46 ಮಂದಿಗೆ ಅಕ್ರಮ ಪಡಿತರ ಚೀಟಿ: ಬಿಪಿಎಲ್ ಕಾರ್ಡ್‌ಗಾಗಿ ಕಾಯಿಲೆ ನೆಪ
ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿಗೊಂಡ ದಿನದಿಂದಲೇ (ಬಡತನ ರೇಖೆಗಿಂತ ಕೆಳಗಿರುವ) ಬಿಪಿಎಲ್ ಪಡಿತರ ಚೀಟಿ ನೋಂದಣಿದಾರರ ಸಂಖ್ಯೆ ದುಪ್ಪಟ್ಟಾಗಿದೆ. ಅದರಲ್ಲೂ, ಹೊಸ ಕಾರ್ಡ್‌ಗಾಗಿ ಅರ್ಜಿದಾರರು 3 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವವರ ನಡುವೆಯೂ ಅರ್ಹತೆ ಹೊಂದಿಲ್ಲದ 46 ಮಂದಿಗೆ ಕಾಯಿಲೆ ನೆಪದಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಮಂಜೂರು ಮಾಡಿರುವ ಘಟನೆ ಆಹಾರ ಇಲಾಖೆಯಲ್ಲಿ ನಡೆದಿರುವುದು ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಆಹಾರ ಶಿರಸ್ತೇದಾರನಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ತಿಮ್ಮಯ್ಯ ಎಂಬವರು, ಲಂಚ ಪಡೆದು ವಿಶೇಷ ‘ವೈದ್ಯಕಿಯ ಕೇಸ್’ ವಿನಾಯಿತಿ ದುರ್ಬಳಕೆ ಮಾಡಿಕೊಂಡು ಅನಧಿಕೃತವಾಗಿ 46 ಬಿಪಿಎಲ್ ಚೀಟಿ ಕೊಟ್ಟಿರುವುದು ಚಿಕ್ಕಮಗಳೂರು ಜಿಲ್ಲಾಧಿಕಾರಿ, ಆಹಾರ ಇಲಾಖೆ ಆಯುಕ್ತರಿಗೆ ಕೊಟ್ಟಿರುವ ವರದಿಯಲ್ಲಿ ಬಹಿರಂಗವಾಗಿದೆ.
ರಾಜ್ಯ ಸರಕಾರ ಹೊಸ ಪಡಿತರ ಚೀಟಿ ಮಂಜೂರು, ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೀಗಾಗಿ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಮೂರು ವರ್ಷಗಳಿಂದ ಕಾಯುತ್ತಿರುವವರಿಗೆ ಹಾಗೂ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವವರಿಗೆ ತೀವ್ರ ನಿರಾಸೆಯಾಗಿದೆ.
ಆದರೆ, ಕ್ಯಾನ್ಸರ್, ಮೂತ್ರಪಿಂಡ(ಕಿಡ್ನಿ), ಹೃದ್ರೋಗ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸ ಬಿಪಿಎಲ್ ನೀಡುವಂತೆ ಆಹಾರ ಇಲಾಖೆಗೆ ಸರಕಾರ ಅನುಮತಿ ಕೊಟ್ಟಿದೆ. ಹಾಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ 3 ವರ್ಷದ ಹಿಂದೆ ಸಲ್ಲಿಕೆಯಾದ ಅರ್ಜಿಗಳು ಮತ್ತು ಈಗ ಸಲ್ಲಿಸುವ ಅರ್ಜಿಯನ್ನು ವಿಶೇಷ ‘ವೈದ್ಯಕಿಯ ಕೇಸ್’ ಎಂದು ಪರಿಗಣಿಸಿ ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ.
ಇದನ್ನೇ ದುರ್ಬಳಕೆ ಮಾಡಿಕೊಂಡ ಆಹಾರ ಶಿರಸ್ತೇದಾರ್, ‘ವೈದ್ಯಕಿಯ ಕೇಸ್’ ಅಡಿ ಸಲ್ಲಿಕೆಯಾಗಿರುವ 2 ಅರ್ಜಿಗಳಿಗೆ ಕಾರ್ಡ್ ನೀಡಬೇಕಿತ್ತು. ಆದರೆ, ಎರಡು ಕಾರ್ಡ್ ಬದಲಾಗಿ ‘ವೈದ್ಯಕಿಯ ಕೇಸ್’ ದುರ್ಬಳಕೆ ಮೂಲಕ 46 ಬಿಪಿಎಲ್ ಪಡಿತರ ಚೀಟಿಯನ್ನು ಲಾಗಿನ್‌ನಲ್ಲಿ ನೀಡಿರುವುದು ಕಂಡುಬಂದಿದೆ. ಕರ್ತವ್ಯದಲ್ಲಿ ಪದೇ ಪದೆ ಲೋಪವೆಸಗುತ್ತಿರುವುದು, ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ತಿದ್ದಿಕೊಂಡಿಲ್ಲ. ಹಾಗಾಗಿ, ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮ ಅನ್ವಯ ಈ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಇಲಾಖೆಗೆ ಜಿಲ್ಲಾಧಿಕಾರಿ ಕೋರಿದ್ದಾರೆ.
ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಅರ್ಜಿ ಸಲ್ಲಿಸಿದರೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್ ಸಿಗಲಿದೆ. ಆಧಾರ್ ಕಾರ್ಡ್, ಆದಾಯ ದೃಢೀಕರಣ ಪತ್ರ, ಮನೆ ಬಾಡಿಗೆ ದಾಖಲೆ ಜತೆಗೆ ಕಡ್ಡಾಯವಾಗಿ ವೈದ್ಯರಿಂದ ಆರೋಗ್ಯ ಸಂಬಂಧಿಸಿದ ಪ್ರಮಾಣಪತ್ರ ಸಲ್ಲಿಸಿ ಆಹಾರ ನಿರೀಕ್ಷಕರ ಗಮನಕ್ಕೆ ತರಬೇಕು. ಬಳಿಕ, ಎಲ್ಲ ದಾಖಲೆ ಪರಿಶೀಲಿಸಿದ ಬಳಿಕ ಆಹಾರ ನಿರೀಕ್ಷಕ, ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ.
ನಂತರ, ಆರೋಗ್ಯ ಉದ್ದೇಶಕ್ಕೋ ಅಥವಾ ಇನ್ಯಾವುದಕ್ಕೋ ಎಂಬುದರ ಬಗ್ಗೆ ಪರಿಶೀಲಿಸಲು ರೋಗಿಯ ಮನೆಗೆ ಭೇಟಿ ನೀಡುತ್ತಾರೆ. ಆರೋಗ್ಯ ಸಮಸ್ಯೆಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಅರ್ಜಿ ಅನುಮೋದನೆಗೆ ಉಪನಿರ್ದೇಶಕರಿಗೆ ಕಳುಹಿಸುತ್ತಾರೆ. ಅಂತಿಮವಾಗಿ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿ ಪಡೆದು ಕಾರ್ಡ್ ನೀಡುತ್ತಾರೆ.
ಕೇಂದ್ರ ಸರಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗುತ್ತಿದೆ. ಸರಕಾರಿ ನೌಕರಿ ಪಡೆದವರು, ನಾಲ್ಕು ಚಕ್ರಗಳ ವಾಹನ ಹೊಂದಿರುವವರು, ಐಟಿ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿಲ್ಲ. ನಿರಂತರವಾಗಿ ಪರಿಶೀಲನೆ ನಡೆದಿದ್ದು, ತಪ್ಪು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ ಎಂದು ಆಹಾರ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದಿನ ಸರಕಾರದ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ಬಿಪಿಎಲ್ ಕಾರ್ಡ್‌ಗಳಿಗೆ ಸಲ್ಲಿಕೆಯಾಗಿದ್ದ 2.95ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದವು. ಅದರಲ್ಲಿ 2,36,162 ಅರ್ಹರಿದ್ದು, 56,930 ಅರ್ಜಿಗಳು ಬಿಪಿಎಲ್ ವ್ಯಾಪ್ತಿಯಲ್ಲಿ ಇಲ್ಲ. ಅರ್ಹರ ಪೈಕಿ, 62 ಸಾವಿರ ಕಾರ್ಡ್‌ಗಳಿಗೆ ಈಗಾಗಲೇ ಆಹಾರಧಾನ್ಯ ಹಂಚಿಕೆ ಮಾಡಲಾಗುತ್ತಿದೆ. ಇನ್ನೂ, ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೇ ಅರ್ಜಿ ಸಲ್ಲಿಸಿದರೂ ತಕ್ಷಣ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತದೆ. ಇದನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಕೆ.ಎಚ್.ಮುನಿಯ್ಪ, ಆಹಾರ ಸಚಿವ