ಕೊರಗ ಸಮುದಾಯದಿಂದ ಬಿದಿರಿನ ಆಕರ್ಷಕ ದಿನಬಳಕೆ, ಅಲಂಕಾರಿಕ ವಸ್ತುಗಳ ತಯಾರಿಕೆ
ಕುಂದಾಪುರ: ಕರಾವಳಿಯ ಮೂಲನಿವಾಸಿಗಳೆನಿಸಿರುವ ಕೊರಗ ಸಮುದಾಯ ತಮ್ಮದೆ ವೈಶಿಷ್ಟ್ಯಪೂರ್ಣ ಕಲೆ, ಸಂಸ್ಕೃತಿ ಮೂಲಕ ಪ್ರಕೃತಿಯೊಂದಿಗೆ ಬದುಕುವವರು. ಶತಮಾನಗಳಿಂದಲೂ ಬುಟ್ಟಿ ಹೆಣೆದು ಜೀವನ ಸಾಗಿಸುವ ಇವರದ್ದು ಹೋರಾಟದ ಬದುಕು. ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಮರೆಯಾಗುತ್ತಿರುವ ಸಮುದಾಯದ ಮೂಲ ಕಸುಬಿಗೆ ಬಲ ತುಂಬಬೇಕಿದ್ದು, ಇದೀಗ ಇಲಾಖೆಗಳು ಕೊರಗರ ಕುಲಕಸುಬನ್ನು ಒಂದಷ್ಟು ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾಗಿವೆ.
ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸಾಂಪ್ರದಾಯಿಕ, ಆಕರ್ಷಕ ಶೈಲಿಯ ದಿನಬಳಕೆಯ, ಅಲಂಕಾರಿಕ ವಸ್ತುಗಳನ್ನು -ಗೆರೆಸೆ, ಬುಟ್ಟಿ, ಸಿಬ್ಲು ಇತ್ಯಾದಿ- ತಯಾರು ಮಾಡುವುದರಲ್ಲಿ ಕೊರಗ ಸಮುದಾಯ ನಿಷ್ಣಾತರು. ಈ ಕಲೆ ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ಮತ್ತಷ್ಟು ಆಧುನಿಕ ಸ್ಪರ್ಶದ ಪರಿಕರಗಳ ತಯಾರಿಕೆ ಬಗ್ಗೆ ಕಲಿಸುವ ಸಲುವಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡುಕೋಣೆಯಲ್ಲಿ ಸಾಂಪ್ರದಾಯಿಕ ಹಾಗೂ ನವೀನ ವಿನ್ಯಾಸದ ಬಿದಿರಿನ ತರಹೇವಾರಿ ವಸ್ತುಗಳ ತಯಾರಿಕೆಯ ಕಲಿಕಾ ಶಿಬಿರವೊಂದು ನಡೆಯುತ್ತಿದೆ.
ಬಿದಿರು ಉತ್ಪನ್ನಗಳು: ಈ ಹಿಂದೆಲ್ಲಾ ಕಾಡುತ್ಪತ್ತಿಗಳಾದ ಬೆತ್ತ, ಬೀಳು ಮೊದಲಾದವುಗಳಿಂದ ಕೊರಗ ಸಮುದಾಯ ವಿವಿಧ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿತ್ತು. ಆದರೆ ಇದೀಗ ಕಾನೂನು ತೊಡಕು, ಕಚ್ಚಾ ಸಾಮಗ್ರಿಗಳ ಸಂಗ್ರಹ ಸಮಸ್ಯೆಯಾಗುತ್ತಿರುವುದರಿಂದ ಸುಲಭವಾಗಿ ಜನವಸತಿ ಪ್ರದೇಶದಲ್ಲೇ ಲಭ್ಯವಾಗುವ ಬಿದಿರಿನಿಂದ ವಸ್ತುಗಳನ್ನು ತಯಾರಿಸುವುದು ಉತ್ತಮ ಬೆಲೆ ಸಿಕ್ಕರೆ ಲಾಭದಾಯಕವೂ ಹೌದು. ಆದರೆ ಬಿದಿರಿನ ಬೆಲೆ ಕೊಂಚ ದುಬಾರಿಯಾಗಿರುತ್ತದೆ.
ಬಿದಿರನ್ನು ಖರೀದಿಸಿ ತಂದು ಸಿಗಿದು ಒಣಗಿಸಿ ಬಳಿಕ ವೈವಿಧ್ಯಮಯ ವಸ್ತುಗಳನ್ನು ನಾಜೂಕಾಗಿ ತಯಾರಿಸಲಾಗುತ್ತದೆ. ಕತ್ತಿ, ಚಾಕು ಅಂತಹ ಲಘು ಸಾಧನ ಹೊರತುಪಡಿಸಿ ಯಾವುದೇ ಯಂತ್ರೋಪಕರಣಗಳ ನೆರವಿಲ್ಲದೆ ಸುಂದರ ವಸ್ತುಗಳಿಗೆ ಅಂತಿಮ ಸ್ಪರ್ಷ ಸಿಗುತ್ತವೆ. ಹುಳು-ಹುಪ್ಪಟೆಗಳಿಂದ ರಕ್ಷಣೆಗಾಗಿ ವಾರ್ನಿಸ್ ಬಳಸಲಾಗುತ್ತದೆ. <ತಂದೆ- ಮಗಳಿಂದ ೩೦ ಮಂದಿಗೆ ೩೦ ದಿನ ತರಬೇತಿ: ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉಡುಪಿ ಜಿಲ್ಲಾಡಳಿತ, ಐಟಿಡಿಪಿ ಮತ್ತು ಕೊರಗ ಸಂಘಟನೆಗಳ ಆಶ್ರಯದಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೊರಗ ಸಮುದಾಯದ ಸುಮಾರು ೩೦ ಯುವಕ-ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದಾರೆ.
ಒಂದು ತಿಂಗಳ ಕಾಲ ಪಡುಕೋಣೆಯ ಸುನೀತಾ ಎನ್ನುವವರ ಮನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬಾಬು ಕೊರಗ ಜಪ್ತಿ ಹಾಗೂ ಅವರ ಪುತ್ರಿ ದೀಪಾ ತರಬೇತಿ ನೀಡುತ್ತಿದ್ದಾರೆ. ಅರೆಹೊಳೆಯ ಐವರು, ಪಡುಕೋಣೆಯ ೧೮ ಮಂದಿ, ಸಮೀಪದ ಕೋಣ್ಕಿಯ ಏಳು ಮಂದಿ ತರಬೇತಿಗೆ ಬರುತ್ತಿದ್ದಾರೆ. ನಿತ್ಯೋಪಯೋಗಿ ಹಾಗೂ ಅಲಂಕಾರಿಕಾ ವಸ್ತುಗಳಾದ ಹೂವಿನ ಕುಂಡ, ಲೈಟ್‌ಶೇಡ್, ಲೆಟರ್ ಬಾಕ್ಸ್, ಫ್ರುಟ್ಸ್ ಟ್ರೇ, ಕೀ ಬಂಚ್, ಕ್ಲಿಪ್, ಹೇರ್ ಬ್ಯಾಂಡ್, ಚಮಚ, ಪೆನ್ ಹೋಲ್ಡರ್, ಪಾತ್ರೆಗಳನ್ನಿಡುವ ಬುಟ್ಟಿ, ಲ್ಯಾಂಪ್ ಸೈಡ್ ಮುಂತಾದ ವಸ್ತುಗಳನ್ನು ಬಿದಿರಿನಿಂದ ತಯಾರಿಸುವುದನ್ನು ಇಲ್ಲಿ ಕಲಿಸಲಾಗುತ್ತಿದೆ.
ಬಿದಿರಿನಲ್ಲಿ ಅಂದಚೆಂದದ ವಸ್ತು ನಿರ್ಮಿಸುವ ಜಪ್ತಿಯ ಬಾಬು ಕಳೆದ ಮೂರು ದಶಕಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡಿದ್ದು, ಮಗಳು ದೀಪಾ ಈ ವಿದ್ಯೆ ಕಲಿತು ತಂದೆಗೆ ಬೆಂಬಲವಾಗಿದ್ದಾರೆ.
ಯುವ ಜನಾಂಗಕ್ಕೆ ಪ್ರೋತ್ಸಾಹ
ಕೊರಗ ಸಮುದಾಯದ ಮೂಲ ಕಸುಬಾಗಿದ್ದ ಬುಟ್ಟಿ ತಯಾರಿ ಮೊದಲಾದವು ಆಧುನಿಕತೆ ಹೆಸರಿನಲ್ಲಿ ಮಾಯವಾಗುತ್ತಿವೆ. ಕರಕುಶಲ ಉತ್ಪನ್ನಗಳ ತಯಾರಿಕೆ ಕ್ಷೀಣಿಸುತ್ತಿದ್ದು, ಅದರ ಉಳಿವಿಗಾಗಿ ಹಾಗೂ ಯುವಕರಲ್ಲಿ ವೃತ್ತಿ ಕೌಶಲದ ಬಗ್ಗೆ ಉತ್ತೇಜನ, ಮೌಲ್ಯವರ್ಧನೆ ಅವಶ್ಯಕವಾಗಿದೆ ಎಂದು ಉಡುಪಿ ಜಿಲ್ಲಾ ಐಟಿಡಿಪಿ ಇಲಾಖೆ ಯೋಜನಾ ಸಮನ್ವಯ ಅಧಿಕಾರಿ ದೂದ್ ಪೀರ್ ಹೇಳುತ್ತಾರೆ. ಆಧುನಿಕತೆಗೆ ಪೈಪೋಟಿ ರೀತಿ ಸವಾಲೊಡ್ಡುವ ಇಚ್ಛಾಶಕ್ತಿಯೊಂದಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉಡುಪಿ ಐಟಿಡಿಪಿ ವಿವಿಧ ಇಲಾಖೆಗಳ ಜೊತೆಗೂಡಿ ಕೊರಗ ಸಮುದಾಯದವರಿಗಾಗಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ದೂದ್ ಪೀರ್ ತಿಳಿಸಿದರು.
ನಮ್ಮ ಸಮುದಾಯದ ಪಾರಂಪರಿಕ ಕಸುಬು ಉಳಿಸಿ ಬೆಳಸುವಲ್ಲಿ ಉತ್ತೇಜಿಸುವ, ಪ್ರೋತ್ಸಾಹಧನ ನೀಡುವಲ್ಲಿ ಸರಕಾರ ಹಾಗೂ ಇಲಾಖೆಗಳು ಅಗತ್ಯ ಕ್ರಮ ವಹಿಸಬೇಕಿದೆ. ಬುಟ್ಟಿ ಮೊದಲಾದ ಕರಕುಶಲ ಪರಿಕರ ತಯಾರಿ ಮಾಡುವವರಿಗೆ ಸರಕಾರದಿಂದ ಖಾತೆಗೆ ನೇರ ಸಂದಾಯ ಮೂಲಕ ಸಹಾಯಧನ ಲಭಿಸಿದರೆ ಸಮುದಾಯದವರು ಉಳಿತಾಯ ಮಾಡಿ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ.
► ಗಣೇಶ್,
ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷರು.
ಪ್ಲಾಸ್ಟಿಕ್‌ಗೆ ಪರ್ಯಾಯ ಬಿದಿರು ಪರಿಕರ
ಮೂಲ ನಿವಾಸಿಗಳ ಪಾರಂಪರಿಕ ಮೂಲ ಕಸುಬಿನ ಬಗ್ಗೆ ತಂದೆ ಕಲಿತ ಬಗ್ಗೆ ಗೌರವವಿತ್ತು. ನಾನು ಕೂಡ ವಿದ್ಯಾರ್ಥಿ ಜೀವನದಲ್ಲೇ ಪ್ರೇರಣೆ ಗೊಂಡು ಇದನ್ನು ಕಲಿತೆ. ಜೀವನೋಪಾಯಕ್ಕೂ ಇದು ದಾರಿಯಾಗಲಿದೆ ಎಂಬುದು ತಿಳಿದಾಗ ಆಸಕ್ತಿ ಹೆಚ್ಚಾಗಿದೆ. ಬೇಡಿಕೆಗನುಸಾರವಾಗಿ ತಂದೆಯೊಂದಿಗೆ ಸೇರಿ ಬಿದಿರಿನಿಂದ ನಿತ್ಯ ಜೀವನಕ್ಕೆ ಅಗತ್ಯವಾಗಿರುವ ಸಾಮಗ್ರಿಗಳನ್ನು ತಯಾರಿಸುತ್ತಿದ್ದೇವೆ. ಜೊತೆಗೆ ಕೊರಗ ಸಮುದಾಯ ಸ್ವಾವಲಂಬಿ ಜೀವನ ನಡೆಸಲು ಇಲಾಖೆಗಳು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಅಗತ್ಯ ತರಬೇತಿ ನೀಡಲಾಗುತ್ತಿದೆ. ಪ್ಲಾಸ್ಟಿಕ್‌ಗಳಿಗೆ ಪರ್ಯಾಯ ವಸ್ತುವಾಗಿ ಬಿದಿರಿನಿಂದ ತಯಾರಾಗುವ ವಸ್ತುಗಳನ್ನು ಬಳಸುವ ಮೂಲಕ ಉತ್ತೇಜನ ನೀಡಬೇಕು. <ದೀಪಾ ಜಪ್ತಿ, ತರಬೇತುದಾರರು.