ಕರ್ನಾಟಕ ಆದಿಜಾಂಬವಾಭಿವೃದ್ಧಿ ಸಂಘದ ಆಸ್ತಿ-ಪಾಸ್ತಿಗಳನ್ನು ಸರಕಾರ ಸಂರಕ್ಷಿಸಲಿ
ಕರ್ನಾಟಕದಲ್ಲಿ ಮಾದಿಗರು ಕಟ್ಟಿದಷ್ಟು ಸಂಘ ಸಂಸ್ಥೆಗಳನ್ನು ಬೇರಾವುದೇ ಸಮುದಾಯಗಳು ಕಟ್ಟಿಲ್ಲ. ಆದರೆ ಅವುಗಳಿಂದ ಈ ಸಮುದಾಯದ ಸಾಂಘಿಕ ಅಭಿವೃದ್ಧಿಗೆ ಸಿಕ್ಕಿರುವ ಕೊಡುಗೆ ಶೂನ್ಯ. ಬಹುಶಃ ಆದಿಜಾಂಬವಾಭಿವೃದ್ಧಿ ಸಂಘ ಸಹ ಇದರಿಂದ ಹೊರತಾಗಿಲ್ಲ. ಅದರೊಳಗೆ ಸಾಂಘಿಕ ಕ್ರಿಯಾಶೀಲ ಚಟುವಟಿಕೆಗಳಿಲ್ಲದೆ ಸೊರಗಿ ಹೋಗಿರುವ ಕಾರಣ ಇಂದು ಆಡಳಿತಾಧಿಕಾರಿಗಳ ನಿಯಂತ್ರಣದಲ್ಲಿದೆ.
ಕರ್ನಾಟಕದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲದೆ ಬೇರೆಯವರೂ ಜಾತಿ ಸಂಘ ಕಟ್ಟಿದ್ದಾರೆ. ಮಾದಿಗ ಮತ್ತು ಅದರ ಉಪ-ಜಾತಿಗಳು ಸಹ 1926ರ ವೇಳೆಗೆ ಆದಿಜಾಂಬವಾಭಿವೃದ್ಧಿ ಸಂಘ ಸ್ಥಾಪಿಸಿದರು. ಅದರಡಿ 07-01-1934ರಲ್ಲಿ ಬಾಪೂಜಿ ಅವರಿಂದ ವಿದ್ಯಾರ್ಥಿ ನಿಲಯ ಶಂಕುಸ್ಥಾಪನೆ ಮಾಡಲಾಯಿತು. ತರುವಾಯ ಅದು ‘ಬಾಪೂಜಿ ವಿದ್ಯಾರ್ಥಿ ನಿಲಯ’ ಎಂದು ನಾಮಕರಣವಾಯಿತು. ಇಲ್ಲಿ ಓದಿದ ಅನೇಕರು ಉನ್ನತ ಹುದ್ಧೆ ಅಲಂಕರಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿಗಳಾದ ದಿ. ಕಡಿದಾಳ್ ಮಂಜಪ್ಪ ಅವರು ಈ ಹಾಸ್ಟೆಲ್ ನಿರ್ವಹಣೆಗಾಗಿ ಬೆಂಗಳೂರಿನ ಯಶವಂತಪುರ ಹೋಬಳಿಯ ಜಾರಕ ಬಂಡೆ ಕಾವಲಿನಲ್ಲಿ 30 ಎಕರೆಗೂ ಅಧಿಕ ಭೂ ಅನುದಾನ ನೀಡಿದ್ದರು. ಮುಂದೆ, ಉಳ್ಳವರಿಗಾಗಿ ವಸತಿ ನಿವೇಶನ ನೀಡಲು ಬಿಡಿಎ ಹತ್ತಾರು ಎಕರೆ ಸ್ವಾಧೀನ ಮಾಡಿತ್ತು. ಸ್ವಾಧೀನದ ವಿರುದ್ಧ ಸರಿಯಾದ ದಿಕ್ಕಿನಲ್ಲಿ ಹೋರಾಟ ಆಗಲಿಲ್ಲ. ಇದು ಮಾದಿಗ ಸಮಾಜಕ್ಕಾದ ದೊಡ್ಡ ದುರಂತ. ಆದಿಜಾಂಬವಾಭಿವೃದ್ಧಿ ಸಂಘ ನಿಧಾನವಾಗಿ ತನ್ನ ಗುರಿ ಸಾಧಿಸುವುದನ್ನು ಮರೆತುಬಿಟ್ಟಿತು. ಅದರೊಳಗೆ ಸ್ವಹಿತಾಸಕ್ತಿ ಗುಂಪುಗಳು ಸೇರಿಕೊಂಡು ಅದನ್ನು ನಾಮಾವಶೇಷಮಾಡಿದ್ದಾರೆ. ಈ ಸಂಘದ ಅಧೀನ ಶಿಕ್ಷಣ ಸಂಸ್ಥೆಗಳು ಸಹ ಸರಿಯಾದ ನಿರ್ವಹಣೆ ಇಲ್ಲದೆ ದೈನೇಸಿ ಸ್ಥಿತಿಗೆ ತಲುಪಿವೆ.
ಬೆಂಗಳೂರಿನ ಜಾರಕ ಬಂಡೆ ಕಾವಲಿನ ಉಳಿಕೆ ಭೂಮಿಯ ಮೇಲೆ ಅನೇಕ ಭೂಗಳ್ಳರ ಮತ್ತು ಸ್ವಜಾತಿ ಕಳ್ಳರ ವಕ್ರಕಣ್ಣುಗಳು ಬಿದ್ದು ಅದರ ಅಸ್ತಿತ್ವ ಕೇವಲ ಸರಕಾರಿ ಕಾಗದದಲ್ಲಿ ಉಳಿದಿದೆ. ಮಾದಿಗ ಸಮುದಾಯದ ಓರ್ವ ಮಾಜಿ ರಾಜ್ಯ ಸಭಾ ಸದಸ್ಯರೂ ಅದರ ಪಾಲುದಾರರೆಂಬ ಆರೋಪಗಳಿವೆ. ವಕೀಲರೊಬ್ಬರು ಈ ಆಸ್ತಿಗಳಿಗೆ ರಕ್ಷಣೆ ನೀಡುವ ನೆಪದಲ್ಲಿ ಬಂದು ಫೀ ಹೆಸರಿನಡಿ ಕೋಟ್ಯಂತರ ಮೌಲ್ಯದ ನಿವೇಶನ ಬಾಚಿಕೊಂಡಿದ್ದಾರೆ. ಈ ಬಗ್ಗೆ ಸಂಘದ ಹಿಂದಿನ ಪದಾಧಿಕಾರಿಗಳು ಬೆಂಗಳೂರು ನಗರ ಅಪರಾಧ ಠಾಣೆಗೆ (Bengaluru City Crime Branch) 2017ರಲ್ಲಿ ನೀಡಿದ್ದ ದೂರು ಮೇಲೆ ದಾಖಲಾಗಿದ್ದ ದಾವೆಯನ್ನು ವಿಚಾರಣೆ ಮಾಡಿರುವ ನ್ಯಾಯಾಲಯ ‘ಯಾವುದೇ ಆರ್ಥಿಕ ವಹಿವಾಟು ನಡೆದಿಲ್ಲದ ಕುಂಟು ನೆಪವೊಡ್ಡಿ ದಾವೆಯನ್ನು ವಜಾ ಮಾಡಿದೆ’. ಕೇವಲ ಆರ್ಥಿಕ ವಹಿವಾಟುಗಳಿದ್ದರೆ ಮಾತ್ರ ಅಪರಾಧವೆನ್ನುವುದಾದರೆ ‘ನಂಬಿಕೆ ದ್ರೋಹವು’ ಸಹ ಗಂಭೀರ ಸ್ವರೂಪದ ಅಪರಾಧವೆನ್ನುವ ಅಂಶವನ್ನು ನ್ಯಾಯಾಲಯ ಪರಿಗಣಿಸದಿರುವುದು ಸಂಶಯಗಳಿಗೆ ಎಡೆಮಾಡಿದೆ. ಈ ಬಗ್ಗೆ ಅನೇಕರು ಸರಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ಕೋರಿದ್ದಾರೆ. ಆದರೆ ಫಲಿತಾಂಶ ಬದಲಾಗಿಲ್ಲ. ಬಹುಶಃ ಜನ ಪರವಾದ ಒಂದು ಬಲಿಷ್ಠ ಸಂಘ ಕಾರ್ಯನಿರ್ವಹಿಸುತ್ತಿದ್ದರೆ ಅದರ ಆಸ್ತಿಪಾಸ್ತಿಗಳ ಪಾಲನೆಗಾಗಿ ಉತ್ತರದಾಯಿತ್ವ ಇರುತ್ತದೆ. ಈ ವಿಚಾರದಲ್ಲಿ ಮಾದಿಗ ಸಮುದಾಯ ನೈತಿಕವಾಗಿ ಸೋತಿದೆ ಅಂದರೆ ತಪ್ಪಾಗದು.
ಆದಿಜಾಂಬವಾಭಿವೃದ್ಧಿ ಸಂಘ ಕೇವಲ ನಗರ ಪ್ರದೇಶಕ್ಕೆ ಸೇರಿದ ಸೀಮಿತ ಜನರ ಪಾಲುದಾರಿಕೆಯಿಂದ ಅದರ ಉನ್ನತಿ ಆಗಲಿಲ್ಲವೆಂದು ಇತಿಹಾಸತಜ್ಞ ಡಾ.ಕೆ. ಚಂದ್ರಶೇಖರ್ ಅಭಿಮತಿಸಿದ್ದಾರೆ. ಇಂದಿಗೂ ಅದರ ಪಳೆಯುಳಿಕೆ ಹಾಗೆಯೇ ಉಳಿದಿದೆ. 80ರ ದಶಕದಲ್ಲಿ ಅದರ ಕಾಯಕಲ್ಪಕ್ಕಾಗಿ ದಿ. ಬಿ.ಎಚ್, ಹನುಮಂತರಾಜು, ಜಿ. ದುಗ್ಗಪ್ಪ ಮತ್ತು ಆರ್ಯಮಿತ್ರರಂತಹ ಅನೇಕರು ಹೋರಾಡಿ ಸೋತು ಸುಣ್ಣವಾದರು. ಅವರ ಹೋರಾಟದ ಫಲಶ್ರುತಿ ಎಂಬಂತೆ ಮತ್ತೊಂದು ಆದಿ ಜಾಂಬವ ರಾಜ್ಯ ಸಂಘ ಹುಟ್ಟಿತು. ಅದರಿಂದ ಒಂದಷ್ಟು ಜನ ಜಾಗೃತಿ ಆಯಿತು; ಅದರ ಜತೆ ನೌಕರರ ಸಂಘವೂ ಬಂತು. ಅಲ್ಲಿಯೂ ಉತ್ತರ-ದಕ್ಷಿಣ ಎಂಬ ಪ್ರಾದೇಶಿಕ ಭಿನ್ನಾಭಿಪ್ರಾಯಗಳಿಂದ ನೌಕರರ ಸಂಘ ಜೀವಬಿಟ್ಟಿತು. ಇದಕ್ಕೆ ಪರ್ಯಾಯವಾಗಿ ಬಂದ ಸಮತಾ ಜೀವನ ಶಿಕ್ಷಣ ಸಂಘವೂ ಸಹ ರಾಜಕೀಯ ಉಪಟಳಕ್ಕೆ ಬಲಿಯಾಯಿತು. ಕರ್ನಾಟಕದಲ್ಲಿ ಮಾದಿಗರು ಕಟ್ಟಿದಷ್ಟು ಸಂಘ ಸಂಸ್ಥೆಗಳನ್ನು ಬೇರಾವುದೇ ಸಮುದಾಯಗಳು ಕಟ್ಟಿಲ್ಲ. ಆದರೆ ಅವುಗಳಿಂದ ಈ ಸಮುದಾಯದ ಸಾಂಘಿಕ ಅಭಿವೃದ್ಧಿಗೆ ಸಿಕ್ಕಿರುವ ಕೊಡುಗೆ ಶೂನ್ಯ. ಬಹುಶಃ ಆದಿಜಾಂಬವಾಭಿವೃದ್ಧಿ ಸಂಘ ಸಹ ಇದರಿಂದ ಹೊರತಾಗಿಲ್ಲ. ಅದರೊಳಗೆ ಸಾಂಘಿಕ ಕ್ರಿಯಾಶೀಲ ಚಟುವಟಿಕೆಗಳಿಲ್ಲದೆ ಸೊರಗಿ ಹೋಗಿರುವ ಕಾರಣ ಇಂದು ಆಡಳಿತಾಧಿಕಾರಿಗಳ ನಿಯಂತ್ರಣದಲ್ಲಿದೆ.
ಇದರ ಪುನರ್‌ಸಂಘಟನೆಗಾಗಿ ಅನೇಕರು ಹೋರಾಡಿದ್ದರೂ ಅದರ ಸಾಂಸ್ಥಿಕ ಸಮಸ್ಯೆಗಳಿಂದ ಹೊರಬರಲಾಗದೆ ಒದ್ದಾಡುತ್ತಿದೆ. ಈ ನಿಟ್ಟಿನಲ್ಲಿ ಮಾಜಿ ಕುಲಪತಿ ದಿ.ಒ. ಅನಂತರಾಮಯ್ಯ ಒಂದಷ್ಟು ಸಂಘಟಿಸಿದರೂ ಚುನಾವಣೆ ನಡೆಯಲಿಲ್ಲ. ಈಗ ಸರಕಾರ, ಒಂದು ಐತಿಹಾಸಿಕ ಶೋಷಿತರ ಸಂಘವೊಂದು ಅದರ ಗಾಲಿ ಮೇಲೆ ಮುನ್ನಡೆಸಲು ಒಂದು ಪುಣ್ಯದ ಕೆಲಸ ಮಾಡಬೇಕಿದೆ. ಅದಕ್ಕಾಗಿ ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಆದಿಜಾಂಬವಾಭಿವೃದ್ಧಿ ಸಂಘವನ್ನು ಪುನರ್‌ಸಂಘಟಿಸಲು ಮುಂದಾಗಬೇಕು.
ರಾಜಧಾನಿಯಲ್ಲಿ ಮಹಾತ್ಮಾ ಗಾಂಧಿಯವರ ಹೆಸರಿನ ಒಂದು ವಿದ್ಯಾರ್ಥಿ ನಿಲಯ ಸರಿಯಾದ ನಿರ್ವಹಣೆ ಇಲ್ಲದೆ ಇಂದು ಮುಚ್ಚಲ್ಪಟ್ಟಿದೆ. ಇಂದಿಗೂ ದೂರದ ಊರು-ಕೇರಿಗಳಿಂದ ಬರುವ ಮಾದಿಗರಿಗೆ ಆಶ್ರಯ ನೀಡುವ ತಾಣ ಇದಾಗಿತ್ತು. ಅದರ ಜೊತೆಗೆ ಆದಿಜಾಂಬವಾಭಿವೃದ್ಧಿ ಸಂಘದ ಎಲ್ಲಾ ಆರ್ಥಿಕ ವಹಿವಾಟುಗಳನ್ನು ತಪಾಸಣೆ ಮಾಡಿ ದುರುಪಯೋಗವಾಗಿದ್ದರೆ ತಪ್ಪಿತಸ್ಥರ ಮೇಲೆ ಸರಕಾರ ಕಾನೂನು ಕ್ರಮ ಜರುಗಿಸಬೇಕಿದೆ. ಕೆಲವೇ ಮಾದಿಗ ಮತ್ತು ಅದರ ಉಪ ಜಾತಿಗಳ ರಾಜಕಾರಣಿಗಳಿಗೆ ತಾಯ್ತನದ ಹೃದಯವಿದೆ; ಇನ್ನುಳಿದವರು ಈ ಸಮಾಜದ ಆಸ್ತಿಪಾಸ್ತಿಗಳ ರಕ್ಷಣೆ ಮಾಡುವ ವಿಚಾರದಲ್ಲಿ ಕುಂಭಕರ್ಣ ನಿದ್ರೆಯಲ್ಲಿದ್ದಾರೆ. ಪರಿಶಿಷ್ಟರೊಳಗಿರುವ ಶೋಷಿತ ಸಮಾಜಗಳು ಪ್ರಜಾಪ್ರಭುತ್ವದೊಳಗೆ ಆರೋಗ್ಯಕರವಾದ ಪೈಪೋಟಿ ನೀಡುತ್ತಿವೆ. ಈ ನಿಟ್ಟಿನಲ್ಲಿ ಮಾದಿಗ ಸಮುದಾಯ ಅಂಬೆಗಾಲಿಡುತ್ತಿದೆ ಅಂದರೆ ತಪ್ಪಾಗದು.
ಮಾದಿಗ ಮತ್ತು ಅದರ ಉಪಜಾತಿಗಳ ಅಭಿವೃದ್ಧಿಗೆ ಒಳ ಮೀಸಲಾತಿ ಎಷ್ಟು ಪೂರಕವೋ ಈ ಸಮುದಾಯಗಳ ಸಾಂಸ್ಥಿಕ ಸಂಘ ಮತ್ತು ಅದರ ಆಸ್ತಿಪಾಸ್ತಿಗಳ ಸಂರಕ್ಷಣೆಯೂ ಆಗಬೇಕಿದೆ. ಇದರಿಂದ ಮುಂದಿನ ತಲೆಮಾರಿಗೆ ಒಂದು ಸಾಂಘಿಕ ಅಧಿವೃದ್ಧಿಯ ಸೊಡರನ್ನು ನೀಡಿದಂತಾಗುತ್ತದೆ. ಈ ಹಿಂದೆ, ರಾಜರು-ಸರಕಾರ ಇವರ ಮಠಗಳಿಗೆ ನೀಡಿದ್ದ ಆಸ್ತಿಗಳೂ ಮಂಗಮಾಯವಾಗಿವೆ. ಅವುಗಳ ಸಂರಕ್ಷಣೆಗೆ ಸರಕಾರ ಮುಂದಾಗಬೇಕಿದೆ. ದಿನಾಂಕ:10-02-2024 ರಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಅವರ ಸಂಪುಟದ ಸಚಿವರಿಗೆ 10 ಪುಟಗಳ ಮನವಿಯನ್ನು ಸಿದ್ಧಪಡಿಸಿ ವೈಯಕ್ತಿಕವಾಗಿ ಸಲ್ಲಿಸಲಾಗಿದೆ. ಅಲ್ಲಿರುವ ಬಹು ಆಯಾಮಗಳ ಅಂಶಗಳನ್ನು ಮುಕ್ತ ಮನಸ್ಸಿನಿಂದ ಸರಕಾರ ಚರ್ಚಿಸಿ ಈ ಸಮುದಾಯಗಳ ದಯನೀಯ ಸ್ಥಿತಿಗಳಿಗೆ ಮರುಗುವ ಮಾನವೀಯ ಮನಸ್ಸಿದ್ದರೆ ಖಂಡಿತವಾಗಿಯೂ ಒಂದಷ್ಟು ರಚನಾತ್ಮಕವಾದ ಬದಲಾವಣೆ ಕಾಣಬಹುದು. ಆದುದರಿಂದ, ಈ ಕೆಳಕಂಡ ಕಾರ್ಯಸೂಚಿಗಳ ಅನುಷ್ಠಾನಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮುಂದಾಗಬೇಕಿದೆ:
1. ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಆದಿಜಾಂಬವಾಭಿವೃದ್ಧಿ ಸಂಘವನ್ನು ಪುನರ್‌ಸಂಘಟಿಸಲು ಅದರ ಚುನಾಯಿತ ಹೊಸ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಮಾಡುವುದು.
2. ಆದಿಜಾಂಬವಾಭಿವೃದ್ಧಿ ಸಂಘದ ಆಸ್ತಿಯಾದ ಜಾರಕ ಬಂಡೆ ಕಾವಲ್ ಜಮೀನು ಒತ್ತುವರಿ ತಡೆದು ಬಿಡಿಎಗೆ ಭೂ ಸ್ವಾಧೀನವಾದ ಮೇಲೆ ಉಳಿದಿರುವ ಭೂಮಿಯನ್ನು ಗುರುತಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ಕಾರ್ಯಪಡೆ ರಚಿಸಬೇಕು.
3. ಈ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವವರ ವಿರುದ್ಧ ಸರಕಾರ ನಿಷ್ಠೂರ ಕ್ರಮ ಜರುಗಿಸಬೇಕು.
4. ವಕೀಲರೊಬ್ಬರು ಕಾನೂನುಬಾಹಿರವಾಗಿ ಪಡೆದಿರುವ ಭೂಮಿಯನ್ನು ಸಂಘದ ವಶಕ್ಕೆ ಪಡೆಯಲು ಸರಕಾರ 1ನೇ ಹೆಚ್ಚುವರಿ ಸಿಎಂಎಂ ನ್ಯಾಯಾಲಯದ ತೀರ್ಪಿನ ವಿರುದ್ಧ ವಿಳಂಬ ವಿನಾಯಿತಿ ಅರ್ಜಿ ಜೊತೆ ನ್ಯಾಯಾಲಯದ ಮುಂದೆ ವಿಶೇಷ ಮೇಲ್ಮನವಿ ಸಲ್ಲಿಸಲು ವಿಶೇಷ ಅಭಿಯೋಜಕರನ್ನು ನೇಮಿಸಬೇಕು.
5. ರಾಜದಾನಿಯ ಕೇಂದ್ರ ಸ್ಥಾನದಲ್ಲಿ ಸ್ಥಗಿತವಾಗಿರುವ ಐತಿಹಾಸಿಕ ಬಾಪೂಜಿ ವಿದ್ಯಾರ್ಥಿನಿಲಯಕ್ಕೆ ಕಾಯಕಲ್ಪ ನೀಡಿ ಎಂದಿನಂತೆ ಅದರ ಅನುದಾನದಡಿ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಅನುಮತಿಸಬೇಕು.
6. ವಿವಿಧ ಜಿಲ್ಲೆಗಳಲ್ಲಿರುವ ಈ ಸಮುದಾಯದವರು ನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಿಗೆ ಕಾಯಕಲ್ಪ ನೀಡಿ ಎಂದಿನಂತೆ ಅವುಗಳ ಹಿಂದಿನ ಅನುದಾನದಡಿ ಕಾರ್ಯನಿರ್ವಹಿಸಲು ಅನುಮತಿಸಬೇಕು.
7. ಮಾದಿಗ ಮತ್ತು ಅದರ ಉಪಸಮುದಾಯಗಳು ನಡೆಸುತ್ತಿರುವ ಅಸಹಾಯಕ ಶಿಕ್ಷಣ ಸಂಸ್ಥೆಗಳಿಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ಕಾರ್ಯಕ್ರಮದಡಿ ಅನುದಾನ ನೀಡಿ ಅವುಗಳನ್ನು ಸಂರಕ್ಷಣೆ ಮಾಡಬೇಕಿದೆ.
8. ಮಾದಿಗ ಮತ್ತು ಅದರ ಉಪ ಸಮುದಾಯಗಳ ಸಾಮಾಜಿಕಾಭಿವೃದ್ಧಿಗೆ ಮಗ್ಗುಲ ಮುಳ್ಳಾಗಿರುವ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ನಿಷ್ಠೂರ ಕಾನೂನು ಕ್ರಮ ಜರುಗಿಸಬೇಕಿದೆ.
ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ‘ಭರತ ಭೂಷಣ ಮುದ್ರಣ ಪ್ರೆಸ್’ ಅನ್ನು ಪೀಪಲ್ ಎಜುಕೇಷನ್ ಸೊಸೈಟಿಗೆ ದಾನ ನೀಡಿದ್ದರು. ಆದರೆ ಅವರ ಮಗ ಯಶವಂತರು ಈ ಪ್ರೆಸ್ ತನಗೆ ಬೇಕೆಂದು ಹಠಮಾಡಿದರು. ಆಗ ಅಂಬೇಡ್ಕರ್ ಮಗನಿಗೆ ಪತ್ರ ಬರೆದು ‘ನುಡಿದಂತೆ ನಡೆಯದೆ ಹೋದರೆ ನಿನ್ನ ವಿರುದ್ಧ ದಾವೆ ಹೂಡುವೆ’ ಎಂದು ಎಚ್ಚರಿಸಿದ್ದರು. ಇಂತಹ ಸಾಮಾಜಿಕಾಭಿವೃದ್ಧಿ ಬದ್ಧತೆಯ ನಾಯಕತ್ವ ಮಾದಿಗ ಸಮುದಾಯದೊಳಗೆ ಕಾಲದಿಂದ ಕಾಲಕ್ಕೆ ಹುಟ್ಟಿದ್ದರೆ ಬಹುಶಃ ಈ ಸಮುದಾಯದ ಸಾಂಸ್ಥಿಕ ಸಮಸ್ಯೆಗಳಿಗೆ ಪ್ರಜಾಪ್ರಭುತ್ವದಲ್ಲಿ ಪರಿಹಾರ ಸಿಗುತ್ತಿದ್ದವು. ಈಗಲೂ ಕಾಲ ಮಿಂಚಿಲ್ಲ. ಸರಕಾರ ಮಾದಿಗ ಸಮುದಾಯದ ಶಾಸನಬದ್ಧ ಆಸ್ತಿಪಾಸ್ತಿಗಳ ಸಂರಕ್ಷಣೆಗೆ ಮುಂದಾದರೆ ಅದಕ್ಕಿಂತ ಪುಣ್ಯ ಕಾರ್ಯಬೇರೊಂದಿಲ್ಲ.