ಅಂಗವಿಕಲರಿಗೆ ಶೀಘ್ರ ನ್ಯಾಯ ದೊರಕಲಿ

ಅನೇಕ ಗ್ರೂಪ್ ಎ ಮತ್ತು ಬಿ ಅಂಗವಿಕಲ ನೌಕರರು ಭಡ್ತಿಯಲ್ಲಿ ಮೀಸಲಾತಿ ಸಿಗದೆ ನಿವೃತ್ತರಾಗಿದ್ದಾರೆ. ಇನ್ನು ಹಲವಾರು ನೌಕರರು ನಿವೃತ್ತಿ ಹಂತ ತಲುಪುತ್ತಿದ್ದಾರೆ. ಇವರುಗಳ ಅನೇಕ ನಮ್ರತೆಯ ಮನವಿಗಳಿಗೆ ಈ ವರೆಗೆ ಮನ್ನಣೆ ಸಿಕ್ಕಿಲ್ಲ. ಅಂಗವಿಕಲರು ಸರ್ವ ರೀತಿಯಲ್ಲೂ ಅಸಹಾಯಕರು!

Update: 2023-12-29 06:01 GMT
Editor : Naufal | Byline : ಎಚ್.ಕಾಂತರಾಜ

Photo: freepik

ಎಲ್ಲಾ ಮಾನವರೂ ಹುಟ್ಟಿನಿಂದ ಘನತೆ, ಸಮಾನತೆ ಮತ್ತು ಯಾವುದೇ ತರಹದ ತಾರತಮ್ಯ ಇಲ್ಲದ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯ ವನ್ನು ಹೊಂದುವ ಕಾನೂನು ಉಳ್ಳವನಾಗಿದ್ದಾನೆ. ವಿಕಲಚೇತನ ವ್ಯಕ್ತಿಗಳು ಕೂಡ ನೈಸರ್ಗಿಕ ಹಕ್ಕುಗಳಾದ ಜೀವಿಸುವ ಹಾಗೂ ನ್ಯಾಯ ದೊರಕಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ. ಕಾರಣ ನೇರ ಮತ್ತು ಸಹಜ. ಇವು ಮಾನವನಿಗೆ ಬೇಕಾದ ಕನಿಷ್ಠ ಮೂಲ ಭೂತ ಹಕ್ಕುಗಳು. ಅಂಗವಿಕಲರನ್ನು ಪರ್ಯಾಯವಾಗಿ ವಿಶೇಷಚೇತನರು, ಅಂಗವಿಕಲರು ಎಂದು ಕರೆಯಲಾಗುತ್ತಿದೆ. ವಿಶ್ವಸಂಸ್ಥೆ ಸರ್ವಸದಸ್ಯರ ಸಭೆ 10.12.1948ರಂದು ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲು ಸಾರ್ವತ್ರಿಕ ಮಹತ್ತರವಾದ ಸಮಾಜಮುಖಿ ಘೋಷಣೆಯನ್ನು ಮಾಡಿದೆ. ಭಾರತ ಆ ಘೋಷಣೆಗೆ ಬಾಗಿ ಸಾರ್ವತ್ರಿಕ ಘೋಷಣೆಗೆ ಒಪ್ಪಿಗೆ ನೀಡಿ, ಅಳವಡಿಸಿಕೊಂಡಿದೆ. ಸಾರ್ವತ್ರಿಕ ಘೋಷಣೆಯ ಸ್ಮರಣಾರ್ಥ ವಿಶ್ವದಾದ್ಯಂತ ಮಾನವ ಹಕ್ಕುಗಳ ದಿನವಾಗಿ ಪ್ರತೀ ಡಿಸೆಂಬರ್ 10ಕ್ಕೆ ಆಚರಿಸಲಾಗುತ್ತಿದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಆಂತರಿಕ ಅರ್ಥ: ಮಾನವರೆಲ್ಲರೂ ಜನ್ಮತಃ ಸ್ವತಂತ್ರರು; ಘನತೆ ಹಾಗೂ ಹಕ್ಕುಗಳ ದೃಷ್ಟಿಯಿಂದ ಸರ್ವಸಮಾನರು ಮತ್ತು ಪ್ರತಿಯೊಬ್ಬರು ಯಾವುದೇ ತಾರತಮ್ಯವಿಲ್ಲದಂತಹ ಈ ಹಕ್ಕುಗಳಿಗೆ ಮತ್ತು ಸ್ವಾತಂತ್ರ್ಯಕ್ಕೆ ಅರ್ಹರಾಗಿದ್ದಾರೆ.

ವಿಶ್ವಸಂಸ್ಥೆಯ ಘೋಷಣೆಗೆ ಗೌರವಕೊಟ್ಟು ಅದನ್ನು ಜಾರಿಗೊಳಿಸುವ ಒಂದು ಭಾಗವಾಗಿ, ಭಾರತ ಸರಕಾರ ಪ್ರಾರಂಭದಲ್ಲಿ ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಸಂಪೂರ್ಣ ಪಾಲ್ಗೊಳ್ಳುವಿಕೆ ಮತ್ತು ಹಕ್ಕುಗಳ ರಕ್ಷಣೆ) ಕಾಯ್ದೆ, 1995ನ್ನು ರೂಪಿಸಿ ಜಾರಿಗೆ ತಂದಿತು. ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದುದು ಕಾಯ್ದೆಯ ಪೀಠಿಕೆಯಲ್ಲಿಯೇ ವಿಶ್ವಸಂಸ್ಥೆಯ ಘೋಷಣೆ ಅನ್ವಯ ಎಂದು ಉಲ್ಲೇಖಿಸಲಾಗಿದೆ. ಈ ಕಾಯ್ದೆ ಅಡಿಯಲ್ಲಿ ಅಂಗವಿಕಲ ಯಾರು, ಅವರ ಹಕ್ಕುಗಳೇನು, ಅವರ ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗ ತರಬೇತಿ, ಜೀವನ ಭದ್ರತೆ ಮೀಸಲಾತಿ ಇತ್ಯಾದಿಯಾಗಿ ವಿವರಿಸಿ ಇವುಗಳನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಅವಕಾಶ ಕಲ್ಪಿಸಲಾಯಿತು. ವಿಶೇಷ ಸೌಲಭ್ಯಗಳನ್ನು ನೀಡಲು ಮುಖ್ಯವಾದ ಷರತ್ತು ಕನಿಷ್ಠ ಶೇ. 40ರಷ್ಟು ಅಂಗವೈಕಲ್ಯತೆ. ಇದು ಸಂಸತ್ತು ಅಂಗೀಕರಿಸಿರುವ ಕೇಂದ್ರ ಸರಕಾರದ ಕಾಯ್ದೆ. ಆದ್ದರಿಂದ ಇಡೀ ದೇಶಕ್ಕೆ ಅನ್ವಯಿಸಲ್ಪಡುತ್ತದೆ. 1995 ರಲ್ಲಿ ಜಾರಿಯಾದ ಈ ಕಾಯ್ದೆಯನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ, ಕಾಯ್ದೆಗೆ ಹೊಸ ಅಂಶಗಳನ್ನು ಸೇರ್ಪಡೆ ಮಾಡಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016ನ್ನು ಅಧಿನಿಯಮಿಸಲಾಯಿತು. ಈ ಅಧಿನಿಯಮ 27.12.2016 ರಿಂದ ಜಾರಿಯಲ್ಲಿದೆ.

ಮಾನವ ಹಕ್ಕುಗಳ ರಕ್ಷಣೆಯನ್ನೇ ಆಧಾರವಾಗಿಟ್ಟುಕೊಂಡು ಜಾರಿಗೆ ತಂದ ಕಾಯ್ದೆ ಇದು ಎಂಬುದು ಸ್ಪಷ್ಟ. ಈ ಅಧಿನಿಯಮದ ಮೂಲಕ ಅಂಗವಿಕಲ ವ್ಯಕ್ತಿಗಳಿಗೆ ದೊರೆಕಿಸಿಕೊಡುವ ಇತರ ಸೌಲಭ್ಯಗಳನ್ನು ಜೊತೆಗೆ ಅಧಿನಿಯಮದ ಕಲಂ 34ರ ಅಡಿಯಲ್ಲಿ ಸರಕಾರಿ ಉದ್ಯೋಗದಲ್ಲಿ ಶೇ. 4ರಷ್ಟಕ್ಕಿಂತ ಕಡಿಮೆ ಇಲ್ಲದಂತೆ ಮೀಸಲಾತಿ ಅವಕಾಶ ಮಾಡಲಾಗಿದೆ. ಇದು ಸಮತಲವಾದ (ಊoಡಿizoಟಿಣಚಿಟ) ಮೀಸಲಾತಿ. ಈ ಮೀಸಲಾತಿ ಸಂವಿಧಾನದ ವಿಧಿ 16(1) ರ ಅಡಿ ಬರುತ್ತದೆ. ವಿಧಿ 16 (4)ರ ಅಡಿ ನೀಡುವ ಮೀಸಲಾತಿಗೆ ಇರುವ ಶೇ. 50 ಮಿತಿ ಈ ಸಮತಲವಾದ ಮೀಸಲಾತಿಗೆ ಅನ್ವಯಿಸುವುದಿಲ್ಲ. ಅದೇ ರೀತಿ 1992 ರಲ್ಲಿ ಇಂದ್ರಸಾಹ್ನಿ ಪ್ರಕರಣದಲ್ಲಿ ಭಡ್ತಿ ಮೀಸಲಾತಿಗೆ ಹೊಂದುವ ನಿರ್ಬಂಧ ವಿಧಿ 16(1) ರ ಅಡಿ ಮೀಸಲಾತಿ ಪಡೆಯುತ್ತಿರುವ ಅಂಗವಿಕಲ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಎಂದು ಸವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಮೀಸಲಾತಿ ಅಂಗವಿಕಲ ವ್ಯಕ್ತಿಗಳು ಸರಕಾರಿ ಉದ್ಯೋಗಗಳ ನೇಮಕಾತಿ ಮತ್ತು ಭಡ್ತಿಯಲ್ಲಿ ಕಡ್ಡಾಯವಾಗಿ ಪಡೆಯಲು ಅರ್ಹರು ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ನೇಮಕಾತಿ ಪದಕ್ಕೆ ವಿಶಾಲ ಅರ್ಥ ಇದೆ ಎಂದು ಅಭಿಪ್ರಾಯ ಪಟ್ಟಿದೆ. ಕಲಂ 20 ಅಭ್ಯರ್ಥಿ ಅಂಗವಿಕಲ ಎಂಬ ಅಂಶವನ್ನು ಆಧರಿಸಿ ಯಾವುದೇ ತಾರತಮ್ಯ ಸಲ್ಲದು ಎಂದು ಹೇಳುತ್ತಿದೆ. ಕಲಂ 33 (iii) ಅಂಗವಿಕಲ ವ್ಯಕ್ತಿಗಳ ಮೀಸಲಾತಿ ಸೌಲಭ್ಯಗಳ ಬಗ್ಗೆ ಕಾಲಕಾಲಕ್ಕೆ ಮೂರು ವರ್ಷಗಳಿಗೊಮ್ಮೆ ಮೀಸಲಾತಿ ಪರಿಷ್ಕರಣೆಗೆ ಅವಕಾಶ ನೀಡಿದೆ. ಹಾಗಾಗಿ ಕಲಂ 20 ಮತ್ತು 33 ಕಲಂ 34 ಅಡಿಯಲ್ಲಿರುವ ಮೀಸಲಾತಿ ಅಂಶಕ್ಕೆ ಪುಷ್ಟಿ ನೀಡುತ್ತಿವೆ ಎಂಬುದು ಇಲ್ಲಿ ಬಹು ಪ್ರಾಮುಖ್ಯವಾದ ಅಂಶ. ಕಾಯ್ದೆ ಅಡಿಯಲ್ಲಿ ನೇಮಕಾತಿ ಸಂದರ್ಭದಲ್ಲಿ ಎಲ್ಲಾ ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿ ಜಾರಿಯಲ್ಲಿದೆ. ಆದರೆ ಭಡ್ತಿಯಲ್ಲಿ ಮೀಸಲಾತಿ ಮಾತ್ರ ಈವರೆಗೆ ಗ್ರೂಪ್ ಸಿ ಮತ್ತು ಡಿ ಅಂಗವಿಕಲ ನೌಕರಿಗಷ್ಟೇ ಸೀಮಿತಗೊಳಿಸಿ ನೀಡಲಾಗುತ್ತಿದೆ. ತತ್ಪರಿಣಾಮ ಗ್ರೂಪ್ ಎ ಮತ್ತು ಗ್ರೂಪ್ ಬಿ ನೌಕರರು ಭಡ್ತಿ ಮೀಸಲಾತಿಯಿಂದ ತಾರತಮ್ಯಕ್ಕೆ ಒಳಗಾಗಿ ವಂಚಿತರಾಗಿದ್ದಾರೆ. ಭಡ್ತಿ ನೇಮಕಾತಿ ಆದ ಪ್ರತಿಯೊಬ್ಬ ನೌಕರರ ಸಹಜ ಹಕ್ಕು. ಹತ್ತಾರು ವರ್ಷಗಳಿಂದ ಯಾವುದೇ ಭಡ್ತಿಯನ್ನು ಪಡೆಯದೆಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ಕೂಡ ಭಡ್ತಿ ಮೀಸಲಾತಿಯನ್ನು ಗ್ರೂಪ್ ಎ ಮತ್ತು ಬಿ ಅಂಗವಿಕಲ ನೌಕರರು ಈವರೆಗೆ ಪಡೆಯಲಾಗಿಲ್ಲ. ಗ್ರೂಪ್ ಎ,ಬಿ,ಸಿ ಮತ್ತು ಡಿ ನೌಕರರ ಮಧ್ಯೆ ಯಾವುದೇ ತಾರತಮ್ಯವಿಲ್ಲದಂತೆ ನೇಮಕಾತಿ ಹಾಗೂ ಭಡ್ತಿಯಲ್ಲೂ ಮೀಸಲಾತಿ ನೀಡಬೇಕು ಎಂದು 2013ರಲ್ಲಿ ಸರ್ವೋಚ್ಚ ನ್ಯಾಯಾಲಯ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ವಿರುದ್ಧ ನ್ಯಾಷನಲ್ ಫೆಡೆರೇಷನ್ ಆಫ್ ದಿ ಬ್ಲೈಂಡ್ ಮತ್ತು ಇತರರು ಮೊಕದ್ದಮೆಯಿಂದ 2020ರಲ್ಲಿ ಬಂದ ಸಿದ್ದರಾಜು ವಿರುದ್ಧ ಕರ್ನಾಟಕ ಸರಕಾರ ಮತ್ತು ಇತರರು ಪ್ರಕರಣ ವರೆಗೂ ಅಂಗವಿಕಲ ನೌಕರರು ಭಡ್ತಿಗೆ ಅರ್ಹರು ಎಂದು ಭಾರತ ಸಂವಿಧಾನ ಮತ್ತು ಅಂಗವಿಕಲ ವ್ಯಕ್ತಿಗಳ ಅಧಿನಿಯಮ, 2016 ಕಾಯ್ದೆಯನ್ನು ಅರ್ಥೈಸಿ ಹೇಳಿದೆ. ಅಂಗವಿಕಲ ನೌಕರರ ಕಲ್ಯಾಣಕ್ಕಾಗಿ ಸಂಸತ್ತು ಈ ಕಾಯ್ದೆ ಅಂಗೀಕಾರ ಮಾಡಿದೆ. ನ್ಯಾಷನಲ್ ಫೆಡೆರೇಷನ್ ಮೊಕದ್ದಮೆಯಲ್ಲಿ ಗ್ರೂಪ್ ಎ,ಬಿ,ಸಿ ಮತ್ತು ಡಿ ನೌಕರರ ಮಧ್ಯೆ ಮೀಸಲಾತಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ತಾರತಮ್ಯ ಇರಕೂಡದು ಎಂದು ಹೇಳುವುದರ ಜೊತೆಗೆ ಮೀಸಲಾತಿ ಜಾರಿಗೊಳಿಸುವ ಅಧಿಕಾರಿಗಳ ಮೇಲೆ ಲೋಪ ಕಂಡುಬಂದಲ್ಲಿ ಸೂಕ್ತ ಕ್ರಮಜರುಗಿಸಲು ಸಹ ಆದೇಶಿಸಿದೆ. ಇದನ್ನು ಅನುಸರಿಸಿ ಹಲವಾರು ಮೊಕದ್ದಮೆಗಳಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯೂ ಕೂಡ ಅಂಗವಿಕಲ ವ್ಯಕ್ತಿಗಳಿಗೆ ಭಡ್ತಿಯಲ್ಲೂ ಮೀಸಲಾತಿಗೆ ಅರ್ಹರು ಎಂದು ತೀರ್ಪು ಈಗಾಗಲೇ ನೀಡಲಾಗಿದೆ. ಮಾನವ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ 1993ರಲ್ಲಿ ರಚಿಸಲಾದ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮದ ನಂತರ ಕರ್ನಾಟಕ ಸರಕಾರ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಕೂಡ 2007ರಲ್ಲಿ ಸ್ಥಾಪಿಸಿದೆ ಎಂಬುದು ಕೂಡ ಇಲ್ಲಿ ಉಲ್ಲೇಖಾರ್ಹ. ಈ ಕಾರ್ಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಗೆ ಸಲ್ಲಿಸಿರುವ ಗೌರವದ ಸಂಕೇತವೇ ಸರಿ.

ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಡ್ತಿ ಮೀಸಲಾತಿ ಕೂಡ ಮಾನವ ಹಕ್ಕು ಎಂಬುದು ಸ್ಪಷ್ಟ. ಆದರೂ ಇಲ್ಲಿಯವರೆಗೂ ರಾಜ್ಯದಲ್ಲಿ ಸರಕಾರಿ ಗ್ರೂಪ್ ಎ ಮತ್ತು ಬಿ ನೌಕರರು ಭಡ್ತಿ ಮೀಸಲಾತಿಯಿಂದ ವಂಚಿತರಾಗಿರುವುದಂತೂ ವಾಸ್ತವ. ಇವರಿಗೆ ಭಡ್ತಿಯಲ್ಲಿ ಮೀಸಲಾತಿ ಈವರೆಗೂ ಜಾರಿಮಾಡದೇ ಇರುವುದಕ್ಕೆ ಸಕಾರಣಗಳಿಲ್ಲ. ಇದು 1996ರ ಕಾಯ್ದೆ ಜಾರಿಗೆ ಬಂದನಿಂದಲೂ ಇರುವ ಸಮಸ್ಯೆ 2016ರಲ್ಲಿ ಸರ್ವೋಚ್ಚ ನ್ಯಾಯಾಲಯ ಎಲ್ಲಾ ದ್ವಂದ್ವಗಳಿಗೂ ಸ್ಪಷ್ಟನೆನೀಡಿ, ಅಂಗವಿಕಲ ನೇಮಕಾತಿ ಮತ್ತು ಭಡ್ತಿಯಲ್ಲೂ ಮೀಸಲಾತಿಗೆ ಅರ್ಹರು ಎಂದು ತೀರ್ಪು ನೀಡಿದೆ. ಗ್ರೂಪ್ ಎ ಮತ್ತು ಬಿ ಅಂಗವಿಕಲ ಸರಕಾರಿ ನೌಕರರು ಈ ತೀರ್ಪಿನ ಪ್ರಕಾರ ಅಂಗವಿಕಲ ಐಎಎಸ್ ಮತ್ತು ಸಮಾನಂತರ ಅಧಿಕಾರಿಗಳಿಗೂ ಭಡ್ತಿಯಲ್ಲಿ ಮೀಸಲಾತಿಗೆ ಅವಕಾಶವಿದೆ. ಭಡ್ತಿಯಲ್ಲಿ ಮೀಸಲಾತಿಗೆ ಅರ್ಹರಲ್ಲ ಎಂಬ ವಾದವನ್ನು ಸರ್ವೋಚ್ಚ ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದೆ. ಸಂಸತ್ತು ಕಾಯ್ದೆ ಮಾಡಿದೆ ಅಂದರೆ ದೇಶದ ಸರ್ವ ಜನರೂ ಆ ಕಾಯ್ದೆಗೆ ಒಪ್ಪಿಗೆ ನೀಡಿದಂತೆ ನ್ಯಾಯಾಂಗ ಆ ಕಾಯ್ದೆಯನ್ನು ವಿಶ್ಲೇಷಿಸಿ, ಅಂಗವಿಕಲರು ನೇಮಕಾತಿ ಮತ್ತು ಭಡ್ತಿ ಮೀಸಲಾತಿಗೂ ಹಕ್ಕುಳ್ಳವರಾಗಿದ್ದಾರೆ ಎಂದು ಹೇಳಿದೆ. ಆದರೂ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ. ಸಂಸತ್ತು ಕಾಯ್ದೆಯನ್ನು ಅಂಗೀಕರಿಸಿದೆ. ನ್ಯಾಯಾಲಯ ಕಾಯ್ದೆಯನ್ನು ಅರ್ಥೈಸಿ ಅಂಗವಿಕಲ ನೌಕರರು ನೇಮಕಾತಿ ಮತ್ತು ಭಡ್ತಿ ಮೀಸಲಾತಿಗೆ ಹಕ್ಕುಳ್ಳವರು ಎಂದು ಹೇಳಿದೆ. ಇನ್ನು ಭಡ್ತಿಯಲ್ಲಿ ಮೀಸಲಾತಿ ಗ್ರೂಪ್ ಎ ಮತ್ತು ಬಿ ಸರಕಾರಿ ನೌಕರರಿಗೆ ನೀಡುವುದು ಕಾರ್ಯಾಂಗದ ಜವಾಬ್ದಾರಿ. ವಿಳಂಬ ನೋಡಿದಾಗ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತಾಗಿದೆ.

ವಾಸ್ತವ ಸಂಗತಿ ಎಂದರೆ ಅಂಗವಿಕಲರು ಅಲ್ಪಸಂಖ್ಯಾತರು. ಅಂಗವೈಕಲ್ಯತೆ ಅಂಗವಿಕಲರ ತಪ್ಪಿನಿಂದಾದುದಲ್ಲ. ಕೊನೆಯದಾಗಿ 2010 ರ ಮಾನವ ಹಕ್ಕುಗಳ ದಿನಾಚರಣೆಯನ್ನು ಮಾನವ ಹಕ್ಕುಗಳ ರಕ್ಷಕರಿಗೆ ಸಮರ್ಪಿಸಲಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹೇಳುವಾಗ ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ. ‘‘ಮಾನವ ಹಕ್ಕುಗಳ ರಕ್ಷಕರ ದ್ವನಿಗಳು ಕೇಳಿಸದ ಹಾಗೆ ಆಗುವುದಾದರೆ ನ್ಯಾಯದ ಕಲ್ಪನೆಯು ಸಮಾಜದಲ್ಲಿ ಮುಳುಗಿ ಹೋದ ಹಾಗೆ’’ ಇದು ಸರ್ವರನ್ನೂ ಅಭಿವೃದ್ಧಿಯ ಪಥದಲ್ಲಿ ಒಳಗೊಳ್ಳುವಿಕೆಯ ಸಂದೇಶ. ಅನೇಕ ಗ್ರೂಪ್ ಎ ಮತ್ತು ಬಿ ಅಂಗವಿಕಲ ನೌಕರರು ಭಡ್ತಿಯಲ್ಲಿ ಮೀಸಲಾತಿ ಸಿಗದೆ ನಿವೃತ್ತರಾಗಿದ್ದಾರೆ. ಇನ್ನು ಹಲವಾರು ನೌಕರರು ನಿವೃತ್ತಿ ಹಂತ ತಲುಪುತ್ತಿದ್ದಾರೆ. ಇವರುಗಳ ಅನೇಕ ನಮ್ರತೆಯ ಮನವಿಗಳಿಗೆ ಈ ವರೆಗೆ ಮನ್ನಣೆ ಸಿಕ್ಕಿಲ್ಲ. ಅಂಗವಿಕಲರು ಸರ್ವ ರೀತಿಯಲ್ಲೂ ಅಸಹಾಯಕರು!

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಎಚ್.ಕಾಂತರಾಜ

ಹಿರಿಯ ವಕೀಲರು ಹಾಗೂ ಮಾಜಿ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Similar News