ಚಿನ್ನ ಎಂದರೆ ದಲಿತರ ರಕ್ತ: ತಂಗಲಾನ್

Update: 2024-08-17 06:18 GMT

ಮ್ಯಾಜಿಕಲ್ ರಿಯಲಿಸಂ ಮೂಲಕ ಕತೆ ಹೇಳುವುದು ಅಂದರೆ ಇದು!. ಕೆಜಿಎಫ್ ದುರಂತ ಬದುಕಿನ ಬಗ್ಗೆ ಪ. ರಂಜಿತ್ ಕತೆ ಹೇಳುತ್ತಾರೆ ಎಂದು ಅಂದ್ಕೊಂಡು ಸಿನೆಮಾ ನೋಡುವುದಕ್ಕೆ ಹೋದರೆ ಇದೇನಿದು ಹಾವು, ದೆವ್ವ ಮಾದರಿಯ ಹಾರರ್ ಸಿನೆಮಾ ಮಾಡಿದ್ದಾರಾ ಎಂದು ಸಹಜವಾಗಿ ಆ ಕ್ಷಣಕ್ಕೆ ಅನ್ನಿಸಿಬಿಡಬಹುದು. ಆದರೆ ಥಿಯೇಟರ್ ನಿಂದ ಹೊರ ಬಂದು 24 ಗಂಟೆ ಆದ ಬಳಿಕವೂ ಕೆಜಿಎಫ್ ಚಿನ್ನದ ಗಣಿಯ ದುರಂತ ಬದುಕು ನಿಮ್ಮ ಮೆದುಳಲ್ಲಿ ಅಳಿಸಲಾಗದೇ ಅಚ್ಚೊತ್ತಿರುತ್ತದೆ.

ಕೆಜಿಎಫ್ ಚಿನ್ನದ ಗಣಿಗಾರಿಕೆಗಾಗಿ ತಮಿಳುನಾಡಿನ ದಲಿತ ಸಮುದಾಯವನ್ನು ಜೀತವಾಗಿ ಬಳಸಿಕೊಂಡ, ಬ್ರಿಟಿಷರ ಚಿನ್ನದ ಆಸೆಗಾಗಿ ಭೂಮಿ ಅಗೆದು ಭೂಮಿಯೊಳಗೆ ಮಣ್ಣಾದ ದಲಿತರ ಕತೆಯನ್ನು ನೇರವಾಗಿ ಹೇಳಬಹುದಿತ್ತಲ್ಲವೇ? ಕೆಜಿಎಫ್ ಸೈನೆಡ್ ಗುಡ್ಡ ಹತ್ತಿದರೆ ಲಕ್ಷಾಂತರ ದಲಿತರ ಕತೆ ಸಿಗುವುದಿಲ್ಲವೇ? ಕೆಜಿಎಫ್ ಶಾಫ್ಟ್‌ನಿಂದ ನೋಡಿದರೆ ಕಾಣುವ ಕೆಂಬಾವುಟ, ನೀಲಿ ಬಾವುಟದ ಕೆಳಗಿರುವ ಸಮಾಧಿಗಳು ಹೇಳುವ ಹೋರಾಟದ ಕತೆಗಳನ್ನು ಪ. ರಂಜಿತ್ ಈ ಸಿನೆಮಾದಲ್ಲಿ ಹೇಳಬಹುದಿತ್ತಲ್ಲವೇ ಎಂಬ ಪ್ರಶ್ನೆಗಳು ಕೆಜಿಎಫ್ ನೈಜ ಕತೆ ಗೊತ್ತಿರುವವರಿಗೆ ಸಿನೆಮಾ ನೋಡುತ್ತಿದ್ದಂತೆ ಅನ್ನಿಸಬಹುದು. ಆದರೆ ಮ್ಯಾಜಿಕಲ್ ರಿಯಲಿಸಂಗೆ ಅದಕ್ಕಿಂತಲೂ ಹೆಚ್ಚಿನ ಶಕ್ತಿಯಿದೆ. ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರಲ್ಲೂ ಒಂದು ಇಮೇಜಿನೇಶನ್ ಅನ್ನು ಅಚ್ಚೊತ್ತುವ ಶಕ್ತಿಯಿದೆ. ವಾಸ್ತವಿಕತೆಯನ್ನು ಮಾಂತ್ರಿಕತೆಯಿಂದ ನಮ್ಮೊಳಗೆ ದಾಖಲಿಸುವಲ್ಲಿ ತಂಗಲಾನ್ ಯಶಸ್ವಿಯಾಗಿ ನಿರ್ವಹಿಸಿದೆ.

ಚಿನ್ನದಿಂದ ಎಲ್ಲವೂ ಸಿಗುತ್ತದೆಯೇ? ಎಂದು ಆರತಿ ಪದೇ ಪದೇ ಹೇಳುತ್ತಲೇ ಕೊನೆಕೊನೆಗೆ ‘ಚಿನ್ನದಿಂದ ನಿನ್ನ ಬದುಕು ಹಾಳಾಗುತ್ತೆ’ ಎನ್ನುವುದು ಇಡೀ ಕೆಜಿಎಫ್ ಚಿನ್ನದ ಗಣಿಗಾರಿಕೆಗಾಗಿ ಮಡಿದು, ಬದುಕಿದ ಜನರ ಕತೆಯನ್ನು ಹೇಳುವಂತಿತ್ತು.

ನಾವು ಧರಿಸುವ ‘ಚಿನ್ನ ಎಂದರೆ ಕಪ್ಪು ಜನರ ರಕ್ತ’ ಎಂಬುದನ್ನು ಪ. ರಂಜಿತ್ ಬಹಳ ಸ್ಪಷ್ಟವಾಗಿ ಹೇಳುತ್ತಾರೆ. ಬುದ್ಧನ ತಲೆ ಕಡಿದ ನಂತರ ನಮ್ಮವರನ್ನೇ ಬಳಸಿ ನಮ್ಮ ಆರತಿಯ ಹೊಟ್ಟೆ ಬಗೆಯುತ್ತಾರೆ. ಆರತಿಯ ರಕ್ತ ನದಿಯಾಗಿ ಹರಿಯುತ್ತದೆ. ಆರತಿಯ ರಕ್ತವೇ ಚಿನ್ನವಾಗುತ್ತದೆ. ಬೆಟ್ಟದ ಕೆಳಗಿನ ಬಯಲಲ್ಲೇ ರಾಜನಿಗೆ ಚಿನ್ನ ಕಾಣಿಸುತ್ತದೆ. ಕಪ್ಪು ಜನರ ಪ್ರತಿನಿಧಿ ಕರಿಚಿರತೆಯ ರಕ್ತವೂ ಚಿನ್ನವಾಗುತ್ತದೆ. ಈ ರಕ್ತ ಚಿನ್ನವಾಗಿದ್ದು ಪ. ರಂಜಿತ್ ಅವರ ಕಲ್ಪನೆಯ ಸಿನೆಮಾದ ಕತೆ ಮಾತ್ರವಲ್ಲ. ಇದು ವಾಸ್ತವ! ರಕ್ತ ಚಿನ್ನವಾಗುವುದೇ? ಹೌದು ಕೆಜಿಎಫ್‌ನ ನೂರಾರು ಅಡಿಗಳ ಕೆಳಗೆ ಸಿಗುವ ಚಿನ್ನ ಕಪ್ಪು ಜನರ ರಕ್ತ.

ಇಡೀ ದೇಶದಲ್ಲಿ ಮೊದಲು ಸಿಲಿಕೋಸಿಸ್ ಎಂಬ ಕಾಯಿಲೆ ಕೆಜಿಎಫ್ ಗಣಿಗಾರಿಕೆಯ ಪ್ರದೇಶದಲ್ಲಿ ಪತ್ತೆಯಾಯಿತು. 1934ರಲ್ಲಿ ಮೈಸೂರು ಸರಕಾರದ ಹಿರಿಯ ವೈದ್ಯ ಎಸ್. ಸುಬ್ಬಾರಾವ್ ಅವರು ಸಿಲಿಕೋಸಿಸ್ ಅನ್ನು ಪತ್ತೆ ಹಚ್ಚಿ ಸರಕಾರಕ್ಕೆ ವರದಿ ಮಾಡಿದರು. ಸಿಲಿಕೋಸಿಸ್ ಬಂದರೆ ರಕ್ತ ವಾಂತಿಯಾಗಿ ಸಾಯುತ್ತಾರೆ. ಈ ರೀತಿ ಚಿನ್ನದ ಗಣಿಗಾರಿಕೆಯೊಳಗೆ ಹೋಗಿ ರಕ್ತವಾಂತಿಯಾಗಿ ಸತ್ತ ಮೂರು ತಲೆಮಾರಿನ ದಲಿತರ ಸಂಖ್ಯೆ ಮೂರು ಲಕ್ಷ ! ಕಪ್ಪು ಜನರ ಪ್ರತಿನಿಧಿ ಆರತಿಯ ಹೊಟ್ಟೆಯಿಂದ ಚಿಮ್ಮಿದ ರಕ್ತವೇ ಚಿನ್ನವಾಗಿದ್ದು ಎಂದರೆ ಇದು !

ಒಮ್ಮೆ ಕೆಜಿಎಫ್‌ನ ಗಣಿಯೊಳಗೆ ಚಿನ್ನದ ಹುಡುಕಾಟಕ್ಕೆ ಇಳಿದರು ಎಂದರೆ ಅವರು ಮತ್ತೆ ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪ. ರಂಜಿತ್ ಹೇಳುತ್ತಾರೆ. ತಮಿಳುನಾಡಿನಲ್ಲಿ ಕೃಷಿ ಕೂಲಿಕಾರ್ಮಿಕರಾಗಿ, ಜೀತದಾಳಾಗಿ ಇದ್ದರೂ ಮೈಕೈ ತುಂಬಿಕೊಂಡಿದ್ದವರು ಕೂಲಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಚಿನ್ನದ ಗಣಿ ಕೆಲಸಕ್ಕೆ ಕೆಜಿಎಫ್‌ಗೆ ಬರುತ್ತಾರೆ. ಚಿನ್ನದ ಗಣಿಯೊಳಗೆ ಇಳಿದ ಬಳಿಕ ಅವರ ದೈಹಿಕ ಚಹರೆ ಬದಲಾಗುತ್ತದೆ. ಇದು ವಾಸ್ತವ ಕೂಡಾ.. ಎರಡು ತಲೆಮಾರಿನ 8 ಸಾವಿರ ಜನರ ಮೃತ ದೇಹಗಳೂ ಸಿಗದೆ ಚಿನ್ನದ ಗಣಿಯ ಮಣ್ಣಿನಲ್ಲಿ ಬೆರೆತು ಹೋಗಿವೆ. ಅವರು ಗಣಿಯೊಳಗೆ ಇಳಿದಿದ್ದಾರೆ, ಆದರೆ ಕನಿಷ್ಠ ಹೆಣವಾಗಿಯೂ ಮೇಲೆ ಬಂದಿಲ್ಲ !

ಕೆಜಿಎಫ್ ಚಿನ್ನದ ಗಣಿಯೊಳಗೆ 3 ಲಕ್ಷ ಕಾರ್ಮಿಕರಿದ್ದರು. ಕಾರ್ಮಿಕರೆಲ್ಲರೂ ದಲಿತರು ಮತ್ತು ಬಡವರು ಅಷ್ಟೆ! ಮೂರು ಲಕ್ಷ ಕಾರ್ಮಿಕರ ಮನೆಗಳಿಗೆ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆ ಇರಲಿಲ್ಲ. ಪಬ್ಲಿಕ್ ಟಾಯ್ಲೆಟ್ ಅನ್ನು ಲಕ್ಷಾಂತರ ಕಾರ್ಮಿಕರು ಬಳಸಬೇಕಿತ್ತು. ಟಾಯ್ಲೆಟ್ ಗುಂಡಿ ತುಂಬಿ ಮಲ ನದಿಯಾಗಿ ಹರಿಯಲಾರಂಭಿಸಿತು. ನದಿಯಾಗಿ ಹರಿದ ಮಲ ಮತ್ತೆ ಕಾರ್ಮಿಕರ ಮನೆಯೊಳಗೇ ನುಗ್ಗಿತ್ತು. ಆಗ ಕೆಜಿಎಫ್ ಗಣಿ ಕಾರ್ಮಿಕ ದಲಿತರಿಗೆ ಊರುಗೋಲಾಗಿ ಇದ್ದಿದ್ದು ಕೆಂಬಾವುಟ ಮಾತ್ರ. ಎಸ್. ಬಾಲನ್ ಆಗ ಕೆಂಬಾವುಟದ ಅಡಿಯಲ್ಲಿ ಗಣಿಕಾರ್ಮಿಕರಿಗಾಗಿ ಹೋರಾಟ ಮಾಡುತ್ತಿದ್ದ ಗಣಿ ಕಾರ್ಮಿಕನ ಮಗ. 35 ವರ್ಷದ ಯುವ ವಕೀಲನಾಗಿದ್ದ ಎಸ್. ಬಾಲನ್ ಕೆಂಬಾವುಟದ ಅಡಿಯಲ್ಲಿ ಸಾವಿರಾರು ಕಾರ್ಮಿಕರನ್ನು ಸಂಘಟಿಸಿ ಮುನ್ಸಿಪಾಲಿಟಿ ಕಚೇರಿಗೆ ಮೆರವಣಿಗೆ ಹೊರಟರು. ಒಂದು ಕೈಯಲ್ಲಿ ಕೆಂಬಾವುಟ, ಇನ್ನೊಂದು ಕೈಯಲ್ಲಿ ಮಲ ತುಂಬಿದ ಬಕೆಟ್! ಮಲ ತುಂಬಿದ ಬಕೆಟ್ ಅನ್ನು ಕಮಿಷನರ್ ತಲೆಗೆ ಸುರಿಯುವುದು ಎಂದು ನಿರ್ಧಾರವಾಗಿತ್ತು. ಮುನ್ಸಿಪಾಲಿಟಿ ಕಚೇರಿಯೊಳಗೆ ನುಗ್ಗಲು ಪೊಲೀಸರು ಬಿಡಲಿಲ್ಲ. ಲಾಠಿ ಚಾರ್ಜ್ ಮಾಡಿದರು. ತಂದಿದ್ದ ಬಕೆಟ್ ಮಲಗಳನ್ನು ಪೊಲೀಸ್ ಇನ್‌ಸ್ಪೆಕ್ಟರ್ ತಲೆಗೇ ಸುರಿಯಲಾಯಿತು. ಪೊಲೀಸರು ಬಾಲನ್ ಅವರನ್ನು ಠಾಣೆಗೆ ಎಳೆತಂದು ಹೊಡೆದರು, ಕೇಸ್ ಜಡಿದರು. ಎ1 ಆರೋಪಿಯಾಗಿದ್ದ ಬಾಲನ್ ತಾನೇ ವಕೀಲಿಕೆ ಮಾಡಿ ಕೇಸ್‌ನಿಂದ ಖುಲಾಸೆಗೊಂಡರು.

ನೀನು ಮುಖ್ಯ ತಂಗಲಾನ್ ಎಂದು ಬ್ರಿಟಿಷ್ ಅಧಿಕಾರಿ ತಂಗಲಾನ್‌ಗೆ ಚಿನ್ನ ಹುಡುಕುವ ಜವಾಬ್ದಾರಿ ವಹಿಸುತ್ತಾನೆ. ಚಿನ್ನ ಹುಡುಕಿದ ಬಳಿಕ ಅದನ್ನು ಅಗೆಯಲು ಕಾರ್ಮಿಕರನ್ನು ಕರೆದುಕೊಂಡು ಬರುವ ಜವಾಬ್ದಾರಿಯೂ ತಂಗಲಾನ್‌ದೇ ಆಗಿರುತ್ತದೆ. ಬ್ರಿಟಿಷರ ಗಣಿಗಾರಿಕೆಯಿಂದ ದಲಿತರ ಬದುಕು ಬದಲಾಯಿತು, ಸ್ವಾಭಿಮಾನದ ಬದುಕು ಮರಳಿತು ಎಂದುಕೊಂಡು ಊರಿಗೂರೇ ತಂಗಲಾನ್ ಜೊತೆ ಕೆಜಿಎಫ್‌ಗೆ ವಲಸೆ ಹೊರಟಿತು. ಈಗ ಕೆಜಿಎಫ್ ಪರಿಸ್ಥಿತಿ ಬದಲಾಗಿತ್ತು. ತಂಗಲಾನ್ ಹುಡುಕಿದ್ದ ಚಿನ್ನ ಇರುವ ಪ್ರದೇಶವನ್ನು ಕಾಯಲು ರೈಫಲ್ಸ್ ಜೊತೆಗೆ ಸೈನಿಕರನ್ನು ನಿಯೋಜಿಸಲಾಗಿತ್ತು. ಇದು ಪ. ರಂಜಿತ್ ಹೇಳುವ ಕತೆ. ಕೆಜಿಎಫ್ ಚಿನ್ನಕ್ಕೂ ನಮ್ಮನ್ನೇ ಗುರಿ ಮಾಡಿದ ಬ್ರಿಟಿಷರ ರೈಫಲ್‌ಗೂ ಸಂಬಂಧ ಇದೆ. ತಂಗಲಾನ್ ಪ್ರತಿನಿಧಿಸುವ ನಮ್ಮ ಜನರು ನಡೆಸಿದ ಗಣಿಗಾರಿಕೆಯಿಂದ 8 ಲಕ್ಷ ಕೆಜಿ ಚಿನ್ನವನ್ನು ಬ್ರಿಟಿಷರು ಬ್ರಿಟನ್‌ಗೆ ಸಾಗಿಸಿದರು. ಈ 8 ಲಕ್ಷ ಕೆಜಿ ಚಿನ್ನವನ್ನು ಎರಡನೇ ವರ್ಲ್ಡ್‌ವಾರ್ ಸಂದರ್ಭದಲ್ಲಿ ಬ್ರಿಟಿಷರು ಅಮೆರಿಕಕ್ಕೆ ನೀಡಿ ಶಸ್ತ್ರಾಸ್ತ್ರ ಖರೀದಿಸಿದರು. ಭಾರತದಲ್ಲಿ ರೈಫಲ್‌ಗಳ ಮೂಲಕವೇ ಬ್ರಿಟಿಷರ ಆಳ್ವಿಕೆ ಬಿಗಿಯಾಯಿತು. ಚಿನ್ನದ ಗಣಿಯೊಳಗೆ ಇಳಿದ ಕಾರ್ಮಿಕರು ‘ಇದು ನನ್ನದೇ ಚಿನ್ನ’ ಎಂದುಕೊಂಡು ಚಿನ್ನದ ಪುಡಿಯನ್ನು ಕೊಂಡೊಯ್ದವರನ್ನು ಬ್ರಿಟಿಷ್ ಸೆಕ್ಯೂರಿಟಿಗಳು ಶೂಟ್ ಮಾಡಿದರು. ಕಾರ್ಮಿಕರನ್ನು ಅವರದ್ದೇ ಚಿನ್ನದಿಂದ ಖರೀದಿಸಿದ ರೈಫಲ್‌ನಿಂದ ಶೂಟ್ ಮಾಡಲಾಯಿತು. 1930ರಿಂದ ಕಾರ್ಮಿಕರು ಕೆಂಬಾವುಟದ ಅಡಿಯಲ್ಲಿ ಸಂಘಟಿತರಾದರು. ಊಟ, ವೇತನಕ್ಕಾಗಿ 1946ರಲ್ಲಿ ಕೆಂಬಾವುಟ ಹಿಡಿದುಕೊಂಡು ಬ್ರಿಟಿಷರ ವಿರುದ್ಧ ಪ್ರತಿಭಟನೆ ಶುರುವಾಯಿತು. ಕೆಂಬಾವುಟದ ಕರೆಗೆ ಗಣಿಯೊಳಗೆ ಇಳಿದಿದ್ದ ಕಾರ್ಮಿಕರು ಹುತ್ತ ಬಿಟ್ಟು ಬಂದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹೊರ ಬಂದರು. ಬ್ರಿಟಿಷರು ಗುಂಡು ಹಾರಿಸಿದರು. ಆರು ಕಮ್ಯುನಿಷ್ಟ್ ನಾಯಕರು ದಲಿತರ ಊಟ, ವೇತನಕ್ಕಾಗಿ ಬ್ರಿಟಿಷರ ಗುಂಡಿಗೆ ಬಲಿಯಾದರು. ಈಗಲೂ ಕೆಂಪು ಹುತಾತ್ಮರ ಸಮಾಧಿ ಕೆಜಿಎಫ್ ಅಂಡರ್ಸನ್ ಪೇಟೆಯಲ್ಲಿದೆ. ಸೈದ್ಧಾಂತಿಕ ಬಣ್ಣವಿಲ್ಲದೆ ಇತಿಹಾಸವನ್ನು ಜನಸಮುದಾಯಕ್ಕೆ ಮ್ಯಾಜಿಕಲ್ ರಿಯಲಿಸಂ ಮೂಲಕ ಹೇಳುವುದು ಅಂದರೆ ಹೀಗೆ !

ಕೆಜಿಎಫ್ ದಲಿತರ, ಬಡವರ ದುರಂತ ಬದುಕಿನ ಕತೆಗಳಿಗೆ ಫ್ಯಾಂಟಸಿ ಮಾದರಿಯ ಮ್ಯಾಜಿಕಲ್ ರಿಯಲಿಸಂ ಯಾಕೆ ಬೇಕಾಗಿತ್ತು? ದಲಿತರು ಈ ನೆಲದ ಮೂಲನಿವಾಸಿಗಳು. ಆದರೆ ಇವರ ಹೆಸರಲ್ಲಿ ಪ್ರಾಚೀನ ಇತಿಹಾಸದ ದಾಖಲೆಗಳು ಇರುವುದಿಲ್ಲ. ಬದಲಿಗೆ ಜನಪದ ಸಾಹಿತ್ಯವಿರುತ್ತದೆ. ಕೇವಲ ಇತಿಹಾಸದಲ್ಲಿ ಮಾತ್ರವಲ್ಲ, ಜನಪದೀಯ ಕತೆಗಳು, ಸಾಂಸ್ಕೃತಿಕವಾಗಿಯೂ ಈ ನೆಲದ ಸಂಪತ್ತು ನಮಗೇ ಸೇರಿದ್ದು ಎಂಬುದನ್ನು ಜನಪದೀಯ ಕತೆಗಳನ್ನು ಇತಿಹಾಸದ ಜೊತೆ ಸೇರಿಸಿ ಹೇಳಬೇಕು ಎಂದರೆ ಮ್ಯಾಜಿಕಲ್ ರಿಯಲಿಸಂ ಒಳ್ಳೆಯ ಮಾದರಿ! ಪ. ರಂಜಿತ್ ಮತ್ತು ತಂಡ ಅದರಲ್ಲಿ ಯಶಸ್ವಿಯಾಗಿದೆ. ಮಾಸ್ ಆಡಿಯನ್ಸ್ ಅದನ್ನು ಸಾಬೀತು ಮಾಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ನವೀನ್ ಸೂರಿಂಜೆ

contributor

Similar News