ಸೌಹಾರ್ದದ ಸಂಕೇತ ಫಾತಿಮಾ ಶೇಖ್
ಇಂದು ಮಹಿಳೆಯರು ಶಿಕ್ಷಣವಂತರಾಗುತ್ತಿರುವುದಕ್ಕೆ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆಯವರೇ ಕಾರಣವಾಗಿದ್ದಾರೆ. ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರೊಂದಿಗೆ ಹೆಜ್ಜೆ ಹೆಜ್ಜೆಗೂ ಸಹಾಯಕ್ಕೆ ನಿಂತವರು ಫಾತಿಮಾ ಶೇಕ್. ಅವರು ಫುಲೆಯವರ ಭೀಡೆವಾಡಾ ಶಾಲೆಯಲ್ಲಿ ಹುಡುಗಿಯರಿಗೆ ಪಾಠ ಮಾಡುತ್ತಿದ್ದರು. ಮನೆಮನೆಗೆ ತೆರಳಿ ಕುಟುಂಬಗಳನ್ನು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೋತ್ಸಾಹಿಸುತ್ತಿದ್ದರು. ಶಾಲೆಯ ಎಲ್ಲ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಆಕೆಯ ಕೊಡುಗೆ ಇಲ್ಲದಿದ್ದರೆ ಬಾಲಕಿಯರ ಶಾಲೆಯ ಯೋಜನೆಗಳೇ ರೂಪುಗೊಳ್ಳುತ್ತಿರಲಿಲ್ಲ. ಆದರೂ ಭಾರತದ ಇತಿಹಾಸವು ಫಾತಿಮಾ ಶೇಖ್ ಅವರನ್ನು ಕಡೆಗಣಿಸಿದೆ.
ಕರ್ನಾಟಕ ಪ್ರತಿದಿನವೂ ಕೋಮುದಳ್ಳುರಿಯಲ್ಲಿ ಉರಿಯುತ್ತಿರುವ ಮತ್ತು ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ಕೋಮುವಾದಿಗಳಿರುವ ಈ ಸಂದರ್ಭದಲ್ಲಿ ಎರಡು ಶತಮಾನಗಳಷ್ಟು ಹಿಂದೆಯೇ ಇಬ್ಬರೂ ಗೆಳತಿಯರು ಸೇರಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಮಧ್ಯೆ ವಿದ್ಯೆಯ ಬೆಳಕಿನ ದೀಪ ಹಚ್ಚಲು ಪ್ರಯತ್ನಿಸಿದ್ದರು ಎಂಬುದು ಅಭಿಮಾನದ ಸಂಗತಿ. ಅವರು ಸಾವಿತ್ರಿ ಮತ್ತು ಫಾತಿಮಾ. ಸಾವಿತ್ರಿಬಾಯಿಯ ಜನ್ಮದಿನವನ್ನು ಜನವರಿ 3 ರಂದು ಆಚರಿಸಿದರೆ, ಫಾತಿಮಾ ಶೇಖ್ ರವರ ಜನ್ಮದಿನವನ್ನು ಜನವರಿ 9 ರಂದು ಆಚರಿಸಲಾಗುತ್ತದೆ.
ಫಾತಿಮಾ ಶೇಖ್ ಮತ್ತು ಅವರ ಸೋದರ ಉಸ್ಮಾನ್ ಶೇಖ್ ರವರ ಪ್ರಗತಿಪರ ಕೆಲಸಗಳ ಕುರಿತು ವೈದಿಕರ ವಿರೋಧವಿತ್ತು. ಫಾತಿಮಾ ಶೇಖ್ ರವರಿಗೂ ಮುಸ್ಲಿಮ್ ಸಮುದಾಯದ ಒಳಗಿನಿಂದಲೂ ಪ್ರಬಲ ವಿರೋಧ ವ್ಯಕ್ತವಾಗಿರಬಹುದು. ವೈದಿಕರಿಗೆ ದಲಿತ ಮತ್ತು ಮುಸ್ಲಿಮ್ ಐಕ್ಯತೆಯ ಭಯ ಕಾಡಿರಬಹುದಾಗಿದೆ. ಫಾತಿಮಾ ಶೇಕ್‌ರವರು, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರೊಂದಿಗೆ ಸೇರಿ 1ನೇ ಜನವರಿ 1948ರಲ್ಲಿ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿಯ ಫಾತಿಮಾರ ಮನೆಯಲ್ಲಿಯೇ ಮೊತ್ತ ಮೊದಲ ಶಾಲೆಯನ್ನು ತೆರೆಯುತ್ತಾರೆ.
ಅಂದಿನ ಕಾಲದಲ್ಲಿ ಮಹಿಳೆ ಮತ್ತು ದಲಿತರ ಶಿಕ್ಷಣಕ್ಕೆ ಸಾಮಾಜಿಕ ತಡೆಗೋಡೆಯೊಂದು ನಿರ್ಮಾಣವಾಗಿತ್ತು. ಇಂತಹ ಅಕ್ಷರ ವಂಚಿತರಿಗೆ ಅದರಲ್ಲೂ ಮಹಿಳೆ ಮತ್ತು ಶೂದ್ರಲೋಕಕ್ಕೆ ಅಕ್ಷರದ ಅರಿವನ್ನು ಮೂಡಿಸಿದವರು ಈ ಇಬ್ಬರು ಧೀಮಂತ ಮಹಿಳೆಯರು. ಇವರಿಬ್ಬರ ಕೊಡುಗೆಯನ್ನು ಇಂದಿನ ಶಿಕ್ಷಿತ ಲೋಕ ನೆನಪಿಸಿಕೊಳ್ಳಲೇಬೇಕು. ಮಹಿಳಾ ಶಿಕ್ಷಣಕ್ಕೆ ಫಾತಿಮಾ ಶೇಖ್ ನೀಡಿದ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಯಾವತ್ತೂ ಪುರುಷ ಪ್ರಧಾನ ಸಮಾಜ ಮಹಿಳೆಯರ ಸಮಾಜಮುಖಿ ಕೆಲಸಗಳನ್ನು ಗೌಣವಾಗಿಸುತ್ತಲೂ ಮತ್ತು ಅವಮಾನಿಸುತ್ತಲೂ ಬಂದಿದೆ ಎಂಬುದು ಚಾರಿತ್ರಿಕ ಸತ್ಯವಾಗಿದೆ.
ಫಾತಿಮಾ ಒಬ್ಬ ಸ್ತ್ರೀವಾದಿ ಶಿಕ್ಷಕಿಯಾಗಿದ್ದರು. ಇವರು ಮುಸ್ಲಿಮ್ ಸಮಾಜದಿಂದ ಬಂದ ಮೊತ್ತ ಮೊದಲ ಶಿಕ್ಷಕಿಯಾಗಿದ್ದರು. ಜ್ಯೋತಿಬಾರವರ ಸ್ವಂತ ತಂದೆಯೇ ಅವರನ್ನು ಮನೆಯಿಂದ ಹೊರಗೆ ದಬ್ಬಿದಾಗ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಬೀದಿ ಪಾಲಾಗುತ್ತಾರೆ. ಆಗ ಫಾತಿಮಾ ಶೇಖ್ ಮತ್ತು ಫಾತಿಮಾಳ ಸಹೋದರ ಉಸ್ಮಾನ್ ಶೇಖ್ ರವರು ಈ ದಂಪತಿಗೆ ಆಶ್ರಯ ನೀಡಿ ಅವರ ಮನೆಯಲ್ಲಿಯೇ ಶಾಲೆ ನಡೆಸಲು ಕಾರಣವಾಗುತ್ತಾರೆ.
ಫಾತಿಮಾ ಶೇಖ್ ರವರು ಸಾವಿತ್ರಿಬಾಯಿ ಫುಲೆಯವರು ನಡೆಸುತ್ತಿದ್ದ ಹೆಣ್ಣುಮಕ್ಕಳ ಮತ್ತು ದಲಿತ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಭಾರತದಲ್ಲಿ ಹೆಣ್ಣುಮಕ್ಕಳ ಮತ್ತು ಶೂದ್ರರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಮೊದಲ ಶಿಕ್ಷಕಿಯರಾದ ಈ ಇಬ್ಬರು ಮಹಿಳೆಯರು ತಲೆಯ ಮೇಲೆ ಸೆರಗು ಹೊದ್ದುಕೊಂಡೇ ಕತ್ತಲೆಯಲ್ಲಿದ್ದ ಕೆಳಜಾತಿಯ ಬಡ ಮಹಿಳೆಯರ ಶಿಕ್ಷಣಕ್ಕಾಗಿ ಟೊಂಕಕಟ್ಟಿ ನಿಲ್ಲುತ್ತಾರೆ. ಫಾತಿಮಾರವರು ಯಾವ ಕ್ರಾಂತಿಕಾರಿ ಗುರಿಯನ್ನು ತಲುಪಲು ಜೀವನಪರ್ಯಂತ ಶ್ರಮಿಸಿದರೋ ಆ ಗುರಿ ಇಂದಿಗೂ ಅಪೂರ್ಣವಾಗಿರುವುದು ವಿಷಾದನೀಯ. ಪ್ರಗತಿಪರ ವಿಚಾರಧಾರೆಯವರಿಗೂ ಇದೊಂದು ಸವಾಲಾಗಿಯೇ ಮುಂದುವರಿದಿದೆ. ಸಮಾಜದ ಹೊರಗೆ ನಿಂತು ಒಂದು ನೋಟ ಬೀರಿದರೆ ಎಲ್ಲವೂ ಬದಲಾದಂತೆ ಕಾಣುತ್ತದೆ. ಆದರೆ ಇಂದಿಗೂ ಭಾರತದ ಬಹುಸಂಖ್ಯಾತ ಜನರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗುಲಾಮರಾಗಿಯೇ ಮುಂದುವರಿದಿದ್ದಾರೆ.
ಚರಿತ್ರೆಯಲ್ಲಿ ಇಂದಿಗೂ ಎಂದೆಂದಿಗೂ ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರು ಶೋಷಣೆಯಿಂದ ಹೊರಬರಲು ಅಕ್ಷರವೊಂದು ಅಸ್ತ್ರವಾಗಿದೆ. ಸಮಾಜದಲ್ಲಿ ಇಂದಿಗೂ ದಲಿತರ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ಅಕ್ಷರ ಜ್ಞಾನ ಇಲ್ಲದಿರುವುದೇ ಕಾರಣವಾಗಿದೆ. ಶೋಷಣೆಯಿಂದ ಹೊರಬರಲು ಮೊತ್ತ ಮೊದಲು ಅವರಿಗೆ ಅಕ್ಷರವೇ ಅಸ್ತ್ರವಾಗುತ್ತದೆ. ಇಂದು ಮಹಿಳೆಯರು ಶಿಕ್ಷಣವಂತರಾಗುತ್ತಿರುವುದಕ್ಕೆ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆಯವರೇ ಕಾರಣವಾಗಿದ್ದಾರೆ. ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರೊಂದಿಗೆ ಹೆಜ್ಜೆ ಹೆಜ್ಜೆಗೂ ಸಹಾಯಕ್ಕೆ ನಿಂತವರು ಫಾತಿಮಾ ಶೇಖ್. ಅವರು ಫುಲೆಯವರ ಭೀಡೆವಾಡಾ ಶಾಲೆಯಲ್ಲಿ ಹುಡುಗಿಯರಿಗೆ ಪಾಠ ಮಾಡುತ್ತಿದ್ದರು. ಮನೆಮನೆಗೆ ತೆರಳಿ ಕುಟುಂಬಗಳನ್ನು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೋತ್ಸಾಹಿಸುತ್ತಿದ್ದರು. ಶಾಲೆಯ ಎಲ್ಲ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಆಕೆಯ ಕೊಡುಗೆ ಇಲ್ಲದಿದ್ದರೆ ಬಾಲಕಿಯರ ಶಾಲೆಯ ಯೋಜನೆಗಳೇ ರೂಪುಗೊಳ್ಳುತ್ತಿರಲಿಲ್ಲ. ಆದರೂ ಭಾರತದ ಇತಿಹಾಸವು ಫಾತಿಮಾ ಶೇಕ್ ಅವರನ್ನು ಕಡೆಗಣಿಸಿದೆ.
ಈ ಸಮಾಜವನ್ನಾಳಿದ ವೈದಿಕಶಾಹಿ ಸಂಸ್ಕೃತಿಯು ಸಾವಿತ್ರಿ ಮತ್ತು ಫಾತಿಮಾರನ್ನು ಕತ್ತಲೆಯಲ್ಲಿಟ್ಟಿತ್ತು. ಚರಿತ್ರೆಯು ವೈದಿಕಶಾಹಿ ಮತ್ತು ಪುರುಷಶಾಹಿಯಿಂದಲೇ ಬರೆಯಲ್ಪಟ್ಟಿದೆ. ಅದನ್ನು ಸ್ತ್ರೀಪರ ನೋಟದಿಂದ ನೋಡುವುದು ಬಹಳ ಅವಶ್ಯಕವಾಗಿದೆ.
ಫಾತಿಮಾ ಶೇಖ್ ಹೆಣ್ಣುಮಕ್ಕಳ ಶಾಲೆಗಳಿಗಾಗಿ ಮಾಡಿದ ಪರಿಶ್ರಮವನ್ನು ಸಾವಿತ್ರಿಬಾಯಿಯವರು ತಮ್ಮ ಪತ್ರದಲ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ. ಸಾವಿತ್ರಿಬಾಯಿಯವರ ಎಲ್ಲ ಜವಾಬ್ದಾರಿಗಳನ್ನು ಫಾತಿಮಾರವರು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಸಾವಿತ್ರಿಬಾಯಿಯವರ ಕೇವಲ ಮೂರು ಪತ್ರಗಳು ಮಾತ್ರ ಇಂದು ಲಭ್ಯವಾಗಿವೆ. ಸಾವಿತ್ರಿಬಾಯಿ 1956ರಲ್ಲಿ ತಮ್ಮ ಅನಾರೋಗ್ಯದ ಕಾರಣದಿಂದ ತವರಿಗೆ ಹೋಗಿರುತ್ತಾರೆ. ಆಗ ಅವರು ತಮ್ಮ ಹೆಣ್ಣುಮಕ್ಕಳ ಮತ್ತು ದಲಿತ ಮಕ್ಕಳ ಶಾಲೆಗಳ ಜವಾಬ್ದಾರಿಯನ್ನು ಫಾತಿಮಾ ಶೇಖ್ ರವರಿಗೆ ನೀಡುತ್ತಾರೆ. ಅವರ ಪತ್ರದಲ್ಲಿ ತನ್ನ ಗೈರು ಹಾಜರಿಯಿಂದ ಸಹಶಿಕ್ಷಕಿ ಫಾತಿಮಾ ಶೇಖ್ ಅವರಿಗೆ ತೊಂದರೆಯಾಗಿರಬಹುದೆಂಬ ಪ್ರಸ್ತಾಪ ಬರುತ್ತದೆ ಹಾಗೂ ತಾನು ಆದಷ್ಟು ಬೇಗ ಗುಣಮುಖಳಾಗಿ ವಾಪಸ್ ಕೆಲಸಕ್ಕೆ ಬರುವುದಾಗಿ ಬರೆಯಲಾಗಿದೆ. ಇದು ಅವರು ಶಾಲೆಯನ್ನು ಪ್ರಾರಂಭಿಸಿದ ಆರಂಭಿಕ ದಿನಗಳಾಗಿದ್ದವು.
ಎರಡು ಸಮುದಾಯದ ಹೆಣ್ಣು ಮಕ್ಕಳು ಕೂಡಿ ಬದುಕಿದ, ಕೂಡಿ ಬದುಕನ್ನು ಕಟ್ಟಿದುದಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಆದರೆ ಇನ್ನೂರು ವರ್ಷಗಳ ನಂತರದಲ್ಲಿಯೂ ಈ ಸಮಾಜ ಜಾತಿಜಾತಿಯೆಂದು ಜಗಳವಾಡುತ್ತಿದೆೆ. ಹಿಂದೂ-ಮುಸ್ಲಿಮ್ ಎಂದು, ಜಟ್ಕಾಕಟ್, ಹಲಾಲ್‌ಕಟ್, ವ್ಯಾಪಾರ, ಬಡವರ ಬದುಕಿನ ನೆಲೆಗಳನ್ನು ಕಿತ್ತುಕೊಳ್ಳುತ್ತಿರುವ ಶೋಚನೀಯ ಸಂದರ್ಭದಲ್ಲಿ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆಯವರ ಕೂಡಿ ಬಾಳಿದ, ಕಟ್ಟಿದ ಸೌಹಾರ್ದದ ಬದುಕುಗಳು ನಮಗೆ ಆದರ್ಶವಾಗಿವೆ.