಳಗಾಗುತ್ತಿರುವ ರಾಷ್ಟ್ರಗಳಿಗೆ ಅಮೂಲ್ಯವಾದ ಪಾಠಗಳಾಗುತ್ತವೆ.
ಭಾರತದ ಜಿ20 ಅಧ್ಯಕ್ಷತೆಯ ಆದ್ಯತೆಯ ಪ್ರದೇಶವಾದ ಇಟಿಡಬ್ಲ್ಯುಜಿ ಅಂಗವಾಗಿ "ಶುದ್ಧ ಇಂಧನಕ್ಕೆ ಸಾರ್ವತ್ರಿಕ ಪ್ರವೇಶ ಮತ್ತು ನ್ಯಾಯಯುತ, ಕೈಗೆಟುಕುವ, ಮತ್ತು ಅಂತರ್ಗತ ಇಂಧನ ಪರಿವರ್ತನೆಯ ಮಾರ್ಗಗಳು" ಭಾಗವಾಗಿ ಕಲ್ಲಿದ್ದಲು ಸಚಿವಾಲಯದ ಮಾರ್ಗದರ್ಶನದಲ್ಲಿ ಸಿಎಂಪಿಡಿಐ ಒಂದು ಅಧ್ಯಯನವನ್ನು ನಡೆಸಿತು, "ಕಲ್ಲಿದ್ದಲು ವಲಯದಲ್ಲಿ ನ್ಯಾಯಯುತ ಪರಿವರ್ತನೆಗಾಗಿ ಅತ್ಯುತ್ತಮ ಜಾಗತಿಕ ಅಭ್ಯಾಸಗಳು" ಎಂಬ ವಿಷಯದ ಮೇಲೆ ಇದು ಕೇಂದ್ರೀಕರಿಸಿದೆ. ಅಧ್ಯಯನದ ಸಂಶೋಧನೆಗಳು ಈ ಪ್ರಮುಖ ಒಳನೋಟಗಳನ್ನು ಎತ್ತಿ ತೋರಿಸುತ್ತವೆ: ಖಾಲಿಯಾದ ಕಲ್ಲಿದ್ದಲು ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದಕ್ಕೆ ಗಣನೀಯ ತಾಂತ್ರಿಕ ಮತ್ತು ಆರ್ಥಿಕ ಬೆಂಬಲದ ಅಗತ್ಯವಿದೆ; ಕಲ್ಲಿದ್ದಲು ಗಣಿ ಮುಚ್ಚುವಿಕೆಗೆ ಸಂಬಂಧಿಸಿದ ಸಾಮಾಜಿಕ ಮತ್ತು ಕಾರ್ಮಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ದೀರ್ಘಾವಧಿಯಲ್ಲಿ ಬಹು-ಪಾಲುದಾರ ನೀತಿಯನ್ನು ರೂಪಿಸುವಲ್ಲಿ ನೆರವಾಗುತ್ತದೆ; ಮಾನವ ಬಂಡವಾಳದಲ್ಲಿ, ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯದಲ್ಲಿ ಹೂಡಿಕೆಯು ಪ್ರಾಮುಖ್ಯತೆಯನ್ನು ಹೊಂದಿದೆ; ಅನುಕೂಲಕರ ವೈವಿಧ್ಯಮಯ ವ್ಯಾಪಾರ ವಾತಾವರಣಕ್ಕೆ ಸ್ಥಳೀಯ ಸಾಂಸ್ಥಿಕ ಸಾಮರ್ಥ್ಯವನ್ನು ಪೋಷಿಸುವುದು ಅತ್ಯಗತ್ಯ ಮತ್ತು ಸಂಘಟಿತ ಆರ್ಥಿಕ ಅಭಿವೃದ್ಧಿ ಕಾರ್ಯತಂತ್ರಗಳು ಮತ್ತು ಕಾರ್ಯತಂತ್ರದ ಸಂಪನ್ಮೂಲಗಳ ಹಂಚಿಕೆಯು ಗಣಿ ಮುಚ್ಚುವಿಕೆಯ ಪರಿಣಾಮವನ್ನು ತಗ್ಗಿಸಲು ನಿರ್ಣಾಯಕವಾಗಿದೆ. ಪರಿಣಾಮಕಾರಿ ನ್ಯಾಯಯುತ ಪರಿವರ್ತನೆಯು ಬಲವಾದ ಸಾಮಾಜಿಕ ಪಾಲುದಾರಿಕೆಗಳನ್ನು ನಿರ್ಮಿಸುವುದು ಮತ್ತು ಮಧ್ಯಸ್ಥಗಾರರ ತೊಡಗಿಸಿಕೊಳ್ಳುವಿಕೆ, ಆರಂಭಿಕ ಯೋಜನೆ ಮತ್ತು ವೈವಿಧ್ಯೀಕರಣ, ಮರು ತರಬೇತಿ ಮತ್ತು ಪುನರ್ ಕೌಶಲ್ಯ, ಸಾಮಾಜಿಕ ಸುರಕ್ಷತಾ ಜಾಲಗಳು, ಮೂಲಸೌಕರ್ಯ ಮತ್ತು ಸಮುದಾಯ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್ ಎಂ ಇ) ಬೆಂಬಲ, ಹಸಿರು ಹಣಕಾಸು ಮತ್ತು ಹೂಡಿಕೆ ಮತ್ತು ಅಂತಾರಾಷ್ಟ್ರೀಯ ಸಹಯೋಗವನ್ನು ಬೆಂಬಲಿಸುತ್ತದೆ.
ಕಲ್ಲಿದ್ದಲನ್ನು ಅವಲಂಬಿಸಿರುವ ದೇಶಗಳು ಭವಿಷ್ಯದಲ್ಲಿ ಅಗತ್ಯಬಿದ್ದಾಗ ಕಲ್ಲಿದ್ದಲು ವಲಯದಲ್ಲಿ ಕ್ರಮೇಣ ನ್ಯಾಯಯುತ ಪರಿವರ್ತನೆಯನ್ನು ಯೋಜಿಸಬೇಕಾಗುತ್ತದೆ ಮತ್ತು ಅದನ್ನು ಸಿದ್ಧಗೊಳಿಸಬೇಕಾಗುತ್ತದೆ. ಕಲ್ಲಿದ್ದಲು ಗಣಿಗಳ ತಾಂತ್ರಿಕ ಮತ್ತು ಪರಿಸರದ ಮುಚ್ಚುವಿಕೆಗೆ ಸಂಬಂಧಿಸಿದಂತೆ ವಿವಿಧ ಭಾಗೀದಾರರ ಪಾತ್ರಗಳು ಮತ್ತು ಹೊಣೆಗಾರಿಕೆಗಳು ಮತ್ತು ಸಂತ್ರಸ್ತ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಬೆಂಬಲಿಸುವ ಜವಾಬ್ದಾರಿಗಳು ನ್ಯಾಯಯುತ ಪರಿವರ್ತನೆಯ ವಿಷಯದಲ್ಲಿ ಜಗತ್ತಿನಾದ್ಯಂತ ಗಮನಾರ್ಹವಾಗಿ ಬದಲಾಗಬಹುದು. ನ್ಯಾಯಯುತ ಪರಿವರ್ತನೆ ಯೋಜನೆಯು ಗಣಿ ಮುಚ್ಚುವ ಮೊದಲೇ ಪ್ರಾರಂಭವಾಗುತ್ತದೆ, ವಿವಿಧ ಭಾಗೀದಾರರನ್ನು ಒಳಗೊಂಡ ಪರಿವರ್ತನೆಯ ದೃಷ್ಟಿಕೋನವನ್ನು ರೂಪಿಸುತ್ತದೆ. ಗಣಿ ಮುಚ್ಚುವಿಕೆಯ ಸಾಮಾಜಿಕ ಪರಿಣಾಮಗಳು ಕಾರ್ಮಿಕರು ಮತ್ತು ಸಮುದಾಯಗಳ ವಿವಿಧ ವಿಭಾಗಗಳಲ್ಲಿ ವ್ಯಾಪಕವಾಗಿ ಹರಡಿರುತ್ತವೆ, ಅಲ್ಲಿ ಕಲ್ಲಿದ್ದಲು ಮತ್ತು ಸ್ಥಳೀಯ ಆರ್ಥಿಕತೆಯ ನಡುವಿನ ವ್ಯಾಪಕ ಸಂಪರ್ಕಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕಲ್ಲಿದ್ದಲು ಪ್ರದೇಶಗಳಲ್ಲಿನ ಕಲ್ಲಿದ್ದಲು ಅವಲಂಬಿತ ಸಮುದಾಯಗಳ ಜೀವನಾಧಾರಕ್ಕಾಗಿ ಕಡಿಮೆ ಇಂಗಾಲದ ಆರ್ಥಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು, ಜಿ20 ಅಥವಾ ಅಭಿವೃದ್ಧಿ ಹೊಂದಿದ ದೇಶಗಳು ಅಗತ್ಯವಾದ ಹಣಕಾಸು ಮತ್ತು ತಾಂತ್ರಿಕ ನೆರವು ನೀಡುವ ಮೂಲಕ ಕಲ್ಲಿದ್ದಲು ಅವಲಂಬಿತ ದೇಶಗಳಲ್ಲಿ ನ್ಯಾಯಯುತ ಪರಿವರ್ತನೆ ಪ್ರಕ್ರಿಯೆಗೆ ಸಹಾಯ ಮಾಡಬಹುದು.
ಕೊನೆಯದಾಗಿ, ನ್ಯಾಯಯುತ ಪರಿವರ್ತನೆಯ ಮೂಲಕ ಕಲ್ಲಿದ್ದಲು ವಲಯದ ರೂಪಾಂತರವು ಒಂದು ಸಂಕೀರ್ಣವಾದ ಪ್ರಯತ್ನವಾಗಿದ್ದು, ಎಚ್ಚರಿಕೆಯ ಯೋಜನೆ, ಸಹಯೋಗ ಮತ್ತು ಸಹಾನುಭೂತಿಯ ಅಗತ್ಯವಿರುತ್ತದೆ. ಪ್ರಪಂಚದಾದ್ಯಂತದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಕಲ್ಲಿದ್ದಲು ಅವಲಂಬಿತ ದೇಶಗಳು ಹವಾಮಾನ ಬದಲಾವಣೆಯನ್ನು ಪರಿಹರಿಸುವುದಲ್ಲದೆ ಕಲ್ಲಿದ್ದಲು ಕಾರ್ಮಿಕರು ಮತ್ತು ಸಮುದಾಯಗಳ ಘನತೆ ಮತ್ತು ಜೀವನೋಪಾಯವನ್ನು ಎತ್ತಿಹಿಡಿಯುವ ಹೆಚ್ಚು ಸುಸ್ಥಿರ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು. ಪ್ರಪಂಚವು ವಿಕಸನಗೊಳ್ಳುತ್ತಿದ್ದಂತೆ, ಈ ಅಭ್ಯಾಸಗಳು ಸಮತೋಲಿತ ಮತ್ತು ಸಮಾನ ಪರಿವರ್ತನೆಗೆ ದಾರಿದೀಪಗಳಾಗಿ ಕಾರ್ಯನಿರ್ವಹಿಸಬಹುದು.