ಭಾರತದ ವರ್ಗಭೇದ ಶಿಕ್ಷಣ ನೀತಿಗೆ ತಳ ಸಮುದಾಯಗಳ ಆಹುತಿ

ಕಸ ಗುಡಿಸುವವನ ಮಗ ಅಂಬಾನಿ, ಅದಾನಿ ಮೊಮ್ಮಕ್ಕಳ ಜೊತೆ ಕೂತು ವಿದ್ಯೆ ಕಲಿಯಲು ಈ ದೇಶದ ಅಂತರಾಳ ಒಪ್ಪಿಕೊಳ್ಳುವುದಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಆದರೆ, ತಳವರ್ಗಕ್ಕೆ ಪ್ರತ್ಯೇಕ ಜಾಗತಿಕ ಶಿಕ್ಷಣವನ್ನು ನೀಡಲು ಸರಕಾರ ಶ್ರಮಿಸಬಹುದು, ಆ ಮೂಲಕ ದೇಶದಲ್ಲಿ ಸಮಾನ ಸ್ಪರ್ಧೆ ಮತ್ತು ಅವಕಾಶ ಸಾಧ್ಯ. ಪಿನ್‌ಲ್ಯಾಂಡ್, ನಾರ್ವೆ, ಜರ್ಮನಿ, ಸ್ವೀಡನ್ ನೀಡುತ್ತಿರುವ ಗುಣಮಟ್ಟದ ಜಾಗತಿಕ ಉಚಿತ ಶಿಕ್ಷಣ ಭಾರತಕ್ಕೆ ಏಕೆ ಸಾಧ್ಯವಿಲ್ಲ? ಶಿಕ್ಷಣದಲ್ಲಿ ಸೂಕ್ತ ಭಾಷಾ ನೀತಿಯೊಂದಿಗೆ ಸ್ಥಳೀಯ ಭಾಷೆಗಳನ್ನು ಉಳಿಸಿಕೊಳ್ಳುವುದು ಅವಶ್ಯಕ. ಆದರೆ, ಕಡ್ಡಾಯವಾಗಿ ಗ್ರಾಮೀಣ, ಹಿಂದುಳಿದ, ತಳವರ್ಗಗಳಿಗೂ ಜಾಗತಿಕ ಮೂಲಸೌಕರ್ಯಗಳಿಂದ ಕೂಡಿದ ಸಿಬಿಎಸ್‌ಇ ಪಠ್ಯಕ್ರಮದ ಶಿಕ್ಷಣ ಒದಗಿಸುವುದು ಅತ್ಯವಶ್ಯಕ.

Update: 2024-06-07 04:27 GMT
Editor : Thouheed | Byline : ಡಾ. ರಮೇಶ ವಿ.

ದೇಶದಲ್ಲಿ ಮತ್ತು ರಾಜ್ಯದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳು ಹೊರಬಂದಿದ್ದು ಕೋಟ್ಯಂತರ ವಿದ್ಯಾರ್ಥಿಗಳು ಶಿಕ್ಷಣವೆಂಬ ಸಮುದ್ರದಲ್ಲಿ ತಮಗೆ ತೋಚಿದ ದಿಕ್ಕಿನಡಿ ದಡ ಸೇರಲು ಸ್ಪರ್ಧೆಗಿಳಿದಿದ್ದಾರೆ. ಪ್ರಸಕ್ತ ಶಿಕ್ಷಣ ನೀತಿಯು ತಾರತಮ್ಯದಿಂದ ಕೂಡಿದ್ದು ಎರಡು ವರ್ಗಗಳ ನಡುವೆ ಅಜಗಜಾಂತರ ಕಂದಕ ಸೃಷ್ಟಿಸಿದೆ ಎಂಬುದು ಎಲ್ಲರೂ ಅರಿಯಬೇಕಾದ ಸಂಗತಿ.

ಕೇವಲ 20 ವರ್ಷಗಳ ಹಿಂದೆ ಬಹುತೇಕ ಗ್ರಾಮೀಣ ವಲಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯುತ್ತಿತ್ತು. ಅಂದು ಹಳ್ಳಿಯ ಕೇವಲ ಶೇ. 1-2 ಶ್ರೀಮಂತ ಅಥವಾ ಮೇಲ್ವರ್ಗಗಳ ಕುಟುಂಬಗಳು ಮಾತ್ರ ತಮ್ಮ ಮಕ್ಕಳನ್ನು ಪಟ್ಟಣದಲ್ಲಿ ಆಂಗ್ಲ ಮಾಧ್ಯಮದ ಕಾನ್ವೆಂಟ್‌ಗಳಲ್ಲಿ ಅಥವಾ ಶಾಲೆಗಳಲ್ಲಿ ಓದಿಸುತ್ತಿದ್ದರು. ಹಳ್ಳಿಯ ಮೇಲ್ವರ್ಗದ ಮಕ್ಕಳು ಸುಮಾರು 10-15 ಕಿ.ಮೀ. ದೂರದಲ್ಲಿರುವ ಪಟ್ಟಣದಲ್ಲಿ ಕೇಂದ್ರ ಪಠ್ಯಕ್ರಮ ಓದುವುದು ವಿಶೇಷ ಗೌರವವೇ ಆಗಿತ್ತು. ಅದೇ ಕಾಲದಲ್ಲಿ ಸರಕಾರಿ ಶಾಲೆಯಲ್ಲಿನ ಶುಲ್ಕ ಸುಮಾರು 20-50 ರೂ. ಇದ್ದಿರಬಹುದು. ಇವತ್ತಿಗೂ ಅದೇ ಕನಿಷ್ಠ ಶುಲ್ಕ ಅಥವಾ ಉಚಿತ ಶಿಕ್ಷಣ. ಹಾಗಾಗಿ ಸರಕಾರಿ ಶಾಲೆಗಳು ಗ್ರಾಮೀಣ ಭಾರತದ ತಳಸಮುದಾಯಗಳ ಜ್ಞಾನದೇಗುಲಗಳಾಗಿವೆ.

ಪ್ರಸಕ್ತ ಬಹುತೇಕ ಪ್ರತೀ ಹಳ್ಳಿಯ 5 ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತಿ ನಿಂತಿವೆ. ಶೇ. 70ರಷ್ಟು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದರೆ, ಕೇವಲ ಶೇ. 30ರಷ್ಟು ವಿದ್ಯಾರ್ಥಿಗಳು ಮಾತ್ರ ಊರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಸರಕಾರಗಳ ನಿರ್ಲಕ್ಷ್ಯದ ಜೊತೆಗೆ, ಶಾಲೆಗಳ ದಾಖಲಾತಿ ಪ್ರಮಾಣದ ಶೇ. 2-3 ಮಟ್ಟಕ್ಕೆ ಕುಸಿದಾಗ ಸರಕಾರಿ ಶಾಲೆಗಳು ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತವೆ.

ಒಂದು ವರದಿಯ ಪ್ರಕಾರ ಕರ್ನಾಟಕದಲ್ಲಿ 2022-23ರಲ್ಲಿ 48,066 ಸರಕಾರಿ ಶಾಲೆಗಳಿದ್ದು 2023-24ರಲ್ಲಿ ಅದರ ಸಂಖ್ಯೆ 47,499ಕ್ಕೆ ಇಳಿದಿದೆ. 2023-24ರಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 42,66,645ರಷ್ಟಿದ್ದರೆ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ 46,43,225 ಇದೆ. ಈ ಅಂಕಿ ಅಂಶಗಳ ಪ್ರಕಾರ ಸ್ಪಷ್ಟವಾಗಿ ಮತ್ತು ಹಂತ ಹಂತವಾಗಿ ಸರಕಾರಿ ವಿದ್ಯಾಸಂಸ್ಥೆಗಳು ನಶಿಸಿಹೋಗುತ್ತಿರುವುದನ್ನು ಕಾಣಬಹುದಾಗಿದೆ. ಕಾರಣಗಳು ಅನೇಕ. ಹೆಚ್ಚಿನ ಕಡೆ ಮೂಲಸೌಕರ್ಯಗಳೇ ಇಲ್ಲ. ಸುಮಾರು 3,700 ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇದ್ದರೆ, ಸುಮಾರು 6,500ಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ ಒಬ್ಬೊಬ್ಬರೇ ಶಿಕ್ಷಕರು. ಖಾಸಗಿ ಶಾಲೆಗಳು ಆ್ಯಕ್ಟಿವ್ ಬೋರ್ಡ್ ಉಪಯೋಗಿಸಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಶಿಕ್ಷಣ ನೀಡುತ್ತಿದ್ದರೆ, ಸರಕಾರಿ ಶಾಲೆಗಳು ಇನ್ನೂ ಕಪ್ಪು ಹಲಗೆಯ ಮೇಲೆ ನಿಂತು ಹೋಗಿವೆ, ಇದೇ ವರ್ಗಭೇದ ಶಿಕ್ಷಣ ನೀತಿಯ ಕಂದಕ.

ಇಂದು ಗ್ರಾಮೀಣ ಭಾಗದ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಶಿಕ್ಷಣ ಪಡೆಯಲು ಒಬ್ಬ ವಿದ್ಯಾರ್ಥಿ ವಾರ್ಷಿಕ ಕನಿಷ್ಠ ಶುಲ್ಕ 20 ಸಾವಿರ ರೂ. ಪಾವತಿಸಬೇಕು ಮತ್ತು ಬೆಂಗಳೂರಿನಂತಹ ನಗರದಲ್ಲಿನ ಶಾಲೆಯೊಂದರಲ್ಲಿ ಓದಬೇಕೆಂದರೆ ವಾರ್ಷಿಕ ಸುಮಾರು 3 ಲಕ್ಷ ರೂ. ಕಟ್ಟಬೇಕು, ಅದೇ ಬೆಂಗಳೂರಿನ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಶಾಲೆಯೊಂದರ ಶುಲ್ಕ 9 ಲಕ್ಷ ರೂ.

ಇಷ್ಟು ಶುಲ್ಕಗಳನ್ನು ತೆಗೆದುಕೊಳ್ಳುವ ಸಂಸ್ಥೆ ಕಲಿಸುವುದಾದರೂ ಏನು.? ಇದರಿಂದ ಗ್ರಾಮೀಣ ಮತ್ತು ಬಡವರ ಮೇಲಿನ ಆಗುವ ಪರಿಣಾಮಗಳೇನು? ಖಂಡಿತ ಇದೆ, ಅದು ಪ್ರಾರಂಭವಾಗಿದ್ದೇ ಕೇಂದ್ರ ಸರಕಾರ ನಡೆಸುತ್ತಿರುವ ಕೇಂದ್ರೀಯ ವಿದ್ಯಾನಿಲಯಗಳಲ್ಲಿ ಮತ್ತು ನವೋದಯ ವಿದ್ಯಾಲಯಗಳಲ್ಲಿ ಜಾರಿಗೆ ತಂದಿರುವ ಸಿಬಿಎಸ್‌ಇ ಪಠ್ಯಕ್ರಮ ಮತ್ತು ಆಂಗ್ಲಮಾಧ್ಯಮ ಅಥವಾ ಬಹುಭಾಷಾ ಕಲಿಕೆಯ ಕ್ರಮ.

ಕೇಂದ್ರದ ಈ ಪಠ್ಯ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಪಠ್ಯಕ್ರಮಕ್ಕಿಂತ ವಿಭಿನ್ನ ಮತ್ತು ಮುಂದುವರಿದ ವಿಷಯಗಳನ್ನೊಳಗೊಂಡಿರುವ ಉತ್ತಮ ಗುಣಮಟ್ಟದ್ದಾಗಿದೆ. ಈ ಕ್ರಮವು ಒಂದು ರಾಷ್ಟ್ರದ ಜಾಗತಿಕ ಅಭಿವೃದ್ಧಿಯ ನೋಟದಿಂದ ಸ್ವಾಗತಾರ್ಹ, ಆದರೆ ಇದರಲ್ಲಿ ಪ್ರವೇಶಾತಿ ಪಡೆಯುವವರು ಬಹುತೇಕರು ಮೇಲ್ವರ್ಗ ಮತ್ತು ಮಧ್ಯಮ ವರ್ಗದವರು. ಬಡವರಿಗಿದು ಎಟುಕದು.

ಮತ್ತೊಂದು ಕಡೆ ಸಿಬಿಎಸ್‌ಇ ಪಠ್ಯದ ಜೊತೆಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಒಳಗೊಂಡಿರುವಂತೆ ಮುಂದುವರಿದ ಜಾಗತಿಕ ಶಿಕ್ಷಣವನ್ನು ನೀಡಲು ಸಾವಿರಾರು ಖಾಸಗಿ ಶಾಲೆಗಳು ದೇಶದಲ್ಲಿ ತಲೆ ಎತ್ತಿವೆ. ಈ ಸಂಸ್ಥೆಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಹೊಂದಿರುವ ಪಠ್ಯಕ್ರಮಗಳನ್ನು ಅಳವಡಿಸಿಕೊಂಡು ವೇಗವಾಗಿ ಮುಂದೆ ಸಾಗುತ್ತಿವೆ. ಉದಾಹರಣೆಗೆ, ಐಸಿಎಸ್‌ಇ, ಐಬಿ, ಐಜಿಸಿಎಸ್‌ಇ. ಇವೆಲ್ಲಾ ಬಹುತೇಕ ಬೋರ್ಡಿಂಗ್ ಶಾಲೆಗಳಾಗಿರುವುದರಿಂದ ಅವರ ಓದಿನ ಕ್ರಮವು ಸಹ 24x7 ನಿಗದಿತ ವೇಳಾಪಟ್ಟಿಯಾಗಿದ್ದು, ಕೇವಲ ಮೇಲ್ವರ್ಗಕ್ಕೆ ಸೀಮಿತವಾಗಿವೆ.

ತಳ ಸಮುದಾಯಗಳ ಮಕ್ಕಳು ಯಾವತ್ತಿಗೂ ಇಲ್ಲಿ ಪ್ರವೇಶಾತಿ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಈ ವರ್ಗದ ಬಳಿ ಆರ್ಥಿಕ ಸಾಮರ್ಥ್ಯ ಇಲ್ಲ ಮತ್ತು ಸಮಯವೂ ಇಲ್ಲ. ವಿಶೇಷವೆಂದರೆ, ಶಿಕ್ಷಣದಲ್ಲಿ ಅಂತಹ ಇನ್ನೊಂದು ಪ್ರಪಂಚ ಇರುವುದು ತಳವರ್ಗಕ್ಕೆ ತಿಳಿಯದ ಹಾಗೆ ಸದಾಕಾಲ ವ್ಯವಸ್ಥೆ ಕಾಪಾಡಿಕೊಂಡಿದೆ.

ವಿಷಯ ಅಲ್ಲಿಗೆ ನಿಂತಿಲ್ಲ. ಈ ದೇಶದ ಎಲ್ಲಾ ರಾಷ್ಟ್ರೀಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ಸಿಬಿಎಸ್‌ಇ ಪಠ್ಯಕ್ರಮದ ಆಧಾರಿತವಾಗಿವೆ. ಈ ಪಠ್ಯಕ್ರಮ, ವಿದ್ಯಾರ್ಥಿಯ ಪರಿಕಲ್ಪನಾ ಲಹರಿ ಮತ್ತು ಅರ್ಥಮಾಡಿಕೊಂಡು ಓದುವ ಪದ್ಧತಿಯನ್ನು ಹೆಚ್ಚಿಸುತ್ತದೆ. ಆದರೆ, ರಾಜ್ಯಗಳ ಪಠ್ಯಕ್ರಮ ಭಟ್ಟಿ ಇಳಿಸುವ ಕ್ರಮ ಎಂಬುದು ತಜ್ಞರ ವಾದ. ಸಿಬಿಎಸ್‌ಇ ವಿದ್ಯಾರ್ಥಿಗಳನ್ನು ಐಐಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ತಯಾರಿ ನಡೆಸುವ ಶಿಕ್ಷಣವಾಗಿದ್ದು ದೇಶದ ಪ್ರತೀ ಮೂಲೆಯಲ್ಲೂ ಸ್ವೀಕರಿಸುವಂತಹ ಪಠ್ಯಕ್ರಮವಾಗಿದೆ.

ಈಗ ನಗರಗಳಲ್ಲಿ ಮತ್ತೊಂದು ಪ್ರವೃತ್ತಿ ಪ್ರಾರಂಭವಾಗಿದೆ. 10ನೇ ತರಗತಿಯ ಫಲಿತಾಂಶ ಇನ್ನೂ 2-3 ತಿಂಗಳು ಬಾಕಿ ಇರುವಾಗಲೇ ವಿದ್ಯಾರ್ಥಿಯನ್ನು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ 3ರಿಂದ 5 ಲಕ್ಷ ರೂ. ಪ್ರವೇಶಾತಿ ಶುಲ್ಕ ನೀಡಿ ಪಿಯುಸಿಗೆ ಸೇರಿಸಲಾಗುತ್ತದೆ. ಅದರಲ್ಲೂ ಸ್ಪಷ್ಟವಾಗಿ ವಿಜ್ಞಾನ ವಿಷಯಕ್ಕೆ ಮಾತ್ರ. ಗ್ರಾಮೀಣ ಅಭ್ಯರ್ಥಿ ಪಿಯುಸಿಗೆ ಸೇರುವುದರೊಳಗೆ ಮೇಲ್ವರ್ಗದ ವಿದ್ಯಾರ್ಥಿ ಶೇ. 25ರಷ್ಟು ಪಠ್ಯಕ್ರಮವನ್ನು ಮುಗಿಸಿರುತ್ತಾನೆ, ಜೊತೆಗೆ ಅದೇ ಸಂಸ್ಥೆಯಲ್ಲಿ ನೀಟ್‌ಮತ್ತು ಜೆಇಇ ಪರೀಕ್ಷೆಗಳ ತಯಾರಿಯನ್ನು ಸಹ ಮಾಡಲಾಗುತ್ತದೆ. ಇವರ ಕ್ರಮ ಶಿಕ್ಷಣಕ್ಕೆ ಎಲ್ಲಾ ಉದ್ಯೋಗಗಳು ಇವರ ಪಾಲಾಗುತ್ತವೆ.

ಅದೇ ಕಾಲದಲ್ಲಿ ಗ್ರಾಮೀಣ ವರ್ಗದ 10ನೇ ತರಗತಿ ಮುಗಿಸಿರುವ ಒಬ್ಬ ವಿದ್ಯಾರ್ಥಿ ಫಲಿತಾಂಶ ಪ್ರಕಟಣೆಯ ನಂತರ ತನ್ನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕುದಾದ, ತನ್ನ ಹಳ್ಳಿಗೆ ಸಮೀಪದ ಸರಕಾರಿ ಕಾಲೇಜಿನಲ್ಲಿ ಪಿಯುಸಿಗೆ ಪ್ರವೇಶಾತಿ ಪಡೆಯುತ್ತಾನೆ. ಅದು ಕಲಾ ವಿಭಾಗ, ವಾಣಿಜ್ಯ ವಿಭಾಗ ಏಕೆಂದರೆ ವಿಜ್ಞಾನ ಕಷ್ಟ ಮತ್ತು ಆಂಗ್ಲ ಮಾಧ್ಯಮ. ಈಗಲೂ ಸಹ ಈ ಜೆಒಸಿ (ಈಗ ನಿಲ್ಲಿಸಿರಬಹುದು) ಮತ್ತು ಐಟಿಐ ವಿಷಯಗಳು ಗ್ರಾಮೀಣ ಮತ್ತು ತಳ ಸಮುದಾಯಗಳಿಗೆ ಸೀಮಿತ. ಹಾಗಾಗಿ ವಿದ್ಯಾಭ್ಯಾಸದ ನಂತರ ಕಾರ್ಖಾನೆಗಳಲ್ಲಿ ದುಡಿಯುವ ವರ್ಗಕ್ಕೆ ಸೇರ್ಪಡೆಯಾಗುತ್ತಾರೆ. ಅಜೀಂ ಪ್ರೇಮ್‌ಜಿ ಸಂಸ್ಥೆ ನಡೆಸಿದ ಒಂದು ಅಧ್ಯಯನದ ವರದಿಯ ಪ್ರಕಾರ ಸಮಾಜದಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅತಿ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದ್ದು, ಅದೇ ರೀತಿ ಹೆಚ್ಚು ಸಂಬಳ ಪಡೆಯುವ ಕೆಲಸಗಳಲ್ಲಿ ಅತೀ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ, ತಾರತಮ್ಯದಿಂದ ಕೂಡಿದ ಶಿಕ್ಷಣವನ್ನು ಕಂಡ ಮೇಲೆ ಖಂಡಿತವಾಗಿಯೂ ಭಾರತದ ವರ್ಗಭೇದ ಶಿಕ್ಷಣ ನೀತಿಗೆ ತಳ ಸಮುದಾಯಗಳ ಆಹುತಿ ಆಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಪಿಯುಸಿ ನಂತರ ಉನ್ನತ ಶಿಕ್ಷಣದ ಸ್ಪರ್ಧೆ, ಆದರೆ ಇಲ್ಲಿಯೂ ಉಳ್ಳವರಿಗೆ ಅವಕಾಶಗಳು. ಕಾರಣ ಐಐಟಿ ಪ್ರವೇಶಾತಿ ಪರೀಕ್ಷೆ ಎದುರಿಸಲು ತಯಾರಿಯನ್ನು ನಡೆಸಲು ಬೆಂಗಳೂರಿನ ಜಯನಗರದ ಒಂದು ಸಂಸ್ಥೆ ಪಡೆಯುವ ಶುಲ್ಕ 1.5 ಲಕ್ಷ ರೂ. ಅಲ್ಲಿಯೇ ಪಕ್ಕದಲ್ಲಿನ ಎಚ್‌ಎಸ್‌ಆರ್ ಲೇಔಟ್‌ನ ಇನ್ನೊಂದು ಸಂಸ್ಥೆ ಐಐಟಿ/ಜೆಇಇನ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಪಡೆಯುವ ವಾರ್ಷಿಕ ಶುಲ್ಕ ಸುಮಾರು 3.3 ಲಕ್ಷ ರೂ.

ನೀಟ್ (ಎಂಬಿಬಿಎಸ್, ಎಂಡಿ, ಆಯುಶ್) ಪರೀಕ್ಷೆಗೆ ತಯಾರಿ ನಡೆಸಲು ದಿಲ್ಲಿಯಲ್ಲಿನ ಅಗ್ರ ಶ್ರೇಯಾಂಕದ ಸಂಸ್ಥೆಗಳು ವಿಧಿಸುವ ಸರಾಸರಿ ಶುಲ್ಕ ಒಂದರಿಂದ ಮೂರುವರೆ ಲಕ್ಷ ರೂ.ಗಳು. ಇದಲ್ಲದೆ ಹಾಸ್ಟೆಲ್ ಶುಲ್ಕ ಪ್ರತ್ಯೇಕ. (1ರಿಂದ 2.5 ಲಕ್ಷ). ದಿಲ್ಲಿಯ, ಅಗ್ರ ಶ್ರೇಯಾಂಕದ (ಮೊದಲ 10) ಸಂಸ್ಥೆಗಳು ಜೆಇಇ/ಐಐಟಿ/ಎನ್‌ಐಟಿ ಪರೀಕ್ಷೆಗೆ ನಡೆಸುವ ತಯಾರಿಯ ಶುಲ್ಕ 50 ಸಾವಿರದಿಂದ 2.7 ಲಕ್ಷ ರೂ. ಗ್ರಾಮೀಣ ತಳಸಮುದಾಯ ವರ್ಗದ ವಿದ್ಯಾರ್ಥಿ ಈ ಶುಲ್ಕವನ್ನು ಹೇಗೆ ಪಾವತಿಸಲು ಸಾಧ್ಯ? ಖಂಡಿತವಾಗಿ ಇಲ್ಲಿ ಸ್ಪರ್ಧೆಯೇ ಇಲ್ಲ. ಆದ್ದರಿಂದ, ಈ ರೆಡ್ ಕಾರ್ಪೆಟ್ ದಾರಿ ಸಾಮಾನ್ಯ ವರ್ಗಕ್ಕೆ ಮುಳ್ಳಾ ಗಿರುವುದು ಕಠಿಣವಾದ ಸತ್ಯ.

ಸರಿಯಾದ ಮಾರ್ಗದರ್ಶನ ಮತ್ತು ಅಡಿಪಾಯದ ಕೊರತೆಯ ಪರಿಣಾಮ ದೇಶದ ಪ್ರತಿಷ್ಠ್ಥಿತ ಸಂಸ್ಥೆಗಳಾದ ಐಐಟಿ ಮತ್ತು ಐಐಎಂಗಳಲ್ಲಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳು ಪ್ರವೇಶಾತಿ ಪಡೆಯಲು ಹೆಣಗಾಡುತ್ತಿದ್ದಾರೆ. ಕಷ್ಟಪಟ್ಟು ಪ್ರವೇಶಾತಿ ಗಿಟ್ಟಿಸಿದರೂ ಅರ್ಧಕ್ಕೆ ಪದವಿಯನ್ನು ಬಿಟ್ಟು ಆಚೆ ಬರುತ್ತಿದ್ದಾರೆ.

2023ರಲ್ಲಿ ಬಾಂಬೆ ಐಐಟಿಯ 16 ವಿಭಾಗಗಳಲ್ಲಿ ಪ್ರವೇಶಾತಿ ಪಡೆದ ಪ.ಜಾ./ಪ.ಪಂ./ಒಬಿಸಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ. 2023ರಲ್ಲಿ ಕೇಂದ್ರ ಸರಕಾರವು ಸದನದಲ್ಲಿ ನೀಡಿದ ಅಂಶಗಳ ಪ್ರಕಾರ ಕೇಂದ್ರ ವಿಶ್ವವಿದ್ಯಾನಿಲಯಗಳು, ಐಐಟಿ ಮತ್ತು ಐಐಎಂಗಳಿಂದ, 5 ವರ್ಷಗಳಲ್ಲಿ ಸುಮಾರು 13,626 ಪ.ಜಾ./ಪ.ಪಂ./ಹಿಂದುಳಿದ ವಿದ್ಯಾರ್ಥಿಗಳು ಅರ್ಧದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಾರತಮ್ಯ ಶಿಕ್ಷಣವೇ ಒಂದು ಬಹಳ ವ್ಯವಸ್ಥಿತ ಕುತಂತ್ರ ಎಂದೆನಿಸುತ್ತದೆ.

ಯಾವುದೇ ವ್ಯಕ್ತಿಯ ಮೇಲೆ ಅವರು ವಾಸಿಸುವ ಪರಿಸರದ ಮತ್ತು ಅವರು ತೆರೆದುಕೊಳ್ಳುವ ಸುತ್ತಮುತ್ತಲಿನ ಅವಕಾಶಗಳು ಬಹಳ ಪರಿಣಾಮಕಾರಿ ಎಂದು ಸಿಗ್ಮಂಡ್ ಪ್ರಾಯ್ಡ್‌ರಂತಹ ಮನಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆ್ಯಪಲ್ ಸಂಸ್ಥೆಯ ಮಾಜಿ ಮುಖ್ಯಸ್ಥ ಟಿಮ್ ಕುಕ್, ಫೇಸ್‌ಬುಕ್‌ನ ಮಾರ್ಕ್ ಝುಕರ್‌ಬರ್ಗ್ ಮತ್ತು ಟೆಸ್ಲಾ ಸಂಸ್ಥೆಯ ಎಲಾನ್ ಮಸ್ಕ್‌ರಂತಹವರು ತಮ್ಮ ಕಿರಿಯ ವಯಸ್ಸಿನಲ್ಲಿ ಕಂಪ್ಯೂಟರ್ ಬಳಸುವುದರ ಜೊತೆಗೆ ಕೋಡಿಂಗ್ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದರು. ಇದು ಆ ದೇಶದ ಪರಿಸರದಲ್ಲಿ ದಿನನಿತ್ಯ ಸಿಗುವ ಸಮಾನ ಅವಕಾಶಗಳ ಪ್ರತಿಫಲ. ಹಾಗೆಯೇ, ನಮ್ಮಲ್ಲಿಯೂ ಪ್ರತೀ ವ್ಯಕ್ತಿಗೂ ಅವಕಾಶ ಒದಗಿಸಿಕೊಡಬೇಕು. ಆಗ ಮಾತ್ರ ಪ್ರತಿಭೆಗಳು ಎಲ್ಲಾ ವರ್ಗಗಳಲ್ಲಿಯು ಸಮಾನವಾಗಿ ಉದವಾಗಲು ಸಾಧ್ಯ.

ಕಸ ಗುಡಿಸುವವನ ಮಗ ಅಂಬಾನಿ, ಅದಾನಿ ಮೊಮ್ಮಕ್ಕಳ ಜೊತೆ ಕೂತು ವಿದ್ಯೆ ಕಲಿಯಲು ಈ ದೇಶದ ಅಂತರಾಳ ಒಪ್ಪಿಕೊಳ್ಳುವುದಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಆದರೆ, ತಳವರ್ಗಕ್ಕೆ ಪ್ರತ್ಯೇಕ ಜಾಗತಿಕ ಶಿಕ್ಷಣವನ್ನು ನೀಡಲು ಸರಕಾರ ಶ್ರಮಿಸಬಹುದು, ಆ ಮೂಲಕ ದೇಶದಲ್ಲಿ ಸಮಾನ ಸ್ಪರ್ಧೆ ಮತ್ತು ಅವಕಾಶ ಸಾಧ್ಯ. ಪಿನ್‌ಲ್ಯಾಂಡ್, ನಾರ್ವೆ, ಜರ್ಮನಿ, ಸ್ವೀಡನ್ ನೀಡುತ್ತಿರುವ ಗುಣಮಟ್ಟದ ಜಾಗತಿಕ ಉಚಿತ ಶಿಕ್ಷಣ ಭಾರತಕ್ಕೆ ಏಕೆ ಸಾಧ್ಯವಿಲ್ಲ? ಶಿಕ್ಷಣದಲ್ಲಿ ಸೂಕ್ತ ಭಾಷಾ ನೀತಿಯೊಂದಿಗೆ ಸ್ಥಳೀಯ ಭಾಷೆಗಳನ್ನು ಉಳಿಸಿಕೊಳ್ಳುವುದು ಅವಶ್ಯಕ. ಆದರೆ, ಕಡ್ಡಾಯವಾಗಿ ಗ್ರಾಮೀಣ, ಹಿಂದುಳಿದ, ತಳವರ್ಗಗಳಿಗೂ ಜಾಗತಿಕ ಮೂಲಸೌಕರ್ಯಗಳಿಂದ ಕೂಡಿದ ಸಿಬಿಎಸ್‌ಇ ಪಠ್ಯಕ್ರಮದ ಶಿಕ್ಷಣ ಒದಗಿಸುವುದು ಅತ್ಯವಶ್ಯಕ. ಜಾಗತಿಕ ಸಮಾನತೆಯ ಶಿಕ್ಷಣಕ್ಕಾಗಿ ಸರಕಾರಗಳನ್ನು ಪ್ರಶ್ನಿಸಲೇಬೇಕಿದೆ. ಏಕೆಂದರೆ ಗುಣಮಟ್ಟದ ಶಿಕ್ಷಣ ನಮ್ಮೆಲ್ಲರ ಮೂಲಭೂತ ಹಕ್ಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಮೇಶ ವಿ.

ಸಂಶೋಧನಾ ಸಹಾಯಕರು ತೋವಿವಿ, ಬೆಂಗಳೂರು

Similar News