ಐಪಿಎಲ್: ಚಾಂಪಿಯನ್ ತಂಡಕ್ಕೆ ದೊರೆಯಲಿದೆ 30 ಕೋಟಿ ರೂ.

Update: 2024-03-30 09:51 GMT

ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳು ನಡೆಯುತ್ತಿವೆ. ಈ ಬಾರಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವುದನ್ನು ತೀರ್ಮಾನಿಸಲು ಇನ್ನು ಸ್ವಲ್ಪ ದಿನ ಕಾಯಬೇಕಾಗಿದೆ. ದೇಶದಾದ್ಯಂತ ಲೋಕಸಭಾ ಚುನಾವಣಾ ಕಾವು ಏರುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಪಂದ್ಯಗಳಲ್ಲಿ ತಮ್ಮ ನೆಚ್ಚಿನ ತಂಡಗಳ ರೋಚಕ ಹಣಾಹಣಿಯನ್ನು ವೀಕ್ಷಿಸುತ್ತಾ ಕ್ರಿಕೆಟ್‌ನ ಸವಿಯನ್ನು ಅನುಭವಿಸುತ್ತಿದ್ದಾರೆ.

ಕಳೆದ ಆವೃತ್ತಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೊಂದು ಬಾರಿ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಆದರೆ ತಂಡದ ನಾಯಕತ್ವ ಬದಲಾಗಿದೆ. ತಂಡಕ್ಕೆ ಐದು ಬಾರಿ ಟ್ರೋಫಿ ತಂದು ಕೊಟ್ಟ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಹಾಲಿ ಚಾಂಪಿಯನ್ ತಂಡವನ್ನು ಮಹಾರಾಷ್ಟ್ರದ 27ರ ಹರೆಯದ ಋತುರಾಜ್ ದಶರಥ್ ಗಾಯಕ್ವಾಡ್ ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಆಡಿರುವ ಎರಡು ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ. ಋತುರಾಜ್ ಅವರು ಚೆನ್ನೈ ತಂಡ 2021 ಮತ್ತು 2022 ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಗರಿಷ್ಠ ರನ್‌ಗಳ ಕೊಡುಗೆ ನೀಡಿದ್ದರು. ಈ ಬಾರಿ ಅವರ ನಾಯಕತ್ವದಲ್ಲಿ ತಂಡ ಪ್ರಶಸ್ತಿ ಬಾಚಿಕೊಳ್ಳಬಹುದೇ? ಎನ್ನುವುದನ್ನು ಕಾದು ನೋಡಬೇಕಾಗಿದೆ.

17ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಲಿರುವ ತಂಡ 30 ಕೋಟಿ ರೂ. ಮೊತ್ತದ ನಗದು ಬಹುಮಾನವನ್ನು ಬಾಚಿಕೊಳ್ಳಲಿದೆ. ಐಪಿಎಲ್‌ನಲ್ಲಿ ಇಷ್ಟು ದೊಡ್ಡ ಮೊತ್ತದ ನಗದು ಬಹುಮಾನ ದೊರೆಯುವಾಗ ಡಬ್ಲ್ಯುಪಿಎಲ್ 2ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಜಯಿಸಿದ ಆರ್‌ಸಿಬಿ ಮಹಿಳಾ ತಂಡಕ್ಕೆ ಸಿಕ್ಕಿದ್ದು 6 ಕೋಟಿ ರೂ. ಮಾತ್ರ. ಬರುವ ಮೇ 26ರಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಫೈನಲ್‌ನಲ್ಲಿ ಗೆಲ್ಲುವ ಪುರುಷರ ತಂಡ ಮಹಿಳೆಯರ ತಂಡಕ್ಕಿಂತ 5 ಪಟ್ಟು ಹೆಚ್ಚು ಮೊತ್ತದ ಬಹುಮಾನವನ್ನು ಮನೆಗೆ ಒಯ್ಯಲಿದೆ. ಐಪಿಎಲ್ 2022-23ರ ಆವೃತ್ತಿಯಲ್ಲಿ ವಿಜೇತರಿಗೆ ಸಿಕ್ಕಿದ ಬಹುಮಾನದ ಮೊತ್ತ 20 ಕೋಟಿ ರೂ. ಮತ್ತು ದ್ವಿತೀಯ ಸ್ಥಾನ ಪಡೆದ ತಂಡ 13 ಕೋಟಿ ರೂ. ಪಡೆದಿತ್ತು.

2008ರಲ್ಲಿ ಐಪಿಎಲ್ ಆರಂಭಗೊಂಡು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಈ ಹೊತ್ತು ಕ್ರಿಕೆಟ್ ಆಡುವ ರಾಷ್ಟ್ರಗಳ ಪೈಕಿ ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದೆಲ್ಲ ಕ್ರಿಕೆಟ್‌ನ ಬಲಿಷ್ಠ ದೇಶಗಳ ಆಟಗಾರರು ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಪಾಕಿಸ್ತಾನದ ಆಟಗಾರರು ಆರಂಭದ ಆವೃತ್ತಿಯಲ್ಲಿ ಇದ್ದರು. 2008 ಮತ್ತು 2009ರ ಐಪಿಎಲ್ ಆವೃತ್ತಿಯಲ್ಲಿ ವಿಜೇತ ತಂಡವು 4.8 ಕೋಟಿ ರೂ. ಗಳನ್ನು ಪಡೆದರೆ, ರನ್ನರ್ ಅಪ್ ತಂಡವು 2.4 ಕೋಟಿ ರೂ. ಪಡೆದಿತ್ತು. ಆಗ ಇದು ಬಹುಶಃ ಯಾವುದೇ ದೇಶಿಯ ಕ್ರಿಕೆಟ್ ಈವೆಂಟ್‌ನಲ್ಲಿ ದೊರೆಯುವುದಕ್ಕಿಂತ ಅತ್ಯಧಿಕ ಬಹುಮಾನದ ಮೊತ್ತವಾಗಿತ್ತು. ಮುಂದೆ ಐಪಿಎಲ್ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಿತು, ಆವೃತ್ತಿಗಿಂತ ಆವೃತ್ತಿಗೆ ನಾನಾ ಬದಲಾವಣೆ ಕಂಡಿತು. ನಿತ್ಯ ಬದುಕಿನಲ್ಲಿ ಹಣಕ್ಕಾಗಿ ಪರದಾಡುತ್ತಿದ್ದ ಬಡ ಪ್ರತಿಭಾವಂತ ಆಟಗಾರರಿಗೆ ಐಪಿಎಲ್ ಆಸರೆ ಒದಗಿಸಿತು. ಆರ್ಥಿಕವಾಗಿ ಹಿಂದುಳಿದ ಆಟಗಾರರ ಬದುಕು ಐಪಿಎಲ್‌ನಿಂದಾಗಿ ಬದಲಾವಣೆ ಕಂಡಿತು. ಐಪಿಎಲ್‌ನಲ್ಲಿ ದೊರೆಯುವ ಕಾಂಚಾಣದ ಪ್ರಭಾವದಿಂದಾಗಿ ಕೆಲವು ವಿದೇಶಿ ಆಟಗಾರರು ತಮ್ಮ ರಾಷ್ಟ್ರೀಯ ತಂಡದಿಂದ ದೂರ ಸರಿದು ಐಪಿಎಲ್‌ನಲ್ಲಿ ತೊಡಗಿಸಿಕೊಂಡು ಸಿಕ್ಕಿದಷ್ಟು ಹಣವನ್ನು ಬಾಚಿಕೊಂಡರು. ಕೆಲವರು ಇನ್ನೂ ಆಡುತ್ತಾ ಇನ್ನಷ್ಟು ಹಣವನ್ನು ಕೂಡಿಡುತ್ತಿದ್ದಾರೆ. 40ರ ಹರೆಯವನ್ನು ದಾಟಿದ ಆಟಗಾರರೂ ಕೆಲವು ತಂಡದಲ್ಲಿದ್ದಾರೆ. ಅಷ್ಟೊಂದು ಪ್ರಭಾವ ಬೀರಿದೆ ಐಪಿಎಲ್. ಬಿಸಿಸಿಐ ಮುಂಬರುವ ಆವೃತ್ತಿಗಳಲ್ಲಿ ಬಹುಮಾನದ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ಯೋಜಿಸಿದೆ. ಈ ಬಾರಿಯ ಐಪಿಎಲ್‌ನಲ್ಲಿ ಬಹುಮಾನ ಪ್ರಥಮ 30 ಕೋಟಿ ರೂ., ದ್ವಿತೀಯ 13 ಕೋಟಿ ರೂ., ಕ್ವಾಲಿಫೈಯರ್ 8 ಕೋಟಿ ರೂ., ಎಲಿಮಿನೇಟರ್ ತಂಡ 7 ಕೋಟಿ ರೂ. , 4ನೇ ತಂಡವು 6.5 ಕೋಟಿ ರೂ.ಗಳನ್ನು ಪಡೆಯಲಿದೆ.

ಜೊತೆಗೆ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರಿಗೆ ತಲಾ 15 ಲಕ್ಷ ರೂ.ನಗದು ಬಹುಮಾನ ದೊರೆಯಲಿದೆ.

ಪಂದ್ಯಾವಳಿಯ ಉದಯೋನ್ಮುಖ ಆಟಗಾರನು 20 ಲಕ್ಷ ರೂ. ನಗದು ಬಹುಮಾನವನ್ನು, ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರನಿಗೆ 12 ಲಕ್ಷ ರೂ. ಬಹುಮಾನ ದೊರೆಯಲಿದೆ. ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ 15 ಲಕ್ಷ ರೂ., ಗೇಮ್ ಚೇಂಜರ್ ಆಫ್ ದಿ ಸೀಸನ್ 12 ಲಕ್ಷ ರೂ., ಪವರ್ ಪ್ಲೇಯರ್ 12 ಲಕ್ಷ ರೂ, ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರನಿಗೆ 12 ಲಕ್ಷ ರೂ. ನಗದು ಬಹುಮಾನ ಸಿಗಲಿದೆ.

► ಬಹುಮಾನದ ಮೊತ್ತದಲ್ಲಿ ಏರಿಕೆ: ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ತಂಡ 4.8 ಕೋಟಿ ರೂ.ಬಹುಮಾನ ಪಡೆದಿತ್ತು. 2010ರ ಹೊತ್ತಿಗೆ ರೂ. 10 ಕೋಟಿಗೆ ಮುಟ್ಟಿತು. ಆಗ ರನ್ನರ್ ಅಪ್ ಪಡೆದದ್ದು ರೂ. 5 ಕೋಟಿ. ಇದು 2013 ರವರೆಗೆ ಮುಂದುವರಿಯಿತು. 2014ರಲ್ಲಿ ವಿಜೇತರಿಗೆ ನೀಡಲಾಗುವ ಬಹುಮಾನದ ಮೊತ್ತವನ್ನು ರೂ. 15 ಕೋಟಿಗೆ ಏರಿಸಲಾಯಿತು. ರನ್ನರ್‌ಅಪ್‌ಗೆ 10 ಕೋಟಿ ರೂ.ಗಳನ್ನು ನೀಡಲಾಯಿತು. ಕೋವಿಡ್-19 ಕಾರಣದಿಂದಾಗಿ, 2020ರ ಆವೃತ್ತಿಯಲ್ಲಿ ಚಾಂಪಿಯನ್ ತಂಡ 10 ಕೋಟಿ ರೂ.ಗಳನ್ನು ಮತ್ತು ರನ್ನರ್ ಅಪ್ 6.25 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿತು. ಆದರೆ 2021ರಲ್ಲಿ, ಬಿಸಿಸಿಐ ವಿಜೇತರಿಗೆ 20 ಕೋಟಿ ರೂ.ಗಳನ್ನು ನೀಡಿತು ಮತ್ತು ರನ್ನರ್ ಅಪ್ ತಂಡ ಇದೇ ವೇಳೆ 12.2 ಕೋಟಿ ರೂ.ಗಳನ್ನು ಪಡೆಯಿತು. 2022 -23ರ ಆವೃತ್ತಿಯಲ್ಲಿ ವಿಜೇತರಿಗೆ ಬಹುಮಾನದ ಮೊತ್ತ 20 ಕೋಟಿ ರೂ.ಸಿಕ್ಕಿತು. ಇದೇ ವೇಳೆ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ನೀಡಲಾಗುತ್ತಿದ್ದ ಮೊತ್ತ ವನ್ನು ರೂ.13 ಕೋಟಿಗೆ ಏರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಇಬ್ರಾಹಿಂ ಅಡ್ಕಸ್ಥಳ

contributor

Similar News