ಸರಕಾರದ ನೆರವಿನಿಂದ ವೈದ್ಯಕೀಯ ಪದವಿ ಪಡೆಯುವವರಿಗೆ ಷರತ್ತುಗಳನ್ನು ವಿಧಿಸಿ

Update: 2023-07-13 18:48 GMT

ಸಾಂದರ್ಭಿಕ ಚಿತ್ರ |Photo : PTI

ಮಾನ್ಯರೇ,

ರಾಜ್ಯ ಸರಕಾರ ಅನೇಕ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದೆ. ಹಾಗೆಯೇ ಹಲವಾರು ಜಿಲ್ಲೆಗಳಲ್ಲಿ ನೂತನವಾಗಿ ಆಸ್ಪತ್ರೆಗಳನ್ನು ನಿರ್ಮಿಸಲು ಹಾಲಿ ಇರುವ ಆಸ್ಪತ್ರೆಗಳ ವಿಸ್ತರಣೆ ಮಾಡಲು ಯೋಜನೆಗಳನ್ನು ರೂಪಿಸಿದೆ. ಸರಕಾರದ ವತಿಯಿಂದ ಕಟ್ಟಡಗಳನ್ನು ಕಟ್ಟಬಹುದು, ವೈದ್ಯಕೀಯ ಸಲಕರಣೆಗಳನ್ನು ಒದಗಿಸಬಹುದು, ಆಯಾಗಳನ್ನು ಮತ್ತು ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಬಹುದು ಆದರೆ ವೈದ್ಯರೇ ಆಸ್ಪತ್ರೆಗಳಿಗೆ ದೊರಕುತ್ತಿಲ್ಲ.

ನಮ್ಮ ರಾಜ್ಯದಲ್ಲಿ ಸರಕಾರದ ನೆರವಿನಿಂದ ಸಾವಿರಾರು ಜನ ವೈದ್ಯರಾಗುತ್ತಾರೆ. ಆದರೆ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸರ್ಜನ್‌ಗಳು, ಪರಿಣಿತ ವೈದ್ಯರು ತಮ್ಮ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಹೋಗಿ ನೆಲೆಸುತ್ತಾರೆ. ಇಲ್ಲದಿದ್ದರೆ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣಕ್ಕಾಗಿ ದುಡಿಯುತ್ತಾರೆ. ರಾಜ್ಯ ಸರಕಾರ ಹೆಚ್ಚಿನ ಸಂಬಳವನ್ನು ಕೊಡಲು ಮುಂದಾದರೂ ಸರಕಾರಿ ಆಸ್ಪತ್ರೆಗಳಿಗೆ ಯಾರು ಬರುತ್ತಿಲ್ಲ. ಇದರಿಂದಾಗಿ ವೈದ್ಯರ ಕೊರತೆ ಹೆಚ್ಚಿನ ಪ್ರಮಾಣದಲ್ಲಿದೆ.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವ ವೈದ್ಯರುಗಳ ಸಂಖ್ಯೆ ಬಹಳಷ್ಟು ಕ್ಷೀಣಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ನಾಗರಿಕರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ವಿದೇಶಗಳಲ್ಲಿ ನೆಲೆಸಿ ಅಲ್ಲಿ ಕ್ರಿಕೆಟ್ ಪಂದ್ಯಗಳು ನಡೆದರೆ, ಇಲ್ಲವೇ ನಮ್ಮ ದೇಶದ ಪ್ರತಿಷ್ಠಿತ ನಾಯಕರು ಭೇಟಿಕೊಟ್ಟ ಸಂದರ್ಭದಲ್ಲಿ ಭಾರತದ ಬಾವುಟವನ್ನು ಹಿಡಿದು ಸಂಭ್ರಮದಿಂದ ಹಾರಾಡಿಸಿದರೆ ನಮ್ಮ ದೇಶಕ್ಕೇನು ಲಾಭವಿಲ್ಲ. ಈ ಹಿನ್ನೆಲೆಯಲ್ಲಿ ನೀಟ್ ವ್ಯವಸ್ಥೆಯಲ್ಲಿ ಪ್ರವೇಶವನ್ನು ಪಡೆದು ಮುಂದೆ ಎಂ.ಬಿ.ಬಿ.ಎಸ್. ಪದವಿಯನ್ನು ಮುಗಿಸಿ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಮೂಲಕ ಸ್ನಾತಕೋತ್ತರ ಪದವಿಗಳನ್ನು ಪಡೆಯುವವರಿಗೆ ಕನಿಷ್ಠ 5 ವರ್ಷಗಳ ಕಾಲ ದೇಶದ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವ್ಯವಸ್ಥೆಯಾಗಬೇಕು. ಒಂದು ವೇಳೆ ಅವರು ಸೇವೆ ಸಲ್ಲಿಸಲು ಒಪ್ಪದಿದ್ದರೆ ಇವರ ವಿದ್ಯಾಭ್ಯಾಸಕ್ಕೆ ಸರಕಾರ ಮಾಡಿರುವ ಖರ್ಚಿನ ಲೆಕ್ಕ ಹಾಕಿ ಅವರಿಂದ ಮರಳಿ ಪಡೆದನಂತರವೇ ಅವರಿಗೆ ವಿದೇಶಕ್ಕೆ ತೆರಳಲು ನಿರಾಕ್ಷೇಪಣಾ ಪತ್ರಗಳನ್ನು ನೀಡಬೇಕು. ಈ ರೀತಿಯ ಕ್ರಮಗಳನ್ನು ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿರುವುದಿಲ್ಲ. ಸರಕಾರ ಖರೀದಿಸುವ ವೈದ್ಯಕೀಯ ಸಲಕರಣೆಗಳ ನಿರ್ವಹಣೆ ಮಾಡುವ ತಾಂತ್ರಿಕ ನಿಪುಣರು ಇಲ್ಲದೆ ಎಲ್ಲವೂ ತುಕ್ಕು ಹಿಡಿದು ಮೂಲೆ ಸೇರುತ್ತವೆ.

-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News