ಧನಸಹಾಯ ಭಿಕ್ಷೆಯಲ್ಲ ಕಲಾವಿದರ ಹಕ್ಕು

ಪ್ರತೀ ವರ್ಷ ನಾಲ್ಕು ಸಾವಿರದಷ್ಟು ಸಾಂಸ್ಕೃತಿಕ ತಂಡಗಳು ಧನಸಹಾಯಕ್ಕೆ ಅರ್ಜಿ ಸಲ್ಲಿಸುತ್ತವೆ. ಆದರೆ ಇಲಾಖೆಯು ಅಳೆದು ತೂಗಿ ಒಂದೂವರೆ ಸಾವಿರ ತಂಡಗಳನ್ನು ಮಾತ್ರ ಪರಿಗಣಿಸುತ್ತವೆ. ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮೊದಲೆಲ್ಲಾ ವಾರ್ಷಿಕ 420 ಕೋಟಿ ಹಣ ಬಿಡುಗಡೆ ಮಾಡುತ್ತಿತ್ತು. ಆದರೆ ಕಳೆದ ಐದು ವರ್ಷಗಳಿಂದ ಅದರಲ್ಲಿ ಕಡಿತವಾಗುತ್ತಲೇ ಬಂದಿದೆ. ಈ ಸಲ ಬಜೆಟ್‌ನಲ್ಲಿ 290 ಕೋಟಿ ಹಣ ಕೊಡಲಾಗಿದೆಯಂತೆ. ಕಲಾ ಸಂಘಟನೆಗಳ ಧನಸಹಾಯಕ್ಕೆ ಬೇಕಿರುವುದು ಗರಿಷ್ಠ 20 ಕೋಟಿ. ಧನಸಹಾಯಕ್ಕೆ ಆಯ್ಕೆ ಮಾಡಲಾದ ಸಂಘಟನೆಗಳ ಹೆಸರು ಹಾಗೂ ಮೊತ್ತದ ಪಟ್ಟಿಯನ್ನು ಈಗಾಗಲೇ ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. ಆದರೆ ಹಣ ಪಾವತಿಸಲು ಮೀನಾಮೇಷ ಎಣಿಸುತ್ತಿದೆ.

Update: 2024-03-29 04:54 GMT

ಸರಕಾರ ಯಾವುದೇ ಇರಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಾಂಸ್ಕೃತಿಕ ಸಂಘಟನೆಗಳಿಗೆ ಕೊಡುವ ಅನುದಾನ ಪ್ರಾಯೋಜನೆ ಹಾಗೂ ಧನಸಹಾಯಗಳು ಭಿಕ್ಷೆಯೆಂದು ತಿಳಿದುಕೊಂಡಿವೆ. ಇಲ್ಲಿ ಯಾವುದೇ ಕಲಾವಿದರಿರಲಿ, ರಂಗತಂಡವಿರಲಿ, ಸಾಂಸ್ಕೃತಿಕ ಸಂಘಟಗಳಿರಲಿ ಯಾರೂ ಸರಕಾರದಿಂದ ದಾನ ಕೇಳುತ್ತಿಲ್ಲ. ಧನಸಹಾಯ ಮಾಡುವ ಮೂಲಕ ಸಂಘಟನೆಗಳಿಗೆ ಸರಕಾರ ಉಪಕಾರವನ್ನೂ ಮಾಡುತ್ತಿಲ್ಲ.

ಯಾಕೆಂದರೆ ಕನ್ನಡ ಮತ್ತು ಸಂಸ್ಕೃತಿಯನ್ನು ಉಳಿಸಲು, ಬೆಳೆಸಲು ಕರ್ನಾಟಕದಾದ್ಯಂತ ಇರುವ ಸಾವಿರಾರು ಸಾಂಸ್ಕೃತಿಕ ಸಂಸ್ಥೆಗಳು ಶ್ರಮಿಸುತ್ತಿವೆ. ಅನೇಕ ಕಲಾವಿದರು ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಲು ಬದುಕನ್ನೇ ಸವೆಸಿದ್ದಿದೆ. ಭಾರತದಲ್ಲಿ ಕರ್ನಾಟಕವು ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ್ದರೆ ಅದಕ್ಕೆ ಈ ನಾಡಿನಲ್ಲಿರುವ ಕಲಾವಿದರು, ಸಂಘಟಕರು ಕಾರಣರಾಗಿದ್ದಾರೆ. ಯಾವುದೇ ಸರಕಾರ ನೇರವಾಗಿ ನಾಟಕ ತಂಡ ಕಟ್ಟಿ ನಾಟಕ ಮಾಡಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಹಾಡು ಹಾಡಿ, ಕುಣಿತ ಮಾಡಿ ಕಲೆಯನ್ನು ಪ್ರದರ್ಶಿಸಲು ಆಗುವುದಿಲ್ಲ. ಇದೆಲ್ಲವನ್ನೂ ಮಾಡಬೇಕಾದವರು ಕಲಾವಿದರುಗಳು. ಕನ್ನಡದ ಸಾಂಸ್ಕೃತಿಕ ರಾಯಭಾರಿಗಳಾಗಿರುವ ಕಲಾವಿದರುಗಳ ಕಾರ್ಯಕ್ರಮಗಳಿಗೆ ಕೊಡುವ ಧನಸಹಾಯವು ಸರಕಾರದ್ದೂ ಅಲ್ಲ, ಅಧಿಕಾರಿಗಳ ಜೇಬಿನದ್ದೂ ಅಲ್ಲ. ಅದು ಜನರ ತೆರಿಗೆಯ ಹಣ. ಜನರ ಹಣವನ್ನು ಜನರಿಗಾಗಿಯೇ ಮಾಡುವ ಕಲಾಪ್ರದರ್ಶನಗಳಿಗೆ ಕೊಡುವ ಮಧ್ಯವರ್ತಿಯಾಗಿ ಮಾತ್ರ ಸರಕಾರ ಹಾಗೂ ಸಂಸ್ಕೃತಿ ಇಲಾಖೆ ಕೆಲಸ ನಿರ್ವಹಿಸಬೇಕಿದೆ. ಅದು ಜನಸೇವಕ ಸರಕಾರಗಳ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ.

ಯಾವುದೇ ಕಲಾವಿದನಿರಲಿ ಇಲ್ಲವೇ ಸಂಘಟಕರೇ ಆಗಿರಲಿ ಸರಕಾರದಿಂದ ಉಚಿತವಾಗಿ ಆರ್ಥಿಕ ಸಹಾಯ ಕೇಳುತ್ತಿಲ್ಲ. ಕಾರ್ಯಕ್ರಮಗಳನ್ನು ಆಯೋಜಿಸಿ, ಜನರಿಗೆ ಪ್ರದರ್ಶನಗಳನ್ನು ತೋರಿಸಿ ಅದಕ್ಕಾದ ಖರ್ಚನ್ನು ಕೊಡಬೇಕೆಂದು ಸರಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಮಾಡಿದ ಕೆಲಸಕ್ಕೆ ಪ್ರತಿಯಾಗಿ ಸಂಭಾವನೆ ಕೊಡುವುದು ಸರಕಾರಿ ಸಂಸ್ಥೆಗಳ ಕರ್ತವ್ಯ. ಆದರೆ ಅದನ್ನು ಪಡೆಯಲು ಹಲವಾರು ನಿಬಂಧನೆಗಳು, ಅಧಿಕಾರಿಗಳ ಕಮಿಶನ್‌ಗಳು, ರೆಕಮೆಂಡೇಶನ್‌ಗಳು ಹಾಗೂ ವಿನಂತಿ ಮನವಿಗಳು. ಸರಕಾರಿ ಕಚೇರಿಗೆ ಅಲೆದಾಟಗಳು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಮುಂಚಿತವಾಗಿ ಹಣವನ್ನೇನೂ ಕೊಡುವುದಿಲ್ಲ. ಆಯಾ ವರ್ಷ ಆಯಾ ಸಂಘಟನೆಗಳು ಮಾಡಿದ ಕಾರ್ಯಕ್ರಮಗಳನ್ನು ಆಧರಿಸಿಯೇ ಧನಸಹಾಯ ನಿರ್ಧರಿಸಲಾಗುತ್ತದೆ. ಒಂದು ಸಂಘಟನೆ ವರ್ಷ ಪೂರ್ತಿ ಮಾಡಿದ ಕಾರ್ಯಕ್ರಮಗಳ ಖರ್ಚು ರೂ. ನಾಲ್ಕು ಲಕ್ಷ ಇದ್ದರೆ ಇಲಾಖೆ ನಿಗದಿ ಪಡಿಸುವುದು ಒಂದೋ ಇಲ್ಲವೇ ಎರಡು ಲಕ್ಷ ರೂ. ಅಷ್ಟೇ. ಬಾಕಿ ಹಣವನ್ನು ಸಂಘಟಕರೇ ಭರಿಸಬೇಕು. ಹೋಗಲಿ ಈ ಹಣವನ್ನಾದರೂ ಹೇಳಿದ ಸಮಯದೊಳಗೆ ಬಿಡುಗಡೆ ಮಾಡುತ್ತಾರೆಯೇ? ಅದೂ ಇಲ್ಲ. ಎಷ್ಟೋ ಸಂಘಟಕರು ಸಾಲ ಮಾಡಿ ಕಾರ್ಯಕ್ರಮಗಳನ್ನು ಆಯೋಜಿಸಿ ಇಲಾಖೆಯ ಧನಸಹಾಯ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಕಾಯುತ್ತಲೇ ಇರುತ್ತಾರೆ. ಅರ್ಜಿ ಜೊತೆಗೆ ಸಲ್ಲಿಸಲಾಗುವ ದಾಖಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದನ್ನು ಸರಿಪಡಿಸಲು ಸಮಯ ಕೊಡದೆ ಧನಸಹಾಯವನ್ನೇ ನಿರಾಕರಿಸಿದ ಅನೇಕ ನಿದರ್ಶನಗಳಿವೆ.

ಡಿ.ಕೆ.ಶಿವಕುಮಾರರು ಸಂಸ್ಕೃತಿ ಸಚಿವರಾಗಿದ್ದಾಗ ಧನಸಹಾಯ ಕೇಳುವ ಸಂಘಟಕರನ್ನು ಕಳ್ಳರು ಎಂದು ಆರೋಪಿಸಿ ವಿವಾದ ಸೃಷ್ಟಿಸಿದ್ದರು. ಸಿ.ಟಿ.ರವಿಯವರು ಸಂಸ್ಕೃತಿ ಸಚಿವರಾಗಿದ್ದಾಗ ಕಲಾವಿದರನ್ನು ಮನೆಹಾಳರು ಎಂದು ಮೂದಲಿಸಿದ್ದರು. ಸಂಘಟಕರ ಬಗ್ಗೆ ಸರಕಾರದ ಅಭಿಪ್ರಾಯ ಹೆಚ್ಚು ಕಡಿಮೆ ಹೀಗೆಯೇ ಇದೆ. ಧನಸಹಾಯಕ್ಕೆ ಅರ್ಜಿ ಹಾಕುವವರೆಲ್ಲಾ ಪ್ರಾಮಾಣಿಕರು ಎಂದೇನಿಲ್ಲ. ಎಲ್ಲಾ ಕ್ಷೇತ್ರದಲ್ಲಿ ಇರುವಂತೆ ಇಲ್ಲಿಯೂ ಕಾರ್ಯಕ್ರಮ ಮಾಡದೇ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆಯುವವರೂ ಇದ್ದಾರೆ, ಸಾಂಸ್ಕೃತಿಕ ದಲ್ಲಾಳಿಗಳೂ ಕೆಲವರಿದ್ದಾರೆ, ಇಲಾಖೆಯ ಹಣವನ್ನು ದುರುಪಯೋಗ ಪಡಿಸಿಕೊಳ್ಳುವವರಿಗೂ ಕೊರತೆ ಇಲ್ಲ. ಆದರೆ ಎಲ್ಲರೂ ಹಾಗಲ್ಲ. ಪ್ರಾಮಾಣಿಕವಾಗಿ ಬದ್ಧತೆಯಿಂದ ಸಾಂಸ್ಕೃತಿಕ ಕಾಯಕವನ್ನು ಮಾಡುವ ಹಲವಾರು ಸಂಘಟಕರು ಹಾಗೂ ಸಂಘಟನೆಗಳು ನಾಡಿನಾದ್ಯಂತ ಇದ್ದಾವೆ. ಆದರೆ ಅಂತಹವರು ಧನಸಹಾಯ ಪಡೆಯುವುದಕ್ಕೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಿದೆ.

ರಂಗಕ್ರಿಯೆಯಲ್ಲಿ ಸಕ್ರಿಯವಾಗಿರುವ ಹಲವು ತಂಡಗಳಿಗೆ ಕೆಲವಾರು ಸಲ ಅನುದಾನ ನಿರಾಕರಿಸಲಾಗಿದೆ ಹಾಗೂ ಕೊಟ್ಟರೂ ಆನೆ ಹೊಟ್ಟೆಗೆ ಅರೆಕಾಸಿನ ಆಹಾರದಂತಿದೆ. ವರ್ಷಪೂರ್ತಿ ರಂಗಕಾಯಕ ಮಾಡುವ ಮೈಸೂರಿನ ನಟನ ತಂಡ, ಬೆಂಗಳೂರಿನ ಅಭಿನಯ ತರಂಗ, ಹೊಸಕೋಟೆಯ ಜನಪದರು ತಂಡ.. ಹೀಗೆ ನೂರಾರು ತಂಡಗಳು ಕೆಲವಾರು ಸಲ ಅನುದಾನದಿಂದ ವಂಚಿತವಾಗಿವೆ. ಆದರೂ ರಂಗಕಾಯಕದಿಂದ ವಿಮುಖವಾಗದೇ ತಮ್ಮದೇ ಸಂಪನ್ಮೂಲಗಳನ್ನು ಸಂಗ್ರಹಿಸಿ ರಂಗ ಚಟುವಟಿಕೆ ಮಾಡುತ್ತಲೇ ಬಂದಿವೆ.

ಪ್ರತೀ ವರ್ಷ ನಾಲ್ಕು ಸಾವಿರದಷ್ಟು ಸಾಂಸ್ಕೃತಿಕ ತಂಡಗಳು ಧನಸಹಾಯಕ್ಕೆ ಅರ್ಜಿ ಸಲ್ಲಿಸುತ್ತವೆ. ಆದರೆ ಇಲಾಖೆಯು ಅಳೆದು ತೂಗಿ ಒಂದೂವರೆ ಸಾವಿರ ತಂಡಗಳನ್ನು ಮಾತ್ರ ಪರಿಗಣಿಸುತ್ತವೆ. ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮೊದಲೆಲ್ಲಾ ವಾರ್ಷಿಕ 420 ಕೋಟಿ ಹಣ ಬಿಡುಗಡೆ ಮಾಡುತ್ತಿತ್ತು. ಆದರೆ ಕಳೆದ ಐದು ವರ್ಷಗಳಿಂದ ಅದರಲ್ಲಿ ಕಡಿತವಾಗುತ್ತಲೇ ಬಂದಿದೆ. ಈ ಸಲ ಬಜೆಟ್‌ನಲ್ಲಿ 290 ಕೋಟಿ ಹಣ ಕೊಡಲಾಗಿದೆಯಂತೆ. ಕಲಾ ಸಂಘಟನೆಗಳ ಧನಸಹಾಯಕ್ಕೆ ಬೇಕಿರುವುದು ಗರಿಷ್ಠ 20 ಕೋಟಿ. ಧನಸಹಾಯಕ್ಕೆ ಆಯ್ಕೆ ಮಾಡಲಾದ ಸಂಘಟನೆಗಳ ಹೆಸರು ಹಾಗೂ ಮೊತ್ತದ ಪಟ್ಟಿಯನ್ನು ಈಗಾಗಲೇ ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. ಆದರೆ ಹಣ ಪಾವತಿಸಲು ಮೀನಾಮೇಷ ಎಣಿಸುತ್ತಿದೆ.

ಕಲಾಸಂಘಟನೆಗಳಿಗೆ ಕೊಡಲು ಈ ಸಲ ಸಂಸ್ಕೃತಿ ಇಲಾಖೆಯಲ್ಲಿ ಹಣವೇ ಇಲ್ಲವಂತೆ. ಕೇವಲ ಆರೇ ಕೋಟಿ ಇದೆಯಂತೆ. ಹಾಗಾಗಿ ಘೋಷಿತ ಮೊತ್ತವನ್ನು ಕಂತಿನಲ್ಲಿ ತಂಡಗಳಿಗೆ ಪಾವತಿಸುತ್ತಾರಂತೆ.

ಸಂಸ್ಕೃತಿ ಇಲಾಖೆ ಆರ್ಥಿಕವಾಗಿ ಸಂಕಷ್ಟದಲ್ಲಿರಬಹುದು ಎಂದುಕೊಳ್ಳಬಹುದಾಗಿತ್ತೇನೋ. ಆದರೆ ಸಂಸ್ಕೃತಿ ಇಲಾಖೆಯಿಂದ ಮಾಡುತ್ತಿರುವ ಸಾಂಸ್ಕೃತಿಕ ಉತ್ಸವಗಳಿಗೆ ಹೇಗೆ ಹಣ ಬಿಡುಗಡೆಯಾಗುತ್ತಿದೆ. ಕನಕಗಿರಿ ಉತ್ಸವ, ಆನೆಗುಂದಿ ಉತ್ಸವಗಳು ಇತ್ತೀಚೆಗೆ ಅದ್ದೂರಿಯಾಗಿ ನಡೆದವು. ಸಿನೆಮಾ ಕಲಾವಿದರನ್ನು ಕರೆತಂದು ನೃತ್ಯ ಮಾಡಿಸಲಾಯಿತು. ಸ್ವತಃ ಸಂಸ್ಕೃತಿ ಇಲಾಖೆಯ ಸಚಿವರೇ ಮುತುವರ್ಜಿ ವಹಿಸಿದ್ದರು. ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಯಲ್ಲಿ ಈ ಉತ್ಸವಗಳು ಇಲ್ಲದೆ ಇದ್ದರೂ ಕೋಟ್ಯಾಂತರ ಹಣ ಹೇಗೆ ಕೊಡಲಾಯಿತು ಎಂದು ಕಲಾವಿದರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸಬೇಕಾದವರು ಚುನಾವಣೆಯಲ್ಲಿ ಬ್ಯುಜಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಶಿಕಾಂತ ಯಡಹಳ್ಳಿ

contributor

Similar News